ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾವಿನ ಕಡಿತ ಹಾಗೂ ಚಿಕಿತ್ಸೆ
ಹಾವಿನ ಕಡಿತ ಹಾಗೂ ಚಿಕಿತ್ಸೆ
1. ಹಾವಿನ ಕಡಿತಕ್ಕೆ ಚಿಕಿತ್ಸೆ ಮಾಡುವ ವಿಧಾನವನ್ನು ಅರಿಯುವ ಮುನ್ನ ಹಾವಿನ ಕಡಿತದ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ. ಹಾವಿನ ಕಡಿತವೆಂದ ಕೂಡಲೇ ಸಾಮಾನ್ಯವಾದ ಪ್ರತಿಕ್ರಿಯೆ ಎಂದರೆ ಭಯ, ಆತಂಕ ಹಾಗೂ ಅಸಹಾಯಕತೆ. ತಥ್ಯದಲ್ಲಿ ಈವಾವುದಕ್ಕೂ ಎಡೆಯೇ ಇಲ್ಲ. ಏಕೆಂದರೆ, ಮೊದಲು ನಾವು ವೈಜ್ಞಾನಿಕವಾಶಗಿ ಬಿಚ್ಚು ಮನಸ್ಸಿನಿಂದ ಕಡಿತವೆಂದರೇನೆಂಬುದನ್ನು ಅರಿತುಕೊಳ್ಳಬೇಕು. ಎಲ್ಲಾ ಹಾವಿನ ಕಡಿತಗಳು ವಿಷ ಪೂರಕವಲ್ಲ ಹಾಗೂ ಮಾರಕವಲ್ಲ. ತಜ್ಞರು ಕೂಡಿ ಹಾಕಿರುವ ಅಂಕಿ-ಅಂಶಗಳ ಪ್ರಕಾರ ಕೇವಲ ಶೇಕಡಾ 28ರಷ್ಟು ಕಡಿತಗಳು ಮಾತ್ರ ಪ್ರಥವ ಚಿಕಿತ್ಸೆಗಿಂತ ಹೆಚ್ಚಿನ ಉಪಚಾರ ಯೋಗ್ಯವಾಗಿರುತ್ತವೆ. ಉಳಿದಂತೆ ಪ್ರಥಮ ಚಿಕಿತ್ಸೆ ಹಾಗೂ ಕೆಲವೊಮ್ಮೆ ಅದರ ಅವಶ್ಯಕತೆಯೂ ಇರುವುದಿಲ್ಲ. ನಮ್ಮ ದೇಶದಲ್ಲಿ ಲಭ್ಯವಿರುವ ಹಾವುಗಳ ಪೈಕಿ ಕೇವಲ ನಾಲ್ಕು ಜಾತಿಯ ಹಾವುಗಳು ಮಾತ್ರ ಮರಣಾಂತಿಕವಾಗಿ ಕಡಿಯಬಲ್ಲವು. ಉಳಿದ ಎಲ್ಲಾ ಜಾತಿಯ ಹಾವುಗಳ ಕಡಿತ ಕೇವಲ ತರಚುಗಾಯಗಳಾಗುವುದಕ್ಕೆ ಮಾತ್ರ ಸೀಮಿತ. ಮೇಲೆ ಹೇಳಿದ ನಾಲ್ಕು ಜಾತಿಯ ಹಾವುಗಳೆಂದರೆ ಕಾಳಿಂಗ, ನಾಗರಹಾವು, ಕಟ್ಟು ಹಾವು ಹಾಗೂ ಮಂಡಲದ ಹಾವು. ಇವುಗಳಲ್ಲಿ ಮೊದಲ ಮೂರು ಹಾವುಗಳ ವಿಷ ಕೇಂದ್ರ ನರ ಮಂಡಲದ ಮೇಲೆ ಪ್ರಭಾವ ಬಿರುತ್ತವೆ. (ನ್ಯೂರೋ ಟಾಕ್ಸಿಕ್) ಹಾಗೂ ಕೊನೆಯದರ ವಿಷ ನೇರವಾಗಿ ರಕ್ತಕಣಗಳ ಮೇಲೆ ಪ್ರಭಾವ ಬೀರಿ ರಕ್ತದ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನೇ ಕ್ಷೀಣಗೊಳಿಸುತ್ತದೆ (ಹೀಮೋ ಬಾಕ್ಸಿಕ್). ಈ ಮೇಲಿನ ಪ್ರಾಥಮಿಕ ಹಾಗೂ ಮಹತ್ವದ ವಿವರಗಳೊಂದಿಗೆ ಕಡಿತದ ಪ್ರಭಾವಗಳನ್ನು ಆಳವಾಗಿ ತಿಳಿಯಬಹುದು.
ನಾವು ಪ್ರಪ್ರಥಮವಾಗಿ ಹಾವಿನ ಕಡಿತದ ಪ್ರಸಂಗಗಳನ್ನು ವೈಚಾರಿಕವಾಗಿ ಶಾಂತಿಯುತವಾದ ಮನಸ್ಸಿನಿಂದ ವಿಶ್ಲೇಷಿಸಬೇಕು. ಏಕೆಂದರೆ ಯಾವುದೇ ರೀತಿಯ (ವಿಷವುಳ್ಳ ಹಾಗೂ ವಿಷರಹಿತ) ಹಾವಿನ ಕಡಿತವಾದರೂ ಅದರ ಪ್ರಭಾವಗಳು ಈ ಕೆಳಗೆ ವಿವರಿಸಿರುವ ಅಂಶಗಳ ಮೇಲೆ ಪ್ರಧಾನವಾಗಿ ಅವಲಂಬಿಸಿರುತ್ತವೆ.
