ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಥಿಕ ರಾಷ್ಟ್ರೀಯತೆ

ವಿಕಿಸೋರ್ಸ್ದಿಂದ

ರಾಷ್ಟ್ರೀಯ ಹಿತಾಸಕ್ತಿಗಳನ್ನೇ ಪ್ರಧಾನವಾಗುಳ್ಳ ರಾಜಕೀಯ ಹಾಗೂ ಸಾಮಾಜಿಕ ತತ್ತ್ವವನ್ನು ರಾಷ್ಟ್ರೀಯತೆ ಎನ್ನುವ ಪಕ್ಷದಲ್ಲಿ ರಾಷ್ಟ್ರದ ಧ್ಯೇಯಗಳ ಲ್ಲೊಂದಾದ ಆರ್ಥಿಕ ಪ್ರಗತಿಯನ್ನೇ ಪ್ರಧಾನವಾಗುಳ್ಳ ರಾಷ್ಟ್ರೀಯ ಮನೋಧರ್ಮವನ್ನು ಆರ್ಥಿಕ ರಾಷ್ಟ್ರೀಯತೆ ಎನ್ನಬಹದು (ಎಕನಾಮಿಕ್ ನ್ಯಾಷನಲಿಸಂ). ಇತರ ರಾಷ್ಟ್ರಗಳಿಗೆ ಆಗಬಹುದಾದ ಕಷ್ಟನಷ್ಟಗಳಿಗೆ ಸ್ವಲ್ಪವೂ ಗಮನ ಕೊಡದೆ ಸ್ವರಾಷ್ಟ್ರ ಲಾಭವನ್ನು ಪರಮಾವಧಿ ಗೊಳಿಸುವ ಕಾರ್ಯಾಚರಣೆಗಳಲ್ಲಿ ತೊಡಗುವುದು ಅತ್ಯುಗ್ರ ಆರ್ಥಿಕ ರಾಷ್ಟ್ರೀಯತೆ ಎನ್ನಿಸಿಕೊಳ್ಳುವುದು. ಇಷ್ಟು ತೀವ್ರ ಸ್ವರೂಪದಲ್ಲಿಲ್ಲದಿದ್ದರೂ ಅಂತಾರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಾಕಷ್ಟು ಮಾನ್ಯತೆ ನೀಡದೆ ಕೇವಲ ಸ್ವರಾಷ್ಟ್ರ ಹಿತಕ್ಕೆ ಹೆಚ್ಚು ಪ್ರಾಧಾನ್ಯ ಕೊಟ್ಟು ಕೈಗೊಳ್ಳುವ ನೀತಿಗಳೂ ನಡೆಸುವ ಕಾರ್ಯಾಚರಣೆಗಳೂ ಆರ್ಥಿಕ ರಾಷ್ಟ್ರೀಯತೆ ಎನ್ನಿಸುವುವು. ಇದನ್ನು ಲಘು ಸ್ವರೂಪದ ಆರ್ಥಿಕ ರಾಷ್ಟ್ರೀಯತೆ ಎಂದು ಹೇಳಬಹುದು. ಅತ್ಯಂತ ಉಗ್ರ ಹಾಗೂ ಅತ್ಯಂತ ಲಘು ಸ್ವರೂಪದ ಆರ್ಥಿಕ ರಾಷ್ಟ್ರೀಯತೆಯ ನಡುವೆ ಆರ್ಥಿಕ ರಾಷ್ಟ್ರೀಯತೆಯ ವಿವಿಧ ಹಂತಗಳನ್ನು ಕಾಣಬಹುದು.


ಪ್ರಪಂಚದ ಇತಿಹಾಸದಲ್ಲಿ ಕೆಲವು ಕಾಲಗಳಲ್ಲಿ ಆರ್ಥಿಕ ರಾಷ್ಟ್ರೀಯತೆ ಎದ್ದು ಕಾಣುವು ದನ್ನು ಗಮನಿಸದಿರಲಾಗುವುದಿಲ್ಲ. ಆರ್ಥಿಕ ರಾಷ್ಟ್ರೀಯತೆ ಪ್ರೇರಕಶಕ್ತಿ, ಸ್ವರೂಪ, ಪರಿಣಾಮ ಇತ್ಯಾದಿ ಅಂಶಗಳ ಬಗ್ಗೆ ಮುಖ್ಯ ವಿಷಯಗಳನ್ನು ತಿಳಿಯಲು ಆ ಕಾಲದ ಅನುಭವಗಳ ಅವಲೋಕನ ಉಪಯುಕ್ತ. ಆಧುನಿಕ ಯುಗಕ್ಕೆ ಮುನ್ನ ಅಂದರೆ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಗೆ ಮುನ್ನ ಇಂಗ್ಲೆಂಡ್, ಫ್ರಾನ್್ಸ, ಸ್ಪೇನ್, ಹಾಲೆಂಡ್ ಇತ್ಯಾದಿ ಐರೋಪ್ಯ ರಾಷ್ಟ್ರಗಳು ಸುಮಾರು ಎರಡು ಶತಮಾನಗಳ ಕಾಲ ಅನುಸರಿಸುತ್ತಿದ್ದ ವಾಣಿಜ್ಯ ಪದ್ಧತಿಯ ನೀತಿ (ಮರ್ಕೆಂಟೈಲಿಸಂ) ಆರ್ಥಿಕ ರಾಷ್ಟ್ರೀಯತೆಯ ಒಂದು ಉಗ್ರಸ್ವರೂಪವೆಂದು ಹೇಳಬಹುದು.


