ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪರಮಯ್ಯ ಹಾಸ್ಯಗಾರ, ಕರ್ಕಿ
ಪರಮಯ್ಯ ಹಾಸ್ಯಗಾರ, ಕರ್ಕಿ 1885-1972. ಪ್ರತಿಭಾನ್ವಿತ ಯಕ್ಷಗಾನ ನಟ ಹಾಗೂ ಶಿಕ್ಷಕ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕರ್ಕಿಯಲ್ಲಿ. ವಾಹನ ಸೌಕರ್ಯವಿಲ್ಲದಿರುವ ಆ ಕಾಲದಲ್ಲಿ ರಾಜ್ಯದ ಗಡಿದಾಟಿ, ಬಡೋದೆ, ಸಾಂಗ್ಲಿ ಸಂಸ್ಥಾನಗಳಲ್ಲಿ ಯಕ್ಷಗಾನದ ಕಲಾವೈಭವವನ್ನು ಪ್ರದರ್ಶಿಸಿ, ಆ ಸಂಸ್ಥಾನಿಕರ ಗೌರವದ್ಯೋತಕ ಉಂಬಳಿ ಉಡುಗೊರೆಗಳನ್ನು ಪಡೆದುಬಂದ ಸಾಹಸದ ಚರಿತ್ರೆ ಕರ್ಕಿ ಯಕ್ಷಗಾನ ಮಂಡಳಿಯದು. ಆ ಮೇಳದಲ್ಲಿ ಪರಮಯ್ಯನವರ ಪೂರ್ವಜರು ಇದ್ದರು. ಕರ್ಕಿಯಲ್ಲಿ ಆರೇಳು ತಲೆಮಾರುಗಳಿಂದ ಈ ಕಲೆಯನ್ನು ಆರಾಧಿಸುತ್ತ ಬಂದ ಕೆಲವು ಮನೆತನಗಳಲ್ಲಿ ಈಗ ಉಳಿದಿರುವುದು ಕೇವಲ ಎರಡು ಮನೆತನಗಳೆಂದರೆ ಒಂದು-ಹಾಸ್ಯಗಾರ ಕುಟುಂಬ ಇನ್ನೊಂದು ಮದ್ದಳೆಗಾರ ಕುಟುಂಬ.
ಪರಮಯ್ಯ ಹಾಸ್ಯಗಾರ ಕುಟುಂಬದವರು. ಇವರು ತಮ್ಮ ಹತ್ತನೆಯ ವಯಸ್ಸನಲ್ಲಿಯೇ ತಮ್ಮ ತಂದೆ ವರದ ಹಾಸ್ಯಗಾರ ಮತ್ತು ಅವರ ಜೊತೆ ಪಾತ್ರಧಾರಿ ಹುಲಿಮಕ್ಕಿ ರಾಮಕೃಷ್ಣ ಹೆಗಡೆಯವರಿಂದ ನೃತ್ಯಾಭ್ಯಾಸಕ್ಕೆ ತೊಡಗಿದರು. ಇವರು ಬಾಲಗೋಪಾಲ ವೇಷದಿಂದ ಆರಂಭಿಸಿ, ಸ್ತ್ರೀ ವೇಷದಲ್ಲಿ ಪಳಗಿ, ಮೀನಾಕ್ಷಿ, ದಾಕ್ಷಾಯಿಣಿ, ದಮಯಂತಿ ಮೊದಲಾದ ಪಾತ್ರಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಕುಮಾರ ಪಾತ್ರಗಳಾದ ಅಭಿಮನ್ಯು, ಸುಧನ್ವ, ಬಭ್ರುವಾಹನರ ಪಾತ್ರಗಳಲ್ಲಿ ಮೆರೆದಾಡಿದರು. ಇವರ ಕಲಾ ಪ್ರೌಢಿಮೆ ದಿನೇದಿನೇ ಪ್ರವರ್ಧಮಾನವಾದಂತೆ ನಾಯಕ ಪ್ರತಿನಾಯಕ ಪಾತ್ರಗಳೇ ಇವರಿಗೆ ಮೀಸಲಾದವು. ಇವರ ಕೀಚಕ, ಭಸ್ಮಾಸುರ, ರಾಮ, ಕೃಷ್ಣ, ಅರ್ಜುನ, ಬಲದೇವ, ಕಿರಾತ, ವಾಲ್ಮೀಕಿ ಮೊದಲಾದ ಪಾತ್ರಗಳು ಈಗಲೂ ಮನೆ ಮಾತಾಗಿವೆ, ಹಳಬರ ಕಣ್ಣಲ್ಲಿ ಅಚ್ಚೊತ್ತಿ ನಿಂತಿವೆ. ಹುಲಿಮಕ್ಕಿ ರಾಮಕೃಷ್ಣ ಹೆಗಡೆ, ವರದ ಹಾಸ್ಯಗಾರ, ಗುಬ್ಬಿ ಗಣಪತಿ ಹೆಗಡೆ, ಹನುಮಂತ ಭಂಡಾರಿ, ಮಂಜಪ್ಪ ಶೆಟ್ಟಿ ಮುಂತಾದವರು ಇವರ ಹಿರಿಯರು. ದೇವರು ಹೆಗಡೆ, ರಾಧಾಭಟ್ಟರು, ಶಿವರಾಮಭಂಡಾರಿ, ತಿಮ್ಮಯ್ಯ ಭಾಗವತ ಮೊದಲಾದವರು ಸಮಕಾಲೀನರು.
