ಪುಟ:ಕರ್ನಾಟಕ ಗತವೈಭವ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
- ೧೩ -

ಗಳ ಪ್ರಯೋಗಗಳನ್ನೂ ಮೇಳಯಿಸಿ, ಇದನ್ನು ಬರೆದಿರುವದರಿಂದ, ಭಾಷೆಯ ದೃಷ್ಟಿಯಿಂದ ಇದು ಸರ್ವಥಾ ನಿರ್ದುಷ್ಟವಾಗಿರದಿದ್ದರೂ, ಕನಿಷ್ಟ ಪಕ್ಷಕ್ಕೆ ಯಾರಿಗೂ ಆತಂಕವನ್ನುಂಟುಮಾಡಲಿಕ್ಕಿಲ್ಲೆಂದು ನಂಬಿದ್ದೇವೆ.
ಹಿಂದಕ್ಕೆ ಕರ್ನಾಟಕರಾಗಿರದಿದ್ದರೂ ಈಗ ಕರ್ನಾಟಕರಾಗಿರುವ ನಮ್ಮ ಮುಸಲ್ಮಾನ ಬಂಧುಗಳ ರಾಜ್ಯಗಳಾದ ವಿಜಾಪುರ ಮೈಸೂರ ಇವೇ ಮುಂತಾದವುಗಳ ವೈಭವದ ವಿಷಯವಾಗಿ ನಾವು ಯೋಗ್ಯವಾದ ಅಭಿಮಾನ ತಾಳುವದು ಭಾವೀ ರಾಷ್ಟ್ರೀಯತ್ವದ ದೃಷ್ಟಿಯಿಂದ ಅತ್ಯಂತ ಅವಶ್ಯವಾಗಿದೆ. ಆದರೆ, ಭಾವೀ ಕರ್ನಾಟಕತ್ವದ ವಿಷಯವನ್ನು ಮತ್ತೊಂದು ಪ್ರಸಂಗದಲ್ಲಿ ನಾವು ಸೇರಿಸತಕ್ಕವರಿರುವದರಿಂದ, ಕನ್ನಡಿಗರು ಆ ಬಗ್ಗೆ ನಮ್ಮನ್ನು ಈಗ ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇವೆ.
ಮೊದಲನೆಯ ಆವೃತ್ತಿಯನ್ನು ಹೊರಡಿಸಿದಾಗ ಕಾಗದದ ಬೆಲೆಯು ಮೊದಲೇ ಏರಿತ್ತು. ಆದರೆ, ಅದು ಮತ್ತೆ ಏರುತ್ತೇರುತ್ತ ಹೋಗಿ ಈ ಆವೃತ್ತಿಯ ಮುದ್ರಣದ ಕಾಲಕ್ಕೆ ಅದು ಇಮ್ಮಡಿಯಾದುದರಿಂದ, ಅನಿರ್ವಾಹ ಪಕ್ಷಕ್ಕೆ ಬೆಲೆಯನ್ನು ಸ್ವಲ್ಪಮಟ್ಟಿಗೆ ಏರಿಸಲೇ ಬೇಕಾಯಿತು.
ಕೊನೆಗೆ, ನಮಗೆ ನೆರವಾದ ಮೇಲ್ಕಾಣಿಸಿದ ಮಹನೀಯರಿಗೂ, ಬೆನ್ನು ಚಪ್ಪರಿಸಿ ನಮಗೆ ಹುರುಪು ಕೊಟ್ಟ ಹಿರಿಯರಿಗೂ ಮಿತ್ರರಿಗೂ ಪತ್ರಿಕಾ ಸಂಪಾದಕರಿಗೂ ವಂದನೆಗಳನ್ನು ಸಮರ್ಪಿಸದಿದ್ದರೆ, ನಾವು ಕೃತಘ್ನರಾಗಬೇಕಾದೀತು! ಹಾಗೆಯೇ, ಧರ್ಮಪ್ರಕಾಶ ಪ್ರೆಸ್ಸಿನವರು ಈ ಪುಸ್ತಕಕ್ಕೆ ಈ ಅಂದವಾದ ಉಡಿಗೆಯನ್ನುಡಿಸದಿದ್ದರೆ, ಇದಕ್ಕೆ ಈ ಮೋಹಕ ಸ್ವರೂಪವೇ ಇರುತ್ತಿದ್ದಿಲ್ಲ.
ತ್ತೆ ಮತ್ತೆ ಹೇಳುವದೇನು? ಬಹಳ ದಿವಸಗಳಿಂದ ಬೀಳುವಾತುಗಳಿಗೀಡಾದುದರಿಂದ ಖತಿಗೊಂಡಿರುವ ಕನ್ನಡಿಗರು ಹೀಗೆ ಧಾತುಗುಂದದೆ, ಭರದಿಂದೆದ್ದು ಕರ್ನಾಟಕದ ಕೀರ್ತಿಯನ್ನು ನಾಲ್ಕೂ ಕಡೆಗೆ ಚಡಾಳಿಸುವಂತೆ ಮಾಡಬೇಕೆಂದೂ ಕರ್ನಾಟಕ ದೇವಿಯು ಕನ್ನಡಿಗರ ದುರಿತಗಳೆಲ್ಲವನ್ನೂ ದುವ್ವಾಳಸಲೆಂದೂ ಅನನ್ಯ ಭಾವದಿಂದ ಆ ಶ್ರೀಹರಿಯನ್ನು ಪ್ರಾರ್ಥಿಸಿ ಈ ಪ್ರಸ್ತಾವನೆಯನ್ನು ಮುಗಿಸುವವು.

ವೆಂಕಟೇಶ ಭೀಮರಾವ ಆಲೂರ.

ಧಾರವಾಡ
೨೦-೧೨-೧೮೧೯.