ವಾಣಿಜ್ಯ ಪದ್ಧತಿಯ ವಾದಸರಣಿ ಈ ರೀತಿ ಇದೆ

[ಸಂಪಾದಿಸಿ]

ತರ ರಾಷ್ಟ್ರಗಳಿಗಿಂತ ತಮ್ಮ ರಾಷ್ಟ್ರ ಹೆಚ್ಚು ಪ್ರಭಾವಶಾಲಿ ರಾಜ್ಯವಾಗಬೇಕು. ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳೇ ಇಂಥ ರಾಜಕೀಯ ಶಕ್ತಿಯ ಮೂಲಾಧಾರ. ವಿದೇಶೀವ್ಯಾಪಾರದ ಲೆಕ್ಕದಲ್ಲಿ ಹೆಚ್ಚಳವೇ ಅಂದರೆ ಆಮದು ಬೆಲೆಯನ್ನು ಮೀರಿದ ರಫ್ತು ಬೆಲೆ ಇರುವ ಅನುಕೂಲ ಪರಿಸ್ಥಿತಿಯೇ ಹೆಚ್ಚು ಅಮೂಲ್ಯ ವಸ್ತುಸಂಗ್ರಹಕ್ಕೆ ಮಾರ್ಗ. ದೇಶದ ಉತ್ಪನ್ನ ವ್ಯವಸ್ಥೆಯೂ ಹಣಕಾಸಿನ ಪದ್ಧತಿಯೂ ಮಿತಿಯಂತೆ ಅನುಭೋಗ ಪ್ರವೃತ್ತಿಯೂ ಆಮದು ರಫ್ತು ನೀತಿಯೂ ಇಂಥ ವಿದೇಶೀವ್ಯಾಪಾರ ಅನುಕೂಲಸ್ಥಿತಿಗೆ ಅನುಗುಣವಾಗಿರಬೇಕು. ಈ ಬಗ್ಗೆ ಆವಶ್ಯಕ ಕಾರ್ಯಾಚರಣೆಗಳನ್ನು ಕೈಗೊಳ್ಳುವುದು ಸರ್ಕಾರದ ಮುಖ್ಯ ಹೊಣೆ. ಅದು ಆರ್ಥಿಕ ಚಟುವಟಿಕೆಗಳನ್ನು ಸೂಕ್ತವಾಗಿ ನಿಯಂತ್ರಿಸುವುದರ ಮೂಲಕ. ಇತರ ದೇಶಗಳಿಂದ ಹೆಚ್ಚು ಹೆಚ್ಚಾಗಿ ಅಮೂಲ್ಯಸರಕುಗಳನ್ನು ಪಡೆದು, ತನ್ಮೂಲಕ ಅದರ ರಾಜಕೀಯ ಪ್ರಭಾವ, ಪ್ರತಿಷ್ಠೆಗಳನ್ನು ಬಲಪಡಿಸಿಕೊಳ್ಳಬೇಕು. ಈ ವಾದಸರಣಿಯ ಅನುಸಾರವಾಗಿ, ವಾಣಿಜ್ಯ ಪದ್ಧತಿಯನ್ನುಳ್ಳ ರಾಷ್ಟ್ರಗಳ ಧ್ಯೇಯ ಕೇವಲ ಆರ್ಥಿಕ ಸ್ವಸಂಪುರ್ಣತೆಯಷ್ಟೇ ಆಗಿರಲಿಲ್ಲ. ಇತರ ರಾಷ್ಟ್ರಗಳಿಂದಲೂ ಆದಷ್ಟು ಆರ್ಥಿಕ ಪ್ರಯೋಜನ ಪಡೆಯುವುದೂ ಇದಕ್ಕಾಗಿ ಆವಶ್ಯಕವಾದ ಎಲ್ಲ ರಾಷ್ಟ್ರೀಯ ಕ್ರಮಗಳನ್ನು ಅನುಸರಿಸುವುದೂ ಇದರ ಆರ್ಥಿಕ ರಾಷ್ಟ್ರೀಯತೆಯ ಲಕ್ಷಣವಾಗಿತ್ತು. ಇತರ ರಾಷ್ಟ್ರಗಳ ಹಿತಾಸಕ್ತಿಗಳನ್ನು ಗಮನಿಸದೆ, ಕೇವಲ ಸ್ವರಾಷ್ಟ್ರಪ್ರತಿಷ್ಠೆ ಹಾಗೂ ಮೇಲ್ಮೈಗಳ ಸಾಧನೆಗಾಗಿ ಅನೇಕ ಐರೋಪ್ಯರಾಷ್ಟ್ರಗಳು ಕೈಕೊಂಡ ವಾಣಿಜ್ಯ ನೀತಿ ಮುಯ್ಯಿಗೆ ಮುಯ್ಯಿ ನ್ಯಾಯಕ್ಕೆ ಎಡೆಗೊಟ್ಟಿತು. ತತ್ಪರಿಣಾಮವಾಗಿ ಅವುಗಳೊಳಗೆ ಪರಸ್ಪರ ವೈಮನಸ್ಯ ಅಂಕುರಿಸಿ ಕಲಹ ಹಾಗೂ ಯುದ್ಧಗಳಲ್ಲಿ ಪರಿಣಮಿಸಿತು. ಇದರಿಂದ ಆ ಎಲ್ಲ ರಾಷ್ಟ್ರಗಳ ಕ್ಷೇಮಾಭ್ಯುದಯಕ್ಕೂ ಧಕ್ಕೆಯುಂಟಾಯಿತು. ಹೀಗೆ ಉಗ್ರಸ್ವರೂಪದ ಆರ್ಥಿಕರಾಷ್ಟ್ರೀಯತೆಯ ವಾಣಿಜ್ಯ ನೀತಿ ಸಾರ್ವತ್ರಿಕ ಹಿತಕ್ಕೆ ವಿರೋಧವಾದು ದರಿಂದ ಇಂಥ ಭಾವನೆಗೆ ಕ್ರಮೇಣವಾಗಿ ವಿರೋಧ ಬೆಳೆದು ಆರ್ಥಿಕರಾಷ್ಟ್ರೀಯತೆಗೆ ಹೆಚ್ಚು ಮಾನ್ಯತೆ ದೊರೆತುದು ಸ್ವಾಭಾವಿಕ ಅಂತಾರಾಷ್ಟ್ರೀಯತೆ, ರಾಷ್ಟ್ರೀಯತೆ.


೧೯ನೆಯ ಶತಮಾನದ ಅಂತ್ಯಭಾಗದಲ್ಲಿ ಅಮೆರಿಕ ಮತ್ತು ಕೆಲವು ಐರೋಪ್ಯ ರಾಷ್ಟ್ರಗಳು ಶೀಘ್ರ ಕೈಗಾರಿಕಾಭಿವೃದ್ಧಿ ಹೊಂದುವ ಸಲುವಾಗಿ ಒಂದು ರೀತಿಯ ಆರ್ಥಿಕ ರಾಷ್ಟ್ರೀಯತಾ ನೀತಿಯನ್ನು ಕೈಕೊಂಡವು. ಅಂದು ಜರ್ಮನಿಯಲ್ಲಿ ಫ್ರೆಡರಿಕ್ ಲಿಸ್ಟ್, ಅಮೆರಿಕದಲ್ಲಿ ಹ್ಯಾಮಿಲ್ಟನ್ ಇತ್ಯಾದಿ ರಾಷ್ಟ್ರೀಯತಾವಾದಿಗಳು ತಂತಮ್ಮ ರಾಷ್ಟ್ರಗಳು ಅಂದಿನ ಸಂದರ್ಭದಲ್ಲಿ ವಿಶೇಷ ರಾಷ್ಟ್ರೀಯತಾ ಕ್ರಮಗಳನ್ನು ಅನುಸರಿಸದೆ ಇದ್ದರೆ ಕೈಗಾರಿಕಾಕ್ರಾಂತಿ ಸಾಧ್ಯವಾಗದೆಂದು ಸಾರಿದರು. ರಾಷ್ಟ್ರದ ಆರ್ಥಿಕ ಸ್ವಾವಲಂಬನೆಗೆ ಶ್ರಮಿಸಿ, ಸ್ವದೇಶಿ ಮಾಲನ್ನೇ ಕೊಳ್ಳಬೇಕೆಂಬ ಘೋಷಣೆಗಳು ಆಯಾ ದೇಶದ ಆರ್ಥಿಕಾಭಿವೃದ್ಧಿಗೆ ಆವಶ್ಯಕವಾದ ಸ್ಫೂರ್ತಿಯನ್ನು ನೀಡಿದವು. ಹೀಗೆ ಅನುಸರಿಸಲಾದ ರಕ್ಷಣಾ ವಾಣಿಜ್ಯನೀತಿ ಮತ್ತು ಸ್ವದೇಶಿ ಹಾಗೂ ಸ್ವಾವಲಂಬನೆಯ ತತ್ತ್ವಪ್ರಚಾರಗಳು ವಿದೇಶಿ ಪೈಪೋಟಿಯ ಭಯ ತಪ್ಪಿಸುವುದರ ಮೂಲಕ ಆಯಾ ರಾಷ್ಟ್ರದ ಕೈಗಾರಿಕಾಭಿವೃದ್ಧಿಗೆ ಸಹಾಯ ಮಾಡಿದುವು. ಆದರೆ, ಆಯಾ ದೇಶದ ಪ್ರಾಕೃತಿಕ ಸಂಪತ್ಸಾಧನಗಳ ಆಧಾರದ ಮೇಲೆ ತೀವ್ರ ಆರ್ಥಿಕಾಭಿವೃದ್ಧಿ ಸಾಧಿಸಲು ಕೈಗೊಂಡ ಇಂಥ ಕ್ರಮಗಳು ಆ ಶತಮಾನದಲ್ಲಿ ವಿಕಾಸವಾಗುತ್ತಿದ್ದ ಅಂತಾರಾಷ್ಟ್ರೀಯ ಆರ್ಥಿಕತೆಯ ಚೌಕಟ್ಟನ್ನು ಅಳಿಸಲಿಲ್ಲ. ಆದುದರಿಂದ ಅದು ಆರ್ಥಿಕ ರಾಷ್ಟ್ರೀಯತೆಯ ಒಂದು ಲಘುಸ್ವರೂಪವೆನ್ನಬಹುದು.


