ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆಸ್ಟಾಲ್ಟ್‌ ಮನೋವಿಜ್ಞಾನ

ವಿಕಿಸೋರ್ಸ್ದಿಂದ

ಜರ್ಮನಿಯಲ್ಲಿ ಹುಟ್ಟಿ ಬೆಳೆದ ಒಂದು ಮನೋವೈಜ್ಞಾನಿಕ ಪಂಥ. ಜರ್ಮನ್ ಭಾಷೆಯ ಗೆಸ್ಟಾಲ್ಟ್‌ ಶಬ್ದಕ್ಕೆ ಸಮಾನಾರ್ಥಕ ಇಂಗ್ಲಿಷ್ ಪದ ಇಲ್ಲವೆನ್ನಲಾಗಿದೆ. ಹಾಗಾದರೂ ಈ ಶಬ್ದ ರೂಪ (ಫಾರಂ), ಆಕಾರ (ಷೇಪ್), ಸಂಘಟನೆ (ಆರ್ಗನೈಜೇಷನ್) ಮತ್ತು ವಿನ್ಯಾಸ (ಕಾನ್ಫಿಗರೇಷನ್)-ಇವುಗಳಲ್ಲಿ ಅಡಕವಾಗಿರುವ ಅರ್ಥವನ್ನು ಸೂಚಿಸುತ್ತದೆ ಎನ್ನಬಹುದು. ಗೆಸ್ಟಾಲ್ಟ್‌ ಮನೋವಿಜ್ಞಾನದ ಹಿನ್ನೆಲೆ ಹೀಗಿದೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ಸುಮಾರಿಗೆ ಮನೋವಿಜ್ಞಾನದ ಮೊದಲ ಪ್ರಯೋಗಶಾಲೆ ಜರ್ಮನಿಯಲ್ಲಿ ಸ್ಥಾಪಿತವಾಯಿತು. ಅದರ ಸ್ಥಾಪಕ ವೂಂಟ್ ಸ್ವರೂಪಾತ್ಮಕವಾದ (ಸ್ಟ್ರಕ್ಚರಲಿಸಂ) ಎಂದು ಕರೆಯಲಾಗುವ ಮನೋವೈಜ್ಞಾನಿಕ ಪಂಥವೊಂದನ್ನು ಬೆಳೆಸಿದ. ವೂಂಟ್ ಮತ್ತು ಇವನ ಅನುಯಾಯಿಗಳು ಅನುಭವವನ್ನು ತುಂಡು ತುಂಡಾಗಿರಿಸಿ, ಘಟಕಾಂಶಗಳಾಗಿ ವಿಭಜಿಸಿ, ವಿಶ್ಲೇಷಣೆ ನಡೆಸುವಲ್ಲಿ ನಿರತರಾಗಿದ್ದರು. ಸ್ವರೂಪಾತ್ಮಕ ವಾದಕ್ಕೆ ಹಲವು ಮೂಲಗಳಿಂದ, ಪ್ರಮುಖವಾಗಿ ಅಮೆರಿಕದ ವರ್ತನವಾದಿಗಳಿಂದ ವಿರೋಧ ತೋರಿಬಂತು. ಗೆಸ್ಟಾಲ್ಟ್‌ ಮನೋವಿಜ್ಞಾನ ಮೊದಲಿಗೆ ಅಮೆರಿಕದ ವರ್ತನವಾದಕ್ಕೆ ಸಮಕಾಲಿಕವಾಗಿ ವೂಂಟನ ಸ್ವರೂಪಾತ್ಮಕ ವಾದಕ್ಕೆ ಪ್ರತಿಯಾಗಿ ಪ್ರಾರಂಭವಾದರೂ ಅನಂತರ ವರ್ತನವಾದವನ್ನು ಸಹ ಧಿಕ್ಕರಿಸಿತು. ಗೆಸ್ಟಾಲ್ಟ್‌ ಮನೋವಿಜ್ಞಾನಿಗಳು ಮೂಲತಃ ವಿಶ್ಲೇಷಣೆಯ ವಿರೋಧಿಗಳು. ಅನುಭವವನ್ನು ಸಂವೇದನೆಯ ಘಟಕಾಂಶಗಳಾಗಿ ವಿಶ್ಲೇಷಿಸುವ ವೂಂಟ್ ಮತ್ತು ಇವನ ಅನುಯಾಯಿಗಳ ವಿಧಾನವನ್ನು ಅವರು ಇಟ್ಟಿಗೆ ಮತ್ತು ಗಾರೆಯ ಮನೋವಿಜ್ಞಾನ ಎಂದು ಟೀಕಿಸಿದರು. ಇಲ್ಲಿ ಸಂವೇದನೆಯ ಘಟಕಾಂಶಗಳೇ ಇಟ್ಟಿಗೆಗಳು: ಅವನ್ನು ಒಂದಾಗಿ ಹಿಡಿದಿಡುವ ಗಾರೆಯೆಂದರೆ ಸಾಹಚರ್ಯ ಪ್ರಕ್ರಿಯೆ.


ಗೆಸ್ಟಾಲ್ಟ್‌ ನಿಯಮ

[ಸಂಪಾದಿಸಿ]
ಚಿತ್ರ 1

ಗೆಸ್ಟಾಲ್ಟ್‌ ವಾದಿಗಳ ಪ್ರಕಾರ ಅನುಭವಗಳನ್ನು ಘಟಕಾಂಶಗಳಾಗಿ ವಿಶ್ಲೇಷಿಸುವ ವಿಧಾನ ಅನುಭವದ ವಾಸ್ತವಿಕತೆಗೆ ಅಪಚಾರವನ್ನೆಸಗುತ್ತದೆ. ವಿಶ್ಲೇಷಣೆ ಎಷ್ಟೇ ಆಮೂಲಾಗ್ರವಾಗಿರಲಿ, ಅದು ಸಮಗ್ರದ (ಪುರ್ಣ) ಅರಿವನ್ನು ಒದಗಿಸಿಕೊಡಲು ಅಸಮರ್ಥವಾಗುತ್ತದೆ. ಪುರ್ಣದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಅದನ್ನು ಸಮಗ್ರವಾಗಿಯೇ ಪರಿಗಣಿಸಬೇಕು. ಪುರ್ಣ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಯಾವುದೇ ಭಾಗದ ಸ್ಥಾನ, ಪಾತ್ರ ಅಥವಾ ಕ್ರಿಯೆ ಪುರ್ಣದ ಸ್ವರೂಪವನ್ನೇ ಅವಲಂಬಿಸುತ್ತದೆ. ಭಾಗಗಳನ್ನು ಬಿಡಿಬಿಡಿಯಾಗಿ ವಿಶ್ಲೇಷಿಸುವ ಮೂಲಕ ಪುರ್ಣದ ಸ್ವರೂಪವನ್ನು ಗುರುತಿಸುವುದು ಅಸಾಧ್ಯ. ಸಾರಾಂಶರೂಪದಲ್ಲಿ ಹೇಳಬೇಕೆಂದರೆ ಪುರ್ಣದ ಲಕ್ಷಣಗಳು ಅದರ ಯಾವುದೇ ಭಾಗದಲ್ಲಿ ಅಡಕವಾಗಿರುವುದಿಲ್ಲ: ಆದರೆ ಭಾಗಗಳು ಪುರ್ಣದಲ್ಲಿ ಸಂಯೋಜಿತವಾದಾಗ ಪುರ್ಣದ ಲಕ್ಷಣಗಳು ಹೊರಹೊಮ್ಮುತ್ತವೆ. ಪುರ್ಣ ಅದರ ಭಾಗಗಳ ಮೊತ್ತಕ್ಕಿಂತ ಮಿಗಿಲಾಗಿರುತ್ತದೆ. ಹೀಗೆನ್ನುವುದು ಗೆಸ್ಟಾಲ್ಟ್‌ ನಿಯಮದ ತಿರುಳು. ಎಂದರೆ ಗೆಸ್ಟಾಲ್ಟ್‌ ಮನೋವಿಜ್ಞಾನ ಸಮಗ್ರತೆ ಅಥವಾ ಪುರ್ಣತೆಗೆ (ಹೋಲ್ಸ್‌) ಸಂಬಂಧಿಸಿದ್ದಾಗಿದೆ.


