ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂಳಿಕಾಳಗ

ವಿಕಿಸೋರ್ಸ್ದಿಂದ
ಗೂಳಿಕಾಳಗ

ಮಾನವ ತನ್ನ ಪ್ರಾಣವನ್ನೇ ಪಣವಾಗಿ ಒಡ್ಡಿ ಹೋರಾಡುವ ಹಲವಾರು ರೋಮಾಂಚಕಾರಿ ಕ್ರೀಡೆಗಳಲ್ಲಿ ಒಂದು. ಇದನ್ನು ಕ್ರೀಡೆ ಎಂದು ಕರೆಯದೆ ಪ್ರೇಕ್ಷಣ (ಸ್ಪೆಕ್ಟಕಲ್) ಎಂದಿದ್ದಾರೆ. ಈ ಪ್ರೇಕ್ಷಣ ಗೂಳಿ ಮತ್ತು ಮಾನವನ ಮಧ್ಯೆ ನಡೆಯುತ್ತದೆ. ಇದನ್ನು ಪ್ರಪಂಚದ ಕೆಲವೇ ರಾಷ್ಟ್ರಗಳಲ್ಲಿ ಮಾತ್ರ ಕಾಣಬಹುದಾಗಿದೆ. ಇದರ ತವರು ಸ್ಪೇನ್ ದೇಶ. ಪ್ರಾಚೀನ ಕ್ರೀಟ್, ತೆಸಲೇ ಹಾಗೂ ರೋಂ ಚಕ್ರಾಧಿಪತ್ಯಗಳಲ್ಲೂ ಕೊರಿಯ, ಚೀನ, ಈಜಿಪ್ಟ್‌ಗಳಲ್ಲೂ ಪ್ರ.ಶ.ಪು.ದಿಂದಲೂ ಇದು ರೂಢಿಯಲ್ಲಿತ್ತೆಂದು ಚಾರಿತ್ರಿಕ ದಾಖಲೆಗಳಿಂದ ತಿಳಿದುಬರುತ್ತದೆ. ವ್ಯಾವಸಾಯಿಕ ಅಭಿವೃದ್ಧಿಗಾಗಿ ನಡೆಯುತ್ತಿದ್ದ ಹಲವು ಪ್ರಕೃತಿ ಪೂಜೆಗಳಲ್ಲಿ ಇದೂ ಒಂದಾಗಿರಬಹುದೆಂದು ಭಾವಿಸಬಹುದಾಗಿದೆ. ತಮ್ಮ ತಮ್ಮ ಮನೆಗಳಲ್ಲಿ ಸಾಕಿದ್ದ ಹೋರಿಗಳಿಂದಲೇ ಹಿಂದೆ ಈ ಕಾಳಗಗಳನ್ನು ನಡೆಸುತ್ತಿದ್ದರು.


ಈ ಕಾಳಗದ ಚರಿತ್ರೆ ಪ್ರಸಕ್ತ ಶಕ ಪುರ್ವಕ್ಕೂ ಹಿಂದಕ್ಕೆ ಹೋಗುತ್ತದೆ. ಸೆಲ್ಟಿ ಬೇರಿಯನ್ ಜನಾಂಗ ಪ್ಯುನಿಕ್ ಯುದ್ಧಗಳಿಗಿಂತ ಮುಂಚೆಯೇ ತಮ್ಮ ಪ್ರದೇಶದ ಕಾಡುಗಳಲ್ಲಿ ವಾಸಿಸುತ್ತಿದ್ದ ದನಗಳ ಕ್ರೂರ ಸ್ವಭಾವವನ್ನು ಕಂಡುಕೊಂಡು, ಅವನ್ನು ಹಿಡಿದು, ಸಾಕಿ, ಯುದ್ಧಗಳಲ್ಲಿ ಉಪಯೋಗಿಸಿಕೊಳ್ಳುತ್ತಿದ್ದರು, ಪ್ರ.ಶ.ಪು. 228ರ ಇಲಿಚಿಯ ಕಾಳಗದಲ್ಲಿ ಈ ದನಗಳು ನಿರ್ಣಾಯಕ ಪಾತ್ರ ವಹಿಸಿದ್ದುವು. ಸ್ಪೇನಿನ ಆಂಡಲೂಸಿಯ ಪ್ರದೇಶದ ಬ್ಯಾಟಿಕಾದ ವೀರರು ಈ ಗೂಳಿಗಳೊಂದಿಗೆ ಹೋರಾಡಿ ಅವನ್ನು ಕೊಲ್ಲುತ್ತಿದ್ದುದು ಅಂದಿನ ಅತಿ ರೋಮಾಂಚಕ ಸುದ್ದಿಯಾಗಿತ್ತು. ಗೂಳಿಗಳ ಕೊಂಬಿನ ಇರಿತದಿಂದ ರಕ್ಷಿಸಿಕೊಳ್ಳಲು ಐಬೀರಿಯಾದ ಜನ ಚರ್ಮದ ಕವುದಿಗಳನ್ನು ಧರಿಸುತ್ತಿದ್ದರು. 411-711ರ ಮುನ್ನೂರು ವರ್ಷ ಅವಧಿಯ ವಿಸಿಗೋತ್ ಜನಾಂಗದ ಆಳ್ವಿಕೆಯಲ್ಲಿ ಗೂಳಿಕಾಳಗ ಮತ್ತಷ್ಟು ಅಭಿವೃದ್ಧಿಯಾಗಿ ಹಲವು ಬದಲಾವಣೆಗಳನ್ನು ಹೊಂದಿತು. ಲುಸಿಟಾನೋಸ್ (ಪೋರ್ಚುಗೀಸ್) ಜನಾಂಗದವರು ಈ ಕ್ರೀಡೆಯನ್ನು ದತ್ತಕವಾಗಿಸಿಕೊಂಡು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಆಫ್ರಿಕದ ಮುಸ್ಲಿಮರು 711ರಲ್ಲಿ ಆಂಡಲೂಸಿಯ ಪ್ರದೇಶವನ್ನು ಗೆದ್ದು, ಅಲ್ಲಿನ ಆಕರ್ಷಕ ಗೂಳಿಕಾಳಗಕ್ಕೆ ತಮ್ಮ ಸಂಸ್ಕೃತಿಯ ಸೊಗಸನ್ನು ಹೊಂದಿಸಿ ಅಭಿವೃದ್ಧಿಗೆ ತಂದರು. ಇವರು ಪ್ರಸಿದ್ಧ ಸವಾರರಾಗಿದ್ದುದರಿಂದ ಗೂಳಿಕಾಳಗದಲ್ಲೂ ಕಾಳಗಪಟುಗಳು ಕುದುರೆಯ ಮೇಲೆ ಕುಳಿತು ಭರ್ಜಿ ಹಿಡಿದು ಹೋರಾಟ ನಡೆಸುತ್ತಿದ್ದರು. ಇವರ ಸೇವಕರು ನೆಲದ ಮೇಲೆ ನಿಂತು ಉಳಿದ ಗೌಣಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಜೀರ್ಣವಾಗಿದ್ದ ಗ್ರೀಕ್ ಪ್ರೇಕ್ಷಕಾಂಗಣಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳ ಸೊಗಸನ್ನವರು ಹೆಚ್ಚಿಸಿದರು. ಮೂರಿಷ್ ದಳವಾಯಿಗಳ ಹಾಗೂ ಐಬೀರಿಯನ್ ಶ್ರೀಮಂತರ ನಡುವೆ ಸ್ಪರ್ಧಾತ್ಮಕ ಕಾಳಗಗಳು ವಿಶೇಷವಾಗಿ ನಡೆಯುತ್ತಿದ್ದುವು. ಈ ಪ್ರೇಕ್ಷಣಗಳು ದೊಡ್ಡ ದೊಡ್ಡ ನಗರಗಳನ್ನು ಬಿಟ್ಟು ಉಳಿದೆಡೆ ಪೇಟೆ ಬೀದಿಯ ಚೌಕಗಳಲ್ಲಿ ಇಲ್ಲವೆ ಊರ ಹೊರಬಯಲಿನಲ್ಲಿ ನಡೆಯುತ್ತಿದ್ದುವು.


