ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒ

ವಿಕಿಸೋರ್ಸ್ದಿಂದ

ಕನ್ನಡ ವರ್ಣಮಾಲೆಯಲ್ಲಿ ಹನ್ನೆರಡನೆಯದು. ಹ್ರಸ್ವಸ್ವರಾಕ್ಷರ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ಈ ಅಕ್ಷರ ಒಂದು ಲಂಬರೇಖೆಯ ಮೇಲ್ತುದಿಯ ಎಡಭಾಗದಲ್ಲಿ ಮತ್ತು ಕೆಳತುದಿಯ ಬಲಭಾಗದಲ್ಲಿ ಅಡ್ಡರೇಖೆಗಳಿಂದ ಕೂಡಿದೆ. ಸಾತವಾಹನರ ಕಾಲದಲ್ಲಿ ವಿಶೇಷ ಬದಲಾವಣೆಯಿಲ್ಲದೆ ಅದರ ಮೂಲೆಗಳು ಗುಂಡಗಾಗುತ್ತವೆ. ಸ್ವತಂತ್ರವಾಗಿ ಈ ಅಕ್ಷರ ದೊರಕುವುದು ಕಷ್ಟವಾದುದರಿಂದ 12ನೆಯ ಶತಮಾನದವರೆಗಿನ ಇದರ ರೂಪ ಹೇಗಿದ್ದಿತೆಂದು ಹೇಳುವುದು ಕಷ್ಟ.. ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ಇದು ಈಗಿರುವ ರೂಪಕ್ಕೆ ಬಹುಸಮೀಪವಾಗಿಯೇ ಇರುವುದು ಕಂಡುಬರುತ್ತದೆ. ಇದೇ ರೂಪ ಹೊಯ್ಸಳ, ವಿಜಯನಗರ ಕಾಲಗಳಲ್ಲಿಯೂ ಮುಂದುವರಿದು ಅಕ್ಷರದ ಪ್ರಸ್ತುತ ರೂಪ ಸ್ಥಿರವಾಗುತ್ತದೆ.

ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗೆ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಮೊದಲ ರೂಪಗಳು ಸಂಸ್ಕೃತದಲ್ಲಿರುವಂತೆ ದೀರ್ಘವನ್ನೇ ಸೂಚಿಸುತ್ತವೆ. ಅನಂತರ ಕನ್ನಡ ಪದಪ್ರಯೋಗ ಹೆಚ್ಚಿದಂತೆಲ್ಲ ಹ್ರಸ್ವ ದೀರ್ಘಗಳ ರೂಪ ವ್ಯತ್ಯಾಸ ಖಚಿತವಾಗುತ್ತ ಬರುತ್ತದೆ. ಲಿಪಿಯ ದೃಷ್ಟಿಯಿಂದ ಈ ವ್ಯತ್ಯಾಸ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಈ ಅಕ್ಷರ ಪಶ್ಚ ಅರ್ಧಸಂವೃತ ಗೋಲ ಸ್ವರವನ್ನು ಸೂಚಿಸುತ್ತದೆ. (ಎ.ವಿ.ಎನ್.)