ಆದಿಯನರಿಯದೆ
ಅನಾದಿಯಿಂದತ್ತತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ; ಮಾಡಿದಡೆ ಫಲವೇನಯ್ಯಾ ಬಸವಯ್ಯಾ ? ಸಾವನ್ನಕ್ಕ ಸಾಧನೆಯ ಮಾಡಿದಡೆ
ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ ? ಬಾಳುವನ್ನಕ್ಕ ಭಜನೆಯ ಬಾಡಿದಡೆ ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ ?_ ಇದು ಕಾರಣ
ಮರ್ತ್ಯಲೋಕದ ಭಕ್ತರುಗಳೆಲ್ಲರು
ತಥ್ಯವನರಿಯದೆ
ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು
ತಮ್ಮ ತಾವರಿಯದೆ ಕೆಟ್ಟರು. ತಲೆಯ ಕೊಯಿದು ದೇಹವ ಕಡಿದು
ಕಣ್ಣ ಕಳೆದು ಹೊಟ್ಟೆಯ ಸೀಳಿ
ಮಗನ ಕೊಂದು ಬಾಣಸವ ಮಾಡಿ
ವಾದಿಗೆ ಪುರಂಗಳನೊಯ್ದು
ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ ? ಅವರಿಗೆ ಶಿವಪಥವು ಸಾಧ್ಯವಾಯಿತ್ತೆ ? ಭವ ಹಿಂಗಿತ್ತೆ ? ಅದು ಸಹಜವೆ ?_ಅಲ್ಲಲ್ಲ ನಿಲ್ಲು ಮಾಣು. ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು
ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು
ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು
ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು
ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು
ಲಿಂಗವ ಹಿಡಿದವರೆಲ್ಲರು ಫಲ_ಪದಗಳೆಂಬ ಸಂಸಾರಕ್ಕೊಳಗಾದರು
ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ ? ಇದು ಕಾರಣ; ನಿತ್ಯ ನಿಜತತ್ವ ತಾನೆಂದರಿಯದೆ
`ತತ್ವಮಸಿ' ವಾಕ್ಯವ ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು
ಸತ್ತರಲ್ಲಾ ನಾಯಿ ಸಾವ ! ಸತ್ತವರ ಹೆಸರ ಪತ್ರವ ನೋಡಿದಡೆ (ಓದಿದಡೆ?) ಅದೆತ್ತಣ ಮುಕ್ತಿಯೊ ಗುಹೇಶ್ವರಾ ?