ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ರಂಗಭೂಮಿ

ವಿಕಿಸೋರ್ಸ್ದಿಂದ


ಜನಪದ ರಂಗಭೂಮಿ - ಜನಪದ ರಂಗಭೂಮಿಯ ಬೀಜರೂಪ, ಜನಪದ ನೃತ್ಯಗಳಲ್ಲಿ ಅಡಗಿದೆ ಎಂದು ವಿದ್ವಾಂಸರ ಅಭಿಪ್ರಾಯ. ಹಲವು ಬಗೆಯ ಧಾರ್ಮಿಕ ಹಾಗೂ ಲೌಕಿಕ ನೃತ್ಯಗಳನ್ನು ಸ್ವಲ್ಪಮಟ್ಟಿಗೆ ಮೈಗೂಡಿಸಿಕೊಂಡು ಮೊಳೆತ ನಾಟಕ ಅನಂತರ ವಿಶಿಷ್ಟಪ್ರಕಾರವಾಗಿ ಬೇರುಬಿಟ್ಟ ಹೆಮ್ಮರವಾಗಿ ಬೆಳೆಯಿತೆಂದು ತೋರುತ್ತದೆ.

ಕುಣಿತ, ಬಹುಶಃ ಮಾನವ ಮೊದಲು ಕಂಡ ಕೊಂಡ ವಿದ್ಯೆ ಎನ್ನಬಹುದು. ಆದಿಮಾನವನಲ್ಲಿ ಇದು ಪ್ರತಿಯೊಂದು ಸಂದರ್ಭದಲ್ಲಿಯೂ ಆಚರಿಸಲ್ಪಡುತ್ತಿತ್ತು. ಇಬ್ಬರು ಕೂಡಿದಾಗ ಕುಣಿತ ವಿಶಿಷ್ಟರೂಪವನ್ನು ತಾಳಿತು. ತಮ್ಮ ಅನಿಸಿಕೆಯನ್ನು ಹಾವಭಾವಗಳ ಮೂಲಕ ವ್ಯಕ್ತಪಡಿಸಲು ಅವರು ಪ್ರಯತ್ನಿಸಿದರು. ಅವರ ಬದುಕು ಒಂದು ವ್ಯವಸ್ಥೆಗೆ ಒಳಗಾದ ಮೇಲೆ, ಕುಣಿತ ಅದರ ಅಂಗವಾಗಿ ಉಳಿದು ಕಲೆಯ ವರ್ಗವನ್ನು ಸೇರಿತು. ಅದರಲ್ಲಿ ವೈವಿಧ್ಯ ಏರ್ಪಟ್ಟಂತೆ, ಒಂದು ಬಗೆಯ ಸಂಭಾಷಣೆಯೂ ಸೇರಿದಂತೆ ನಾಟಕ ರೂಪತಾಳಿತು. ಕ್ರಿಯೆ-ಪ್ರತಿಕ್ರಿಯೆ, ಇವುಗಳ ಸಂಘರ್ಷದಲ್ಲಿ, ನೃತ್ಯರೂಪದಲ್ಲಿಯೇ ನಾಟಕದ ಛಾಯೆಯೂ ಕಾಣಿಸಿಕೊಂಡಿತು. ಕರ್ನಾಟಕದ ಅಥವಾ ಇನ್ನಿತರ ಕಡೆಯ ಜನಪದ ನೃತ್ಯಬಗೆಗಳನ್ನು ಗಮನವಿಟ್ಟು ಪರಿಶೀಲಿಸಿದಾಗ ಈ ಅಂಶ ವ್ಯಕ್ತವಾಗುತ್ತದೆ. ದಕ್ಷಿಣ ಕರ್ನಾಟಕದ ಸುತ್ತಮುತ್ತಲ ಪ್ರದೇಶದಲ್ಲಿ ರೂಢಿಯಲ್ಲಿರುವ-ಗೊರವರ ಕುಣಿತ, ಕುರುಬರ ಕುಣಿತ, ಕೀಲು ಕುದುರೆ ಕುಣಿತ, ವೀರಭದ್ರನ ಕುಣಿತ, ಮಾರಿಕುಣಿತ, ಕರಡಿಮಜಲು ಕುಣಿತ, ಲಿಂಗದ ಬೀರನ ಕುಣಿತ, ಸೋಮನ ಕುಣಿತ, ರಂಗದ ಕುಣಿತ, ಕರಪಾಲ ಮೇಳ, ಕಂಸಾಳೆಯವರ ಕುಣಿತ, ಕೋಲೇ ಬಸವನ ಆಟ, ಕೋಲಾಟ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಾಗಿರುವ-ಭೂತದ ಕುಣಿತ, ನಾಗನೃತ್ಯ ಅಥವಾ ನಾಗಮಂಡಲ ನೃತ್ಯ ; ಹಾಗೇ ಉತ್ತರ ಕರ್ನಾಟಕದ ಕಡೆಯಲ್ಲಿ ಪ್ರಸಿದ್ಧವಾಗಿರುವ-ಎಲ್ಲಮ್ಮನ ಕುಣಿತ, ಪರವಂತರ ಕುಣಿತ, ಗೊಂದಲಿಗರ ಕುಣಿತ-ಈ ಮೊದಲಾದವುಗಳಲ್ಲಿ ನಾಟಕದ ಬೀಜರೂಪವನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಅಲ್ಲಿಯ ಸಂಭಾಷಣೆಯ ರೀತಿ, ಕುಣಿತದ ಕ್ರಮ, ವೇಷಭೂಷಣಗಳ ಹಾಗೂ ವಾದ್ಯವಿಶೇಷಗಳ ಬಳಕೆ-ಇವುಗಳಲ್ಲೆಲ್ಲ ಜನಪದ ನೃತ್ಯಗಳ ಪ್ರಭಾವವನ್ನು ಕಾಣುತ್ತೇವೆ.

ಇದು, ಕರ್ನಾಟಕದ ಅಥವಾ ಭಾರತದ ಜನಪದ ರಂಗಭೂಮಿಯನ್ನು ಕುರಿತು ವಿವೇಚಿಸುವಾಗ ಮಾತ್ರ ಗಣನೆಗೆ ಬರುವ ಮಾತಲ್ಲ. ಪ್ರಪಂಚದ ಬಹುತೇಕ ರಾಷ್ಟ್ರಗಳ ರಂಗಭೂಮಿ ಒಂದಲ್ಲ. ಒಂದು ರೀತಿಯಲ್ಲಿ ಅಸ್ತಿತ್ವವನ್ನು ಪಡೆದುಕೊಂಡದ್ದು ಇದೇ ರೀತಿಯಲ್ಲಿಯೇ ಎನ್ನಬಹುದು. ಗ್ರೀಕ್ ರಂಗಭೂಮಿ ಉಗಮಗೊಂಡದ್ದು ಡಯೋನಿಸಿಸ್ ದೇವತೆಯ ಪೂಜೆಯ ನೆಪದಲ್ಲಿ. ವಸಂತಮಾಸದಲ್ಲಿ ದ್ರಾಕ್ಷಾಪ್ರಿಯನಾದ ಆ ದೇವತೆಗೆ ಸಲ್ಲಿಸುತ್ತಿದ್ದ ಪೂಜಾವಿಧಾನದಲ್ಲಿಯೇ ಈ ಅಂಶ ಅಂತರ್ಗತವಾಗಿತ್ತು. ಮೇಳದವರು ಹಾಡುತ್ತಿದ್ದ ಪುರಾತನ ಮಹಾಪುರುಷರ ಲಾವಣಿಗಳು, ಪ್ರತ್ಯೇಕ ಪಾತ್ರಗಳನ್ನು ಸೃಷ್ಟಿಸಿಕೊಳ್ಳಲು ನೆರವಾದುವು. ಹೀಗೆ ಪಾತ್ರಸೃಷ್ಟಿ ಹಾಗೂ ಗೀತ ಸಂಭಾಷಣೆಯಿಂದಾಗಿ ನಾಟಕರೂಪ ತಲೆದೋರಿತು. ಪ್ರಕೃತಿ ಆರಾಧನೆ, ದುಷ್ಟಶಕ್ತಿಗಳ ವಶೀಕರಣ ಮುಂತಾದ ಸಂದರ್ಭಗಳಲ್ಲಿ ಹುಟ್ಟಿಕೊಂಡ ಹಲವು ಬಗೆಯ ಧಾರ್ಮಿಕ ನೃತ್ಯಗಳು ಜನಪದ ರಂಗಭೂಮಿಯ ಉಗಮಕ್ಕೆ ಬಹಳಮಟ್ಟಿಗೆ ಪ್ರೇರಣೆ ನೀಡಿದುವೆನ್ನಬಹುದು.