ಸ್ಪೇನಿನ ಪ್ರಖ್ಯಾತ ‘ಎಲ್ ಸಿಡ್ ಕ್ಯಾಂಪೆಡೋರ್’ ಡಾನ್ ರೊಡ್ರಿಗೊ ಡಿಯಾಜ್ ಡಿ ಬಿವಾರ್ (1043-99) ಪ್ರೇಕ್ಷಕಾಂಗಣದ ನಡುವೆಯೇ ಭಲ್ಲೆಯಿಂದ ಗೂಳಿಯನ್ನು ಕೊಂದ ಪ್ರಪ್ರಥಮ ಕಾಳಗ ಪಟು. ಹದಿನೈದನೆಯ ಶತಮಾನದಲ್ಲಿ ಮುಸ್ಲಿಮರ ಆಳ್ವಿಕೆ ಕೊನೆಗೊಂಡು ಆಸ್ಟ್ರಿಯನರ ಆಳ್ವಿಕೆ ಆರಂಭವಾದಾಗಲೂ ಗೂಳಿಕಾಳಗ ಶ್ರೀಮಂತವರ್ಗದ ಹೆಮ್ಮೆಯ ವ್ಯಸನವೆನಿಸಿಕೊಂಡಿತ್ತು. ನಾಲ್ಕನೆಯ ಫಿಲಿಪ್ ದೊರೆಯ ಕಾಲದಲ್ಲಿ ಉದ್ದನೆಯ ಭರ್ಜಿಗೆ ಬದಲಾಗಿ ಚಿಕ್ಕ ಭಲ್ಲೆ, ಸವಾರರ ಕಾಲಿಗೆ ರಕ್ಷಾಕವಚ-ಇವನ್ನು ಉಪಯೋಗಿಸುವ ಪದ್ಧತಿ ರೂಢಿಗೆ ಬಂತು. ರಾಜ್ಯ ರಾಜ್ಯಗಳ ನಡುವೆ ಸ್ಪರ್ಧಾ ಕಾಳಗಗಳು ಹೆಚ್ಚಿದಂತೆ ಅಪರಿಚಿತ ಗೂಳಿಗಳೆದುರಾಗಿ ಶ್ರೀಮಂತ ಸವಾರ ವರ್ಗ ಹೋರಾಟ ನಡೆಸುವುದು ಸ್ವಲ್ಪ ಕಷ್ಟವಾಯಿತು. ನೆಲದ ಮೇಲೆ ನಿಂತು ಹೋರಾಟ ನಡೆಸಿ ಗೂಳಿಗಳ ಶಕ್ತಿಗುಂದಿಸುತ್ತಿದ್ದ ಸೇವಕರೇ ದಿನ ದಿನಕ್ಕೂ ಹೆಚ್ಚು ಅನುಭವವನ್ನೂ ಕೀರ್ತಿಯನ್ನೂ ಪಡೆಯಲಾರಂಭಿಸಿದರು. ಇದು ತಮ್ಮ ಘನತೆಗೆ ಕುಂದೆಂದು ಭಾವಿಸಿದ ಶ್ರೀಮಂತ ಜನ ಸೇವಕರಿಂದ ಆರಂಭದ ಅಲ್ಪ ಕಾರ್ಯ ಮಾಡಿಸಿ ಅವರಿಗೆ ಕುದುರೆ ಕೊಟ್ಟು ತಾವು ನೆಲದ ಮೇಲೆ ನಿಂತು ಹೋರಾಡಲಾರಂಭಿಸಿದರು.


