ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೇನುನೊಣ
ಜೇನುನೊಣ - ಹೈಮೆನಾಪ್ಟರ ಗಣದ ಕ್ಲೈಸ್ಟೊಗ್ಯಾಸ್ಟ್ರ ಅಥವಾ ಅಪೊಕ್ರೈಟ ಉಪಗಣಗಳ ಏಪಯ್‍ಡಿಯ ಅಧಿಕುಟುಂಬಕ್ಕೆ ಸೇರಿದ ಕೀಟ (ಬೀ). ಈ ಅಧಿಕುಟುಂಬದಲ್ಲಿ ಸುಮಾರು 20,000 ಪ್ರಭೇದಗಳಿವೆಯಾದರೂ ಜೇನ್ನೊಣ ಎಂದ ತಕ್ಷಣ ಮನಸ್ಸಿಗೆ ಬರುವಂಥದು ಮಧುವನ್ನು ಸಂಗ್ರಹಿಸುವ ಜೇನ್ನೊಣವೇ (ಹನೀ ಬೀ). ಇದು ಏಪಿಡೇ ಕುಟುಂಬದ ಏಪಿನೀ ಉಪಕುಟುಂಬಕ್ಕೆ ಸೇರಿದೆ. ಪ್ರಸಕ್ತ ಲೇಖನದಲ್ಲಿ ಇರುವ ವಿವರಣೆಯೆಲ್ಲ ಈ ಪ್ರಭೇದಕ್ಕೆ ಹೆಚ್ಚಾಗಿ ಅನ್ವಯಿಸುತ್ತದೆ. ಜೇನ್ನೊಣ ಕಡಜಗಳಿಗೆ ಬಲುಹತ್ತಿರ ಸಂಬಂಧಿ. ಇದಕ್ಕೂ ಕಡಜಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಅವುಗಳ ಆಹಾರ ಸೇವನೆಯ ಕ್ರಮ. ಜೇನ್ನೊಣಗಳು ಸಸ್ಯಾಹಾರಿಗಳು; ಅಲ್ಲದೆ ತಮ್ಮ ಮರಿಗಳಿಗೆ ಪರಾಗ ಮತ್ತು ಮಕರಂದಗಳ ಮಿಶ್ರಣವನ್ನು ಉಣಿಸುತ್ತವೆ. ಈ ಮಿಶ್ರ ಆಹಾರವನ್ನು ತಮ್ಮ ಗೂಡುಗಳಲ್ಲಿ (ಹುಟ್ಟು, ಎರಿ) ಸಂಗ್ರಹಿಸಿಟ್ಟುಕೊಂಡಿರುವುವು. ಕಣಜಗಳಾದರೊ ಮಾಂಸಾಹಾರಿಗಳು ಹಾಗೂ ಅವು ತಮ್ಮ ಮರಿಗಳಿಗೆ ಸಿದ್ಧಗೊಳಿಸಿದ ಮಾಂಸಾಹಾರವನ್ನು ತಿನ್ನಿಸುತ್ತವೆ. ಅಲ್ಲದೆ ತಮ್ಮ ಗೂಡಿನಲ್ಲಿ ಕೀಟಗಳನ್ನೋ ಜೇಡಗಳನ್ನೋ ಹಿಡಿದು ತಂದು ಸಂಗ್ರಹಿಸಿಡುತ್ತವೆ. ಜೇನ್ನೊಣಗಳ ದೇಹ ನುಣುಪಾಗಿರಬಹುದು ಇಲ್ಲವೆ ಮೃದುವಾದ ತುಪ್ಪಳದಿಂದ ಆವೃತವಾಗಿದೆ. ದೇಹದ ಬಣ್ಣ ಸಾಮಾನ್ಯವಾಗಿ ಕಪ್ಪು. ಅನೇಕ ವೇಳೆ ಹೊಳೆಯುವ ಬಣ್ಣದಿಂದ ಕೂಡಿರಲೂಬಹುದು. ಜೇನ್ನೊಣಗಳು ಅತ್ಯಂತ ವ್ಯವಸ್ಥಿತ ರೂಪದ ಸಮಾಜಜೀವನ ನಡೆಸುತ್ತವೆ. ಕೆಲವಲ್ಲಿ ಮಾತ್ರ ಕೆಳಮಟ್ಟದ ಸಮಾಜ ಜೀವನವೋ ಇಲ್ಲವೇ ಒಂಟಿ ಜೀವನಕ್ರಮವೋ ಕಂಡುಬರುತ್ತವೆ. ಇವುಗಳ ಸಮಾಜದಲ್ಲಿ ಜಾತಿಭೇದಗಳಿದ್ದು ಕೆಲಸಗಾರ, ಗಂಡು ಮತ್ತು ರಾಣಿಗಳೆಂಬ ಮೂರು ಬಗೆಯ ನೊಣಗಳಿರುತ್ತವೆ. ಗಂಡು ನೊಣ ಕೆಲಸಗಾರ ನೊಣಗಳಿಗಿಂತ ದೊಡ್ಡದು. ಇದಕ್ಕೆ ಚುಚ್ಚುಮುಳ್ಳಾಗಲಿ, ಪರಾಗ ಅಥವಾ ಮಧುವನ್ನು ಸಂಗ್ರಹಿಸುವ ಸಾಮಥ್ರ್ಯವಾಗಲಿ ಇಲ್ಲ. ಇದರ ಕುಡಿಮೀಸೆಗಳಲ್ಲಿ 12 ಖಂಡಗಳೂ ಹೆಣ್ಣಿನ ಕುಡಿಮೀಸೆಗಳಲ್ಲಿ 13 ಖಂಡಗಳೂ ಇವೆ. ಕೆಲಸಗಾರ ನೊಣಗಳ ಬಾಯಿಯ ಗೇಲಿಯ ಮತ್ತು ಗ್ಲಾಸ ಎಂಬ ಉಪಾಂಗಗಳು ಮಧುವನ್ನು ಹೀರುವ ನಳಿಕೆಯಾಗಿ ಮಾರ್ಪಟ್ಟಿವೆ. ಈ ನಳಿಕೆಗೆ ಹೀರುನಳಿಕೆ ಅಥವಾ ಸೊಂಡಿಲು ಎಂದು ಹೆಸರು. ಕೆಲಸಗಾರ ನೊಣಗಳ ಹಿಂಬದಿಯ ಕಾಲುಗಳಲ್ಲಿ ಪುಷ್ಪಗಳಿಂದ ಪರಾಗವನ್ನು ಶೇಖರಿಸುವ ಪರಾಗಬುಟ್ಟಿ (ಪೋಲನ್ ಬಾಸ್ಕೆಟ್) ಇವೆ. ಇವಕ್ಕೆ ಕಾರ್ಬಿಕ್ಯುಲೀ ಎಂದು ಹೆಸರು. ಡಿಂಬಗಳಿಗೆ ಕಾಲುಗಳೇ ಇಲ್ಲ. ಇವು ಗೂಡಿನಲ್ಲಿ ಸಂಗ್ರಹಗೊಂಡಿರುವ ಮಧು ಮತ್ತು ಪರಾಗವನ್ನು ದಾದಿನೊಣಗಳಿಂದ ಸ್ವೀಕರಿಸಿ ಬೆಳೆಯುತ್ತವೆ.
ಜೇನುನೊಣಗಳಲ್ಲಿ ಸಮಾಜ ಜೀವನದ ವಿಕಸನ : ಕೆಲವು ಪ್ರಾಣಿಗಳಲ್ಲಿ ಸಾಮೂಹಿಕ ಜೀವನ ಇದೆಯಾದರೂ ನಿಜವಾದ ಸಾಮಾಜಿಕ ಜೀವನ ಕಂಡುಬರುವುದು ಗೆದ್ದಲು, ಇರುವೆ, ಕಡಜ ಮತ್ತು ಜೇನುನೊಣಗಳಲ್ಲಿ ಮಾತ್ರ. ಈ ತೆರನ ಬದುಕು ಅನೇಕ ಹಂತಗಳಲ್ಲಿ ವಿಕಾಸಗೊಂಡಿದೆ. ಮಾನವ ಸಮಾಜದಂತೆಯೇ ಕೀಟಗಳಲ್ಲಿ ಸಹ ಸಮಾಜಜೀವನ ಕುಟುಂಬವೆಂಬ ಘಟಕದಿಂದ ಪ್ರಾರಂಭವಾಗುವುದು. ವಂಶಾಭಿವೃದ್ಧಿಗೆಂದು, ಸಂಭೋಗದಲ್ಲಿ ಒಂದುಗೂಡಿದ ಗಂಡು ಹೆಣ್ಣುಗಳು ತಮ್ಮ ಬಾಂಧವ್ಯವನ್ನು ಮುಂದುವರೆಸಿ, ಮರಿಗಳನ್ನು ಪಡೆದು ಒಂದು ಸಣ್ಣ ಕುಟುಂಬವಾಗಿ ಪರಿಣಮಿಸುವುವು. ಈ ಕುಟುಂಬ ಜೀವನದಲ್ಲಿ ತಾಯಿತಂದೆಗಳ ಆಯಸ್ಸು ವರ್ಧಿಸಿ ತೀರ ದುರ್ಬಲವಾಗಿರುವ ಹಾಗೂ ಅಪೂರ್ಣ ಬೆಳೆದ ಮರಿಗಳ ಲಾಲನೆಪಾಲನೆ ಮುಂತಾದ ಚಟುವಟಿಕೆಗಳಿಂದಾಗಿ ಒಂದು ಕುಟುಂಬದ ಕೀಟಗಳು ಇನ್ನೂ ಕೆಲವು ಕಾಲದ ವರೆಗೆ ಒಟ್ಟುಗೂಡಿ ವಾಸಿಸತೊಡಗುವುವು. ಇಂಥ ಒಂದು ಸಂಸಾರದ ಜೀವಿಗಳ ನಡುವೆ ಒಂದು ನಿಕಟ ಸಂಬಂಧ ಹುಟ್ಟುವುದಲ್ಲದೆ ಅವುಗಳಲ್ಲಿ ಪರಸ್ಪರ ಪ್ರೇಮ, ವಾತ್ಸಲ್ಯಗಳು ಉದಿಸಿ, ಒಂದು ಸಣ್ಣ ಕುಟುಂಬ ಪ್ರಾರಂಭವಾಗುತ್ತದೆ. ಕಾಲಕ್ರಮೇಣ ಈ ಸಣ್ಣ ಕುಟುಂಬವೇ ಬೃಹದಾಕಾರವಾಗಿ ಬೆಳೆದು ಒಂದು ಸಮಾಜವಾಗುತ್ತದೆ. ಸಾಮಾಜಿಕ ಜೀವನದಲ್ಲಿ ಎಲ್ಲ ಜೀವಿಗಳಿಗೂ ರಕ್ಷಣೆ, ಮತ್ತಿತರ ಸೌಲಭ್ಯಗಳು ದೊರೆಯುವುದರಿಂದ ಇಂಥ ಸಾಮಾಜಿಕ ಕೀಟಗಳು ಒಂಟಿಜೀವನ ನಡೆಸುವ ಇತರ ಪ್ರಾಣಿ ಪ್ರಭೇದಗಳೊಡನೆ ಜೀವನದ ನಿರಂತರ ಹೋರಾಟದಲ್ಲಿ ಜಯಶಾಲಿಗಾಗಿ ತಮ್ಮ ಬಾಳ್ವೆಯನ್ನು ಸಾರ್ಥಕಪಡಿಸಿಕೊಳ್ಳುತ್ತವೆ. ವಿಕಾಸ ಹಾದಿಯಲ್ಲಿ ಸಾವಿರಾರು ವರ್ಷಗಳ ಅವಧಿಯಲ್ಲಿ ಇಂಥ ಸಮಾಜಜೀವನ ಅನೇಕ ರೀತಿಯಲ್ಲಿ ಅನೇಕ ತಪ್ಪು ನೆಪ್ಪುಗಳ ಮೂಲಕ ಬದಲಾಗುತ್ತ ಬಂದು ಒಂದು ವ್ಯವಸ್ಥಿತ ರೀತಿಯ ಸಮಾಜದಲ್ಲಿ ಪರ್ಯವಸಾನಗೊಳ್ಳುತ್ತದೆ.
ಜೇನ್ನೊಣಗಳಲ್ಲಿ ಒಂಟಿಜೀವಿಗಳೂ ಉಂಟು ಎಂದು ಮೇಲೆ ಹೇಳಿದೆ. ಇಂಥ ಜೀವನ ನಡೆಸುವ ಕೆಲವನ್ನು (ಉದಾಹರಣೆಗೆ ಜ್ಯಲೊಕೋಪ ಜಾತಿಯ ಬಡಗಿ ಜೇನ್ನೊಣ) ಮನೆಗಳ ಸೂರು, ಚಾವಣಿಗೆ ಹಾಕಿರುವ ಮರ ಮತ್ತು ಬಿದಿರುಗಳಲ್ಲಿ ನೋಡಿರಬಹುದು. ಇದು ತನ್ನ ಹರಿತವಾದ ದವಡೆಗಳ ಸಹಾಯದಿಂದ, ಮರ ಮತ್ತು ಬಿದಿರುಗಳಲ್ಲಿ ದುಂಡನೆಯ ರಂಧ್ರಮಾಡಿ ಉದ್ದವಾಗ ನಳಿಕೆಗಳನ್ನು ತಯಾರಿಸಿ, ಅದರ ಉದ್ದಕ್ಕೂ, ಒಂದರಮೇಲೊಂದರಂತೆ ಅನೇಕ ಕೋಶಗಳನ್ನು ರಚಿಸುತ್ತದೆ. ಪುಷ್ಪ್ಟಗಳಿಂದ ಪರಾಗ ಮತ್ತು ಮಧುವನ್ನು ಸಂಗ್ರಹಿಸಿ ಅದನ್ನು ರೊಟ್ಟಿಯಂತೆ ಕಲಸಿ, ತನ್ನ ಗೂಡಿನ ಕೋಶಗಳಲ್ಲಿ ಶೇಖರಿಸಿಟ್ಟು, ಅದರ ಮೇಲೆ ಪ್ರತಿಕೋಶಕ್ಕೂ ಒಂದರಂತೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟಯೊಡೆದು ಹೊರ ಬಂದ ಮರಿ ಅಲ್ಲಿಯ ಆಹಾರವನ್ನು ಸೇವಿಸಿ, ಬೆಳೆದು, ರೂಪಾಂತರಗೊಂಡು ಜೇನುನೊಣವಾಗಿ ಹೊರಬರುತ್ತದೆ. ತಾಯಿದುಂಬಿ ತನ್ನ ಮರಿಗಳೆಲ್ಲವೂ ಹೊರ ಬೀಳುವ ವರೆಗೂ ತನ್ನ ಗೂಡಿನ ಬಳಿಯೇ ಇದ್ದು, ಅವುಗಳನ್ನು ರಕ್ಷಿಸುವುದು, ಇದು ಸಮಾಜ ಜೀವನದ ವಿಕಾಸದಲ್ಲಿ ಮೊದಲನೆಯ ಘಟ್ಟ.
ಇನ್ನೊಂದು ಉದಾಹರಣೆ ಮೆಗಕೈಲ್ ಎಂಬ ಹೆಸರಿನ ಬಹಳ ಚುರುಕು ಬುದ್ದಿಯ ಸುಂದರವಾದ ಒಂದು ಸಣ್ಣ ಜೇನುನೊಣ. ಇದು ಮೃದುವಾದ ಮರಗಳ ಕಾಂಡವನ್ನು ಕೊರೆದು ಉದ್ದವಾಗ ನಳಿಕೆಗಳನ್ನು ರಚಿಸಿ, ಅವುಗಳ ಅಡ್ಡಳತೆಗೆ ಸರಿಯಾಗಿ ಗುಲಾಬಿ ಗಿಡದ ಎಲೆಗಳನ್ನು ಎರಡು ಆಕಾರದಲ್ಲಿ ಕತ್ತರಿಸುವುದು. ಅಂಡಾಕಾರದ ಎಲೆ ತುಂಡುಗಳಿಂದ, ಕಾಂಡದ ನಳಿಕೆಯ ಗೋಡೆಗೆ ಹತ್ತಿಕೊಂಡಂತೆ ಒಂದು ಸಣ್ಣ ನಳಿಕೆಯನ್ನು ತಯಾರಿಸುವುದು. ಈ ನಳಿಕೆಯ ಎರಡೂ ತುದಿಗಳನ್ನು ಮುಚ್ಚುವುದಕ್ಕಾಗಿ ಅದೇ ಅಳತೆಯ ದುಂಡಾದ ಎಲೆ ತುಂಡುಗಳನ್ನು ಕತ್ತರಿಸಿ ತಂದು, ತಳ ಮತ್ತು ಮುಚ್ಚಳವನ್ನು ತಯಾರಿಸುವುದು. ಹೀಗ ತಯಾರಿಸಿದ ನಳಿಕೆಗಳಲ್ಲಿ ಮಧು ಮತ್ತು ಪರಾಗವನ್ನು ಶೇಖರಿಸಿಟ್ಟು ಅದರಲ್ಲಿ ತತ್ತಿಗಳನ್ನಿಡುತ್ತದೆ. ತನ್ನ ಗೂಡನ್ನು ರಚಿಸಲು ಇದು ಸುಮಾರು 3000 ಎಲೆ ತುಂಡುಗಳನ್ನು ಕತ್ತರಿಸಬೇಕಾಗುವುದು.
ಮೇಲೆ ಹೇಳಿದ ಎರಡು ಜೇನುನೊಣಗಳು ಒಂಟಿಜೀವಿಗಳು. ಇವುಗಳಲ್ಲಿ ಸಮಾಜ ಜೀವನ ಕಾಣದಿದ್ದರೂ ಮಕ್ಕಳ ಸಂರಕ್ಷಣೆ, ಗೃಹನಿರ್ಮಾಣ, ಆಹಾರ ಶೇಖರಣೆ ಇತ್ಯಾದಿ ಗುಣಗಳು ಒಂದು ವಿಶೇಷ ರೀತಿಯಲ್ಲಿ ವಿಕಾಸಗೊಂಡಿರುವುದನ್ನು ಗಮನಿಸಬಹುದು. ಈ ಗುಣಗಳೇ ಸಮಾಜ ಜೀವನದ ಪ್ರಥಮ ಘಟ್ಟ ಎನ್ನಬಹುದು. ಈ ಘಟ್ಟವನ್ನು ಒಂಟಿಜೀವನ ಅಥವಾ ಸಾಮೂಹಿಕ ದಾಸ್ತಾನು ಎಂದು ಕರೆಯಲಾಗುತ್ತದೆ.
