ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದಲ್ಲಿ ಶಿಕ್ಷಣ
ಗೋಚರ
- ಭಾರತದಲ್ಲಿ ಶಿಕ್ಷಣ
- ಭಾರತೀಯ ಶಿಕ್ಷಣ ಇಲ್ಲಿಯ ಧರ್ಮ ಮತ್ತು ಸಂಸ್ಕøತಿಗಳೊಡನೆ ಹೆಣೆದುಕೊಂಡೇ ಬೆಳೆದು ಬಂದಿದೆ. ಎರಡೂವರೆ ಸಹಸ್ರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಗುರುಕುಲ ಶಿಕ್ಷಣ ಪದ್ದತಿಯಲ್ಲಿ ವಿದ್ಯಾರ್ಥಿಗಳು ಗುರುಗಳ ಮನೆಯಲ್ಲಿ ಕುಟುಂಬದ ವ್ಯಕ್ತಿಯಂತೆ ಇದ್ದುಕೊಂಡು ಅವರ ನೇತೃತ್ವದಲ್ಲಿ ಶಿಕ್ಷಣ ಪಡೆಯುತ್ತಿದ್ದುದರ ಜೊತೆಗೆ ಅವರ ಆದರ್ಶದಿಂದ ತಮ್ಮ ಗುಣಶೀಲವನ್ನೂ ರೂಪಿಸಿಕೊಳ್ಳುತ್ತಿದ್ದರು. ಈ ಪದ್ಧತಿ ಮುಖ್ಯವಾಗಿ ಬ್ರಾಹ್ಮಣ ಬಾಲಕರಿಗೆ ಮಾತ್ರ ಅನ್ವಯವಾಗುತ್ತಿದ್ದರೂ. ಇನ್ನೆರಡು (ವೈಶ್ಯ, ಕ್ಷತ್ರಿಯ) ವರ್ಗದವರಿಗೂ ಅವಕಾಶವಿತ್ತು. ಆದರೆ ಇಲ್ಲಿ ವೃತ್ತಿಶಿಕ್ಷಣಕ್ಕೆ ಅವಕಾಶವಿರಲಿಲ್ಲ. ಧರ್ಮಗ್ರಂಥಗಳು ಹಾಗೂ ಇತರೇ ಸಾಂಸ್ಕøತಿಕ ಗ್ರಂಥಗಳ ಅಭ್ಯಾಸವೇ ಮುಖ್ಯವಾಗಿದ್ದ ಈ ಶಿಕ್ಷಣದಿಂದ ಭಾರತದ ಪ್ರಾಚೀನ ಸಂಸ್ಕøತಿ ಪರಂಪರೆ ಸಾಗಿ ಬರುವಂತಾಯಿತು. ಜನಸಾಮಾನ್ಯಕ್ಕೆ ಲಭ್ಯವಿರದಿದ್ದ ಈ ಶಿಕ್ಷಣ ಕ್ರಿಸ್ತಪೂರ್ವ ನಾಲ್ಕು ಮತ್ತು ಐದನೆಯ ಶತಮಾನಗಳ ಹೊತ್ತಿಗೆ ಮತ್ತೆ ನೂತನ ಪ್ರವಾಹವೊಂದಕ್ಕೆ ಸಿಕ್ಕಿತು. ಆಗ ಜೈನ ಮತ್ತು ಬೌದ್ಧಧರ್ಮಗಳು ಪ್ರಚಾರಕ್ಕೆ ಬಂದುವು.
- ಜೈನಧರ್ಮ ಮೋಕ್ಷ ಸಾಧನೆಗೆ ಸಚ್ಚಾರಿತ್ರ್ಯ ಸುಜ್ಞಾನ ಅಗತ್ಯ ಎಂಬ ಅಂಶವನ್ನು ಎತ್ತಿ ಹಿಡಿದು ಶಿಕ್ಷಣಕ್ಕೆ ಮತ್ತಷ್ಟು ಪ್ರಾಶಸ್ತ್ಯ ತಂದು ಕೊಟ್ಟಿತು. ಬೌದ್ಧಧರ್ಮ ಜನಜೀವನವನ್ನುಹಸನುಮಾಡುವ ಉದ್ದೇಶದಿಂದ ಎಲ್ಲರೂ ಶಿಕ್ಷಣ ಪಡೆಯುವ ಅಗತ್ಯವನ್ನು ಕಂಡುಕೊಂಡು ಅದಕ್ಕಾಗಿ ಸಂಘಾರಾಮ, ಮಠ, ವಿಹಾರಾದಿ ಸಂಸ್ಥೆಗಳನ್ನು ಆರಂಭಿಸಿ ಸಾರ್ವತ್ರಿಕ ಶಿಕ್ಷಣದ ಅಸ್ತಿಭಾರ ಹಾಕಿತು. ಜಾತಿ ಮತಗಳ ಭೇದವಿಲ್ಲದೆ ಗಂಡಸರಂತೆ ಹೆಂಗಸರಿಗೂ ಶಿಕ್ಷಣ ಸೌಲಭ್ಯ ಒದಗಿಸುವ ನೀತಿಯನ್ನು ಅನುಸರಿಸಿ ಲೋಕಾಸಕ್ತ ದೃಷ್ಟಿಯನ್ನು ಶಿಕ್ಷಣದಲ್ಲಿ ಅಸ್ತಿತ್ವಕ್ಕೆ ತಂದಿತು. ಬ್ರಾಹ್ಮಣ, ಜೈನ ಮತ್ತು ಬೌದ್ಧ ಶಿಕ್ಷಣಪದ್ಧತಿಗಳು ಜೊತೆ ಜೊತೆಯಲ್ಲೇ ಪ್ರಚಾರದಲ್ಲಿದ್ದು ಹದಿಮೂರನೆಯ ಶತಮಾನದ ತನಕವೂ ನಡೆದು ಬಂದುವು.
- ಆ ಸುಮಾರಿನಲ್ಲಿ ಆರಂಭವಾದ ಮುಸಲ್ಮಾನರ ದಾಳಿಯಿಂದ ಈ ದೇಶೀಯ ಶೀಕ್ಷಣ ಪದ್ಧತಿಯ ವ್ಯವಸ್ಥೆ ಕುಸಿತು ಬಿದ್ದು ಅವನತಿಗಿಳಿಯುತ್ತ ಬಂದಿತು. ಮುಸಲ್ಮಾನರು ತಮ್ಮ ಧಾರ್ಮಿಕ ದೃಷ್ಟಿಯನ್ನು ಬಿಂಬಿಸುವ ನೂತನ ಶಿಕ್ಷಣ ಪದ್ಧತಿಯನ್ನು ಅಲ್ಲಲ್ಲಿ ಜಾರಿಗೆ ತಂದರು. ಇದರಿಂದಾಗಿ ಮಕ್ತಾಬ್, ಮದ್ರಸಾಗಳೆಂಬ ನೂತನ ಶಿಕ್ಷಣ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದುವು. ಮುಖ್ಯವಾಗಿ ಅವು ಮುಸ್ಲಿಮರ ಶಿಕ್ಷಣಕ್ಕಾಗಿ ಏರ್ಪಟ್ಟಿದ್ದರೂ ಹಿಂದೂಗಳಿಗೂ ಅಲ್ಲಿ ಶಿಕ್ಷಣ ಪಡೆಯುವ ಅವಕಾಶವಿತ್ತು. ನೂತನವಾಗಿ ಅಸ್ತಿತ್ವ್ತಕ್ಕೆ ಬಂದ ಈ ಶಿಕ್ಷಣ ಪದ್ಧತಿ ಜೈನ ಬೌದ್ಧ ಪದ್ಧತಿಗಳಂತಲ್ಲದೆ ಇಲ್ಲಿಯ ದೇಶೀಯ ಶಿಕ್ಷಣಪದ್ಧತಿಯಿಂದ ಪ್ರತ್ಯೇಕವಾಗಿ ಉಳಿದುಕೊಂಡೇ ಬಂದರೂ ಇಲ್ಲಿಯ ಪಠ್ಯಕ್ರಮವೇ ಮುಂತಾದ ಅಂಶಗಳನ್ನು ಸ್ವಲ್ಪಮಟ್ಟಿಗೆ ಗಣನೆಗೆ ತೆಗೆದುಕೊಂಡಿತು. ಮುಂದೆ ಹದಿನೆಂಟನೆಯ ಶತಮಾನದಲ್ಲಿ ಆರಂಭವಾದ ಯೂರೊಪಿನ ಶಿಕ್ಷಣ ಪದ್ಧತಿಯ ಮುಂದೆ ಎಲ್ಲ ದೇಶೀಯ ಪದ್ಧತಿಗಳೂ ಕಳಾಹೀನವಾಗಿ ಕಂಡುಬಂದುವು. ದೇಶದಲ್ಲಿ ರಾಜಕೀಯವಾಗಿ ಇಂಗ್ಲಿಷರ ಪಾದಾಕ್ರಾಂತವಾಗಿ ಇಂಗ್ಲಿಷ್ ಬಲ್ಲ ವಿದ್ಯಾವಂತರಿಗೆ ಕಂಪನಿ ಸರ್ಕಾರದಲ್ಲಿ ಕೆಲಸ ದೊರೆಯುವಂತಾದಂತೆ ದೇಶೀಯ ಶಿಕ್ಷಣ ಪದ್ಧತಿಗಳೆಲ್ಲ ಮೂಲೆ ಗುಂಪಾಗುತ್ತ ಬಂದುವು. 1835ರಲ್ಲಿ ವಿಲಿಯಮ್ ಬೆಂಟಿಂಕ್ ಭಾರತ ಸರ್ಕಾರದ ಶೈಕ್ಷಣಿಕ ಧೋರಣೆಯನ್ನು ಪ್ರಕಟಿಸುತ್ತ ದೇಶಾದ್ಯಂತ ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಪಾಶ್ಚಾತ್ಯ ಜ್ಞಾನ ವಿಜ್ಞಾನಗಳನ್ನು ಭಾರತೀಯರಿಗೆ ಬೋಧಿಸುವುದೇ ಸರ್ಕಾರದ ಉದ್ದೇಶವೆಂದು ಘೋಷಿಸಿ ಕಾರ್ಯರೂಪಕ್ಕೆ ತರಲು ಆರಂಭಿಸಿದಂತೆ ದೇಶೀಯ ಪದ್ಧತಿಗಳು ಅಂತಿಮವಾಗಿ ತಮ್ಮ ಅಸ್ತಿತ್ವ ಕಳೆದುಕೊಂಡವು.
- ಇಂಗ್ಲಿಷ್ ಶಿಕ್ಷಣದಿಂದ ಭಾರತದ ಜನಜೀವನ ಹೊಸ ತಿರುವಿಗೆ ಸಿಕ್ಕಿತು. ಆಧ್ಯಾತ್ಮಿಕಕ್ಕೆ ಪ್ರಾಶಸ್ತ್ಯವಿತ್ತಿದ್ದ ಜನತೆ ಲೌಕಿಕದಲ್ಲಿ ಹೆಚ್ಚಿನ ಆಸಕ್ತಿ ತೋರಲಾರಂಭಿಸಿತು. ಇಂಗ್ಲಿಷ್ ಶಿಕ್ಷಣ ಮಾಧ್ಯಮ ಸಂಪರ್ಕ ಭಾಷೆಯೂ ಆಗಿ ಪ್ರಚಾರಕ್ಕೆ ಬಂದು ದೇಶಾದ್ಯಂತ ಜನರಲ್ಲಿ ಒಗ್ಗಟ್ಟನ್ನೂ ಅಖಂಡತ್ವವನ್ನೂ ಮೂಡಿಸಿತು. ಪಾಶ್ಚಾತ್ಯ ಜನತೆ ಅಂದಿಗಾಗಲೆ ಕಂಡುಕೊಂಡಿದ್ದ ವಿಜ್ಞಾನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ತ್ವಶಾಸ್ತ್ರ, ವೈದ್ಯವಿಜ್ಞಾನ, ಎಂಜಿನಿಯರಿಂಗ್ ಮುಂತಾದವುಗಳ ಜ್ಞಾನದಿಂದಾಗಿ ಜನತೆಯಲಿ ನೂತನ ವಿಚಾರದೃಷ್ಟಿ ಹಾಗೂ ವಾಸ್ತವಿಕ ವಿಚಾರ ಸರಣಿ ಆರಂಭವಾದವು. ತತ್ಛಲವಾಗಿ ರಾಜಕಿಯ, ಸಾಮಾಜಿಕ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿ ಸುಧಾರಣೆಗಳು ಆಗತೊಡಗಿದುವು. ಇಂಗ್ಲಿಷ್ ಭಾಷೆ ದೇಶದಲ್ಲಿ ಒಗ್ಗಟ್ಟು ಮೂಡಿಸಿದುದರ ಜೊತೆಗೆ ಇಂಗ್ಲಿಷರ ಆಳ್ವಿಕೆಯನ್ನು ವಿರೋಧಿಸುವ ಸಾಹಸವನ್ನೂ ಆವೇಶವನ್ನೂ ದೊರಕಿಸಿ ಕೊಟ್ಟಿತು. ರಾಷ್ಟ್ರೀಯ ಭಾವನೆ ಹೀಗೆ ಬೆಳದುಬಂದಂತೆ ವಿದೇಶಿ ಶಿಕ್ಷಣ ಪದ್ಧತಿಯನ್ನು ವಿರೋಧಿಸುವ ಪ್ರಚಾರ ನಡೆಯಿತು. ಪ್ರಸಕ್ತ ಶತಮಾನದ ಮೂರನೆಯ ದಶಕದಲ್ಲಿ ಪ್ರಾಚೀನ ಶಿಕ್ಷಣ ಪದ್ಧತಿಯ ಬುನಾದಿಯ ಮೇಲೆ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಮೂಲಶಿಕ್ಷಣ ಪದ್ಧತಿ ಮತ್ತಿತರ ಪದ್ಧತಿಗಳು ಮೈದಳೆದುವು. 1947ರಲ್ಲಿ ದೇಶ ಸ್ವತಂತ್ರವಾದೊಡನೆ ಮೂಲ ಶಿಕ್ಷಣ ಪದ್ಧತಿಯನ್ನು ಸರ್ಕಾರ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಸಾರ್ವತ್ರಿಕ ಶಿಕ್ಷಣ ಪದ್ಧತಿಯಾಗಿ ಅಂಗೀಕರಿಸಿತು. ಲಾಭದಾಯಕ ಉತ್ಪನ್ನಗಳ ಕಸಬು ಕೇಂದ್ರಿತವಾದ ಈ ಪದ್ಧತಿಗೆ ಸರ್ಕಾರದ ಬೆಂಬಲವಿದ್ದರೂ ಇದು ಸಾರ್ವತ್ರಿಕವಾಗಿ ಆಚರಣೆಗೆ ಬರಲಾರದಾಯಿತು. ಸರ್ಕಾರ ಅನ್ಯದೇಶೀಯ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಹಲವು ಆಯೋಗಗಳನ್ನು ನೇಮಿಸಿ ಅವುಗಳ ಸಲಹೆಯನ್ನು ಆದಷ್ಟು ಆಚರಣೆಗೆ ತಂದಿದ್ದರೂ ನೂರಾರು ವರ್ಷಕಾಲ ಅಸ್ತಿತ್ವದಲ್ಲಿದ್ದುಕೊಂಡ ಇಂಗ್ಲಿಷ್ ಶಿಕ್ಷಣ ಪದ್ಧತಿ ಮಾತ್ರ ಅಷ್ಟಾಗಿ ಬದಲಾಗಲಿಲ್ಲ. ಸುಧಾರಣೆಗಳು ಕೇವಲ ತೇಪೆಯ ಕೆಲಸವಾದುವೇ ವಿನಾ ಆ ಪದ್ಧತಿಯನ್ನು ಪೂರ್ಣವಾಗಿ ಬದಲಾಯಿಸುವ ನವಸಾಧನಗಳಾಗಲಿಲ್ಲ.
