ಪ್ರಾಣಲಿಂಗ ಪ್ರಾಣಲಿಂಗವೆಂಬರು
ಪ್ರಾಣಲಿಂಗವೆಂಬುದಾರಿಗುಂಟಯ್ಯಾ ? ಮೂವರಿಗೆ ಹುಟ್ಟಿದ ಲಿಂಗವು ತನ್ನ ಪ್ರಾಣಲಿಂಗವಾದ ಪರಿಯಿನ್ನೆಂತೊ ? ವಸುಧೆಗೆ ಹುಟ್ಟಿದ ಲಿಂಗವನು ವಶಕ್ಕೆ ತಂದು
ತನ್ನ ದೆಸೆಯಲ್ಲಿ ನಿಲಿಸುವ ಪರಿಯಿನ್ನೆಂತೊ ? ಭೂಮಿಗೆ ಹುಟ್ಟಿ ಶಿಲೆಯಾದ
ಕಲುಕುಟಿಗ ಮುಟ್ಟಿರೂಪಾದ
ಗುರುಮುಟ್ಟಿ ತೇಜವಾದ. ಹಿಂದೆ ಮುಟ್ಟಿದವರಿಗೆಲ್ಲ ಪ್ರಾಣಲಿಂಗವಾದ ಪರಿಯಿನ್ನೆಂತೊ ರಿ ? ತನ್ನ ಪ್ರಾಣ ಮುಂದೆ ಹೋಗಿ ಲಿಂಗ ಹಿಂದುಳಿದಡೆ ಪ್ರಾಣ ಲಿಂಗವಾದ ಪರಿಯಿನ್ನೆಂತೊ ? ಹಸಿವು ತೃಷೆ
ವಿಷಯ ನಿದ್ರೆ ಜಾಡ್ಯ
ಇಂತಿವೆಲ್ಲವನತಿಗಳೆದು ನಿರ್ಮಲದೇಹಿಯಾಗಿ ಹೃದಯಕಮಲದೊಳು ವಿಮಲವಪ್ಪ ಶ್ರೀಗುರುಮೂರ್ತಿ
ಪರಂಜ್ಯೋತಿ ಎಂದೆನಿಸುವ ಲಿಂಗವ
ಮಲಿನವಿಡಿಯದ ಕಾಯದ ಸೆಜ್ಜೆಯೊಳು ದೃಢದೊಳ್ಬಿಜಯಂಗೈಸಿ
ಸಪ್ತಧಾತು ಅಷ್ಟಮದವಿಲ್ಲದೆ ಜ್ಞಾನದೋಗರವನರ್ಪಿಸಿ
ಸುಜ್ಞಾನಬುದ್ಧಿಯೊಳು ಪ್ರಸಾದವ ಸ್ವೀಕಾರವ ಮಾಡಿ
ನಿತ್ಯಸುಖಿಯಾಗಿ ಆಡುತಿಪ್ಪ_ ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೊಬ್ಬನೆ ಪ್ರಾಣಲಿಂಗ ಸಂಬಂಧಿ; ಪ್ರಾಕ್‍ಶುದ್ಧಿಗಳೆಲ್ಲ ಲಿಂಗಲಾಂಛನಧಾರಿಗಳೆಂದೆನಿಸುವರು