ಆರುಲಿಂಗದಲ್ಲಿ ಅರಿದಿಹೆನೆಂಬ ಆರುಹುಗೇಡಿಗಳು

ವಿಕಿಸೋರ್ಸ್ದಿಂದ



Pages   (key to Page Status)   


ಆರುಲಿಂಗದಲ್ಲಿ ಅರಿದಿಹೆನೆಂಬ ಆರುಹುಗೇಡಿಗಳು ನೀವು ಕೇಳಿರೊ ! ಆರುಲಿಂಗ ನಿಮಗೆಲ್ಲಿಹವು ? ಅದೆಂತೆಂದಡೆ:ಆಚಾರಲಿಂಗ ಬ್ರಹ್ಮಂಗೆ ಸಂಬಂಧ
ಗುರುಲಿಂಗ ವಿಷ್ಣುವಿಂಗೆ ಸಂಬಂಧ
ಶಿವಲಿಂಗ ರುದ್ರಂಗೆ ಸಂಬಂಧ
ಜಂಗಮಲಿಂಗ ಈಶ್ವರಂಗೆ ಸಂಬಂಧ
ಪ್ರಸಾದಲಿಂಗ ಸದಾಶಿವಂಗೆ ಸಂಬಂಧ
ಮಹಾಲಿಂಗ ಪರಶಿವಂಗೆ ಸಂಬಂಧ
ಇಂತಾರುಲಿಂಗ ಆರುದರುಶನಕ್ಕೆ ಸಂಬಂಧ. ನಿಮ್ಮ ಸಂಬಂಧವ ನೀವು ಬಲ್ಲಿರೆ ಹೇಳಿರೊ ! ಅರಿಯದಿರ್ದಡೆ ಕೇಳಿರೊ ! ಗುರುಲಿಂಗ ಜಂಗಮವೆಂಬ ತ್ರಿವಿಧ ಸಂಬಂಧವ ತಿಳಿದು ! ಆರು ಪರಿಯ ಶಿಲೆಯಂ ಮೆಟ್ಟಿ ! ಮೂರುಬಾಗಿಲ ತೆರೆದು ! ಶ್ರೀ ಗುರುವಿನ ಪ್ರಸಾದವ ಸವಿದು ! ಮುಂದಿರ್ದ ಲಿಂಗಸಂಗವ ಮಾಡಿ ! ಆ ಪ್ರಥಮಶಿವನೆಂಬ ಜಂಗಮವ ನೋಡುತ್ತಾ ನೋಡುತ್ತಾ ನಿಬ್ಬೆರಗಾಗಬೇಕು ! ಇದು ಕಾರಣ ಆರುಮೂರುಗಳೆಂಬ ಮರವೆಯ ಹರಿದು
ತಟ್ಟುಮುಟ್ಟುಗಳೆಂಬ ಭ್ರಮೆಯ ಜರೆದು ! ಅಂಗಲಿಂಗವೆಂಬ ದ್ವಂದ್ವವ ಹಿಂಗಿ ನಿಸ್ಸಂಗಿಯಾಗಿರ್ದೆನಯ್ಯಾ ಗುಹೇಶ್ವರಾ !