ಭಾಗಗಳು ತಾವು ಪುರ್ಣದಲ್ಲಿ ಪಡೆದುಕೊಂಡಿರುವ ಸ್ಥಾನ, ಪಾತ್ರ ಅಥವಾ ಕ್ರಿಯೆಗಳಿಂದ ಬೇರೆಯಾಗಿರುವ ತಮ್ಮದೇ ಆದ ಸ್ವಂತಿಕೆಯನ್ನು (ಐಡೆಂಟಿಟಿ) ಹೊಂದಿಲ್ಲ. ಎಂದರೆ ಅವು ತಮ್ಮ ಸ್ವರೂಪವನ್ನು ಪುರ್ಣದಿಂದಲೇ ಪಡೆದುಕೊಳ್ಳುತ್ತವೆ. ಈ ಅಂಶವನ್ನು ವಿಶದಗೊಳಿಸಲು ಒಂದು ಸರಳವಾದ ನಿದರ್ಶನವನ್ನು ಕೊಡಬಹುದು. ಚಿತ್ರ 1 ರಲ್ಲಿ ಪ್ರತಿಯೊಂದು ಚೌಕವೂ ಒಂದೊಂದು ವೃತ್ತವನ್ನು ಒಳಗೊಂಡಿದೆ. ಆ ವೃತ್ತಗಳು ವಾಸ್ತವವಾಗಿ ಒಂದೇ ಬಗೆಯ ಬೂದುಬಣ್ಣವನ್ನು ಹೊಂದಿವೆ. ಆದರೂ ಬಲಗಡೆಯ ವೃತ್ತದ ಬೂದುಬಣ್ಣ ಹೆಚ್ಚು ಮಸುಕಾಗಿ ತೋರಿಬರುತ್ತದೆ. ಅದಕ್ಕೆ ಕಾರಣ ಅಂಶಗಳ ಮೇಲೆ ಪುರ್ಣ ಬೀರುವ ಪ್ರಭಾವವೇ ಆಗಿದೆ.


ಪೂರ್ವಭಾವೀ ಪ್ರಭಾವಗಳು

[ಸಂಪಾದಿಸಿ]

ಕ್ರಿಶ್ಚನ್ ಎರ್ನ್‌ಫೆಲ್ಸ್‌ ಎಂಬಾತ ಗೆಸ್ಟಾಲ್ಟ್‌ ಭಾವವನ್ನು 1890ರ ಸುಮಾರಿಗೆ ಪರಿಚಯ ಮಾಡಿಕೊಟ್ಟ. ಯಾವುದೇ ಒಂದು ರಾಗವನ್ನು ಬೇರೆ ಬೇರೆ ಸ್ವರಗಳಿಂದ ನುಡಿಸಬಹುದು ಮತ್ತು ಏಕಪ್ರಕಾರವಾದ ಸ್ವರಗಳನ್ನು ಬೇರೆ ಬೇರೆ ರೀತಿಯಲ್ಲಿ ಜೋಡಿಸಿ ಬೇರೆ ಬೇರೆ ರಾಗಗಳನ್ನು ಪಡೆಯಬಹುದು.

ಅಂತೆಯೇ ಏಕಪ್ರಕಾರವಾಗಿರುವ ತುಂಡುಗಳನ್ನು ಬಗೆಬಗೆಯಾಗಿ ಜೋಡಿಸಿ ವಿವಿಧ ರಚನೆಗಳನ್ನು ಸೃಷ್ಟಿಸಬಹುದು. ಸ್ವರಗಳು ಮತ್ತು ತುಂಡುಗಳು ಪ್ರತ್ಯಕ್ಷಾನುಭವದಲ್ಲಿ ದತ್ತವಾಗಿರುವ ಅಂಶಗಳು. ಆದರೆ ಆಕಾರ ಮತ್ತು ರಚನೆಗಳು ಗ್ರಾಹಕನ ಮನಸ್ಸಿನಲ್ಲಿ ರೂಪಗೊಂಡು ಹೊರಹೊಮ್ಮುತ್ತವೆ. ಇದು ಎರ್ನ್‌ಫೆಲ್ಸ್‌ನ ನಂಬುಗೆಯಾಗಿತ್ತು. ಈ ಬಗೆಯ ತೀರ್ಮಾನಕ್ಕೆ ಬರಲು ಇವನು ಕ್ಯಾಂಟ್ನಿಂದ ಪ್ರಭಾವಿತನಾಗಿದ್ದಿರಬೇಕು. ಕ್ಯಾಂಟ್ ವಾದದ ಧಾಟಿ ಹೆಚ್ಚು ಕಡಿಮೆ ಹೀಗಿದೆ: ನಾವು ವಸ್ತುಗಳ ಪ್ರತ್ಯಕ್ಷಾನುಭವ ಪಡೆದಾಗ ನಮ್ಮ ಮನಃಸ್ಥಿತಿಗಳೂ ಸಂವೇದನೆಯ ಘಟಕಾಂಶಗಳಿಂದ ರಚಿತವಾಗಿರುವಂತೆ ಕಾಣಬರುತ್ತದೆ. ಹಾಗಾದರೂ ಈ ಘಟಕಾಂಶಗಳು ಅರ್ಥವತ್ತಾಗಿ ಸಂಘಟಿತವಾಗಿವೆ. ಗ್ರಹಿಕೆಯ ಕಾರ್ಯಗತಿಯಲ್ಲಿ ಮನಸ್ಸು ಒಂದು ಏಕಾತ್ಮಕ (ಯೂನಿಟರಿ) ಅನುಭವವನ್ನು ರೂಪಿಸುತ್ತದೆ: ಅರ್ಥವತ್ತಾದ ಸನ್ನಿವೇಶದಲ್ಲಿ ವಸ್ತುವನ್ನು ಕಾಣುತ್ತದೆ. ಪ್ರತ್ಯಕ್ಷಾನುಭವ ಮನಸ್ಸಿನ ಮೇಲೆ ನಾಟುವ ಸಂವೇದನಾ ಘಟಕಾಂಶಗಳ ಸಂಯೋಜನೆ ಅಥವಾ ನಿಷ್ಕ್ರಿಯ ಮುದ್ರೆಯಾಗಿರದೆ, ಈ ಘಟಕಾಂಶಗಳನ್ನು ಏಕಾತ್ಮಕವಾದ ಹಾಗೂ ಸುಸಂಗತವಾದ ಅನುಭವಗಳನ್ನಾಗಿ ಮಾರ್ಪಡಿಸುವ ಪರಿಣಾಮಕಾರಿ ಸಂಘಟನೆಯಾಗಿದೆ. ಮನಸ್ಸು ಗ್ರಹಿಕೆಯ ಮೂಲವಸ್ತುವಿಗೆ ರೂಪವನ್ನೂ ವ್ಯವಸ್ಥೆಯನ್ನೂ ಕೊಡುತ್ತದೆ.


ಗೆಸ್ಟಾಲ್ಟ್‌ ಮನೋವಿಜ್ಞಾನದ ಆರಂಭ ಮತ್ತು ಪೈ ವಿದ್ಯಮಾನ (ಫಿನಾಮೆನನ್)

[ಸಂಪಾದಿಸಿ]

ಚಲನೆಯ ಪ್ರತ್ಯಕ್ಷಾನುಭವವನ್ನು ಕುರಿತು ಮ್ಯಾಕ್ಸ್‌ವರ್ದಿಮೀರನ ಪ್ರಾಯೋಗಿಕ ಅಧ್ಯಯನಗಳು (1912) ಗೆಸ್ಟಾಲ್ಟ್‌ ಮನೋವಿಜ್ಞಾನದ ಪ್ರಾರಂಭವನ್ನು ಗುರುತಿಸುತ್ತವೆ. ಈ ಪ್ರಯೋಗಗಳಲ್ಲಿ ಕರ್ಟ್‌, ಕಾಫ್ಕಾ ಮತ್ತು ವುಲ್ಫ್‌ಗ್ಯಾಂಗ್ ಕೋಯ್ಲರರು ವರ್ದಿಮೀರನಿಗೆ ಸಹಾಯಕರಾಗಿದ್ದರು. ವಾಸ್ತವವಾಗಿ ಗೆಸ್ಟಾಲ್ಟ್‌ ಮನೋವಿಜ್ಞಾನದ ಆರಂಭ ಮತ್ತು ಬೆಳೆವಣಿಗೆ ಈ ಮೂರು ಹೆಸರುಗಳೊಂದಿಗೆ ಅನ್ಯೋನ್ಯವಾಗಿ ಹೊಂದಿಕೊಂಡುಬಿಟ್ಟಿದೆ.