- ವ್ಯಾಪಾರವನ್ನೇ ಮುಖ್ಯೋದ್ದೇಶವಾಗಿಟ್ಟುಕೊಂಡು ಬಂದಿದ್ದ ಈಸ್ಟ್ ಇಂಡಿಯಾ ಕಂಪೆನಿಯವರು ಇಲ್ಲಿಯ ಅಸಂಖ್ಯಾತ ಜನತೆಗೆ ಶಿಕ್ಷಣ ಸೌಲಭ್ಯ ಒದಗಿಸಲು ಸಿದ್ಧವಾಗಿರಲಿಲ್ಲ. ಆದರೂ ಸ್ಥಳೀಯ ಜನತೆಯ ಸಹಕಾರ ಅವರ ಆಡಳಿತಕ್ಕೆ ಅಗತ್ಯವಾಗಿತ್ತು. ಮೇಲ್ವರ್ಗದ ಜನತೆಗೆ ಶಿಕ್ಷಣವಿತ್ತು ಅವರನ್ನು ಆಡಳಿತ ಕಾರ್ಯಕ್ಕೆ ಅನುವು ಮಾಡುವುದರಿಂದ ಅವರ ಮೂಲಕ ಕೆಳವರ್ಗದ ಜನತೆಗೆ ಶಿಕ್ಷಣಸಂಸ್ಕಾರ ಹರಿದು ಬರುವುದೆಂಬ ಅಧೋಮುಖ ಸ್ರವಣ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಅವರಿಗಷ್ಟು ಮಾತ್ರ ಶಿಕ್ಷಣ ಸೌಲಭ್ಯ ಒದಗಿಸುತ್ತ ಬಂದಿತು. 1854ರಲ್ಲಿ ಕಂಪನಿಯ ಸನ್ನದನ್ನು ಮುಂದುವರಿಸುದಾಗ ಬ್ರಿಟಿಷ್ ಸರ್ಕಾರ ಕಳಿಸಿದ ವುಡ್ಗ್‍ರ ವರದಿಯಲ್ಲಿ ಜನತೆಯ ಸಾರ್ವತ್ರಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕೆಂದೂ ವಿಶ್ವವಿದ್ಯಾಲಯಗಳನ್ನು ಆರಂಭಿಸಬೇಕೆಂದೂ ಸೂಚಿಸಿತ್ತು. ಆದರೂ ಕಂಪನಿ ಸಾಕಷ್ಟು ಹಣ ವ್ಯಯ ಮಾಡಲು ಸಿದ್ಧವಿರಲಿಲ್ಲ. 1882ರಲ್ಲಿ ಶಿಕ್ಷಣ ಆಯೋಗ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತು. ಆವೇಳೆಗಾಗಲೆ ದೇಶದಲ್ಲಿ ರಾಷ್ಟ್ರಾಭಿಮಾನ ಪ್ರಕಟವಾಗತೊಡಗಿತು. ಸಾಕಷ್ಟು ಶಿಕ್ಷಣ ಸೌಲಭ್ಯ ಒದಗಿಸದಿದ್ದರೆ ವಿರೋಧ ಹೆಚ್ಚುವುದೆಂದು ಬಗೆದು ಹಾಗೂ ಹೀಗೂ ಪ್ರಾಥಮಿಕ ಶಿಕ್ಷಣವನ್ನು ವಿಸ್ತರಿಸಲಾಯಿತು. ಆ ಕಾರ್ಯದಲ್ಲಿ ತೋರಿಬಂದ ಹಣದ ಅಭಾವ ನೀಗಲು ಮತೀಯ, ಸಾಮಾಜಿಕ ಹಾಗೂ ಖಾಸಗಿ ಸಂಘ ಸಂಸ್ಥೆಗಳು ಇದರಲ್ಲಿ ಪಾಲುಗೊಳ್ಳಲು ಪ್ರೋತ್ಸಾಹಿಸಲಾಯಿತು. ಭಾರತೀಯ ಮೌಲ್ಯಗಳನ್ನು ಉಳಿಸಿಕೊಂಡು ಪಾಶ್ಚಾತ್ಯ ಜ್ಞಾನವನ್ನು ಬೆಳೆಸಿಕೊಳ್ಳುವ ಹಂಬಲ ಜನತೆಯಲ್ಲಿ ಬಲಿತಂತೆ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸು ಅಸ್ತಿತ್ವಕ್ಕೆ ಬಂದಂತೆ ಹೊಸ ರೀತಿಯ ಶಿಕ್ಷಣತತ್ತ್ವ ದೃಷ್ಟಿ ಪ್ರಚಾರವಾಗಹತ್ತಿತು. ಗೋಖಲೆ, ರಾಮಮೋಹನರಾಯ್, ಲಾಲಾ ಲಜಪತ್‍ರಾಯ್, ಮೌಲಾನ ಅಬ್ದುಲ್ ಕಲಮ್ ಅಜಾದ್; ರವೀಂದ್ರನಾಥ್ ಠಾಕೂರ್, ಮಹಾತ್ಮಗಾಂಧಿ ಮುಂತಾದವರು ಈ ದಿಶೆಯಲ್ಲಿ ನಿರ್ದಿಷ್ಟ ಪ್ರಯತ್ನ ನಡೆಸಿದರು. ಕಸಬುಕೇಂದ್ರಿತ ಶಿಕ್ಷಣ, ಎಲ್ಲರೂ ಶಿಕ್ಷಣ ಪಡೆಯುವಂಥ ಸೌಲಭ್ಯ, ಬುದ್ದಿ ಜೀವಿಗಳಿಗೂ ಶ್ರಮಜೀವಿಗಳಿಗೂ ಇತರಕ್ಕ ವ್ಯತ್ಯಾಸವನ್ನು ಕಳೆಯುವಂಥ ಪಠ್ಯಕ್ರಮ ಮುಂತಾದ ಅಂಶಗಳನ್ನೊಳಗೊಂಡ ಶಿಕ್ಷಣ ಪದ್ಧತಿಗಳು ಅಸ್ತಿತ್ವಕ್ಕೆ ಬಂದುವು. ಮೂಲಶಿಕ್ಷಣ, ಗುರುಕುಲ ಪದ್ಧತಿ, ಶಾಂತಿನಿಕೇತನ, ವಿಶ್ವಭಾರತಿ ಮುಂತಾದ ಪ್ರಾಯೋಗಿಕ ಪ್ರಯತ್ನಗಳು ನಡೆದುವು. ಇವುಗಳಲ್ಲಿ ಮೂಲಶಿಕ್ಷಣ ಸಾರ್ವತ್ರಿಕ ಪ್ರಚಾರ ಪಡೆದು ಕೆಲಕಾಲ ಅಸ್ತಿತ್ವದಲ್ಲಿತ್ತು. ಅನೇಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಅನುಷ್ಠಾನಕ್ಕೆ ಬಂದುವು. ಮೊದಮೊದಲು ಇವು ಪ್ರತ್ಯೇಕವಾಗಿ ಉಳಿದುಕೊಡು ರಾಷ್ಟ್ರೀಯ ಶಿಕ್ಷಣ ಒದಗಿಸಬೇಕೆಂದು ಯತ್ನಿಸುತ್ತಿದ್ದರೂ ಕ್ರಮಕ್ರಮವಾಗಿ ತೀವ್ರವೇಗದಲ್ಲಿ ಪ್ರಚಾರವಾಗುತ್ತ ಜನಪ್ರಿಯತೆ ಗಳಿಸುತ್ತಿದ್ದ ಇಂಗ್ಲಿಷ್ ಶಿಕ್ಷಣ ಪದ್ಧತಿಗೆ ಹೊಂದಿಕೊಳ್ಳುತ್ತ ಬಂದುವು.
- ಆದರೆ ಸ್ವಾತಂತ್ರ್ಯಾನಂತರ ಮತ್ತೆ ನಮ್ಮ ಸಂಸ್ಕøತಿ ಸಂಪ್ರದಾಯಗಳಿಗೊಪ್ಪುವಂಥ ಶಿಕ್ಷಣ ರೂಪಿಸಿಕೊಳ್ಳಬೇಕೆಂಬ ಉತ್ಕಟಾಕಾಂಕ್ಷೆ ಹಾಗೂ ಇಂಗ್ಲಿಷ್ ಭಾಷೆಗೆ ಬದಲು ಹಿಂದಿ ಅಥವಾ ಪ್ರಾಂತೀಯ ಭಾಷಾ ಮಾಧ್ಯಮವನ್ನು ಬಳಸುವ ಬಯಕೆ ಗರಿಕಟ್ಟಿಕೊಂಡುವು. ಮೂಲಶಿಕ್ಷಣ ಪದ್ಧತಿಯನ್ನು ಎಲ್ಲ ರಾಜ್ಯಗಳಿಗೂ ಅನುಷ್ಠಾನಕ್ಕೆ ತರಲು ಯತ್ನಿಸಿ ವಿಫಲವಾದವು. ಸರ್ಕಾರ ಹಿಂದಿಯನ್ನು ರಾಜ್ಯಾಂಗದ ರಚನೆಯಲ್ಲಿ ಉಲ್ಲೇಖಿಸಿರು ವಂತೆ ಅಧಿಕೃತ ಸಂಪರ್ಕ ಭಾಷೆಯಾಗಿ ಮಾಡುವ ಯತ್ನ ಇನ್ನೂ ಪೂರ್ಣ ಯಶಸ್ಸು ಕಂಡಿಲ್ಲ. ಭಾರತೀಯ ಭಾಷಾ ಮಾಧ್ಯಮ ಅನುಷ್ಠಾನಕ್ಕೆ ಬರುತ್ತಿದ್ದರೂ ಇಂಗ್ಲಿಷ್ ಮೋಹ ಅಳಿಸಿ ಹೋಗಿಲ್ಲ. ಸುಮಾರು ಮೂವತ್ತು ವರ್ಷಗಳ ಕಾಂಗ್ರೆಸ್ ಆಡಳಿತಾನಂತರ 1977ರಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರ್ಕಾರ 1979ರಲ್ಲಿ ನೂತನ ನೀತಿಯ ನಿರೂಪಣೆ ಹೊರಡಿಸಿ ಮೂಲಶಿಕ್ಷಣವಲ್ಲದಿದ್ದರೂ ಗಾಂಧೀ ದೃಷ್ಟಿಯಲ್ಲಿ ಶಿಕ್ಷಣವನ್ನು ಪುನವ್ರ್ಯವಸ್ಥೆಗೊಳಿಸಲು ಸೂಚಿಸಿತು.
- ಶಿಕ್ಷಣ ವ್ಯವಸ್ಥೆ ಮತ್ತು ರಚನೆ: 1950ರ ಸಂವಿಧಾನದ 45ನೆಯ ಪರಿಚ್ಛೇದದಲ್ಲಿ 14ನೆಯ ವಯಸ್ಸಿನ ಎಲ್ಲ ಬಾಲಿಕೆ ಬಾಲಿಕೆಯರಿಗೂ ಉಚಿತ ಕಡ್ಡಾಯ ಶಿಕ್ಷಣ ವ್ಯವಸ್ಥೆಯನ್ನು ಹತ್ತು ವರ್ಷದೊಳಗಾಗಿ ರಾಷ್ಟ್ರ ಏರ್ಪಡಿಸಬೇಕೆಂಬ ಆದೇಶವಿದೆ. ಆದರೆ ಮತ್ತು ವರ್ಷದ ಅವಧಿಯಲ್ಲಿ ಅದು ಸಾಧ್ಯವಾಗಲಿಲ್ಲ. 6ರಿಂದ 11 ವರ್ಷ ದೊಳಗಿನವರಿಗಾದರೂ ಕಡ್ಡಾಯ ಶಿಕ್ಷಣ ನೀಡಬೇಕೆಂದು 1960ರಲ್ಲಿ ತೀರ್ಮಾನಿಸಿ ಆ ದಿಶೆಯಲ್ಲಿ ಬಲುಮಟ್ಟಿನ ಯಶಸ್ಸನ್ನು ಸಾಧಿಸಲಾಯಿತಾದರೂ ದಿನದಿನಕ್ಕೂ ಹೆಚ್ಚುತ್ತಿದ್ದ ಜನಸಂಖ್ಯೆಯ ಫಲವಾಗಿ ಈ ಯೋಜನೆ ಪೂರ್ಣ ಯಶಸ್ಸು ಗಳಿಸಲಿಲ್ಲ. ನಾಲ್ಕನೆಯ ಯೋಜನೆಯಲ್ಲೂ ಈ ಕಾರ್ಯ ಮುಂದುವರಿಯಿತು. 1969ರ ವೇಳೆಗೆ ಬಹುತೇಕ ರಾಜ್ಯಗಳು 6-11ರ ವಯೋಮಾನದ ಮಕ್ಕಳ ಶಿಕ್ಷಣವನ್ನು ಕಡ್ಡಾಯಮಾಡಿದುವು. ಎಲ್ಲ ರಾಜ್ಯಗಳಲ್ಲೂ 14ನೆಯ ವಯಸ್ಸಿನ ತನಕ ಶಿಕ್ಷಣ ಉಚಿತವಾಗಿದೆ. ಆದರೆ ಇನ್ನೂ ಕಡ್ಡಾಯವಾಗಿಲ್ಲ. 1970-80ರ ದಶಕದಲ್ಲಿ ಆ ಕಾರ್ಯ ತ್ವರಿತವಾಗಿ ಸಾಗಿತಾದರೂ ಪೂರ್ಣವಾಗಿ ಆ ವಯೋಮಾನದವರೆನ್ನೆಲ್ಲ ಕಡ್ಡಾಯ ಶಿಕ್ಷಣ ಪರಿಮಿತಿಗೆ ತರಲಾಗಲಿಲ್ಲ. ಮುಂದಿನ ಹತ್ತು ವರ್ಷದೊಳಗಾದರೂ ಆ ಕಾರ್ಯಸಾಧನೆ ಮಾಡಬೇಕೆಂಬ ದೃಢಸಂಕಲ್ಪದಿಂದ ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳಿಗೆ ಆದೇಶ ನೀಡಿದೆ ಕೆಲವು ರಾಜ್ಯಗಳಲ್ಲಿ ಫ್ರೌಢ ಶಾಲೆಗಳಲ್ಲೂ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
- ಶತಶತಮಾನಗಳಿಂದ ಹಿಂದುಳಿದಿದ್ದ ಅನುಸೂಚಿತ ಜಾತಿ ಮತ್ತು ಬುಡಕಟ್ಟಿನ ಜನರ ಮಕ್ಕಳ ಬಗ್ಗೆ ರಾಷ್ಟ್ರ ಸಂವಿಧಾನ ವಿಶೇಷ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಆದೇಶ ನೀಡಿದೆ. ಅದರಂತೆ ಎಲ್ಲ ರಾಜ್ಯಗಳಲ್ಲೂ ಅವರಿಗೆ ಪ್ರವೇಶ ಶುಲ್ಕ ರಿಯಾಯಿತಿ, ವಿದ್ಯಾರ್ಥಿ ವೇತನ, ಉಚಿತ ಪುಸ್ತಕ, ಬಟ್ಟೆ ಮುಂತಾದವುಗಳ ಪೂರೈಕೆ, ವಿದ್ಯಾಥಿನಿಲಯಗಳು-ಈ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಫಲವಾಗಿ ಆ ವರ್ಗದ ಜನರಲ್ಲಿ ವಿದ್ಯಾ ಪ್ರಚಾರ ಹೆಚ್ಚಿ, ಸಾರ್ವಜನಿಕ ಸ್ಥಾನಗಳಲ್ಲಿ ನೇಮಕಗೊಳ್ಳುತ್ತಿದ್ದಾರೆ.
