ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆತ್ಮ
- ಕನ್ನಡ ವಿಕಿಯಲ್ಲಿ ಹಾಕಿದೆ:ಆತ್ಮ
- ಆತ್ಮ
ಈ ಶಬ್ದ ಅನ್ ಧಾತುವಿನಿಂದ ಬಂದಿದೆ. ಅನ್ ಎಂದರೆ ಶ್ವಾಸಿಸು, ಉಸಿರಾಡು ಎಂದರ್ಥ. ಜೀವನದ ಉಸಿರೇ ಆತ್ಮ. ಕ್ರಮೇಣ ಅದಕ್ಕೆ ಜೀವನ, ವ್ಯಕ್ತಿಯ ಅಂತಃಸತ್ತ್ವ, ಜೀವಾತ್ಮ ಎಂಬ ಪ್ರಯೋಗಗಳಿಂದ ಅರ್ಥವೈಶಾಲ್ಯ ಬಂದಿದೆ. ಜೀವನ ಪ್ರಾಣ ಮತ್ತು ಪ್ರಜ್ಞೆಯನ್ನೊಳಗೊಂಡು ಆತ್ಮ ಅವನ್ನು ಮೀರಿದ ಅಸ್ತಿತ್ವವನ್ನು ಹೊಂದಿದೆ. ಆದ್ದರಿಂದಲೆ ಅದನ್ನು ನಶಿಸುವ ದೇಹ, ಪ್ರಾಣ, ಮನಸ್ಸು, ಬುದ್ಧಿ ಇವುಗಳಿಂದ ಭಿನ್ನವಾದದ್ದು, ಜನನ ಮರಣ ರಹಿತವಾದದ್ದು, ಎಂದು ತಿಳಿಯಬೇಕು. ಆತ್ಮಜ್ಞಾನ ಲಭಿಸಿದಾಗ ವಿಕಾರಗಳೆಲ್ಲವೂ ಅಳಿಸಿಹೋಗುತ್ತವೆ. ಜೀವನನ್ನು ಚೇತನಗೊಳಿಸಿ, ಬುದ್ಧಿಗೆ ಆಧಾರವಾಗಿರುವ ಸತ್ಯವೇ ಆತ್ಮವಸ್ತು.
ಆತ್ಮದ ಸ್ವರೂಪವನ್ನು ಕುರಿತು ಉಪನಿಷತ್ತುಗಳಲ್ಲಿ ಪ್ರಶ್ನೋತ್ತರಗಳಿವೆ. ಮುಖ್ಯವಾದ ಉಪನಿಷತ್ತುಗಳಂತೂ ಈ ಪ್ರಶ್ನೆಯನ್ನು ಒಂದಲ್ಲ ಒಂದು ರೀತಿ ಚರ್ಚಿಸಿವೆ. ಕಠೋಪನಿಷತ್ತಿನಲ್ಲಿ ಮೃತ್ಯುವಿಂದಾಚೆಗೆ ಆತ್ಮ ಏನಾಗುತ್ತದೆ ಎಂಬ ವಿಚಾರ ನಿರೂಪಣೆಯನ್ನು ನಚಿಕೇತ-ಯಮರ ಸಂವಾದರೂಪದಲ್ಲಿ ಕೊಡಲಾಗಿದೆ. ಜನ್ಮ, ಪುನರ್ಜನ್ಮಗಳನ್ನೂ ವಿಚಾರ ಮಾಡಲಾಗಿದೆ. ಆದ್ದರಿಂದ ಇದನ್ನು ಶವಸಂಸ್ಕಾರ ಕಾಲದಲ್ಲಿ ಪಾರಾಯಣ ಮಾಡುವ ಕ್ರಮವಿದೆ. ಮುಂಡಕೋಪನಿಷತ್ತಿನಲ್ಲಿ ಆತ್ಮ ಸಾಕ್ಷಾತ್ಕಾರದ ಮಾರ್ಗದರ್ಶನವಿದೆ. ಈಶೋಪನಿಷತ್ತು ಆತ್ಮಜ್ಞಾನದ ಮಹತ್ವವನ್ನು ಎತ್ತಿ ತೋರಿಸಿದೆ. ಛಾಂದೋಗ್ಯಉಪನಿಷತ್ತಿನಲ್ಲಿ ತತ್ತ್ವಮಸಿ ಶ್ವೇತಕೇತೋ ಎಂಬ ಮಹಾವಾಕ್ಯದ ಪ್ರಕರಣದಲ್ಲಿ ಆತ್ಮಜ್ಞಾನದ ವಿವರಣೆ ವಿಸ್ತಾರವಾಗಿಯೂ ಸುಸ್ಪಷ್ಟವಾಗಿಯೂ ಇದೆ. ಮುಂದಿನ ದರ್ಶನಗಳಲ್ಲಿ ಈ ವಾಕ್ಯವನ್ನೇ ಆಧಾರವಾಗಿಟ್ಟುಕೊಂಡು ಆತ್ಮಪರಮಾತ್ಮ ಸಂಬಂಧವನ್ನು ವಿಶದಪಡಿಸುವ ಪ್ರಯತ್ನವಿದೆ. ಬೃಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ ಸಂವಾದಗಳಲ್ಲಿ ಆತ್ಮವಿದ್ಯೆಯನ್ನು ಆಮೂಲಾಗ್ರವಾಗಿ ವಿವೇಚಿಸಲಾಗಿದೆ.
ವೇದಗಳಲ್ಲಿ ಆತ್ಮ ದೇಹಾತಿರಿಕ್ತ, ಅಮರ ಎಂಬ ಭಾವನೆ ಇತ್ತು. ಸುಕೃತ ದುಷ್ಕøತ್ಯಗಳಿಂದ ಆಮುಷ್ಮಿಕಸದ್ಗತಿ ದುರ್ಗತಿಗಳನ್ನು ಆತ್ಮ ಹೊಂದುತ್ತಾನೆಂಬ ಭಾವವಿದೆ. ಉಪನಿಷತ್ತುಗಳ ಕಾಲದಿಂದೀಚೆಗೆ ಬಂದ ದಾರ್ಶನಿಕ ಪದ್ಧತಿಗಳಲ್ಲೆಲ್ಲ (ಚಾರ್ವಾಕದರ್ಶನವನ್ನುಳಿದು) ಕರ್ಮಾನುಸಾರ ಆತ್ಮನಿಗೆ ಪುನರ್ಜನ್ಮವಾಗುತ್ತದೆ ಎಂಬ ಕರ್ಮಸಿದ್ಧಾಂತವನ್ನು ದೃಢವಾಗಿ ನಿರೂಪಿಸಲಾಗಿದೆ.
ಆತ್ಮ ದೇಹದಿಂದ ಬೇರೆಯಾದದ್ದು ಎಂಬುದೇ ಭಗವದ್ಗೀತೆಯ 2ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ನೀಡಿದ ಉಪದೇಶ. ಸಾವು ನೋವುಗಳೆಲ್ಲ ದೇಹಕ್ಕೆ ಮಾತ್ರ. ಮನುಷ್ಯ ಜೀರ್ಣವಸ್ತ್ರವನ್ನು ತ್ಯಜಿಸಿ ಹೊಸವಸ್ತ್ರವನ್ನು ಧರಿಸುವಂತೆ ಆತ್ಮ ದೇಹಾಂತರ ಪ್ರಾಪ್ತಿಯನ್ನು ಪಡೆಯುತ್ತಾನೆ. ಆತ್ಮನ ನಿತ್ಯತೆಯನ್ನು ಅರಿತು ದೇಹನಾಶಕ್ಕೆ ದುಃಖಿಸದಿರುವುದೇ ವಿವೇಕಮಾರ್ಗವೆಂದು ವಿಷಾದಕ್ಕೊಳಗಾದ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸುತ್ತಾನೆ. ಆತ್ಮನಿಗೂ ಪರಮಾತ್ಮನಿಗೂ (ಬ್ರಹ್ಮನಿಗೂ) ಇರುವ ಸಂಬಂಧವನ್ನು ಉಪನಿಷತ್ತುಗಳು ಚರ್ಚಿಸಿವೆ. ಕೆಲವು ವೇಳೆ ಆತ್ಮಪರಮಾತ್ಮ ಭೇದವನ್ನು ಸೂಚಿಸಿದರೂ ಜೀವಾತ್ಮ ಪರಮಾತ್ಮನಿಗೆ ಅಧೀನ, ಅವನ ಅಂಶ ಮಾತ್ರ, ಅವನಲ್ಲಿಯೇ ಮುಕ್ತಿ ಹೊಂದುವ ಅಸ್ವತಂತ್ರ. ಪರಬ್ರಹ್ಮನನ್ನು ಬಿಟ್ಟರೆ ಅವನಿಗೆ ಅಸ್ತಿತ್ವವೇ ಇಲ್ಲ, ಎಂಬ ತತ್ತ್ವವಿದೆ. ಬ್ರಹ್ಮ ಸರ್ವವ್ಯಾಪಕ, ಹಾಗೆಯೆ ಆತ್ಮನಲ್ಲಿಯೂ ಇರುವುದರಿಂದಲೇ ಆತ್ಮನಿಗೆ ಅಮರತ್ವ, ನರನಾರಾಯಣರು ನಿರಂತರ ಒಟ್ಟಾಗಿರುವವರನ್ನೂ ಬ್ರಹ್ಮನಂತೆಯೇ ಆತ್ಮ ನಶ್ವರಪ್ರಪಂಚವನ್ನು ಮೀರಿದವ.
ವೈಶ್ವಾನರ, ತೇಜಸ, ಪ್ರಾಜ್ಞ, ತುರೀಯ ಎಂಬ ನಾಲ್ಕು ರೂಪಗಳಲ್ಲಿ ಕ್ರಮವಾಗಿ ಜಾಗ್ರತ, ಸ್ವಪ್ನ, ಸುಷುಪ್ತಿ, ನಿರ್ವಿಕಲ್ಪಸಮಾಧಿ ಎಂಬ ಅವಸ್ಥೇ ವಿತರ್ಕ ಅನ್ನುತ್ತಾನೆ. ಹಿಂದೂದರ್ಶನಗಳಲ್ಲಿ ಆತ್ಮವಿಚಾರ ಭಿನ್ನಾಭಿಪ್ರಾಯಕ್ಕೊಳಗಾಗಿದೆ. ಚಾರ್ವಾಕದರ್ಶನದಲ್ಲಿ ಆತ್ಮವನ್ನು ದೇಹದಿಂದ ಬೇರೆ ಎಂದು ಒಪ್ಪಿಲ್ಲ. ಅತ್ಯಂತ ಪರೋಕ್ಷನಾದ, ಅನುಭವಗೋಚರವಲ್ಲದ ಆತ್ಮ, ಪರಮಾತ್ಮ, ಸ್ವರ್ಗ, ನರಕ, ಜನ್ಮ, ಪುನರ್ಜನ್ಮಗಳಿಗೆ ಅದರಲ್ಲಿ ಅವಕಾಶವಿಲ್ಲ. ಆದರೆ ಅಹಂಕಾರಕಾರಕವಾದ ಶಾಶ್ವತವಾದ ಆತ್ಮನನ್ನು ನಿಷೇಧಿಸಿರುವುದರಿಂದ ತನ್ನ ಸುಖಕ್ಕಾಗಿ ಪರರನ್ನು ಹಿಂಸಿಸದೆ ಆದಷ್ಟೂ ಸುಖಪಡಬೇಕೆಂಬ ನೀತಿ ಅದರಲ್ಲಿ ಇದೆ. ಬೌದ್ಧದರ್ಶನದಲ್ಲಿ ಆತ್ಮ ರೂಪ, ವೇದನಾ, ಸಂಜ್ಞೆ, ಸಂಸ್ಕಾರ, ವಿಜ್ಞಾನ ಎಂಬ ಪಂಚ ಸ್ಕಂದಗಳ ಸಂಘಾತವೇ ಹೊರತು ಶಾಶ್ವತ ವಸ್ತುವಲ್ಲ. ಇದನ್ನು ನೈರಾತ್ಮವಾದವೆನ್ನಲಾಗಿದೆ. ನೈರಾತ್ಮಭಾವನೆಯಿಂದಲೇ ಅಹಂ, ನಾನು ಎಂಬ ಮಹಾ ಮೋಹ ನಿವೃತ್ತಿಯಾಗಿ, ಎಣ್ಣೆತೀರಿಹೋದರೆ ದೀಪ ಆರಿಹೋಗುವಂತೆ, ವಿಜ್ಞಾನವೆಂಬ ಆತ್ಮ ರಾಗವೆಂಬ ಆಶೆ ತೀರಿದಾಗ ನಿರ್ವಾಣವನ್ನು ಪಡೆದು ಶಾಂತಿಯನ್ನು ಹೊಂದುತ್ತಾನೆಂದು ನಿರೂಪಿಸಲಾಗಿದೆ.
