ಅರಿದ ಶರಣಂಗೆ ಆಚಾರವಿಲ್ಲ
ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ
ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು
ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು
ಆಚಾರವುಳ್ಳವಂಗೆ ಗುರುವುಂಟು
ಗುರುವುಳ್ಳವಂಗೆ ಲಿಂಗವುಂಟು
ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.