- ಸ್ವಾತಂತ್ರ್ಯಾನಂತರದ ಸುಧಾರಣೆಗಳೆಲ್ಲ ಶಿಕ್ಷಣ ಸೌಲಭ್ಯದ ವಿಸ್ತರಣೆಗೇ ಮೀಸಲಾದ್ದರಿಂದ ಇಲ್ಲಿಯ ಶಿಕ್ಷಣದ ರಚನೆ ಮತ್ತು ಪಠ್ಯಕ್ರಮ ಬಲುಮಟ್ಟಿಗೆ ಹಿಂದಿನ ಇಂಗ್ಲಿಷ್ ಪದ್ಧತಿಯಲ್ಲಿದ್ದಂತೆಯೇ ಇವೆ.
- ಭಾರತದಲ್ಲಿ ಶಿಕ್ಷಣ ರಾಜ್ಯ ಸರ್ಕಾರಗಳಿಗೆ ಸೇರಿದ ವಿಷಯ (ಈಚೆಗೆ 1975ರಿಂದ ಒಡಂಬಡಿಕೆಯ ವಿಷಯವಾಗಿದೆ). ಅದು ರಾಜ್ಯ ಸರ್ಕಾರದ ಸಚಿವಾಲಯದ ಕಾರ್ಯ ವ್ಯಾಪ್ತಿಗೆ ಸೇರಿದೆ. ಕೇಂದ್ರ ಸರ್ಕಾರ ಮಾರ್ಗದರ್ಶನ ಮತ್ತು ಹಣಕಾಸು ನೆರವು ನೀಡುತ್ತದೆ. ಸರ್ಕಾರ ನಿರ್ಧರಿಸುವ ಶೈಕ್ಷಣಿಕ ಮಟ್ಟ. ಅಧ್ಯಾಪಕರ ನೇಮಕ, ಶಾಲೆಯ ಕಟ್ಟಡ, ಉಪಕರಣಾದಿಗಳ ಗುಣಮಟ್ಟ ಮುಂತಾದ ಅಂಶಗಳನ್ನು ಪಾಲಿಸುವ ಖಾಸಗಿ ಸಂಸ್ಥೆಗಳಿಗೂ ಧನ ಸಹಾಯ ಒದಗಿಸುತ್ತದೆ. ಶಿಕ್ಷಣ ರಾಜ್ಯ ಸರ್ಕಾರದ ಅಧಿಕಾರ ಹೊಣೆಗಾರಿಕೆಗಳಿಗೆ ಸೇರಿದ್ದರೂ ಕೇಂದ್ರ ಸರ್ಕಾರ ವಿಶ್ವವಿದ್ಯಾಲಯದ ಧನ ಆಯೋಗದಂಥ ಸ್ವಯಮಾಡಳಿತ ಸಂಸ್ಥೆಗಳ ಮೂಲಕ ಉನ್ನತ ಶಿಕ್ಷಣದಲ್ಲಿ ಸಮನ್ವಯ ಸಾಧನೆ, ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆಗಳಿಗೆ ನೆರವು ನೀಡುತ್ತದೆ. ಅಲ್ಲದೆ ವಿಶ್ವಭಾರತಿ, ಅಲಿಘರ್ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ದೆಹಲಿ ಜವಹರ್‍ಲಾಲಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ, ಹೈದರಾಬಾದಿನ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯ, ಷಿಲ್ಲಾಂಗಿನಲ್ಲಿಯ ಹಿಲ್ ಯೂನಿವರ್ಸಿಟಿ, ಪಾಂಡಿಚೇರಿ ಅರವಿಂದ್ ವಿಶ್ವವಿದ್ಯಾಲಯ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಕೇಂದ್ರೀಯ ಆಡಳಿತವನ್ನು ನಡೆಸುತ್ತದೆ. ಸಂಸತ್ತು ನಿರ್ಧರಿಸುವ ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಗಳ ಹಾಗೂ ಪರಿಗಣಿತ ವಿಶ್ವವಿದ್ಯಾಲಯಗಳ ಆಡಳಿತವನ್ನೂ ನೋಡಿಕೊಳ್ಳುತ್ತದೆ. ಮಿಕ್ಕ ವಿಶ್ವವಿದ್ಯಾಲಯಗಳಿಗೆ ಧನಸಹಾಯ ಆಯೋಗದ ಮೂಲಕ ಕೆಲವು ಅಭಿವೃದ್ಧಿ ಯೋಜನೆಗಳನ್ನೂ ಕಾರ್ಯರೂಪಕ್ಕೆ ತರುತ್ತದೆ. ಜೊತೆಗೆ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣವನ್ನು ತಾನೇ ನೋಡಿಕೊಳ್ಳುತ್ತದೆ.
- ರಾಜ್ಯ ಸರ್ಕಾರಗಳಿಗೆ ಸಂಶೋಧನೆ ಮತ್ತು ಪ್ರಕಟಣೆಗಳ ಮೂಲಕ ನೆರವು ನೀಡಲು ಕೇಂದ್ರ ಸಚಿವಾಲಯ ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನ್ ಅಂಡ್ ಟ್ರೈನಿಂಗ್ (ಎನ್.ಸಿ.ಇ.ಆರ್.ಟಿ.) ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್ ಸಂಸ್ಥೆಗಳನ್ನು ಸ್ಥಾಪಿಸಿದೆ. ಅಲ್ಲದೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ, ಮೂಲಶಿಕ್ಷಣ, ವಿಸ್ತರಣ ಕಾರ್ಯಕ್ರಮ , ಶ್ರವ್ಯದೃಶ್ಯ ಶಿಕ್ಷಣ, ವಯಸ್ಕರ ಶಿಕ್ಷಣ ಮುಂತಾದವುಗಳಿಗಾಗಿ ಕೇಂದ್ರ ಸಂಸ್ಥೆಗಳಿಗೂ ಸ್ಥಾಪಿಸಿದೆ.
- ಶಾಲಾಶಿಕ್ಷಣ : ಸಾರ್ವಜನಿಕ ಶಾಲಾ ಶಿಕ್ಷಣ ಮೂರು ಹಂತಗಳಲ್ಲಿ ಏರ್ಪಟ್ಟಿದೆ. 7 ವರ್ಷಗಳ ಪ್ರಾಥಮಿಕ ಶಿಕ್ಷಣ. ಮೂರು ವರ್ಷಗಳ ಪ್ರೌಢ ಶಿಕ್ಷಣ ಮತ್ತು ಎರಡು ವರ್ಷಗಳ ಉನ್ನತ ಪ್ರೌಢ ಅಥವಾ ಜೂನಿಯರ್ ಕಾಲೇಜು (ಪಿ.ಯು.ಸಿ.) ಶಿಕ್ಷಣ-ಹೀಗೆ 12 ವರ್ಷಗಳಲ್ಲಿ ಹರಡಿದೆ. ಪ್ರಾಥಮಿಕ ಪೂರ್ವದ ಶಿಕ್ಷಣ ಸರ್ಕಾರದ ಹೊಣೆಗಾರಿಕೆಗೆ ಸೇರಿದಿದ್ದರೂ ಆ ಮಟ್ಟದ ಶಾಲೆಗಳ ಅಧ್ಯಾಪಕರ ತರಬೇತು, ಶಿಶುವಿಹಾರಗಳಿಗೆ ಧನ ಸಹಾಯ, ಮಾರ್ಗದರ್ಶನ ಮುಂತಾದ ರೀತಿಯಲ್ಲಿ ನೆರವು ನೀಡುತ್ತದೆ. ಉನ್ನತ ಶಿಕ್ಷಣ 3 ವರ್ಷದ ಪದವಿಪೂರ್ವ ಮತ್ತು 2 ವರ್ಷದ ಪದವಿಯೋತ್ತರ ತರಗತಿಗಳನ್ನು ಒಳಗೊಂಡಿರುತ್ತದೆ. ವೈದ್ಯ ಎಂಜಿನಿಯರಿಂಗ್ ಪದವಿಗಳು 4-5 ವರ್ಷಗಳವು. ವೃತ್ತಿ ಮತ್ತು ತಾಂತ್ರಿಕ ಶಿಕ್ಷಣವನ್ನು ಪ್ರತ್ಯೇಕ ಕಾಲೇಜುಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ.
- ಅಧ್ಯಾಪಕರ ಶಿಕ್ಷಣ : ಅಧ್ಯಾಪಕರ ಶಿಕ್ಷಣ ಎರಡು ಅಂತಸ್ತುಗಳಲ್ಲಿ ಏರ್ಪಟ್ಟಿದೆ. ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ ಎರಡು ವರ್ಷದ ತರಬೇತಿ ಶಿಕ್ಷಣವನ್ನು ಟ್ರೈನಿಂಗ್ ಕಾಲೇಜುಗಳಲ್ಲಿ ನೀಡಲಾಗುತ್ತದೆ. ಹತ್ತನೆಯ ತರಗತಿಯ ಅನಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಲ್ಲಿಗೆ ಸೇರಿಸಿಕೊಳ್ಳಲಾಗುವುದು. ಅಲ್ಲಿ ಪ್ರಾಥಮಿಕ ಶಾಲೆಯಲ್ಲಿ ಬೋಧಿಸತಕ್ಕ ವಿಷಯಗಳ (ಕಂಟೆಟ್ಸ್ ಸಬ್ಜೆಕ್ಟ್) ಜೊತೆಗೆ ವೃತ್ತಿಗೆ ಸಂಬಂಧಿಸಿದ ಶಿಕ್ಷಣ, ತತ್ತ್ವ, ಮನೋವಿಜ್ಞಾನ, ಬೋಧನಕ್ರಮ, ಶಾಲಾ ಸಂವಿಧಾನ ಮುಂತಾದ ಸೈದ್ಧಾಂತಿಕ ವಿಷಯಗಳನ್ನೂ ಅಭ್ಯಾಸಾರ್ಥ ಭೋಧನ ಕ್ರಮವನ್ನೂ ಬೋಧಿಸಲಾಗುವುದು. ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಬಯಸುವವರ ವೃತ್ತಿ ಶಿಕ್ಷಣ ಪ್ರತ್ಯೇಕ ಶಿಕ್ಷಣದ ಕಾಲೇಜುಗಳಲ್ಲೊ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗಗಳಲ್ಲೂ ಏರ್ಪಟ್ಟಿರುತ್ತದೆ. ಅದು ಒಂದು ವರ್ಷದ ವ್ಯಾಸಂಗವಾಗಿದ್ದು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ವಿಷಯಗಳೆರಡರಲ್ಲೂ ಶಿಕ್ಷಣವೀಯುವುದು. ಪದವಿ ಅಥವಾ ಪಂಡಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಲ್ಲಿ ಪ್ರವೇಶ. ಶಿಕ್ಷಣಶಾಸ್ತ್ರದ ಮಾಸ್ಟರ್ ಮತ್ತು ಡಾಕ್ಟರ್ ಪದವಿ ತರಗತಿಗಳ ವ್ಯಾಸಂಗ ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರದ ವಿಭಾಗಗಳಲ್ಲಿ ಏರ್ಪಟ್ಟಿದೆ.
- ಉನ್ನತ ಶಿಕ್ಷಣ: 1947ರಲ್ಲಿ ದೇಶದಲ್ಲಿ ಕೇವಲ 19 ವಿಶ್ವವಿದ್ಯಾಲಯಗಳಿದ್ದುವು, ಅವುಗಳ ಸಂಖ್ಯೆ ಈಗ 136ಕ್ಕೂ (82-83) ಹೆಚ್ಚಿದೆ, ಉನ್ನತ ವೃತ್ತಿ ಶಿಕ್ಷಣಕ್ಕೆ ಪ್ರತ್ಯೇಕ ಸಂಸ್ಥೆಗಳಿವೆ. ವೈದ್ಯವಿಜ್ಞಾನ, ನ್ಯಾಯಶಾಸ್ತ್ರ, ದಂತವೈದ್ಯ, ಔಷಧಿ ವಿಜ್ಞಾನ, ಉಪಚಾರ ಮುಂತಾದವು ಪ್ರತ್ಯೇಕ ಕಾಲೇಜುಗಳಲ್ಲಿ ಏರ್ಪಟ್ಟಿವೆ. ಈಚೆಗೆ ದೇಶಾದ್ಯಂತ ಆರಂಭವಾಗಿರುವ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಶಿಕ್ಷಣ ಏರ್ಪಟ್ಟಿದೆ. ಅಲ್ಲಿ ಶಿಕ್ಷಣ. ಸಂಶೋಧನೆ, ವಿಸ್ತರಣೆ ಈ ಮೂರು ಅಂಗಗಳಲ್ಲೂ ಶಿಕ್ಷಣದ ವ್ಯವಸ್ಥೆಯುಂಟು. ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕೋಳಿಸಾಗಣೆ, ಪಶುಸಂಗೋಪನೆ ಮುಂತಾದ ವಿಷಯಗಳೂ ಆ ವಿಶ್ವವಿದ್ಯಾಲಯದ ಪರಿಮಿತಿಯಲ್ಲಿ ಸೇರಿವೆ. ಪದವಿ ಮಟ್ಟದ ಎಂಜಿನಿಯರಿಂಗ್ ಶಿಕ್ಷಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಟ್ಟಿದೆ. ಅಲ್ಲಿ ಮಾಸ್ಟರ್ ಮತ್ತು ಡಾಕ್ಟರ್ ಪದವಿ ವ್ಯಾಸಂಗಕ್ಕೂ ಅವಕಾಶವಿರುವುದುಂಟು. ದೆಹಲಿ, ಕಾನ್ಪುರ, ಮುಂಬಯಿ, ಕಲ್ಕತ್ತ, ಮದರಾಸು ಮುಂತಾದೆಡೆ ಆರಂಭವಾಗಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಸಂಸ್ಥೆಗಳಲ್ಲೂ ಎಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶವುಂಟು. ಇವಲ್ಲದೆ ರಾಷ್ಟ್ರೀಯ ಪ್ರಾಮುಖ್ಯದ ವಿದ್ಯಾಸಂಸ್ಥೆಗಳೂ ಪರಿಣಿತ ವಿಶ್ವವಿದ್ಯಾಲಯಗಳೂ (ಡೀಮ್ಡ್ ಯೂನಿವರ್ಸಿಟೀಸ್), ಉನ್ನತ ಶಿಕ್ಷಣವೀಯುತ್ತಿವೆ. ಪದವಿಯೋತ್ತರ ಶಿಕ್ಷಣ ಮತ್ತು ಸಂಶೋಧನೆಗಳಿಗೆ ಕೆಲವು ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ಅವಕಾಶವಿದೆ.
- ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಪ್ರವೇಶಕ್ಕೆ ಪಿಯುಸಿ ಕನಿಷ್ಠ ವಿದ್ಯಾರ್ಹತೆಯಾಗಿರುತ್ತದೆ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಪ್ರವೇಶ ಪರೀಕ್ಷೆ ನಡೆಸಲಾಗುವುದು.