ಅ) ಕಚ್ಚಿದ ಹಾವು ವಿಷಪೂರಿತವೇ ಅಥವಾ ವಿಷವಿಲ್ಲದಿರುವುದೆ. ಆ) ವಿಷಪೂರಿತ ಹಾವು ಕಚ್ಚಿದ ಪಕ್ಷದಲ್ಲಿ, ದೇಹದೊಳಗೆ ಪ್ರವೇಶಿಸಿರುವ ವಿಷದ ಪ್ರಮಾಣ ಹಾಗೂ ವಿಷದ ತೀಕ್ಷ್ಣತೆ. ಇ) ಹಾಗೂ ವಿಷದ ತೀಕ್ಷ್ಣತೆ ಸಮುದ್ರ ಮಟ್ಟಕ್ಕೆ ಹೋಲಿಸಿದಾಗ, ಕಡಿತವುಂಟಾದ ಭೂ ಪ್ರದೇಶದ ಎತ್ತರ. ಈ) ಕಡಿತಕ್ಕೊಳಗಾದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿ. ಉ) ಕಡಿತಕ್ಕೊಳಗಾದ ವ್ಯಕ್ತಿ ವಾಸಿಸುತ್ತಿರುವ ಸಾಮಾಜಿಕ ವ್ಯವಸ್ಥೆ.
ಅ). ಸಾಮಾನ್ಯವಾಗಿ ಹಾವು ಕಡಿದಿದೆಯೆಂದ ಕೂಡಲೇ ಯಾರೂ ಹಾವಿನ ಗುರುತಿಸುವಿಕೆ ಬಗ್ಗೆ ಯೋಚಿಸುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಎಂದರೆ ಹಾವು ನಾಪತ್ತೆಯಾಗುವುದು, ಹಾವನ್ನು ಗುರುತಿಸುವ ವಿಧಾನ ಗೊತ್ತಿಲ್ಲದಿರುವುದು ಹಾಗೂ ಭಯ ತುಂಬಿದ ಆತಂಕ ಉಂಟಾಗುವುದು. ಕೇವಲ ಕೆಲವೇ ವೈದ್ಯರು ಹಾಗೂ ಸರ್ಪಾಸಕ್ತರು ಕಚ್ಚುವಿಕೆಯಿಂದ ಉಂಟಾದ ಗಾಯವನ್ನು ನೋಡಿ ಕಚ್ಚಿದ ಹಾವಿನ ಗುರುತು ಹಿಡಿಯಬಲ್ಲದು. ಇದಕ್ಕೆ ಸಾಕಷ್ಟು ಅನುಭವದ ಅವಶ್ಯಕತೆಯಿರುತ್ತದೆ. ಕಡಿತದ ಭಾಗದಲ್ಲಾಗಿರುವ ಗಾಯದ ಮಾದರಿ ಹಾಗೂ ವಿವಿಧ ರೀತಿಯ ಆಳ ಅಗಲಕ್ಕೆ ಇಳಿದಿರುವ ಹಲ್ಲಿನ ಗುರುತುಗಳು ಬಹು ಉಪಯುಕ್ತ. ಇದಲ್ಲದೇ ವ್ಯಕ್ತಿಯ ದೇಹದಲ್ಲಾಗಿರುವ ಬದಲಾವಣೆಯನ್ನು ನಿಖರವಾಗಿ ವಿಶ್ಲೇಷಿಸುವುದರ ಮೂಲಕ ಸಹ ಹಾವಿನ ಗುರುತು ಹಿಡಿಯಲು ಸದ್ಯ. ಪರಿಣಿತರು ವಿಷದ ಪ್ರಭಾವ ಹಾಗೂ ವಿಷವಿಲ್ಲದ ಹಾವಿನ ಕಡಿತದಿಂದ ಉಂಟಾಗುವ ಉದ್ವೇಗದ ಸ್ಥಿತಿಯ ನಡುವಿನ ಅಂತರವನ್ನು ಚೆನ್ನಾಗಿ ಅರಿತಿದ್ದರೆ ಇದು ಸುಲಭ. ಸಾಮಾನ್ಯವಾಗಿ ನಿರಪಾಯಕಾರಿ ಹಾವು ಕಚ್ಚಿದ ಜಾಗದಲ್ಲಿ ಅಧಿಕ ರಕ್ತ ಸ್ರಾವವಾಗುವಂತಹ ತರಚು ಅಥವಾ ಅಧಿಕ ದಂತ ಪಂಕ್ತಿಯಿಂದಾಗುವ ಗಾಯಗಳೇ ಹೆಚ್ಚು. ವಿಷಪೂರಿತ ಹಾವು ಕಡಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಎರಡು ಹಲ್ಲಿನ ಗುರುತು ಮಾತ್ರ ಮಾಡಿರುತ್ತದೆ ಹಾಗೂ ಕೆಲವೊಮ್ಮೆ ಯಾವ ಸ್ಥಳೀಯ ಗುರುತುಗಳು ಸಿಗುವುದೇ ಇಲ್ಲ. ಉದಾಹರಣೆಗೆ, ನಾಗರ ಅಥವಾ ಮಂಡಲದ ಹಾವು ಕಡಿದಾಗ ಸ್ಥಳೀಯ ಊತ ಉರಿತಗಳಿರುವುದು ಸರ್ವೇ ಸಾಮಾನ್ಯ, ಆದರೆ ಅತೀ ತೀಕ್ಷ್ಣ. ವಿಷವುಳ್ಳ ಕಟ್ಟು ಹಾವು ಕಡಿದಾಗ ಯಾವ ಗುರುತೂ ಸಿಗುವುದು ಬಹು ಕಷ್ಟ ಸಾಧ್ಯ.