ಚಲನೆಯ ಪ್ರತ್ಯಕ್ಷಾನುಭವವನ್ನು ಕುರಿತ ಈ ಪ್ರಯೋಗದಲ್ಲಿ ಎರಡು ಸೀಳುಗಂಡಿ ಗಳನ್ನು (ಸ್ಲಿಟ್ಸ್‌) ಬಳಸುತ್ತಾರೆ. ಒಂದು ಸೀಳುಗಂಡಿ ಲಂಬವಾಗಿಯೂ ಇನ್ನೊಂದು ಅದರಿಂದ 20 ಅಥವಾ 30 ಡಿಗ್ರಿಗಳಷ್ಟು ವಾಲಿಕೊಂಡಿರುವಂತೆಯೂ ಇರುತ್ತವೆ. ಬೆಳಕನ್ನು ಮೊದಲು ಒಂದು ಕಂಡಿಯ ಮೂಲಕ, ಅನಂತರ ಇನ್ನೊಂದು ಕಂಡಿಯ ಮೂಲಕ ಹರಿಯಬಿಟ್ಟರೆ, ಮತ್ತು ಈ ಎರಡು ಪ್ರಸಾರಗಳ ನಡುವಣ ಕಾಲಾವಧಿ ಸಾಕಷ್ಟು ದೀರ್ಘವಾಗಿದ್ದರೆ, ಅನುಕ್ರಮವಾಗಿ ಒಂದರ ಮೇಲೊಂದರಂತೆ ಎರಡು ಬೆಳಕನ್ನೂ ಕಾಣಬಹುದು. ಬದಲಾಗಿ ಎರಡು ಪ್ರಸಾರಗಳ ನಡುವಣ ಕಾಲಾವಧಿ ಅತ್ಯಲ್ಪವಾದಾಗ ಎರಡು ಬೆಳಕನ್ನೂ ಅವಿಚ್ಛಿನ್ನವಾಗಿ ಕಾಣಬಹುದು. ಆದರೆ ಎರಡು ಪ್ರಸಾರಗಳ ನಡುವಿನ ಕಾಲದ ಅಂತರ ಸುಮಾರು 60 ಮಿಲಿ ಸೆಕೆಂಡುಗಳಾಗಿದ್ದರೆ ಒಂದೇ ಬೆಳಕು ಎಡದಿಂದ ಬಲಕ್ಕೂ ಬಲದಿಂದ ಎಡಕ್ಕೂ ಚಲಿಸುವ ಅನುಭವ ಉಂಟಾಗುತ್ತದೆ. ಈ ಪ್ರಯೋಗದಿಂದ ಖಚಿತವಾಗಿ ತಿಳಿದುಬರುವ ಅಂಶ ಇಷ್ಟು. ಒಂದಕ್ಕೊಂದು ಸಮೀಪದಲ್ಲಿರುವ ಎರಡು ಪ್ರತ್ಯೇಕವಾದ ಮತ್ತು ಸ್ಥಾಯಿಯಾಗಿರುವ ಸಾಲುಗಳನ್ನು ಒಂದಾದ ಮೇಲೊಂದರಂತೆ ಬೇಗಬೇಗನೆ ಪ್ರದರ್ಶಿಸಿದರೆ ಒಂದೇ ಸಾಲು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಚಲಿಸುತ್ತಿರುವಂತೆ ಗ್ರಾಹಕ ಅವನ್ನು ಗ್ರಹಿಸುತ್ತಾನೆ. ಈ ತೋರಿಕೆಯ ಚಲನೆಯನ್ನು ಪೈ ವಿದ್ಯಮಾನ ಎಂದು ವರ್ದಿಮೀರ್ ಹೆಸರಿಸಿದ್ದಾನೆ.


ವರ್ದಿಮೀರನ ಪ್ರಕಾರ ಚಲನೆಯ ಪ್ರತ್ಯಕ್ಷಾನುಭವಕ್ಕೆ ಕಾರಣವಾಗಿರುವ ಅಂಶ ಗೆಸ್ಟಾಲ್ಟ್‌. ಬೇರೆ ಬೇರೆ ಘಟಕಾಂಶಗಳು ಒಂದುಗೂಡಿ ಪುರ್ಣದಲ್ಲಿ ಅವತರಿಸುವಿಕೆ. ಪೈ ವಿದ್ಯಮಾನ ಎಂದು ಕರೆಯಲಾಗುವ ಈ ಘಟನೆಯನ್ನು ಬೇರೆ ಬೇರೆ ಪ್ರಚೋದನೆಗಳ ಮೊತ್ತದಿಂದ ಪಡೆಯಲಾಗದು. ಸ್ವರೂಪಾತ್ಮಕವಾದಿಗಳಿಗೆ ಈ ಘಟನೆಯನ್ನು ವಿವರಿಸುವುದು ಸುಲಭ ಸಾಧ್ಯವಲ್ಲ. ಏಕೆಂದರೆ ಒಂದು ಸ್ಥಾಯಿಯಾಗಿರುವ ಪ್ರಚೋದನೆಯನ್ನು ಇನ್ನೊಂದು ಸ್ಥಾಯಿಯಾಗಿರುವ ಪ್ರಚೋದನೆಗೆ ಸೇರಿಸಿ, ಅವುಗಳ ಸಂಕಲನದಿಂದ ಚಲನೆಯ ಅನುಭವವನ್ನು ಪಡೆಯಲಾಗದು. ಗೆಸ್ಟಾಲ್ಟ್‌ ಮನೋವಿಜ್ಞಾನದ ಮೂಲಾಧಾರ ವರ್ದಿಮೀರನ ಪ್ರಯೋಗ ಮತ್ತು ಅದಕ್ಕೆ ಈತ ಕೊಟ್ಟ ವಿವರಣೆ. ಪೈ ವಿದ್ಯಮಾನ ಒಂದು ವಾಸ್ತವ ಘಟನೆ: ಅದನ್ನು ಘಟಕಾಂಶಗಳಾಗಿ ವಿಭಜಿಸುವುದು ಅಸಾಧ್ಯ. ಹಾಗೊಮ್ಮೆ ವಿಶ್ಲೇಷಿಸಹೊರಟರೆ ಘಟನೆ ತನ್ನ ವಾಸ್ತವಾಂಶಗಳನ್ನು ಕಳೆದುಕೊಳ್ಳುತ್ತದೆ. ಎಂದರೆ ನಾವು ಏನನ್ನು ಗ್ರಹಿಸುತ್ತೇವೆಯೋ ಅದನ್ನು ನಿರ್ಧರಿಸುವಲ್ಲಿ ಆದ್ಯಂತ ಸನ್ನಿವೇಶಗಳೇ ಪರಿಗಣನೆಗೆ ಬರುತ್ತವೆ. ಈ ವಿಚಾರ ಗೆಸ್ಟಾಲ್ಟ್‌ ವಾದಿಗಳು ಪ್ರತಿಪಾದಿಸಿದ ಸಮಗ್ರ ಅಥವಾ ಪುರ್ಣದ ಮಹತ್ತ್ವವನ್ನು ಸ್ಥಿರೀಕರಿಸುತ್ತದೆ.


