ಪರಂತಪ ವಿಜಯ ೨/ ಅಧ್ಯಾಯ ೬
ಳನ್ನು ಸೂಕ್ಷ್ಮವಾಗಿ ತಿಳಿಯಿಸಿದನು. ಎಲ್ಲರೂ ಅತ್ಯಂತ ವಿಸ್ಮಿತರಾಗಿ "ಅನನುರೂಪವಾದ ಘಟನವನ್ನು ಮಾಡಿಸಬೇಕೆಂದು ಮನುಷ್ಯನು ಯೋಚಿಸಿದರೆ, ದೈವವು ಈ ರೀತಿ ವಿಘ್ನು ಮಾಡುವುದು ಕೂಡ ಉಂಟೆಂಬುದು ಈಗ ವ್ಯಕ್ತವಾಯಿತು.” ಎಂದು ಹೇಳಿಕೊಂಡು ಹೊರಟುಹೋದರು.
ಅಧ್ಯಾಯ ೬.
ಪರಂತಪನು ಕಲ್ಪತರುವೆಂಬ ಹೋಟಲಿಗೆ ಹೋಗಿ, ಅಲ್ಲಿನ ಯಜಮಾನನನ್ನು ಕರೆದು, ಅದರಲ್ಲಿ ತನಗೆ ಅನುಕೂಲವಾದ ಕೊಟಡಿಗಳಿಗೆ ಬಾಡಿಗೆಯನ್ನು ನಿಷ್ಕರ್ಷೆ ಮಾಡಿ, ಅಲ್ಲಿ ತನ್ನ ಸಾಮಾನುಗಳನ್ನು ಇಟ್ಟು ಬೀಗಗಳನ್ನು ಹಾಕಿಕೊಂಡು, ಆರ್ಯಕೀರ್ತಿಯ ಮನೆಯನ್ನು ಕುರಿತು ಹೊರಟನು. ಅಲ್ಲಿಗೆ ಹೋಗಿ ಬಾಗಿಲನ್ನು ತಟ್ಟಿದ ಕೂಡಲೆ, ಒಬ್ಬ ಹೆಂಗಸು ಬಂದು ಬಾಗಿಲನ್ನು ತೆಗೆದಳು. ಕಾಮಮೋಹಿನಿಯ ವೃತ್ತಾಂತವನ್ನು ವಿಚಾರಿಸಿದ ಕೂಡಲೆ, ಅವಳು ಇವನನ್ನು ಒಳಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಆರ್ಯಕೀರ್ತಿಯೂ ಅವಳ ತಂದೆತಾಯಿಗಳೂ ಕಾಮಮೋಹಿನಿಯೂ ಮಾತನಾಡುತಿದ್ದರು. ಪರಂತಪನನ್ನು ನೋಡಿದಕೂಡಲೆ, ಕಾಮಮೋಹಿನಿಯು ಧಡಿಲ್ಲನೆ ಎದ್ದು, ಆತನಿಗೆ ವಂದನೆಯನ್ನು ಮಾಡಿ, ಆತನನ್ನು ಕರೆದುಕೊಂಡು ಹೋಗಿ, ತನ್ನ ಸ್ನೇಹಿತಳಿಗೂ ಆಕೆಯ ತಾಯಿತಂದೆಗಳಾದ ಸತ್ಯವತೀ ಸತ್ಯಶರ್ಮರುಗಳಿಗೂ ಭೇಟಿಮಾಡಿಸಿದಳು.