ಆ) ಬಹುಪಾಲು ಸಂದರ್ಭಗಳಲ್ಲಿ ವಿಷಪೂರಿತ ಹಾವುಗಳು ಕಚ್ಚಿದರೆ ಅದರ ವಿಷ ದೇಹ ಸೇರುವುದು ಖಚಿತ. ಆದರೆ ಕೆಲವೊಮ್ಮೆ ಆಶ್ಚರ್ಯಕರ ರೀತಿಯಲ್ಲಿ ವಿಷದ ಹಾವು ಕಚ್ಚಿದರೂ ಅದರ ವಿಷ ಕಚ್ಚಿಸಿಕೊಂಡ ವ್ಯಕ್ತಿಯ ದೇಹ ಸೇರಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣಗಳೆಂದರೆ, ಹಾವು ಸ್ವಲ್ಪ ಸಮಯಕ್ಕೆ ಮುಂಚೆ ಬೇರೆಯಾರನ್ನಾದರೂ ಅಥವಾ ಯಾವುದನ್ನಾದರೂ ಕಚ್ಚಿ ತನ್ನ ವಿಷಚೀಲದಲ್ಲಿ ಶೇಖರವಾಗಿರುವ ವಿಷವನ್ನು ಚುಚ್ಚಿ ಚೀಲವನ್ನು ಬರಿದು ಮಾಡಿಕೊಂಡಿರುವುದು ಅಥವಾ ಹಾವು ತನ್ನ ಪ್ರಾಣಕ್ಕೆ ತೀವ್ರತರದ ಸಂಚಕಾರ ಬಂದಿಲ್ಲವೆಂಬುದನ್ನು ಮನಗಂಡು ಕೇವಲ ಹೆದರಿಸುವುದಕ್ಕೆ ಕಚ್ಚುವುದು, ಇದನ್ನು ಶುಷ್ಕ ಕಡಿತ ಎನ್ನುತ್ತಾರೆ. ಇಂತಹ ಸಂದರ್ಭಗಳು ತೀರಾ ವಿರಳ.
[ಯಾವುದೇ ರೀತಿಯ ವಿಷಪೂರಿತ ಕಚ್ಚಿದಾಗ ಸರ್ವರಿಗೂ ಸರ್ವಕಾಲಕ್ಕೂ ಅನ್ವಯವಾಗುವಂತೆ ಇಂತಹ ಹಾವು ಕಚ್ಚಿದರೆ ಇಷ್ಟು ಘಳಿಗೆಗೊಳಗೆ ಮರಣ ಉಂಟಾಗುವುರೆಂದು ಹೇಳಲು ಸಾಧ್ಯವಿಲ್ಲ] ನರಮಂಡಲ ಪ್ರಭಾವಿ ವಿಷವುಳ್ಳ ಹಾವುಗಳಲ್ಲಿ ಕಟ್ಟು ಹಾವು ಅತೀ ತೀಕ್ಷ್ಣವಾದ ವಿಷಹೊಂದಿದೆ. ಇದಕ್ಕೆ ಹೋಲಿಸಿದರೆ ಕಾಳಿಂಗ ಸರ್ಪದ ವಿಷದ ತೀಕ್ಷ್ಣತೆ ಬಲು ಕಡಿಮೆ. ಆದರೆ ಕಾಳಿಂಗ ಕಡಿತದಿಂದ ಶೀಘ್ರವಾಗಿ ಮರಣಿಸುವುದಕ್ಕೆ ಕಾರಣವೆಂದರೆ ಅದರ ಅಗಾಧ ಪ್ರಮಾಣ.
ಇ) ಸಾಮಾನ್ಯವಾಗಿ ಈವರೆಗೆ ದೊರೆತಿರುವ ಮಾಹಿತಿ ಹಾಗೂ ತಜ್ಞರು ಸಂಶೋಧಿಸಿ ಸಂಗ್ರಹಿಸಿರುವ ಅಂಕಿ-ಅಂಶಗಳ ಪ್ರಕಾರ, ಹಾವುಗಳಲ್ಲಿರುವ ವಿಷದ ತೀಕ್ಷ್ಣತೆ ಸಮುದ್ರ ಮಟ್ಟದಿಂದ ಮೇಲೇರುತ್ತಾ ಹೋದಂತೆ ಕಡಿಮೆಯಾಗುತ್ತದೆ. ಹಾಗೆಯೇ ಕಾಕತಾಳಿಯವೆಂಬಂತೆ, ಮರುಭೂಮಿಯಲ್ಲಿ ಸಿಗುವ ಹಾವುಗಳ ವಿಷ ಸಮತಟ್ಟು ಪ್ರದೇಶದ ಹಾವುಗಳಿಗಿಂತ ತೀಕ್ಷ್ಣವಾಗಿರುತ್ತದೆ. ಈ ಬದಲಾವಣೆಗೆ ನಿರ್ದಿಷ್ಟ ಕಾರಣ ಹುಡುಕಲು ಈಗಲೂ ಸಹ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಹಿಮಚ್ಛಾದಿತ ಪ್ರದೇಶಗಳಲ್ಲಿ ವಿಷಪೂರಿತ ಹಾವುಗಳು ಕಾಣಸಿಗುವುದು ತೀರಾ ವಿರಳ. ಈ ಕಾರಣಗಳಿಂದಾಗಿ ಕಡಿತದ ಪ್ರಭಾವ ಭೂಮಿಯ ಎತ್ತರ ಅನುಸರಿಸಿ ವ್ಯತ್ಯಯವಾಗುತ್ತವೆ.