- ವ್ಯಕ್ತಿಯ ಪುರೋಭಿವೃದ್ಧಿಗೆ ಶಿಕ್ಷಣ ರಾಜಮಾರ್ಗವೆಂಬುದನ್ನು ಜನತೆ ಅರಿತಿದ್ದರೂ ಶಾಲೆಗೆ ಹಾಜರಾಗತಕ್ಕವರ ಸಂಖ್ಯೆ ಇತ್ತೀಚಿನತನಕ ತೀರ ಕಡಿಮೆಯಿತ್ತು. ಬಡತನ, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು, ಆಕರ್ಷಕವಲ್ಲದ ಪಠ್ಯಕ್ರಮ, ಜೀವನದಲ್ಲಿ ನೆರವಾಗದ ಶಿಕ್ಷಣ ಮುಂತಾದ ಕಾರಣಗಳಿಂದ ಮಕ್ಕಳ ಹಾಜರಾತಿ ಅಸಮರ್ಪಕವಾಗಿತ್ತು. ಈಚಿಗೆ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತಂದು ಅದಕ್ಕೆ ತಕ್ಕ ಶಿಕ್ಷಣ ಸೌಲಭ್ಯಾದಿಗಳನ್ನು ಹೆಚ್ಚಿಸಿದ ಮೇಲೆ ಪ್ರವೇಶ ಮತ್ತು ಹಾಜರಾತಿ ಉತ್ತಮಗೊಳ್ಳುತ್ತಿವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 8 ಕೋಟಿಗೂ ಹೆಚ್ಚು ಮಂದಿ ಪ್ರತಿ ವರ್ಷ ಶಿಕ್ಷಣ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ 39 ಲಕ್ಷಕ್ಕೂ ಹೆಚ್ಚು ಮಂದಿವ್ಯಾಸಂಗ ಮಾಡುತ್ತಿದ್ದಾರೆ. 1960-70ರ ಸುಮಾರಿನಲ್ಲಿ 1-5ನೆಯ ತರಗತಿಯ ವಯೋಮಾನದವರು ಶೇಕಡಾ 75ರಷ್ಟು, 6-8ನೆಯ ತರಗತಿಯ ವಯೋಮಾನದವರು ಶೇಕಡಾ 32ರಷ್ಟು, 9-11ನೆಯ ತರಗತಿಯ ವಯೋಮಾನದವರು ಶೇಕಡಾ 17ರಷ್ಟು ಶಾಲೆಗೆ ಸೇರಿಕೊಂಡಿದ್ದರು ; ಕೇರಳ, ತಮಿಳುನಾಡು, ದೆಹಲಿ ಮುಂತಾದ ರಾಜ್ಯಗಳಲ್ಲಿ ಹಾಜರಾತಿ ಅಧಿಕ. ಮೂವತ್ತು ವರ್ಷಗಳ ಕಾಲದಲ್ಲಿ ಪ್ರಾಥಮಿಕ ಶಿಕ್ಷಣಯಥೇಚ್ಛವಾಗಿ ವಿಸ್ತರಿಸಿದ್ದರೂ ಶಾಲೆಗಳೇ ಇಲ್ಲದ ಸುಮಾರು 2 ಲಕ್ಷಹಳ್ಳಿಗಳಿದ್ದುವು. ಕಾಲುಭಾಗ ಉತ್ತರಪ್ರದೇಶದ ಹಳ್ಳಿಗಳಾಗಿದ್ದುವು. ಮಧ್ಯಪ್ರದೇಶ ಮತ್ತು ಬಿಹಾರ್ ರಾಜ್ಯಗಳಲ್ಲೂ ಈ ಸಂಖ್ಯೆ ಅತಿಯಾಗಿಯೇ ಇತ್ತು.
- ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 8ನೆಯ ತರಗತಿವರೆಗೆ ಶಿಕ್ಷಣ ಉಚಿತವಾಗಿತ್ತು. ಉತ್ತರ ಪ್ರದೇಶ ಮತ್ತು ಒರಿಸ್ಸಾಗಳು ಮಾತ್ರ 4ನೆಯ ತರಗತಿ ಪೂರ್ತಾ ಉಚಿತ ಶಿಕ್ಷಣ ನೀಡುತ್ತಿದ್ದುವು.
- ಕಡ್ಡಾಯ ಶಿಕ್ಷಣದ ಕಾನೂನು ಕೇವಲ 10ರಾಜ್ಯಗಳಲ್ಲೂ 3 ಕೇಂದ್ರಾಡಳಿತ ಪ್ರದೇಶಗಳಲ್ಲೂ ಆಚರಣೆಯಲ್ಲಿದ್ದು ಮಿಕ್ಕ ಪ್ರದೇಶಗಳಿಗೆ ಅದನ್ನು ವಿಸ್ತರಿಸಬೇಕಾಗಿದೆ.
- ಪಠ್ಯಕ್ರಮ ಮತ್ತು ಬೋಧನ ವಿಧಾನ: ಪ್ರಾಥಮಿಕ ಶಾಲೆಯ ಪಠ್ಯ್ಶಕ್ರಮದಲ್ಲಿ ಓದುಗಾರಿಕೆ, ಬರವಣಿಗೆ, ಕಾಗುಣಿತ (ಪ್ರಾಂತೀಯ ಭಾಷೆಯಲ್ಲಿ), ಭಾರತೀಯ ಇತಿಹಾಸ ಭೂವಿವರಣೆ, ವಿಜ್ಞಾನ ಮತ್ತು ಆರೋಗ್ಯ, ಅಂಕಗಣಿತ ಸೇರಿರುತ್ತವೆ. ಇತ್ತೀಚಿನ ತನಕ ಆಂಗ್ಲ ಸಾಹಿತ್ಯ ಮತ್ತು ಕಲೆಗಳಿಗೆ ಪ್ರಾಧಾನ್ಯವಿತ್ತು. ಈಚೆಗೆ ಭಾರತೀಯ ಸಾಹಿತ್ಯ ಹೆಚ್ಚು ಹೆಚ್ಚಾಗಿ ಸೇರುತ್ತಿದೆ. ಪ್ರಾಥಮಿಕ ಶಾಲೆಯಲ್ಲಿ ಬೋಧಿಸುವ ವಿಷಯಗಳನ್ನೇ ಪ್ರೌಢಶಾಲೆಯಲ್ಲಿಯೂ ಮುಂದುವರಿಸಲಾಗುವುದು. ವಿಜ್ಞಾನ, ಗಣಿತ, ಸಾಹಿತ್ಯ, ಚರಿತ್ರೆ, ಭೂವಿವರಣೆ, ದೈಹಿಕ ಶಿಕ್ಷಣ ಮುಂತಾದ ವಿಷಯಗಳು ಅಲ್ಲಿ ಸೇರಿರುತ್ತವೆ. 1966ರಿಂದ ಈಚೆಗೆ ಕೆಲವು ರಾಜ್ಯಗಳಲ್ಲಿ ಹಿಂದೆ ಇರುತ್ತಿದ್ದ ಐಚ್ಛಿಕ ವಿಷಯಗಳನ್ನು ತೆಗೆದುಹಾಕಿ ಆ ಮಟ್ಟದಲ್ಲಿ ಶಿಕ್ಷಣವನ್ನು ಕೇವಲ ಸಾಮಾನ್ಯಶಿಕ್ಷಣವಾಗಿ ಮಾಡಲಾಗಿದೆ. ಕೆಲವು ಕಾಲ ಚರಿತ್ರೆ ಭೂಗೋಳಗಳನ್ನು ಒಟ್ಟಗೂಡಿಸಿ ಸಮಾಜಪಾಠವನ್ನೂ ಭೌತ ರಸಾಯನ ಮತ್ತು ಜೀವಶಾಸ್ತ್ರಗಳನ್ನು ಒಟ್ಟುಗೂಡಿಸಿ ಸಾಮಾನ್ಯ ವಿಜ್ಞಾನವನ್ನೂ ಬೋಧಿಸಲಾಗುತ್ತಿತ್ತು. ಈಚೆಗೆ ಈ ಒಲವು ಕಡಿಮೆಯಾಗಿ ಅವನ್ನು ಮತ್ತೆ ಪ್ರತ್ಯೇಕ ವಿಭಾಗಗಳಾಗಿ ಬೋಧಿಸುತ್ತಿರುವುದು ಕಂಡುಬರುತ್ತಿದೆ.
- ಉನ್ನತಶಿಕ್ಷಣದಲ್ಲಿ ಮಾತೃಭಾಷೆಯ ಜೊತೆಗೆ ಮತ್ತೊಂದು ಭಾಷೆ ಎಂದರೆ ಇಂಗ್ಲಿಷ್ ಅಥವಾ ಹಿಂದಿಯನ್ನು ಪಿಯುಸಿಯಲ್ಲಿ ಆರಂಭಿಸಿರುವ ವಿಷಯಗಳಲ್ಲಿ ವಿಶಿಷ್ಟ (ವೃತ್ತಿ) ಶಿಕ್ಷಣ ದೊರಕಿಸುವಂಥ ಪಠ್ಯಕ್ರಮ ಪ್ರಥಮ ಪದವಿ ತರಗತಿ ಯಲ್ಲಿರುತ್ತದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಕಡ್ಡಾಯ ವಿಷಯ. ಚರಿತ್ರೆ, ಭೂಗೋಳ, ಭಾಷೆ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತರ್ಕಶಾಸ್ತ್ರ, ತತ್ತ್ವಶಾಸ್ತ್ರ, ಪತ್ರಿಕೋದ್ಯಮ, ಮನಶ್ಶಾಸ್ತ್ರ, ಸಮಾಜಶಾಸ್ತ್ರ, ಸೆಕ್ರೆಟೇರಿಯಲ್ ಉದ್ಯಮ ಇವು ಪ್ರಮುಖ ಮಾನವಿಕ ವ್ಯಾಸಂಗವಿಷಯಗಳು. ಸಾಮಾನ್ಯವಾಗಿ ಭಾಷೆಗಳ ಜೊತೆಗೆ ಮೂರುಮಾನವಿಕ, ಸಾಮಾಜಿಕ ಅಥವಾ ವಿಜ್ಞಾನ ವಿಷಯಗಳಲ್ಲಿ ಪ್ರತಿ ವಿದ್ಯಾರ್ಥಿಯೂ ವ್ಯಾಸಂಗ ಮಾಡಬೇಕಾಗುತ್ತದೆ. ಸಾಂಸ್ಕøತಿಕ ಕಾಲೇಜುಗಳಲ್ಲಿ ವರಣಾತ್ಮಕ (ಸೆಲೆಕ್ಟಿವ್) ಪ್ರವೇಶವಿಲ್ಲದಿದ್ದರೂ ಅಭ್ಯರ್ಥಿಗಳಿಗೆಲ್ಲ ಸ್ಥಳ ದೊರೆಯುವುದು ಕಷ್ಟವಾಗುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯದ ಹಾಗೂ ಸರ್ಕಾರದ ಕಾಲೇಜುಗಳಿಗಿಂತ ಶುಲ್ಕ ಅಧಿಕವಾಗಿರುವುದಲ್ಲದೆ ಇತರ ರೂಪದಲ್ಲೂ ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿರುವುದು ಕಂಡುಬರುತ್ತಿದೆ. ವಿಶ್ವವಿದ್ಯಾಲಯದ ಧನ ಆಯೋಗ ಕೆಲವು ವಿಶ್ವವಿದ್ಯಾಲಯಗಳಲ್ಲಿ ಆಯ್ದ ವಿಷಯ ವಿಭಾಗಗಳಲ್ಲಿ ಉನ್ನತ ವ್ಯಾಸಂಗವ್ಯವಸ್ಥೆಗೆ (ಅಡ್ವಾನ್ಸ್‍ಡ್ ಸ್ಟಡಿ ಸೆಂಟರ್ಸ್) ಏರ್ಪಾಡು ಮಾಡಿದೆ. ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಿಂದೆ ಅಸ್ತಿತ್ವದಲ್ಲಿದ್ದ 3 ಅಥವಾ 2 ವರ್ಷದ ಆನರ್ಸ್‍ತರಗತಿಗಳು ಈಗ ಅಸ್ತಿತ್ವದಲಿಲ್ಲ.
- ಪ್ರಥಮ ಪದವಿ ಮುಗಿಸಿದವರಿಗೆ ಎರಡು ವರ್ಷದ ಮಾಸ್ಟರ್ ಪದವಿ ತರಗತಿಯ ವ್ಯವಸ್ಥೆಯಿದೆ. ಸಾಮಾನ್ಯವಾಗಿ ಪ್ರಥಮ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡಿದ ವಿಶಿಷ್ಟ ವಿಷಯವೊಂದರಲ್ಲಿ ಆಳವಾದ ವ್ಯಾಸಂಗ ದೊರೆಯುತ್ತದೆ. ಅಭ್ಯರ್ಥಿಗಳಿಗೆಲ್ಲ ಸ್ಥಳಾವಕಾಶವಿಲ್ಲದ್ದರಿಂದ ವರಣಾತ್ಮಕ ಪ್ರವೇಶ ಮಾತ್ರ ಸಾಧ್ಯವಾಗುತ್ತಿದೆ.
- ಬೋಧನಕ್ರಮ ಬಲುಮಟ್ಟಿಗೆ ಉಪನ್ಯಾಸದ ರೀತಿಯನ್ನು ಆಧರಿಸಿದೆ. ಇದು ವಿಧ್ಯಾರ್ಥಿಗಳಿಗೂ ಹಿತವೆನಿಸಿದ್ದು ಟಿಪ್ಪಣಿ ಬರೆದುಕೊಂಡು ಅದನ್ನು ಮನನಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯಕವೆನಿಸಿದೆ. ಕೆಲವು ವೇಳೆ ಅಧ್ಯಾಪಕರೂ ಟಿಪ್ಪಣಿ ಹೇಳಿ ಬರೆಸುತ್ತಾರೆ. ಈಚೆಗೆ ಧನ ಸಹಾಯ ಆಯೋಗದವರ ಪ್ರೋತ್ಸಾಹ ಸಲಹೆಗಳಂತೆ ವಿಚಾರಗೋಷ್ಠಿ, ಸಂಶೋಧನೆ, ಉಪಬೋಧನ ವಿಧಾನ (ಟ್ಯೂಟೋರಿಯಲ್ ಕ್ರಮ) ಮುಂತಾದ ಕ್ರಮಗಳು ಬಳಕೆಗೆ ಬರುತ್ತಿವೆ.
- ಭಾರತದಲ್ಲಿ ಸ್ವಾತಂತ್ರ್ಯಾನಂತರ ಉನ್ನತ ಶಿಕ್ಷಣದ ಗತಿ ತೀವ್ರವೇಗದಲ್ಲಿ ಸಾಗಿದೆ. 1857ರಿಂದ 1947ರ ತನಕದ 90 ವರ್ಷಗಳ ಬ್ರಿಟಿಷರ ಆಡಳಿತದಲ್ಲಿ 19ವಿಶ್ವ ವಿದ್ಯಾಲಯಗಳು ಮಾತ್ರ ಆರಂಭವಾಗಿದ್ದುವು. 1947 ರಿಂದ 1983ರ ತನಕ 103ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳೂ 13 ಪರಿಗಣಿತ ವಿಶ್ವವಿದ್ಯಾಲಯಗಳೂ 9 ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಗಳೂ ಸ್ಥಾಪನೆಯಾಗಿವೆ. ಇಷ್ಟು ವಿಶ್ವವಿದ್ಯಾಲಯಗಳು ಮತ್ತಾವ ದೇಶದಲ್ಲೂ ಈ ಅವಧಿಯಲ್ಲಿ ಸ್ಥಾಪನೆಯಾಗಿಲ್ಲ.
- ಸ್ಥಾಪನೆಯಾದ ವಿಶ್ವವಿದ್ಯಾಲಯಗಳು
ಅವಧಿ | ವಿಶ್ವವಿದ್ಯಾಲಯಗಳ ಸಂಖ್ಯೆ | ಪರಿಗಣಿತ ವಿಶ್ವವಿದ್ಯಾಲಯ | ರಾಷ್ಟ್ರೀಯ ಪ್ರಾಮುಖ್ಯ ಸಂಸ್ಥೆ | |
---|---|---|---|---|
1857-1947 | 19 | * | * | |
1947-1950 | 8 | * | * | |
1951-1960 | 18 | 2 | * | |
1961-1970 | 38 | 6 | * | |
1971-1980 | 28 | 3 | 9 | |
1981-1983 | 122 | 13 | 9 |
- ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಸಂಖ್ಯೆ : ಈಗ ದೇಶದಲ್ಲಿ ಸುಮಾರು 500 ಕಾಲೇಜುಗಳೂ ಉನ್ನತ ಶಿಕ್ಷಣದ ಇತರ ಸಂಸ್ಥೆಗಳೂ ಇವೆ. ಸುಮಾರು 40 ಲಕ್ಷ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇವರಲ್ಲಿ 4 ಲಕ್ಷ ವಿಶ್ವವಿದ್ಯಾಲಯದ ಅಥವಾ ಅವುಗಳ ಅಂಗಸಂಸ್ಥೆಗಳಲ್ಲೂ ಉಳಿದ 36 ಲಕ್ಷ ಸರ್ಕಾರ ಹಾಗೂ ಖಾಸಗೀ ಶಾಲೆಗಳಲ್ಲೂ ಓದುತ್ತಿದ್ದಾರೆ.