ಎಲ್ಲದರ ಪ್ರೇರಣೆಯಿಂದ ಹುಟ್ಟಿದ ಜನಪದ ರಂಗಭೂಮಿ ಕಾಲಾನುಕಾಲಕ್ಕೆ ಸ್ಪಷ್ಟರೂಪುಗೊಂಡು ಸ್ವತಂತ್ರ ಕಲೆಯಾಗಿ ಬೆಳೆಯಿತು. ಆದರೆ ಜನಪದ ರಂಗಭೂಮಿ ಎಂದು ತನ್ನ ಸ್ಪಷ್ಟರೂಪವನ್ನು ಪಡೆದುಕೊಂಡಿತು, ಅದರ ಮೂಲರೂಪ ಯಾವುದು, ರೂಪಾಂತರ ಹೊಂದಿದ ಕಲೆಯಾದರೆ, ಯಾವುದರಿಂದ ರೂಪಾಂತರ ಹೊಂದಿತು-ಈ ಎಲ್ಲ ಪ್ರಶ್ನೆಗಳಿಗೂ ಖಚಿತವಾಗಿ ಉತ್ತಿರಿಸಲು ಸಾಕಷ್ಟು ಆಧಾರಗಳು ದೊರೆಯುವುದಿಲ್ಲವಾದರೂ ದೊರೆಯುವಷ್ಟೇ ಆಧಾರಗಳ ಬೆನ್ನುಹತ್ತಿ ಅದರ ಸೆಲೆಯನ್ನಷ್ಟೇ ಪತ್ತೆಹಚ್ಚಬಹುದಾಗಿದೆ.

ಜನಪದ ನೃತ್ಯಗಳ ಪ್ರಭಾವದಿಂದ ಅಸ್ತಿತ್ವ ಪಡೆದ ಜನಪದ ರಂಗಭೂಮಿ ಕ್ರಮೇಣ ಹಲವಾರು ಸ್ಥಿತ್ಯಂತರಗಳಿಗೆ ಒಳಗಾಗಿ ಒಂದು ಸ್ಪಷ್ಟ ರೂಪವನ್ನು ಪಡೆದುಕೊಂಡಿತಷ್ಟೆ. ಹಾಗೆ ಅದು ಹಾದು ಬಂದ ಹಲವು ಸ್ತರಗಳಲ್ಲಿ ಸೂತ್ರದ ಗೊಂಬೆ ಆಟವೂ ಒಂದು ಎಂಬುದು ವಿದ್ವಾಂಸರ ಅಭಿಪ್ರಾಯ. ಸೂತ್ರದ ಗೊಂಬೆ ಆಟ ಕೂಡ, ಜನಪದ ರಂಗಭೂಮಿಯ ಅತ್ಯಂತ ಆಕರ್ಷಕವಾದ ಮತ್ತು ಪ್ರಾಚೀನವಾದ ಒಂದು ರೂಪ. ಇಂಥ ಒಂದು ಹೇಳಿಕೆಗೆ ಜನಪದ ನಂಬಿಕೆಯೊಂದು ಪ್ರಬಲ ಕಾರಣವಾಗಿದೆ. ದೇವತೆಗಳ ಪಾತ್ರವನ್ನು ಮಾನವರು ವಹಿಸಿಬಾರದು ಎಂಬ ನಂಬಿಕೆ ಜನತೆಯಲ್ಲಿ ಬಹು ಪ್ರಬಲವಾಗಿ ಇತ್ತಾಗಿ ನಾಟಕದ ಬಳಕೆಗೆ ಬಂದಮೇಲೂ ಆ ಒಂದು ನಂಬಿಕೆಗೆ ಕಟ್ಟುಬಿದ್ದು ಗೊಂಬೆಗಳ ಮೂಲಕ ತಮ್ಮ ಆಶೆಯನ್ನು ಈಡೇರಿಸಿಕೊಂಡರು. ಧಾರ್ಮಿಕ ನೃತ್ಯಗಳಲ್ಲಿ ಭಾಗವಹಿಸುತ್ತಿದ್ದ ಮಾನವರಿಗೆ, ನಾಟಕದಲ್ಲಿ ತೊಡಗುವಾಗ ಈ ಪ್ರಶ್ನೆ ಉದ್ಭವಿಸಿದುದೇಕೆ ಎಂಬ ಪ್ರಶ್ನೆ ಸಹಜವಾದುದೇ ಆದರೂ ಅದಕ್ಕೆ ಉತ್ತರ ಸುಲಭವಾಗಿದೆ. ನೃತ್ಯದಲ್ಲಿ ತೊಡಗಿದಾಗ ಸಂಪೂರ್ಣವಾಗಿ ಅವರಿಗಿದ್ದುದು ಧಾರ್ಮಿಕ ಭಾವನೆ, ಭಕ್ತಿಯ ಆವೇಶ. ಮನೋರಂಜನೆಯ ದೃಷ್ಟಿ ಅಲ್ಲಿ ಸ್ವಲ್ಪವೂ ಇರಲಿಲ್ಲ. ಅದು ಏನಿದ್ದರೂ ಇತ್ತೀಚಿನದು. ಆದರೆ ನಾಟಕದ್ದು ಹಾಗಲ್ಲ. ಅಲ್ಲಿ ಇವೆಲ್ಲಕ್ಕಿಂತ ಮನೋರಂಜನೆಯ ದೃಷ್ಟಿಯೇ ಪ್ರಧಾನವೆನಿಸಿತು. ಹೀಗೆನಿಸಿದಾಗ, ಪ್ರಾರಂಭದಲ್ಲಿ ಮಾನವ ಅಂಥ ವೇಷವನ್ನು ಧರಿಸಿ ಕುಣಿಯಲು ಹಿಂಜರಿದಿರಬೇಕು. ಹೀಗಾಗಿ ಗೊಂಬೆಗಳ ಮೂಲಕ ತನ್ನ ಆಶೆಯನ್ನು ಈಡೇರಿಸಿಕೊಂಡಿರಲೂ ಸಾಧ್ಯ. ಅನಂತರ ಆ ನಂಬಿಕೆಯ ಪ್ರಾಬಲ್ಯ ಸಡಿಲಗೊಂಡಂತೆ, ಮಾನವನೇ ನೇರವಾಗಿ ದೇವದೇವತೆಗಳ ಪಾತ್ರವಹಿಸತೊಡಗಿದ. ಹೀಗಾಗಿ ಜನಪದಮಾನವರಂಗ ಭೂಮಿ ಅಸ್ತಿತ್ವಕ್ಕೆ ಬಂತು. ಅದರ ಜೊತೆಯಲ್ಲಿಯೇ ಸೂತ್ರದ ಗೊಂಬೆ ಆಟವೂ ಉಳಿದು ಬಂತು. ಜನಪದ ರಂಗಭೂಮಿಗೆ ಸಂಬಂಧಿಸಿದ ತೊಗಲುಗೊಂಬೆ ಆಟ ಕೂಡ ಪ್ರಾಚೀನವಾದದ್ದೇ.

ಆದ್ದರಿಂದ ಜನಪದ ರಂಗಭೂಮಿಯನ್ನು ಕುರಿತು ಪರಿಶೀಲಿಸುವಾಗ ಬಯಲಾಟ, ಸೂತ್ರದ ಗೊಂಬೆ ಆಟ ಹಾಗೂ ತೊಗಲು ಗೊಂಬೆ ಆಟ, ಈ ಮೂರನ್ನು ಕುರಿತು ಆಲೋಚಿಸಬೇಕಾಗುತ್ತದೆ. ಈ ಮೂಲದ ಮೊತ್ತವೇ ಜನಪದ ರಂಗಭೂಮಿ. ಜನಪದ ರಂಗಭೂಮಿ ವೈವಿಧ್ಯಕ್ಕೆ ಹೆಸರಾದ್ದು. ಜನಪದ ಕಲೆಗಳಲ್ಲಿ ಒಂದೇ ಮೂಲದಿಂದ ಬಂದಿರಬಹುದಾದರೂ ಪ್ರೇರಣೆ ಪಡೆದಿರಬಹುದಾದರೂ ಪ್ರಾದೇಶಿಕವಾಗಿ ಜನ ಜನಕ್ಕೆ ನಡುವಿನ ಅಂತರ ಹೆಚ್ಚಾದಂತೆಲ್ಲ ಪರಿಸರಕ್ಕೆ ತಕ್ಕಂತೆ ವ್ಯತ್ಯಾಸಗೊಂಡು ಹೊಸ ಹೊಸ ರೂಪು ತಳೆದಿರುವುದನ್ನು ಗುರುತಿಸಲಾಗದಷ್ಟು ಹಿರಿದಾಯಿತು. ಆದರೆ, ಈ ವ್ಯತ್ಯಾಸವೇನಿದ್ದರೂ ಬಾಹ್ಯವೇ ಹೊರತು ಆಂತರಿಕವಲ್ಲ. ಯಾವುದೊ ಒಂದು ಕಲೆ ಯಾವುದೊ ಒಂದು ಪ್ರಾಂತದಲ್ಲಿ ತನ್ನ ಹುಟ್ಟನ್ನು ಪಡೆದುಕೊಂಡಿರಲಿ. ಅದು ಬೇರೊಂದು ಪ್ರಾಂತದಲ್ಲಿ ಅಡಿಯಿಟ್ಟು ಹರಡುವಾಗ ಅಲ್ಲಿಯ ಪರಿಸರದ ಪ್ರಭಾವಕ್ಕೆ ಒಳಗಾಗಿ ವ್ಯತ್ಯಾಸಗಳನ್ನು ಪಡೆದುಕೊಂಡಿರುತ್ತದೆ. ಜನಪದ ರಂಗಭೂಮಿಯ ಬಗ್ಗೆಯಾದರೂ ಇದೇ ಮಾತನ್ನು ಹೇಳಬೇಕಾಗುತ್ತದೆ.

ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಯಕ್ಷಗಾನ ಬಯಲಾಟ, ತಮಿಳು ನಾಡಿನಲ್ಲಿ ತೆರಕ್ಕೂತ್ತು, ಆಂಧ್ರದ ವೀಧಿನಾಟಕ ಹಾಗೂ ಕೇರಳದ ಕಥಕಳಿ-ಇವೆಲ್ಲ ಜನಪದ ರಂಗಭೂಮಿಯ ವಿಶಿಷ್ಟರೂಪಗಳಾಗಿವೆ. ಸೂತ್ರದ ಗೊಂಬೆ ಆಟ ಮತ್ತು ತೊಗಲು ಗೊಂಬೆ ಆಟ ಕೂಡ ಅದರ ವಿಶೇಷ ಪ್ರಕಾರಗಳಾಗಿವೆ.

ಜನಪದ ರಂಗಭೂಮಿಯನ್ನು ಪ್ರಾದೇಶಿಕವಾಗಿ ಮೇಲಿನಂತೆ ವಿಭಜಿಸಬಹುದಾದರೂ ಅದರ ಅಂತಃಸತ್ವ ಮಾತ್ರ ಒಂದೇ ಮೂಲದಿಂದ ಪ್ರೇರಣೆಗೊಂಡು ಬಂದದ್ದು ಎಂಬುದು ಸೂಕ್ಷ್ಮದೃಷ್ಟಿಗೆ ವೇದ್ಯವಾಗುವ ಅಂಶವಾಗಿದೆ. ಕರ್ನಾಟಕ ಒಂದನ್ನೇ ತೆಗೆದುಕೊಂಡರು ಅದರಲ್ಲಿನ ಪ್ರಾದೇಶಿಕ ವೈವಿಧ್ಯ ಹೀಗಿದೆ :

1 ದಕ್ಷಿಣ ಕರ್ನಾಟಕದ ಜನಪದ ರಂಗ ಭೂಮಿ (ಮೂಡಲಪಾಯ) 2 ಪಶ್ಚಿಮ ಕರ್ನಾಟಕದ ಜನಪದ ರಂಗ ಭೂಮಿ (ಪಡುವಲಪಾಯ) 3 ಉತ್ತರಕರ್ನಾಟಕದ ಜನಪದ ರಂಗಭೂಮಿ ಅ ) ದೊಡ್ಡಾಟ ಆ ) ಸಣ್ಣಾಟ ಇ ) ಕೃಷ್ಣಪಾರಿಜಾತ

ಕರ್ನಾಟಕದಲ್ಲಿ ಯಕ್ಷಗಾನ-ಬಯಲಾಟ ಎಂಬ ಹೆಸರು ಪ್ರಚಲಿತವಾಗಿದ್ದರೂ ಇದನ್ನು ಆಟ, ಮೇಳ, ಅಟ್ಟದಾಟ, ಬೈಲ್ಕತೆ ಬಯಲಾಟ, ಪ್ರಸಂಗ ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ. ಇದೊಂದು ಸಂಮಿಶ್ರಕಲೆ, ಕುಣಿತದ ವಿಶಿಷ್ಟ ಬಗೆಯಿಂದಾಗಿ ಗಂಡುಕಲೆ ಎಂದೂ ಪ್ರಖ್ಯಾತಿಗೊಂಡಿದೆ. ಇದರ ಒಂದು ಮುಖ್ಯ ಅಂಗ ಗೀತ ಎಂಬಂತೆ ಕಂಡುಬಂದರೂ ಉಳಿದವುಗಳೂ ಅದಕ್ಕೆ ಬೆಂಬಲವಾಗಿದ್ದು ಅಷ್ಟೇ ಮುಖ್ಯವೆನಿಸಿವೆ. ಸಂಗೀತ, ಸಾಹಿತ್ಯ, ನೃತ್ಯ, ನಾಟಕ-ಇವುಗಳಿಂದ ಕೂಡಿ ಇದು ವಿಶಿಷ್ಟ ಶೋಭೆಯನ್ನು ಹೊಂದಿದೆ. ಬಯಲಾಟ ಇಡೀ ರಾತ್ರಿ ನಡೆಯುವ ಸಂಪ್ರದಾಯವುಳ್ಳ ಕಲೆಯಾದುದರಿಂದ ನೋಟಕರಿಗೆ ಬೇಸರ ಬಾರದಂತೆ ವಿವಿಧ ಬಗೆಯ ಕಲಾಪ್ರಕಾರಗಳನ್ನು ಅದರಲ್ಲಿ ಮೈಗೂಡಿಸಲಾಗಿದೆ. ಬಯಲಿನಲ್ಲಿ ಸಿದ್ಧಗೊಳಿಸುವ ರಂಗಸ್ಥಳವನ್ನು ಬಯಲು ರಂಗಸ್ಥಳ ಎಂದು ಕರೆದರು. ಬಯಲಾಟ ಎಂದು ಹೆಸರು ಬಂದದ್ದು ಈ ಕಾರಣದಿಂದಲೇ. ಬಯಲಾಟದ ರಂಗಸ್ಥಳ ಹೆಚ್ಚು ಆಡಂಬರವಿಲ್ಲದೆ ಅಲ್ಪವೆಚ್ಚದಲ್ಲಿ ರೂಪುಗೊಳ್ಳುವಂಥದು. ಪ್ರಮುಖವಾಗಿ ದೇವಸ್ಥಾನಗಳು,