ಈ) ವೈದ್ಯಕೀಯ ವಿಜ್ಞಾನಕ್ಕೆ ಸವಾಲಾಗುವಂತಹ ಹಾವಿನ ವಿಷಕ್ಕೆ ಮಾನವ ತೋರುವ ಪ್ರತಿರೋಧಕ ಹಾಗೂ ಹೊಂದಾಣಿಕೆಯ ಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಯವಾಗಿ ಸಂಗತಿಯಾಗಿದೆ. ಕೆಲ ವ್ಯಕ್ತಿಗಳು ಅತ್ಯಲ್ಪ ಪ್ರಮಾಣದ ವಿಷದಿಂದಲೇ ಸಾವನ್ನಪ್ಪಬಹುದು. ಕೆಲವರು ಸಾಕಷ್ಟು ಪ್ರಮಾಣದಲ್ಲಿ (ಸಾಮಾನ್ಯ ವ್ಯಕ್ತಿಯ ಗಣನೆಯಲ್ಲಿ ಮಾರಕವಾಗುವಂತಹ ಪ್ರಮಾಣ) ವಿಷ ದೇಹ ಸೇರಿದರೂ ಪ್ರಭಾವ ತೀವ್ರವಾಗಿರುವುದಿಲ್ಲ. ಇದಕ್ಕೆ ದೈಹಿಕ ಸ್ಥಿತಿ ಕಾರಣವಾದರೂ ಮಾನಸಿಕ ಸ್ಥಿತಿ ಬಹುಮಟ್ಟಿನ ಹತೋಟಿ ಹೊಂದಿರುತ್ತದೆ.
ಹಾವಿನ ಬಗ್ಗೆ ಹಾಗೂ ವಿಷದ ಬಗ್ಗೆ ತಿಳುವಳಿಕೆ ಇರುವ ವ್ಯಕ್ತಿಗೆ ಕಡಿತವಾದಾಗ ಆ ವ್ಯಕ್ತಿಯ ಪ್ರತಿಕ್ರಿಯೆ ಗಾಬರಿಯಿಂದ ಕೂಡಿರದೆ ವೈದ್ಯಕೀಯ ಉಪಚಾರಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ಆದರೆ ಇದಾವುದರ ಪರಿವೆಯೇ ಇಲ್ಲದ ವ್ಯಕ್ತಿಗೆ ಕಡಿತವಾದಾಗ, ಪ್ರತಿಕ್ರಿಯೆ ತೀವ್ರತರನಾಗಿದ್ದು ವೈದ್ಯರಿಗೂ ಸಹ ಸಾಕಷ್ಟು ಕಸರತ್ತಾಗುತ್ತದೆ. ಹೆದರಿರದ ವ್ಯಕ್ತಿಯಲ್ಲಿ ವಿಷದ ನಿಖರವಾದ ಪ್ರಭಾವ ಹಾಗೂ ಲಕ್ಷಣಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು ಹಾಗೂ ಈ ವಿಷಯದ ಬಗ್ಗೆ ಸಂಶೋಧಿಸುತ್ತಿರುವ ವೈದ್ಯ ಅಥವಾ ತಜ್ಞನಿಗೆ ಇದು ತುಂಬಾ ಸಹಾಯಕಾರಿ. ಆದರೆ ತೀರಾ ಗೊಂದಲಕ್ಕೊಳಗಾಗಿರುವ ವ್ಯಕ್ತಿಯ ಸ್ಥಿತಿಗತಿಗಳು ಬಹಳಷ್ಟು ಸಲ ನುರಿತ ವೈದ್ಯರನ್ನು ದಾರಿ ತಪ್ಪಿಸುತ್ತವೆ.
ಒಟ್ಟಾರೆ ಹೇಳಬೇಕೆಂದರೆ ಹಾವು ಕಡಿದಾಗ ಯಾವುದೇ ಉದ್ವೇಗಕ್ಕೆ ಎಡೆಮಾಡಿಕೊಡದೆ ಆದಷ್ಟು ಬೇಗ ತಜ್ಞರಲ್ಲಿ ತೋರಿಸುವುದು ಒಳಿತು.