ಇಂದಿನ ಪ್ರಪಂಚದಲ್ಲಿ ಹೊಸದಾಗಿ ರಾಜಕೀಯ ಸ್ವಾತಂತ್ರ್ಯ ಪಡೆದು ಶೀಘ್ರ ಆರ್ಥಿಕಾಭಿವೃದ್ಧಿಗೆ ಹವಣಿಸುತ್ತಿರುವ ಅನೇಕ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲೂ ಮೇಲೆ ಹೇಳಿರುವ ರೀತಿಯ ಆರ್ಥಿಕ ರಾಷ್ಟ್ರೀಯತೆಯನ್ನು ಗುರುತಿಸಬಹುದು. ತಾವೇ ಆರ್ಥಿಕವಾಗಿ ಉತ್ಪಾದಿಸಬಹುದಾದ ಅನೇಕ ಸರಕುಗಳ ಬಗ್ಗೆ ಮುಂದುವರಿದಿರುವ ರಾಷ್ಟ್ರಗಳ ಮೇಲಿನ ಅವಲಂಬನೆ ತಪ್ಪಿಸುವ ಮತ್ತು ವಾಸ್ತವವಾದ ಹೋಲಿಕೆ ವೆಚ್ಚನಿಯಮದ ಪ್ರಕಾರ ತಮಗೆ ಅನುಕೂಲವಿರುವ ಸರಕುಗಳ ರಫ್ತು ಹೆಚ್ಚಿಸುವ ಉದ್ದೇಶದಿಂದ ಈ ಅಭಿವೃದ್ಧಿ ಹೊಂದದ ರಾಷ್ಟ್ರಗಳು ರಕ್ಷಣಾವಾಣಿಜ್ಯನೀತಿ ಮತ್ತು ಇತರ ವಿದೇಶಿವ್ಯಾಪಾರ-ವ್ಯವಹಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಕ್ರಮಗಳು ಕೇವಲ ರಾಷ್ಟ್ರೀಯತಾ ಪ್ರಧಾನತೆಯ ದೃಷ್ಟಿಯಿಂದ ಕೈಗೊಂಡ ಕ್ರಮಗಳೆಂದು ತೋರಿದರೂ ವಾಸ್ತವವಾಗಿ ದೀರ್ಘಕಾಲಾವಧಿಯ ದೃಷ್ಟಿಯಿಂದ ಇವು ಸಹಜವಾದ ಅಂತಾರಾಷ್ಟ್ರೀಯ ಆರ್ಥಿಕತೆಯ ವಿಕಾಸಕ್ಕೆ ಪ್ರತಿಕೂಲವಾಗುವುದಿಲ್ಲವೆಂದು ಹೇಳಬಹುದು. ಏಕೆಂದರೆ, ಅಂತಾರಾಷ್ಟ್ರೀಯತೆಗೆ ವಿರೋಧವೆಂದು ತೋರಬಹುದಾದ ಈ ಕ್ರಮಗಳು, ಹಿಂದುಳಿದ ರಾಷ್ಟ್ರಗಳ ಆರ್ಥಿಕಾಭಿವೃದ್ಧಿಗೆ ಅತ್ಯಾವಶ್ಯಕವಾದ ಕೇವಲ ತಾತ್ಕಾಲಿಕ ಕ್ರಮಗಳು. ಭಾರತವೂ ಸೇರಿ ಇಂದಿನ ಅನೇಕ ಅಭಿವೃದ್ಧಿ ಹೊಂದದ ರಾಷ್ಟ್ರಗಳು ಪ್ರಪಂಚ ಆರ್ಥಿಕತೆಯ ವಿಶಾಲತತ್ವಗಳಿಗೆ ಒಪ್ಪಿಗೆ ನೀಡಿವೆ. ಅಂದಮೇಲೆ, ಅಭಿವೃದ್ಧಿ ಪಥದಲ್ಲಿ ಮುಂದುವರಿದಂತೆ ಈ ರಾಷ್ಟ್ರಗಳು ಸಂಬಂಧ ಹೊಂದುವ ಗುರಿ ಹೊಂದಿವೆ ಎಂದು ಹೇಳಿದಂತಾಯಿತು. ಆದುದರಿಂದ ಇವುಗಳು ಅನುಸರಿಸುತ್ತಿರುವ ರಾಷ್ಟ್ರೀಯತೆ ದುಷ್ಪರಿಣಾಮವುಳ್ಳ ತೀವ್ರ ರಾಷ್ಟ್ರೀಯತೆಯ ಜಾತಿಗೆ ಸೇರುವುದಿಲ್ಲ. ಇಂದು ಭಾರತದ ಯೋಜನೆಗಳು ಸ್ವಾವಲಂಬನೆಯ ಉದ್ದೇಶವನ್ನು ಸಾರುತ್ತಿರುವುದು ಇಂಥ ಒಂದು ಆರ್ಥಿಕ ರಾಷ್ಟ್ರೀಯತೆಗೆ ಪುಷ್ಟಿಕೊಟ್ಟಂತಿದೆ. ಇದೇ ಸ್ವರೂಪದ ಆರ್ಥಿಕ ರಾಷ್ಟ್ರೀಯತೆಯನ್ನು ಅಭಿವೃದ್ಧಿ ಪಥದಲ್ಲಿರುವ ಎಲ್ಲ ರಾಷ್ಟ್ರಗಳಲ್ಲೂ ಕಾಣಬಹುದು. ಇಂಥ ಲಘುಸ್ವರೂಪದ ಆರ್ಥಿಕ ರಾಷ್ಟ್ರೀಯತೆಯಿಂದ ಮುಂದುವರಿಯುವ ರಾಷ್ಟ್ರಗಳಿಗೆ ೧೯ನೆಯ ಶತಮಾನದಲ್ಲಿ ಹೇಗೆ ಆರ್ಥಿಕಾಭಿವೃದ್ಧಿಗೆ ಸಹಾಯವಾಯಿತೋ ಹಾಗೆಯೇ ಇಂದಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಈ ರೀತಿಯ ಆರ್ಥಿಕ ರಾಷ್ಟ್ರೀಯತೆ ಸಹಾಯಕವಾಗಿದೆ.


ಎರಡು ಮಹಾಯುದ್ಧಗಳ ಅಂತರದ ಅವಧಿಯಲ್ಲಿ ಹಲವಾರು ರಾಷ್ಟ್ರಗಳಲ್ಲಿ ವಿವಿಧ ಸ್ವರೂಪದ ಆರ್ಥಿಕ ರಾಷ್ಟ್ರೀಯತೆ ಬೆಳೆದುದನ್ನು ಕಾಣಬಹುದು. ಮೊದಲ ಪ್ರಪಂಚ ಯುದ್ಧಾನಂತರದ ಶಾಂತಿ ಕೌಲಿನ ಪ್ರಕಾರ ಉದ್ಭವಿಸಿದ ಸಣ್ಣಪುಟ್ಟ ಐರೋಪ್ಯ ರಾಷ್ಟ್ರಗಳು ಹಿಂದಿನ ವಿಶಾಲ ಆರ್ಥಿಕ ತಳಹದಿಯನ್ನು ಕಳೆದುಕೊಂಡುದೇ ಅಲ್ಲದೆ ಸಂಕುಚಿತ ರಾಷ್ಟ್ರೀಯತಾಭಾವನೆಯನ್ನೂ ತೋರಿಸಿದುವು. ಈ ಚಿಕ್ಕ ರಾಷ್ಟ್ರಗಳು ಹೋಲಿಕೆ ವೆಚ್ಚನಿಯಮವನ್ನು ಧಿಕ್ಕರಿಸಿ, ಎಷ್ಟೇ ವೆಚ್ಚವಾದರೂ ಸರಿ ತಾವು ಕೈಗಾರಿಕೋದ್ಯಮ ಬೆಳೆಸಬೇಕೆಂಬ ಉದ್ದೇಶದಿಂದ ೧೯೨೦ರ ದಶಕದಲ್ಲಿ ಕೈಗೊಂಡ ನೀತಿಗಳು ತೀವ್ರ ರಾಷ್ಟ್ರೀಯತಾಧೋರಣೆಯವಾಗಿದ್ದುವು.