ಸಾಂಖ್ಯದರ್ಶನದಲ್ಲಿ ಚೈತನ್ಯ ಚೇತನ, ಪುರುಷ, ಚಿಚ್ಛಕ್ತಿ ಆತ್ಮ ಮೊದಲಾದ ಪದಗಳು ಒಂದೇ ಅರ್ಥದಲ್ಲಿವೆ. ಆತ್ಮ ಗುಣದೋಷ ರಹಿತವಾದ ಕನ್ನಡಿಯಂತೆ ನಿರ್ವಿಕಾರ. ಇತರ ದಾರ್ಶನಿಕರು ಆತ್ಮನಿಗೆ ಯಾವ ಯಾವ ಸ್ವಭಾವಗಳನ್ನು ಹೇಳುವರೋ ಅವೆಲ್ಲವನ್ನೂ ಬುದ್ಧಿಗೆ ಹೇಳಲಾಗಿದೆ. ಜೀವಾತ್ಮನಿಗೆ ಪ್ರಕೃತಿಪರಿಣಾಮಗಳಾದ, ಮಹತ್, ಅಹಂಕಾರ, ಏಕಾದಶೇಂದ್ರಿಯಗಳು, ಪಂಚತನ್ಮಾತ್ರಗಳು ಎಂಬ ಹದಿನೆಂಟು ತತ್ತ್ವಗಳು ಸೇರಿ ಅಂಗಶರೀರ ಪ್ರಾಪ್ತಿಯಾಗುತ್ತದೆ. ಇದೇ ಸ್ಥೂಲಶರೀರವನ್ನು ಧರಿಸುತ್ತದೆ. ಜೈನದರ್ಶನದಲ್ಲಿ, ಜೀವ ಜಗತ್ತು ಕರ್ಮ ಅನಾದಿ. ಆತ್ಮನಲ್ಲಿ ಜ್ಞಾನ ಸುಖ ಮೊದಲಾದುವು ಸಹಜವಾಗಿವೆ. ಆತ್ಮಪ್ರಭೆಯೆಂಬ ಜ್ಞಾನಕ್ಕೆ ಕರ್ಮವೆಂಬ ಆವರಣವಿದೆ. ಈ ಆವರಣ ಕ್ಷಯವಾದಾಗ ಸರ್ವಜ್ಞತ್ವ ಉಂಟಾಗಿ ಮೋಕ್ಷಕ್ಕೆ ಕಾರಣವಾಗುತ್ತದೆ. ಯೋಗದರ್ಶನದಲ್ಲಿ ಜೀವಾತ್ಮವೆಂಬ ಪುರುಷ ಅಸಂಖ್ಯಾತ, ಅಜ, ನಿತ್ಯ, ನಿರ್ಲೇಪ; ಸ್ವಾಭಾವಿಕವಾಗಿ, ನಿರ್ದೋಷನಾಗಿ ಸರ್ವಸಾಕ್ಷಿಯೂ ಚೈತನ್ಯ ಮತ್ತು ಜ್ಞಾನ ಸ್ವರೂಪನೂ ಆಗಿದ್ದಾನೆ. ಅನಾದಿ ಕಾಲದಿಂದಲೂ ಪ್ರಕೃತಿಸಂಬಂಧವಿದ್ದು ಚಿತ್ತವೇ ತಾನೆಂದು ಮನುಷ್ಯ ಭ್ರಾಂತಿಗೊಳ್ಳುವ ಈ ಭ್ರಾಂತಿ ನಿವೃತ್ತಿಯಾದಾಗ ಮೋಕ್ಷ.