ಉ) ನಾವು ಜೀವಿಸಿರುವ ಸಮಾಜದಲ್ಲಿ ಹಾವಿನ ಕಡಿತದ ಬಗ್ಗೆ ವಿಪರೀತ ಪೊಳ್ಳು ನಂಬಿಕೆಗಳಿರುವುದು ಸಹಜ. ಕೆಲ ವರ್ಗದವರು ಮಂತ್ರ ಮಾಟಕ್ಕೆ ಮೊರೆಹೋದರೆ ಮತ್ತೆ ಕೆಲವರು ಅವೈಜ್ಞಾನಿಕವಾದ ವಿಧಾನಗಳನ್ನು ಅಂದರೆ ಬರೆಹಾಕುವುದು, ಅತಿ ಕಹಿಯಾದ ಬೇರು ರಸ ತಿನಿಸುವುದು, ಬೇವಿನ ಸೊಪ್ಪಿನಿಂದ ದಂಡಿಸುವುದು, ಹೊಗೆ ಹಾಕಿ ಹಿಂಸಿಸುವುದು ಮುಂತಾದವುಗಳಿಗೆ ಶರಣಾಗಿ ಹಣ, ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ. ಸತ್ಯವೆಂದರೆ, ಹಾವಿನ ವಿಷ ಮಾನವನ ದೇಹ ಸೇರಿ ಅದರ ಪ್ರಭಾವ ಪ್ರಾರಂಭವಾಗಿದ್ದರೆ, ಅದಕ್ಕೆ ವೈಜ್ಞಾನಿಕವಾಗಿ ಸಂಶೋಧಿಸಿ ತಯಾರಿಸಿರುವ `ಪ್ರತಿವಿಷ ಮಾತ್ರ ಸಹಾಯಕಾರಿ. ಮತ್ತೆಲ್ಲವೂ ತಕ್ಷಣ ನೆಮ್ಮದಿ ನೀಡಬಲ್ಲವೇ ಹೊರತು ಸಾವನ್ನು ತಡೆಯಲಾರವು.
ಈ ಮೇಲಿನ ಸಂಕ್ಷಿಪ್ತ ವಿವರಣೆ ಪ್ರಾಥಮಿಕ ಜ್ಞಾನ ನೀಡುವುದೇ ಹೊರತು ಯಾವುದೇ ರೀತಿಯಲ್ಲೂ ಅಂತಿಮ ಅಥವಾ ಪರಿಪೂರ್ಣವಲ್ಲ. ಅಧಿಕ ಮಾಹಿತಿ ಪಡೆಯಲು ಆಸಕ್ತರಾಗಿರುವರು ದೈನಂದಿನ ಪತ್ರಿಕೆ, ವಿಜ್ಞಾನದ ಸಂಚಿಕೆಗಳು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆ ಹಾಗೂ ಪರಿಣಾಮಗಳ ಬಗ್ಗೆ ಬಹಳಷ್ಟು ಸಂಚಿಕೆಗಳು ಹೊರತರುತ್ತಿರುವ ಲೇಖನಗಳನ್ನು ಓದುತ್ತಿರುವುದು ಬಹಳ ಅವಶ್ಯಕ. ಚಿಕಿತ್ಸಾ (ಪ್ರಥಮ) ವಿಧಾನ:
ವೈದ್ಯರ ಹಾಗೂ ತಜ್ಞರ ಅನುಭವಗಳ ಆಧಾರದ ಮೇಲೆ ಹಾವಿನ ಕಡಿತ ಬಹುಮಟ್ಟಿಗೆ ಕಾಲು ಅಥವಾ ಕೈಗಳಲ್ಲಿ ಆಗುವುದೆಂಬುದು ಸತ್ಯ. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ಕತ್ತಲಲ್ಲಿ ನಡೆಯುವಾಗ ಆಕಸ್ಮಿಕವಾಗಿ ಕಡಿತ ಉಂಟಾಗುತ್ತದೆ. ಸಾಮಾನ್ಯವಾಗಿ ಹಾವುಗಳು ಮಾನವನ ಹೆಜ್ಜೆಯಿಂದುಂಟಾಗುವ ಕಂಪನ ಗ್ರಹಿಸಿ ದೂರ ಸರಿಯುತ್ತವೆ. ಕೆಲವೊಮ್ಮೆ ಅವಶ್ಯಕತೆ ಮೀರಿ ನುಂಗಿದ ಆಹಾರ ಹೊಟ್ಟೆಯಲ್ಲಿರುವಾಗ ಶೀಘ್ರವಾಗಿ ಸರಿಯಲಾರದೆ ಕಾಲಿನ ತುಳಿತಕ್ಕೆ ಒಳಗಾಗಿ ನೋವಿನಿಂದ ಕಚ್ಚುವುದು ಸಹಜ. ಆದರೆ ಈ ರೀತಿ ಪ್ರಸಂಗಗಳು ವಿರಳ. ದೇಹದ ಉಳಿದ ಭಾಗಗಳಲ್ಲಿ ಕಡಿತ ಉಂಟಾಗುವುದು ಬಹು ಕಡಿಮೆಯೆಂದೇ ಹೇಳಬಹುದು. ಮೇಲೆ ತಿಳಿಸಿದಂತೆ ಕೈ ಅಥವಾ ಕಾಲುಗಳಿಗೆ ಕಡಿತವುಂಟಾದಾಗ ತಕ್ಷಣ ಲಭ್ಯವಿರುವ ದಾರ, ಬಟ್ಟೆ ತುಂಡು ಅಥವಾ ಹೆಂಗಸರು ಕೂದಲನ್ನು ಕಟ್ಟುವ ರಿಬ್ಬನ್ ತೆಗೆದುಕೊಂಡು ಮೊಳಕೈ ಹಾಗು ಮಂಡಿಯಿಂದ ಆರು ಇಂಚು ಮೇಲೆ ಒಂದು ಕಟ್ಟು ಕಟ್ಟಬೇಕು. ಈ ರೀತಿಯ ಕಟ್ಟು ತೀರಾ ಬಿಗಿಯಾಗಿರದೆ ದೇಹದ ನೈಸರ್ಗಿಕ ಹಿಗ್ಗು ಕುಗ್ಗುವಿಕೆಯ ಗುಣಕ್ಕನುಸಾರವಾಗಿ ಕೈಯಲ್ಲಿರುವ ಕೊನೆ (ಕಿರು) ಬೆರಳು ಕಟ್ಟಿನ ಹಾಗೂ ಚರ್ಮದ ನಡುವೆ ಸ್ವಲ್ಪ ಪ್ರಯಾಸದಿಂದ ತೂರುವಂತಿರಬೇಕು. ಏಕೆಂದರೆ ರಕ್ತ ಸಂಚಾರಕ್ಕೆ ಸೇರಿದ ವಿಷ ರಕ್ತ ಸಂಬಂಧವಲ್ಲದ ತ್ಯಾಜ್ಯ ವಸ್ತುವಾದ್ದರಿಂದ ಅಷ್ಟು ಸುಲಭವಾಗಿ ರಕ್ತದೊಡನೆ ಬೆರೆಯಲಾರದು. ಇದು ನಿಧಾನವಾಗಿ ಕರಗಿ ರಕ್ತದಲ್ಲಿ ಮಿಳಿತವಾಗಿ ಪ್ರಭಾವ ತೋರಲು ಸುಮಾರು ಸಮಯ ಬೇಕಾಗುತ್ತದೆ ಹಾಗೂ ಈ ಸಮಯವನ್ನು ಉಪಯೋಗಿಸಿಕೊಂಡು ನುರಿತ ವೈದ್ಯರ ಬಳಿಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಮೊಳಕೈ ಹಾಗೂ ಮಂಡಿಯಿಂದ ಆರು ಇಂಚು (ಅಂಗುಲ) ಏಕೆಂದರೆ ಕೆಳಗಿನ ಕೈ ಹಾಗೂ ಕಾಲಿನಲ್ಲಿ ಜೋಡಿ ಮೂಳೆಗಳಿದ್ದು ಅವುಗಳ ನಡುವೆ ಸಾಕಷ್ಟು ನರಗಳು ಹಾಗೂ ರಕ್ತ ವಾಹಿನಿಗಳು ಕೆಲಸ ನಿರ್ವಹಿಸುತ್ತಿರುತ್ತಲೆ. ಮೊಳಕೈ ಹಾಗೂ ಮಂಡಿಯ ಮೇಲ್ಭಾಗದಲ್ಲಿ ಏಕ ಮೂಳೆಯಿದ್ದು ಕಟ್ಟು ಹಾಕುವುದರಿಂದ ಬಹುಮಟ್ಟಿಗೆ ರಕ್ತ ನಾಳಗಳನ್ನು ಸಂಕುಚಿಸಿ ವಿಷವನ್ನು ಅಲ್ಲಿಯೇ ತಡೆಯಬಹುದು.
ಕಟ್ಟು ಹಾಕಿದನಂತರ ಕಚ್ಚಿದ ಭಾಗವನ್ನು ಯಥೇಚ್ಛವಾಗಿ ಸಾಬೂನು ಹಾಗೂ ನೀರಿನಿಂದ ತೊಳೆಯಬೇಕು. ನೀರು ಸ್ವಲ್ಪ ಒತ್ತಡದಿಂದ ಹಾಯಿಸುವುದು ಇನ್ನೂ ಒಳ್ಳೆಯದು. ಹೀಗೆ ಮಾಡುವಾಗ ಕಚ್ಚಿದ ಜಾಗದಲ್ಲಿ ಸಂಗ್ರಹವಾಗಿರುವ ವಿಷ ರಕ್ತ ವಾಹಿನಿಯನ್ನು ಸೇರುವ ಮೊದಲೇ ತಿಕ್ಕಿ ತೊಳೆಯುವುದರಿಂದ ದೇಹದಿಂದ ಹೊರ ಬರುವ ಸಾಧ್ಯತೆಗಳಿವೆ. ನೇರ ರಕ್ತನಾಳಕ್ಕೆ ವಿಷ ಸೇರಿದ್ದ ಪಕ್ಷದಲ್ಲಿ ಈ ವಿಧಾನ ಅಷ್ಟೊಂದು ಪ್ರಯೋಜನಕಾರಿಯಲ್ಲ. ಹೀಗೆ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ತೊಳೆದ ನಂತರ ಗಾಯದ ಭಾಗಕ್ಕೆ ಯಾವುದೇ ರೀತಿಯ ಔಷಧಿ (ಪುಡಿ ಹಾಗೂ ಆಯಿಂಟ್‍ಮೆಂಟ್) ಹಾಕದಿರುವುದು ಕ್ಷೇಮ. ಏಕೆಂದರೆ ಗಾಯದ ಸ್ಥಿತಿಯನ್ನು ಪರಿಶೀಲಿಸಿ ವೈದ್ಯರು ಅವಶ್ಯವುಳ್ಳ ಉಪಚಾರ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕಚ್ಚಿದ ಭಾಗ ಕೊಳೆಯುವುದು ಹಾಗೂ ಕೋಶನಾಶಗಳಂತಹ ತೊಂದರೆಗಳನ್ನು ನಿವಾರಿಸಬಹುದು.