ಉತ್ತಮ ತಳಿಯ ಗೂಳಿ ಸಾಕಣೆ 1700ರಿಂದ ಲಾಭದಾಯಕ ಉದ್ಯಮವಾಯಿತು. ಸ್ಪೇನ್, ಫ್ರ್ರಾನ್ಸ್‌, ಪೋರ್ಚುಗಲ್, ಇಟಲಿ ರಾಜಮನೆತನಗಳವರೂ ಸ್ಪೇನಿನ ಕೆಥೊಲಿಕ್ ಚರ್ಚಿನವರೂ ಉತ್ತಮ ಗೂಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದುದರ ಜೊತೆಗೆ, ಪ್ರೇಕ್ಷಣ ಸಮಾರಂಭಗಳಲ್ಲಿ ತಮ್ಮ ತಮ್ಮ ಗೂಳಿಗಳನ್ನೂ ಅಖಾಡಕ್ಕೆ ಇಳಿಸುತ್ತಿದ್ದರು. ಸಾಮಾನ್ಯವಾಗಿ ಹಾಲು ಹಯನು ಇರುವ ತಳಿಗಳನ್ನು ಕಾಳಗಕ್ಕೆ ಬಳಸುತ್ತಿರಲಿಲ್ಲ. ಏನಿದ್ದರೂ ವನ್ಯ ತಳಿಗಳನ್ನು ಮಾತ್ರ ಬಳಸುವುದು ವಾಡಿಕೆಯಾಗಿತ್ತು. ಪೌರುಷಹೀನ ಗೂಳಿಗಳ ಮೇಲೆ ಮ್ಯಾಸ್ಟಿಫ್ ನಾಯಿಗಳನ್ನು ಬಿಟ್ಟು ಅವನ್ನು ಕೆರಳಿಸುತ್ತಿದ್ದರು. ಚಿಕ್ಕ ಬಾಣಗಳ (ಬ್ಯಾಂಡರಿಲ್ಲ) ಬಳಕೆಯೂ ಈ ಕಾಲದಲ್ಲಿ ಆರಂಭವಾಯಿತು. ಅಪಾಯ ಅಧಿಕವಾದಂತೆ ಶ್ರೀಮಂತ ಜನ ಹಿಮ್ಮೆಟ್ಟಿದರು. ಇವರ ಸಹಾಯಕ ಜನ ಪ್ರಮುಖ ಕಾರ್ಯಗಳನ್ನು ನಿರ್ವಹಿಸ ತೊಡಗಿದರು. ಇದನ್ನು ತಮ್ಮ ಕಸಬಾಗಿಸಿಕೊಂಡರು. ಕಾಳಗದಲ್ಲಿ ಪ್ರಾವೀಣ್ಯ ಪಡೆದಂತೆ ಗೂಳಿಯನ್ನು ಕೊಲ್ಲಲು ಭರ್ಜಿಗೆ ಬದಲಾಗಿ ಕತ್ತಿಗಳನ್ನು (ಎಸ್ಟೋಕ್) ಬಳಸಲಾರಂಭಿಸಿದರು.


ಆಂಡಲೂಸಿಯ ಪ್ರದೇಶದ ರೊಂಡಾದ ಫ್ರಾನ್ಸಿಸ್ಕೊ ರೊಮೇರೊ (1700) ಮೊಟ್ಟಮೊದಲ ವೃತ್ತಿಕಾಳಗಪಟು. ಪ್ರಪ್ರಥಮ ಬಾರಿಗೆ ನೆಲದ ಮೇಲೆ ನಿಂತು ಈತ ಗೂಳಿಯೊಂದಿಗೆ ಹೋರಾಟ ನಡೆಸಿದ. ಈತನೇ ಇಂದಿಗೂ ಬಳಕೆಯಲ್ಲಿರುವ ಕತ್ತಿ ಮತ್ತು ಬೆದರು ಬಟ್ಟೆಗಳನ್ನು (ಮುಲೆಟ) ಬಳಕೆಗೆ ತಂದವ. ಫ್ರಾನ್ಸಿಸ್ಕೊ ಜೊಸೆ ಡಿ ಗೋಯಾ ವೈ ಲೂಸಿಯೆನ್ಟಿಸ್ (1746-1828) ಮತ್ತೊಬ್ಬ ಕೀರ್ತಿಶಾಲಿ ಕಾಳಗ ಪಟು. ಕಾಳಗ ಪಟುಗಳ ತಂಡ ಇಂದಿಗೂ ಧರಿಸುವ ಬಣ್ಣ ಬಣ್ಣದ ಆಕರ್ಷಕ ಉಡುಗೆಗಳನ್ನು ರೂಪಿಸಿ, ರೂಢಿಗೆ ತಂದವನು ಇವನೇ.


ಗೂಳಿಕಾಳಗ ನಡೆಯುವ ಪ್ರೇಕ್ಷಕಾಂಗಣವನ್ನು ವೃತ್ತಾಕಾರವಾಗಿ ನಾಲ್ಕು ಅಡಿ ಎತ್ತರದ ಹಲಗೆಗಳಿಂದ ನಿರ್ಮಿಸುತ್ತಾರೆ. ಇದರ ಹೆಸರು ಪ್ಲಾಜ಼ಾ ಡಿ ಟೋರಸ್ ಎಂದು. ನಾಲ್ಕುನೂರಕ್ಕೂ ಹೆಚ್ಚು ಪ್ರೇಕ್ಷಕಾಂಗಣಗಳು ಸ್ಪೇನ್ ಒಂದರಲ್ಲೇ ಇವೆ. ಮ್ಯಾಡ್ರಿಡ್ ಮತ್ತು ಬಾರ್ಸಿಲೋನ ನಗರಗಳ ಪ್ರೇಕ್ಷಕಾಂಗಣಗಳನ್ನು 28,000 ಜನ ಕುಳಿತು ನೋಡುವಂತೆ ನಿರ್ಮಿಸಿದ್ದಾರೆ. ಮೆಕ್ಸಿಕೊ ನಗರದಲ್ಲಿ 1945-46ರಲ್ಲಿ ಉದ್ಘಾಟನೆಗೊಂಡ ಪ್ರೇಕ್ಷಕಾಂಗಣ 50 ಸಾವಿರ ಜನ ಕುಳಿತು ನೋಡುವಷ್ಟು ಬೃಹತ್ತಾಗಿದೆ.