ನ್ಯಾಯಶಾಸ್ತ್ರದಲ್ಲಿ ಆತ್ಮ ಮೋಕ್ಷಕ್ಕೆ ಅಧಿಕಾರಿ. ಶರೀರ ಇಂದ್ರಿಯ, ಅರ್ಥ ಬುದ್ಧಿ ಮತ್ತು ಮನಸ್ಸು, ಅವನಿಗೆ ಭೋಗಗಳು, ಭೋಗಸಾಧನೆಗಳು. ದೇಹೇಂದ್ರಿಯಾದಿಗಳೇ ತಾನು ಎಂಬುದೇ ಮೋಹ ಅಹಂಕಾರ; ಇದರ ನಿವೃತ್ತಿಯಿಂದ ಸತ್ಯ ಸಾಕ್ಷಾತ್ಕಾರವಾಗಿ ಮೋಕ್ಷ ಪ್ರಾಪ್ತಿ. ವೈಶೇಷಿಕರೂ ಆತ್ಮ ಸರ್ವವ್ಯಾಪಿ, ಅಮರ, ಮೋಕ್ಷವೇ ಅವನ ಗುರಿ ಎನ್ನುತ್ತಾರೆ. ಉತ್ತರಮೀಮಾಂಸ ಅಥವಾ ವೇದಾಂತದಿಂದ ಹುಟ್ಟಿದ ಮತತ್ರಯಗಳಲ್ಲಿ ಮೊದಲನೆಯದಾದ ಅದ್ವೈತ ಸಿದ್ಧಾಂತದಲ್ಲಿ ಆತ್ಮನೂ ಬ್ರಹ್ಮನೂ ಒಂದೇ ಮಾಯೆಯಿಂದ ಭಿನ್ನವಾಗಿ ಕಾಣುತ್ತವೆ. ಸತ್, ಚಿತ್, ಆನಂದಮಯಸ್ವರೂಪನಾದ ಆತ್ಮ ಅಂತಃಕರಣದೊಂದಿಗೆ ಬೆರೆತಿದ್ದಾನೆ. ಪರಿಶುದ್ಧ ಜೀವಾತ್ಮ ಸ್ವರೂಪವನ್ನು, ಪರಮಾತ್ಮೈಕ್ಯವನ್ನು ತಿಳಿಯುವುದಕ್ಕೆ ಶಾಸ್ತ್ರಶೋಧನೆ ಆವಶ್ಯಕ. ತತ್ತ್ವಮಸಿ, ಅಹಂ ಬ್ರಹ್ಮಾಸ್ಮಿ-ಎಂಬ ತತ್ತ್ವಪ್ರತಿಪಾದನೆಯಲ್ಲಿ, ಪಾರಮಾರ್ಥವಾಗಿ ಪರಮಾತ್ಮನೇ ಜೀವಾತ್ಮನಾಗಿರುವನೆಂದೂ ಮೋಕ್ಷದಲ್ಲಿ ಪರಮಾತ್ಮನೇ ಜೀವಾತ್ಮನಾಗಿರುವನೆಂದೂ ನದಿಗಳು ಸಮುದ್ರದಲ್ಲಿ ಲೀನವಾಗುವುದನ್ನೂ, ಉಪ್ಪು ನೀರಿನಲ್ಲಿ ಕರಗುವುದನ್ನೂ ಬ್ರಹ್ಮಾತ್ಮೈಕ ತತ್ತ್ವಕ್ಕೆ ದೃಷ್ಟಾಂತವಾಗಿ ಹೇಳುತ್ತಾರೆ.