ಹಲವಾರು ಸಂದರ್ಭಗಳಲ್ಲಿ, ಸ್ವಲ್ಪ ನರಪ್ರಚೋದಕ ಪೇಯಗಳಾದ ಕಾಫಿ ಅಥವಾ ಚಹ ಕೊಡುವುದು ಸಹಕಾರಿಯೆಂದು ಹಲವು ತಜ್ಞರ ಅಭಿಮತ. ಹಾಗೆಯೇ ಯಾವುದೇ ರೀತಿಯ ಮಾದಕ ದ್ರವ್ಯ ಹಾಗೂ ಮದ್ಯವನ್ನು ಖಂಡಿತವಾಗಿ ದೂರವಿಡಬೇಕು. ಯಾವುದಕ್ಕೂ ವೈದ್ಯರ ನಿರ್ಣಯವೇ ಅಂತಿಮ.
ಈ ಮೇಲಿನ ವಿಧಾನಗಳನ್ನು ಅನುಸರಿಸಿದರೂ ಸಹ ಕಡಿತಕ್ಕೊಳಗಾದ ವ್ಯಕ್ತಿಯನ್ನು ಶೀಘ್ರವಾಗಿ ತಜ್ಞ ವೈದ್ಯರ ಬಳಿಗೆ ಕರೆದೊಯ್ಯುವುದು ತೀರಾ ಅನಿವಾರ್ಯ. ಇದು ವಿಷ ಪೂರಿತ ಹಾಗೂ ವಿಷವಿಲ್ಲದ ಹಾವುಗಳಲ್ಲಿ ಯಾವುದೇ ಕಡಿದರೂ ಅವಶ್ಯಕ. ಇದೆಲ್ಲಕ್ಕಿಂತ ತೀರಾ ತುರ್ತಾಗಿ ಹಾಗೂ ಸಹಜವಾಗಿ ಮಾಡಬೇಕಾದ ಕಾರ್ಯವೆಂದರೆ, ವ್ಯಕ್ತಿಯ ಮನೋಬಲ ವರ್ಧನೆ, ಸುತ್ತ ನೆರೆದಿರುವವರು ಅನವಶ್ಯಕವಾಗಿ ಅಜ್ಞಾನದಿಂದ ಕೂಡಿದ ನುಡಿಗಳನ್ನು ಆಡಿ ಮನಸ್ಥೈರ್ಯ ಕೆಡದಂತೆ ನೋಡಿಕೊಳ್ಳಬೇಕು. ಏಕೆಂದರೆ ನೀರಿನಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗಿ ತೋರುವಂತೆ, ಪ್ರಾಣಭಯದಿಂದ ತತ್ತರಿಸುತ್ತಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ತೀರಾ ದುರ್ಬಲವಾಗಿ ಈ ರೀತಿಯ ಅಸಂಬದ್ಧ ನುಡಿಗಳು ನೇರವಾಗಿ ಸ್ವೀಕೃತವಾಗಿ ಪರಿಸ್ಥಿತಿಯನ್ನು ಹದಗೆಡಿಸುತ್ತವೆ. ಹಾವಿನ ಕಡಿತದ ಚಿಕಿತ್ಸೆಯಲ್ಲಿ ಈ ರೀತಿಯ ಮನೋಬಲವರ್ಧನೆ ಶೇಕಡಾ 50ರಷ್ಟು ಕೆಲಸ ಮಾಡಿ ಬಿಡುತ್ತದೆ ಹಾಗೂ ವೈದ್ಯರಿಗೆ ಪರಿಸ್ಥಿತಿ ನಿಭಾಯಿಸಲು ತುಂಬಾ ಅನುಕೂಲವಾಗುತ್ತದೆ.
