ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು ಚಿದ್‍ಬಯಲೆಂಬ ಶಿಶು ಹುಟ್ಟಿತ್ತು. ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು
ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು. ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು. ಆ ಜೋಗುಳದ ಉಲುಹು ಅಡಗಿದೊಡನೆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು. ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು. ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.