ಸತ್ಯಶರ್ಮ- ಅಯ್ಯಾ! ಪರಂತಪ! ಕಾಮಮೋನಿಯು ನನ್ನ ಮಗಳಿಗೆ ಪರಮಾಪ್ತಳು. ಆದುದರಿಂದಲೇ, ಈಕೆಯು ನನಗೆ ಮಗಳ ಸಮಾನಳು. ಈಕೆಯು, ತನ್ನ ಸಾಕುತಂದೆಯಿಂದ ಗೊತ್ತುಮಾಡಲ್ಪಟ್ಟ ದುರಾತ್ಮನಾದ ಶಂಬರನನ್ನು ಮದುವೆಮಾಡಿಕೊಳ್ಳುವುದಿಲ್ಲವೆಂದು ದೃಢಸಂಕಲ್ಪ ಮಾಡಿ, ಸುಮಿತ್ರನ ಪೋಷಣೆಯನ್ನು ಪರಿತ್ಯಜಿಸಿ ಇಲ್ಲಿಗೆ ಬಂದು ಇದ್ದಾಳೆ. ಈಕೆ ಮಾಡುತ್ತಿದ್ದ ನಿನ್ನ ಗುಣಕಥನಗಳನ್ನು ಕೇಳಿ ಸಂತುಷ್ಟರಾಗುತ್ತಿದ್ದೆವು.
ಈಗ ಈ ಸರ್ವಗುಣಗಳಿಗೂ ನಿಧಿಯಾಗಿರುವ ನಿನ್ನನ್ನು ನೋಡಿ, ನಮಗೆ ಅತ್ಯಂತ ಸಂತೋಷವಾಯಿತು. ಈ ಕಾಮಮೋಹಿಸಿಯು ಅನಾಥಳು. ಇದುವರೆಗೂ ಸುಮಿತ್ರನು ಈಕೆಗೆ ಪಿತೃಪ್ರಾಯನಾಗಿದ್ದನು ದುಷ್ಟನಾದ ಶಂಬರನಿಗೆ ಈಕೆಯನ್ನು ಕೊಟ್ಟು ವಿವಾಹಮಾಡಬೇಕೆಂದು ಆತನು ಮಾಡಿದ ನಿಶ್ಚಿತಾರ್ಥ ಮಹೋತ್ಸವ ಪ್ರಯತ್ನ ಕಾಲದಲ್ಲಿ, ಮಾಧವನ ಮರಣ ಸಮಾಚಾರವು ವಿಘ್ನವಾಗಿ ಪರಿಣಮಿಸಿತು. ಇದಕ್ಕೂ ಲಕ್ಷ್ಯ ಮಾಡದೆ ಪುನಃ ಈ ಪ್ರಯತ್ನ ಮಾಡಲು, ಆತನಿಗೆ ಈ ಸ್ತ್ರೀರತ್ನದ ಅಧೀನತೆ ತಪ್ಪಿಹೋದುದು ಮಾತ್ರವಲ್ಲದೆ, ಆತನು ಜನಾಪವಾದಕ್ಕೂ ಗುರಿಯಾದನು.
ಪರಂತಪ- ಅಯ್ಯಾ! ಸತ್ಯಶರ್ಮನೆ! ನಿನ್ನ ಸೌಜನ್ಯಕ್ಕೆ ನಾನು ಕೃತಜ್ಞನಾಗಿರುವೆನು. ದೈವವ್ಯಾಪಾರವು ವಿಚಿತ್ರವಾದುದು. ಈಕೆಯನ್ನು ಶಂಬರನಿಗೆ ವಿವಾಹಮಾಡಬೇಕೆಂದು ಸುಮಿತ್ರನು ನಿಷ್ಕರ್ಷೆ ಮಾಡಿ, ಈ ಕಾರ್ಯಕ್ಕೆ ಸಹಾಯ ಮಾಡಬೇಕೆಂದು ನನಗೆ ಪ್ರೇರಣೆಮಾಡಿದನು. ಅದೇ ರೀತಿಯಲ್ಲಿ, ನಾನು ಸಹಾಯಮಾಡುವುದರಲ್ಲಿ ಉದ್ಯುಕ್ತನಾಗಿದ್ದೆನು. ಶಂಬರನ ದುಷ್ಟಸ್ವಭಾವಗಳನ್ನೂ ದುರ್ಗುಣಗಳನ್ನೂ ಈಕೆಯ ಮಾತುಗಳಿಂದ ನಾನು ಕೇಳಿದಾರಭ್ಯ, ಸುಮಿತ್ರನ ಪ್ರಯತ್ನಕ್ಕೆ ಸಹಾಯಮಾಡುವುದು ಧರ್ಮವಲ್ಲವೆಂದು ನನ್ನ ಮನಸ್ಸಿಗೆ ತೋರಿತು. ಸುಮಿತ್ರನು ಇವಳನ್ನು ನಾನೇ
ಅಪಹರಿಸಿದ್ದೇನೆಂದು ನನ್ನ ಮೇಲೆ ಅನೇಕ ತಪ್ಪುಗಳನ್ನು ಆರೋಪಿಸಿದ್ದರಿಂದ, ನಾನು ಆತನ ಮನೆಯನ್ನು ಬಿಟ್ಟು ಕಲ್ಪತರುವಿನಲ್ಲಿ ವಾಸವಾಗಿರುವೆನು. ಈಗ ಈಕೆಯ ಅವಸ್ಥೆಯು ಬಹಳ ಶೋಚನೀಯವಾಗಿದೆ. ನೀನು ಈಕೆ ಯನ್ನು ಈಗ ಸನ್ನಿಹಿತವಾಗಿರುವ ವಿಪತ್ತು ಕಳೆಯುವವರೆಗೂ ಯಾರಿಗೂ ತಿಳಿಯದಂತೆ ಇಟ್ಟು ಕೊಂಡಿದ್ದರೆ, ದೇವರು ನಿನಗೆ ಒಳ್ಳೆಯದನ್ನು ಮಾಡುವನು; ನನ್ನ ಕೈಲಾದ ಉಪಕಾರವನ್ನು ನಾನೂ ಮಾಡುವೆನು.
ಸತ್ಯಶರ್ಮ- ಬಹುಕಾಲದಿಂದ ನಾವುಗಳು ಆಕೆಯ ಉಪಕಾರಗಳನ್ನು ಆಗಾಗ್ಗೆ ಹೊಂದುತ್ತಲಿದ್ದೇವೆ. ಈಕೆಯ ಈ ಕಷ್ಟ ಕಾಲದಲ್ಲಿ ನಮ್ಮ ಕೈಲಾದ ಉಪಕಾರವನ್ನು ಮಾಡುವುದು ನಮಗೆ ಕರ್ತವ್ಯವಾಗಿದೆ. ಈಕೆಯು, ರೂಪಯಯೌವನಗಳಲ್ಲಿಯೂ ವಿದ್ಯಾವೈದುಷ್ಯಗಳಲ್ಲಿಯ ಸೌಶೀಲ್ಯಾದಿ ಗುಣಗಳಲ್ಲಿಯೂ ಅಸಾಧಾರಣಳಾಗಿರುತ್ತಾಳೆ. ಇಂಥ ಅಮೂಲ್ಯ
ವಾದ ರತ್ನವನ್ನು ಬಡವರಾದ ನಮ್ಮ ಆಶ್ರಯದಲ್ಲಿಡುವುದಕ್ಕಿಂತ ಎಲ್ಲಾ ಭಾಗದಲ್ಲಿಯೂ ಅನುರೂಪನಾದ ನೀನು ಶೀಘ್ರದಲ್ಲಿ ವಿವಾಹಮಾಡಿ ಕೊಂಡು ಅನಾಥಳಾದ ಈಕೆಯನ್ನು ಸನಾಥಳ ನ್ನಾಗಿ ಮಾಡುವುದು ಸಂತೋಷಕರವೆಂದು ನಾನು ಕೋರುತ್ತೇನೆ.
ಪರಂತಪ - ನಿಮ್ಮ ಪ್ರಾರ್ಥನೆಗೆ ನಾನು ಪ್ರತಿ ಹೇಳುವುದಿಲ್ಲ; ಆದರೆ, ವಿವಾಹಕ್ಕೆ ಸರಿಯಾದ ಸಂದರ್ಭಗಳ ಕಾಲವೂ ಇನ್ನೂ ಒದಗಿಬಂದಿಲ್ಲ. ಇದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಂಡು ಈ ಕಾರ್ಯವನ್ನು ನೆರವೇರಿಸಬೇಕಾಗಿದೆ.