- 1983ರ ವೇಳೆಗೆ 23 ಕೃಷಿ ವಿಶ್ವವಿದ್ಯಾಲಯಗಳೂ 7 ತಾಂತ್ರಿಕ ವಿಶ್ವವಿದ್ಯಾಲಯಗಳೂ 2 ಮಹಿಳಾ ವಿಶ್ವವಿದ್ಯಾಲಯಗಳೂ 3 ಮುಕ್ತ ವಿಶ್ವವಿದ್ಯಾಲಯಗಳೂ ಅಸ್ತಿತ್ವಕ್ಕೆ ಬಂದುವು.
- ಖಾಸಗಿ ಪ್ರಯತ್ನ : ಇಂಗ್ಲೆಂಡಿನಂತೆ ಭಾರತದಲ್ಲೂ ಖಾಸಗಿ ಸಂಸ್ಥೆಗಳೂ ವ್ಯಕ್ತಿಗಳೂ ಶಿಕ್ಷಣ ಸೌಲಭ್ಯವೊದಗಿಸುವ ಕಾರ್ಯದಲ್ಲಿ ಪ್ರಮುಖಪಾತ್ರವಹಿಸುತ್ತಿವೆ. ಪ್ರೌಢ ಮತ್ತು ಉನ್ನತ ಶಿಕ್ಷಣದ ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ದೇಶದ ಎಲ್ಲ ರಾಜ್ಯಗಳಲ್ಲೂ ಅಧಿಕವಾಗಿದ್ದು ಅವುಗಳಲ್ಲಿ ಕೆಲವು ತುಂಬಾ ದಕ್ಷತೆ ಶಿಕ್ಷಣ ಸಂಸ್ಥೆಗಳೆಂದು ಹೆಸರು ಪಡೆದಿವೆ. ಒಳ್ಳೆಯ ಆಡಳಿತ, ಒಳ್ಳೆಯ ಅಧ್ಯಾಪಕರು ಹಾಗೂ ಉತ್ತಮ ಶಿಸ್ತು-ಇವುಗಳ ಸಹಾಯದಿಂದ ಉತ್ತಮ ಪರೀಕ್ಷಾ ಫಲಿತಾಂಶ ರೂಢಿಸುವುದರಿಂದ ಆ ಶಾಲೆಗಳ ಪ್ರವೇಶಕ್ಕಾಗಿ ಅಧಿಕ ಬೇಡಿಕೆಯಿದೆ. ಅಲ್ಲಿ ಬೋಧನ ಶುಲ್ಕ, ವಂತಿಗೆ ಮುಂತಾದ ರೂಪದ ಅಧಿಕ ವೆಚ್ಚಗಳಿದ್ದರೂ ಮಕ್ಕಳನ್ನು ಅಲ್ಲಿಗೆ ಸೇರಿಸಲು ಉನ್ನತ ಮತ್ತು ಮಧ್ಯಮ ವರ್ಗದವರಲ್ಲಿ ಅಧಿಕ ಆಸಕ್ತಿ ಕಂಡುಬರುತ್ತಿದೆ. ಅದನ್ನು ನೋಡಿ ಕೆಳವರ್ಗದವರೂ ಆಕಾರ್ಯಕ್ಕೆ ಕೈಹಾಕುತ್ತಿದ್ದಾರೆ. ಕೆಲವು ಖಾಸಗಿ ಸಂಸ್ಥೆಗಳು ಶುಲ್ಕಾದಿಗಳನ್ನು ಅಧಿಕವಾಗಿ ಹೆಚ್ಚಿಸಿ ಶಿಕ್ಷಣವನ್ನು ಒಂದು ವ್ಯಾಪಾರೋದ್ಯಮವಾಗಿ ಮಾಡಿಕೊಂಡಿವೆ. ಈ ಪ್ರವೃತ್ತಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾಗಿದೆ. ಈಚೆಗೆ ಅವುಗಳ ಮೇಲೆ ಸರ್ಕಾರದ ಹಿಡಿತ ಹೆಚ್ಚುತ್ತ ಬಂದು ಅವು ರಾಷ್ಟ್ರದ ಇತರ ಶಿಕ್ಷಣ ಸಂಸ್ಥೆಗಳ ತೆರದಲ್ಲಿ ಕೆಲಸಮಾಡುವಂತೆ ವಿಧಿಸುವ ಯತ್ನ ನಡೆಯುತ್ತಿದೆ. ಸರ್ಕಾರ ಅಥವಾ ವಿಶ್ವವಿದ್ಯಾಲಯ ರೂಪಿಸುವಂತೆ ಪಠ್ಯಕ್ರಮ, ಅಧ್ಯಾಪಕರ ನೇಮಕ, ಬೋಧನ ವಿಧಾನ, ಉಪಕರಣಗಳ ಬಳಕೆ, ಕಟ್ಟಡ ವರ್ಷದಲ್ಲಿ ಕೆಲಸಮಾಡಬೇಕಾದ ದಿನಗಳ ಸಂಖ್ಯೆ ಮುಂತಾದವಕ್ಕೆ ಸಂಬಂಧಿಸಿದ ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿ ಅನುದಾನದ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಖಾಸಗಿ ಸಂಘ ಸಂಸ್ಥೆಗಳುವಹಿಸಿರುವ ಈ ಪಾತ್ರದಿಂದ ಸರ್ಕಾರದ ಅಥವಾ ವಿಶ್ವವಿದ್ಯಾಲಯದ ಮೇಲೆ ಬಿದ್ದಿರುವ ಶಿಕ್ಷಣದ ಹೊರೆ ಬಲುಮಟ್ಟಿಗೆ ಕಡಿಮೆಯಾಗಿದೆ. ತಾಂತ್ರಿಕ ಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಹರಡುವ ಕಾರ್ಯಕ್ಕೆ ಹೆಚ್ಚಿನ ಗಮನಕೊಡಲಾಗಿದೆ.
- ಪಂಚವಾರ್ಷಿಕ ಯೋಜನೆಗಳಲ್ಲಿ ಶಿಕ್ಷಣ : ಭಾರತದಲ್ಲಿ ಶಿಕ್ಷಣದ ಪ್ರಗತಿ ರಾಷ್ಟ್ರದ ಅಭಿವೃದ್ಧಿ ಯೋಜನೆಯೊಡನೆ ಹೊಂದಿಕೊಂಡೇ ಸಾಗುತ್ತಿದೆ. ರಾಷ್ಟ್ರೀಯ ಯೋಜನಾ ಆಯೋಗ 1951ರಲ್ಲಿ ಆರಂಭವಾದ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ (1951-56) ಕೃಷಿಗೂ ಎರಡನೆಯ ಯೋಜನೆಯಲ್ಲಿ ಔದ್ಯೋಗಿಕ ಪ್ರಗತಿಗೂ ಮೂರನೆಯ ಯೋಜನೆಯಲ್ಲಿ ಸಮಾಜಕಲ್ಯಾಣ ಮತ್ತು ಶಿಕ್ಷಣಕ್ಕೂ ಆದ್ಯತೆ ನೀಡಿತ್ತು. ಆದರೆ ನಡುನಡುವೆ ಅಗತ್ಯ ಬಿದ್ದಂತೆ ಮೂಲ ಯೋಜನೆಯ ಆದ್ಯತೆಯಲ್ಲಿ ಬದಲಾವಣೆಯಾಗುತ್ತ ಬಂದು ಪ್ರತಿಯೋಜನೆಯಲ್ಲೂ ಶಿಕ್ಷಣಕ್ಕೆ ಅಷ್ಟಿಷ್ಟು ಆದ್ಯತೆ ದೊರಕುತ್ತಲೆ ಬಂದಿತು. ಹಣದ ಅಭಾವದಿಂದ ಪ್ರಥಮ ಯೋಜನೆಯಲ್ಲಿ ಕೇಂದ್ರ ಸರ್ಕಾರಗಳಿಗೆ ಕೇವಲ ಮಾರ್ಗದರ್ಶನ ಮಾತ್ರಮಾಡಲು ಸಾಧ್ಯವಾಯಿತು. ಎರಡು ಮತ್ತು ಮೂರನೆಯ ಯೋಜನೆಗಳಲ್ಲಿ ಶಿಕ್ಷಣದ ಪ್ರಗತಿ ಅಷ್ಟಿಷ್ಟು ಆಯಿತು. 1951ರ ಸಂವಿಧಾನ 10 ವರ್ಷದೊಳಗಾಗಿ 14 ವಯಸ್ಸಿನೊಳಗಿನ ಎಲ್ಲರೂ ಕಡ್ಡಾಯ ಶಿಕ್ಷಣದ ಪರಿಮಿತಿಗೆ ಒಳಪಡಬೇಕೆಂದು ಸೂಚಿಸಿದ್ದರೂ ಸರ್ಕಾರ ನಿರಕ್ಷರತೆಯನ್ನು ತೊಡೆದುಹಾಕುವ ಕಾರ್ಯಕ್ಕೆ ಬದಲಾಗಿ ಒಂದು ಮತ್ತು ಮೂರನೆಯ ಯೋಜನೆಗಳಲ್ಲಿ ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳ ವಿಸ್ತರಣೆಯ ಕಡೆ ಗಮನಕೊಟ್ಟಿತು. ಆದರೆ 4ನೆಯ ಯೋಜನೆಯಲ್ಲಿ ಮಾತ್ರ ಹಿಂದಿನ ಯೋಜನೆಗಳಿಗೆ ಮೀಸಲಿಟ್ಟಿದ್ದ ಒಟ್ಟು ಹಣದ ಒಂದೂಕಾಲರಷ್ಟು ಹಣ ಒದಗಿಸಲಾಯಿತು. ಅಧ್ಯಾಪಕರ ಪ್ರಶಿಕ್ಷಣ, ತಾಂತ್ರಿಕ ಶಿಕ್ಷಣ, ಸಂಶೋಧನೆ-ಈ ಅಂಶಗಳಿಗೆ ಪ್ರಾಧಾನ್ಯ ನೀಡಲಾಯಿತು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮಾರ್ಗದರ್ಶನ, ಮೇಲ್ವಿಚಾರಣೆ-ಈ ಕ್ಷೇತ್ರಗಳನ್ನು ಬಲಪಡಿಸಲಾಯಿತು. ಅನಂತರ ಪ್ರಾಥಮಿಕ ಶಿಕ್ಷಣಕ್ಕೆ ಪ್ರಾಧಾನ್ಯನೀಡಿ ಯೋಜನೆಯ ಅವಧಿಯಲ್ಲಿ ಶೇಕಡಾ 80ರಷ್ಟಾದರೂ 6-11ನೆಯ ವಯಸ್ಸಿನ ಮಕ್ಕಳನ್ನು ಕಡ್ಡಾಯ ಶಿಕ್ಷಣಕ್ಕೆ ಒಳಪಡಿಸುವ ಯತ್ನ ನಡೆಯಿತು. ಐದನೆಯ ಯೋಜನೆಯಲ್ಲೂ ಸಾರ್ವತ್ರಿಕ ಕಡ್ಡಾಯ ಶಿಕ್ಷಣಕ್ಕೆ ಪ್ರಾಧಾನ್ಯ ನೀಡಿದ ಕೇಂದ್ರಸರ್ಕಾರ ಅದಕ್ಕಾಗಿ ಅಧಿಕ ಹಣ ವೆಚ್ಚಮಾಡಿತು. ಆರನೆಯ ಯೋಜನೆಯಲ್ಲಿ ಜನತಾ ಸರ್ಕಾರ ಸಂವಿಧಾನದಲ್ಲಿ ಸೂಚಿಸಿದ್ದ 14 ವರ್ಷದೊಳಗಿನವರಿಗೆಲ್ಲ ಕಡ್ಡಾಯ ಶಿಕ್ಷಣ ಒದಗಿಸುವ ಕಾರ್ಯ ಸೇರಿಸಿಕೊಂಡಿತು. ಜೊತೆಗೆ ಮಧ್ಯೆ ಶಾಲೆ ಬಿಡುವವರಿಗೆ ಸಂಪ್ರದಾಯೇತರ ಶಿಕ್ಷಣ (ನಾನ್ ಫಾರ್ಮಲ್ ಎಜುಕೇಷನ್) ವ್ಯವಸ್ಥೆಗೊಳಿಸಲು ಕಾರ್ಯಕ್ರಮ ಹಾಕಿಕೊಂಡಿತು, ಅಲ್ಲದೆ 900 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮ (ಎನ್. ಎ. ಇ. ಪಿ) ಆರಂಭಿಸಿತು. ಈ ಎರಡು ಅಂಶಗಳ ಮೂಲ ಉದ್ದೇಶ ರಾಷ್ಟ್ರದಲ್ಲಿ ಇನ್ನೂ ಅಧಿಕವಾಗಿಯೇ ಇದ್ದ ಅನಕ್ಷರಸ್ಥರ ಸಂಖ್ಯೆಯನ್ನು ಕಡಿಮೆಮಾಡುವುದೇ ಆಗಿತ್ತು . ಪ್ರಾಥಮಿಕ ಪೂರ್ವದ ಶಿಕ್ಷಣ ಮತ್ತು ತಾಂತ್ರಿಕ ಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಹರಡುವ ಕಾರ್ಯಕ್ಕೆ ಹೆಚ್ಚಿನ ಗಮನ ಕೊಡಲಾಗಿದೆ.
- ಆರನೆಯ ಯೋಜನೆಯಲ್ಲಿ ಶಿಕ್ಷಣ : 1947ರಲ್ಲಿದ್ದ ಶೇಕಡಾ 10 ಸಾಕ್ಷರತೆ ಈಗ 30ಕ್ಕೂ ಹೆಚ್ಚಿದ್ದರೂ ಅಧಿಕ ಜನಸಂಖ್ಯೆಯಿಂದಾಗಿ ಅನಕ್ಷರಸ್ಥರ ಸಂಖ್ಯೆ ಅಂದಿಗಿಂತಲೂ ಹೆಚ್ಚಾಗಿದೆ. ಕಟ್ಟುನಿಟ್ಟಾದ ಕಡ್ಡಾಯ ಪ್ರಾಥಮಿಕ ಶಿಕ್ಷಣ ಆಚರಣೆಯಲ್ಲಿಲ್ಲದಿರುವುದೂ ಮಿತಿಮೀರಿದ ಜನಸಂಖ್ಯೆಯ ಹೆಚ್ಚಳವೂ ಈ ಸ್ಥಿತಿಗೆ ಕಾರಣವೆನ್ನಬಹುದು. 1966ರ ಕೊಠಾರಿ ಶಿಕ್ಷಣ ಆಯೋಗ ತನ್ನ ವರದಿಯಲ್ಲಿ ಪ್ರಾಥಮಿಕ ಕಡ್ಡಾಯ ಶಿಕ್ಷಣ ಮುಗಿಸುವ ಮುನ್ನವೇ ಅಗಾಧ ಸಂಖ್ಯೆಯ ಬಾಲಕ ಬಾಲಿಕೆಯರು ಶಾಲೆಬಿಡುತ್ತಿರುವುದೂ ಆ ಮಟ್ಟದಲ್ಲೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದೂ ಶಿಕ್ಷಣದಲ್ಲಿ ಆಗುತ್ತಿರುವ ಅಪವ್ಯಯಕ್ಕೆ ಕಾರಣವೆಂದು ಸೂಚಿಸಿ ಅದನ್ನು ನಿವಾರಿಸಿದ ಹೊರತು ಸಾಕ್ಷರತಾ ಪ್ರಚಾರ ಕಾರ್ಯ ಯಶಸ್ವಿಯಾಗಲಾರದೆಂದು ಸೂಚಿಸಿತು.