ಎರಡನೆಯದಾದ ವಿಶಿಷ್ಟಾದ್ವೈತದಲ್ಲಿ ಆತ್ಮರೆಲ್ಲರೂ ಸಮರು. ಆತ್ಮವಸ್ತುವಿಗೆ ಜ್ಞಾತೃತ್ವ, ಕರ್ತೃತ್ವ, ಭೋಕ್ತøತ್ವ ಎಂಬ ಸ್ವಭಾವಗಳಿವೆ. ಜೀವಾತ್ಮ ಪರಮಾತ್ಮನಿಂದ ಬೇರೆಯಾದ ಚಿದ್‍ವಸ್ತುವಾದರೂ ಪರಮಾತ್ಮ ಜೀವನ ಅಂತರ್ಯಾಮಿ, ಜೀವಾತ್ಮನ ಆತ್ಮ. ಸರ್ವವಿಧ ಪಾಶಗಳಿಂದಲೂ ಸಂಸಾರದಿಂದಲೂ ಬಿಡುಗಡೆ ಹೊಂದಿದ ಜೀವ ಮುಕ್ತಿಯಲ್ಲಿ ಭಗವಂತನಲ್ಲಿ ಐಕ್ಯವಾಗದೆ ಸಾರೂಪ್ಯನ ಪದವಿ ಹೊಂದಿ ದಿವ್ಯಜ್ಞಾನದಿಂದ ಕೂಡಿ ನಿತ್ಯಪರಿಪೂರ್ಣ ಬ್ರಹ್ಮಸಾಕ್ಷಾತ್ಕಾರದ ಆನಂದವನ್ನು ಅನುಭವಿಸುತ್ತ ಇರುತ್ತಾನೆ. ಮುಕ್ತಿ ಪಡೆದ ಜೀವಾತ್ಮ ಈಶ್ವರನಿಂದ ಸೃಷ್ಟಿಸಲ್ಪಟ್ಟು ವಿವಿಧಲೋಕ, ವಿವಿಧದೇಹಗಳನ್ನು ಪ್ರವೇಶಿಸಿ, ಲೋಕಕ್ಕೆ ಅಭ್ಯುದಯವನ್ನುಂಟು ಮಾಡಲು ಕಾರಣನಾಗಬಹುದೆಂಬ ನಂಬಿಕೆ ಇದೆ.
ದ್ವೈತಮತದಲ್ಲಿ ಜೀವಾತ್ಮ ಪರಮಾತ್ಮರಿಗೆ ಭೇದವಿದೆ. ಜೀವ ಕರ್ಮಾನುಸಾರವಾಗಿ ದೇಹದಲ್ಲಿ ಸುಖದುಃಖಗಳನ್ನನುಭವಿಸಿ, ಸಂಸಾರಬಂಧನಕ್ಕೆ ಕಾರಣವಾದ ವಿದ್ಯೆಯಿಂದ ಮುಕ್ತನಾಗಿ, ಸ್ವಾಭಾವಿಕ ಜ್ಞಾನವನ್ನು ಪಡೆದಾಗ, ಮೋಕ್ಷಪದವಿ ಹಂತಗಳ ತನ್ನ ಸಾಧನೆ, ಅನುಷ್ಠಾನಗಳಿಗೆ ಅನುಸಾರವಾದ ಪ್ರಮಾಣದಲ್ಲಿ ಆನಂದವನ್ನು ಅನುಭವಿಸುತ್ತಾನೆ. ಜೀವ ಜೀವರುಗಳಿಗೆ ಸ್ವಭಾವತಃ ತಾರತಮ್ಯವಿರುವುದಲ್ಲದೆ, ಮೋಕ್ಷಾನುಭವದಲ್ಲೂ ತಾರತಮ್ಯವುಂಟು. ಈ ಮತದ ಪ್ರಕಾರ ಕೆಲವು ಜೀವಾತ್ಮರು ಮುಕ್ತಿಗೆ ಅನರ್ಹರು ಮತ್ತು ನಿತ್ಯಬದ್ಧರು, ನಿತ್ಯ ಸಂಸಾರಿಗಳು. (ಎಸ್.ಎಸ್.ಆರ್.)