ಧರ್ಮಕ್ಷೇತ್ರಗಳು, ಜಾತ್ರೆಗಳು ಹಾಗೂ ಊರಿನ ಮುಖ್ಯ ಭಾಗಗಳು-ಈ ರಂಗಸ್ಥಳವನ್ನು ನಿರ್ಮಿಸಲು ಯೋಗ್ಯವಾದ ಸ್ಥಳಗಳೆನಿಸಿದ್ದುವು. ಈಗ ಹೀಗೇ ಇರಬೇಕೆಂಬ ನಿಯಮವೇನೂ ಅಷ್ಟಾಗಿ ಇಲ್ಲ ನಾಲ್ಕು ಕಂಬಗಳ ಮಧ್ಯೆ ಕಾದಿರಿಸಿದ ಜಾಗವೇ ಬಯಲು ರಂಗಸ್ಥಳ. ಅದಕ್ಕೆ ಯಾವ ಮುಚ್ಚುಮರೆಯೂ ಇರುವುದಿಲ್ಲ. ಪಾತ್ರಗಳು ರಂಗಪ್ರವೇಶಿಸುವ ಸಂದರ್ಭದಲ್ಲಿ ಮಾತ್ರ ತೆರೆಯನ್ನು ಹಿಡಿದುಕೊಳ್ಳುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿಯೂ ಪ್ರಾದೇಶಿಕ ವ್ಯತ್ಯಾಸಗಳಿರುವುದು ಗಮನಾರ್ಹ. ರಂಗಸ್ಥಳದ ಸಂಪ್ರದಾಯಗಳು ಎಲ್ಲೆಡೆಯೂ ಒಂದೇ ಆಗಿದೆ. ಪ್ರಾರಂಭದಲ್ಲಿ ಗಣೇಶನ ಪೂಜೆಯಾಗುತ್ತದೆ. ಅನಂತರ ಶಾರದಾದೇವಿ ರಂಗಪ್ರವೇಶ ಮಾಡುತ್ತಾಳೆ. ಇದಾದ ಮೇಲೆ ಬಾಲಗೋಪಾಲರು ಬರುತ್ತಾರೆ. ಮುಂದೆ ನಡೆಯುವ ಆಟಕ್ಕೆ ಯಾವ ವಿಘ್ನವೂ ಬಾರದಂತೆ, ನಿರ್ವಿಘ್ನವಾಗಿ ನಡೆಯುವಂತೆ ಹರಸಲು ಭಾಗವತರು ಕೇಳಿಕೊಳ್ಳುತ್ತಾರೆ. ಇದು ಕರ್ನಾಟಕದ ಬಹುಭಾಗದಲ್ಲಿ ರೂಢಿಯಲ್ಲಿರುವಂಥದು, ಆದರೆ, ಪಡುವಲಪಾಯ ಯಕ್ಷಗಾನ ಬಯಲಾಟದಲ್ಲಿ ಮಾತ್ರ ಈ ಮೂವರು ದೇವತೆಗಳು ಬಂದು ಹೋದ ಮೇಲೆ ಎರಡು ಹೆಣ್ಣು ಪಾತ್ರಗಳು ಬಂದು ನರ್ತಿಸುತ್ತವೆ. ಇದು ಇನ್ನುಳಿದ ಕಡೆಗಳಲ್ಲಿ ಇಲ್ಲ. ಈ ಎಲ್ಲ ಸಂಪ್ರದಾಯಗಳೂ ಮುಗಿದ ಮೇಲೆ, ಭಾಗವತರು ಸಭಾವಂದನೆ ಮಾಡುತ್ತಾರೆ. ಇವೆಲ್ಲವೂ ನಾಂದಿ ಭಾಗಕ್ಕೆ ಸೇರಿದ್ದು. ಪಾತ್ರಗಳು ರಂಗಪ್ರವೇಶಿಸುವ ಕ್ರಮದಲ್ಲಿಯೂ ಒಂದು ವರ್ಗದ ಪಾತ್ರಗಳಿಗೂ ಮತ್ತೊಂದು ವರ್ಗದ ಪಾತ್ರಗಳಿಗೂ ಅಂತರವಿದೆ. ಈ ದೃಷ್ಟಿಯಿಂದ ಘೋರ ಪಾತ್ರಗಳ ಪ್ರವೇಶಕ್ರಮ ಅದ್ಭುತವಾದುದಾಗಿದೆ. ಇಂಥ ಪಾತ್ರಗಳ ಪ್ರವೇಶ ಮುಂಚಿತವಾಗಿಯೇ ಪ್ರೇಕ್ಷಕರಲ್ಲಿ ವಿಶೇಷ ಬಗೆಯ ಆಸಕ್ತಿಯನ್ನು ಕೆರಳಿಸುತ್ತದೆ. ಸಾಮಾನ್ಯವಾಗಿ ಈ ಬಗೆಯ ಪಾತ್ರಗಳು ರಂಗದ ಮುಂಭಾಗದಿಂದ ರಂಗಪ್ರವೇಶ ಮಾಡುತ್ತವೆ. ಇದಕ್ಕೆ ವಿಶೇಷವಾಗಿ ತಮಟೆಯವರಿರುತ್ತಾರೆ. ಜೊತೆಗೆ ಪಂಜನ್ನು ಹಿಡಿದವರೂ ಇರುತ್ತಾರೆ. ಯಕ್ಷಗಾನ ಬಯಲಾಟಕ್ಕೆ ಬಳಸಲಾಗುವ ಕಥಾ ವಸ್ತು-ರಾಮಾಯಣ, ಮಹಾಭಾರತ, ಭಾಗವತ ಹಾಗೂ ಪುರಾಣಗಳಿಂದ ಆಯ್ದವುಗಳಾಗಿವೆ. ಕೆಲವು ಜನಪದ ಕಥೆಗಳೂ ಐತಿಹಾಸಿಕ ಕಥಾಭಾಗಗಳೂ ಸೇರಿರುವುದುಂಟು. ಆದರೆ ಹೆಚ್ಚಿಲ್ಲ. ಪ್ರಸಂಗ ಸಾಹಿತ್ಯದ ಆಯ್ಕೆಯ ಮೂಲ ಒಂದೇ ಆಗಿದ್ದರೂ ರಚನಾ ವಿಧಾನದಲ್ಲಿ ಮೂಡಲಪಾಯ ಹಾಗೂ ಪಡುವಲಪಾಯಗಳಿಗೆ ವ್ಯತ್ಯಾಸವಿದೆ. ಮೂಡಲ ಪಾಯದ ಪ್ರಸಂಗ ಸಾಹಿತ್ಯವೆಲ್ಲ ಸಂಪೂರ್ಣವಾಗಿ ಪದ್ಯ-ಗದ್ಯಗಳೆರಡೂ ಕವಿ ನಿರ್ಮಿತವಾದರೆ, ಪಡುವಲಪಾಯದಲ್ಲಿ ಪದ್ಯ ಮಾತ್ರ ಕವಿನಿರ್ಮಿತವಾಗಿದ್ದು, ಗದ್ಯ ಆ ಪದ್ಯವನ್ನನುಸರಿಸಿ ರಂಗದ ಮೇಲೆಯೇ ಪಾತ್ರಧಾರಿಯಿಂದ ರೂಪುಗೊಳ್ಳುತ್ತದೆ.

ಬಯಲಾಟದಲ್ಲಿ ಬಳಸುವ ವಾದ್ಯವಿಶೇಷಗಳ ಸಂಖ್ಯೆ ಅಷ್ಟೇನೂ ಹೆಚ್ಚಲ್ಲದಿದ್ದರೂ ಅವು ಪರಿಣಾಮಕಾರಿಯಾದುವು. ಈ ವಾದ್ಯವಿಶೇಷಗಳ ಬಳಕೆಯಲ್ಲಿ ಪ್ರಾಂತೀಯವಾಗಿ ಭಿನ್ನತೆ ಕಂಡುಬರುತ್ತದೆ. ಮೂಡಲಪಾಯದಲ್ಲಿ-ಮೃದಂಗ, ತಾಳ, ಮುಖವೀಣೆ ಮತ್ತು ಶ್ರುತಿಗಾಗಿ ಮೊದಲು ಬಳಸುತ್ತಿದ್ದ ಪುಂಗಿಗೆ ಬದಲಾಗಿ ಈಗ ಬಳಸಲಾಗುತ್ತಿರುವ ಹಾರ್ಮೋನಿಯಂ. ಆದರೆ ಪಡುವಲಪಾಯದ ಬಡಗುತಿಟ್ಟಿನವರು ತಾಳ, ಮೃದಂಗ, ಹಾರ್ಮೋನಿಯಂ ಜೊತೆಗೆ ಚಂಡೆಯನ್ನು ವಿಶೇಷವಾಗಿ ಬಳಸುತ್ತಾರೆ. ತೆಂಕುತಿಟ್ಟಿನವರು ತಾಳಕ್ಕೆ ಬದಲಾಗಿ ಜಾಗಟೆಯನ್ನು ಬಳಸುತ್ತಾರೆ. ಇನ್ನುಳಿದುವುಗಳೆಲ್ಲ ಒಂದೇ. ಇವುಗಳ ಬಳಕೆಯ ಬಗ್ಗೆ ವಿದ್ವಾಂಸರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು ಪರಿಹಾರವನ್ನಂತೂ ಕಂಡುಕೊಳ್ಳಲು ಇದುವರೆವಿಗೂ ಸಾಧ್ಯವಾಗಿಲ್ಲ. ಬಡಗುತಿಟ್ಟಿನವರು ಇವುಗಳ ಜೊತೆಗೆ ಆಧುನಿಕ ವಾದ್ಯವಿಶೇಷಗಳನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು, ಬಯಲಾಟ ಜನಪದ ಕಲೆ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಯಾವ ರೀತಿಯಲ್ಲಿ ಸಮಂಜಸವೆನಿಸುವುದೋ ತಿಳಿಯದು. ಉತ್ತರ ಕರ್ನಾಟಕದ ದೊಡ್ಡಾಟಕ್ಕೂ ದಕ್ಷಿಣ ಕರ್ನಾಟಕದ ಬಯಲಾಟಕ್ಕೂ ಅಂಥ ಗಮನಾರ್ಹವಾದ ವ್ಯತ್ಯಾಸಗಳೇನೂ ಕಾಣಬರುವುದಿಲ್ಲ.