ಕಾಳಗದ ಗೂಳಿಗಳ ಅಭಿವೃದ್ಧಿಗಾಗಿಯೇ ಪ್ರತ್ಯೇಕ ತಳಿ ಸಾಕಣೆ ಕೇಂದ್ರಗಳಿವೆ. ಪ್ರಖ್ಯಾತ ವಂಶದ ತಳಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಾರೆ. ಮಿ ಉರ ಮತ್ತು ಸೆವಿಲ್ಲ್‌ ತಳಿಗಳು ಬಹು ಪ್ರಸಿದ್ಧ. ತಳಿಗಳನ್ನು ಸಾಕುತ್ತಿದ್ದ ದನಗಾವಲುಗಳಲ್ಲೇ ಚಿಕ್ಕ ಚಿಕ್ಕ ಅಖಾಡಗಳನ್ನು ನಿರ್ಮಿಸಿಕೊಂಡು ಅಲ್ಲಿ ಪ್ರಸಿದ್ದ ಹಾಗೂ ಶಿಕ್ಷಣ ಪಡೆಯುವ ಕಾಳಗ ಪಟುಗಳು ಪ್ರತಿವಾರವೂ ಗೂಳಿಗಳೊಂದಿಗೆ ಹೋರಾಟ ನಡೆಸುತ್ತಾರೆ. ಇಲ್ಲಿನ ಕಡಸುಗಳು ಅಪಾಯಕಾರಿಯಲ್ಲವಾದರೂ ಹಲವು ಪ್ರಸಿದ್ಧ ಕಾಳಗಪಟುಗಳು ತೀವ್ರತರವಾದ ಗಾಯಗಳನ್ನು ಮಾಡಿಕೊಂಡಿರುವುದೂ ಉಂಟು. ಮೂರು ವರ್ಷಗಳ ದೀರ್ಘ, ಕಠಿಣ ತರಬೇತಿಯ ಅನಂತರ ಗೂಳಿಗಳನ್ನು ವಾರ್ಷಿಕ ಸಮಾರಂಭಗಳ ಅಖಾಡದಲ್ಲಿ ಬಿಡುತ್ತಾರೆ. ಹೀಗೆ ಅಖಾಡಕ್ಕೆ ಬಿಡುವ ಗೂಳಿಯ ಕನಿಷ್ಠ ತೂಕ 542 ಕೆಜಿ ಅಥವಾ 1194 ಪೌಂಡುಗಳಿರಬೇಕು. 4 ರಿಂದ 5 ವರ್ಷ ವಯಸ್ಸಾಗಿರಬೇಕಲ್ಲದೆ ದಷ್ಟಪುಷ್ಟ ಮೈಕಟ್ಟನ್ನು ಪಡೆದು ಹರಿತವಾದ ಕೊಂಬುಗಳುಳ್ಳದ್ದೂ ಆಗಿರಬೇಕು.


ಅಖಾಡದ ಪರಿಶುದ್ಧತೆ ಮತ್ತು ಗೂಳಿಗಳ ಅಸಾಧಾರಣ ಜ್ಞಾಪಕ ಶಕ್ತಿಯ ಕಾರಣದಿಂದಾಗಿ ಒಮ್ಮೆ ಅಖಾಡಕ್ಕೆ ಬಿಟ್ಟ ಗೂಳಿಯನ್ನು ಮತ್ತೆ ಬಿಡುವುದಿಲ್ಲ. ಗೂಳಿಗಳನ್ನು ಬಣ್ಣಗುರುಡಾಗಿಸಿರುತ್ತಾರೆ. ಕೆಂಪು, ಹಳದಿ ಬಣ್ಣಗಳನ್ನು ಕಂಡಾಗ ಮಾತ್ರ ಅವು ಮೇಲೆರಗುತ್ತವೆ. ಆದ್ದರಿಂದಲೇ ಕಾಳಗಪಟು ಧರಿಸುವ ಉಡುಪನ್ನೂ ಕೈಯಲ್ಲಿ ಹಿಡಿಯುವ ಬೆದರು ಬಟ್ಟೆಯನ್ನೂ ಕೆಂಪು, ಹಳದಿ ಬಣ್ಣದ ಬಟ್ಟೆಗಳಿಂದ ತಯಾರಿಸುತ್ತಾರೆ.


ವೃತ್ತಿಕಾಳಗಪಟುಗಳನ್ನು ಟೊರೆರಸ್ ಎಂದು ಕರೆಯುತ್ತಾರೆ. ಈ ಕಾಳಗ ಪಟುಗಳ ತಂಡ ಮೆಟಾಡೊರ್ (ಪ್ರಧಾನ ಕಾಳಗಪಟು), ಬ್ಯಾಂಡೆರಿಲ್ಲೊರಿಸ್ (ಬಾಣ ಪಾಣಿಗಳು), ಪಿಕಾಡೊರ್ಸ್‌ (ಅಶ್ವಾರೂಢರು)- ಇವರಿಂದ ಕೂಡಿರುತ್ತದೆ. ಒಬ್ಬೊಬ್ಬ ಪ್ರಧಾನ ಕಾಳಗಪಟುವಿಗೂ ಇಬ್ಬರು ಅಥವಾ ಮೂರು ಜನ ಬಾಣಪಾಣಿಗಳೂ ಇಬ್ಬರು ಮೂವರು ಅಶ್ವಾರೂಢರೂ ಸಹಾಯಕರಾಗಿ ಇರುತ್ತಾರೆ. ದೀರ್ಘಕಾಲದ ಶಿಕ್ಷಣ ಹಾಗೂ ಪ್ರಯೋಗ, ಪರೀಕ್ಷೆಗಳ ಅನಂತರ ಸಹಾಯಕ ಕಾಳಗಪಟು ಪ್ರಧಾನ ಕಾಳಗಪಟುವಾಗುತ್ತಾನೆ. ಪ್ರಧಾನ ಕಾಳಗ ಪಟು, ಒಪ್ಪೊತ್ತಿನ ಕಾಳಗಕ್ಕೆ ಸಂಭಾವನೆ ಪಡೆಯುತ್ತಾನೆ. ಈತನೇ ತನಗೆ ಸಂದಾಯವಾದ ಹಣದಲ್ಲಿ ತಂಡದ ಉಳಿದ ಸದಸ್ಯರಿಗೂ ಭಾಗ ಕೊಡುತ್ತಾನೆ.


ಸ್ಪೇನಿನಲ್ಲಿ ವಾರ್ಷಿಕ ಗೂಳಿಕಾಳಗಗಳು ಮಾರ್ಚ್ ಮೊದಲ ದಿನದಂದು ಆರಂಭವಾಗಿ ನವೆಂಬರ್ ಮಧ್ಯಭಾಗದ ವರೆಗೂ ನಡೆಯುತ್ತವೆ. ಭಾನುವಾರಗಳ ಅಪರಾಹ್ನ ಮತ್ತು ಹಬ್ಬದ ರಜಾ ದಿನಗಳಲ್ಲಿ ಇವನ್ನು ನಡೆಸುತ್ತಾರೆ. ಒಂದೊಂದು ಪ್ರೇಕ್ಷಣದಲ್ಲೂ ಮೂವರು ಬೇರೆ ಬೇರೆ ಪ್ರಧಾನ ಕಾಳಗಪಟುಗಳು ಆರು ಗೂಳಿಗಳನ್ನು ಕೊಲ್ಲುತ್ತಾರೆ. ಇಂಥ ಒಂದು ವಾರ್ಷಿಕ ಕಾಳಗಮಾಲೆಯಲ್ಲಿ ಒಂದು ಸಾವಿರ ಗೂಳಿಗಳೂ ಐದು ಸಾವಿರ ಕುದುರೆಗಳೂ ಸಾಮಾನ್ಯವಾಗಿ ಕೊಲೆಯಾಗುತ್ತವೆ.