ಅಂತೆಯೇ ನಾಜಿ ಜರ್ಮನಿ, ಫ್ಯಾಸಿಸ್ಟ್ ಇಟಲಿ ೧೯೩೦ರ ದಶದಲ್ಲಿ ಅನುಸರಿಸಿದ ಆರ್ಥಿಕ ಕ್ರಮಗಳೂ ಉಜ್ವಲ ಆರ್ಥಿಕ ರಾಷ್ಟ್ರೀಯತೆಯನ್ನೇ ಆಧರಿಸಿದ್ದುವು. ಆದಷ್ಟು ಶೀಘ್ರವಾಗಿ ಅತ್ಯುನ್ನತ ಯುದ್ಧಬಲವನ್ನು ಸಂಪಾದಿಸಿಕೊಳ್ಳುವುದೇ ಈ ರಾಷ್ಟ್ರಗಳ ಉಜ್ವಲ ರಾಷ್ಟ್ರೀಯತೆಗೆ ಪ್ರೇರಕವಾಗಿತ್ತು. ಹಿಟ್ಲರ್, ಮುಸೋಲನಿಯಂತಹವರ ನೇತೃತ್ವದಲ್ಲಿ ಬೆಳೆದ ಈ ಉಗ್ರಸ್ವರೂಪದ ಆರ್ಥಿಕ ರಾಷ್ಟ್ರೀಯತೆಯು ಶಾಂತಿ, ಸಮೃದ್ಧಿ, ಉತ್ತಮ ಜೀವನಧ್ಯೇಯಗಳನ್ನು ಬದಿಗೊತ್ತಿ, ಪ್ರಪಂಚವನ್ನು ಘೋರಯುದ್ಧಕ್ಕೆ ಎಳೆದೊಯ್ಯಲು ಕಾರಣವಾಯಿತು.

ಯುದ್ಧಮನೋಭಾವ ಬೆಳೆದಿದ್ದ ಆ ಪರಿಸ್ಥಿತಿಯಲ್ಲಿ ಅನೇಕ ಪ್ರಮುಖರಾಷ್ಟ್ರಗಳು, ಕೆಲವು ಆವಶ್ಯಕ ಸರಕುಗಳ ಬಗ್ಗೆ ಸ್ವಸಂಪುರ್ಣತೆ ಹೊಂದುವ ಉದ್ದೇಶದಿಂದ ಆರ್ಥಿಕ ರಾಷ್ಟ್ರೀಯತಾ ನೀತಿಯನ್ನು ಅನುಸರಿಸಿದವು. ಈ ವಿಧದ ಆರ್ಥಿಕ ರಾಷ್ಟ್ರೀಯತೆ ಇಂದಿನ ಪ್ರಪಂಚದಲ್ಲೂ ಇರುವುದನ್ನು ಕಾಣಬಹುದು. ಪ್ರಪಂಚದಲ್ಲಿ ವಿವಿಧ ಶಕ್ತಿಕೂಟಗಳೊಳಗೆ ರಾಜಕೀಯ ರಾಜತಾಂತ್ರಿಕ ಪೈಪೋಟಿ ಇರುವವರೆಗೂ ಹಿರಿಯ ರಾಷ್ಟ್ರಗಳು ಸೈನಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿರುವವರೆಗೂ ಇಂಥ ರಾಷ್ಟ್ರೀಯತಾ ಭಾವನೆ ತಪ್ಪದು. ಅಣುಶಕ್ತಿರಾಷ್ಟ್ರವಾಗಬೇಕೆಂಬ ಆಕಾಂಕ್ಷೆಯಿಂದ ಕೆಲವು ರಾಷ್ಟ್ರಗಳು ರಾಷ್ಟ್ರೀಯತಾ ಮನೋಭಾವವನ್ನು ವಿಶೇಷವಾಗಿ ಪೋಷಿಸುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಈ ಮನೋಭಾವ ಒಂದು ರೀತಿಯಲ್ಲಿ ಪುರ್ವದ ವಾಣಿಜ್ಯಪಂಥದ ನೀತಿಯ ಆಧುನಿಕ ಸ್ವರೂಪವೆಂದು ಹೇಳಬಹುದು.


೧೯೩೦ರ ದಶಕದಲ್ಲಿ ಘೋರ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ಅನೇಕ ಪ್ರಮುಖ ರಾಷ್ಟ್ರಗಳು ಅನುಸರಿಸಿದ ಕ್ರಮಗಳನ್ನು ತೀವ್ರ ಆರ್ಥಿಕ ರಾಷ್ಟ್ರೀಯತೆಯ ಇನ್ನೊಂದು ಸ್ವರೂಪವೆಂದು ಹೇಳಬಹುದು. ಅಮೆರಿಕದ ರಕ್ಷಣಾ ವಾಣಿಜ್ಯನೀತಿ, ಬ್ರಿಟನ್ ಪೌಂಡಿನ ಮೌಲ್ಯ ಇಳಿತಾಯ ಮಾಡಿದುದು ಹಾಗೂ ಸುಂಕನಿರ್ಬಂಧಗಳನ್ನು ಬಿಗಿಗೊಳಿಸಿ ದುದು, ಐರೋಪ್ಯ ರಾಷ್ಟ್ರಗಳು ಕೈಗೊಂಡ ವ್ಯವಸಾಯ ರಕ್ಷಣಾನಿಧಿ ಮತ್ತು ವಿದೇಶಿವಿನಿಮಯದ ಅನೇಕ ರೀತಿಯ ನಿಯಂತ್ರಣಗಳು ಇತ್ಯಾದಿ ಆರ್ಥಿಕ ಪುನರುಜ್ಜೀವನ ಕ್ರಮಗಳು ಕೇವಲ ವರ್ತಮಾನದೃಷ್ಟಿ ಹಾಗೂ ರಾಷ್ಟ್ರೀಯತಾ ಭಾವನೆಯಿಂದ ಕೈಗೊಂಡ ಕ್ರಮಗಳಾಗಿ ದ್ದುವು. ಒಂದೊಂದು ದೇಶವೂ ಅದರ ಅವಸರದ ನಿರುದ್ಯೋಗ ಸಮಸ್ಯೆಯನ್ನೇ ಪ್ರಧಾನವಾಗಿ ಚಿಂತಿಸಿದ್ದು ಸ್ವಾಭಾವಿಕವೆನ್ನಬಹುದು. ಆದರೆ ನೆರೆರಾಷ್ಟ್ರದವರು ಭಿಕ್ಷುಕರಾದರೂ ಪರವಾಗಿಲ್ಲ ನಮ್ಮ ರಾಷ್ಟ್ರದ ಜನರು ಸಂಪದ್ಯುಕ್ತರಾದರೆ ಸರಿ ಎಂಬ ಧೋರಣೆ ಸಾಧುವೆಂದು ಹೇಳಲಾಗುವುದಿಲ್ಲ. ಈ ರೀತಿಯ ಆರ್ಥಿಕ ರಾಷ್ಟ್ರೀಯತೆ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳನ್ನು ಹೊಂದಿಕೆಯ ಪಥದಲ್ಲಿ ಕೊಂಡೊಯ್ಯಲಿಲ್ಲವೆಂದು ಹೇಳಬಹುದು.