ಯಕ್ಷಗಾನ ಕಲೆಗೆ ಹೆಚ್ಚಿನ ಮೆರಗನ್ನೂ ಬೆಡಗನ್ನು ತುಂಬುವ ಸೌಂದರ್ಯ ವರ್ಧಕ ಸಾಧನವೆಂದರೆ-ವೇಷಭೂಷಣಗಳು. ಕನ್ನಡದ ಜನಪದದ ಅಪ್ರತಿಮ ಕಲ್ಪನಾಶಕ್ತಿ, ಕಲಾಶಕ್ತಿ, ಪ್ರತಿಭಾಶಕ್ತಿ-ಈ ಮೂರು ಅಸಾಧಾರಣ ರೀತಿಯಲ್ಲಿ ಅಲ್ಲಿ ಸಮಾವೇಶಗೊಂಡಿವೆ. ದೇವದಾನವರನ್ನಾಗಲೀ ಗಂಧರ್ವಕಿನ್ನರರನ್ನಾಗಲೀ ಯಾರೂ ಕಂಡಿಲ್ಲವಾದರೂ ಅವರ ಶಕ್ತಿಸಾಮಥ್ರ್ಯಗಳನ್ನು, ಆಕಾರವಿಕಾರಗಳನ್ನು ಪ್ರತಿಬಿಂಬಿಸುವಂಥ ಆಭರಣಗಳನ್ನು, ವೇಷಭೂಷಣಗಳನ್ನು ನಮ್ಮವರು ಕೇವಲ ಕಲ್ಪನಾಶಕ್ತಿಯಿಂದ ಅದ್ಭುತರೀತಿಯಲ್ಲಿ ಸೃಷ್ಟಿಸಿದ್ದಾರೆ. ವಾಸ್ತವಿಕ ಜಗತ್ತಿನಿಂದ ದೂರವಾದ ಇಂಥ ವ್ಯಕ್ತಿಗಳನ್ನು ಚಿತ್ರಿಸುವಲ್ಲಿ, ಅವರ ಉಡಿಗೆತೊಡಿಗೆ ಅಂದಚಂದಗಳನ್ನು ಸೆರೆಹಿಡಿಯುವಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಇಂಥ ವೇಷ ಭೂಷಣಗಳನ್ನು ನಿರ್ಮಿಸುವಲ್ಲಿ ಆಯಾ ಪ್ರಾಂತಗಳಲ್ಲಿ ಪ್ರಚಲಿತವಾಗಿದ್ದ ಜನಪದ ನೃತ್ಯಗಳ ಪ್ರಭಾವವೂ ಅವುಗಳ ಮೇಲೆ ಸಾಕಷ್ಟು ಆಗಿದೆ ಎಂಬುದು ಸ್ಪಷ್ಟ. ಒಂದೊಂದು ಪಾತ್ರದ ವೇಷಭೂಷಣವನ್ನು ನಿರ್ಮಿಸುವಲ್ಲಿಯೂ ಅವರು ತೋರಿರುವ ಜಾಣ್ಮೆ ಹಿರಿದಾದದ್ದು. ಅವರ ಕುಶಲ ಕಲೆಗಾರಿಕೆಯನ್ನು ಅಲ್ಲಿ ಗುರುತಿಸಬಹುದಾಗಿದೆ. ಒಂದು ಪಾತ್ರವನ್ನು ನೋಡುತ್ತಿದ್ದಂತೆಯೇ ಇಂಥದೇ ಪಾತ್ರ ಎಂದು ಗುರುತಿಸಬಹುದಾದಷ್ಟು ನಿರ್ದಿಷ್ಟವಾಗಿ ಅದನ್ನು ರೂಪಿಸಿದ್ದಾರೆ. ಪಾತ್ರಗಳ ಘನತೆ ಗೌರವಗಳಿಗೆ, ಸ್ಥಾನಮಾನಗಳಿಗೆ ಸರಿಬೀಳುವಂತೆ ಅವುಗಳನ್ನು ಸೃಷ್ಟಿಸಲಾಗಿದೆ. ಪ್ರಾದೇಶಿಕವಾಗಿ ಮೂಡಲಪಾಯ ಹಾಗೂ ಪಡುವಲಪಾಯ ಸಂಪ್ರದಾಯಗಳ ವೇಷ ಭೂಷಣಗಳ ಕೆಲವು ಪ್ರಮುಖ ಭೇದಗಳಿರುವುದು ಕಾಣಬರುತ್ತದೆ : 1 ಪಗಡಿಸುತ್ತುವ ಕ್ರಮ ಮೂಡಲಪಾಯದಲ್ಲಿಲ್ಲ. 2 ರಾಕ್ಷಸ ಕಿರೀಟದಲ್ಲಿಯೂ ಸಂಪೂರ್ಣ ವ್ಯತ್ಯಾಸವಿದೆ. ಪಡುವಲಪಾಯದ ಬಡಗುತಿಟ್ಟಿನ ರಾಕ್ಷಸ ವೇಷದ ಕಿರೀಟಕ್ಕೂ ಕಥಕಳಿಯ ರಾಕ್ಷಸ ವೇಷದ ಕಿರೀಟಕ್ಕೂ ಹೆಚ್ಚು ಸಾಮ್ಯ ಕಂಡುಬರುತ್ತದೆ. 3 ವಕ್ಷಕ್ಕೆ ಹಾಕಿಕೊಳ್ಳುವ ಆಭರಣ ಹಾಗೂ ಭುಜಕೀರ್ತಿಗಳಲ್ಲಿಯೂ ವ್ಯತ್ಯಾಸಗಳಿವೆ. 4 ರಾಕ್ಷಸ ವೇಷದ ಮುಖವರ್ಣಿಕೆಯ ಕ್ರಮದಲ್ಲಿ ಸಾಕಷ್ಟು ಭಿನ್ನತೆಯಿದೆ. ಇಷ್ಟಾದರೂ ಕರ್ನಾಟಕದ ಯಕ್ಷಗಾನ ಬಯಲಾಟದ ವೇಷಭೂಷಣಗಳ ರಮ್ಯತೆ ವೈವಿಧ್ಯಮಯವಾದದ್ದು. ಸ್ತ್ರೀಪಾತ್ರಗಳ ವೇಷಭೂಷಣಗಳ ನಿರ್ಮಾಣದಲ್ಲಿ ಅವರು ತೋರಿರುವ ಕೌಶಲ ಅಷ್ಟೇನೂ ಹೆಚ್ಚಿನದೆಂಬಂತೆ ತೋರದಿದ್ದರೂ ಹೆಚ್ಚು ಸಹಜವಾಗಿದೆ.