- 1950ರ ಸಂವಿಧಾನದ ಪ್ರಕಾರ ಶಿಕ್ಷಣ ರಾಜ್ಯಸರ್ಕಾರಗಳ ವಿಷಯವಾದರೂ 1976ರಲ್ಲಿ ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ಒಡಂಬಡಿಕೆಯ ಅಥವಾ ಸಹಗಾಮೀ (ಕನ್‍ಕರೆಂಟ್) ವಿಷಯವನ್ನಾಗಿ ಮಾಡಿದೆ. ಮತ್ತೆ ಅದನ್ನು ರಾಜ್ಯ ಸರ್ಕಾರಗಳ ಹೊಣೆಗಾರಿಗೆ ವರ್ಗಾಯಿಸುವ ಯತ್ನವನ್ನು ಜನತಾ ಸರ್ಕಾರ ನಡೆಸಿತು. ಆದರೆ ಅದು ಸಾಧ್ಯವಾಗಲಿಲ್ಲ. 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೀಪ್ ಕಾರ್ಯಕ್ರಮದ ಒಂದು ವರ್ಷದ ಅನುಷ್ಠಾನವನ್ನು ವಿಮರ್ಶಿಸಲು ಕೊಠಾರಿ ಪರಾಮರ್ಶನ ಸಮಿತಿ ನೇಮಿಸಿತು. ಅದು ತನ್ನ ವರದಿಯಲ್ಲಿ ನೀಪ್ ಕಾರ್ಯಕ್ರಮ ಯಶಸ್ವಿಯಾಗಿಲ್ಲವೆಂದೂ ಅದಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ, ಅಧ್ಯಾಪಕರ, ಸ್ವಯಂಸೇವಕರ ಹಾಗೂ ಯುವಜನ ಸಂಸ್ಥೆಗಳ ಸಹಕಾರ ಪಡೆಯಲಾಗಿದಿದ್ದುದೇ ಕಾರಣವೆಂದೂ ಸೂಚಿಸಿತ್ತು. ಆದ್ದರಿಂದ ಸರ್ಕಾರ ಆ ಯೋಜನೆಯನ್ನು ಪುನಾರಚಿಸಬೇಕೆಂದು ತೀರ್ಮಾನಿಸಿತು. ಹೇಗೇ ಇರಲಿ ನೀಪ್ ಕಾರ್ಯಕ್ರಮದ ಅಂಗವಾಗಿ ದೆಹಲಿ ಹಾಗೂ ಪ್ರತಿಯೊಂದು ರಾಜ್ಯದಲ್ಲೂ ವಯಸ್ಕರ ಶಿಕ್ಷಣದ ನಿರ್ದೇಶನಾಲಯ ಏರ್ಪಟ್ಟು ಈ ಶಿಕ್ಷಣ ತಕ್ಕ ಮಟ್ಟಿನ ಆದ್ಯತೆಯಿಂದ ನಡೆಯುತ್ತಿದೆ.
- ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ : ವೃತ್ತಿ ಶಿಕ್ಷಣ ರಾಷ್ಟ್ರದ ಪುರೋಭಿವೃದ್ದಿಗೆ ಅಗತ್ಯ ಎಂಬುದನ್ನು ಮನಗಂಡು ಅದನ್ನು ವಿಸ್ತರಿಸಿದ್ದರೂ ಅಲ್ಲಿಗೆ ಪ್ರವೇಶ ಪಡೆಯತಕ್ಕವರ ಸಂಖ್ಯೆ ಕಡಿಮೆ. ಜಪಾನಿನಲ್ಲಿ ಪ್ರೌಢಶಾಲೆ ಮುಗಿಸಿದವರಲ್ಲಿ ಶೇಕಡಾ 60ರಷ್ಟು ವೃತ್ತಿ ಶಿಕ್ಷಣಕ್ಕೆ ಹೋಗುತ್ತಾರೆ, ಜರ್ಮನಿಯಲ್ಲಿ ಈ ಪ್ರಮಾಣ 70ರಷ್ಟಿದೆ. ಆದರೆ ಅದು ಭಾರತದಲ್ಲಿ ಕೇವಲ 10ರಷ್ಟಿದೆ. ಎಂದರೆ ಪ್ರೌಢಶಾಲೆ ಅಥವಾ ಜೂನಿಯರ್ ಕಾಲೇಜು ಮುಗಿಸಿದವರಲ್ಲಿ ಸಾಮಾನ್ಯವಾಗಿ ಉನ್ನತ ಶಿಕ್ಷಣದ ಏಕೈಕ ಮಾರ್ಗಹಿಡಿಯುತ್ತಿದ್ದಾರೆ. ಇದಕ್ಕೆ ಮೂಲಕಾರಣ ಅವರಿಗೆ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಸಿಕ್ಕದಿರುವುದೇ ಆಗಿದೆ. ಇದಕ್ಕೆ ಆ ಸಂಸ್ಥೆಗಳು ವಿಧಿಸುತ್ತಿರುವ ವಿಪರೀತ ತಲೆದೆರೆ (ಕ್ಯಾಪಿಟೇಷನ್ ಫೀ) ಕಾರಣ. ಈ ತಲೆದೆರೆ ತೊಡೆದುಹಾಕುವ ಬಗ್ಗೆ ಸಾರ್ವಜನಿಕರಂತೆ ಸರ್ಕಾರಕ್ಕೆ ಆಸಕ್ತಿ ಇದ್ದರೂ ಇದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗಿದೆ. ಆದರೂ ಶಾಸನಸಭೆಗಳಲ್ಲಿ ಈ ಬಗ್ಗೆ ಏನಾದರೂ ಒಂದು ಪರಿಹಾರ ಶೋಧಿಸುವ ಪ್ರಯತ್ನ ಸತತವಾಗಿ ನಡೆಯುತ್ತಿದೆ.
- ಸಮಸ್ಯೆಗಳು ಮತ್ತು ಪ್ರವೃತ್ತಿಗಳು : ವ್ಯವಸಾಯ, ಆಹಾರ ಪೋಷಣೆ, ನ್ಯೂಟ್ರಿಷನ್, ವೈದ್ಯ ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಾಗಿರುವ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಪ್ರಗತಿಗೆ ಶಿಕ್ಷಣದ ಪ್ರಚಾರವೇ ಕಾರಣವೆಂಬ ಅಂಶ ಜನತೆಯಲ್ಲಿ ದೃಢ ಪಟ್ಟಂತೆ ಜನಜೀವನದ ಆಧುನೀಕರಣಕ್ಕೆ ಶಿಕ್ಷಣದ ಪ್ರಗತಿ ಅಗತ್ಯವೆಂಬ ಅಂಶಸ್ಪಷ್ಟಪಡುತ್ತಿದೆ. ಆದರೆ ಅದರ ಪರಿಣಾಮ ಸಮಾಜವಿಜ್ಞಾನಿಗಳ ಮೂಲಕ ಸಮಾಜದ ಪ್ರಗತಿಯ ಮೇಲೆ ಅಷ್ಟಾಗಿ ಆಗಿಲ್ಲ. ಹಾಗೆಯೇ ಮಾನವಿಕಶಾಸ್ತ್ರಗಳ ಶಿಕ್ಷಣವೂ ತನ್ನ ಪೂರ್ಣಪ್ರಭಾವ ಬೀರುತ್ತಿಲ್ಲ. ಇದಕ್ಕೆ ದೇಶೀಯ ಸಾಹಿತ್ಯವೂ ಇಂಗ್ಲಿಷ್ ಲಾಕ್ಷಣಿಕ ಕೃತಿಗಳ ಹಾದಿಯನ್ನು ಅನುಸರಿಸುತ್ತಿರುವುದೇ ಕಾರಣ ಎನ್ನಬಹುದು ಇದೆಲ್ಲ ವಯಸ್ಕರ ಶಿಕ್ಷಣ ಪ್ರಚಾರದೊಡನೆ ಹೆಣೆದುಕೊಂಡಿದ್ದು ಆ ದಿಸೆಯಲ್ಲಿ ನಿರ್ದಿಷ್ಟ ಯತ್ನ ನಡೆಯಬೇಕಾಗಿದೆ.
- ಭಾರತ ಈಚೆಗೆ ರಾಕೆಟ್‍ಯುಗ ಪ್ರವೇಶಿಸಿದೆ. ಉಪಗ್ರಹವನ್ನು ಉಡಾಯಿಸಿ ಅದರ ಮೂಲಕ ದೂರಗ್ರಾಹಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಹವಾಮಾನ, ಸಂಪರ್ಕ ವ್ಯವಸ್ಥೆ ಮತ್ತು ಟೆಲಿವಿಷನ್ (ದೂರದರ್ಶನ) ಮುಂತಾದ ಪ್ರಯೋಜನಗಳ ಮೂಲಕ ನಾಡಿನ ಸಂಪದಭಿವೃದ್ಧಿಗೆ ನೆರವಾಗುತ್ತಿದೆ. ಇದರಲ್ಲಿ ದೂರದರ್ಶನ ಶಿಕ್ಷಣ ಕ್ರಮವೂ ಸೇರಿದೆ. 1975ರಲ್ಲಿ ಪ್ರಾಯೋಗಿಕವಾಗಿ ದೂರದರ್ಶನ ಶಿಕ್ಷಣ ಕಾರ್ಯಕ್ರಮವನ್ನು ಅಮೆರಿಕದ ಉಪಗ್ರಹದ ಮೂಲಕ ಭಾರತದ ನಾಲ್ಕು ರಾಜ್ಯಗಳ ನಾಲ್ಕುನೂರು ಗ್ರಾಮಗಳಿಗೆ ಒದಗಿಸಿತು. ಹೈದರಾಬಾದ್, ಶಿಕ್ಷಣ ಅಹಮದ್‍ನಗರ, ದೆಹಲಿ ಮುಂತಾದ ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಉಪಗ್ರಹ ಗ್ರಹಿಸಿ ಮರುಪ್ರಸಾರ ಮಾಡುತ್ತಿತ್ತು, ಅದನ್ನು ಭೂ ಕೇಂದ್ರಗಳು ತಮ್ಮ ಗ್ರಾಹಕ ಕೇಂದ್ರಗಳಿಗೆ ಮರುಪ್ರಸಾರ ಮಾಡುತ್ತಿದ್ದುವು. ಭೂರದರ್ಶನ ಶಿಕ್ಷಣದ ಈ ಪ್ರಾಯೋಗಿಕ ಕಾರ್ಯಕ್ರಮ ಒಂದು ವರ್ಷ ಪರ್ಯಂತ ನಡೆಯಿತು. ಅನಂತರ ಜರ್ಮನಿ ಮತ್ತು ಫ್ರಾನ್ಸ್ ಸಂಯುಕ್ತವಾಗಿ ಉಡಾಯಿಸಿದ ಉಪಗ್ರಹವನ್ನು ಬಳಸಿಕೊಂಡು ಈ ಶಿಕ್ಷಣಪ್ರಚಾರವನ್ನು ಮುಂದುವರಿಸಲಾಯಿತು. ಮುಂದೆ 1980ರಲ್ಲಿ ತನ್ನದೇ ಆದ ಆ್ಯಪಲ್ ಉಪಗ್ರಹದ ಮೂಲಕ ಮುಂದುವರಿಸಿತು. ಮುಖ್ಯವಾಗಿ ಪ್ರಾಥಮಿಕ ಮತ್ತು ವಯಸ್ಕರ ಶಿಕ್ಷಣಕ್ಕೆ ಮೀಸಲಾಗಿದ್ದ ಈ ಪ್ರಾಯೋಗಿಕ ಕಾರ್ಯಕ್ರಮದ ಯಶಸ್ಸನ್ನು ಮನಗಂಡು ಸರ್ಕಾರ 1981ರಲ್ಲಿ ತನ್ನವೇ ಆದ ಇನ್‍ಸ್ಯಾಟ್-1 ಎ ಮೂಲಕ ಮುಂದುವರಿಸುವ ಯೋಜನೆ ಹಾಕಿಕೊಂಡಿತು. ಅನಂತರ ಇನ್‍ಸ್ಯಾಟ್-1 ಬಿ 1983ರ ಅಕ್ಟೋಬರಿನಿಂದ ಈ ಕಾರ್ಯವನ್ನು ನಿರ್ವಹಿಸುತ್ತಿದೆ. ಇದರ ಮೂಲಕ ವಯಸ್ಕರ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣ-ಈ ಮೂರೂಕ್ಷೇತ್ರಗಳ ಪಾಠಪ್ರವಚನಗಳಿಗೂ ವ್ಯವಸ್ಥೆಮಾಡಲಾಗುತ್ತಿದೆ. ಈಚೆಗೆ ಪ್ರಾರಂಭವಾದ ಮುಕ್ತ ವಿಶ್ವವಿದ್ಯಾಲಯಗಳು ಅಲ್ಲಲ್ಲಿ ದೂರದರ್ಶನಕೇಂದ್ರಗಳನ್ನು ಸ್ಥಾಪಿಕೊಂಡು ತಮ್ಮ ಬೋಧನಕಾರ್ಯ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಿಕೊಳ್ಳುತ್ತಿವೆ.
- ಪ್ರಪಂಚದ ಅಭೀವೃದ್ಧಿಶೀಲ ರಾಷ್ಟ್ರಗಳಿಗಳಿಗೆ ಭಾರತ ತಾಂತ್ರಿಕ ನೆರವು ನೀಡಲು ಮುಂದಾಗಿದೆ. ಈಗಾಗಲೇ 36 ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಾಂತ್ರಿಕ ನೆರವು ನೀಡುತ್ತಿದೆ. ಅಲ್ಲಿಯ ಜನರಿಗೆ ವೃತ್ತಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ತರಬೇತಿ ನೀಡಲು ಹೈದರಾಬಾದ್ ಮತ್ತು ದೆಹಲಿಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ ಶಿಕ್ಷಣ ಪಡೆದು ಅವರು ತಮ್ಮ ತಮ್ಮ ದೇಶದಲ್ಲಿ ಉದ್ಯೋಗಗಳನ್ನು ಆರಂಭಿಸಲು ನೆರವಾಗುವಂತೆ ಸಹರಿಸುತ್ತಿದೆ. ಇದರಿಂದ ಭಾರತದ ಅಂತಾರಾಷ್ಟ್ರೀಯ ಹೊಣೆಗಾರಿಕೆ ಹೆಚ್ಚಿ ಭಾರತದ ನಾಯಕತ್ವ ತಾಂತ್ರಿಕ ಕ್ಷೇತ್ರದಲ್ಲಿ ಪ್ರಕಾಶಕ್ಕೆ ಬರುತ್ತಿದೆ. ಇದಕ್ಕೆ ಅನುಕೂಲಿಸುವಂತೆ ಸರ್ಕಾರ ತರಬೇತಿ ಕೇಂದ್ರಗಳ ಸ್ಥಾಪನೆಯ ಜೊತೆಗೆ ಭಾರತೀಯ ತಜ್ಞರು ಅನ್ಯದೇಶದಿಂದ ತಾಯ್ನಾಡಿಗೆ ತೆರಳಲು ಅಗತ್ಯವಾದ ಪ್ರೋತ್ಸಾಹ ಕೂಡ ನೀಡುತ್ತಿದೆ.
- ಭಾರತದಲ್ಲಿ ಕಳೆದ ಎರಡು ದಶಮಾನಗಳಿಂದ ಪರಮಾಣು ಭೌತವಿಜ್ಞಾನ ತೀವ್ರವೇಗದಲ್ಲಿ ಬೆಳೆದುಬರುತ್ತಿದೆ. ಕೆಲವು ರಾಷ್ಟ್ರಗಳು ಅದನ್ನು ಮಾರಕಾಸ್ತ್ರಗಳ ನಿರ್ಮಾಣಕ್ಕೆ ಬಳಸುತ್ತಿದ್ದರೂ ಭಾರತ ಮಾತ್ರ ವೈದ್ಯ, ನೀರಾವರಿ, ವಿದ್ಯುದುತ್ಪಾದನೆ ಮುಂತಾದ ಶಾಂತಿಕಾಲದ ಉಪಯುಕ್ತ ಕಾರ್ಯಗಳಿಗಾಗಿ ಬಳಸಲು ನಿರ್ಧರಿಸಿದೆ. ಈ ವಿಜ್ಞಾನವನ್ನು ಆಳವಾಗಿ ವ್ಯಾಸಂಗಮಾಡಿ ಸಂಶೋಧನೆ ನಡೆಸಲು ನೆರವಾಗುವಂತೆ ವಿಶ್ವವಿದ್ಯಾಲಯಗಳಲ್ಲಿ ಪರಮಾಣು ರಿಯಾಕ್ಟರುಗಳನ್ನು ಸ್ಥಾಪಿಸಲು ನೆರವಾಗುವಂತೆ ವಿಶ್ವವಿದ್ಯಾಲಯಗಳಲ್ಲಿ ಪರಮಾಣು ರಿಯಾಕ್ಟರುಗಳನ್ನು ಸ್ಥಾಪಿಸಲು ವಿಶ್ವವಿದ್ಯಾಲಯದ ಧನ ಆಯೋಗ 10ಕೋಟಿ ರೂಪಾಯಿಗಳ ಯೋಜನೆ ಹಾಕಿ ಕೊಂಡು ಕಾರ್ಯಗತ ಮಾಡುವುದರಲ್ಲಿದೆ. ಇದರಿಂದ ಭಾರತ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗುತ್ತದೆ.
- ಭಾರತ ಸರ್ಕಾರ ಅಂದಿಗಂದಿಗೆ ಶಿಕ್ಷಣ ಮತ್ತು ವಿಜ್ಞಾನಗಳ ಬಗ್ಗೆ ತನ್ನ ನೀತಿಯನ್ನು ನಿರೂಪಿಸುತ್ತ ಬಂದಿದೆ. 1958ರಲ್ಲಿ ನೆಹರು ಅವರು ವಿಜ್ಞಾನ ಮತ್ತು ತಂತ್ರವಿದ್ಯೆಗಳ ಬಗ್ಗೆ ಸರ್ಕಾರದ ನೀತಿಯನ್ನು ಸ್ಪಷ್ಟಪಡಿಸಿದ್ದರು. ಅದು ಇತ್ತೀಚಿನ ತನಕವೂ ಪರಿಣಾಮಕಾರಿಯಾಗಿ ಈ ಕ್ಷೇತ್ರದ ಬೆಳೆವಣಿಗೆಗೆ ನೆರವಾಯಿತು. ಆದರೆ ಅದರ ಫಲ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. 70 ಕೋಟಿ ಜನ ವಾಸಿಸುತ್ತಿರುವ ಗ್ರಾಮಾಂತರ ಜನತೆಯ ಹಿತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಹಾಗೂ ಅನ್ಯದೇಶಗಳ ತಂತ್ರವಿದ್ಯೆ ಕೊಳ್ಳುವ ಅಂಶವನ್ನೂ ಕುರಿತಂತೆ ನೂತನ ನೀತಿಯನ್ನು ನಿರೂಪಿಸಿದೆ.
- 1. ಸೂಕ್ಷ್ಮವೂ ಆಯಕಟ್ಟಿನದೂ ಆದ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳಿಗೆ ಅಗತ್ಯವಾದ ವಿದೇಶಿ ಪರಿಜ್ಞಾನ ಪಡೆದು ಆಕ್ಷೇತ್ರದಲ್ಲಿ ಸ್ವಾವಲಂಬನೆ, ದಕ್ಷತೆ, ಆತ್ಮವಿಶ್ವಾಸ ಸಾಧಿಸುವುದು.
- 2. ಸಮಾಜದಲ್ಲಿ ಮಹಿಳೆಯರಿಗೂ ದುರ್ಬಲವರ್ಗದವರಿಗೂ ಉಪಯುಕ್ತವೆನಿಸುವ ಉದ್ಯೋಗ ಒದಗಿಸುವುದು.
- 3. ದೇಶೀಯ ಕೌಶಲ ಮತ್ತು ದಕ್ಷತೆಯನ್ನು ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವೂ ಸ್ಪರ್ಧಾಪೂರ್ಣವೂ ಆಗುವಂತೆ ಬಳಸುವುದು.
- 4.ಸಮಾಜಕ್ಕೆ ಅಗತ್ಯವಾಗುವ ಪ್ರಮಾಣದಲ್ಲಿ ತಯಾರಿಕಾಕ್ಷೇತ್ರಗಳು ವಸ್ತುಗಳನ್ನು ತಯಾರಿಸುವಂತೆ ಸಹಕಾರ ಏರ್ಪಡಿಸುವುದು
- 5. ಅತ್ಯಲ್ಪ ಬಂಡವಾಳ ಹೂಡಿಕೆಯಿಂದ ಉದ್ಯೋಗಕ್ಷೇತ್ರ ಅತ್ಯಧಿಕ ಅಭಿವೃದ್ಧಿ ಸಾಧಿಸುವಂತೆ ಮಾಡುವುದು.
- 6. ಅನ್ಯದೇಶಗಳಿಂದ ತಾಂತ್ರಿಕ ನೆರವನ್ನು ರತವಲು ಅಥವಾ ಕೊಳ್ಳುವುದರ ಮೂಲಕ ಹಳೆಯದಾಗಿರುವಂಥ ನಮ್ಮ ಕೆಲವು ತಂತ್ರವಿದ್ಯೆಯನ್ನು ನವೀಕರಿಸಿಕೊಳ್ಳುವುದು.
- 7. ರಪ್ತು ಉದ್ಯೋಗಗಳಿಗೆ ಅಗತ್ಯವೆನಿಸುವ ತಂತ್ರವಿದ್ಯೆಯ ಅಭಿವೃದ್ದಿಗೆ ಹಚ್ಚು ಪ್ರೋತ್ಸಾಹ ನೀಡುವುದು.
- 8. ಸದ್ಯದ ದಕ್ಷತೆ ಮತ್ತು ಸಾಮಥ್ರ್ಯಗಳನ್ನು ಪೂರ್ಣವಾಗಿ ಬಳಸಿಕೊಂಡು ತಯಾರಿಕೆಯಲ್ಲಿ ಹೆಚ್ಚಳ ಸಾಧಿಸುವುದು.
- 9. ಪರಿಸರದಲ್ಲಿ ಸಮತೋಲ ಕಾಪಾಡುವ ತಂತ್ರವಿದ್ಯೆಯ ಕಡೆಗಮನ ಹರಿಸುವುದು-ಇವೇ ಮುಂತಾದವು ಈ ನಿರೂಪಣೆಯಲ್ಲಿ ಸೇರಿವೆ. (ಎನ್.ಎಸ್.ವಿ.)
- ಮಹಿಳಾ ವಿದ್ಯಾಭ್ಯಾಸ: ವೇದಕಾಲದ ಮಹಿಳೆಯರು ಭಾರತ ಸಂಸ್ಕøತಿಯ ಪ್ರತೀಕಗಳಂತಿದ್ದರು. ವೇದ, ಉಪನಿಷತ್ತು, ತತ್ತ್ವ ಮತ್ತು ಗಣಿತ ಶಾಸ್ತ್ರಗಳ ಆಳವಾದ ಅಧ್ಯಯನದಿಂದ ಅವರು ಪ್ರಭಾವಿತತಾಗಿದ್ದತು. ಸಾಮಾಜಿಕ ಮತ್ತು ಆರ್ಥಿಕ ಚಿಂತನಗಳಲ್ಲಿ ಸಾಮಾನಾವಕಾಶ, ಸಮಾನಾಧಿಕಾರ ಹೊಂದಿದ್ದರು. ಭಾರತದ ಮೇಲೆ ಪರಕೀಯರ ದಾಳಿ ಆರಂಭವಾದಮೇಲೆ ಮಹಿಳೆಯರ ವಿದ್ಯಾಭ್ಯಾಸಕ್ಕೆ ದಕ್ಕೆ ಒದಗಿತು. ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳಿಂದ ಮಹಿಳೆಯರ ಜೀವನದಲ್ಲಿ ಏರುಪೇರು ಆಗಿ ಅವರು ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಕಳೆದುಕೊಂಡು ಅಬಲೆಯರಾದರು. ಬ್ರಿಟಿಷರ ಕಾಲದಲ್ಲಿ ಮಹಿಳೆಯರಲ್ಲಿ ಜಾಗತಿ ಉಂಟಾದರೂ ಈಸ್ಟ್‍ಇಂಡಿಯಾ ಕಂಪನಿಯ ಸರ್ಕಾರ ಅವರ ಮುನ್ನಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡಲಿಲ್ಲ. ಇದರಿಂದ ಮಹಿಳೆಯರ ಮತ್ತು ಪುರುಷರ ವಿದ್ಯಾಭ್ಯಾಸಗಳಲ್ಲಿ ಹೆಚ್ಚಿನ ಅಂತರ ಕಾಣಲಾರಂಭಿಸಿತು. ಇದು ಹಾರ್‍ಟಾನ್ ಕಮಿಟಿಯ ವರದಿಯಿಂದ ವ್ಯಕ್ತಪಟ್ಟಿದೆ.
- ಸುಮಾರು ನೂರೈವತ್ತು ವರ್ಷಗಳಿಂದೀಚೆಗೆ ಮಹಿಳೆಯರು ವಿದ್ಯೆಯಲ್ಲಿಯೂ ಆರ್ಥಿಕ ಮತ್ತು ಸಾಮಾಜಿಕ ಚಿಂತನಗಳಲ್ಲಿಯೂ ಮುನ್ನೆಡೆಯುತ್ತಿದ್ದರೂ ಹತ್ತೊಂಬಂತ್ತನೆಯ ಶತಮಾನ ಆದಿಯಲ್ಲಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೀ ಅವಕಾಶವಾಗಲೀ ಹೆಚ್ಚಾಗಿ ಇರಲಿಲ್ಲ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲೂ ಅವಿದ್ಯಾವಂತ ಮಹಿಳೆಯರೇ ಹೆಚ್ಚಾಗಿದ್ದರು. 1901ರಲ್ಲಿ ಶೇಕಡಾ 0.8ಮಂದಿ ಮಹಿಳೆಯರು ಮಾತ್ರ ಅಕ್ಷರಸ್ಥರಾಗಿದ್ದರು. ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ನೂರು ಮಂದಿ ಬಾಲಕರಿಗೆ 12 ಮಂದಿ ಬಾಲಿಕೆಯರೂ ಮಾಧ್ಯಮಿಕ ಶಾಲೆಗಳಿಲ್ಲಿ ಕೇವಲ ನಾಲ್ಕು ಮಂದಿ ಬಾಲಿಕೆಯರೂ ಓದುತ್ತಿದ್ದರು. ಪ್ರೌಢವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಿಕೆಯರ ಒಟ್ಟು ಸಂಖ್ಯೆ ಬೆರಳಲ್ಲಿ ಎಣಿಸಬಹುದಾಗಿತ್ತು. ಆದರೆ 50 ವರ್ಷಗಳಿಂದೀಚೆಗೆ ಮಹಿಳೆಯರ ವಿದ್ಯಾಭ್ಯಾಸದಲ್ಲಿ ಗಮನಾರ್ಹ ಪ್ರಗತಿ ಕಾಣಬರುತ್ತಿದೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳ ಸಂಖ್ಯೆ ಪ್ರತಿವರ್ಷವೂ ಹೆಚ್ಚುತ್ತಿದ್ದು ವಿದ್ಯೆಯಲ್ಲಿ ಗಂಡುಹೆಣ್ಣು ಮಕ್ಕಳಿಗಿರುವ ಅಂತರ ಬಹಳ ಮಟ್ಟಿಗೆ ಕಡಿಮೆ ಆಗುತ್ತಿದೆ. ಪ್ರಾಥಮಿಕ ಶಾಲೆಗೆ ಹೋಗುವ ಹೆಣ್ಣು ಮಕ್ಕಳ ಸಂಖ್ಯೆ ಪ್ರತಿ 100 ಮಂದಿ ಬಾಲಕರಿಗೆ 1905ರಲ್ಲಿ 39ಕ್ಕೂ 1965ರಲ್ಲಿ 60ಕ್ಕೂ ಎರಿದ್ದು ಈಗ ಇನ್ನೂ ಅಧಿಕವಾಗಿದೆ. ಮಾಧ್ಯಮಿಕ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ 1950ರಲ್ಲಿ 15ಕ್ಕೂ 1965ರಲ್ಲಿ 26ಕ್ಕೂ ಹೆಚ್ಚಿತ್ತು. ಈಗ ಪ್ರೌಢ ವಿದ್ಯಾಭ್ಯಾಸ ಗಣನೀಯ ಪ್ರಗತಿ ಸಾಧಿಸಿದೆ. ಪ್ರೌಢಶಾಲೆಗಳಲ್ಲಿ 1950ರಲ್ಲಿ ಓದುವ ಹೆಣ್ಣುಮಕ್ಕಳ ಸಂಖ್ಯೆ 40,000 ಇದ್ದದ್ದು 1965ರಲ್ಲಿ 2,40,000ಕ್ಕೆ ಏರಿತು. ಈಗ ಅದು ಮಹತ್ತರವಾಗಿ ಏರಿದೆ. ಮಹಿಳೆಯರ ವಿದ್ಯಾಭ್ಯಾಸ ಹೀಗೆ ಪ್ರಗತಿಪಥದಲ್ಲಿ ಸಾಗುತ್ತಿದ್ದರೂ ಗ್ರಾಮೀಣ ಮಹಿಳೆಯರು ಬಹಳ ಹಿಂದುಳಿದಿದ್ದು ಅಜ್ಞಾನ ಅನರಕ್ಷತೆ ಬಡತನ ಇಂದಿಗೂ ಗ್ರಾಮಗಳಲ್ಲಿ ತಾಂಡವವಾಡುತ್ತಿವೆ. ಗ್ರಾಮಗಳಲ್ಲಿಯ ಮಹಿಳೆಯರು ಪ್ರಗತಿ ಸಾಧಿಬೇಕಾಗಿದೆ.
- ಮಹಿಳಾ ವಿದ್ಯಾಭ್ಯಾಸದ ಸಮಸ್ಯೆಗಳನ್ನು ಕೂಲಂಕಷವಾಗಿ ತಿಳಿದು ಅವರ ಪ್ರಗತಿ ಸಾಧನೆಗೆ ಯುಕ್ತ ಸಲಹೆಗಳನ್ನು ಕೊಡಲು ರಾಷ್ಟ್ರೀಯ ಸರ್ಕಾರ ನೇಮಿಸಿದ ಸಲಹಾ ಮಂಡಲಿಗಳಲ್ಲಿ ಇವು ಮುಖ್ಯವಾದವು: 1 ರಾಷ್ಟ್ರೀಯ ಸ್ತ್ರೀ ಶಿಕ್ಷಣ ಸಲಹಾ ಸಮಿತಿ. 2. ಬಾಲಕ ಮತ್ತು ಬಾಲಿಕೆಯರ ಪಠ್ಯಕ್ರಮಗಳ ನಡುವಣ ವ್ಯತ್ಯಾಸ ಕುರಿತ ಸಮಿತಿ. 3.ಭಕ್ತವತ್ಸಲಂ ಸಮಿತಿ. 4. ಸರ್ಕಾರಿ ಇಲಾಖೆಗಳಲ್ಲಿಯ ಮಹಿಳಾ ಉದ್ಯೋಗಿಗಳ ಕಾರ್ಯಸ್ಥಿತಿಗಳನ್ನು ಕುರಿತ ಅಧ್ಯಯನದ ಬಗೆಗಿನ ಸಮಿತಿ.