ಕುಟುಂಬ ಜೀವಿಗಳು : ಸಮಾಜ ಜೀವನದ ಪ್ರಗತಿಯಲ್ಲಿ ಎರಡನೆಯ ಘಟ್ಟ, ಕುಟುಂಬ ಜೀವನ. ಇದಕ್ಕೆ ಉದಾಹರಣೆ ಬಂಬಲ್ ಬೀ ಅಥವಾ ಗುಪ್ಪಳದ ಜೇನುನೊಣ. ಇದು ಸಮಶೀತೋಷ್ಣವಲಯಗಳಲ್ಲಿ ಬಲುಸಾಮಾನ್ಯ. ಉತ್ತರ ಭಾರತದ ಪರ್ವತಪ್ರದೇಶಗಳಲ್ಲಿ ಕಾಣದೊರೆಯುತ್ತದೆ. ಇದು ಹೊಲಗಳಲ್ಲಿ, ಇಲಿ ಮೊದಲಾದ ಪ್ರಾಣಿಗಳು ತ್ಯಜಿಸಿಹೋದ ಬಿಲಗಳಲ್ಲಿ ತನ್ನ ಗೂಡನ್ನು ಕಟ್ಟುವುದು. ಬೇಸಿಗೆಯ ಅಂತ್ಯದಲ್ಲಿ ಗಂಡಿನೊಡನೆ ಕೂಡಿ ಗರ್ಭಧರಿಸಿ ಮರಳಿ ಬರುವ ಒಂಟಿಯಾದ ಹೆಣ್ಣು ಜೇನುನೊಣ ಚಳಿಗಾಲದ ವೇಳೆಗೆ ಮರದ ಪೊಟರೆ, ಗೋಡೆಗಳ ಬಿರುಕುಗಳಲ್ಲಿ ಸೇರಿಕೊಂಡು ವಿಶ್ರಾಂತಿ ಪಡೆಯುತ್ತದೆ. ವಸಂತಋತುವಿನ ಕಾಲಕ್ಕೆ ಗೂಡಿನಿಂದ ಹೊರಬಿದ್ದು, ಯಾವುದಾದರೂ ಬಿಲವನ್ನು ಹುಡುಕಿ ತನ್ನ ಗೂಡನ್ನು ಕಟ್ಟಲು ಪ್ರಾರಂಭಿಸುವುದು. ಮೇಣದಿಂದ ಹಲವಾರು ದುಂಡನೆಯ ಕೋಶಗಳನ್ನು ರಚಿಸಿ, ಹೂಗಳಿಂದ ಸಂಗ್ರಹಿಸಿದ ಮಧು ಮತ್ತು ಪರಾಗವನ್ನು ಕೂಡಿಡುವುದು. ಇಂಥ ಕೋಶಗಳ ಮೇಲೆ ಬೇರೆ ಬೇರೆ ರೀತಿಯ ಮೇಣದ ಕೋಶಗಳನ್ನು ರಚಿಸಿ, ಅವುಗಳಲ್ಲಿ ಮೊಟ್ಟೆಗಳನ್ನಿಡುವುದ. ನಾಲ್ಕು ದಿನಗಳ ಅನಂತರ ಮೊಟ್ಟಯೊಡದು ಮರಿಗಳು ಹೊರಬಂದು ಆಹಾರವನ್ನು ತಿಂದು ಬೆಳೆಯುವುವು. ಆಹಾರ ಮುಗಿದ ನಂತರ, ತಾಯಿ ಮತ್ತೆ ಪರಾಗ ಮತ್ತು ಮಧುವನ್ನು ಹೊರಗಿನಿಂದ ಸಂಗ್ರಹಿಸಿ ತಂದು ಮರಿಗಳಿಗೆ ಉಣಿಸುತ್ತದೆ. ಹತ್ತು ದಿನಗಳ ಅನಂತರ ಸಂಪೂರ್ಣ ಬೆಳೆದ ಮರಿಗಳು ಕೋಶಾವಸ್ಥೆಯನ್ನು ಸೇರಿ ಸಂಪೂರ್ಣವಾಗಿ ರೂಪ ಪರಿವರ್ತನೆಯಾಗಿ 22-23 ದಿನಗಳ ತರುವಾಯ ಜೇನುನೊಣಗಳಾಗಿ ಹೊರಬರುತ್ತವೆ. ಈ ಜೇನುನೊಣದ ಸಮಾಜದಲ್ಲಿ ಮೊಟ್ಟಮೊದಲಿಗೆ ಜಾತಿಭೇದವನ್ನು ನೋಡುತ್ತೇವೆ. ಮೊದಲು ಹುಟ್ಟುವ ಮರಿಗಳೆಲ್ಲವೂ ಬಂಜೆಗಳಾದ ಹಾಗೂ ಸಂಪೂರ್ಣ ಬೆಳೆಯದ ಹೆಣ್ಣುನೊಣಗಳು. ಇವಕ್ಕೆ ಸಂತಾನವೃದ್ಧಿ ಸಾಮಥ್ರ್ಯ ಇಲ್ಲ. ಇವು ತಮ್ಮ ಗೂಡಿನ ಎಲ್ಲಕೆಲಸಗಳ ಜವಾಬ್ದಾರಿಯನ್ನು ಹೊತ್ತು, ತಮ್ಮ ತಾಯಿಯನ್ನು ಗೂಡಿನ `ರಾಣಿ ಎಂದು ಗೌರವಿಸಿ, ಇದು ವರೆಗೂ ಅದು ಮಾಡುತ್ತಿದ್ದ ಕಾರ್ಯವನ್ನೆಲ್ಲ ತಾವೇ ಮಾಡುವುವು. ಇಲ್ಲಿಂದ ಮುಂದೆ ರಾಣಿಯ ಕೆಲಸ ಬರಿಯ ಮೊಟ್ಟೆಗಳನ್ನಿಡುವುದು ಮಾತ್ರ. ಬಂಜೆಗಳಾದ ಈ ಹೆಣ್ಣು ನೊಣಗಳಿಗೆ ಕೆಲಸಗಾರ ನೊಣಗಳು ಎಂದು ಹೆಸರು. ತಮ್ಮ ದೇಹದಿಂದ ಸ್ರವಿಸುವ ಮೇಣದಿಂದ ಹೊಸ ಕೋಶಗಳನ್ನು ರಚಿಸಿ, ಮಧು ಮತ್ತು ಪರಾಗವನ್ನು ಹೊರಗಿನಿಂದ ತಂದು ಸಂಗ್ರಹ ಮಾಡುವುವು. ರಾಣಿ ನೊಣ ಮತ್ತೆ ಹೊಸ ಕೋಶಗಳಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟಮೊದಲು ಇಟ್ಟ 200-400 ಮೊಟ್ಟೆಗಳೆಲ್ಲ ಊಳಿಗದ ನೊಣಗಳಾಗುತ್ತವೆ. ಇದಾದನಂತರ ಇಡಲ್ಪಡುವ ಮೊಟ್ಟೆಗಳು ಸಂತಾನ ಶಕ್ತಿಯುಳ್ಳ ಗಂಡು ಮತ್ತು ಹೆಣ್ಣುನೊಣಗಳಾಗಿ ಹುಟ್ಟುತ್ತವೆ. ತಾಯಿನೊಣ, ಮುಂದಿನ ಪೀಳಿಗೆಯ ರಾಣಿಗಳಾಗುವ ಮೊಟ್ಟೆಗಳನ್ನು ಸ್ವಲ್ಪ ವಿಶಾಲವಾದ ಕೋಶಗಳಲ್ಲೂ, ಕೆಲಸಗಾರ ನೊಣಗಳಾಗುವ ಮೊಟ್ಟೆಗಳನ್ನು ಸ್ವಲ್ಪ ಚಿಕ್ಕ ಕೋಶಗಳಲ್ಲೂ ಇಡುವುದು. ವಿಶಾಲವಾದ ಕೋಶಗಳಿಂದ ಹುಟ್ಟಿಬರುವ ನೊಣಗಳೇ ಮುಂದಿನ ಪೀಳಿಗೆಯ ರಾಣಿ ಮತ್ತು ಗಂಡುನೊಣಗಳು. ಬೇಸಿಗೆಯ ಅಂತ್ಯದಲ್ಲಿ ಹೊರಬೀಳುವ, ಗಂಡು ಹೆಣ್ಣು ನೊಣಗಳು ಮದನಯಾತ್ರೆ ಹೊರಡುವುವು. ಇದನ್ನು ಒಂದು ರೀತಿಯ ಸ್ವಯಂವರ ಎನ್ನಬಹುದು. ಹೆಣ್ಣು ತನ್ನನ್ನು ಓಟದಲ್ಲಿ ಸೋಲಿಸುವ ಶಕ್ತಿಯುಳ್ಳ ಒಂದು ಗಂಡಿನೊಡನೆ ಜೋಡಿಯಾಗುವುದು. ಜೋಡಿಯಾಗಿ ಗರ್ಭಧರಿಸಿದ ಹೆಣ್ಣುನೊಣ ತನ್ನ ಗೂಡಿಗೆ ಮರಳಿ ಬರುವುದು. ಗಂಡುನೊಣಗಳು ಮಾತ್ರ ಒಮ್ಮೆ ಗೂಡನ್ನು ಬಿಟ್ಟವೆಂದರೆ ಮರಳಿ ಹಿಂತಿರುಗುವುದಿಲ್ಲ. ಈ ವೇಳೆಗೆ ಮೊದಲಿನ ರಾಣಿ ನೊಣವು ಸತ್ತು, ಅದರೊಡನೆ ಅದರ ಗೂಡು ಸಹ ನಾಶವಾಗುವುದು. ಆದರೆ ಗರ್ಭಧರಿಸಿದ ಕಿರಿಯ ರಾಣಿ ನೊಣ ಚಳಿಗಾಲವನ್ನು ಒಂಟಿಯಾಗಿ ಕಳೆಯುವುದು. ಚಳಿಗಾಲದ ಅನಂತರ ವಸಂತ ಕಾಲದಲ್ಲಿ ಪುನಃ ತನ್ನ ಸಂಸಾರವನ್ನು ಪ್ರಾರಂಭಿಸುವುದು. ಇದು ಒಂದು ಅಪೂರ್ಣವಾದ ಸಮಾಜ, ಏಕೆಂದರೆ ಈ ಸಮಾಜದ ಆಯಸ್ಸು ಒಂದು ವರ್ಷ ಮಾತ್ರ. ಇದು ಸಮಾಜ ಜೀವನದ ವಿಕಾಸದಲ್ಲಿ ಮಧ್ಯಘಟ್ಟವೆಂದು ಹೇಳುತ್ತಾರೆ.
ಸಂಪೂರ್ಣವಾದ ಸಮಾಜ : ಸಂಪೂರ್ಣ ಸಮಾಜಜೀವನಕ್ಕೆ ಅತ್ಯುತ್ತಮವಾದ ಉದಾಹರಣೆಯೆಂದರೆ ಮಾನವನಿಗೆ ಮಧುವನ್ನು ಒದಗಿಸುವ ಜೇನ್ನೊಣಗಳ ಸಮಾಜ. ಇದು ಕೀಟವರ್ಗಗಳಲ್ಲಿಯೇ ಅತ್ಯುತ್ತಮವಾದ ಮತ್ತು ಸುವ್ಯವಸ್ಥಿತವಾದ ಸಮಾಜ. ಇವುಗಳ ಸಮಾಜದಲ್ಲಿ ರಾಣಿನೊಣ, ಗಂಡುನೊಣ, ಮತ್ತು ಕೆಲಸಗಾರ ನೊಣಗಳೆಂಬ ಮೂರು ಬಗೆಯ ನೊಣಗಳಿವೆ. ಒಂದೊಂದು ಜೇನು ಹುಟ್ಟಿನಲ್ಲಿಯೂ 30,000 ದಿಂದ 80,000ದ ವರೆಗೆ ಕೆಲಸಗಾರ ನೊಣಗಳಿರುವುವು. ಗಂಡುನೊಣಗಳ ಸಂಖ್ಯೆ 1,000 ದಿಂದ 1,500ರ ವರೆಗೆ ಮಾತ್ರ. ರಾಣಿ ಮಾತ್ರ ಒಂದೇ ಒಂದು ಇದು ಸಮಾಜದ ಎಲ್ಲ ಸದಸ್ಯರ ತಾಯಿ, ವಿವಿಧ ಕಾರ್ಯರಂಗಗಳಲ್ಲಿ ಕೆಲಸಮಾಡುವ ಆಯಾ ಬಗೆಯ ವ್ಯಕ್ತಿಗಳ ದೇಹರಚನೆ, ಆಕಾರ, ಗಾತ್ರ, ಗುಣ ಮತ್ತು ನಡತೆಗಳೆಲ್ಲವೂ ಆಯಾ ಕಾರ್ಯಕ್ಕೆ ಅನುಗುಣವಾಗಿರುತ್ತವೆ. ಸಮಾಜದ ವ್ಯಕ್ತಿಗಳೆಲ್ಲವೂ ಒಂದೇ ಒಂದು ಪ್ರಭೇದಕ್ಕೆ ಸೇರಿದ್ದರೂ ಸಹ ಅವುಗಳಲ್ಲಿ ಕಾರ್ಯಕ್ಕನುಗುಣವಾಗಿ ಮೂರು ಬಗೆಗಳಿವೆ. ಇವೆಲ್ಲವೂ ಪರಸ್ಪರ ಸಹಕಾರದಿಂದ ಸಮಾಜದ ಶ್ರೇಯಸ್ಸಿಗಾಗಿ ದುಡಿಯುತ್ತವೆ. ಒಂದು ಸಮಾಜದ ನೊಣಗಳು ತೋರುವ ಸ್ನೇಹ, ತ್ಯಾಗಬುದ್ದಿ, ಒಗ್ಗಟ್ಟು ಮುಂತಾದವು ಅಚ್ಚರಿ ಉಂಟುಮಡುವಂಥವು.
1. ರಾಣಿನೊಣ : ಒಂದು ಗೂಡಿನ ಎಲ್ಲ ನೊಣಗಳ ತಾಯಿ. ಗಾತ್ರದಲ್ಲಿ ಎಲ್ಲದಕ್ಕಿಂತ ದೊಡ್ಡದು. ಮೈಬಣ್ಣ ಹೊಳೆಯುವ ಕಪ್ಪು. ಕಾಲುಗಳು ಅರಿಶಿನ ಬಣ್ಣದವು. ಮೈಮೇಲೆಲ್ಲ ಅತಿ ಸೂಕ್ಷ್ಮವಾದ ರೋಮಗಳಿವೆ. ರೆಕ್ಕೆಗಳು ದೇಹದ ಅರ್ಧಭಾಗವನ್ನು ಮುಚ್ಚಿರುತ್ತವೆ. ಹೊಟ್ಟೆ ಉದ್ದವಾಗಿದೆ. ದೇಹದ ಕೊನೆಯಲ್ಲಿ ಮೊಟ್ಟೆಗಳನ್ನಿಡುವ ಮೊನಚಾದ ಕೊಳವೆಯೊಂದಿದೆ. ಇದು 2-3 ವರ್ಷ, ಒಮ್ಮೊಮ್ಮೆ 5 ವರ್ಷಗಳ ವರೆಗೂ ಬದುಕಿರುವುದು. ತನ್ನ ಜೀವ ಮಾನವನ್ನೆಲ್ಲ ವಂಶಾಭಿವೃದ್ದಿಯಲ್ಲಿಯೇ ಕಳೆಯುವುದು. ಇದರ ತಲೆ ಗುಂಡಗಿದೆ; ಕುಡಿಮೀಸೆಗಳಲ್ಲಿ 12 ಖಂಡಗಳುಂಟು. ಕಣ್ಣುಗಳು ಬಹಳ ಅಗಲ. ಇದರಲ್ಲಿ ಮೇಣದ ಗ್ರಂಥಿಗಳಾಗಲಿ ಪರಾಗವನ್ನು ಸಂಗ್ರಹಿಸುವ ಉಪಾಂಗಗಳಾಗಲಿ ಇಲ್ಲ. ಗರ್ಭಧರಿಸಿ ಗೂಡಿಗೆ ಹಿಂತಿರುಗಿದ ರಾಣಿನೊಣ ಮೊದಮೊದಲು ದಿನ ಒಂದಕ್ಕೆ 12-20 ರಿಂದ ಪ್ರಾರಂಭಿಸಿ ಕ್ರಮೇಣ ದಿನಒಂದಕ್ಕೆ ನೂರಾರು ಮೊಟ್ಟೆಗಳನ್ನಿಡುತ್ತ ಹೋಗುವುದು. ಕೊನೆಯಲ್ಲಿ ದಿನ ಒಂದಕ್ಕೆ 1,500ರಿಂದ 2,000-3,000 ಮೊಟ್ಟಗಳನ್ನಿಡುವುದುಂಟು. ಒಂದು ವರ್ಷದಲ್ಲಿ ರಾಣಿನೊಣ 1,50,000 ದಿಂದ 2,00,000ದ ವರೆಗೂ ಮೊಟ್ಟೆಗಳನ್ನಿಡುತ್ತದೆ ಎಂದು ಹೇಳಲಾಗಿದೆ.
ಪ್ರಾರಂಭದಲ್ಲಿ ಜೇನುಹುಟ್ಟಿನ ಕೋಣೆಗಳೆಲ್ಲ ಖಾಲಿಯಾಗಿರುವಾಗ ರಾಣಿ ವೃತ್ತಾಕಾರವಾಗಿ ಸುತ್ತುತ್ತ ಮೊಟ್ಟೆಗಳನ್ನಿಡುತ್ತ ಹೋಗುತ್ತದೆ. ಕೊನೆಗೆ ಗೂಡಿನ ಕೋಶಗಳೆಲ್ಲವೂ ವಿವಿಧ ಅವಸ್ಥೆಗಳಲ್ಲಿ ಬೆಳೆಯುತ್ತಿರುವ ಮರಿಗಳಿಂದ, ಕೋಶಾವಸ್ಥೆ ಸೇರಿದ ಮರಿಗಳಿಂದ ತುಂಬಿ ಹೋಗಿ ರಾಣಿ ಮೊಟ್ಟೆಯಿಡುವ ವೇಗ ಕಡಿಮೆಯಾಗುವುದು. ವಸಂತಕಾಲದ ವೇಳೆಗೆ, ಮಧುವಿನ ಸುಗ್ಗಿ ಸನ್ನಿಹಿತವಾಗಿ ರಾಣಿಯು ತತ್ತಿಗಳನ್ನಿಡುವುದೂ ಕ್ಷೀಣಿಸಿ, ಬೇಸಿಗೆಯ ವೇಳೆಗೆ ವಂಶಾಭಿವೃದ್ದಿಯ ಕೆಲಸ ಅಂತ್ಯಗೊಳ್ಳುವುದು.
ರಾಣಿಯು ಎರಡು ತರಹ ಮೊಟ್ಟೆಗಳನ್ನಿಡುವುದು. ಒಂದು ಬಗೆಯ ಮೊಟ್ಟೆಗಳು ಪುರುಷಾಣುಗಳೊಡನೆ ಸಂಯೋಗ ಹೊಂದಿ ಗರ್ಭಕಟ್ಟುವುವು. ಇವುಗಳಿಂದ ಹೊರಬರುವ ಡಿಂಬಗಳು ಹೆಣ್ಣು ನೊಣಗಳಾಗಿ ಬೆಳೆಯುತ್ತವೆ. ಮತ್ತೊಂದು ಬಗೆಯವು ಪುರುಷಾಣುಗಳ ಸಂಯೋಗವಿಲ್ಲದೆ ಗರ್ಭಕಟ್ಟದೆಯೇ ಬೆಳೆಯಲಾರಂಭಿಸಿ ಗಂಡುನೊಣಗಳಾಗಿ ಹೊರಬೀಳುವುವು. ಹೀಗೆ ರಾಣಿನೊಣ ತನ್ನ ಗೂಡಿನಲ್ಲಿ ಗಂಡು ಹೆಣ್ಣುಗಳ ಸಂಖ್ಯೆಯನ್ನು ತನ್ನ ಇಷ್ಟದಂತೆ ಮಾರ್ಪಡಿಸಬಲ್ಲುದು. ಗರ್ಭಕಟ್ಟಿದ ಮೊಟ್ಟೆಗಳಿಂದ ಮುಂದಿನ ಪೀಳಿಗೆಯ ರಾಣಿ ಮತ್ತು ಕೆಲಸಗಾರ ನೊಣಗಳು ಹೊರಬೀಳುತ್ತವೆ. ಮೊಟ್ಟೆಗಳನ್ನಿಟ್ಟಮೇಲೆ ರಾಣಿಯ ಕೆಲಸ ಮುಗಿದಂತೆ. ಮರಿಗಳ ಪೋಷಣೆಯ ಜವಾಬ್ದಾರಿಯೆಲ್ಲ ಕೆಲಸಗಾರ ನೊಣಗಳಿಗೆ ಸೇರಿದೆ.
