ಹರಹರಾ ನೀವಿಪ್ಪಠಾವನರಿಯದೆ ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ ದಿಟ್ಟತನವ ನೋಡಾ ! ಶಿವಶಿವಾ ನಿಮ್ಮ ಶ್ರೀಮುಖವನರಿಯದೆ ಸಕಲ ಪದಾರ್ಥವ ನಿಮಗರ್ಪಿಸಿ ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ ! ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು ಹೇಳಾ ಗುಹೇಶ್ವರಾ ?