ಸಮಾರಂಭ ಆಕರ್ಷಕ ಮೆರೆವಣಿಗೆಯೊಂದಿಗೆ ಆರಂಭವಾಗುತ್ತದೆ. ದರ್ಜೆಗೆ ತಕ್ಕಂತೆ ಬಣ್ಣ ಬಣ್ಣದ ಝರಿ, ಕಿಂಕಾಪಿನ ಬಟ್ಟೆಗಳನ್ನು ಧರಿಸಿದ ಕಾಳಗ ಪಟುಗಳ ತಂಡ ಪ್ರೇಕ್ಷಕಾಂಗಣವನ್ನು ಪ್ರವೇಶಿಸಿ, ಪ್ರದಕ್ಷಿಣೆ ಬಂದು, ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಸಮಾರಂಭಕ್ಕೆ ಕೆಲವು ಗಂಟೆಗಳ ಮುಂಚೆ ಗೂಳಿಗಳನ್ನು ಬೋನಿನಲ್ಲಿ ಸಾಗಿಸಿಕೊಂಡು ಬಂದು ಪ್ರೇಕ್ಷಕಾಂಗಣದ ಕತ್ತಲು ಗೂಡಿನಲ್ಲಿ ಕೂಡಿರುತ್ತಾರೆ. ಅಂದಿನ ಸಮಾರಂಭದ ಮುಖ್ಯ ಅತಿಥಿ ಗೂಳಿಗೂಡಿನ ಕೀಲಿಕೈಯನ್ನು ಅಶ್ವಾರೂಢರತ್ತ ಎಸೆಯುತ್ತಾನೆ. ಗೂಡಿನ ಬೀಗ ತೆಗೆದು ಗೂಳಿಯನ್ನು ಹೊರಗೆ ಬಿಡುತ್ತಾರೆ. ಗೂಡಿನ ಬಾಗಿಲ ಮೇಲೆ ಕುಳಿತಿರುವ ಸೇವಕನೊಬ್ಬ ಆ ಗೂಳಿ ಬೆಳೆದು ಬಂದ ತಳಿಕೇಂದ್ರದ ಸಾಂಕೇತಿಕ ಬಣ್ಣದ ಬಟ್ಟೆ ಸುತ್ತಿದ ಬಾಣವೊಂದನ್ನು ಗೂಳಿಯ ಭುಜಕ್ಕೆ ಅದು ಹೊರಬರುತ್ತಿರುವಂತೆ ಚುಚ್ಚುತ್ತಾನೆ.


ಬೆದರು ಬಟ್ಟೆ ಹಿಡಿದ ಬಾಣಪಾಣಿಗಳು ಗೂಳಿಯೊಂದಿಗೆ ಆರಂಭದ ಹೋರಾಟ ಪ್ರಾರಂಭಿಸುತ್ತಾರೆ. ಬೆದರು ಬಟ್ಟೆಯನ್ನು ಕಂಡು ಅವರತ್ತ ನುಗ್ಗುವ ಗೂಳಿಯ ಗುರಿಯಿಂದ ತಪ್ಪಿಸಿಕೊಂಡು ಅದನ್ನು ಅತ್ತಿತ್ತ ಓಡಾಡಿಸುತ್ತಾರೆ. ಈ ಆಟ ನಡೆಯುತ್ತಿರುವಂತೆ ಗೂಳಿಯನ್ನು ಕೊಲ್ಲುವ ಪ್ರಧಾನ ಕಾಳಗಪಟು ದೂರ ನಿಂತು, ಗೂಳಿಯ ಆಕ್ರಮಣ ಕ್ರಮ, ಕೊಂಬುಗಳನ್ನು ಉಪಯೋಗಿಸುವ ರೀತಿ ಮತ್ತು ಅದರ ಶಕ್ತಿ ಸಾಮರ್ಥ್ಯಗಳನ್ನು ಗಮನಿಸುತ್ತಿರುತ್ತಾನೆ. ಸ್ವಲ್ಪ ಕಾಲಾನಂತರ ಬೆದರು ಬಟ್ಟೆ ಹಿಡಿದು ತಾನೇ ಗೂಳಿಗೆ ಎದುರಾಗುತ್ತಾನೆ. ತನ್ನ ದೀರ್ಘಕಾಲದ ಅನುಭವದ ಕಾರಣದಿಂದ ಈತ ಗೂಳಿಯನ್ನು ಅತಿ ಸಮೀಪಕ್ಕೆ ಬಿಟ್ಟುಕೊಂಡು ಆಟವಾಡಿಸುತ್ತಾನೆ. ಇವನ ಈ ಕ್ರೀಡೆ ಅತ್ಯಂತ ರೋಮಾಂಚಕಾರಿಯೂ ಅಪಾಯಕಾರಿಯೂ ಆಗಿರುವುದರಿಂದ ಪ್ರೇಕ್ಷಕರು ಹೆಚ್ಚು ಸಂತೋಷಪಡುತ್ತಾರೆ.


ಆರಂಭದ ಈ ಸೆಣಸಾಟ ಮುಕ್ತಾಯವಾದಂತೆ ಗೂಳಿಯನ್ನು ಕೊಲ್ಲುವ ಪ್ರಮುಖ ಕ್ರಿಯೆ ಆರಂಭವಾಗುತ್ತದೆ. ಕಹಳೆಯ ಧ್ವನಿಯೊಂದಿಗೆ ಮೊದಲ ಘಟ್ಟ ಆರಂಭವಾಗುತ್ತದೆ. ಧ್ವನಿಯೊಂದಿಗೆ ಭರ್ಜಿ ಹಿಡಿದ ಅಶ್ವಾರೂಢರು ಪ್ರವೇಶಿಸಿ ಗೂಳಿಗೆ ಎದುರಾಗುತ್ತಾರೆ. ಸಾಮಾನ್ಯವಾಗಿ ವಯಸ್ಸಾದ ಕುದುರೆಯನ್ನೇ ಅಶ್ವಾರೂಢರು ಕಾಳಗಕ್ಕೆ ತರುತ್ತಾರೆ. ಕುದುರೆಯ ಹೊಟ್ಟೆಯ ಭಾಗವನ್ನು ಒತ್ತಾಗಿ ತುಂಬಿದ ಚರ್ಮದ ಚೀಲಗಳನ್ನು ಕಟ್ಟಿ ರಕ್ಷಿಸಿರುತ್ತಾರೆ. ಕುದುರೆಯ ಕಣ್ಣುಗಳನ್ನೂ ಕಟ್ಟಿರುತ್ತಾರೆ. ಕುದುರೆಯನ್ನು ಕಾಣುತ್ತಿದ್ದಂತೆ ಗೂಳಿ ಅದರತ್ತ ನುಗ್ಗುತ್ತದೆ. ಆಯವನ್ನು ನೋಡಿ ಸವಾರ ತನ್ನ ಭರ್ಜಿಯಿಂದ ಗೂಳಿಯ ಭುಜವನ್ನು ಇರಿಯುತ್ತಾನೆ. ಇರಿತ ಆಳವಾಗಿರಕೂಡದು. ಅಶ್ವಾರೂಢರೂ ಮುಂದೆ ಬಾಣಪಾಣಿಗಳೂ ಗೂಳಿಯ ಭುಜಕ್ಕೆ ಭರ್ಜಿ ಚುಚ್ಚುವುದೂ ಬಾಣಗಳನ್ನು ಚುಚ್ಚುವುದು ಕಾಳಗಪಟು ಗೂಳಿಯನ್ನು ಕೊಲ್ಲಲು ಸಹಾಯಕವಾಗುವಂತಿರಬೇಕಷ್ಟೆ.