ಪ್ರತಿವಿಷದ ಉಪಚಾರ: ವೈದ್ಯ ವಿಜ್ಞಾನದಲ್ಲಿ ಹಾವಿನ ಕಡಿತಕ್ಕೆ ಲಭ್ಯವಿರುವ ಔಷಧಿಯೆಂದರೆ `ಪ್ರತಿವಿಷ ಈ ಪ್ರತಿವಿಷ ತಯಾರಿಸುವ ರೀತಿಯೂ ಸಹ ಕುತೂಹಲಕರ. ಈ ಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲಾ ಜೀವ ರಾಶಿಗಳಲ್ಲಿ ಕುದುರೆಗಳು ಹೆಚ್ಚಿನ ಸಹಜವಾದ ಹಾಗೂ ನೈಸರ್ಗಿಕ ವಿಷ ಪ್ರತಿರೋಧಕ ಶಕ್ತಿಯನ್ನು ಪಡೆದಿವೆ. ಇದೇ ಗುಣದ ಆಧಾರದ ಮೇಲೆ ಹಾವಿನ ವಿಷ ತೆಗೆದು ಸ್ವಲ್ಪ ಮಟ್ಟಿಗೆ ಆಳ್ಳಕ ಮಾಡಿ ಆಯ್ಕೆ ಮಾಡಿದ ಉತ್ತಮ ತಳಿಗಳ ಕುದುರೆಗೆ ಸೂಜಿಯ ಮೂಲಕ ಚುಚ್ಚಿ ರಕ್ತಕ್ಕೆ ಸೇರಿಸುತ್ತಾರೆ. ಕುದುರೆ ತನ್ನ ಸಹಜ ಪ್ರತಿರೋಧಕ ಶಕ್ತಿಯಿಂದ ಈ ವಿಷದ ಪ್ರಭಾವವನ್ನು ನಿಶ್ಯೇಷ್ಯಗೊಳಿಸುತ್ತದೆ. ಹೀಗೆಯೇ ವಿಷದ ತೀಕ್ಷ್ಣತೆಯನ್ನು ಹೆಚ್ಚಿಸುತ್ತಾ ಕುದುರೆಯ ವಿಷ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಕ್ರಮೇಣವಾಗಿ ಕುದುರೆಯ ಶಕ್ತಿ ನೇರವಾಗಿ ಕಚ್ಚಿದ ಹಾವಿನ ವಿಷವನ್ನು ನಿಷ್ಫಲಗೊಳಿಸುವ ಹಂತಕ್ಕೆ ಏರುತ್ತದೆ. ಈ ಹಂತಕ್ಕೆ ಬಂದ ಕುದುರೆಯಿಂದ ಸ್ವಲ್ಪ ರಕ್ತ ತೆಗೆದು ಅನೇಕ ರಾಸಾಯನಿಕ ಕ್ರಿಯೆಗಳಿಗೆ ಒಳಪಡಿಸಿ ಒಣಗಿಸಿ ಪುಡಿ ಸಣ್ಣ ರೂಪದಲ್ಲಿ ಬಾಟಲಿಗಳಲ್ಲಿ ಶೇಖರಿಸಿಡುತ್ತಾರೆ. ಈ ರೀತಿಯ ಪ್ರತಿವಿಷಗಳಲ್ಲಿ ಏಕ ಸರ್ಪ ನಿರೋಧಕ ಹಾಗೂ ಬಹು ಸರ್ಪ ಮಿಶ್ರಿತ ನಿರೋಧಕಗಳಾಗಿ ವಿಂಗಡಿಸಬಹುದು. ಈ ರೀತಿಯ ಪ್ರತಿ ವಿಷ ನಮ್ಮ ದೇಶದಲ್ಲಿ ಕಾಣಬರುವ ನಾಗರ ಹಾವು, ಕಟ್ಟು ಹಾವು ಹಾಗೂ ಮಂಡಲದ ಹಾವುಗಳ ವಿಷಕ್ಕೆ ಔಷಧಿಯಾಗಿ ಉಪಯೋಗಿಸಬಹುದು. ಆದರೆ ಕಾಳಿಂಗ ಸರ್ಪಕ್ಕೆ ಪ್ರತಿವಿಷವನ್ನು ಕೇವಲ ಥಾಯ್‍ಲ್ಯಾಂಡಿನಲ್ಲಿ ಮಾತ್ರ ತಯಾರಿಸುತ್ತಾರೆ. ಹಲವಾರು ಬಗೆಯ ಸಮುದ್ರದ ವಿಷದ ಹಾವುಗಳ ಕಡಿತಕ್ಕೆ ಈವರೆಗೆ ಪ್ರತಿವಿಷ ಲಭ್ಯವಿಲ್ಲ.
ಈ ಪ್ರತಿವಿಷದ ಚಿಕಿತ್ಸೆಯಲ್ಲಿ ನಿಪುಣತೆ ಬಹಳ ಬೇಕಾಗುತ್ತದೆ. ಏಕೆಂದರೆ ಹಲವು ವ್ಯಕ್ತಿಗಳಲ್ಲಿ ಪ್ರತಿವಿಷ ತೀವ್ರತರದ ಅಲರ್ಜಿ ಉಂಟು ಮಾಡುತ್ತದೆ. ಆದ್ದರಿಂದ ವೈದ್ಯರು ಮೊದಲು ಪರಿಷಣಾ ಪ್ರಮಾಣವನ್ನು ನೀಡಿ ಅದರ ಪರಿಣಾಮದ ಮೇಲೆ ಉಪಚಾರವನ್ನು ಮುಂದುವರೆಸುತ್ತಾರೆ. ಹೀಗೆ ಮಾಡದಿದ್ದಲ್ಲಿ ಹಾವಿನ ವಿಷದ ಪ್ರಭಾವದ ಬದಲು ಪ್ರತಿ ವಿಷದ ಅಲರ್ಜಿಯ ಪರಿಣಾಮವಾಗಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಪರಿಣಿತಿ ಇಲ್ಲದೆ ಪ್ರತಿವಿಷದ ಪ್ರಯೋಗ ಮಾರಕವಾಗಬಹುದು.
ಈ ರೀತಿಯ ಪ್ರತಿವಿಷವನ್ನು ಸಾಮಾನ್ಯವಾಗಿ ದೊಡ್ಡ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಇದು ಏಕಮಾತ್ರ ಹಾಗೂ ಸರಿಯಾದ ವಿಧಾನವೆನ್ನುವುದನ್ನು ಎಲ್ಲರೂ ಅರಿತರೆ ಹಾವಿನ ಕಡಿತದಿಂದಾಗುವ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು.
(ಡಿ.ಆರ್.ಪ್ರಹ್ಲಾದ್)