- ಈ ಸಮಿತಿಗಳು ಮಹಿಳೆಯರ ಪ್ರಗತಿಗಾಗಿ ಹಲವಾರು ಸಲಹೆಗಳನ್ನು ಸರ್ಕಾರದ ಮುಂದಿಟ್ಟಿವೆ. ಇವಲ್ಲದೆ ರಾಜ್ಯಮಟ್ಟದಲ್ಲಿ ಪ್ರತಿ ರಾಜ್ಯದಲ್ಲೂ ಒಂದೊಂದು ಸಲಹಾ ಸಮಿತಿಯಿದೆ. ರಾಷ್ಟ್ರಸರ್ಕಾರ ಮತ್ತು ರಾಜ್ಯಸರ್ಕಾರಗಳು ಈ ಸಮಿತಿಗಳ ಸಲಹೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ, ಅನೇಕ ಸಲಹೆಗಳನ್ನು ಅನುಷ್ಠಾನಕ್ಕೆ ತಂದಿವೆ. ಶಿಕ್ಷಣದ ನಾನಾ ಮಟ್ಟಗಳಲ್ಲಿ ಹೆಣ್ಣು ಮಕ್ಕಳು ಮುಂದುವರಿಯುವದರ ಜೊತೆಗೆ ಮಹಿಳೆಯರ ಅನಕ್ಷರತೆ ನಿಮೂಲನಕ್ಕೆ ಮತ್ತು ಉದ್ಯೋಗಾವಕಾಶಕ್ಕೆ ಈ ಸಮಿತಿಗಳು ಮಾಡಿರುವ ಸಲಹೆಗಳಲ್ಲಿ ಮುಖ್ಯವಾದವು ಹೀಗಿವೆ: 1. ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯುವುದು. 2. ಮಕ್ಕಳಿಗೆ ಹಾಜರಾತಿ ವೇತನ ಕೊಡುವುದು. 3. ಮಹಿಳಾ ಅಧ್ಯಾಪಕಿಯರು ಗ್ರಾಮೀಣಭಾಗಗಳಲ್ಲಿ ನೆಲಸಿ ಕೆಲಸ ಮಾಡಲು ಪ್ರೋತ್ಸಾಹ ಕೊಡುವುದಕ್ಕಾಗಿ ಭತ್ಯ ಕೊಡುವುದು. 4. ಅಧ್ಯಾಪಕಿಯರಿಗೆ ವಸತಿಗೃಹಗಳು. 5. ಶಾಲೆಗಳಲ್ಲಿ ಶೌಚಗೃಹಗಳು. 6. ಆರ್ಥಿಕ ಮುಗ್ಗಟ್ಟಿನಿಂದ ವಿದ್ಯೆ ಮುಂದುವರಿಸಲಾಗದ ಬುದ್ಧಿಶಾಲಿ ಮಕ್ಕಳಿಗೆ ವಿದ್ಯಾರ್ಥಿವೇತನ. 7. ಮಕ್ಕಳ ಹಾಜರಾತಿ ಉತ್ತಮ ಪಡಿಸಲು ಮಧ್ಯಾಹ್ನದ ಉಪಾಹಾರ. 8. ಅನಕ್ಷರತೆಯ ನಿರ್ಮೂಲನಕ್ಕೆ ಯೋಜನೆಗಳು. 9. ವಿದ್ಯಾವಂತ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗಾವಕಾಶ. 10. ತಾಂತ್ರಿಕ ಶಿಕ್ಷಣ.
- 20ನೆಯ ಶತಮಾನ ಮಹಿಳಾ ಪ್ರಗತಿಯ ದೃಷ್ಟಿಯಿಂದ ಒಂದು ಪರ್ವಕಾಲ ಎನ್ನಬಹುದು. ಈ ದೃಷ್ಠಿಯಲ್ಲಿ ಒಂದು ಹೊಸ ಶಕೆಯನ್ನು ಸ್ಥಾಪಿಸಿದೆಯೆಂದರೂ ತಪ್ಪಲ್ಲ. ಜೀವನರಂಗದಲ್ಲಿ, ಹೆಣ್ಣುಗಂಡುಮಕ್ಕಳ ಕಾರ್ಯಕ್ಷೇತ್ರಗಳ ಬೇರೆ ಬೇರೆಯಾದರೂ ಸ್ವತಂತ್ರ ಭಾರತ ನಿಮಾಣ ಕಾರ್ಯದಲ್ಲಿ ಮಹಿಳೆಯರು ಪುರುಷರೊಡನೆ ಪಾಲುಗೊಳ್ಳಬೇಕಾದ ಆವಶ್ಯಕತೆ ಇದೆ. ಸ್ವಾತಂತ್ರ್ಯ ಸಮರದಲ್ಲಿ ಪುರುಷನಿಗೆ ಸಮವಾಗಿ ಹೋರಾಡಿ ಸ್ವಾತಂತ್ರ್ಯಗಳಿಸಲು ಕಾರಣಳಾದ ಮಹಿಳೆ ಇಂದು ಸುಖೀ ರಾಜ್ಯಸ್ಥಾಪನೆಗಾಗಿ ರೋಗ, ಹಸಿವೆ, ಬಡತನ, ಅಜ್ಞಾನದ ವಿರುದ್ಧ ಹೋರಾಡಬೇಕಾಗಿದೆ. ಉತ್ತಮಗೃಹಿಣಿ, ಮಮತೆಯ ತಾಯಿಯಾಗುವುದರ ಜೊತೆಗೆ ಮಕ್ಕಳಲ್ಲಿ ರಾಷ್ಟ್ರೀಯಶೀಲ ಬೆಳೆಸಿ, ಶಕ್ತಿ ತುಂಬುವ ಚೈತನ್ಯ ಅವಳಲ್ಲಿ ಮೂಡಬೇಕಾಗಿದೆ. ಪ್ರಜಾಪ್ರಭುತ್ವ ತನಗಿತ್ತಿರುವ ಅನುಕೂಲ ಅವಕಾಶಗಳನ್ನು ಉಳಿಸಿಕೊಂಡು, ಗ್ರಾಮೋದ್ಧಾರ ಕಾರ್ಯದಲ್ಲಿ ನೆರವಾಗಬೇಕಾಗಿದೆ. ಈ ಕರ್ತವ್ಯಗಳನ್ನು ಯಶಸ್ವಿಯಾಗಿ ನೆರವೇರಿಸಬೇಕಾದರೆ ಮಹಿಳೆಯರಿಗೆ ಸಮಗ್ರ ಶಿಕ್ಷಣ ದೊರೆಯಬೇಕು. ಭಾರತದ ಸಂಸ್ಕøತಿ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಮಹಿಳೆಯರಿಗೆ ಸಾಮಾನ್ಯ ಶಿಕ್ಷಣದ ಮುನ್ನೆಲೆಯಲ್ಲಿ ಸಂಸ್ಕøತಿ ಆಧಾರಿತ ಶಿಕ್ಷಣ ಕೊಡಬೇಕಾಗಿದೆ. ಸಾಮಾನ್ಯ ಶಿಕ್ಷಣದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅನುಗುಣವಾದ ಶಿಕ್ಷಣವೇ ಸಾಮಾಜಿಕ ಮತ್ತು ಆರ್ಥಿಕ ಕೆಡುಕುಗಳನ್ನು ನಿವಾರಿಸಬಲ್ಲ ಮಾರ್ಗ.
- (ಕೆ.ಎನ್.ಕೆ.ಬಿ.)
- ಮುನ್ನೊಟ: ಮುಂಬರುವ 21ನೆಯ ಶತಮಾನದಲ್ಲಿ ನಮ್ಮ ಶಿಕ್ಷಣ ಪದ್ದತಿ ಹೇಗಿರಬೇಕೆಂಬ ಆಲೋಚನೆಯ ಕಡೆ ಭಾರತ ಸರಕಾರ ತನ್ನ ತೀವ್ರಗಮನ ಹರಿಸಿರುವುದು ಒಂದು ಆರೋಗ್ಯಕರವಾದ ಬೆಳವಣಿಗೆ ಎನಿಸಿದೆ. ಪ್ರಪಂಚದಲ್ಲಿ ತೀವ್ಯ ವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ. ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ರಾಷ್ಟ್ರರಾಷ್ಟ್ರಗಳ ಮಧ್ಯೆ ಹೊಂದಾಣಿಕೆ ಕಾಣದೆ ಜಟಿಲಗೊಳ್ಳುತ್ತಿರುವ ಸಮಸ್ಯೆಗಳು ಹಾಗೂ ರಾಜಕೀಯ ಜೀವನದಲ್ಲಿನ ಅಸ್ತವ್ಯಸ್ತತೆ, ಅಪಾಯಕಾರಿ ಪರಿಸರಮಾಲಿನ್ಯ ಇವುಗಳಿಂದಾಗಿ ಮಾನವ ಕುಲಕ್ಕೆ ಒದಗಬಹುದಾದ ಕಷ್ಟನಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಗಳನ್ನು ಎದುರಿಸಬಲ್ಲಂಥ ಶಿಕ್ಷಣವೀಯಬೇಕೆಂಬ ಬಯಕೆ ಎಲ್ಲ ದೇಶಗಳಲ್ಲೂ ಕಾಣುಬರುತ್ತಿದೆ. ಭಾರತ ಸರಕಾರವೂ ಇದಕ್ಕೆ ಹೊರತಾಗಿ ನಿಲ್ಲದೆ 1985 ಆಗಸ್ಟ್ 21ರಲ್ಲಿ ಮುಂದಿನ ಶಿಕ್ಷಣ ಹೇಗಿರಬೇಕೆಂಬ ಶಿಕ್ಷಣ ನೀತಿ ನಿರೂಪಣೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆಯಿತು. ಆ ನಿರೂಪಣೆಯ ಸೈದ್ಧಾಂತಿಕತೆಯನ್ನು ಜನತೆಯ ಪರಿಶೀಲನೆಗಾಗಿ ಪ್ರಕಟಿಸಿದೆ. ಅದರಲ್ಲಿ 1. ಸದ್ಯದಲ್ಲಿ ಪ್ರಚಾರದಲ್ಲಿರುವ ವಾರ್ಷಿಕ ಪರೀಕ್ಷೆಗೆ ಬದಲು ಇಡೀ ಶಿಕ್ಷಣ ವರ್ಷದಲ್ಲಿ ಅಂದಿಗಂದಿಗೆ ನಡೆಸುವ ಪರೀಕ್ಷೆಯ ಒಟ್ಟು ಮೌಲ್ಯ ಪರಿಗಣಿಸಿ ತೇರ್ಗಡೆ ಮಾಡುವುದು; 2. ಕಾಲೇಜಿನ ಪ್ರವೇಶಕ್ಕೆ ಅಧ್ಯಾಪಕರ ಅಭಿಪ್ರಾಯ ಮತ್ತು ವಿದ್ಯಾರ್ಥಿಯ ಅಭಿರುಚಿಯನ್ನು ಆಧಾರ ಮಾಡಿಕೊಳ್ಳುವುದು; 3. ಶಾಲಾಮಟ್ಟದಲ್ಲಿ ಉದ್ಯೋಗ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದು; 4. ನೇಮಕಾತಿಗೂ ಪದವಿಗಳಿಗೂ ಗಂಟು ಹಾಕುವುದನ್ನು ನಿಲ್ಲಿಸುವುದು ಮುಂತಾದ ಸೂಚನೆಗಳು ಸೇರಿವೆ. ಅಧ್ಯಾಪಕರಿಗೂ ರಾಜಕೀಯಕ್ಕೂ ಇರಬೇಕಾದ ಸಂಬಂಧವನ್ನು ಸೂಚಿಸಿಲ್ಲ. ಆದರೆ ಶಿಕ್ಷಣದಿಂದ ಪಡೆಯುವ ಮೌಲ್ಯಕ್ಕೂ ವಿದ್ಯಾರ್ಥಿಗಳಲ್ಲಿ ರೂಢಿಸುವ ಮೌಲ್ಯಕ್ಕೂ ಇರಬೇಕಾದ ಸಂಬಂಧವನ್ನು ಒತ್ತಿ ಹೇಳಿದೆ. ಕೇವಲ ಪಠ್ಯಕ್ರಮದ ಬದಲಾವಣೆಯಿಂದ ಎಲ್ಲವೂ ಸರಿಹೋಗುವುದೆಂದು ಪರಿಗಣಿಸಲಾಗದು. ಬೋಧನಕ್ರಮವೂ ಅಧ್ಯಾಪಕರ ಮನೋಭಾವವೂ ಬದಲಾಗಬೇಕೆಂಬ ಅಗತ್ಯವನ್ನು ಅದರಲ್ಲಿ ಸೂಚಿಸಿದೆ.
- ಸಂಶೋಧನೆಗಳು ಕೇವಲ ಪರದೇಶಿಯರ ಅನುಕರಣವಾಗಿರದೆ ಇಲ್ಲಿನ ಅಗತ್ಯಕ್ಕೆ ನೆರವಾಗುವಂತೆ ನಡೆಸಬೇಕು. ಈ ಸುಧಾರಣೆಗಳ ಅನುಷ್ಠಾನಕ್ಕೆ ಅಗಾಧ ಹಣ ಅಗತ್ಯವಾಗಿರುತ್ತದೆ. ಹಣ ಹೂಡಿಕೆ, ಕಡ್ಡಾಯ ಪ್ರಾಥಮಿಕ ಶಿಕ್ಷಣದ ವಿಸ್ತರಣೆ ಶಾಲೆ ಬಿಡುವವರಿಗಾಗಿ ಅನೌಪಚಾರಿಕ ಶಿಕ್ಷಣ ಶೌಲಭ್ಯದ ವಿಸ್ತರಣೆ, ಉದ್ಯೋಗ ಶಿಕ್ಷಣ, ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಉನ್ನತ ಶಿಕ್ಷಣ, ಪರೀಕ್ಷಾ ಪದ್ಧತಿ-ಈ ಎಲ್ಲ ಆಯಾಮಗಳಲ್ಲೂ ಸುಧಾರಣೆಗಳು ಏಕಕಾಲದಲ್ಲಿ ಆರಂಭವಾಗಬೇಕೆಂಬ ಅಭಿಪ್ರಾಯ ಶಿಕ್ಷಣವೇತ್ತರಲ್ಲಿ ಕಂಡುಬರುತ್ತಿದೆ. ಶಿಕ್ಷಣವನ್ನು ಕೇಂದ್ರ ಸರ್ಕಾರ ನಿರ್ದೇಶಿಸುವುದರಿಂದ ತಕ್ಕಷ್ಟು ಫಲ ದೊರಕಲಾರದೆಂದೂ ಉನ್ನತಶಿಕ್ಷಣ ಶಮೀ ಕರಣ, ತಾಂತ್ರಿಕ ಶಿಕ್ಷಣದ ತರಬೇತಿ ಮುಂತಾದ ಕ್ಷೇತ್ರಗಳನ್ನು ಹಿಂದಿನಂತೆಯೇ ಕೇಂದ್ರ ಸರ್ಕಾರ ವಹಿಸಿಕೊಳ್ಳುವುದಾದರೂ ರಾಜ್ಯ ಸರ್ಕಾರದ ಒಲವನ್ನು ಗಳಿಸಿ ಕೊಳ್ಳಬೇಕು ಎಂಬ ಅಭಿಪ್ರಾಯ ಬೆಳೆಯುತ್ತಿದೆ. ಕೇಂದ್ರ ಸರ್ಕಾರದ ಶಿಕ್ಷಣ ನೀತಿ ನಿರೂಪಣಾ ಪತ್ರದ ಮೇಲೆ ತಕ್ಕಷ್ಟು ಆಲೋಚನೆ ನಡೆದು ಸಲಹೆಗಳು ಬಂದ ಮೇಲೆ ಅದರ ಪರಿಶೀಲನೆಗಾಗಿ ಆಯೋಗ ನೇಮಿಸಬಹುದು.
- (ಎನ್.ಎಸ್.ವಿ.)