ಎರಡನೆಯ ಬಾರಿ ಕಹಳೆ ಧ್ವನಿಗೈಯುತ್ತದೆ. ಆಗ ಬೆದರು ಬಟ್ಟೆಯನ್ನು ಬಿಟ್ಟು ಎರಡು ಕೈಗಳಲ್ಲೂ ಬಾಣಗಳನ್ನು ಹಿಡಿದ ಬಾಣಪಾಣಿಗಳು ಅಖಾಡವನ್ನು ಪ್ರವೇಶಿಸುತ್ತಾರೆ. 20-30 ಅಡಿ ದೂರ ನಿಂತು ಅರಚಿ ಬೊಬ್ಬೆ ಹಾಕಿ ಗೂಳಿಯನ್ನು ತಮ್ಮತ್ತ ಸೆಳೆಯುತ್ತಾರೆ. ಗೂಳಿಯ ಆಕ್ರಮಣದಿಂದ ತಪ್ಪಿಸಿಕೊಂಡು ಗೂಳಿಯ ಭುಜಕ್ಕೆ 7-8 ಬಾಣಗಳನ್ನು ಚುಚ್ಚುತ್ತಾರೆ. ಚುಚ್ಚಿದ ಬಾಣಗಳ ನೋವಿನಿಂದ ಗೂಳಿ ತಲೆ ತಗ್ಗಿಸಿಯೇ ಆಕ್ರಮಣ ಮಾಡಬೇಕಾಗುತ್ತದೆ. ಮುಂದೆ ಪ್ರಧಾನ ಕಾಳಗಪಟುವಿಗೆ ಕತ್ತಿಯಿಂದ ಇರಿಯಲು ಇದು ಸಹಾಯಕವಾಗುತ್ತದೆ.


ಗೂಳಿಯ ಬಲಿ ಸಮಯ ಬಂದಿತೆಂಬ ಸೂಚನೆಯಾಗಿ ಮೂರನೆಯ ಬಾರಿಗೆ ಕಹಳೆ ಧ್ವನಿಗೈಯುತ್ತದೆ. ಅಶ್ವಾರೂಢರೂ ಬಾಣಪಾಣಿಗಳೂ ಹಿಂದೆ ಸರಿಯುತ್ತಾರೆ. ಪ್ರಧಾನ ಕಾಳಗಪಟು ಬಲಗೈಯಲ್ಲಿ ಕತ್ತಿಯನ್ನೂ ಎಡಗೈಯಲ್ಲಿ ಬೆದರು ಬಟ್ಟೆಯನ್ನೂ ಹಿಡಿದು ಅಖಾಡ ಪ್ರವೇಶಿಸಿ ಗೂಳಿಗೆ ಎದುರಾಗುತ್ತಾನೆ. ಬೆದರು ಬಟ್ಟೆ ತೋರಿಸಿ ಗೂಳಿಯನ್ನು ಕೆರಳಿಸುತ್ತಾನೆ. ಏಕಾಂಗಿಯಾದ ಈ ಕಾಳಗಪಟು ನಿಶ್ಚಲವಾಗಿ ಒಂದೆಡೆ ನಿಂತು, ಅಗತ್ಯ ಬಿದ್ದಾಗ ಅತ್ತಿತ್ತ ಒಂದೊಂದು ಹೆಜ್ಜೆ ನಡೆಯುತ್ತ ಹೋರಾಟ ನಡೆಸುತ್ತಾನೆ. ಅತಿ ಕಠಿಣವಾದ ಹೋರಾಟದ ವರಸೆ ತೋರಿಸುತ್ತಾನೆ. ಗೂಳಿಯ ಕೊಂಬುಗಳು ಈತ ನಸು ಬಾಗಿದರೂ ಇವನ ದೇಹವನ್ನು ತಗುಲುವಷ್ಟು ಸಮೀಪದಲ್ಲಿರುತ್ತವೆ. ಉಸಿರು ಬಿಗಿ ಹಿಡಿದು ಹೋರಾಟಗಾರನ ಆಟವನ್ನು ಪ್ರೇಕ್ಷಕರು ನೋಡುತ್ತಿರುತ್ತಾರೆ. ಪ್ರಾಣವನ್ನು ಒತ್ತೆಇಟ್ಟು ನಡೆಸುವ ಈ ಹೋರಾಟ ನಿಜವಾಗಿಯೂ ರೋಮಾಂಚಕಾರಿ ಯಾದುದು. ಹಲವು ವಿವಿಧ ಕ್ರೀಡಾ ಕೌಶಲವನ್ನೂ ತನ್ನ ಚಾಕಚಕ್ಯತೆಯನ್ನೂ ಕಾಳಗಪಟು ಪ್ರದರ್ಶಿಸಿ, ಗೂಳಿಯ ಮೇಲೆ ತನ್ನ ಸಂಪೂರ್ಣ ಯಜಮಾನಿಕೆ ಸ್ಥಾಪಿಸುತ್ತಾನೆ. ಕಾಳಗಪಟು ಕೊಲ್ಲುವ ಒಂದೊಂದು ಗೂಳಿಯನ್ನೂ ತನಗೆ ಬೇಕಾದವರಿಗೆ ಅರ್ಪಿಸುವ ವಾಡಿಕೆ ಉಂಟು. ಅಧ್ಯಕ್ಷ ಪೀಠದಡಿ ನಿಂತು ಕಾಳಗ ಪಟು ಗೂಳಿಯನ್ನು ಅರ್ಪಿಸಲು ಅಧ್ಯಕ್ಷನ ಒಪ್ಪಿಗೆ ಪಡೆದು ಅಂತಿಮಕ್ರಿಯೆಗೆ ಸಿದ್ಧನಾಗುತ್ತಾನೆ. ಯಾವ ಕಾಳಗಪಟುವೇ ಆಗಲಿ ಗೂಳಿಯನ್ನು ಎದುರಿನಲ್ಲೇ ಕೊಲ್ಲಬೇಕು. ಕ್ರಮ ತಪ್ಪಿದರೆ ಅಪಾರ ದಂಡತೆತ್ತು ಸೆರೆವಾಸವನ್ನೂ ಅನುಭವಿಸಬೇಕಾಗುತ್ತದೆ. ಕೊಲ್ಲಲು ಸಿದ್ಧನಾಗಿ ಕಾಳಗಪಟು ತನ್ನ ಎಡಗೈಯ ಬೆದರು ಬಟ್ಟೆಯಿಂದ ಗೂಳಿಯನ್ನು ತನಗೆ ಅನುಕೂಲವಾದ ಆಯಕಟ್ಟಿಗೆ ತಂದುಕೊಳ್ಳುತ್ತಾನೆ. ತಲೆ ತಗ್ಗಿಸಿ ತನ್ನತ್ತ ನುಗ್ಗಿ ಬರುವ ಗೂಳಿಯಿಂದ ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ಕತ್ತಿಯಿಂದ ಅದರ ಭುಜಕ್ಕೆ ಆಳವಾಗಿ ಇರಿಯುತ್ತಾನೆ. ಇರಿತ ಸಕ್ರಮವಾಗಿದ್ದರೆ ಗೂಳಿ ತಕ್ಷಣ ಮರಣವನ್ನಪ್ಪುತ್ತದೆ.