2. ಕೆಲಸಗಾರ ನೊಣಗಳು : ಜೇನ್ನೊಣದ ಸಮಾಜದಲ್ಲಿ ಇವುಗಳ ಸಂಖ್ಯೆಯೇ ಹೆಚ್ಚು. ಇವೆಲ್ಲವೂ ಹೆಣ್ಣುನೊಣಗಳು. ಆದರೆ ಬಂಜೆಗಳು. ಇವುಗಳ ಅಂಡಾಶಯ ಕ್ಷೀಣಿಸಿರುವುದರಿಂದ ಇವಕ್ಕೆ ಸಂತಾನವೃದ್ದಿ ಸಾಮಥ್ರ್ಯ ಇಲ್ಲ. ಗಾತ್ರದಲ್ಲಿ ಚಿಕ್ಕವಾದರೂ ಸಮಾಜದ ಸಮಸ್ತ ಚಟುವಟಿಕೆಗಳನ್ನೆಲ್ಲ ಇವೇ ನಿರ್ವಹಿಸುವುವು. ಬಹಳ ಚಟುವಟಿಕೆಯಿಂದ ಎಡೆಬಿಡದೆ ಕೆಲಸ ಮಾಡುತ್ತವೆ. ಇವುಗಳಿಗೆ ವಿಷದ ಮುಳ್ಳಿದೆ.
3. ಗಂಡುನೊಣಗಳು : ಇವು ಕೆಲಸಗಾರ ನೊಣಗಳಿಗಿಂತ ದೊಡ್ಡವು. ದೇಹ ಕಪ್ಪು ಬಣ್ಣದ್ದು ಗುಂಡಗಿದೆ. ಇವಕ್ಕೆ ಅತ್ಯಂತ ದೊಡ್ಡದಾದ ಕಣ್ಣುಗಳುಂಟು. ಕುಡಿಮೀಸೆಗಳು ಉದ್ದವಾಗಿದ್ದು 13 ಖಂಡಗಳನ್ನು ಒಳಗೊಂಡಿವೆ. ಇವುಗಳ ನಾಲಿಗೆ ಚಿಕ್ಕದು ಮಧುವನ್ನು ಗೂಡಿನಿಂದ ಹೀರಲು ಇಲ್ಲವೇ ಕೆಲಸಗಾರ ನೊಣಗಳ ಬಾಯಿಂದ ಗುಟುಕು ತೆಗೆದುಕೊಳ್ಳಲು ಮಾತ್ರ ಯೋಗ್ಯವಾಗಿದೆ. ಇವಕ್ಕೆ ಸ್ವತ: ಮಧು ಅಥವಾ ಪರಾಗವನ್ನು ಸಂಗ್ರಹಿಸುವ ಸಾಮಥ್ರ್ಯವಿಲ್ಲ. ವಿಷದ ಮುಳ್ಳೂ ಇಲ್ಲ. ಇವು ಬಹಳ ಸೋಮಾರಿಗಳು. ಕೆಲಸಗಾರ ನೊಣಗಳು ಸಂಗ್ರಹಿಸಿಟ್ಟ ಮಧುವನ್ನು ಸ್ವೇಚ್ಚ್ಚೆಯಾಗಿ ಹೀರಿ, ವೃಥಾ ಕಾಲಹರಣ ಮಾಡುತ್ತವೆ. ಮಧ್ನಾಹ್ನ ಬಿಸಿಲು ಇರುವಾಗ ಮಾತ್ರ ಹೊರಬರುತ್ತವೆ. ಆದರೂ ಸಮಾಜದ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಇವುಗಳ ಆವಶ್ಯಕತೆ ಇರುವುದರಿಂದ ಇವುಗಳ ಸೋಮಾರಿತನವನ್ನು ಕೆಲಸಗಾರ ನೊಣಗಳು ಸಹಿಸಿಕೊಂಡಿರುತ್ತವೆ. ಹೊಸರಾಣಿ ನೊಣದ ಜೊತೆ ಲೈಂಗಿಕ ಸಂಪರ್ಕ ಹೊಂದಿದ ನಂತರ ಇವುಗಳ ಅವಶ್ಯಕತೆ ಇರುವುದಿಲ್ಲ. ಮುಂಜಾಗ್ರತೆಯುಳ್ಳ ಕೆಲಸಗಾರ ನೊಣಗಳು ಇವನ್ನು ಗೂಡಿನಿಂದ ಅಟ್ಟುತ್ತವೆ. ಇವು ಗೂಡಿನಿಂದ ಹೊರಹೋಗದಿದ್ದರೆ, ನಾಲ್ಕಾರು ನೊಣಗಳು ಇವುಗಳೊಡನೆ ಕಾದಾಡಿ ರೆಕ್ಕೆಗಳನ್ನು ಕಡಿದುಹಾಕಿ ಅಂಗವಿಕಲರನ್ನಾಗಿ ಮಾಡಿ ಹೊರಗಟ್ಟುತ್ತವೆ.
ಜೇನುಹುಟ್ಟು ಅಥವಾ ಎರಿ : ಇದು ಜೇನು ನೊಣಗಳು ಸ್ರವಿಸಿದ ಮೇಣದಿಂದ ತಯಾರಾಗುವುದು. ಅತ್ಯಲ್ಪ ಪ್ರಮಾಣದ ಮೇಣದಿಂದ ಅತಿಕಡಿಮೆ ಜಾಗದಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಜೇನು ಮತ್ತು ಪರಾಗವನ್ನು ದಾಸ್ತಾನುಮಾಡಲು ಸಾಧ್ಯವಾಗುವಂತೆ ಕ್ರಮಬದ್ದವಾದ ಷಟ್ಕೋನಾಕಾರದ ಕೋಶಗಳಿಂದ ರಚಿತವಾಗಿದೆ. ಜೇನು ಹುಟ್ಟಿನಲ್ಲಿ ಸಾವಿರಾರು ಕೋಣೆಗಳುಂಟು. ಇವು ಎದುರುಬದುರಾಗಿದ್ದು ಜೇನು ಹುಟ್ಟು ಯಾವ ಬದಿಯಿಂದಲೂ ಒತ್ತಡದಿಂದ ಹಾಳಾಗದಂತೆ ರಚಿಸಲ್ಪಟ್ಟಿರುವುದು. ಸಾಮಾನ್ಯವಾಗಿ ಒಂದು ಗೂಡಿನಲ್ಲಿ ಜೇನುನೊಣಗಳ ಪ್ರಭೇದಕ್ಕೆ ಅನುಗುಣವಾಗಿ ಒಂದರಿಂದ ಅನೇಕ ಹುಟ್ಟುಗಳಿದ್ದು, ಅವೆಲ್ಲವೂ ಮೇಲಿನ ಆಸರೆಯಿಂದ ತೂಗುಬಿದ್ದಿರುತ್ತವೆ.
ಕೆಲಸಗಾರ ನೊಣಗಳ ಮೇಣದ ಗ್ರಂಥಿಗಳಲ್ಲಿ ಮೇಣ ಉತ್ಪತ್ತಿಯಾಗಿ, ಅಲ್ಲಿಂದ ಹರಿದು ಬಂದು ನೊಣಗಳ ಹೊಟ್ಟೆಯ ತಳಭಾಗದಲ್ಲಿರುವ ಮೇಣದ ಪಟ್ಟಿಗಳ ಮೇಲೆ ಪದರಪದರವಾಗಿ ಸಂಗ್ರಹಗೊಳ್ಳುತ್ತದೆ. ಒಂದು ಜೀವಂತ ಬಲೆಯಂತೆ ನೂರಾರು ನೊಣಗಳು ಯಾವುದಾದರೂ ಸೂಕ್ತ ಆಸರೆಯ ಮೇಲಿನಿಂದ ಮೇಣದ ಪಟ್ಟಿಗಳಿಂದ ತೆಳುವಾದ ಮೇಣದ ಫಲಕಗಳನ್ನು ತಮ್ಮ ಕಾಲಿನ ತುದಿಯ ಮುಳ್ಳಿನಿಂದ ತೆರೆದು, ಚುಚ್ಚಿ ಅದನ್ನು ತಮ್ಮ ದವಡೆಗಳಿಗೆ ಸಾಗಿಸಿ, ಅಲ್ಲಿ ಮೇಣದ ಪದರವನ್ನು ತಮ್ಮ ಜೊಲ್ಲಿನೊಡನೆ ಬರೆಸಿ ಮೃದುಮಾಡಿ ಅದರಿಂದ ಕೋಣೆಗಳನ್ನು ರಚಿಸುತ್ತವೆ. ಮೇಣ ಹಚ್ಚುಹೆಚ್ಚಾಗಿ ತಯಾರಾಗಲು ಸಾಕಷ್ಟು ಆಹಾರ ಬೇಕಿದ್ದು, ಜೇನುಗೂಡಿನಲ್ಲಿ ಸಾಕಷ್ಟು ಜೇನುತುಪ್ಪ ಮತ್ತು ಪರಾಗವಿದ್ದಾಗ ಮಾತ್ರ ಗೂಡಿನ ರಚನೆ ಬಹು ಚುರುಕಾಗಿ ನಡೆಯುತ್ತದೆ. ಒಂದು ಕೆಜಿ ಮೇಣ ತಯಾರಾಗುವುದಕ್ಕೆ 8-10 ಕೆಜಿಯಷ್ಟು ಜೇನುತುಪ್ಪ ಅಗತ್ಯ. ಜೇನು ಹುಟ್ಟನ್ನು ಮೇಲೆ ಮತ್ತು ಅಕ್ಕಪಕ್ಕಗಳಲ್ಲಿ ಆಸರೆಗಳಿಗೆ ಚೆನ್ನಾಗಿ ಅಂಟಿಕೊಂಡಿರುವಂತೆ ಮಾಡಲು ಒಂದು ವಿಶೇಷವಾದ ಗೋಂದನ್ನು ಕೆಲಸಗಾರ ನೊಣಗಳು ವಿವಿಧ ರೀತಿಯ ಮರಗಿಡಗಳ ಮೊಗ್ಗುಗಳಿಂದ ಸಂಗ್ರಹಿಸಿ ತರುತ್ತವೆ. ಹುಟ್ಟಿನ ಗೋಡೆಯಲ್ಲಿರುವ ಬಿರುಕು ಮುಂತಾದವುಗಳನ್ನು ಮುಚ್ಚುವುದಕ್ಕೆ ಸಹ ಈ ಅಂಟನ್ನು ಉಪಯೋಗಿಸುವುವು. ಇದಕ್ಕೆ ಪ್ರೊಪೋಲಿಸ್ ಎಂದು ಹೆಸರು.
ಜೇನುಗೂಡಿನಲ್ಲಿ ಎರಡು ಮೂರು ಅಳೆತೆಯ ಕೋಣೆಗಳಿರುವುದುಂಟು. ಅತಿ ಚಿಕ್ಕದಾದ ಕೋಣೆಗಳಲ್ಲಿ ಬೆಳೆಯುವ ಡಿಂಬಗಳು ಕೆಲಸಗಾರನೊಣಗಳಾಗಿಯೂ ಅದಕ್ಕೂ ಸ್ವಲ್ಪ ದೊಡ್ಡದಾದ ಕೋಣೆಗಳಲ್ಲಿ ಬೆಳೆಯುವ ಡಿಂಬಗಳು ಗಂಡುನೊಣಗಳಾಗಿಯೂ ಬೆಳೆಯುವುವು. ರಾಣಿಗಳಾಗಿ ಬೆಳೆಯುವ ಮೊಟ್ಟೆಗಳು ಇನ್ನೂ ದೊಡ್ಡ ಗಾತ್ರದ ಮತ್ತು ಕಡಲೆಕಾಯಿ ಆಕಾರದ ಕೋಣೆಗಳಲ್ಲಿರುತ್ತವೆ. ರಾಣಿ ಕೋಣೆಗಳು ಜೇನು ಎರಿಯ ಕೆಳಭಾಗದಲ್ಲಿರುತ್ತವೆ.
ಜೇನುಗೂಡಿನಲ್ಲಿರುವ ಸಣ್ಣ ಮರಿಗಳ ರಕ್ಷಣೆ, ಲಾಲನೆಪಾಲನೆಗಳೆಲ್ಲವೂ ಕೆಲಸಗಾರ ನೊಣಗಳಿಗೆ ಸೇರಿದ್ದು. ಇವನ್ನು ದಾದಿಯರು ಎನ್ನಬಹುದು. ಇವು ಮೊಟ್ಟೆಗಳಿಂದ ಹೊರಬರುವ ಮರಿಗಳನ್ನು ಮೂರು ದಿನಗಳ ವರೆಗೆ, ತಮ್ಮ ಲಾಲಾರಸ ಹಾಗೂ ವಿವಿಧ ರೀತಿಯ ಪೌಷ್ಟಿಕ ಆಹಾರದ ಮಿಶ್ರಣವನ್ನು ಕೊಟ್ಟು ಪೋಷಿಸುತ್ತವೆ. ಈ ಆಹಾರದಲ್ಲಿ ಪ್ರೋಟೀನು ಮತ್ತು ಕೊಬ್ಬು ಹೆಚ್ಚು ಮೊತ್ತದಲ್ಲಿರುತ್ತವೆ. ಇದನ್ನು ಹೆಚ್ಚಾಗಿ ರಾಣಿಯಾಗುವ ಮರಿಗಳಿಗೆ ಮಾತ್ರ ಕೊಡುವುದರಿಂದ ಇದಕ್ಕೆ ರಾಯಲ್ ಜೆಲ್ಲಿ ಅಥವಾ ರಾಜಪಾಕ ಎಂದು ಹೆಸರು. ದಾದಿಯರು ಮೊಟ್ಟೆಯೊಡೆದು ಹೊರಬಂದ ಎಲ್ಲ ಜಾತಿಯ ಮರಿಗಳಿಗೂ ಮೂರು ದಿನಗಳ ವರೆಗೆ ಈ ರಾಜಪಾಕವನ್ನು ಕೊಟ್ಟು ಸಲಹುತ್ತವೆ. ಆದರೆ, ಮುಂದೆ ತಮ್ಮಂತೆಯೇ ಕೆಲಸಗಾರನೊಣಗಳಾಗುವ ಮರಿಗಳಿಗೆ, ನಾಲ್ಕನೆಯ ದಿನದ ಅನಂತರ ಈ ಆಹಾರದ ಬದಲು ಬರಿಯ ಮಧು ಮತ್ತು ಪರಾಗದಿಂದ ತಯಾರಾದ ಜೇನುರೊಟ್ಟಿಯನ್ನು ಕೊಟ್ಟು ಸಾಕುತ್ತದೆ. ಮುಂದೆ ಗಂಡು ನೊಣಗಳಾಗುವ ಮರಿಗಳಿಗೂ ಇದೇ ಆಹಾರವನ್ನು ಕೊಡುತ್ತವೆ. ಜೇನು ರೊಟ್ಟಿಯಲ್ಲಿ ಶರ್ಕರಪಿಷ್ಟಾದಿಗಳು ಹೆಚ್ಚಾಗಿದ್ದು, ಅದನ್ನು ತಿಂದು ಬೆಳೆಯುವ ಮರಿಗಳ ಬೆಳವಣಿಗೆ ಕುಗ್ಗಿ ಅವು ಸಣ್ಣ ಶರೀರವುಳ್ಳವಾಗಿ, ಅವುಗಳ ಅಂಡಾಶಯ ಪೂರ್ಣ ಬೆಳೆಯದೆ ಬಂಜೆಯರಾದ ಕೆಲಸಗಾರ ನೊಣಗಳಾಗಿ ಮಾರ್ಪಾಟು ಹೊಂದುತ್ತವೆ. ರಾಜಪಾಕದಲ್ಲಿ ಪ್ಯಾಂಟೋತೆನಿಕ್ ಆಮ್ಲ ಮತ್ತು ಇನ್ನು ಕೆಲವು ಮಿಟಮಿನ್‍ಗಳಿರುವುದು ತಿಳಿದುಬಂದಿದೆ. ಮುಂದೆ ರಾಣಿಯಾಗುವ ಮರಿಗಳಿಗೆ 6 ದಿನಗಳ ಪೂರ್ತಿ, ರಾಜಪಾಕವನ್ನೇ ಉಣಿಸುವುವು.
ಮರಿಗಳ ಬೆಳೆವಣಿಗೆ : ಜೇನುನೊಣದ ಮೊಟ್ಟೆ 1.5mm. ಉದ್ದವಿದೆ. ಇದರ ಬಣ್ಣ ಬಿಳಿ. ತತ್ತಿಯಿಂದ ಹೊರಬರುವ ಡಿಂಬದ ತೂಕ ಸುಮಾರು 1 mg. ಇದು ಆರು ದಿನಗಳಲ್ಲಿ 200 mg. ಆಹಾರವನ್ನು ಸೇವಿಸಿ, ತೂಕದಲ್ಲಿ 1,500mg ಗಳಷ್ಟು ಹೆಚ್ಚುವುದು. ಈ ಘಟ್ಟವನ್ನು ಜೀರ್ಣಿಸಿಕೊಳ್ಳುವ ಘಟ್ಟ ಎಂದು ಕರೆಯುವರು. ಡಿಂಬದ ಬೆಳೆವಣಿಗೆಗೆ ಒಂದು ನಿರ್ದಿಷ್ಟವಾದ ಉಷ್ಣತೆ ಬೇಕಾಗಿದ್ದು ಜೇನುಹುಟ್ಟಿನಲ್ಲಿ ಯಾವಾಗಲೂ 35(ಅ ಉಷ್ಣತೆ ಇದ್ದೇ ಇರುತ್ತದೆ. ದಾದಿನೊಣಗಳು ಮರಿಗಳಿರುವ ಪ್ರತಿಕೋಣೆಯನ್ನೂ, ದಿನವೊಂದಕ್ಕೆ 1,300 ಸಲ ಭೇಟಿಕೊಟ್ಟು ಆಹಾರವನ್ನು ಒದಗಿಸುತ್ತವೆ. ಒಂದು ಮರಿಯ ಜೀವಿತ ಕಾಲದ 6 ದಿನಗಳಲ್ಲಿ ದಾದಿನೊಣಗಳು ಸುಮಾರು 10,000 ಸಲ ಆಹಾರವನ್ನು ಅವಕ್ಕೆ ಪೂರೈಸುತ್ತವೆ.