ಹೊರನೋಟಕ್ಕೆ ಗೆಸ್ಟಾಲ್ಟ್‌ ಮನೋವಿಜ್ಞಾನದ ಮೂಲತತ್ವ್ತ ಸರಳವಾಗಿ ತೋರಿಬಂದರೂ ಅದು ಮನೋವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ರಚನೆಗಳು ಪ್ರತ್ಯೇಕಾನುಭವದ ಮೂಲಾಂಶಗಳು ಎನ್ನುವ ವರ್ದಿಮೀರನ ಅಭಿಪ್ರಾಯ ಅಂಗೀಕೃತ ಅಭಿಪ್ರಾಯಗಳಿಗೆ ವಿರೋಧವಾಗಿತ್ತು. ಶಾಸ್ತ್ರೀಯ ಸಂಪ್ರದಾಯದ ಪ್ರಕಾರ ರಚನೆಗಳು ಘಟಕಾಂಶಗಳಾಗಿ ವಿಭಜಿಸಿ ವಿಶ್ಲೇಷಿಸಬಹುದಾದ ವಸ್ತುಗಳಾಗಿದ್ದವು. ಅನುಭವದ ಮೂಲಾಂಶಗಳು ಈ ಘಟಕಾಂಶಗಳೇ ಹೊರತು ರಚನೆಗಳಲ್ಲ ಎನ್ನುವುದು ವೂಂಟ್ ಮತ್ತು ಇವನ ಅನುಯಾಯಿಗಳ ವಾದವಾಗಿತ್ತು.

ಪ್ರತ್ಯಕ್ಷಾನುಭವ

[ಸಂಪಾದಿಸಿ]

ಚಲನೆಯ ಪ್ರತ್ಯಕ್ಷಾನುಭವದ ಮೇಲೆ ಪ್ರಯೋಗಗಳನ್ನು ನಡೆಸಿದ ಅನಂತರದಲ್ಲಿ ಗೆಸ್ಟಾಲ್ಟ್‌ ಮನೋವಿಜ್ಞಾನಿಗಳು ತಮ್ಮ ಪ್ರತಿಪಾದನೆಗಳನ್ನು ಸಮರ್ಥಿಸಲು ಇನ್ನಷ್ಟು ಪ್ರತ್ಯಕಾನುಭವ ಸಂಗತಿಗಳನ್ನೇ ಆಯ್ದುಕೊಂಡರು. ಪ್ರತ್ಯಕ್ಷಾನುಭವಗಳಲ್ಲಿನ ಸ್ಥಿರತೆ (ಕಾನ್ಸ್‌ಟೆನ್ಸಿ) ಗೆಸ್ಟಾಲ್ಟ್‌ರ ಪ್ರತಿಪಾದನೆಗಳಿಗೆ ಯಥೇಷ್ಟ ಸಮರ್ಥನೆಯನ್ನು ಒದಗಿಸಿಕೊಡುತ್ತದೆ. ನಿದರ್ಶನಕ್ಕೆ ಗುಂಡಗಿರುವ ತಟ್ಟೆಯೊಂದನ್ನು ಅಕ್ಷಿಪಟದ ಮೇಲೆ ಅದರ ಪ್ರತಿಬಿಂಬ ಅಂಡವೃತ್ತಾಕೃತಿಯನ್ನು ಪಡೆಯುವ ರೀತಿಯಲ್ಲಿ ಹಿಡಿಯೋಣ. ಆಗಲೂ ನಾವು ತಟ್ಟೆಯನ್ನು ಗುಂಡಗಿರುವಂತೆಯೇ ಕಾಣುತ್ತೇವೆ. ಎಂದಮೇಲೆ ಸಂವೇದನಾಂಶಗಳು ಬದಲಾವಣೆ ಹೊಂದಿದರೂ ತಟ್ಟೆಯ ಪ್ರತ್ಯಕ್ಷಾನುಭವ ಬದಲಾಗದೆಯೇ ಉಳಿಯುತ್ತದೆ. ಗಾತ್ರ ಮತ್ತು ಪ್ರಕಾಶಮಾನತೆಯಲ್ಲಿಯೂ ಇದೇ ಬಗೆಯ ಸ್ಥಿರತೆಗಳು ತೋರಿಬರುತ್ತವೆ. ಆದ್ದರಿಂದ ಸಂವೇದನಾಂಶಗಳು ಬದಲಾದರೂ ಪ್ರತ್ಯಕ್ಷಾನುಭವ ಬದಲಾಗದೆಯೇ ಉಳಿಯುತ್ತದೆ. ವಾಸ್ತವವಾಗಿ ಪ್ರತ್ಯಕ್ಷಾನುಭವಕ್ಕೂ ಅದಕ್ಕೆ ಎಡೆ ಮಾಡಿಕೊಡುವ ಸಂವೇದನಾ ಪ್ರಚೋದನೆಗಳ ಸ್ವರೂಪಕ್ಕೂ ವ್ಯತ್ಯಾಸ ಇರುತ್ತದೆ. ಇದರಿಂದ ತಿಳಿದುಬರುವ ವಿಚಾರವೆಂದರೆ ಪ್ರತ್ಯಾಕ್ಷಾನುಭವ ಸಂವೇದನಾಂಗ ಗಳ ಕೇವಲ ಸಂಗ್ರಹಣೆ ಇಲ್ಲವೆ ಅಂಶಗಳ ಮೊತ್ತ ಮಾತ್ರವೇ ಆಗಿರುವುದಿಲ್ಲ.


ಸಂಘಟನೆಯ ನಿಯಮಗಳು

[ಸಂಪಾದಿಸಿ]

ವರ್ದಿಮೀರ್ ಪ್ರತಿಪಾದಿಸುವ ಪ್ರತ್ಯಕ್ಷಾನುಭವ ಸಂಘಟನೆಯ ನಿಯಮಗಳನ್ನು ರೂಪಿಸಿ ಗೆಸ್ಟಾಲ್ಟ್‌ ಮನೋವಿಜ್ಞಾನಿಗಳು ತುಂಬ ಜನಪ್ರಿಯರಾಗಿದ್ದಾರೆ. ಒಬ್ಬ ತೋರಿಕೆಯ ಚಲನೆಯನ್ನು ಯಾವ ಒಂದು ಏಕೀಕೃತ (ಯೂನಿಫೈಡ್) ರೀತಿಯಲ್ಲಿ ಗ್ರಹಿಸುತ್ತಾನೆಯೋ ಅಂತೆಯೇ ಇತರ ವಸ್ತುಗಳನ್ನೂ ಏಕೀಕೃತ ಸಮಗ್ರಗಳನ್ನಾಗಿಯೇ ಗ್ರಹಿಸುತ್ತಾನೆ ಎನ್ನುವುದು ವರ್ದಿಮೀರನ ನಿಲುವು.