ಹೀಗೆ ಎರಡು ಮಹಾಯುದ್ಧಗಳ ಮಧ್ಯಕಾಲದಲ್ಲಿ ಅನೇಕ ಶಕ್ತಿಗಳಿಂದ ಪ್ರೇರಿತವಾಗಿ ಆರ್ಥಿಕರಾಷ್ಟ್ರೀಯತೆ ವಿವಿಧ ಸ್ವರೂಪಗಳನ್ನು ತಾಳಿತು. ೧೯ನೆಯ ಶತಮಾನದಲ್ಲಿ ರಚಿತವಾದ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಶಿಥಿಲವಾಗಲು ಈ ರಾಷ್ಟ್ರೀಯತೆಯೇ ಕಾರಣ ಎಂದು ಕೆಲವರ ಅಭಿಪ್ರಾಯ. ಆದರೆ, ಎಚ್.ಡಬ್ಲ್ಯು. ಆರನ್ಟ್ ಹೇಳಿರುವಂತೆ ಅಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಅಂತಾರಾಷ್ಟ್ರೀಯ ಹಿತಾಸಕ್ತಿಗಳೊಡನೆ ಹೊಂದಿಸುವುದು ಎಷ್ಟರ ಮಟ್ಟಿಗೆ ಸಾಧ್ಯವಿತ್ತು ಎಂಬುದು ಚರ್ಚಾಸ್ಪದ ವಿಷಯ. ಹಿರಿಯ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕತೆಗಳಲ್ಲಿ ಆಂತರಿಕ ಅಸ್ತಿಮಿತತೆ ಮತ್ತು ಪ್ರಪಂಚ ಹಣಕಾಸುವ್ಯವಸ್ಥೆಯ ಲೋಪದೋಷಗಳ ಪರಿಣಾಮವಾಗಿ ಅಂತಾರಾಷ್ಟ್ರೀಯ ಆರ್ಥಿಕ ಹಿನ್ನೆಲೆ ತೀವ್ರವಾಗಿ ಬದಲಾಯಿಸಿತ್ತು. ಹಿಂದಿನ ಸ್ವರ್ಣಪ್ರಮಿತಿ ಕುಸಿದುದರಿಂದ ವಿವಿಧ ರಾಷ್ಟ್ರಗಳ ಆರ್ಥಿಕತೆಗಳನ್ನು ಒಂದು ವ್ಯೂಹದಲ್ಲಿ ಇಡಬಲ್ಲ ಮುಖ್ಯ ಯಂತ್ರವಿಲ್ಲದಂತಾಯಿತು. ಜೊತೆಗೆ ಆ ರಾಷ್ಟ್ರಗಳು ಘೋರ ಮುಗ್ಗಟ್ಟಿನ ತೆಕ್ಕೆಯಲ್ಲಿ ಸಿಕ್ಕಿಬಿದ್ದಿದ್ದುವು. ಹೀಗೆ ಕದಡಿದ ಈ ಆರ್ಥಿಕ ಪರಿಸ್ಥಿತಿಯಲ್ಲದೆ ರಾಜಕೀಯ ಅಭದ್ರತೆಯೂ ಉಂಟಾದ್ದರಿಂದ ಪ್ರಪಂಚದ ವಾತಾವರಣ ತೊಡಕಿನ ಸಮಸ್ಯೆಗಳಿಂದ ತುಂಬಿತ್ತು. ಇಂಥ ಸಂದರ್ಭಗಳಲ್ಲಿ ವಿವಿಧ ರಾಷ್ಟ್ರಗಳು ತಮ್ಮ ತಮ್ಮ ವಿಶೇಷ ಆಕಾಂಕ್ಷೆಗಳನ್ನೂ ಅವಸರದ ಸಮಸ್ಯೆಗಳನ್ನೂ ಪ್ರಧಾನವಾಗಿಟ್ಟುಕೊಂಡು ಕೈಗೊಂಡ ಕ್ರಮಗಳು ಮೇಲೆ ಹೇಳಿದ ವಿವಿಧ ಸ್ವರೂಪದ ರಾಷ್ಟ್ರೀಯತಾ ಕ್ರಮಗಳಾದುವು. ಆದರೆ ಒಟ್ಟಿನಲ್ಲಿ ಅಂಥ ರಾಷ್ಟ್ರೀಯತೆ ದೀರ್ಘಕಾಲಾವಧಿಯ ದೃಷ್ಟಿಯಿಂದ ಯಾವ ಹಿರಿಯ ಪ್ರಪಂಚ ಸಮಸ್ಯೆಯನ್ನೂ ಬಗೆಹರಿಸಲಿಲ್ಲವೆಂಬುದು ಅನುಭವವೇದ್ಯವಾಗಿದೆ.