ಆದಷ್ಟು ಆಹಾರವನ್ನು ತಿಂದು, ಮರಿಗಳು ಏಳನೆಯ ದಿನ ಕೋಶಾವಸ್ಥೆಯನ್ನು ಸೇರುತ್ತವೆ. ಚೆನ್ನಾಗಿ ಬೆಳೆದು ಬಲಿತ ಮರಿ ಇಡೀ ಕೋಣೆಯನ್ನೆಲ್ಲ ತುಂಬಿಕೊಳ್ಳುವುದು, ಮರಿಗಳು ಹಿಕ್ಕೆಯನ್ನೇ ಹಾಕುವುದಿಲ್ಲ. ಗೂಡಿನ ನೈರ್ಮಲ್ಯಕ್ಕೆ ಇದೂ ಒಂದು ಕಾರಣ. ಆದರೆ ಕೋಶವನ್ನು ರಚಿಸುವುದ್ಕಕೆ ಮೊದಲು ಹಿಕ್ಕೆಯನ್ನು ಹಾಕಿ, ಅದರಿಂದ ತನ್ನ ಹಿಂಭಾಗವನ್ನು ಅಂಟಿಸಿಕೊಳ್ಳುವುದು. ಅನಂತರ ರೇಷ್ಮೆದಾರದಂಥ ಬಲು ನವುರಾದ ದಾರದಿಂದ ತನ್ನ ಸುತ್ತ ಕೋಶವೊಂದನ್ನು ರಚಿಸಿಕೊಳ್ಳುವುದು. ಕೋಶಗಳಿರುವ ಕೋಣೆಗಳನ್ನು, ಕೆಲಸಗಾರ ನೊಣಗಳು ಸೂಕ್ಷ್ಮ ರಂಧ್ರಗಳಿಂದ ಕೂಡಿದ ಮೇಣದ ತಟ್ಟೆಗಳಿಂದ ಮುಚ್ಚುತ್ತವೆ. ಈ ಕೋಣೆಗಳಲ್ಲಿ ರಾಣಿ ನೊಣ 8 ದಿನ, ಕೆಲಸಗಾರ ನೊಣಗಳು 12 ದಿನ ಮತ್ತು ಗಂಡುನೊಣಗಳು 14 ಅಥವಾ 15 ದಿನಗಳ ವರೆಗೆ, ಅಲುಗಾಡದೆ ನಿದ್ರಾವಸ್ಥೆಯಲ್ಲಿರುತ್ತವೆ. ಕೋಶಾವಸ್ಥೆಯನ್ನು ಸೇರಿದ ಮರಿಗಳ ದೇಹದಲ್ಲಿ ವಿಶೇಷ ಮಾರ್ಪಾಟುಗಳಾಗುವುವು. ಈ ಘಟ್ಟದಲ್ಲಿ ಇವುಗಳ ತೂಕ ಕಡಿಮೆಯಾಗುವುದರಿಂದ ಇದನ್ನು ದೇಹ ಕ್ಷಿಯಿಸುವ ಘಟ್ಟ ಎನ್ನುವರು. ಈ ಅವಸ್ಥೆಯಲ್ಲಿರುವಾಗ ಮರಿನೊಣಗಳ ಇಡೀ ದೇಹವೇ ಮೇಣದಂತೆ ಕರಗಿ, ಅದು ಲೇಹ್ಯದ ಮುದ್ದೆಯಂತೆ ಕಾಣುವುದು. ಹೇಗಿದ್ದರೂ ಅದರಲ್ಲಿ ಅನೇಕ ಜೀವಕೋಶಗಳು ಹುಟ್ಟಿ, ಮುಂದಿನ ಜೇನುನೊಣದ ಸರ್ವಾಂಗಗಳೆಲ್ಲ ಮೂಡುತ್ತವೆ. ಹೀಗೆ ಸ್ವಲ್ಪ ರೂಪುಗೊಂಡ ಜೇನುನೊಣ ತನ್ನ ರೇಷ್ಮೆಯ ಕೋಶದಿಂದ ಹೊರಬಿದ್ದು, ಜೇನುಗೂಡಿನ ಕೋಣೆಯಲ್ಲಿ ತನ್ನ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಕೋಶದಿಂದ ಹೊರಬರುವ ನೊಣಕ್ಕೆ ಯಾವುದೇ ಬಣ್ಣವಿಲ್ಲ, ರೆಕ್ಕೆಗಳಿಲ್ಲ. ಇದಕ್ಕೆ ಬರಿಯ ತಲೆ, ಎದೆ, ಹೊಟ್ಟೆ, ಬಾಗಿದ ಕುಡಿಮೀಸೆ, ನಾಲಿಗೆ, ಕಾಲುಗಳು ಮಾತ್ರ ಉಂಟು. ಕಾಲಕ್ರಮೇಣ ಅದರ ಬಣ್ಣ ಮಾಸಲು ಹಳದಿ ಬಣ್ಣಕ್ಕೆ ತಿರುಗುತ್ತದಲ್ಲದೆ ಅದಕ್ಕೆ ರೆಕ್ಕೆಗಳೂ ಹುಟ್ಟಿಕೊಳ್ಳುತ್ತವೆ. ಒಂದು ನಿಶ್ಚಿತ ಅವಧಿಯ ಅನಂತರ ಪೂರ್ತಿ ರೂಪುಗೊಂಡ ನೊಣ ಹೊರಬರುವುದು. ಮೊಟ್ಟೆಯಿಂದ ಹೊರಬಂದ ಡಿಂಬ ರಾಣಿನೊಣವಾಗಲು 16 ದಿನಗಳೂ, ಕೆಲಸಗಾರ ನೊಣವಾಗಲು 21 ದಿನಗಳೂ ಗಂಡುನೊಣವಾಗಲು 24 ದಿನಗಳೂ ಬೇಕಾಗುವುವು.
ಜೇನುನೊಣಗಳ ಬೆಳವಣಿಗೆಯಲ್ಲಿ ಡಿಂಬಗಳು ಸೇವಿಸುವ ಆಹಾರವೇ ಬಹುಮುಖ್ಯವಾದುದು ಎಂಬುದು ವ್ಯಕ್ತವಾಗುತ್ತದೆ. ತತ್ತಿಯಿಂದ ಹೊರಬರುವ ಮರಿಗಳೆಲ್ಲವೂ ಒಂದೇ ವಿಧವಾಗಿವೆಯಾದರೂ, ನಾಲ್ಕನೆಯ ದಿನದ ಅನಂತರ ಅವಕ್ಕೆ ಒದಗುವ ಆಹಾರದ ಮೇಲೆ ಅವುಗಳ ಮುಂದಿನ ಬೆಳವಣಿಗೆ ಅವಲಂಬಿಸಿದೆ. ಬರಿಯ ರಾಜಪಾಕವನ್ನೇ ಉಣ್ಣುವ ಡಿಂಬ ರಾಣಿನೊಣವಾಗಿಯೂ ಮಧು ಮತ್ತು ಪರಾಗವನ್ನು ಸೇವಿಸುವ ಡಿಂಬಗಳು ಕೆಲಸಗಾರ ನೊಣಗಳಾಗಿಯೂ ಬೆಳೆಯುವುವು. ಇದರಿಂದ ಒಂದು ಗೂಡಿನಲ್ಲಿರುವ ಕೆಲಸಗಾರ ನೊಣಗಳು, ಮುಂದೆ ತಮಗೆ ಎಷ್ಟು ರಾಣಿನೊಣಗಳು ಬೇಕು ಎಂಬುದನ್ನು ನಿಶ್ಚಯಿಸಬಲ್ಲವು.
ಸಾವಿರಾರು ವರ್ಷಗಳಿಂದ ಜೇನುನೊಣಗಳ ಸಮಾಜದಲ್ಲಿ ಕಾಣುವ ರೀತಿ ನೀತಿಗಳು ಅನೇಕ ಸಂಶೋಧಕರ ಕುತೂಹಲವನ್ನು ಕೆರಳಿಸಿವೆ. ರೋಷ್ ಎಂಬಾತ ಜೇನುಗೂಡಿನಲ್ಲಿ ನಡೆಯುವ ಸಮಸ್ತ ಕಾರ್ಯಕಲಾಪಗಳನ್ನೆಲ್ಲ ವಿಶದವಾಗಿ ವಿವರಿಸಿದ್ದಾನೆ. ಪರಸ್ಪರ ಸಹಕಾರ, ಕೆಲಸಗಳ ಸಮನ್ವಯ, ಒಗ್ಗಟ್ಟು, ಶ್ರದ್ದೆ, ಕಾರ್ಯದಕ್ಷತೆ ಮೊದಲಾದವನ್ನು ಜೇನುನೊಣಗಳ ನಿತ್ಯ ಜೀವನದಲ್ಲಿ ಕಾಣಬಹುದು. ಜೇನುನೊಣಗಳು ಕಣದಿಂದ ಹೊರಗೆ ಬಂದ ಕೂಡಲೆ, ತಾವಿದ್ದ ಕಣದ ಕಸವನ್ನು ತೆಗೆದು ಸ್ವಚ್ಚಮಾಡುತ್ತವೆ. ಅನಂತರ 2-3 ದಿನಗಳವರೆಗೆ ಈ ಕೆಲಸದಲ್ಲೇ ನಿರತವಾಗಿದ್ದು, ಇಡೀ ಗೂಡನ್ನು ಯಾವಾಗಲೂ ನಿರ್ಮಲವಾಗಿಟ್ಟಿರುತ್ತವೆ. ಗೂಡಿನಲ್ಲಿ ಸತ್ತುಬಿದ್ದ ಇತರ ನೊಣಗಳ ಶವಗಳನ್ನು ಹೊರಕ್ಕೆ ಸಾಗಿಸುವುದು, ಒಂದು ವೇಳೆ ಗೂಡಿನಿಂದ ಹೊರಕ್ಕೆ ಸಾಗಿಸಲು ಅಸಾಧ್ಯವಾದಂಥ ಶತ್ರುಗಳಿದ್ದರೆ ಅವನ್ನು ತಮ್ಮ ವಿಷದ ಮುಳ್ಳಿನಿಂದ ಚುಚ್ಚಿ ಸಾಯಿಸಿ, ಅವು ಕೊಳೆತು ನಾರದಂತೆ, ಅವುಗಳ ಶವವನ್ನು ಮೇಣ ಮತ್ತು ಗೋಂದಿನಿಂದ ಮುಚ್ಚಿ ಸಮಾಧಿ ಮಾಡುವುದು ಮುಂತಾದ ಕಾರ್ಯಗಳಲ್ಲಿ ತೊಡಗುವುದು ಇವುಗಳ ವಿಚಿತ್ರ ಲಕ್ಷಣ.
4-5 ದಿನ ಪ್ರಾಯದ ನೊಣಗಳು, ಕಸ ಬಳಿಯುವ ಕೆಲಸವನ್ನು ಹೊಸದಾಗಿ ಹುಟ್ಟಿಬರುವ ಎಳೆಯ ನೊಣಗಳಿಗೆ ಬಿಟ್ಟುಕೊಟ್ಟು, ಮುಂದೆ ದಾದಿಯರಾಗಿ ಕೆಲಸಮಾಡುತ್ತವೆ. ಮೊಟ್ಟೆಗಳಿಂದ ಹೊರಬರುವ ಮರಿಗಳ ರಕ್ಷಣೆಯನ್ನೂ ಲಾಲನೆಪಾಲನೆಯನ್ನೂ ವಹಿಸಿಕೊಂಡು ಅವಕ್ಕೆ ದಿನಕ್ಕೆ ಸಾವಿರಾರು ಸಲ ಆಹಾರವನ್ನು ಗುಟುಕು ಕೊಟ್ಟು ಪೋಷಿಸುತ್ತವೆ. ಈ ರೀತಿಯಾಗಿ 15 ದಿನಗಳ ವರೆಗೆ ದಾದಿಯರಾಗಿ ಕೆಲಸಮಾಡುತ್ತವೆ. ಈ ಕಾಲದಲ್ಲಿ ಇವು ಗುಂಪುಗುಂಪಾಗಿ, ಪರಸ್ಪರ ಸಹಕಾರದಿಂದ ಗೂಡಿನ ಕಸಬಳಿಯುವುದು. ಮೇಣದಿಂದ ಕೋಣೆಗಳನ್ನು ರಚಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುವುವು. ಇದೇ ಕಾಲದಲ್ಲಿ ಹೊರಗಿನಿಂದ ಜೇನುನೊಣಗಳು ತಂದ ಮಕರಂದ ನೀರಾಗಿರುತ್ತದೆ. ಅದು ಜೇನುತುಪ್ಪವಾಗಬೇಕಾದರೆ ಅದರಲ್ಲಿರುವ ನೀರಿನಂಶ ಕಡಿಮೆಯಾಗಬೇಕು. ಕೆಲಸಗಾರ ನೊಣಗಳು ತಮ್ಮ ರೆಕ್ಕೆಗಳನ್ನು ಸತತವಾಗಿ ಬಡಿದು ನೀರನ್ನು ಕಡಿಮೆ ಮಾಡುವುವು. ಜೇನುಗೂಡಿನ ಕೋಣೆಗಳು ಪಕ್ವವಾದ ಮಧುವಿನಿಂದ ತುಂಬಿದ ಕೂಡಲೆ ಅದರ ಬಾಯನ್ನು ಮೇಣದಿಂದ ಮುಚ್ಚುತ್ತವೆ.
ನೈರ್ಮಲ್ಯ ಪಾಲಕರು : ಜೇನುಗೂಡಿನ ನ್ಯರ್ಮಲ್ಯವನ್ನು ಕಾಪಾಡುವ ಕೆಲವು ನೊಣಗಳೂ ಉಂಟು. ಇಂತ ನೊಣಗಳು ಹೊರಗಿನಿಂದ ಮಧು ಮತ್ತು ಪರಾಗವನ್ನು ತರುವ ಜೇನುನೊಣಗಳನ್ನು, ತಮ್ಮ ಕುಡಿಮೀಸೆಯಿಂದ ಮುಟ್ಟಿದಾಗ, ಅವು ತಮ್ಮ ಮೈಯನ್ನು ಅಲುಗಾಡಿಸಿದರೆ, ಇವುಗಳಿಂದ ಸ್ವಚ್ಛಮಾಡಿಸಿಕೊಳ್ಳಲು ಒಪ್ಪಿಗೆಕೊಟ್ಟಂತೆ. ಕೂಡಲೆ ಒಂದು ಅಥವಾ ಎರಡು ನೊಣಗಳು ಅದರ ಇಬ್ಬದಿಯಲ್ಲೂ ನಿಂತುಕೊಂಡು, ಅದರ ಮೈಮೇಲಿನ ಪರಾಗದ ಧೂಳು, ಮತ್ತಿತರ ಕಸಗಳನ್ನು ತಮ್ಮ ಬಾಯಿಯಿಂದ ಸ್ವಚ್ಚಗೊಳಿಸುವುವು.
ಮೇಣದ ಉತ್ಪತ್ತಿ : 12 ರಿಂದ 18 ದಿನ ಪ್ರಾಯದ ಕೆಲಸಗಾರ ನೊಣಗಳಲ್ಲಿ ಮೇಣದ ಗ್ರಂಥಿಗಳು ಚೆನ್ನಾಗಿ ಬಲಿತು, ಮೇಣ ತಯಾರಾಗುತ್ತದೆ. ಈ ಕಾಲದಲ್ಲಿ ಅವು ಜೇನುತುಪ್ಪವನ್ನು ವಿಶೇಷವಾಗಿ ಕುಡಿಯುತ್ತವೆ. ಜೇನಿನಲ್ಲಿನ ಕೊಬ್ಬಿನಂತೆ ಮೇಣವಾಗಿ ಮಾರ್ಪಟು ಹೊಂದುವುದು. ಅನಂತರ ಸೂಕ್ಷ್ಮವಾದ ನಳಿಕೆಗಳ ಮೂಲಕ ಹರಿದುಬಂದು ಅವುಗಳ ಹೊಟ್ಟೆಯ ಕೆಳಗಡೆ ಪದರ ಪದರವಾಗಿ ಶೇಖರವಾಗುವುದು. ಪ್ರತಿಯೊಂದು ಜೇನ್ನೊಣದ ಹೊಟ್ಟೆಯ ಕೆಳಗಡೆ ಮೇಣದ ಎಂಟು ಪದರಗಳಿವೆ. ಮೂರನೆಯ ವಾರದ ಅಂತ್ಯದಲ್ಲಿ ಮೇಣದ ಗ್ರಂಥಿಗಳು ಕ್ಷಯಿಸಿ ಹೋಗುವುದರಿಂದ ಜೇನ್ನೊಣಗಳು ಮೇಣವನ್ನು ತಯಾರಿಸಲು ಅಸಮರ್ಥವಾಗುತ್ತದೆ. ಆದ್ದರಿಂದ 18ನೆಯ ದಿನದ ಅನಂತರ ಅವು ದ್ವಾರ ಪಾಲಕರರಾಗಿ ಕೆಲಸ ಮಾಡುವುವು. ಗೂಡಿನ ಹೊರಗೇ ಇದ್ದು ಬಹಳ ಜಾಗರೂಕತೆಯಿಂದ ಕಾಯುತ್ತವೆ. ಶತ್ರುಗಳು ಬಂದಾಗ ಇವು ತಮ್ಮ ರೆಕ್ಕೆಗಳನ್ನು ಬಡಿದು ಎಚ್ಚರಿಕೆ ಕೊಡುತ್ತವೆ. ಅನಂಥರ ಒಮ್ಮಲೇ ಶತ್ರುವಿನ ಮೇಲೆ ಬಿದ್ದು ಕಾದಾಡುವುವು.