ಪ್ರತ್ಯಕ್ಷಾನುಭವ ಸಂಘಟನೆಯ ನಿಯಮಗಳಲ್ಲೆಲ್ಲ ಅತ್ಯಂತ ಮೂಲಭೂತವಾದದ್ದು ಆಕೃತಿ (ಫಿಗರ್) ಮತ್ತು ಹಿನ್ನೆಲೆ (ಗ್ರೌಂಡ್) ಭಾವನೆ. ಪ್ರತಿ ಪ್ರತ್ಯಕ್ಷಾನುಭವವೂ ಹಿನ್ನೆಲೆಯಿಂದ ಎದ್ದು ಕಾಣುವ ಆಕೃತಿಯಾಗಿ ವ್ಯವಸ್ಥಿತವಾಗಿರುತ್ತದೆ. ಆಕೃತಿ ಅವಧಾನದ ಕೇಂದ್ರ. ಅದು ಸ್ಪಷ್ಟವಾಗಿ ಗುರುತಿಸಬಹುದಾದ ಎಲ್ಲೆಕಟ್ಟು, ಗಾಢತೆ ಮತ್ತು ದೃಢತೆಗಳನ್ನು ಪಡೆದುಕೊಂಡು ಸಮಗ್ರವಾಗಿ ತೋರಿಬರುತ್ತದೆ. ವಿಸ್ತರದ ಉಳಿದ ಅಂಶಗಳು ಹಿನ್ನೆಲೆಯಾಗಿರುತ್ತವೆ. ಅವು ಸ್ಪಷ್ಟವಾಗಿರುವುದಿಲ್ಲವಲ್ಲದೆ ಅವಧಾನದ ಅಂಚಿನಲ್ಲಿರುತ್ತವೆ. ಸಾಮಾನ್ಯವಾಗಿ ಹಿನ್ನೆಲೆ ವಸ್ತುವಿಗಿಂತ ಇನ್ನೂ ದೂರದಲ್ಲಿ ಕಾಣಿಸಿಕೊಳ್ಳುತ್ತವೆ; ಹಿನ್ನೆಲೆಯೇ ಒಂದು ವಸ್ತುವಾಗಿ ಗ್ರಹಿಸಲ್ಪಡುವುದಿಲ್ಲ. ಒಂದು ಅನುಭವದಲ್ಲಿ ಯಾವುದು ಆಕೃತಿ ಯಾವುದು ಹಿನ್ನೆಲೆ ಎನ್ನುವ ವಿಚಾರ ಚಾಕ್ಷುಷ ವಿಸ್ತರದಲ್ಲಿನ ಎಲ್ಲೆಕಟ್ಟುಗಳು, ರಚನೆ ಮತ್ತು ಛಾಯೆಗಳನ್ನು ಅವಲಂಬಿಸಿರುತ್ತದೆ. ಗೆಸ್ಟಾಲ್ಟ್‌ ಮನೋವಿಜ್ಞಾನಿಗಳ ಪ್ರಕಾರ ಆಕೃತಿ-ಹಿನ್ನೆಲೆ ವ್ಯವಸ್ಥೆ ಸ್ವಾಭಾವಿಕವಾಗಿ ಹಾಗೂ ಅಪ್ರಯತ್ನಪೂರ್ವಕವಾಗಿ ತೋರಿಬರುವ ಸಂಘಟನೆ. ಅದು ಕಲಿಕೆಯಿಂದ ನಿರ್ಧರಿಸಲ್ಪಡದೆ, ಮನುಷ್ಯನ ಪ್ರತ್ಯಕ್ಷಾನುಭವಕ್ಕೆ ಸಂಬಂಧಿಸಿದ ಅಂಗವ್ಯೂಹದ ಪರಿಣಾಮವಾಗಿದೆ. ಪ್ರತ್ಯಾಕ್ಷಾನುಭವವನ್ನು ನಿರ್ಧರಿಸುವಲ್ಲಿ ಆಕೃತಿ ಹಿನ್ನೆಲೆ ನಿಯಮಕ್ಕಿಂತ ಕಡಿಮೆ ಮೂಲಭೂತವಾದ, ಆದರೆ ಅಷ್ಟೇ ಪ್ರಬಲವಾದ ಸಂಘಟನಾಂಶಗಳೆಂದರೆ ಪ್ರಚೋದನೆಯ ಲಕ್ಷಣಗಳು. ಅವು ಹೀಗಿವೆ.

  • ಸಾಮೀಪ್ಯ : ಕಾಲ ಅಥವಾ ಸ್ಥಳದಲ್ಲಿ ಒಂದಕ್ಕೊಂದು ಹತ್ತಿರವಾಗಿರುವ ಭಾಗಗಳು ಒಟ್ಟಾಗಿ ಗ್ರಹಿಸಲ್ಪಡುತ್ತದೆ. ಪಕ್ಕದ ಚಿತ್ರದಲ್ಲಿ ab, cd, ef- ಈ ಮೂರು ಜೋಡಿ ಸಾಲುಗಳನ್ನು ಕಾಣುತ್ತೇವೆಯೇ ಹೊರತು bc, de ಈ ಬಗೆಯ ಜೋಡಿಗಳನ್ನಲ್ಲ.
  • ಸಾದೃಶ್ಯ : ಒಂದಕ್ಕೊಂದು ಸಾಮ್ಯವನ್ನು ಹೊಂದಿರುವ ಭಾಗಗಳು ಒಂದಾಗಿ ಗ್ರಹಿಸಲ್ಪಡುತ್ತವೆ. 3ನೆಯ ಚಿತ್ರದಲ್ಲಿ ಮೇಲಿನಿಂದ ಕೆಳಕ್ಕೆ ಏರ್ಪಡುವ ಕೇವಲ O ಗಳಿಂದಲೇ ಅಥವಾ ಕೇವಲ X ಗಳಿಂದಲೇ ರಚಿಸಲ್ಪಟ್ಟ ಕಂಬ ಸಾಲುಗಳನ್ನು ಕಾಣುತ್ತೇವೆಯೇ ಹೊರತು XO ಕೂಡಿದ ಅಡ್ಡಸಾಲುಗಳನ್ನಲ್ಲ.
  • ಪುರ್ಣ : ಅಪುರ್ಣ ಚಿತ್ರಗಳನ್ನು ಪುರ್ಣಗೊಳಿಸುವ, ತೆರಪುಗಳನ್ನು ಭರ್ತಿ ಮಾಡುವ, ಒಂದು ಪ್ರವೃತ್ತಿ ಪ್ರತ್ಯಕ್ಷಾನುಭವದಲ್ಲಿ ಕಾಣಬರುತ್ತದೆ. ಮುಂದಿನ ಚಿತ್ರಗಳು ಅಪುರ್ಣವಾಗಿದ್ದರೂ ಅವು ಚೌಕಾಕೃತಿಗಳಾಗಿ ತೋರಿಬರುತ್ತವೆ.
  • ಸಾತತ್ಯ : ಒಂದು ಸತತ ಸರಣಿಯ ಭಾಗವಾಗಿರುವ ಪ್ರಚೋದನಾಂಶಗಳು ಒಟ್ಟಾಗಿ ಗ್ರಹಿಸಲ್ಪಡುತ್ತವೆ. 5 ನೆಯ ಚಿತ್ರದಲ್ಲಿ ಒಂದು ನೇರವಾಗಿರುವ ರೇಖೆಯನ್ನೂ ಮತ್ತೊಂದು ಬಾಗಿರುವ ರೇಖೆಯನ್ನೂ ಕಾಣಬಹುದು. ಕೇವಲ ಸಾದೃಶ್ಯ ಮತ್ತು ಸಾಮೀಪ್ಯ ನಿಯಮಗಳೇ ಕೆಲಸ ಮಾಡುವುದಾದರೆ, ಒಂದೊಂದರಲ್ಲೂ ಬಾಗಿರುವ ಮತ್ತು ನೇರವಾದ ಭಾಗಗಳನ್ನೊಳಗೊಂಡ ಎರಡು ರೇಖೆಗಳನ್ನು ಕಾಣಬೇಕಾಗಿತ್ತು. ಆದರೆ ಹಾಗೆ ಕಾಣಿಸಿಕೊಳ್ಳದೆ ಒಂದು ನೇರವಾದ ಹಾಗೂ ಮತ್ತೊಂದು ಬಾಗಿರುವ ರೇಖೆ ಕಾಣಿಸಿಕೊಳ್ಳುವುದು ಸಾತತ್ಯ ನಿಯಮದ ಅಗತ್ಯವನ್ನು ಸೂಚಿಸುತ್ತದೆ.

