ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪರಂತಪವಿಜಯ
೧೦೪

ವಿಷಯದಲ್ಲಿ ಬಹಳ ದಯೆಯುಳ್ಳವನಾಗಿದ್ದಾನೆ. ನಿನ್ನ ರೋಗವು ವಾಸಿಯಾಗಿ ನೀನು ಸ್ವಲ್ಪ ಚೇತರಿಸಿಕೊಳ್ಳುವವರೆಗೂ, ಕಣ್ಣೀರು ಬಿಡುತ್ತ ನಿನ್ನ ಹಾಸುಗೆಯ ಸಮೀಪದಲ್ಲಿಯೇ ಔಷಧ ಪಥ್ಯಗಳನ್ನು ಕೊಡಿಸುತಿದ್ದನು. ನಿನಗೆ ಪ್ರಾಣಭಯವಿಲ್ಲವೆಂದು ತಿಳಿದ ಕೂಡಲೆ, ಕಾರ್ಯಾರ್ಥವಾಗಿ ಹೋಗಿ ಇರುವನು. ಕಾಮಮೋಹಿನಿ- (ಆತ್ಮಗತ) ಆಹಾ! ಪಾಪಿ ವಿಧಿಯೇ! ಈ ದುರಾತ್ಮನ ಸೇವೆಗೆ ನನ್ನನ್ನು ಗುರಿಮಾಡಿದೆಯಲ್ಲಾ! ಇವನು ಮಾಡಿದ ಚಿಕಿತ್ಸೆಯಿಂದ ನನ್ನ ವ್ಯಾಧಿಯು ವಾಸಿಯಾಗಿ ಪ್ರಜ್ಞೆ ಬರುವಂತೆ ಮಾಡಿದೆಯಲ್ಲಾ! ನಿನಗೆ ಸ್ವಲ್ಪವೂ ಕರುಣವಿಲ್ಲ. ನಿನ್ನನ್ನು ಬಯ್ದು ಪ್ರಯೋಜನವೇನು? ನಾನು ಮಾಡಿರುವ ಪಾಪದ ಫಲವನ್ನೆ ನಾನು ಅನುಭವಿಸುತ್ತಲಿರುವೆನು. (ಪ್ರಕಾಶ) ಈ ದುರಾತ್ಮನು, ನಾನು ವಶಳಾಗಿ ಇವನ ದುರಾಗತಗಳನ್ನು ಮರೆತು ನನ್ನ ಪಾತಿವ್ರತ್ಯವನ್ನು ಈ ವುಪಚಾರಗಳಿಗೂಸ್ಕರ ವಿಕ್ರಯಿಸುವೆನೆಂದು ತಿಳಿದುಕೊಂಡಿರಬಹುದು. ಈ ಪ್ರಪಂಚದ ಸೃಷ್ಟಿ ಸ್ಥಿತಿಲಯಗಳಿಗೆ ಕರ್ತನಾದ ದೇವರಿದ್ದರೆ,- ದುಷ್ಟನಿಗ್ರಹ ಶಿಷ್ಟಪರಿಪಾಲನೆಗಳನ್ನು ಮಾಡತಕ್ಕದ್ದು ಅವನ ಬಿರುದಾಗಿದ್ದರೆ,-ಅತ್ಯುತ್ಕಟವಾದ ಪಾಪಗಳಿಗೆ ಈ ಜನ್ಮದಲ್ಲೇ ಶಿಕ್ಷೆಯಾಗುವುದೆಂಬ ಧರ್ಮಶಾಸ್ತ್ರ ವಚನವು ನಿಜವಾದದ್ದಾದರೆ,-ಈ ಶಂಬರನ ದೌರಾತ್ಮ್ಯಕ್ಕೆ ತಕ್ಕ ಫಲವು ಬಹಳ ಜಾಗ್ರತೆಯಾಗಿ ಆಗುವುದು.
ದುರ್ಮತಿ- ನೀನು ಬಹಳ ಕೃತಘ್ನುಳು. ಶಂಬರನು ಮಾಡಿರುವ ಉಪಕಾರಕ್ಕೆ ಪ್ರತ್ಯಪಕಾರವನ್ನು ಬಯಸುತ್ತಲಿದ್ದಿಯೆ; ಸಾಧ್ಯವಾದರೆ ಮಾಡಲೂ ಮಾಡುವೆ. ನೀನು ಪರಂತಪನನ್ನು ಮದುವೆಮಾಡಿಕೊಳ್ಳುವುದರಲ್ಲಿ ದುಡುಕಿದೆ. ಪರಂತಪನು ಬಹಳ ದುರಾತ್ಮನು. ಮೊದಲೇ ಬಂದು ವಿವಾಹವನ್ನು ಮಾಡಿಕೊಂಡಿದ್ದು, ಅದನ್ನು ನಿನ್ನಲ್ಲಿ ಆಚ್ಛಾದಿಸಿ ವಿವಾಹವನ್ನು ಮಾಡಿಕೊಂಡು, ಮೊದಲನೆಯ ಹೆಂಡತಿಯೊಡನೆ ಈ ದೇಶವನ್ನು ಬಿಟ್ಟು ಹೊರಟುಹೋದನು. ಅವನ ದೌರಾತ್ಮವನ್ನು ದೇವರು ಕೂಡ ಮೆಚ್ಚಲಿಲ್ಲ. ಅವನು ಇಲ್ಲಿಂದ ಪ್ರಯಾಣ ಮಾಡುವಾಗ, ರೈಲಿನಲ್ಲಿ ಅಪಾಯವುಂಟಾಗಿ ಅವರಿಬ್ಬರೂ ಮೃತಪಟ್ಟರು. ಅನಾಥಳಾದ ನಿನ್ನನ್ನು ಅನ್ಯಾಯ