ಮಧು ಮತ್ತು ಪರಾಗ ಸಂಗ್ರಹಣೆ : ದ್ವಾರಪಾಲಕರಾಗಿ ಕೆಲಸ ಮಾಡಿದ ಮೇಲೆ ಅವು ಮಧು ಮತ್ತು ಪರಾಗ ಶೇಖರಣೆಯಲ್ಲಿ ತೊಡಗುತ್ತವೆ. ಅವು ಗೂಡಿನ ಸುತ್ತ ಕೆಲವು ಕಾಲ ಹಾರಾಡುತ್ತ ಇದ್ದು ತಮ್ಮ ಗೂಡಿಗೆ ಮರಳಿಬರಲು ದಾರಿಯ ಪರಿಚಯ ಚೆನ್ನಾಗಿ ಆದನಂತರ, ಗೂಡಿನಿಂದ ಹೊರಕ್ಕೆ ಹೋಗಿ ಹೊಗಳನ್ನು ಹುಡುಕಿ, ಅವುಗಳಿಂದ ಮಧು ಮತ್ತು ಪರಾಗವನ್ನು ಸಂಗ್ರಹಿಸುವುವು. ಮಧು ಸೂಸುವ ಹೂವನ್ನು ಕಂಡುಕೊಂಡನಂತರ ಪದೇ ಪದೇ ಅದೇ ಹೂವಿನ ಗಿಡಕ್ಕೆ ಹೋಗುವುವು. ತಮ್ಮ ನಾಲಗೆಯ ಸಹಾಯದಿಂದ ಮಕರಂದವನ್ನು ಹೀರಿಕೊಳ್ಳುವುವು. ಮಕರಂದವನ್ನು ತಮ್ಮ ಜಠರದ ಮುಂದಿನ ಭಾಗವಾದ ಜೇನುತುಪ್ಪ ಕೋಶದಲ್ಲಿ (ಹನಿ ಚೇಂಬರ್) ತುಂಬಿಕೊಳ್ಳುವುವು. ಪರಾಗದ ದೂಳನ್ನು ತಮ್ಮ ಹಿಂದಿನ ಕಾಲುಗಳಲ್ಲಿರುವ ಪರಾಗದ ಬುಟ್ಟಿಯಲ್ಲಿ (ಪೋಲನ್ ಬ್ಯಾಸ್ಕೆಟ್) ತುಂಬಿಕೊಂಡು, ಗೂಡಿಗೆ ತರುತ್ತವೆ. ಗೂಡಿಗೆ ಬಂದ ನಂತರ ಪರಾಗ ಮತ್ತು ಮಧುವನ್ನು ಬೇರೆ ಬೇರೆ ಕೋಣೆಗಳಲ್ಲಿ ಕೂಡಿಡುತ್ತವೆ. ಮಕರಂದ ಬರಿಯ ಸುಕ್ರೋಸ್ ಎಂಬ ಸಕ್ಕರೆಯ ದ್ರಾವಣ. ಇದು ಜೇನುನೊಣಗಳ ಜೇನುಕೋಶದಲ್ಲಿರುವಾಗ ಸ್ವಲ್ಪ ಮಟ್ಟಿಗೆ ಜೀರ್ಣಿಸಿ, ಪಕ್ವವಾಗಿ, ಅತ್ಯಂತ ರುಚಿಕರವಾದ ಮಧು ಅಥವಾ ಜೇನುತುಪ್ಪವಾಗಿ ಮಾರ್ಪಾಟಾಗುತ್ತದೆ. ಜೇನುತುಪ್ಪದಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಎಂಬ ಸಕ್ಕರೆಗಳು ಹೆಚ್ಚಾಗಿದ್ದು ನೀರಿನಂಶ ಕಡಿಮೆಯಾಗಿರುವುದು. ಪಕ್ವವಾದ ಜೇನುತುಪ್ಪವನ್ನು ಗೂಡಿನ ಸಾವಿರಾರು ಕೋಣೆಗಳಲ್ಲಿ ಶೇಖರಿಸಿ ಮೊಹರು ಮಾಡುತ್ತವೆ.
ಒಂದು ಜೇನುನೊಣ ಹೆಚ್ಚೆಂದರೆ 70 mg. ಗಳಷ್ಟು ಮಧುವನ್ನು ಶೇಖರಿಸಿ ಹೊತ್ತು ತರಬಲ್ಲದು. ಆದರೂ ಸರಾಸರಿ ಮೊತ್ತ 40 mg. ಮೀರುವುದಿಲ್ಲ. ಅದರಲ್ಲಿ 10 mg. ನಷ್ಟು ಮಕರಂದವನ್ನು ತನ್ನ ಆಹಾರವನ್ನಾಗಿ ಉಪಯೋಗಿಸಿಕೊಂಡು ಉಳಿದ 30 mg. ಗಳಷ್ಟು ಮಧುವನ್ನು ಗೂಡಿನಲ್ಲೇ ಶೇಖರಿಸಿಡುತ್ತದೆ. ದಿನಕ್ಕೆ 10 ಬಾರಿಯಂತೆ ಮಧುವನ್ನು ತಂದರೆ ದಿನವೊಂದಕ್ಕೆ 300 mg. ನಷ್ಟು ಕೂಡಿಡಬಹುದು. ಹೀಗೆ 20 ದಿನಗಳ ವರೆಗೆ ಕೆಲಸಮಾಡಿದರೆ 6,000 mg. ಅಂದರೆ 1/78 ಪೌಂ. ನಷ್ಟು ಇಲ್ಲವೆ 6 mಟ ಎಂದರೆ 120 ತೊಟ್ಟಿನಷ್ಟು ಮಧುವನ್ನು ಶೇಖರಿಸಬಹುದು. ಮಕರಂದ ನೀರಾಗಿದ್ದು, ಅದು ಪಕ್ವವಾದ ಜೇನುತುಪ್ಪವಾಗಲು, ಅದರಲ್ಲಿಯ ನೀರಿನಂಶ ಕಡಿಮೆಯಾಗಬೇಕು. ಆದ್ದರಿಂದ ಒಂದು ಪೌಂಡ್ ಜೇನುತುಪ್ಪವನ್ನು ತಯಾರಿಸಲು 2 ಪೌಂಡಿನಷ್ಟು ಮಕರಂದವನ್ನು ಶೇಖರಿಸಬೇಕು. ಒಂದು ಚಮಚ ಮಧುವನ್ನು ಶೇಖರಿಸಲು ಒಂದು ಜೇನ್ನೊಣ 20,000 ಸಲ ಓಡಾಡಬೇಕಾಗುವುದು. ಅವು ಮಧು ಸಂಗ್ರಹಕ್ಕಾಗಿ 2 ಮೈಲಿ ದೂರದ ವರೆಗೆ ಹಾರಿಹೋಗಬಲ್ಲವು. ಎರಡು ಪೌಂಡಿನಷ್ಟು ಜೇನುತುಪ್ಪವನ್ನು ತಯಾರಿಸಲು ಒಂದು ನೊಣ ಒಂದು ಲಕ್ಷ ಡ್ಯಾಂಡಿಲೈಯನ್ ಹೂಗಳು, ಇಲ್ಲವೆ 15 ಲಕ್ಷದಿಂದ 20 ಲಕ್ಷದಷ್ಟು ಗೊಬ್ಬಳಿಹೂಗಳು, ಇಲ್ಲವೆ 6 ರಿಂದ 7 ಲಕ್ಷ ಕೆಂಪು ಕ್ಲೋವರ್ ಹೂಗಳನ್ನು ಸಂದರ್ಶಿಸಿ, ಅವುಗಳಿಂದ ಮಕರಂದವನ್ನು ಹೀರಿ ತರಬೇಕೆಂದು ಅಂದಾಜು ಮಾಡಲಾಗಿದೆ.
ಜೇನ್ನೊಣಗಳು ಈ ಮಧುಸಂಗ್ರಹಕಾರ್ಯದಲ್ಲಿ ಹಾರಾಡಬೇಕಾದ ದೂರದ ಪ್ರಮಾಣ ಕೂಡ ದಿಗ್ಬ್ರಮೆ ಹಿಡಿಸುವಂಥದು. ಒಂದು ಪೌಂಡ್ ಮಧುವನ್ನು ಶೇಖರಿಸಲು ಒಂದೇ ಒಂದು ಜೇನ್ನೊಣ ಒಂದು ದಿವಸವೂ ವಿರಮಿಸದಂತೆ 8 ವರ್ಷಗಳ ವರೆಗೆ ಕೆಲಸಮಾಡುತ್ತದೆ ಮತ್ತು ಈ ಕೆಲಸಮಾಡುವುದರಲ್ಲಿ ಅದು ಭೂಮಧ್ಯರೇಖೆಯ ಸುತ್ತ, ಎರಡು ಸಲ ಭೂಮಿಯನ್ನು ಪ್ರದಕ್ಷಿಣೆ ಮಾಡಿದಷ್ಟು ದೂರ ಹಾರಾಡುವುದು.
ಜೇನ್ನೊಣಗಳ ಭಾಷೆ : ಜೇನ್ನೊಣಗಳು ಮಧುವನ್ನು ಸಂಗ್ರಹಿಸಿಕೊಂಡು ಗೂಡಿಗೆ ಮರಳಿ ಬಂದ ಅನಂತರ ತಮ್ಮ ಸಹೋದ್ಯೋಗಿಗಳಿಗೆ ಮಧು ಸಿಗುವ ಸ್ಥಳವನ್ನು ತಮ್ಮದೇ ಆದ ಒಂದು ಸಾಂಕೇತಿಕ ಭಾಷೆಯಿಂದ ತಿಳಿಸುತ್ತವೆ. ಈ ಭಾಷೆಯನ್ನು ತಿಳಿದುಕೊಳ್ಳಲು ಆಸ್ಟ್ರಿಯದ ಕಾರ್ಲ್ ವಾನ್ ಫ್ರಿಷ್ ಎಂಬಾತ ಸುಮಾರು 20 ವರ್ಷಗಳವರೆಗೆ ಅನೇಕ ಪ್ರಯೋಗಗಳನ್ನು ನಡೆಸಿ ಜೇನ್ನೊಣಗಳು ಮಧು ಇಂಥ ಕಡೆಯಲ್ಲಿ ದೊರೆಯುತ್ತದೆ ಎಂಬುದನ್ನು ಒಂದು ವಿಶಿಷ್ಟವಾದ ನೃತ್ಯಭಂಗಿಯ ಮೂಲಕ ಇತರ ಸಹೋದ್ಯೋಗಿಗಳಿಗೆ ತಿಳಿಸಿಕೊಡುತ್ತವೆ ಎಂದು ಪತ್ತೆಹಚ್ಚಿದ.
ಮಧು ದೊರೆಯುವ ಸ್ಥಳ ನೂರು ಗಜಗಳ ಅಂತರದೊಳಗೆ ಇದ್ದರೆ, ಮಧುವನ್ನು ತುಂಬಿಕೊಂಡು ಗೂಡಿಗೆ ಬಂದ ನೊಣಗಳು ತಮ್ಮ ಗೂಡಿನ ಮೇಲೆ ಪೂರ್ಣಾಚಂದ್ರಾಕಾರವಾಗಿ ನೃತ್ಯವನ್ನು ಮಾಡುತ್ತವೆ. ಇದನ್ನು ಇತರ ನೊಣಗಳು ಕುತೂಹಲದಿಂದ ವೀಕ್ಷಿಸುತ್ತವಲ್ಲದೆ ಹೀಗೆ ಕುಣಿಯುವ ನೊಣದ ಮೈಯನ್ನು ತಮ್ಮ ಕುಡಿಮೀಸೆಗಳಿಂದ ಮುಟ್ಟಿ, ಅದರ ಮೈಯ ವಾಸನೆಯನ್ನು ಮೂಸಿ, ಅದು ಯಾವ ಜಾತಿಯ ಹೂವನ್ನು ಸಂದರ್ಶಿಸಿ ಮಧುವನ್ನು ತಂದಿದೆ ಎಂದು ಅದು ತಿಳಿದುಕೊಳ್ಳುತ್ತದೆ. ಮಧುವನ್ನು ತರುವ ನೊಣ ಈ ರೀತಿ ಗೂಡಿನ ನಾಲ್ಕಾರು ಕಡೆ ನೃತ್ಯವನ್ನು ಮಾಡುತ್ತದೆ. ಮಧು ದೊರೆಯುವ ಸ್ಥಳ ನೂರು ಗಜಕ್ಕೂ ಹೆಚ್ಚು ದೂರದಲ್ಲಿದ್ದಾಗ, ಮಧುವನ್ನು ಶೇಖರಿಸಿ ತಂದ ಜೇನ್ನೊಣ ಅರ್ಧಚಂದ್ರಾಕಾರವಾಗಿ ನೃತ್ಯಮಾಡುವುದು. ಈ ರೀತಿ ಎರಡು ರೀತಿಯ ನೃತ್ಯದ ಮೂಲಕ ಮಧು ಸಿಗುವ ಸ್ಥಳದ ದೂರವನ್ನು ಇತರ ನೊಣಗಳಿಗೆ ಸೂಚಿಸುವುವು. ಅಲ್ಲದೆ ಮಧು ಗೂಡಿಗೆ ಯಾವ ದಿಕ್ಕಿನಲ್ಲಿದೆ ಎಂಬುದನ್ನೂ ಸಹ ಮತ್ತೊಂದು ರೀತಿಯ ನೃತ್ಯದಿಂದ ತಿಳಿಸಿಕೊಡುವುವು. ಗೂಡಿನ ಮೇಲೆ ಕೆಳಗಿಂದ ಮೇಲುಗಡೆಗೆ ಉದ್ದಕ್ಕೂ ತನ್ನ ಹೊಟ್ಟೆಯನ್ನು ಎಡಬಲಗಳಿಗೆ ವಾಲಿಸತ್ತಾ ಸರಸರನೆ ಓಡುತ್ತ ನೃತ್ಯಮಾಡಿದರೆ-ಸೂರ್ಯನಿರುವ ದಿಕ್ಕಿಗೆ ಹಾರಿಹೋದರೆ ಮಧು ದೊರೆಯುತ್ತದೆ ಎಂದು ಸೂಚನೆ. ಗೂಡಿನ ಮೇಲುಭಾಗದಿಂದ ಕೆಳಭಾಗಕ್ಕೆ ತನ್ನ ಹೊಟ್ಟೆಯನ್ನು ಎರಡೂ ಪಕ್ಕಗಳಿಗೆ ಬಾಗಿಸುತ್ತ ಕುಣಿದರೆ, ಸೂರ್ಯನಿಗೆ ಎದುರಾಗಿ ಹಾರಿಹೋದರೆ ಮಧು ಸಿಗುತ್ತದೆ ಎಂದು ಅರ್ಥ. ಒಂದು ಗೂಡಿನ ಕೆಳಗಿನ ಮೂಲೆಯಿಂದ 60o ಅಂತರದಲ್ಲಿ ಮೇಲಿನ ಮೂಲೆಗೆ ಕುಣಿಯುತ್ತಾ ಹೋದರೆ ಸೂರ್ಯನ ಬಲಕ್ಕೆ 60o ಕೋನದಲ್ಲಿ ಹೋಗಬೇಕೆಂದು ಅರ್ಥ. ಗೂಡಿನ ಮೇಲುಗಡೆಯ ಒಂದು ಮೂಲೆಯಿಂದ ಎದುರಿನ ಮೂಲೆಗೆ ಕುಣಿದಾಡುತ್ತಹೋದರೆ ಸೂರ್ಯನ ಬಲಕ್ಕೆ 120o ಕೋನದಲ್ಲಿ ಹಾರಿಹೋಗಬೇಕೆಂದು ಅರ್ಥ. ಒಂದು ಕ್ಲುಪ್ತ ಅವಧಿಯಲ್ಲಿ ಹಲವಾರು ಬಾರಿ ಅದೇ ರೀತಿಯ ನೃತ್ಯವನ್ನು ಪುನರಾವರ್ತಿಸಿದರೆ, ಅದು ಮಧುವಿನ ಸಾಂದ್ರತೆ ಮತ್ತು ಮಾಧುರ್ಯವನ್ನು ಸೂಚಿಸುವುದು. ಒಂದು ವೇಳೆ ತಾವು ಸಂದರ್ಶಿಸಿ ಬಂದ ಹೂವಿನಲ್ಲಿ ಮಧುವಿಲ್ಲದಿದ್ದರೆ ಆಗ ಅವು ಯಾವುದೇ ರೀತಿಯ ನೃತ್ಯವನ್ನೂ ಮಾಡುವುದಿಲ್ಲ. ಆದ್ದರಿಂದ ಈ ನೃತ್ಯವೇ ಜೇನ್ನೊಣಗಳ ಒಂದು ಸಾಂಕೇತಿಕ ಭಾಷೆ. ಜೇನ್ನೊಣಗಳಿಗೆ ದಿನ ವಿವಿಧ ಗಂಟೆಗಳನ್ನು ತಿಳಿಯುವ ಮತ್ತು e್ಞÁಪಕದಲ್ಲಿಟ್ಟುಕೊಳ್ಳುವ ಮತ್ತು ಕಾಲದ ಅವಧಿಯ e್ಞÁನ ಸಹ ಉಂಟು. ಬೆಳಗ್ಗೆ 8 ರಿಂದ 10 ಗಂಟೆ ವರೆಗೆ ಒಂದು ನಿಶ್ಚಿತ ಜಾಗದಲ್ಲಿ ಜೇನ್ನೊಣಗಳಿಗೆ ಆಹಾರ ಕೊಡುತ್ತಿದ್ದು ಇದಕ್ಕಾಗಿ ಬಂದ ನೊಣಗಳನ್ನು ಕೆಂಪುಬಣ್ಣದಿಂದ ಗುರುತಿಸಿ ಪ್ರಯೋಗಗಳನ್ನು ನಡೆಸಲಾಗಿದೆ. ಈ ರೀತಿ ಗುರುತಿಸಿದ ಜೇನ್ನೊಣಗಳು ಪ್ರತಿನಿತ್ಯವೂ ಕ್ಲುಪ್ತವಾದ ಅವಧಿಯಲ್ಲಿ ಅದೇ ಸ್ಥಳಕ್ಕೆ ಆಹಾರಕ್ಕಾಗಿ ಬರುತ್ತಿದ್ದವು. ಒಂದು ವೇಳೆ ಅಲ್ಲಿ ಆಹಾರವಿರದಿದ್ದರೂ ಅದೇ ವೇಳೆಗೆ ಕೆಂಪು ಗುರುತಿನ ನೊಣಗಳು ಆ ಸ್ಥಳಕ್ಕೆ ಹಾರಿಬರುತ್ತಿದ್ದವು. ಈ ಪ್ರಯೋಗದಿಂದ ಜೇನ್ನೊಣಗಳಿಗೆ ಕಾಲ, ಸ್ಥಳ, ದೂರ ಮತ್ತು ದಿಕ್ಕುಗಳ e್ಞÁನವಿದೆ ಎಂದು ತಿಳಿಯುತ್ತದೆ. ಆದರೆ ಕಾಲವನ್ನು ಯಾವ ರೀತಿಯಲ್ಲಿ ಅವು ತಿಳಿದುಕೊಳ್ಳುತ್ತವೆ ಎಂಬುದನ್ನು ಇನ್ನೂ ಖಚಿತವಾಗಿ ತಿಳಿಯಲಾಗಿಲ್ಲ.
ಮಧುಸಂಗ್ರಹಾಕಾರ್ಯದಲ್ಲಿ ನೂರಾರು ಗಜಗಳ ದೂರ ಹಾರಿಹೋಗಿಬರುವ ಜೇನ್ನೊಣಗಳು ದಾರಿತಪ್ಪದೆ ತಮ್ಮ ಗೂಡಿಗೆ ಬರುವುದು ಕೂಡ ಸೋಜಿಗದ ವಿಷಯವಾಗಿದೆ. ಸುಮಾರು 40 ವರ್ಷಗಳ ಹಿಂದ ಬಿಕೆ ಎಂಬಾತ ಜೇನುಗೂಡಿನಿಂದ, ಮಾನವನ ಕಣ್ಣಿಗೆ ಕಾಣದ ಒಂದು ವಿಧವಾದ ಕಿರಣಗಳು ಎಲ್ಲ ದಿಕ್ಕಿಗೂ ಪ್ರಸರಿಸುತ್ತವೆಂದೂ ದೂರ ಹೋದ ಜೇನ್ನೊಣಗಳಿಗೆ ದಾರಿಯನ್ನು ತೋರುತ್ತವೆ ಎಂದೂ ಪ್ರತಿಪಾದಿಸಿ, ಆ ಕಿರಣಗಳನ್ನು ರೇಡಿಯೋ ಅಲೆಗಳಿಗೆ ಹೋಲಿಸಿದನು. ಆದರೆ ಅದು ನಿಜವಲ್ಲ ಎಂದು ಈಚಿನ ಪ್ರಯೋಗಗಳಿಂದ ಗೊತ್ತಾಗಿದೆ.