ಮೇಲೆ ಹೇಳಿರುವ ಸಂಘಟನಾಂಶಗಳು ಉನ್ನತ ಮಾನಸಿಕ ಪ್ರಕ್ರಿಯೆಗಳನ್ನಾಗಲೀ ವ್ಯಕ್ತಿಯ ಪುರ್ವಾನುಭವಗಳನ್ನಾಗಲೀ ಅವಲಂಬಿಸುವುದಿಲ್ಲ. ವಾಸ್ತವವಾಗಿ ಅವು ಪ್ರಚೋದನೆಗಳಲ್ಲಿಯೇ ಅಡಕವಾಗಿವೆ. ಹೀಗೆ ಪ್ರಚೋದನೆಗಳಲ್ಲಿಯೇ ಅಡಕವಾಗಿರುವ ಸಂಘಟನಾಂಶಗಳನ್ನು ಗೆಸ್ಟಾಲ್ಟ್‌ವಾದಿಗಳು ಮಹತ್ತ್ವಪುರ್ಣ ಎಂದು ಪರಿಗಣಿಸಿದ್ದರೂ ಪೂರ್ವ ಪರಿಚಯ, ವಿನ್ಯಾಸ ಈ ಮೊದಲಾದ ಜೀವಿ ಸಂಬಂಧಿ ಅಂಶಗಳೂ ಪ್ರತ್ಯಕ್ಷಾನುಭವವನ್ನು ಪ್ರಭಾವಿತಗೊಳಿಸುತ್ತದೆ ಎಂದು ಗುರುತಿಸಿದ್ದಾರೆ.


ಹೀಗಿದ್ದರೂ ಗೆಸ್ಟಾಲ್ಟ್‌ವಾದಿಗಳು ಕಲಿಕೆಗಿಂತ ಹೆಚ್ಚಿನ ಪ್ರಾಧಾನ್ಯವನ್ನು ಪ್ರಚೋದನೆಗಳಲ್ಲಿ ಅಡಕವಾಗಿರುವ ಸಂಘಟನಾಂಶಗಳಿಗೇ ಕೊಟ್ಟಿದ್ದಾರೆ.

ಕಲಿಕೆ ಮತ್ತು ಅಂತರ್ದೃಷ್ಟಿ

[ಸಂಪಾದಿಸಿ]

ಗೆಸ್ಟಾಲ್ಟ್‌ ವಾದಿಗಳ ಮೊದಲ ಒಲವು ಪ್ರತ್ಯಕ್ಷಾನುಭವದ ಕಡೆಗೆ. ಇದರಲ್ಲಿ ಕಲಿಕೆಯ ಪಾತ್ರ ಮಿತವಾದದ್ದು ಎಂದ ಮಾತ್ರಕ್ಕೆ ಅವರು ಕಲಿಕೆಯ ಕ್ಷೇತ್ರವನ್ನು ಸಂಪುರ್ಣವಾಗಿ ಕಡೆಗಣಿಸಿದ್ದಾರೆ ಎಂದರ್ಥವಲ್ಲ. ಗೆಸ್ಟಾಲ್ಟ್‌ ಕಲಿಕೆಯ ಸಿದ್ಧಾಂತ ಕೋಯ್ಲರನ ಹೆಸರಿನೊಂದಿಗೂ ಅಂತರ್ದೃಷ್ಟಿ ಎಂಬ ಪದದೊಂದಿಗೂ ಕೂಡಿಹೋಗಿದೆ. ಗೆಸ್ಟಾಲ್ಟ್‌ ಮನೋವಿಜ್ಞಾನಿಗಳು ಪ್ರತ್ಯಕ್ಷಾನುಭವದ ಬಗ್ಗೆ ತಳೆದ ನಿಲುವಿನ ಧಾಟಿಯಲ್ಲಿಯೇ ಕೋಯ್ಲರ್ ತಾನು ಪ್ರಾಣಿಗಳ ಮೇಲೆ ನಡೆಸಿದ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನೂ ವ್ಯಾಖ್ಯಾನ ಮಾಡುತ್ತಾನೆ. ಕಲಿಕೆಯ ಸಮಗ್ರ ಸನ್ನಿವೇಶ ಮತ್ತು ಆ ಸನ್ನಿವೇಶದಲ್ಲಿನ ವಿವಿಧ ಪ್ರಚೋದನೆಗಳ ನಡುವಣ ಸಂಬಂಧ-ಇವು ಮುಖ್ಯ ವಾಗಿ ಕೋಯ್ಲರನ ವ್ಯಾಖ್ಯಾನದಲ್ಲಿ ಪರಿಗಣನೆಗೆ ಬರುತ್ತವೆ. ಕೋಯ್ಲರನ ಅಧ್ಯಯನಗಳಲ್ಲಿ ಚಿಂಪಾಂಜಿಗಳನ್ನು ಪಂಜರದಲ್ಲಿರಿಸಿ, ಪಂಜರದಿಂದ ಸ್ವಲ್ಪ ದೂರದಲ್ಲಿ ಒಂದು ಬಾಳೆಹಣ್ಣನ್ನು ಇರಿಸಲಾಗಿತ್ತು. ಹಣ್ಣನ್ನು ಪಡೆಯುವುದಕ್ಕೆ ಅವು ತಂತಿ, ಕೋಲು, ಮತ್ತು ಪೆಟ್ಟಿಗೆ ಗಳನ್ನು ಉಪಯೋಗಿಸಿಕೊಳ್ಳುತ್ತಿದ್ದುವು. ಕೋಯ್ಲರನ ಚಿಂಪಾಂಜಿಗಳು, ಥಾರ್ನ್‌ಡೈಕ್ ಸೂಚಿಸಿದಂತೆ, ಪ್ರಯತ್ನ ಮಾಡುತ್ತ ತಪ್ಪಿದ್ದಾಗ ತಿದ್ದಿಕೊಳ್ಳುತ್ತ ಹೋಗುವ ಮಾರ್ಗ (ಟ್ರಯಲ್ ಅಂಡ್ ಎರರ್ ಮೆಥಡ್) ಹಿಡಿಯಲಿಲ್ಲ; ಅಥವಾ ಪ್ಯಾವ್ಲವ್ ಸೂಚಿಸಿದಂತೆ ಅನುಬಂಧನಕ್ಕೂ (ಕಂಡಿಷನಿಂಗ್) ಒಳಗಾಗಲಿಲ್ಲ. ಅವು ಹೊಸ ಸನ್ನಿವೇಶವನ್ನು ಮನದಟ್ಟು ಮಾಡಿಕೊಂಡು, ಸಮಗ್ರ ಸನ್ನಿವೇಶವನ್ನೇ ಒಟ್ಟಾಗಿ ಗ್ರಹಿಸಿದವು; ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದುವು.

ಕೋಯ್ಲರ್ ಒಂದು ಪ್ರಯೋಗದಲ್ಲಿ ಪಂಜರದಿಂದ ಅನತಿ ದೂರದಲ್ಲಿ ಬಾಳೆಹಣ್ಣನ್ನು ಇರಿಸಿದ. ಬಾಳೆಹಣ್ಣಿಗೆ ಎದುರಾಗಿ ಒಂದು ಕೋಲನ್ನು ಪಂಜರದ ಸರಳಿನ ಹತ್ತಿರ ಇರಿಸಿದಾಗ, ಚಿಂಪಾಂಜಿ ಹಣ್ಣು ಮತ್ತು ಕೋಲನ್ನು ಒಂದೇ ಸನ್ನಿವೇಶದ ಅಂಗಗಳಾಗಿ ಗ್ರಹಿಸಿ, ಕೋಲಿನ ಸಹಾಯದಿಂದ ಹಣ್ಣನ್ನು ತನ್ನ ಸಮೀಪಕ್ಕೆ ಎಳೆದುಕೊಳ್ಳುತ್ತಿತ್ತು. ಆದರೆ ಕೋಲನ್ನು ಪಂಜರದ ಇನ್ನೊಂದು ಭಾಗಕ್ಕೆ ಇಟ್ಟಾಗ, ಅವೆರಡೂ ಒಂದೇ ಸನ್ನಿವೇಶದ ಭಾಗಗಳೆಂದೂ ಗ್ರಹಿಸುವುದು ಚಿಂಪಾಂಜಿಗೆ ಕಷ್ಟವಾಯಿತು. ಇಂಥ ಸಂದರ್ಭಗಳಲ್ಲಿ ಸಮಸ್ಯೆಯ ಪರಿಹಾರಕ್ಕೆ ಪ್ರತ್ಯಕ್ಷಾನುಭವದ ಪುನರ್ ವ್ಯವಸ್ಥೆ ಅಗತ್ಯವಾಗುತ್ತದೆ.