ಪರಮಯ್ಯ ಕೇವಲ ಪ್ರತಿಭಾನ್ವಿತ ನಟರಷ್ಟೇ ಅಲ್ಲ, ಯಕ್ಷಗಾನದ ಪ್ರಭಾವಶಾಲಿ ಸಮರ್ಥ ಶಿಕ್ಷಕರೂ ಆಗಿದ್ದರು. ತಮ್ಮ ನಲ್ವತ್ತೆರಡನೆಯ ವಯಸ್ಸಿನಲ್ಲಿ ಚಿಕ್ಕ ಬಾಲಕರಿಗೆ ತರಬೇತಿ ಕೊಟ್ಟು ಮೇಳವನ್ನು ರಚಿಸಿದ್ದರು. ಆದರೆ ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹವಿರದ ಆ ಕಾಲದಲ್ಲಿ ಆ ಕಿರಿಯರು ಬೇರೆ ಬೇರೆ ಉದ್ಯೋಗವನ್ನು ಅವಲಂಬಿಸಿದರಾಗ ಮೇಳ ಊರ್ಜಿತವಾಗಲಿಲ್ಲ. ಆದರೂ ಧೃತಿಗೆಡದೆ ತಮ್ಮ ಅರವತ್ತನೆಯ ವಯಸ್ಸಿನಲ್ಲಿ ತಮ್ಮ ನಾಲ್ವರು ಮಕ್ಕಳು, ಇಬ್ಬರು ಮೊಮ್ಮಕ್ಕಳಿಗೆ ಮತ್ತು ಊರಿನ ಕೆಲವು ಬಾಲಕರಿಗೆ ತರಬೇತಿ ಕೊಟ್ಟು ಕರ್ಕಿಯ ಮೇಳವನ್ನು ಪುನರುಜ್ಜೀವನಗೊಳಿಸಿದರು. ನೆರೆಯ ಊರುಗಳ ಕಲಾವಿದರಾದ ಬಾಡದ ನಾರಾಯಣ ಹೆಗಡೆ ಮತ್ತು ಮಕ್ಕಿ ಮಹಾಬಲೇಶ್ವರ ಹೆಗಡೆ ಮುಂತಾದ ಕಲಾವಿದರನ್ನು ಸೇರಿಸಿಕೊಂಡರು. ಅಂದಿನಿಂದ ಈ ಮೇಳ ಕಲೆಗಾಗಿಯೇ ಬದುಕಿದೆ. ವರ್ಷದಲ್ಲಿ 30 ರಿಂದ 50 ಆಟಗಳನ್ನಾಡುತ್ತಿದೆ.
1955ರಲ್ಲಿ ಪರಮಯ್ಯ ತಮ್ಮ ಮೇಳವನ್ನು ಮುಂಬಯಿಗೆ ಒಯ್ದು, ಮುಂಬಯಿ ರಾಜ್ಯದ ದ್ವಿತೀಯ ನಾಟ್ಯ ಮಹೋತ್ಸವದಲ್ಲಿ ಸ್ಪರ್ಧಿಸಿ, ಬಹುಮಾನ ಪಡೆದರು. 1969ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಇವರಿಗೆ ಪ್ರಶಸ್ತಿಯನ್ನಿತ್ತು ಗೌರವಿಸಿತು. (ಪಿ.ವಿ.ಎಚ್.)