ಈಚೆಗೆ ಉಲ್ಪ್ ಎಂಬ ವಿe್ಞÁನಿ ನಡೆಸಿದ ಪ್ರಯೋಗಗಳಿಂದ ಈ ವಿಷಯವಾಗಿ ಹೆಚ್ಚು ಮಾಹಿತಿ ದೊರೆತಿದೆ. ಜೇನುಗೂಡಿನ ರೂಪ, ಆಕೃತಿ ಮತ್ತು ಬಣ್ಣವನ್ನು ವಿವಿಧ ರೀತಿಯಲ್ಲಿ ಬದಲಾಯಿಸಿದರೂ ಸಹ, ಮಧು ಸಂಗ್ರಹಕ್ಕಾಗಿ ಹೊರಗೆ ಹೋದ ನೊಣಗಳು, ತಮ್ಮ ಗೂಡಿನ ವಾಸನೆ ಮತ್ತು ಸುತ್ತಮುತ್ತಲಿರುವ ಕೆಲವೊಂದು ಗುರುತುಗಳ ಸಹಾಯದಿಂದ ತಮ್ಮ ಗೂಡನ್ನು ಸೇರುತ್ತವೆ ಎಂದು ಈತನ ಪ್ರಯೋಗಗಳಿಂದ ತಿಳಿದುಬಂದಿದೆ. ತಮ್ಮ ಕುಡಿಮೀಸೆಯಲ್ಲಿರುವ ಸೂಕ್ಷ್ಮ e್ಞÁನೇಂದ್ರಿಯಗಳ ಸಹಾಯದಿಂದ, ಇವು ತಾವಿರುವ ಜಾಗವನ್ನು ಪತ್ತೆ ಹಚ್ಚುತ್ತವೆ. ಆತನು ನಡೆಸಿದ ಇನ್ನೊಂದು ಪ್ರಯೋಗದಿಂದ ಜೇನ್ನೊಣಗಳಿಗೆ ತಾವು ಯಾವ ದಿಕ್ಕಿನಿಂದ ಎಷ್ಟು ದೂರ ಹಾರಿಬಂದೆವು ಎಂಬುದು ತಿಳಿಯುತ್ತದೆ ಎಂದು ಗೊತ್ತಾಗಿದೆ. ಜೇನ್ನೊಣಗಳು ಸೂರ್ಯರಶ್ಮಿಯ ಸಹಾಯದಿಂದ ತಮ್ಮ ಮಾರ್ಗವನ್ನು ಕಂಡು ಹಿಡಿಯುತ್ತವೆ ಎಂಬ ಅಭಿಪ್ರಾಯವಿದೆಯಾದರೂ ಸೂರ್ಯ ಮೋಡಗಳಿಂದ ಮುಸುಕಿದ್ದರೂ, ಜೇನ್ನೊಣಗಳು ತಮ್ಮ ಹಾದಿಯನ್ನು ಕಂಡುಹಿಡಿದುಕೊಳ್ಳಬಲ್ಲವು ಎಂದು ವ್ಯಕ್ತವಾಗಿದೆ.
ಜೇನ್ನೊಣಗಳು ತಮ್ಮ ಗೂಡಿನ ಹವಾಮಾನ ಯಾವಾಗಲೂ ಒಂದೇರೀತಿಯಲ್ಲಿರುವಂತೆ ಎಚ್ಚರಿಕೆ ವಹಿಸುತ್ತವೆ. ಬೇಸಿಗೆಯಲ್ಲಿ ಸೂರ್ಯನ ಝಳದಿಂದ ಗೂಡಿನ ಉಷ್ಣತೆ ಹೆಚ್ಚಿದ ಕೂಡಲೆ ಹತ್ತಾರು ಕೆಲಸಗಾರ ನೊಣಗಳು ಗೂಡಿನ ಬಾಗಿಲ ಬಳಿ ಸಾಲಾಗಿ ನಿಂತುಕೊಂಡು ಬಹಳ ವೇಗವಾಗಿ ತಮ್ಮ ರೆಕ್ಕೆಗಳನ್ನು ಬಡಿದು, ಗೂಡನ ಉಷ್ಣತೆ ಕಡಿಮೆಯಾಗುವಂತೆ ಮಾಡುತ್ತವೆ. ನಡುಬೇಸಿಗೆಯಲ್ಲಿ ನೂರಾರು ನೊಣಗಳು, ನೀರನ್ನು ಹೀರಿಕೊಂಡು ತಮ್ಮ ಗೂಡಿನ ಕೊಶಗಳಲ್ಲಿ ಶೇಖರಿಸಿಟ್ಟು, ನೀರು ಆವಿಯಾಗಿ, ಜೇನುಗೂಡಿನ ಹವೆ ತಂಪಾಗಿರುವಂತೆ ಮಾಡುವುದೂ ಉಂಟು.
ಚಳಿಗಾಲದಲ್ಲಿ ಚಳಿ ಹೆಚ್ಚಾದರೆ, ಸಾವಿರಾರು ನೊಣಗಳು ಒಂದರ ಮೇಲೆ ಒಂದು ಹತ್ತಿಕೊಂಡು, ಗುಂಪುಕಟ್ಟಿಕೊಳ್ಳುವುವು. ಈ ರೀತಿ ಗುಂಪಿನಲ್ಲಿದ್ದರೆ ಮೈಯಲ್ಲಿಯ ಶಾಖ ಬೇಗನೆ ಕಡಿಮೆಯಾಗುವುದಿಲ್ಲ. ರಾಣಿನೊಣದ ಸುತ್ತಲೂ ನೂರಾರು ನೊಣಗಳು ಮುತ್ತಿಕೊಂಡು, ಅದರ ಮೈಯನ್ನು ಯಾವಾಗಲೂ ಬೆಚ್ಚಗಿಟ್ಟಿರುತ್ತವೆ. ಚಳಿಗಾಲದಲ್ಲಿ ತಮ್ಮ ಮೈಯ ಶಾಖ ಹೆಚ್ಚಾಗುವುದಕ್ಕಾಗಿ ಜೇನ್ನೊಣಗಳು ಹೆಚ್ಚು ಮಧುವನ್ನು ಕುಡಿಯುತ್ತವೆ. ಆದ್ದರಿಂದ ಅವು ಚಳಿಗಾಲಕ್ಕೆ ಮೊದಲೇ ತಮಗೆ ಬಾಕಾದಷ್ಟು ಮಧುವನ್ನು ಸಂಗ್ರಹಿಸಿಡುತ್ತವೆ. ಎಂಥ ಕಠಿಣವಾದ ಚಳಿಗಾಲದಲ್ಲಿಯೂ ಜೇನುಹುಟ್ಟಿನ ಉಷ್ಣತೆ 70o — 90o ಈ. ಇರುತ್ತದೆ.
ವಿಷದ ಮುಳ್ಳು ಮತ್ತು ವಿಷ : ಜೇನ್ನೊಣಗಳು ಕೋಪಬಂದಾಗ, ತಮ್ಮ ವಿಷದ ಮುಳ್ಳಿನಿಂದ ಶತ್ರುಗಳನ್ನು ಚುಚ್ಚಿ, ಅವಕ್ಕೆ ಅತಿಶಯವಾದ ನೋವನ್ನುಂಟುಮಾಡುತ್ತವೆ. ಜೇನುನೊಣದ ಹೊಟ್ಟೆಯಲ್ಲಿ ಎರಡು ವಿಧವಾದ ಗ್ರಂಥಿಗಳಿದ್ದು, ಒಂದು ಗ್ರಂಥಿ ಆಮ್ಲದಂಥ ಒಂದು ದ್ರವವನ್ನೂ ಮತ್ತೊಂದು ಗ್ರಂಥಿ ಕ್ಷಾರವಾದ ಒಂದು ರಸವನ್ನೂ ಉತ್ಪತ್ತಿಮಾಡುತ್ತವೆ. ಜೇನ್ನೊಣವು ಚುಚ್ಚಿದಾಗ ಈ ಎರಡೂ ಗ್ರಂಥಿಗಳ ದ್ರವ, ಸೂಕ್ಷ್ಮವಾದ ನಳಿಕೆ ಮುಖಾಂತರ ಹರಿದು ಬಂದು ಅದು ಚುಚ್ಚಿದ ಶರೀರವನ್ನು ಸೇರುವುದು. ಆಗ ಅಲ್ಲಿ ನವೆ ಮತ್ತು ಉರಿ ಉಂಟಾಗಿ ಚುಚ್ಚಿದ ಜಾಗವನ್ನು ಕರೆದುಕೊಂಡಾಗ ಆ ಸ್ಥಳ ಬಾತುಕೊಳ್ಳುವುದು. ಇದರ ವಿಷ ಬಹಳತೀಕ್ಷ್ಣ. ಈಚೆಗೆ ಈ ವಿಷವನ್ನು ಸಂಧಿವಾತ ಚಿಕಿತ್ಸೆಗಾಗಿ ಉಪಯೋಗಿಸಲಾಗುತ್ತಿದೆ. ವಿಷದ ಮುಳ್ಳು ಜೇನ್ನೊಣಗಳ ಆಯುಧ. ಒಮ್ಮೆ ಚುಚ್ಚಿದ ಜೇನ್ನೊಣ ಮತ್ತೊಮ್ಮೆ ಚುಚ್ಚಲಾರದು. ಮುಳ್ಳು ಗರಗಸದಂಥ ಹಿಂದಕ್ಕೆ ಬಾಗಿದ ಹಲ್ಲುಗಳಿಂದ ಕೂಡಿರುವುದರಿಂದ, ಅದು ಶತ್ರುವಿನ ಮೈಯಲ್ಲೇ ಉಳಿದು, ನೊಣ ತಕ್ಷಣವೇ ಹಾರಲು ಪ್ರಯತ್ನಿಸಿದಾಗ, ಅದರ ಮುಳ್ಳು, ಕರುಳುಸಹಿತವಾಗಿ ಕಿತ್ತುಬಂದು ನೊಣ ಸಾಯುತ್ತದೆ.
ರಾಣಿ ನೊಣ ಮತ್ತು ವಂಶಾಭಿವೃದ್ದಿ : ಪ್ರಾಣಿಗಳ ಜೀವನದಲ್ಲಿ ವಂಶಾಭಿವೃದ್ದಿ ಒಂದು ಮುಖ್ಯ ಕಾರ್ಯ. ಜೇನ್ನೊಣಗಳ ಸಮಾಜದಲ್ಲಿ ರಾಣಿಯೇ ವಂಶಾಭಿವೃದ್ದಿಗೆ ಬಹಳ ಮುಖ್ಯವಾದ ಸದಸ್ಯ ಆದ್ದರಿಂದ, ಅದಕ್ಕೆ ಎಲ್ಲಿಲ್ಲದ ಗೌರವ ಸಲ್ಲುವುದು. ಇತರ ನೊಣಗಳು ರಾಣಿಯನ್ನು ಅತ್ಯಂತ ಎಚ್ಚರಿಕೆಯಿಂದ ಕಾಪಾಡುತ್ತವಲ್ಲದೆ ಅದರ ಸೇವೆಯನ್ನು ಬಹಳ ನಮ್ರತೆಯಿಂದ ಮಾಡುತ್ತವೆ. ಕೆಲವೊಮ್ಮೆ ಒಂದು ಗೂಡಿನ ರಾಣಿ ಇದ್ದಕ್ಕಿಂದಂತೆ ಕಾಣಿಯಾಗುವುದುಂಟು. ಆಗ ಹಲವಾರು ನೊಣಗಳು ಅದಕ್ಕಾಗಿ ಎಲ್ಲ ಕಡೆಯಲ್ಲೂ ಹುಡುಕಾಡುವುವು. ರಾಣಿ ಪತ್ತೆಯಾಗದಿದ್ದರೆ, ಆಗ ಬೇರೊಂದು ರಾಣಿಯನ್ನು ಬೆಳೆಸಲು ಆರಂಭಿಸುವುವು. ಆಂಥ ಸಮಯದಲ್ಲಿ ಹಿಂದಿನ ರಾಣಿ ಇಟ್ಟ ಮೊಟ್ಟೆಗಳಲ್ಲಿ ಕೆಲವನ್ನು ಆರಿಸಿ, ಅವುಗಳಿಂದ ಸಣ್ಣ ಮರಿಗಳು ಹೊರಬಂದ ಕೂಡಲೆ ಅವಕ್ಕೆ ರಾಜಪಾಕವನ್ನು ತಿನ್ನಿಸುವುವು. 6 ದಿನಗಳ ವರೆಗೆ ಹೀಗೆ ತಿನ್ನಿಸಿ ಹುಳುಗಳನ್ನು ವಿಶೇಷ ಕೋಶಗಳಲ್ಲಿರಿಸಿ ಬಾಯನ್ನು ಮುಚ್ಚಿ ಸುತ್ತಲೂ ಕಾವಲು ಕಾಯುತ್ತವೆ. ಹೊಸ ರಾಣಿಯರು ಕೋಶಾವಸ್ಥೆಯನ್ನು ಕಳೆದು ಹೊರಗೆ ಬರುವಾಗ, ಗೂಡಿನಲ್ಲಿ ಎಲ್ಲಿಲ್ಲದೆ ಉತ್ಸಾಹ, ಕೋಲಾಹಲ ಮತ್ತು ಚಟುವಟಿಕೆ ಕಾಣಬರುತ್ತದೆ. ಹೀಗೆ ಬಂದ ರಾಣಿಯರಲ್ಲಿ ಯಾವುದಾದರೂ ಒಂದು ನೊಣ ಗೂಡಿನ ಯಜಮಾನಿಕೆಯನ್ನು ವಹಿಸಿಕೊಳ್ಳುವುದು. ಒಮ್ಮೊಮ್ಮೆ ಈ ರಾಣಿಯರಲ್ಲಿ ದ್ವಂದ್ವಯುದ್ದ ನಡೆಯುವುದೂ ಉಂಟು.
ವಸಂತಋತುವಿನಲ್ಲಿ ಜೇನುಗೂಡಿನ ಕಾರ್ಯಚಟುವಟಿಕೆ ಬಹಳ ಹೆಚ್ಚಾಗಿ ಅದರಲ್ಲಿರುವ ನೊಣಗಳ ಸಂಖ್ಯೆ ಮಿತಿಮೀರಿ ಬೆಳೆಯುವುದು. ಮಧು ಸಂಗ್ರಹಣೆಯೂ ಹೆಚ್ಚುವುದು. ಗೂಡಿನ ನೊಣಗಳ ಸಂಖ್ಯೆ ಯೂವುದೋ ಒಂದು ನಿರ್ದಿಷ್ಟ ಮಿತಿಯನ್ನು ಮೀರಿದರೆ ಜೇನುಗೂಡಿನಲ್ಲಿರುವ ಎಲ್ಲ ಜೇನ್ನೊಣಗಳಿಗೂ ಸಾಕಷ್ಟು ಸ್ಥಳವಿಲ್ಲದೆ, ಅವು ಬೇರೆ ಬೇರೆ ಗುಂಪುಗಳಾಗಿ ವಿಭಾಗವಾಗಿ ಬೇರೆ ಕಡೆ ವಲಸೆಹೋಗುವುವು. ಇದು ನಿಸರ್ಗದ ಒಂದು ಸ್ವಾಭಾವಿಕ ಧರ್ಮ. ಈ ಸಮಯದಲ್ಲಿ 3-4 ರಾಣಿನೊಣಗಳು ಗೂಡಿನಲ್ಲಿರುವುವು. ವಲಸೆಹೋಗುವುದಕ್ಕೆ ಮೊದಲು ಕೆಲವು ನೊಣಗಳು ಬೇಹುಗಾರರಂತೆ (ಸ್ಕೌಟ್ ನೊಣಗಳು) ಅತ್ತಿತ್ತ ತಿರುಗಾಡಿ, ಅನುಕೂಲವಾದ ಜಾಗವನ್ನು ಗೊತ್ತುಮಾಡಿಕೊಂಡು ತಮ್ಮ ಗೂಡಿಗೆ ವಾಪಸ್ಸು ಬರುತ್ತವೆ. ಕೆಲವು ದಿನಗಳಲ್ಲಿ ಹಿರಿಯ ರಾಣಿ ತನ್ನ ಜೊತೆಯಲ್ಲಿ ಸಾವಿರಾರು ಕೆಲಸಗಾರ ನೊಣಗಳನ್ನು ಕರೆದುಕೊಂಡು, ತನ್ನ ಹಳೆಯ ಗೂಡನ್ನು ಕಿರಿಯ ರಾಣಿಯರಿಗೆ ಒಪ್ಪಿಸಿ, ಬೇರೆ ಕಡೆ ವಲಸೆ ಹೋಗುವುದು.
ಹಳೆಯ ಗೂಡಿನಲ್ಲಿ ಸಾಧಾರಣವಾಗಿ ಒಂದು ಗೂಡಿಗೆ ಒಂದೇ ರಾಣಿ ಇರುವುದು. ಹೊರರಾಣಿಯು ಇತರ ರಾಣಿನೊಣಗಳನ್ನು ಮತ್ತು ಇನ್ನೂ ಕೋಶಾವಸ್ಥೆಯಲ್ಲಿರುವ ರಾಣಿನೊಣಗಳನ್ನೂ ಚುಚ್ಚಿ ನಾಶಪಡಿಸುತ್ತವೆ. ರಾಣಿನೊಣಕ್ಕೂ ವಿಷದ ಮುಳ್ಳಿದ್ದು, ಅದನ್ನು ಅದು ಬೇರೆ ರಾಣಿ ನೊಣಗಳೊಡನೆ ಕಾದಾಡುವಾಗ ಮಾತ್ರ ಉಪಯೋಗಿಸುವುದು. ರಾಣಿಯ ವಿಷದ ಮುಳ್ಳಿಗೂ, ಕೆಲಸಗಾರ ನೊಣಗಳ ಮುಳ್ಳಿಗೂ ರಚನೆ ಮತ್ತು ಆಕಾರದಲ್ಲಿ ವ್ಯತ್ಯಾಸವುಂಟು. ರಾಣಿ ಚುಚ್ಚಿದಾಗ ಅದರ ವಿಷದ ಮುಳ್ಳು ಮುರಿಯುವುದಿಲ್ಲ. ಕಿರಿಯ ರಾಣಿಯು ಮಾತ್ರವೇ ಉಳಿದು ಗೂಡಿನ ಆಡಳಿತವನ್ನು ವಹಿಸಿಕೊಳ್ಳುವುದು. ಹೊಸ ರಾಣಿ ಅಧಿಕಾರವನ್ನು ವಹಿಸಿಕೊಂಡ ಕೂಡಲೆ ಗೂಡಿನ ಕೋಲಾಹಲವೆಲ್ಲ ಅಡಗಿ ಮೊದಲಿನಂತೆಯೇ, ಎಲ್ಲ ಚಟುವಟಿಕೆಗಳೂ ಮುಂದುವರಿಯುತ್ತವೆ. ಹೀಗೆ ಅಧಿಕಾರ ವಹಿಸಿಕೊಂಡ ಹೊಸ ರಾಣಿ ಹಲವಾರು ಗಂಡುಗಳೊಡನೆ ಮದನಯಾತ್ರೆ ಹೊರಟು ಹಲವು ಗಂಡಿನೊಡನೆ ಕೂಡಿಕೊಂಡು ವಾಪಸು ಗೂಡಿಗೆ ಬಂದು 3-4 ದಿನಗಳ ನಂತರ ತತ್ತಿಯನ್ನಿಡಲು ಪ್ರಾರಂಭಿಸುವುದು.
ಒಂದು ಗೂಡಿನ ನೊಣಗಳು, ಬೇರೊಂದು ಗೂಡಿನ ರಾಣಿಯನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಪ್ರತಿಯೊಂದು ಗೂಡಿಗೂ ಒಂದು ವಿಶಿಷ್ಟ ವಾಸನೆ ಇರುತ್ತದೆ. ಈ ವಾಸನಾಬಲದಿಂದ ಅವು ತಮ್ಮ ಸಹೋದ್ಯೋಗಿಗಳನ್ನು ಗುರುತು ಹಿಡಿಯುತ್ತವೆ. ಬೇರೆ ಗೂಡಿನ ನೊಣಗಳು ಹತ್ತಿರ ಬಂದರೆ ಅವನ್ನು ಹೊರಕ್ಕೆ ಅಟ್ಟುತ್ತವೆ. ಆದರೆ ಪಾಲಾಗುವ ಸಮಯದಲ್ಲಿ ಮಾತ್ರ ಬೇರೆ ಬೇರೆ ಗೂಡಿನ ನೊಣಗಳು ಒಂದಾಗುವುವು. (ಎಸ್.ವಿ.ಆರ್.ಎ.)
ಜೇನು ಸಾಕಣೆ : ಜೇನುನೊಣ ಪುರಾತನ ಕಾಲದಿಂದಲೂ ಮನುಷ್ಯನಿಗೆ ಪರಿಚಿತವಾಗಿರುವ ಕೀಟ. ವೇದ ಪುರಾಣಗಳಲ್ಲೂ ರಾಮಾಯಣದಲ್ಲೂ ಇದರ ಉಲ್ಲೇಖ ಉಂಟು. ಅಂತೆಯೇ ಇದರ ಸಾಕಣೆಯೂ ಒಂದು ಪುರಾತನ ಉದ್ಯಮವಾಗಿದೆ. ಜೇನು ಸಾಕಣೆ ಒಂದು ಮನಃಸಂತೋಷದ ಉದ್ಯಮವಲ್ಲದೆ, ಲಾಭದಾಯಕವಾದದ್ದೂ ಹೌದು. ಇದರಿಂದ ಜೇನುತುಪ್ಪ ಮತ್ತು ಮೇಣ ದೊರಕುವುದಲ್ಲದೆ, ಇದು ಕೃಷಿ ಬೆಳೆಗಳ ಗುಣ ಮತ್ತು ಉತ್ಪತ್ತಿಯನ್ನು ಹೆಚ್ಚಿಸುವ ಸಾಧನವಾಗಿದೆ.
ಬಹಳ ಹಿಂದಿನಿಂದಲೂ ಜೇನುಸಾಕಣೆ ಒಂದಲ್ಲ ಒಂದು ಒರಟು ರೀತಿಯಲ್ಲಿ ನಡೆಯುತ್ತ ಬಂದಿದೆ. ಆದರೆ 19ನೆಯ ಶತಮಾನದ ಮಧ್ಯಭಾಗದಿಂದೀಚೆಗೆ ಇದರಲ್ಲಿ ಸಾಕಷ್ಟು ಸುಧಾರಣೆ ನಡೆಯಿತು. 1851ರಲ್ಲಿ ಎಲ್. ಎಲ್. ಲಾಂಗ್‍ಸ್ಟ್ರಾಕ್ ಎಂಬಾತ ಕಂಡುಹಿಡಿದ ಬೇರ್ಪಡಿಸುವ ಚೌಕಟ್ಟುಗಳ ಸುಧಾರಿತ ಜೇನುಪೆಟ್ಟಿಗೆ, 1865ರಲ್ಲಿ ಕಂಡುಹಿಡಿದ ಜೇನುತುಪ್ಪ ತೆಗೆಯುವ ಯಂತ್ರ (ಹನಿ ಎಕ್ಸ್‍ಟ್ರಾಕ್ಟರ್) ಮತ್ತು ಕ್ವಿನ್‍ಬಿ ಎಂಬಾತ 1870ರಲ್ಲಿ ಕಂಡುಹಿಡಿದ ಹೊಗೆತಿದಿ (ಸ್ಮೋಕರ್) ಜೇನು; ಸಾಕಣೆಯ ಸುಧಾರಣೆಗೆ ಮೂಲವಾದುವು. ಭಾರತದಲ್ಲಿ ಈ ತರಹದ ಸುಧಾರಿತ ಜೇನುಪೆಟ್ಟಿಗೆಯಲ್ಲಿ ಜೇನು ಸಾಕುವುದು 1882ರಲ್ಲಿ ಬಂಗಾಳದಲ್ಲಿ ಮೊದಲ ಬಾರಿಗೆ ಪ್ರಾರಂಭವಾಯಿತು. ಅನಂತರ ಪಂಜಾಬಿನಲ್ಲಿ 1883ರಲ್ಲಿ ಪ್ರಾಂರಭವಾಯಿತು. ಆಮೇಲೆ ಭಾರತದ ಉಳಿದ ರಾಜ್ಯಗಳಿಗೆ ಈ ಉದ್ಯಮ ಹರಡಿತು.
ಜೇನುನೊಣದ ನಾಲ್ಕು ಬಗೆಗಳಲ್ಲಿ ಮೂರು ಭಾರತದಲ್ಲಿವೆ. ಇವು ಹೆಜ್ಜೇನು (ಏಪಿಸ್ ಡಾರ್ಸೇಟ), ಕೋಲುಜೇನು (ಏಪಿಸ್ ಪ್ಲೋರಿಯ) ಮತ್ತು ತುಡುಬೆ ಜೇನು (ಏಪಿಸ್ ಇಂಡಿಕ ಅಥವಾ ಸೆರಾನ) ಈ ಮೂರಲ್ಲದೆ ಅಷ್ಟು ಮುಖ್ಯವಲ್ಲದ ಮೆಲಿಪೋನ ಮತ್ತು ಟ್ರೈಗೋನ ಬಗೆಗೆ ಸೇರಿದ ಡಾಮರ್ ಜೇನುಗಳು ಕೂಡ ಭಾರತದಲ್ಲಿವೆ. ಇವುಮರದ ಪೊಟರೆ ಅಥವಾ ಗೋಡೆಯ ಬಿರುಕುಗಳಲ್ಲಿ ಗೂಡುಕಟ್ಟುತ್ತವೆ. ಇವು ಕೂಡಿಡುವ ಜೇನುತುಪ್ಪದ ಮೊತ್ತ ಬಲು ಕಡಿಮೆ. ಯೂರೋಪ್ ಮುಂತಾದ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕುವ ಜೇನು ಏಪಿಸ ಮೆಲಿಫೆರ ಎಂಬುದು. ಇದನ್ನೂ ಸಹ ಭಾರತಕ್ಕೆ ಪರಿಚಯಿಸಲಾಗದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ.
ಹೆಜ್ಜೇನು : ಇದು ಭಾರತದಲ್ಲೆಲ್ಲೆ ಕಾಣಬರುವ ಪ್ರಭೇದ. ಗಾತ್ರದಲ್ಲಿ ಬೇರೆ ಜೇನುನೊಣಗಳಿಗಿಂತ ದೊಡ್ಡದು ಎತ್ತರವಾದ ಮರದ ಕೊಂಬೆ, ಬಂಡೆ ಮತ್ತು ಎತ್ತರವಾದ ಕಟ್ಟಡಗಳ ತೊಲೆಗಳಿಂದ ನೇತಾಡುವ ಒಂದೇ ಒಂದು ದೊಡ್ಡ ಎರಿಯನ್ನು ಕಟ್ಟುತ್ತದೆ. ಎರಿ ಸುಮಾರು 2.5 m. ಅಗಲ ಮತ್ತು 1.0 m. ಎತ್ತರವಿರುತ್ತದೆ. ಬೇರೆ ಬಗೆಯ ಜೇನುನೊಣಗಳಿಗಿಂತ ಜೇನು ; ಕೂಡಿಡುವುದು ಹೆಚ್ಚು. ಒಂದು ಜೇನುಗೂಡಿನಿಂದ ವರ್ಷಕ್ಕೆ ಸುಮಾರು 40 ಞg ಗಳ ವರೆಗೂ ಜೇನುತುಪ್ಪವನ್ನು ಪಡೆಯಬಹುದು. ನೊಣಗಳು ಮುಂಗೋಪದ ಸ್ವಭಾವದವು. ಸಾಕಲು ಯೋಗ್ಯವಲ್ಲ. ಸಾಮಾನ್ಯವಾಗಿ ಹೊಗೆ ಮತ್ತು ಬೆಂಕಿಯನ್ನು ಹಾಕಿ ಎರಿಗಳನ್ನು ಕಿತ್ತು ಹಿಂಡಿ ಜೇನುತುಪ್ಪ ಮತ್ತು ಮೇಣವನ್ನು ತಗೆಯುತ್ತಾರೆ. ಈಗ ಈ ಕ್ರಮದಲ್ಲಿಯೂ ಸುಧಾರಿತ ಪದ್ಧತಿಗಳನ್ನು ಕಂಡುಕೊಳ್ಳಲಾಗಿದೆ.
ಕೋಲುಜೇನು : ಈ ಜೇನು; ಗಾತ್ರದಲ್ಲಿ ಸಣ್ಣದು. ಮರಗಿಡಗಳ ಪೊದರುಗಳಲ್ಲಿ ರೆಂಬೆಗಳಿಂದ ನೇತಾಡುವ ಒಂದೇ ಒಂದು ಎರಿಯನ್ನು ಕಟ್ಟುತ್ತದೆ. ಎರಿ ಸುಮಾರು 20-30 ಛಿm. ಅಗಲವೂ 15-20 ಛಿm ಎತ್ತರವೂ ಇರುತ್ತದೆ. ಜೇನು ತುಪ್ಪ ಸಂಗ್ರಹಣೆ ಎರಿಯ ಮೇಲ್ಬಾಗದವಲ್ಲಿಯೂ ಮರಿಗಳ ಸಾಕಣೆ ತಳಭಾಗದಲ್ಲಿಯೂ ಆಗುತ್ತದೆ. ಒಂದು ಎರಿಯಲ್ಲಿ ಸುಮಾರು 1/2 ಞg . ಜೇನುತುಪ್ಪವಿರಬಹುದು. ಈ ಜೇನು ಸ್ವಭಾವತಹ ವಲಸೆ ಹೋಗುವ ಜಾತಿ. ಹೆಜ್ಜೇನಿನ ಹಾಗೆ ಇದೂ ಕೂಡ ಸಾಕಲು ಯೋಗ್ಯವಲ್ಲ.
ತುಡುವೆ ಜೇನು : ಈ ಜೇನು ಭಾರತದ ಎಲ್ಲ ಕಡೆಯಲ್ಲಿ ಕಾಣದೊರೆಯುತ್ತದೆ. ಗಾತ್ರದಲ್ಲಿ ಹೆಜ್ಜೇನಿಗಿಂತ ಸ್ವಲ್ಪ ಸಣ್ಣ ಮರದ ಪೊಟರೆ, ನೆಲದ ಬಿರುಕು, ಹಳೆಹುತ್ತ ಮುಂತಾದ ಕತ್ತಲು ಸ್ಥಳಗಳಲ್ಲಿ ಸಮಾನಾಂತರದಲ್ಲಿ ಕಟ್ಟಿರುವ ಹಲವು ಎರಿಗಳುಳ್ಳ ಗೂಡಿನಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಗೂಡಿನ ಕೆಲವು ಎರಿಗಳಲ್ಲಿ ಜೇನುತುಪ್ಪ ಸಂಗ್ರಹಿಸುತ್ತವೆ. ಮತ್ತು ಇತರ ಎರಿಗಳಲ್ಲಿ ಮೊಟ್ಟೆ, ಮರಿಗಳನ್ನು ಸಾಕುತ್ತವೆ. ಭಾರತದಲ್ಲೆಲ್ಲ ಸಾಕುವುದು ಇದೇ ವಂಶದ ಜೇನನ್ನು, ತುಡುವೆ ಜೇನಿನಲ್ಲಿ ಕೆಲವು ಜಾತಿಗಳಿವೆ. ಇವುಗಳಲ್ಲಿ ಗುಡ್ಡಗಾಡಿನ ಜಾತಿ ಮತ್ತು ಮೈದಾನದ ಜಾತಿಗಳು ಮುಖ್ಯ.
ಭಾರತದಲ್ಲಿ ಸುಧಾರಿತ ಜೇನುಸಾಕಣೆಯ ಜೊತೆಗೆ ಹಿಂದಿನಿಂದಲೂ ರೂಢಿಯಲ್ಲಿರುವ ಹಲವು ರೀತಿಯ ಒರಟು ಪದ್ದತಿಗಳೂ ಉಂಟು. ಮಣ್ಣಿನ ಮಡಕೆ, ಟೊಳ್ಳುಮಾಡಿದ ತೆಂಗಿನ ಅಥವಾ ಈಚಲು ಮರದ ಕಾಂಡದ ತುಂಡು, ಖಾಲಿ ಪೆಟ್ಟಿಗೆ ಮುಂತಾದವನ್ನು ಮನೆಯ ಸೂರಿನ ಕೆಳಗೆ ಅಥವಾ ಮನೆಯ ಸುತ್ತಮುತ್ತ ಹಲಗೆಯ ಮೇಲೆ ಇಟ್ಟು ಜೇನು ಸಾಕಣೆಗೆ ಉಪಯೋಗಿಸುವುದು ವಾಡಿಕೆ. ಈ ಪದ್ದತಿಯಲ್ಲಿ ಜೇನುಹುಳುಗಳು ಹೇಗೆ ಕೆಲಸ ಮಾಡುತ್ತಿವೆ, ಯಾವುದಾದರೂ ಶತ್ರುಗಳು ಗೂಡಿನೊಳಗೆ ಸೇರಿವೆಯೇ ಮುಂತಾದ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಇಲ್ಲ. ಜೇನುತುಪ್ಪ ಬೇಕಾದಾಗ ಗೂಡಿನಿಂದ ಬೇಕಾದಷ್ಟು ತುಪ್ಪ ತುಂಬಿದ ಎರಿಗಳನ್ನು ಕಿತ್ತು ಅವುಗಳನ್ನು ಹಿಂಡಿ ಜೇನುತುಪ್ಪ ತೆಗೆದುಕೊಳ್ಳುವರು. ಈ ರೀತಿ ತೆಗೆದ ಜೇನುತುಪ್ಪ ಬಹಳ ಅಶುದ್ಧವಾಗಿರುತ್ತದೆ. ಏಕೆಂದರೆ, ಇದರಲ್ಲಿ ಮೊಟ್ಟೆ, ಮರಿಗಳ ರಸ ಮತ್ತು ಮೇಣದ ಚೂರುಗುಳು ಸೇರಿರುತ್ತವೆ.
ಸುಧಾರಿತ ಪದ್ದತಿಯೆಂದರೆ ನಿಗದಿಯಾದ ಮರದ ಪೆಟ್ಟಿಗೆ ಗೂಡುಗಳಲ್ಲಿ ಜೇನು ಸಾಕುವುದು. ಭಾರತದ ಅನೇಕ ಕಡೆ ವಿವಿಧ ಅಳತೆಯುಳ್ಳ ಪೆಟ್ಟಿಗೆಗಳನ್ನು ಉಪಯೋಗಿಸುತ್ತಾರೆ. ದಕ್ಷಿಣ ಭರತದಲ್ಲಿ ಬಹುಮಟ್ಟಿಗೆ ನ್ಯೂಟನ್ ಪೆಟ್ಟಿಗೆಗಳನ್ನು ಸ್ವಲ್ಪ ಮಾರ್ಪಡಿಸಿ ಬಳಸುವರು. ಸುಧಾರಿತ ಜೇನು ಸಾಕಣೆಗೆ ಬೇಕಾಗುವ ಇತರ ಸಾಮಗ್ರಿಗಳು ಹೀಗಿವೆ : ಜೇನುತುಪ್ಪ ತೆಗೆಯುವ ಸಾಧನ : ಇದನ್ನು ಉಪಯೋಗಿಸಿ ತುಪ್ಪ ತುಂಬಿದ ಎರಿಗಳಿಂದ ಶುದ್ದವಾದ ತುಪ್ಪವನ್ನು ಎರಿಗಳನ್ನು ಹಾಳುಮಾಡದೆ ತೆಗೆಯಬಹುದು. ಜೇನುನೊಣಗಳನ್ನು ಸೌಮ್ಯ ಸ್ಥಿತಿಗೆ ತರುವುದಕ್ಕೆ ಹೊಗೆತಿದಿಯಿಂದ ಒಂದೆರಡು ಸಾರಿ ಹೊಗೆ ಬಿಡಬೇಕು. ಮೇಣದ ಅಚ್ಚುಹಾಳೆ (ವ್ಯಾಕ್ಸ್ ಫೌಂಡೇಷನ್) : ಇದನ್ನು ಎರಿ ಚೌಕಟ್ಟಿಗೆ ಒದಗಿಸುವುದರಿಂದ ಕೆಲಸಗಾರ ನೊಣಗಳು ಕಡಿಮೆ ಶ್ರಮದಲ್ಲಿ ಎರಿಯನ್ನು ಕಟ್ಟಬಹುದು. ಹೊಸದಾರಿ ಕೂಡಿಸಿರುವ ಜೇನು ಕುಟುಂಬ ಬಿಟ್ಟುಹೋಗದಂತೆ ತಡೆಯಲು ರಾಣಿಗೇಟದ್ದು ಉಪಯೋಗಿಸಬಹುದು. ಈ ಗೇಟಿನಿಂದ ರಾಣಿ ನೊಣ ಹೊರಗೆ ಹೋಗಲಾಗುವುದಿಲ್ಲ. ಮುಖಪರದೆ ಮತ್ತು ಕೈಚೀಲಗಳನ್ನು ಜೇನುಗಳು ಚುಚ್ಚದಂತೆ ಮಾಡಲು ಉಪಯೋಗಿಸಬಹುದು.
ಜೇನುಸಾಕಣೆ ಪ್ರಾರಂಭ ಮಾಡಬೇಕಾದರೆ ಕೆಲವು ವಿಧಾನಗಳಿವೆ. ಮರದ ಪೊಟರೆಯಲ್ಲಾಗಲಿ, ನೆಲದ ಬಿರುಕುಗಳಲ್ಲಾಗಲಿ ಸ್ವಾಭಾವಿಕವಾಗಿ ಸಿಗುವ ಗೂಡಿನಿಂದ ಜೇನು ಸಮುದಾಯವನ್ನು ಸುಧಾರಿತ ಮರದ ಪೆಟ್ಟಿಗೆಗೆ ಹಾಕಿ ಸಾಕಬಹುದು. ಈ ರೀತಿ ಮರದ ಪೆಟ್ಟಿಗೆಗೆ ಜೇನುನೊಣಗಳನ್ನು ಸೇರಿಸುವಾಗ ರಾಣಿನೊಣ ಪೆಟ್ಟಿಗೆಯೊಳಕ್ಕೆ ಬಂದಿದೆ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು. ಹಳೆಯ ಗೂಡಿನಲ್ಲಿದ್ದ ಮೊಟ್ಟೆ, ಮರಿ ಮತ್ತು ಜೇನುತುಪ್ಪವಿರುವ ಕೆಲವು ಎರಿಗಳನ್ನು ಪೆಟ್ಟಿಗೆ ಗೂಡಿನಲ್ಲಿರುವ ಖಾಲಿಚೌಕಟ್ಟುಗಳಿಗೆ ಜೋಡಿಸಿ ಕಟ್ಟಿ ಅನಂತರ ಜೇನುನೊಣಗಳನ್ನು ಪೆಟ್ಟಿಗೆಯೊಳಗೆ ಸೇರಿಸಬೇಕು. ಈ ರೀತಿ ಜೇನು ನೊಣಗಳನ್ನು ಸೇರಿಸಿದ ಮೇಲೆ ಪೆಟ್ಟಿಗೆಯನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಸಾಗಿಸಬಹುದು.
ಜೇನುಸಾಕಣೆ ಪ್ರಾರಂಭ ಮಾಡುವುದಕ್ಕೆ ಎರಡನೆ ವಿಧಾನವೆಂದರೆ ವಲಸೆ ಹೊರಟ ಜೇನುನೊಣಗಳ ಹಿಂಡನ್ನು ಮಡಕೆ ಅಥವಾ ತೆಂಗಿನ ಕಾಂಡದಿಂದ ಮಾಡಿದ ಗೂಡನ್ನು ಅಲ್ಲಲ್ಲೆ ಇಟ್ಟು ಆಕರ್ಷಿಸುವುದು. ಈ ರೀತಿ ಆಕರ್ಷಿತಗೊಂಡ ಸಮುದಾಯವನ್ನು ಸುಮಾರು ಒಂದು ತಿಂಗಳ ವರೆಗೆ ಅದರಲ್ಲಿಯೇ ಬಿಟ್ಟಿದ್ದು ಅನಂತರ ಸುಧಾರಿತ ಪೆಟ್ಟಿಗೆಗೆ ಹಾಕಬಹುದು. ಆಗತಾನೆ ವಲಸೆ ಹೊರಟ ಜೇನ್ನೊಣಗಳ ಹಿಂಡು ಮರದ ಪೊಟರೆ ಮುಂತಾದ ಮರೆಯಾದ ಸ್ಥಳದಲ್ಲಿ ಗೂಡು ಕಟ್ಟುವುದಕ್ಕೆ ಮುಂಚೆ ಯಾವುದಾದರೂ ಮರದ ಕೊಂಬೆಯ ಮೇಲೆ ಸ್ವಲ್ಪ ಹೊತ್ತು ತಂಗುವುದು ವಾಡಿಕೆ. ಇಂಥ ಹಿಂಡನ್ನು ಹಿಡಿದು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು.
ಜೇನುನೊಣಗಳನ್ನು ಪೆಟ್ಟಿಗೆಗೆ ಸೇರಿಸಿದ ಪ್ರಾರಂಭದ ಮೊದಲ ಎರಡು ಮೂರು ದಿನಗಳು ಇವನ್ನು ಗಾಬರಿಗೊಳಿಸಬಾರದು. ರಾಣಿನೊಣ ಹೊರಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕು. ಅನಂತರ ವಾರಕ್ಕೊಂದು ಸಾರಿ ಪೆಟ್ಟಿಗೆ ತೆರೆದು ತಳದ ಮಣೆಯನ್ನು (ಬಾಟಮ್ ಬೋರ್ಡ್) ಶುಚಿ ಮಾಡಬೇಕು. ನೊಣಗಳು ಬಹಳ ಚಟುವಟಿಕೆಯಿಂದ ಕೆಲಸ ಮಾಡುವ ವೇಳೆ ಪೆಟ್ಟಿಗೆಯನ್ನು ತೆರೆದು ಪರೀಕ್ಷಿಸಬೇಕು. ನೊಣಗಳ ಸಂಖ್ಯೆ ಗೂಡಿನಲ್ಲಿ ಬಹಳವಾದಾಗ ಹಾಗೂ ರಾಣಿನೊಣಕ್ಕೆ ಮೊಟ್ಟೆಗಳನ್ನಿಡಲು ಸಾಕಷ್ಟು ಖಾಲಿ ಕೋಣೆಗಳಿಲ್ಲದೇ ಹೋದಾಗ ಇವು ವಲಸೆ ಹೋಗಲು ತಯಾರು ಮಾಡಿಕೊಳ್ಳುತ್ತವೆ. ಆಗ ಗೂಡಿನಲ್ಲಿ ಗಂಡುಗಳು ಮತ್ತು ಹೊಸರಾಣಿ ಕಣಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ವಲಸೆ ಹೋಗುವುದನ್ನು ಹಲವು ರೀತಿಯಲ್ಲಿ ತಪ್ಪಿಸಬಹುದು. ವಿಶೇಷವಾಗಿ ಹೂ ಬಿಡುವ ಕಾಲದಲ್ಲಿ ಮತ್ತು ಬೇಸಗೆಯಲ್ಲಿ ದುಂಬಿಗಳು ಜೇನುತುಪ್ಪ ಕೂಡಿಡುವ ಕಾಲ. ಈ ಕಾಲಕ್ಕೆ ಸರಿಯಾದ ಸಿದ್ದತೆ ಮಾಡಿಕೊಳ್ಳಬೇಕು. ಪೆಟ್ಟಿಗೆಯ ಕೆಳಭಾಗದ ಎರಿಗಳು ತುಂಬಿದಾಗ ಮೇಲ್ಭಾಗದ ಜೇನು ಚೌಕಟ್ಟನ್ನು (ಸೂಪರ್) ಜೋಡಿಸಬೇಕು. ನೊಣಗಳು ಇದರಲ್ಲಿರುವ ಎರಿಗಳಲ್ಲಿ ತುಪ್ಪವನ್ನು ಸೇರಿಸುತ್ತವೆ. ಎರಿಗಳಲ್ಲಿ ತುಪ್ಪ ತುಂಬಿದ ಮೇಲೆ ತುಪ್ಪ ತೆಗೆಯುವ ಯಂತ್ರದ ಮೂಲಕ ಹೊರತೆಗೆಯಬೇಕು. ಈ ರೀತಿ ತೆಗೆದಾಗ ಎರೆಗಳು ಹಾಳಾಗುವುದಿಲ್ಲ ಖಾಲಿಯಾದ ಎರಿಗಳನ್ನು ಮತ್ತೆ ಮತ್ತೆ ಉಪಯೋಗಿಸಿ ಹೆಚ್ಚು ಜೇನು ಶೇಖರಿಸಬಹುದು.
ಜೇನುನೊಣದ ಶತ್ರುಗಳು : ಜೇನುಹುಳುಗಳ ಬಹಳ ಮುಖ್ಯವಾದ ಶತ್ರುವೆಂದರೆ ಮೇಣದ ಪತಂಗ. ಇದರ ಮರಿಹುಳು ಮೇಣದ ಎರಿಗಳನ್ನು ಕೊರೆಯುವುದರಿಂದ ಸಮುದಾಯ ಕ್ರಮೇಣ ನಶಿಸಿ ಕೊನೆಗೆ ಗೂಡನ್ನು ಬಿಟ್ಟು ಹೋಗುತ್ತದೆ. ಚೆನ್ನಾಗಿ ಕೆಲಸ ಮಾಡುತ್ತಿರುವ ಮತ್ತು ಹೆಚ್ಚು ನೊಣಗಳಿರುವ ಗೂಡಿನೊಳಗೆ ಪತಂಗ ಹೊಕ್ಕು ಮೊಟ್ಟೆಗಳನ್ನಿಡಲು ಅವಕಾಶವಿರುವುದಿಲ್ಲ ಕೆಲವು ವೇಳೆ ಹಳದಿಪಟ್ಟಿಯ ಕಡಜವೊಂದು ಗೂಡಿನ ಬಳಿ ಹಾರುವ ಜೇನುನೊಣಗಳನ್ನು ಹಿಡಿದು ತಿನ್ನುತ್ತದೆ.
ಜೇನುಮೇಣ : ಜೇನು ಸಾಕಣೆ ಉದ್ಯಮದ ಒಂದು ಉಪೋತ್ಪನ್ನ ಗ್ರೀಕ್ ಮತ್ತು ರೋಮನರಿಗೆ ಇದರ ಉಪಯೋಗ ಚೆನ್ನಾಗಿ ಗೊತ್ತಿತ್ತು. ಜೇನುನೊಣ ಎರಿಗಳನ್ನು ರಚಿಸುವಾಗ ಬಳಸುವ ವಸ್ತು ಇದೇ.
ಜೇನುಮೇಣ ಹಳೆಯ ಎರಿಗಳಿಂದಲೂ ಮತ್ತು ಜೇನುತುಪ್ಪ ತೆಗೆಯುವ ವೇಳೆಯಲ್ಲಿ ತೆಗೆದುಹಾಕುವ ಗೂಡುಗಳ ಮುಚ್ಚಳ ಮತ್ತು ಚೂರು ಎರಿಗಳಿಂದಲೂ ದೊರೆಯುತ್ತದೆ. ಆಧುನಿಕ ರೀತಿಯ ಜೇನುಸಾಕಣೆಯಲ್ಲಿ ಜೇನುಮೇಣದ ಉತ್ಪತ್ತಿ ಬಹಳ ಕಡಿಮೆ. ಏಕೆಂದರೆ ತುಪ್ಪ ತೆಗೆದ ಎರಿಗಳನ್ನು ತೆಗೆದುಹಾಕದೆ ಮತ್ತೆ ಮತ್ತೆ ಉಪಯೋಗಿಸುವುದರಿಂದ ಮೇಣದ ಉತ್ಪತ್ತಿಗೆ ಅವಕಾಶ ಕಡಿಮೆ. ಭಾರತದಲ್ಲಿ ಹೆಜ್ಜೇನಿಂದ ಎರಿಗಳನ್ನು ಹಿಂಡಿ ತುಪ್ಪವನ್ನು ತೆಗೆಯುವುದರಿಂದ ಈ ಮೂಲಕ ಮೇಣದ ಉತ್ಪತ್ತಿ ಹೆಚ್ಚು.
ಜೇನುಮೇಣ ಸ್ವಲ್ಪ ಹಳದಿಮಿಶ್ರಿತ ಬೂದಿಬಣ್ಣದ ಒಂದು ಘನವಸ್ತು. ಸಾಮಾನ್ಯ ಉಷ್ಣತೆಯಲ್ಲಿ ಸುಲಭವಾಗಿ ಮುರಿಯಬಲ್ಲ ಇದು ಕೈಯಲ್ಲಿ ಹಿಡಿದುಕೊಂಡರೆ ಶಾಖಕ್ಕೆ ಮೃದುವಾಗಬಲ್ಲದು. ನೀರಿನಲ್ಲಿ ಕರಗುವುದಿಲ್ಲ. ಈಥರ್ ಮತ್ತು ಕ್ಲೋರೊಫಾರ್ಮ್‍ಗಳಲ್ಲಿ ಸುಲಭವಾಗಿ ಕರಗುತ್ತದೆ. ಇದು ಸುಮಾರು 63( - 65(ಅ ಉಷ್ಣತೆಯಲ್ಲಿ ಕರಗಿ ನೀರಾಗುತ್ತದೆ. ಜೇನುಮೇಣದಲ್ಲಿ ಸಿರೊಟಿಕ್ ಆಮ್ಲ ಮತ್ತು ಮೈರಿಸಿಲ್ ಮುಂತಾದ ರಾಸಾಯನಿಕ ವಸ್ತುಗಳಿವೆ.
ಪ್ರತಿ ಜೇನುಸಾಕಣೆ ಕೇಂದ್ರದಲ್ಲಿ ಸುಲಭದಲ್ಲಿ ತಯಾರಿಸಬಹುದಾದ ಜೇನು ಮೇಣ ತೆಗೆಯುವ ಒಂದು ಸಾಧನವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಒಂದು ಸಾಮಾನ್ಯ ಡಬ್ಬದ ಮಧ್ಯಭಾಗದಲ್ಲಿ ಒಂದು ತಂತಿಯ ಜಾಲರಿಯನ್ನು ಮೂಡಿಸಬೇಕು. ಹಳೆ ಎರಿ, ತುಂಡು ಎರಿ, ಮುಂತಾದ ಜೇನುತುಪ್ಪ ತೆಗೆಯುವಾಗ ಮತ್ತು ಆಗಾಗ್ಗೆ ಜೇನುಗೂಡು ಪರೀಕ್ಷೆ ಮಾಡುವಾಗ ತೆಗೆಯುವ ಎರಿಯ ಚೂರುಗಳನ್ನು ಈ ಜಾಲರಿಯ ಮೇಲೆ ಹಾಕುತ್ತ ಹೋಗಬೇಕು. ಈ ರೀತಿ ಹಾಕಿದ ಡಬ್ಬವನ್ನು ಬಿಸಿಲಿನಲ್ಲಿ ಇಡುವುದರಿಂದ ಮೇಣ ಕರಗಿ ಡಬ್ಬದ ತಳಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಜೇನುನೊಣಗಳು ಈ ಡಬ್ಬದೊಳಗೆ ಹೋಗಲು ಅವಕಾಶವಿರಬಾರದು. ಹೀಗೆ ಸಂಗ್ರಹಗೊಂಡ ಮೇಣವನ್ನು ಅಗೆದು ಡಬ್ಬವನ್ನು ಆಗಾಗ್ಗೆ ಶುದ್ದಿ ಮಾಡಬೇಕು. ಈ ರೀತಿ ಮಾಡುವುದರಿಂದ ಜೇನು ಸಾಕಾಣೆಯಲ್ಲಿ ಹಾಳಾಗುವ ಮೇಣವನ್ನೆಲ್ಲ ಸ್ವಲ್ಪವೂ ಪೋಲಾಗದಂತೆ ಕೂಡಿಡಬಹುದು. ಹೆಜ್ಜೇನಿನ ಎರಿಗಳಂತೆ ಹೆಚ್ಚು ಎರಿಗಳೇನಾದರೂ ಇದ್ದರೆ, ಅವನ್ನು ಸ್ವಲ್ಪ ನೀರು ಹಾಕಿ ಯಾವುದಾದರೂ ಪಾತ್ರೆಯಲ್ಲಿ ಕರಗಿಸಬೇಕು. ಈ ರೀತಿ ಕರಗಿಸಿದಾಗ ಮೇಣವೆಲ್ಲಾ ಕರಗಿ ಪಾತ್ರೆಯ ತಳಭಾಗಕ್ಕೆ ಸೇರುತ್ತದೆ. ಹಗುರವಾದ ಕಸಕಡ್ಡಿ ಮೇಲಕ್ಕೆ ತೇಲುತ್ತವೆ. ಭಾರವಾದದ್ದು ಕರಗಿದ ಮೇಣದ ತಳಭಾಗದಲ್ಲಿರುತ್ತವೆ. ಅನಂತರ ಕಾದ ಮೇಣವನ್ನು ತಣ್ಣಗೆ ಮಾಡುವುದರಿಂದ ಗಟ್ಟಿಯಾಗುತ್ತದೆ. ಈ ರೀತಿಯಾಗಿ ಗಟ್ಟಿಯಾದ ತಳಭಾಗ ಮತ್ತು ಮೇಲ್ಬಾಗದಲ್ಲಿ ಕಚ್ಚಿಕೊಂಡಿರುವ ಕಸಕಡ್ಡಿಯನ್ನು ಚಾಕುವಿನಿಂದ ಒಡೆದು ತೆಗೆಯಬಹುದು. ಮತ್ತೆ ಮತ್ತೆ ನೀರು ಹಾಯಿಸುವುದರಿಂದ ಕಸಕಡ್ಡಿ ಬೇರ್ಪಡಿಸುವುದರಿಂದ ಶುದ್ದವಾದ ಮೇಣವನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ಮೇಣ ಕರಗುತ್ತದೆ. ಹೊಸ ಎರಿಗಳಿಂದ ಮತ್ತು ಕಾಡುಗಳ ಮುಚ್ಚಳಗಳಿಂದ ಬರುವ ಮೇಣ ಬಹಳ ಉತ್ತಮವಾದದ್ದು ಮತ್ತು ಅದಕ್ಕೆ ಹೆಚ್ಚು ಬೆಲೆ ಉಂಟು.
ಜೇನುಮೇಣವನ್ನು ವಿವಿಧ ಕೈಗಾರಿಕೆಗಳಲ್ಲಿ ಉಪಯೋಗಿಸುತ್ತಾರೆ. ಇದರ ಮುಖ್ಯ ಉಪಯೋಗ ಮುಖಕ್ಕೆ ಹಚ್ಚುವ ಸ್ನೋ ಮತ್ತು ಕ್ರೀಮ್ಸ್, ಮುಲಾಮು, ತುಟಿಯ ಬಣ್ಣ ಮುಂತಾದವುಗಳನ್ನು ತಯಾರು ಮಾಡುವ ಕೈಗಾರಿಕೆಯಲ್ಲಿ, ಚರ್ಚ್‍ಗಳಲ್ಲಿ ಹತ್ತಿಸುವ ಮೇಣದ ಬತ್ತಿಗಳ ತಯಾರಿಕೆಯಲ್ಲೂ ಅದರ ಬಳಕೆಯುಂಟು. ಜೇನುಮೇಣ ಕರಗುವ ಉಷ್ಣತೆ ಬೇರೆ ಮೇಣಗಳಿಗಿಂತ ಏಕವಾಗಿರುವುದರಿಂದ ಈ ಮೇಣದ ಮತ್ತಿಗಳನ್ನು ಹತ್ತಿಸಿದಾಗ ಅವು ಬಗ್ಗುವುದಿಲ್ಲ. ಅಲ್ಲದೆ ಜೇನುಮೇಣದಿಂದ ಮಾಡಿದ ಬತ್ತಿಗಳಿಂದ ಹೊಗೆ ಬರುವುದೂ ಕಡಿಮೆ. ಮೇಲಾಗಿ ಜೇನು ಸಾಕಾಣೆಯಲ್ಲಿ ಉಪಯೋಗಿಸುವ ಮೇಣದ ಎಳೆಗಳನ್ನು ಗೋಡೆಗಳಿಗೆ ಬಳಿಯುವ ಬಣ್ಣ, ವಾರ್ನಿಷ್ ತಯಾರಿಕೆಯಲ್ಲಿ ಇದರ ಉಪಯೋಗ ಬಹಳ. ಇದೂ ಅಲ್ಲದೆ ಪಾದರಕ್ಷೆಗೆ ಬಳಿಯುವ ಬಣ್ಣ, ಅಚ್ಚು ತಯಾರಿಕೆ, ಪ್ರತಿಮೆಗಳನ್ನು ಮಾಡುವುದು ಮುಂತಾದ ಉದ್ಯಮಗಳಲ್ಲೂ ಮೇಣದ ಬಳಕೆ ಇದೆ. ದಂತಚಿಕಿತ್ಸೆಯಲ್ಲಿ ಬೇಕಾಗುವ ಕೆಲವು ವಸ್ತುಗಳ ತಯಾರಿಕೆಯಲ್ಲೂ ಜೇನುಮೇಣದ ಬಳಕೆ ಇದೆ. (ಜಿ.ಪಿ.ಸಿ.) (ಪರಿಷ್ಕರಣೆ : ಡಾ. ಗವಿಗೌಡ)