ಆಭರಣ ವಿಶೇಷಗಳಿಗೆ ಅವರು ಬಳಸಿರುವ ವಸ್ತು ಸಾಮಾನ್ಯವಾದ್ದು. ಆದರೆ ಅದನ್ನು ಅಂದಗೊಳಿಸುವಲ್ಲಿ ಅವರು ತೋರಿರುವ ಜಾಣ್ಮೆ ಅನುಪಮವಾದದ್ದು, ಪ್ರತಿಭಾಪೂರ್ಣವಾದ್ದು. ತೀರ ಸಾಮಾನ್ಯವಾದ ವಸ್ತುವನ್ನೇ ಬಳಸಿ, ಅದರಲ್ಲಿ ಅಸಾಧಾರಣವಾದ ಕೌಶಲವನ್ನು ತೋರಿದ್ದಾರೆ. ಇಂಥ ಸತ್ತ್ವಪೂರ್ಣವಾದ, ಶಕ್ತಿಪೂರ್ಣವಾದ ಹಾಗೂ ಅರ್ಥಪೂರ್ಣವಾದ ಆಭರಣ ವಿಶೇಷಗಳನ್ನು ಸಾಕಷ್ಟು ಪ್ರಬಲ ಕಾರಣಗಳಿಲ್ಲದೆ ಬದಲಾಯಿಸುವುದು ಸರಿಯಾಗಲಾರದು. ಉತ್ತರ ಕರ್ನಾಟಕದಲ್ಲಿ ದೊಡ್ಡಾಟ ಎಂಬ ಹೆಸರಿನಲ್ಲಿ ಇದು ಪ್ರಚಲಿತವಾಗಿದೆ. ವಾಸ್ತವವಾಗಿ, ದಕ್ಷಿಣ ಕರ್ನಾಟಕದ ಮೂಡಲಪಾಯಕ್ಕೂ ಇದಕ್ಕೂ ಹೆಚ್ಚಿನ ಅಂತರವೇನೂ ಇಲ್ಲ. ಇವೆರಡೂ ಒಂದೇ ಎನ್ನುವಷ್ಟು ಹತ್ತಿರವಾಗಿದೆ. ಆದರೆ, ಒಂದು ಗಮನಿಸಬಹುದಾದ ಅಂಶವೆಂದರೆ, ದೊಡ್ಡಾಟ ಅದರ ಹೆಸರೇ ಸೂಚಿಸುವಂತೆ ಆಕಾರದಲ್ಲಿ ದೊಡ್ಡದು. ಇದೊಂದನ್ನು ಬಿಟ್ಟರೆ ಉಳಿದೆಲ್ಲ ರೀತಿಯಲ್ಲೂ ಅವೆರಡೂ ಒಂದೇ.

ಜನಪದ ರಂಗಭೂಮಿಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಮತ್ತೊಂದು ನಾಟಕ ಪ್ರಕಾರ-ಸಣ್ಣಾಟ. ಹೆಸರಿಗೆ ಅನ್ವರ್ಥವಾಗಿ ಇದು ಎಲ್ಲ ರೀತಿಯಿಂದಲೂ ದೊಡ್ಡಾಟಕ್ಕಿಂತ ಚಿಕ್ಕದು. ಅದರ ಗಂಭೀರತೆಯಾಗಲಿ, ಮಹತ್ತ್ವವಾಗಲಿ ಇದರಲ್ಲಿ ಕಂಡುಬರುವುದಿಲ್ಲ. ಜನಪದ ರಂಗಭೂಮಿಯಿಂದ ಪ್ರೇರಿತವಾಗಿರುವಂತೆಯೇ ಕಂಪನಿ ನಾಟಕಗಳ ಪ್ರಭಾವಕ್ಕೂ ಒಳಗಾಗಿ ಇದು ಈಗ ಬೇರೊಂದು ರೂಪವನ್ನು ಪಡೆದುಕೊಂಡಿದೆ. ಇದರಲ್ಲಿ ಶೈವ ಸಣ್ಣಾಟಗಳು, ವೈಷ್ಣವ ಸಣ್ಣಾಟಗಳು ಎಂದು ಎರಡು ವಿಧಗಳಿವೆ. ಶ್ರೀಕೃಷ್ಣಪಾರಿಜಾತ ಉತ್ತರ ಕರ್ನಾಟಕದ ಜನಪ್ರಿಯ ನಾಟಕ ಪ್ರಕಾರ. ಇದು ಜನಪದ ರಂಗಭೂಮಿಯ ಇನ್ನಿತರ ಪ್ರಕಾರಗಳ ಪ್ರಭಾವಕ್ಕೆ ಒಳಗಾಗಿ ಸಾಕಷ್ಟು ಮಾರ್ಪಾಟು ಹೊಂದಿದೆ. ಇದಕ್ಕೆ ಹೆಚ್ಚಿನ ಇತಿಹಾಸ ಇಲ್ಲವಾದರೂ ಇಂದು ಉತ್ತರ ಕರ್ನಾಟಕದಲ್ಲಿ ಇದನ್ನು ಆಡದ ಹಳ್ಳಿಗಳಿಲ್ಲ. ಇದನ್ನು ಸಾಕಷ್ಟು ಜನಪ್ರಿಯಗೊಳಿಸಿದವರು ಗೋಕಾಕ ತಾಲ್ಲೂಕಿನ ಕುಲಗೋಡ ತಿಮ್ಮಣ್ಣ. ಈ ಒಂದು ಪ್ರಕಾರದ ಸೃಷ್ಟಿಯಲ್ಲಿ ಯಕ್ಷಗಾನದ ಹಾಗೂ ಆಂದ್ರದ ಕೂಚಿಪುಡಿಯ ಪ್ರಭಾವ ಹೆಚ್ಚಾಗಿದೆ.

ಮತ್ತೊಂದು ಬಗೆಯಾದ ಸಾಮಗಾನ ಸಂಪೂರ್ಣ ಜನಪದ ನಾಟಕ ಪ್ರಕಾರವಲ್ಲವಾದರೂ ಜನಪದ ರಂಗಭೂಮಿಯಿಂದಲೇ ಪ್ರೇರಿತವಾಗಿ ಅನಂತರ ಕಂಪನಿ ನಾಟಕಗಳ ಪ್ರಭಾವಕ್ಕೆ ಒಳಗಾಗಿ ಬೆಳೆದ ಒಂದು ರೂಪ. ಜನಪದ ನಾಟಕಗಳಿಗೂ ಇದಕ್ಕೂ ಎದ್ದುಕಾಣುವ ವ್ಯತ್ಯಾಸಗಳಿವೆ. ಜನಪದ ಮಾನವ ರಂಗಭೂಮಿಗೆ ಸಂಬಂಧಿಸಿದಂತೆ ಇಷ್ಟೆಲ್ಲ ಪ್ರಕಾರಗಳು ಕಂಡು ಬರುತ್ತವೆ.