ಕೋಯ್ಲರನ ಇನ್ನೊಂದು ಪ್ರಯೋಗದಲ್ಲಿ ಹೆಚ್ಚು ಕಡಿಮೆ ಮೇಲಿನ ವ್ಯವಸ್ಥೆಯನ್ನೇ ಬಳಸಿಕೊಳ್ಳಲಾಯಿತು. ಆದರೆ ಈ ಪ್ರಯೋಗದಲ್ಲಿ ಬಾಳೆಹಣ್ಣು ಯಾವುದೇ ಕೋಲಿಗೆ ನಿಲುಕದಷ್ಟು ದೂರದಲ್ಲಿತ್ತು. ಇನ್ನೊಂದು ವ್ಯತ್ಯಾಸವೆಂದರೆ ಈ ಬಾರಿ ಎರಡು ಕೋಲುಗಳಿದ್ದವು. ಒಂದು ಕೋಲಿನ ತುದಿಯಲ್ಲಿ ರಂಧ್ರವಿತ್ತು. ಮತ್ತೊಂದು ಕೋಲಿನ ತುದಿ ಚೂಪಾಗಿತ್ತು. ಅವೆರಡನ್ನೂ ಕೂಡಿಸಿ ಹಣ್ಣನ್ನು ಪಡೆಯುವುದು ಸಾಧ್ಯವಿತ್ತು. ಕೋಯ್ಲರನ ಅತಿ ಚುರುಕಾದ ಸುಲ್ತಾನ್ ಎಂಬ ಚಿಂಪಾಂಜಿ ಹಣ್ಣನ್ನು ಪಡೆಯಲು ಸುಮಾರು ಒಂದು ಗಂಟೆಯ ಕಾಲ ಯತ್ನಿಸಿತು. ಮೊದಲಿಗೆ ಒಂದು ಕೋಲಿನಿಂದ ಬಾಳೆಹಣ್ಣನ್ನು ಪಡೆಯಲು ಪ್ರಯತ್ನಿಸಿ, ಅನಂತರ ಒಂದು ಕೋಲನ್ನು ಎಷ್ಟು ದೂರ ತಳ್ಳಬಹುದೋ ಅಷ್ಟು ದೂರ ತಳ್ಳಿ, ಇನ್ನೊಂದು ಕೋಲಿನ ಸಹಾಯದಿಂದ ಮೊದಲ ಕೋಲನ್ನು ಬಾಳೆಹಣ್ಣಿಗೆ ತಾಕುವಷ್ಟರ ವರೆಗೆ ತಳ್ಳಿತು. ಅನಂತರ ಎರಡು ಕೋಲುಗಳನ್ನೂ ಇಟ್ಟುಕೊಂಡು ಆಟವಾಡಲಾರಂಭಿಸಿತು. ಹೀಗೆ ಆಡುತ್ತಿದ್ದಾಗ ಅಕಸ್ಮಾತ್ತಾಗಿ ಚೂಪಾದ ಕೋಲಿನ ತುದಿಯನ್ನು ಇನ್ನೊಂದು ಕೋಲಿನ ರಂಧ್ರದಲ್ಲಿ ಸೇರಿಸಿತು. ಆಗ ಕೋಲು ಸಾಕಷ್ಟು ಉದ್ದವಾಗಿ ತೋರಿತೋ ಇಲ್ಲವೋ ತತ್ಕ್ಷಣವೇ ಓಡಿಹೋಗಿ ಹಣ್ಣನ್ನು ಪಡೆಯಲು ಪ್ರಯತ್ನಿಸಿತು. ಎರಡು ಕೋಲುಗಳನ್ನು ಸಾಕಷ್ಟು ಭದ್ರವಾಗಿ ಜೋಡಿಸದ ಕಾರಣ ಅವು ಬೇರೆ ಬೇರೆಯಾದವು. ಕೂಡಲೇ ಅವೆರಡನ್ನೂ ಪುನಃ ಭದ್ರವಾಗಿ ಜೋಡಿಸಿ, ಉದ್ದನೆಯ ಕೋಲಿನ ಸಹಾಯದಿಂದ ಬಾಳೆಹಣ್ಣನ್ನು ಪಡೆದುಕೊಂಡಿತು. ಹಿಂದಿನ ಅನುಭವವೇ ಇಲ್ಲದೆ ಹೀಗೆ ಸಂಬಂಧವನ್ನು ಕಂಡುಕೊಂಡದ್ದು ಅಂತರ್ದೃಷ್ಟಿಯ ಕುರುಹು ಎನ್ನುವುದಾಗಿ ಕೋಯ್ಲರ್ ಪರಿಗಣಿಸುತ್ತಾನೆ.

ಕೋಯ್ಲರನ ಈ ಪ್ರಯೋಗಗಳು ಗೆಸ್ಟಾಲ್ಟ್‌ವಾದಿಗಳು ಪ್ರತಿಪಾದಿಸಿರುವ ವರ್ತನೆಯ ಬೃಹತ್ ಕಲ್ಪನೆಗೆ ಬೆಂಬಲ ನೀಡುತ್ತವೆಯಲ್ಲದೆ ಕಲಿಕೆ ನಿಜವಾಗಿ ಪರಿಸರದ ಪುನರ್ರಚನೆ ಇಲ್ಲವೆ ಪುನರ್ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಎನ್ನುವ ಗೆಸ್ಟಾಲ್ಟ್‌ ಕಲ್ಪನೆಯನ್ನು ಸಹ ಸ್ಥಿರೀಕರಿಸುತ್ತವೆ.

ರಾಬರ್ಟ್‌ ಯರ್ಕಿಸ್ ಎಂಬಾತ ಗೆಸ್ಟಾಲ್ಟ್‌ವಾದಿಗಳ ಅಂತರ್ದೃಷ್ಟಿಯಲ್ಲಿ ಅಡಕ ವಾಗಿರುವ ಸಾಮಾನ್ಯ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಿದ್ದಾನೆ.

  • ಸಮಸ್ಯಾತ್ಮಕ ಸನ್ನಿವೇಶದ ಸಮೀಕ್ಷಣೆ, ತನಿಖೆ ಅಥವಾ ಕೂಲಂಕಷ ಪರೀಕ್ಷೆ.
  • ಅನಿಶ್ಚಯತೆ, ಕಾರ್ಯನಿಲುಗಡೆ, ಏಕಾಗ್ರತೆಯಿಂದ ಕೂಡಿರುವ ಅವಧಾನ ಮನೋಭಾವ.
  • ಹೆಚ್ಚು ಕಡಿಮೆ ಸರಿ ಎಂದು ತೋರಿಬರುವ ಅನುಕ್ರಿಯೆಯನ್ನು ಪ್ರಯತ್ನಿಸುವುದು.
  • ಮೊದಲು ಅನುಕ್ರಿಯೆ ಸರಿಯಾಗಿಲ್ಲವೆಂದು ತೋರಿ ಬಂದರೆ ಅದನ್ನು ಕೈ ಬಿಟ್ಟು ಬೇರೊಂದು ಅನುಕ್ರಿಯೆಯನ್ನು ಪ್ರಯತ್ನಿಸುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಮಾರ್ಗದಿಂದ ಇನ್ನೊಂದಕ್ಕೆ ಪರಿವರ್ತನೆ ಶೀಘ್ರವಾದ ಮತ್ತು ಹಠಾತ್ತಾದ ರೀತಿಯಲ್ಲಿ ನಡೆದು ಹೋಗುವುದು.
  • ಗುರಿ ಅಥವಾ ಉದ್ದೇಶದತ್ತ ಸತತವಾದ ಅವಧಾನ ಮತ್ತು ಅದರಿಂದಾದ ಅಭಿಪ್ರೇರಣೆ.
  • ಯಾವುದೋ ಒಂದು ಸಂದಿಗ್ಧ ಗಳಿಗೆಯಲ್ಲಿ ಜೀವಿ ಅಗತ್ಯವಾದ ಹೊಂದಾಣಿಕೆಯ ಕ್ರಿಯೆಯನ್ನು ಹಠಾತ್ತನೆ ನಿರ್ವಹಿಸುವುದು.
  • ಒಮ್ಮೆ ನಿರ್ವಹಿಸಿದ ಅನಂತರದಲ್ಲಿ ಹೊಂದಾಣಿಕೆಯ ಅನುಕ್ರಿಯೆಯ ಪುನರಾವರ್ತನೆ.
  • ಸಮಸ್ಯಾತ್ಮಕ ಸನ್ನಿವೇಶಕ್ಕೆ ಅಗತ್ಯವಾದ ಅಂಶಗಳನ್ನು ಗುರುತಿಸಿ ಅವುಗಳಿಗೆ ಅವಧಾನವೀಯುವ ಸಾಮಥರ್ಯ್‌ ಮತ್ತು ಅನವಶ್ಯಕ ಅಂಶಗಳನ್ನು ಕಡೆಗಾಣಿಸುವಿಕೆ.