ಆರ್ಥಿಕ ರಾಷ್ಟ್ರೀಯತೆಗೆ ಹಲವಾರು ಪ್ರೇರಕ ಶಕ್ತಿಗಳಿರುವುದನ್ನೂ ಅದು ವಿವಿಧ ಸ್ವರೂಪ ತಾಳಿರುವುದನ್ನೂ ಇವುಗಳಿಗನುಗುಣವಾಗಿ ವಿವಿಧ ಪರಿಣಾಮಗಳು ಉಂಟಾಗಿರು ವುದನ್ನೂ ವಿವರಿಸಲಾಯಿತು. ವಿವಿಧ ರಾಷ್ಟ್ರಗಳ ಹಿತಾಸಕ್ತಿಗಳು ಭಿನ್ನಭಿನ್ನವಾಗಿರುವ ಮತ್ತು ಅವು ಅಂತಾರಾಷ್ಟ್ರೀಯ ಹಿತಾಸಕ್ತಿಗಳೊಡನೆ ಸಮ್ಮಿಳಿತಗೊಳಿಸಲು ಸಾಧ್ಯವಾಗದ ಪರಿಸ್ಥಿತಿಯಿರುವವರೆಗೆ ಒಂದಲ್ಲ ಒಂದು ರೀತಿಯ ಆರ್ಥಿಕ ರಾಷ್ಟ್ರೀಯತೆ ತಲೆದೋರುವುದು ಅನಿವಾರ್ಯ. ಇಂದಿನ ಪ್ರಪಂಚದಲ್ಲಿ ಅಂತಾರಾಷ್ಟ್ರೀಯ ಸಹಕಾರಯಂತ್ರವಾದ ವಿಶ್ವಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯತೆ ರೂಪುಗೊಳ್ಳುತ್ತಿದೆ. ಅದರ ಸದಸ್ಯರಾಷ್ಟ್ರಗಳು ಉದಾತ್ತ ಆರ್ಥಿಕನೀತಿಗಳ ಧ್ಯೇಯವನ್ನು ಒಪ್ಪಿಕೊಂಡಿವೆ. ಆದರೂ ಆರ್ಥಿಕ ಸ್ವಸಂಪುರ್ಣತೆಯ ಹಂಬಲ, ತೀವ್ರ ಆರ್ಥಿಕಾಭಿವೃದ್ಧಿಯ ಆಕಾಂಕ್ಷೆ, ಕಮ್ಯೂನಿಸಂ ಧ್ಯೇಯ, ವಸಾಹತುಶಾಹಿ ವಿರೋಧ ಇತ್ಯಾದಿ ಪ್ರೇರಕಶಕ್ತಿಗಳು, ವಿವಿಧ ರೀತಿಯ ಆರ್ಥಿಕರಾಷ್ಟ್ರೀಯತೆಗೆ ಪೋಷಕವಾಗಿ ನಿಂತಿವೆ. ಅಂತಾರಾಷ್ಟ್ರೀಯ ವೈಮನಸ್ಯವನ್ನು ಬೆಳೆಸದೆ, ಈ ಆರ್ಥಿಕ ರಾಷ್ಟ್ರೀಯತೆ ಕೇವಲ ಅಭಿವೃದ್ಧಿಗೆ ಪೋಷಕವಾಗಿರುವುದಾದರೆ, ಅದು ಅಪೇಕ್ಷಣೀಯ ಶಕ್ತಿಯಾಗುತ್ತದೆ. ಮಿತಿಮೀರಿದರೆ ರಾಷ್ಟ್ರಗಳೊಳಗೆ ವೈಮನಸ್ಯ, ಕಲಹ, ದುಷ್ಪರಿಣಾಮಗಳು ಉಂಟಾಗಿ ಆರ್ಥಿಕರಾಷ್ಟ್ರೀಯತೆ ಸಾರ್ವತ್ರಿಕವಾಗಿ ಅನಿಷ್ಟಕರವಾಗಬಹುದು.