ಪ್ರೇಕ್ಷಕ ವರ್ಗ ಆನಂದಾತಿರೇಕದಿಂದ ಚಪ್ಪಾಳೆ ಹಾಕುತ್ತಾರೆ. ಪ್ರೇಕ್ಷಕಾಂಗಣದ ಸುತ್ತಲೂ ಹೋಗಿ ಕಾಳಗಪಟು ವಂದನೆ ಸ್ವೀಕರಿಸುತ್ತಾನೆ. ಅನಂತರ ಗೂಳಿಗೆ ಇರಿದಿದ್ದ ಕತ್ತಿಯನ್ನು ಹೊರ ಸೆಳೆದು ಮೊದಲೇ ಅರ್ಪಿಸಿದ್ದ ವ್ಯಕ್ತಿಗೆ ಅದನ್ನು ತಲುಪಿಸುತ್ತಾನೆ. ಅದನ್ನು ಸ್ವೀಕರಿಸಿದ ವ್ಯಕ್ತಿ ಹಣ ಅಥವಾ ಬಹುಮಾನದೊಂದಿಗೆ ಅದನ್ನು ಮತ್ತೆ ಕಾಳಗಪಟುವಿಗೇ ಹಿಂದಿರುಗಿಸುತ್ತಾನೆ. ಕಾಳಗಪಟುವಿನ ಹೋರಾಟ ಉತ್ತಮವಾಗಿದ್ದರೆ, ಒಂದು ಕಿವಿಯನ್ನೂ ಅಮೋಘವಾಗಿದ್ದುದಾದರೆ, ಎರಡು ಕಿವಿಗಳನ್ನೂ ಅತ್ಯಮೋಘವೂ ರೋಮಾಂಚಕಾರಿಯೂ ಆಗಿದ್ದುದಾದರೆ ಎರಡು ಕಿವಿಗಳ ಜೊತೆಗೆ ಗೂಳಿಯ ಬಾಲವನ್ನೂ ಮೆಚ್ಚಿಕೆಯಾಗಿ ಕತ್ತರಿಸಿಕೊಡುತ್ತಾರೆ. ಹೇಸರು ಕತ್ತೆಗಳ ಸಹಾಯದಿಂದ ಗೂಳಿಯ ದೇಹವನ್ನು ಅಖಾಡದಿಂದ ಹೊರಗೊಯ್ಯುತ್ತಾರೆ. ರಕ್ತ ಬಿದ್ದ ಕಡೆಗೆ ಮರದ ಹೊಟ್ಟು ಹಾಕಿ, ಅಖಾಡವನ್ನು ಚೊಕ್ಕಟಗೊಳಿಸಿ, ಮುಂದಿನ ಕಾಳಗಕ್ಕೆ ಅಣಿ ಮಾಡುತ್ತಾರೆ.