ಜನಪದ ರಂಗಭೂಮಿಗೇ ಸಂಬಂಧಿಸಿದ ಇನ್ನೆರಡು ಪ್ರಮುಖ ಪ್ರಕಾರಗಳೆಂದರೆ-ಸೂತ್ರದ ಗೊಂಬೆಯಾಟ ಮತ್ತು ತೊಗಲುಗೊಂಬೆಯಾಟ. ಇವೆರಡೂ ಜನಪದ ರಂಗಭೂಮಿಗೆ ಇತ್ತಿರುವ ಕಾಣಿಕೆ ಅಪೂರ್ವವಾದುದು. ಗೊಂಬೆಯಾಟ ಪ್ರಪಂಚದಾದ್ಯಂತವೂ ಕಂಡುಬರುವ ಒಂದು ಕಲೆ; ಅತ್ಯಂತ ಪ್ರಾಚೀನವಾದುದೂ ಕೂಡ. ಅದರ ಪ್ರಾಚೀನತೆ ಇಷ್ಟೆಂಬುದನ್ನು ಹೇಳಲಾರದಷ್ಟು ಅದು ಹಿಂದಕ್ಕೆ ಸರಿಯುತ್ತದೆ. ಪ್ರಾಚೀನ ಕಾವ್ಯಗಳಲ್ಲಿ ಇದರ ಪ್ರಸ್ತಾಪ ಮೇಲಿಂದ ಮೇಲೆ ಬರುತ್ತದೆ. ಮಾನವರಂಗಭೂಮಿಗೆ ಸೂತ್ರದ ಗೊಂಬೆ ಆಟವೇ ಮೂಲ ಎಂಬುದನ್ನು ಬಹುತೇಕ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಚೀನೀಯರು ಎರಡು ಸಾವಿರ ವರ್ಷಗಳ ಹಿಂದೆಯೇ ಈ ಕಲೆಯನ್ನು ಜನಪ್ರಿಯಗೊಳಿಸಿದುದಾಗಿ ತಿಳಿಯುತ್ತದೆ. ಜೂಲಿಯಸ್ ಸೀಜûರನ ಕಾಲಕ್ಕೆ ಇದು ಬಹಳ ಹಳೆಯದೇ ಆಗಿತ್ತೆಂಬುದೂ ಗಮನಾರ್ಹ. ಜಾವ, ಜಪಾನುಗಳಲ್ಲಿಯೂ ಹಿಂದಿನಿಂದಲೂ ಇವು ಜನಪ್ರಿಯವಾಗಿವೆ. ಇಂಗ್ಲೆಂಡಿನಲ್ಲಿ ಇದರ ಅಪಭ್ರಂಶವೇ ಪಂಚ್ ಅಂಡ್ ಜೂಡಿ ಷೋ ಎಂಬುದಾಗಿ ಪ್ರಚಲಿತವಾಗಿತ್ತು. ಜಪಾನಿನ ರಂಗಭೂಮಿ ಉಚ್ಛ್ರಾಯಸ್ಥಿತಿಗೆ ಏರಿದ್ದು ಗೊಂಬೆಯಾಟದಿಂದ ಎಂಬುದನ್ನು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಇಟಲಿಯಿಂದ ಬಂದ ವಲಸೆಗಾರರಲ್ಲನೇಕರು ಅಮೆರಿಕ ಮತ್ತು ಲ್ಯಾಟಿನ್ ರಾಜ್ಯಗಳಲ್ಲಿ ಮುಖ್ಯವಾಗಿ ಸೂತ್ರದ ಗೊಂಬೆಯಾಟವನ್ನು ಆಡಿಸುತ್ತಾರೆ. ಜರ್ಮನಿ, ಫ್ರಾನ್ಸ್, ಇಟಲಿಗಳಲ್ಲಿಯೂ ಈ ಆಟ ಹೆಚ್ಚು ಜನಪ್ರಿಯವಾದ ಕಲೆಯಾಗಿದೆ. ಭಾರತೀಯ ರಂಗಭೂಮಿಯಾದರೂ ಇದರಿಂದ ಹೊರತಾದುದೇನೂ ಅಲ್ಲ. ಜನಪದ ಮಾನವ ರಂಗಭೂಮಿಯಾದರೂ ಇದರಿಂದ ಹೊರತಾದುದೇನೂ ಅಲ್ಲ. ಜನಪದ ಮಾನವ ರಂಗಭೂಮಿಗಿಂತಲೂ ಸೂತ್ರದ ಗೊಂಬೆಯಾಟವೇ ಪ್ರಾಚೀನವಾದ್ದು. ನಾಟಕದ ಸೂತ್ರಧಾರ ಎಂಬ ಮಾತು ಹಗ್ಗ ಹಿಡಿದು ಗೊಂಬೆ ಆಡಿಸುವುದರಿಂದ ಬಂದುದು ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಸೂತ್ರದ ಗೊಂಬೆ ಆಟವನ್ನು ಆಡಿಸುವ ಕೆಲವು ಮನೆತನಗಳೇ ಇವೆ. ತೊಗಲು ಗೊಂಬೆ ಆಟದಂತೆ, ಒಂದು ನಿರ್ದಿಷ್ಟ ವರ್ಗದವರೇ ಆಡಿಸಬೇಕೆಂಬ ನಿಯಮವೇನೂ ಇದಕ್ಕಿಲ್ಲ. ಆದರೂ ರೂಢಿಯಿಂದ ಆಡಿಸಿಕೊಂಡು ಬಂದ ಕೆಲವು ಮನೆತನಗಳು ಇಂದಿಗೂ ಉಳಿದು ಬಂದಿವೆ.

ಗೊಂಬೆ ಆಟದಲ್ಲಿ ಮಾನವರಿಗೆ ಬದಲಾಗಿ ಗೊಂಬೆಗಳು ಭಾಗವಹಿಸುತ್ತವೆ ಎಂಬುದನ್ನು ಬಿಟ್ಟರೆ, ಬಯಲಾಟಕ್ಕೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಬಳಸುವ ಕಥಾವಸ್ತು. ವಾದ್ಯವಿಶೇಷ. ಸಂಭಾಷಣಾ ರೀತಿ, ರಂಗಸಂಪ್ರದಾಯಗಳು-ಇವೆಲ್ಲ ಒಂದೇ ಆಗಿದೆ. ರಂಗಸಜ್ಜಿಕೆಯಲ್ಲಿ ಮಾತ್ರ ಆಟಕ್ಕೆ ಸರಿಹೊಂದುವಂತೆ ತನ್ನದೇ ಆದ ರೀತಿನೀತಿಗಳಿವೆ. ಕರ್ನಾಟಕದ ಸೂತ್ರದ ಗೊಂಬೆಯಾಟವನ್ನು ಗಮನಿಸಿದಾಗ, ಬಯಲಾಟದಂತೆಯೇ ಅದರಲ್ಲಿಯೂ ಪ್ರಾದೇಶಿಕ ಭಿನ್ನತೆಗಳು ಕಂಡುಬರುತ್ತವೆ. ಗೊಂಬೆಗಳು ಸಾಮಾನ್ಯವಾಗಿ 2-2 ಅಡಿ ಎತ್ರವಿರುತ್ತವೆ. ಸಂಪೂರ್ಣವಾಗಿ ಅವನ್ನು ಮರದಿಂದ ಮಾಡಿರುತ್ತಾರೆ. ಆಭರಣ ವಿಶೇಷಗಳಲ್ಲಿಯೂ ಬಹುಪಾಲು ಮರದಿಂದ ಆದವು. ಇದಕ್ಕೆ ಹಗುರವಾದ ಮರವನ್ನು ಬಳಸಲಾಗುತ್ತದೆ. ಕಪ್ಪನೆಯ ದಾರವನ್ನು ಸೂತ್ರವಾಗಿ ಬಳಸುತ್ತಾರೆ. ರಂಗದ ಎರಡು ಕಡೆಗಳಲ್ಲಿಯೂ ದೀವಣಿಗೆಗಳನ್ನು ಬಿಟ್ಟಿರುತ್ತಾರೆ. ಸೂತ್ರದ ಗೊಂಬೆಯಾಟದ ಯಶಸ್ಸು ಸಂಪೂರ್ಣವಾಗಿ, ಅದನ್ನು ಹಿಡಿದು ಆಡಿಸುವ ಸೂತ್ರಧಾರನ ಪ್ರತಿಭೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅವನು ಚುರುಕಾಗಿದ್ದಷ್ಟೂ ಅದರ ಸೊಗಸು ಹೆಚ್ಚುತ್ತದೆ.