ಫಲದಾಯಕ ಚಿಂತನೆ (ಪ್ರೊಡಕ್ಟಿವ್ ಥಿಂಕಿಂಗ್)

[ಸಂಪಾದಿಸಿ]

ವರ್ದಿಮೀರನ ಪ್ರೊಡಕ್ಟಿವ್ ಥಿಂಕಿಂಗ್ ಎಂಬ ಕೃತಿ ಸಮಸ್ಯಾ ಪರಿಹಾರದ ಪರಿಣಾಮಕಾರಿ ವಿಧಾನಗಳನ್ನು ಸೂಚಿಸುತ್ತದೆ. ಗೆಸ್ಟಾಲ್ಟ್‌ ಕಲಿಕೆಯ ತತ್ತ್ವಗಳನ್ನು ವರ್ದಿಮೀರ್ ಮಾನವನ ಸೃಜನಾತ್ಮಕ ಆಲೋಚನೆಗೆ ಅನ್ವಯಿಸಿದ್ದಾನೆ. ಅವನ ಪ್ರಕಾರ ಆಲೋಚನೆ ಪುರ್ಣಗಳನ್ನೊಳ ಗೊಂಡಿರಬೇಕು. ಯಾರೇ ಆಗಲಿ ಸನ್ನಿವೇಶದ ಸಮಗ್ರ ನೋಟವನ್ನು ಗಣನೆಗೆ ತೆಗೆದುಕೊಳ್ಳಬೇಕು. ಸನ್ನಿವೇಶದ ವಿವರಗಳಲ್ಲಿ ಹಾದಿಯನ್ನು ಕಳೆದುಕೊಳ್ಳಬಾರದು. ತಪ್ಪುಗಳು ಅನಿವಾರ್ಯವೇ; ಆದರೆ ಕನಿಷ್ಠ ಪಕ್ಷ ಅವು ಮೆಚ್ಚಬಹುದಾದ ತಪ್ಪುಗಳಾಗಿರಬೇಕು. ಹಾಗೆ ಮಾಡುವ ತಪ್ಪುಗಳು ಸಫಲತೆಯ ಸಾಧ್ಯತೆಯನ್ನಾದರೂ ಹೊಂದಿರಬೇಕು. ಅವು ಸನ್ನಿವೇಶದ ಸ್ವರೂಪವನ್ನು ತಿಳಿಯದೆ ಮಾಡಿದ ಕುರುಡು ತಪ್ಪುಗಳಾಗಿರಬಾರದು. ಕಲಿಯುವವ ಹೇಗೆ ಸನ್ನಿವೇಶದ ಸಮಗ್ರ ಚಿತ್ರವನ್ನು ಪರಿಗಣಿಸಬೇಕೋ ಹಾಗೆಯೇ ಕಲಿಸುವವ ಕೂಡ ಸನ್ನಿವೇಶದ ಸಮಗ್ರ ಚಿತ್ರವನ್ನು ಕಲಿಯುವವನ ಮುಂದಿಡಬೇಕು. ಕಲಿಯುವವ ಸಹ ತಾನು ಮುಟ್ಟಬೇಕಾದ ಗುರಿ ಮತ್ತು ಅದನ್ನು ಸಾಧಿಸಲು ಬೇಕಾದ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇರಬೇಕು.


ಗೆಸ್ಟಾಲ್ಟ್‌ ಮನೋವಿಜ್ಞಾನದ ಅನಂತರದ ಬೆಳೆವಣಿಗೆಯಲ್ಲಿ ಗೆಸ್ಟಾಲ್ಟ್‌ವಾದವನ್ನು ಕರ್ಟ್‌ಲೆವಿನ್ ಎಂಬಾತ ವ್ಯಕ್ತಿತ್ವ ಮತ್ತು ಸಾಮಾಜಿಕ ಮನೋವಿಜ್ಞಾನದ ಅಧ್ಯಯನಗಳಿಗೆ ಅನ್ವಯಿಸಿದ್ದಾನೆ. ಸಮಾಜ ಮನೋವಿಜ್ಞಾನದ ಬೆಳೆವಣಿಗೆಯ ಮೇಲೆ ಕರ್ಟ್‌ಲೆವಿನ್ನನ ಪ್ರಭಾವ, ಹಾಗಾಗಿ ಗೆಸ್ಟಾಲ್ಟ್‌ವಾದದ ಪ್ರಭಾವ, ದೊಡ್ಡ ಪರಿಣಾಮವನ್ನು ಬೀರಿದೆ.

ಒಟ್ಟಿನಲ್ಲಿ ಮನೋವಿಜ್ಞಾನದ ಮೇಲೆ ಗೆಸ್ಟಾಲ್ಟ್‌ ಚಳವಳಿ ಅಳಿಸಲಾಗದ ಮುದ್ರೆಯನ್ನು ಒತ್ತಿದೆ. ಗೆಸ್ಟಾಲ್ಟ್‌ ದೃಷ್ಟಿ ವಿಶೇಷವಾಗಿ ಪ್ರತ್ಯಕ್ಷಾನುಭವ ಮತ್ತು ಸ್ವಲ್ಪಮಟ್ಟಿಗೆ ಕಲಿಕೆಯ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ಹಾಗಾದರೂ ಗೆಸ್ಟಾಲ್ಟ್‌ ನಿಲುವು ಅಸ್ಪಷ್ಟ ಎಂಬುದಾಗಿ ಹಲವು ವಿಮರ್ಶಕರು ವಾದಿಸಿದ್ದಾರೆ. ಗೆಸ್ಟಾಲ್ಟ್‌ರ ಮೂಲಭಾವನೆಗಳು ಮತ್ತು ಪಾರಿಭಾಷಿಕ ಪದಗಳು (ಉದಾ: ಸಂಘಟನೆ ಇತ್ಯಾದಿ) ವೈಜ್ಞಾನಿಕವಾಗಿ ಅರ್ಥವತ್ತಾದ ರೀತಿಯಲ್ಲಿ ನಿರೂಪಿತವಾಗಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಗೆಸ್ಟಾಲ್ಟ್‌ ಮನೋವಿಜ್ಞಾನ ಸಾಕಷ್ಟು ಪ್ರಾಯೋಗಿಕ ಸಂಶೋಧನೆಯ ಬೆಂಬಲವಿಲ್ಲದ ಸೈದ್ಧಾಂತಿಕ ಪ್ರತಿಪಾದನೆಯನ್ನು ಒಳಗೊಂಡಿದೆ ಎಂದು ಇನ್ನು ಕೆಲವರು ವಿಮರ್ಶಕರು ಆಪಾದಿಸಿದ್ದಾರೆ. ಅಷ್ಟೇ ಅಲ್ಲದೆ ವರ್ತನಾವಾದಿಗಳ ಪ್ರಯೋಗಗಳಿಗೆ ಹೋಲಿಸಿದಾಗ ಗೆಸ್ಟಾಲ್ಟ್‌ರ ಪ್ರಯೋಗಗಳು ಗುಣಮಟ್ಟದಲ್ಲಿ ಕಡಿಮೆಯಾಗಿವೆ ಎಂದೂ ಹೇಳಬಹುದು.