ಪ್ರೇಕ್ಷಣದ ಪ್ರತಿಕ್ಷಣವೂ ಕಾಳಗಪಟು ಬದುಕು-ಸಾವುಗಳ ನಡುವೆ ಸೆಣಸಾಡುತ್ತಾನೆ. ಎಷ್ಟೇ ಅನುಭವಿ ಕಾಳಗಪಟುವಾದರೂ ವಾರ್ಷಿಕ ಕಾಳಗ ಮಾಲೆಯಲ್ಲಿ ಒಮ್ಮೆಯಾದರೂ ಪ್ರಾಣಘಾತುಕ ಇರಿತವನ್ನು ಅನುಭವಿಸಬೇಕಾಗುತ್ತದೆ. ಪಟು ಸಾಮಾನ್ಯವಾಗಿ ಎಂಟು ಅಥವಾ ಹತ್ತು ವರ್ಷಗಳು ಈ ಜೀವನ ನಡೆಸಿ, ಅಪಾರ ಹಣ ಸಂಪಾದಿಸಿ, ಕಾಳಗದಿಂದ ನಿವೃತ್ತನಾಗಿ, ಉತ್ತಮ ತಳಿ ಬೆಳೆಸುವುದರಲ್ಲಿ ಹಾಗೂ ಚಿಕ್ಕವರಿಗೆ ಶಿಕ್ಷಣ ಕೊಡುವುದರಲ್ಲಿ ನಿರತನಾಗಿ, ಶಾಂತ ಜೀವನ ನಡೆಸುತ್ತಾನೆ. ಹಿಂದೆ ಗೂಳಿಯನ್ನು ಕತ್ತಿಯಿಂದ ಇರಿದು ಕೊಲ್ಲುವುದೇ ಪ್ರಮುಖ ಕ್ರಿಯೆಯಾಗಿತ್ತು. ಆದರೆ ಇಂದಿನ ಪ್ರೇಕ್ಷಕ, ಅಖಾಡದಲ್ಲಿ ಕಾಳಗಪಟುವಿನ ಸಾವನ್ನಾಗಲೀ ಅತಿ ಸಲೀಸಾಗಿ ಯಾವ ತೊಂದರೆಯೂ ಇಲ್ಲದೆ ಗೂಳಿಯನ್ನು ಕೊಲ್ಲುವುದನ್ನಾಗಲೀ ನೋಡಬಯಸುವುದಿಲ್ಲ. ಗೂಳಿಯ ಭಯಾನಕ ಆಕ್ರಮಣದಿಂದ ಕಾಳಗಪಟು ತಪ್ಪಿಸಿಕೊಳ್ಳುವ ಕೌಶಲ, ಚಾಕಚಕ್ಯತೆ ಹಾಗೂ ಅವನ ಸ್ಥೈರ್ಯಗಳನ್ನು ನೋಡಬಯಸುತ್ತಾನೆ. ಕಾಳಗಕ್ಕೆ ಈ ಹೊಸತನವನ್ನು ತಂದುಕೊಟ್ಟವ ಆಂಡಲೂಸಿಯದ ಬೆಲ್‍ಮಾಂಟ್ (1914). ಈತನ ಸ್ನೇಹಿತ ಹಾಗೂ ಪ್ರತಿಸ್ಪರ್ಧಿ ಜೊಸೆ ಗೋಮೆಜ಼್ ಹಿಂದು ಮುಂದಿನ ಕಾಳಗ ಪಟುಗಳಲ್ಲೆಲ್ಲ ಪ್ರಥಮನೆಂದು ಪರಿಗಣಿತನಾಗಿದ್ದಾನೆ. 1920ರಲ್ಲಿ ಪ್ರೇಕ್ಷಕರನ್ನು ಹೆಚ್ಚು ಹೆಚ್ಚು ತಣಿಸಲು ಹೋಗಿ ಅಖಾಡದಲ್ಲೇ ಈತ ಅಸುನೀಗಿದ. 1700ರಿಂದ ಸುಮಾರು 125 ಜನ ಪ್ರಧಾನ ಕಾಳಗಪಟುಗಳಲ್ಲಿ 42 ಜನ ಅಖಾಡದಲ್ಲೆ ಸಾವನ್ನಪ್ಪಿದ್ದಾರೆ. ಅಶ್ವಾರೂಢರ, ಬಾಣಪಾಣಿಗಳ ಸಾವಿನ ಸಂಖ್ಯೆ ಇದಕ್ಕಿಂತಲೂ ಅಧಿಕ.


ಲಾಗರ್ತಿಜೊ ಎಂದು ಪ್ರಸಿದ್ಧನಾದ ರಾಫಿಯಲ್ ಮೋಲಿನಾ (1841-1900) ಫಾ಼್ರಸ್ ಕ್ಯೂಲಿಯೋ ಎಂದು ಹೆಸರಾದ ಸಾಲ್ವೆಡೊರ್ (1842-1898), ಜೊಸೆಲಿಟೊ ಎಂದು ಸುಪರಿಚಿತನಾದ ಜೊಸೆಗೋಮೆಜ಼್ ಓರ್ಟಿಗೊ (1895-1920)ಮ ರಾಫಿಯಲ್ ಒರ್ಟಿಗೋ ಗೋಮೆeóï (1916-1940), ಮಾನೊಲಿಟ (1917-1947) ಮತ್ತು ಜು ಅನ್ ಬೆಲ್ಮಾಂಟ್ (1892), ಇವರ ಜೊತೆಗೆ ಮೆಕ್ಸಿಕೊದ ರೊಡ್ಲ್ಫೋ ಗೊವಾನ, ಆರ್ಮಿಲಿಟ ಹಾಗೂ ಕಾರ್ಲೋಸ್ ಅರೂಜ಼ ಇವರು ಸುಪ್ರಖ್ಯಾತ ಗೂಳಿ ಕಾಳಗಪಟುಗಳು.


ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಗೂಳಿಕಾಳಗ ಹಿಂದೆಂದಿಗಿಂತಲೂ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಆಂಟೋನಿಯೊ ಒರ್ಡೊನೇಜ಼ ಹಾಗೂ ಲೂಯಿಸ್ ಮಿನುಯೆಲ್ ಡೊಮಿನ್ ಗುಯಿನ್ ಇವರ ಸ್ಪರ್ಧಾತ್ಮಕ ಗೂಳಿಕಾಳಗಗಳು 1959 ರಲ್ಲಿ ನಡೆದು, ಹೊಸ ದಾಖಲೆಯನ್ನೇ ಸೃಷ್ಟಿಸಿದುವು.


ಸ್ಪೇನ್ ಇಂದಿಗೂ ಈ ಪ್ರೇಕ್ಷಣದ ತವರು. ಮೆಕ್ಸಿಕೊ, ಕೊಲಂಬಿಯ ಹಾಗೂ ವೆನಿಜು಼ವೆಲಗಳಲ್ಲಿಯೂ ತನ್ನದೇ ಆದ ರೀತಿಯಲ್ಲಿ ಪೋರ್ಚುಗಲ್ನಲ್ಲಿಯೂ ಇದು ಅತ್ಯಂತ ಆಕರ್ಷಕ ಪ್ರೇಕ್ಷಣವಾಗಿ ಉಳಿದಿದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮನುಷ್ಯ ಗೂಳಿಯೊಂದಿಗೆ ಸೆಣಸಾಡಿದ ಕೆಲವು ಸಂದರ್ಭಗಳ ವರ್ಣನೆ ಜನಪದ ಸಾಹಿತ್ಯದಲ್ಲಿ ಬರುತ್ತದೆ. ಕುವೆಂಪುರವರ ರಾಮಾಯಣ ದರ್ಶನಂನಲ್ಲಿ ಕುಂಭಕರ್ಣ ಗೂಳಿಯೊಂದಿಗೆ ನಡೆಸುವ ಹೋರಾಟದ ವರ್ಣನೆಯಿದೆ. ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆ ಗೂಳಿಕಾಳಗದ ಒಂದು ಸ್ವರೂಪವಾಗಿದೆ.