ಸೂತ್ರದ ಗೊಂಬೆ ಆಟದಂತೆಯೇ ತೊಗಲುಗೊಂಬೆ ಆಟ ಕೂಡ ಪ್ರಸಿದ್ಧವಾದದ್ದು. ಇಲ್ಲಿನ ಗೊಂಬೆಗಳು ಹೆಸರೇ ಸೂಚಿಸುವಂತೆ ತೊಗಲಿನಿಂದ ಆದವು. ತೊಗಲು ಗೊಂಬೆ ಆಟವನ್ನು ಒಮದು ಗೊತ್ತಾದ ವರ್ಗ ಮಾತ್ರ ಆಡಿಸುತ್ತದೆ. ಇವರನ್ನು ಕಿಳ್ಳೇಕೇತರು ಎನ್ನುತ್ತಾರೆ. ಗೊಂಬೆರಾಮರು ಎನ್ನುವುದೂ ಉಂಟು. ಗೊಂಬೆ ಆಡಿಸುವುದೇ ಇವರ ಪ್ರಮುಖ ವೃತ್ತಿ. ಸಾಮಾನ್ಯವಾಗಿ ಒಂದೊಂದು ಸಂಸಾರದವರೂ ಒಂದೊಂದು ಗುಂಪಾಗಿ ಸಂಚರಿಸುತ್ತಿರುತ್ತಾರೆ. ಒಂದು ಕಡೆ ಇವರು ನೆಲಸುವುದಿಲ್ಲ. ಒಂದು ಊರಿನಲ್ಲಿ ತಂಗಿ ಒಂದೆರಡು ಆಟಗಳನ್ನು ಆಡಿ ಮುಂದಿನ ಊರಿಗೆ ಹೋಗುತ್ತಾರೆ. ಆಟಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ಇವರೇ ಹೊಂದಿಸಿಕೊಳ್ಳುತ್ತಾರೆ. ಯಾವುದಕ್ಕೂ ಯಾರನ್ನೂ ಅವಲಂಬಿಸುವುದಿಲ್ಲ. ಬೇಟೆಯಾಡಿ ಪ್ರಾಣಿಗಳ ತೊಗಲನ್ನು ಸಂಗ್ರಹಿಸುವುದರಿಂದ ಹಿಡಿದು, ಅದನ್ನು ಹದಗೊಳಿಸಿ, ಅದಕ್ಕೆ ಆಕಾರ ಕೊಟ್ಟು ಬಣ್ಣ ಬಳಿದು ಆಟಕ್ಕೆ ಸಿದ್ಧಗೊಳಿಸುವವರೆಗಿನ ಎಲ್ಲ ಕಾರ್ಯವನ್ನು ಇವರೇ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಜಿಂಕೆ ಚರ್ಮವನ್ನು ಬಳಸುತ್ತಾರೆ. ಮೇಕೆಯ ಚರ್ಮವನ್ನು ಬಳಸುತ್ತಾರೆ. ಮೇಕೆಯ ಚರ್ಮವನ್ನೂ ದೊಡ್ಡ ದೊಡ್ಡ ಚಿತ್ರಗಳನ್ನು ಮಾಡುವಲ್ಲಿ ಎಮ್ಮೆಯ ಚರ್ಮವನ್ನೂ ಬಳಸಲಾಗುತ್ತದೆ. ಇದಕ್ಕೆ ಬಳಸುವ ಸಾಹಿತ್ಯ ಸೂತ್ರದ ಗೊಂಬೆ ಆಟದಷ್ಟು ಶುದ್ಧವಾದುದಲ್ಲವಾದರೂ ಅದೇ ಮೂಲದಿಂದ ಬಂದದ್ದು. ಸಂಭಾಷಣೆಯಲ್ಲಿ ಆಶ್ಲೀಲದ ಅಂಶ ಸ್ವಲ್ಪ ಹೆಚ್ಚು ಇರುತ್ತದೆ. ತೊಗಲುಗೊಂಬೆ ಆಟಕ್ಕೆ ಬೇಕಾದ ರಂಗನಿರ್ಮಾಣದ ರೀತಿಯೇ ವಿಶಿಷ್ಟವಾದುದು. ಬಿಳಿಯ ತೆರೆಯ ಹಿಂಬದಿಯಲ್ಲಿ ಗೊಂಬೆಗಳನ್ನು ಕುಣಿಸುತ್ತಾರೆ. ಅದರ ಹಿಂದುಗಡೆ ದೀಪವನ್ನು ಹಚ್ಚಿಟ್ಟಿರುತ್ತಾರೆ. ಆದರೆ, ದೀಪವಾಗಲಿ, ಕುಣಿಸುವ ವ್ಯಕ್ತಿಯಾಗಲಿ ಮುಂದೆ ಕೂತು ನೋಡುವ ಪ್ರೇಕ್ಷಕನಿಗೆ ಕಾಣಿಸುವುದಿಲ್ಲ. ದೀಪದ ಬೆಳಕು ಗೊಂಬೆಯ ಮೇಲೆ ಬಿದ್ದು, ಗೊಂಬೆಯ ನೆರಳು ತೆರೆಯ ಮೇಲೆ ಅದ್ಭುತವಾಗಿ ಕಾಣುತ್ತದೆ. ವಿಶೇಷವೆಂದರೆ ಕುಣಿಯುವ ಬೊಂಬೆಗಳ ಕರಿಯ ಛಾಯೆಗಳು ಮಾತ್ರ ಕಾಣುವುದಿಲ್ಲ. ಅವುಗಳ ದೇಹವನ್ನು ಆವರಿಸಿರುವ ವಿವಿಧ ರಂಗುಗಳೆಲ್ಲ ಪ್ರೇಕ್ಷಕರಿಗೆ ಕಾಣುತ್ತವೆ. ಹಿಡಿದು ಕುಣಿಸಲು ಅನುಕೂಲವಾಗುವಂತೆ ಗೊಂಬೆಗಳಿಗೆ ಸಣ್ಣ ಸಣ್ಣ ಕಡ್ಡಿಗಳನ್ನು ಜೋಡಿಸಿರುತ್ತಾರೆ. ಕುಣಿಸುವವನು ತನ್ನ ಕೈಚಳಕದಿಂದ ವಿಶಿಷ್ಟ ಲೋಕವನ್ನೇ ಸೃಷ್ಟಿಸುತ್ತಾನೆ.

ತೊಗಲುಗೊಂಬೆ ಆಟಕ್ಕೆ ಬಳಸುವ ವಾದ್ಯವಿಶೇಷಗಳು ಕೂಡ ಸರಳವಾದುವು. ಮೃದಂಗ, ಮುಖವೀಣೆಗಳ ಜೊತೆಗೆ ಬಳಸುವ ಒಂದೇ ವಿಶೇಷ ಬಗೆಯ ವಾದ್ಯ ಹೆಚ್ಚು ಗಮನ ಸೆಳೆಯುತ್ತದೆ. ನೆಲದ ಮೇಲೆ ಬೋರವಾಗಿ ಹಾಕಿದ ಗಂಗಾಳವೊಂದರ ಮೇಲೆ ಮೇಣ ಮೆತ್ತಿ, ಅದರ ಮೇಲೆ ಒಂದು ಹೆಂಚಿನ ಕಡ್ಡಿಯನ್ನು ನಿಲ್ಲಿಸಿ, ಉಜ್ಜುವುದರಿಂದ ಒಂದು ವಿಶೇಷ ಬಗೆಯ ನಾದ ಹೊರಹೊಮ್ಮುತ್ತದೆ. ಇದು ಮೂಡಲಪಾಯದಲ್ಲಿ ಬಳಕೆಯಾಗುವಂಥದು. ಹಾಗೆಯೇ ಬಡಗಲಪಾಯದಲ್ಲಿ ನಾನಾಬಗೆಯ ವಾದ್ಯವನ್ನು ಹೊರಹೊಮ್ಮಿಸುವುದಕ್ಕಾಗಿ ಜೋಳದ ಕಡ್ಡಿಯಿಂದ ಮಾಡಿಕೊಂಡ ಬುರಿಬುರಿ ಅಥವಾ ಪಾವರೆ ಎಂಬ ವಾದ್ಯವನ್ನು ಬಳಸುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಹೆಂಗಸರೂ ಗಂಡಸರೂ ಕೂಡಿಯೇ ಹಿಮ್ಮೇಳವನ್ನು ಹಾಡುವುದರಿಂದ ತೊಗಲುಗೊಂಬೆ ಆಟಕ್ಕೆ ಇನ್ನೂ ಹೆಚ್ಚಿನ ಕಳೆ ಕಟ್ಟುತ್ತದೆ.

ಒಟ್ಟಿನಲ್ಲಿ ಜನಪದ ರಂಗಭೂಮಿ ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ವೈವಿಧ್ಯಕ್ಕೆ ಹಾಗೂ ವೈಶಿಷ್ಟ್ಯಕ್ಕೆ ಹೆಸರಾಗಿ, ಅಪೂರ್ವ ಮನೋರಂಜನಸಾಧನವಾಗಿ ಜೊತೆಯಲ್ಲಿಯೇ ನಮ್ಮ ಪ್ರಾಚೀನ ಸಂಸ್ಕøತಿಯ ಹಲವು ಅಂಶಗಳನ್ನು ಮೈಗೂಡಿಸಿಕೊಂಡು ಬಂದಿದೆ. ಇಂದಿನ ಬಹುತೇಕ ಶಿಷ್ಟಕಲೆಗಳಿಗೆ ಪೂರಕವಾಗಿ, ಪ್ರೇರಕವಾಗಿ ತನ್ನ ಆಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. (ಡಿ.ಕೆ.ಆರ್.)