ಸತ್ಯಶರ್ಮ--ಮಾಧವನ ಆಸ್ತಿಯು ನಿನಗೆ ಉಯಿಲು ಬರೆಯಲ್ಪಟ್ಟಿದೆ ಯೆಂದು ಕೇಳುತ್ತೇವೆ; ಇದು ವಾಸ್ತವವೆ ?
ಪರಂತಪ - ವಾಸ್ತವ; ಈತನ ಮನೆ ಮಠ ಮೊದಲಾದ ಆಸ್ತಿಗಳನೆಲ್ಲ ಸ್ವಾಧೀನಪಡಿಸಿಕೊಂಡು ಅನಂತರ ಈ ವಿವಾಹವನ್ನು ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿದ್ದೇನೆ.
ಸತ್ಯಶರ್ಮ-ಮಾಧವನ ಆಸ್ತಿಯು ಅಪಾರವಾದುದು; ಆತನ ಮನೆಯ ಅರಮನೆಗೆ ಸಮಾನವಾದುದು. ಆದಾಗ್ಯೂ ಇದು ಅಪೇಕ್ಷಣೀಯವಾದು ದಲ್ಲ. ಈ ಆಸ್ತಿಯನ್ನು ಹೊಂದಿದವರು ಕ್ಷೇಮವಾಗಿಯೂ ಸೌಖ್ಯವಾಗಿಯ ಇರುವುದು ಕಷ್ಟ. ನನ್ನ ಅನುಭವದಲ್ಲಿ, ಈ ಆಸ್ತಿಯನ್ನು ಹೊಂದಿದವರೆಲ್ಲರೂ ಬಹು ಕಷ್ಟಪಟ್ಟಿದ್ದಾರೆ. ಅಂಥ ಕಷ್ಟಗಳೇನೂ ನಿನಗೆ ಬಾರದಿರಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ.
ಪರಂತಪ-ಮಾಧವನ ಗೃಹಾರಾಮಗಳ ವಿಷಯದಲ್ಲಿ ನಿನ್ನ ಹಾಗೆಯೇ ಅನೇಕರು ಅನೇಕ ವಿಧವಾಗಿ ಕಥೆಗಳನ್ನು ಹೇಳುವರು. ಇದನ್ನು ನಿನ್ನ ಮುಖದಿಂದ ವಿಶದವಾಗಿ ಕೇಳಬೇಕೆಂದು ನನಗೆ ಕುತೂಹಲವಿದೆ.
ಸತ್ಯಶರ್ಮ-ಹಾಗೆ ಕುತೂಹಲವಿದ್ದ ಪಕ್ಷದಲ್ಲಿ ಹೇಳುವೆನು, ಕೇಳು. ಈ ಮಾಧವನ ಅರಮನೆಯು, ಇಲ್ಲಿಂದ ಅರ್ಧ ಮೈಲಿ ದೂರದಲ್ಲಿ ಪರ್ವತಗಳಿಂದ ಸುತ್ತಲ್ಪಟ್ಟ ಒಂದು ಕಲ್ಲು ಕಟ್ಟಡವಾಗಿದೆ. ಇದು ಸಾವಿರಾರು ವರ್ಷಗಳ ಮುಂಚೆ ಒಬ್ಬ ಪ್ರಬಲನಾದ ಚೋರನು ಕಟ್ಟಿದ ಕಟ್ಟಡವೆಂದು ಹೇಳುತ್ತಾರೆ. ಈ ಕಟ್ಟಡದ ಸುತ್ತಲೂ ಅತ್ಯಂತ ಫಲವತ್ತಾದ ಹತ್ತು ಸಾ
ವಿರ ಎಕರೆ ಭೂಮಿಯಿರುವುದು. ಈ ಕಟ್ಟಡವು ಅನೇಕ ಉಪ್ಪರಿಗೆಗಳುಳ್ಳದ್ದಾಗಿದೆ. ಸುತ್ತಮುತ್ತಲೂ ಇರತಕ್ಕ ಬೆಟ್ಟಗಳನ್ನೂ, ಅಲ್ಲಿ ವಾಸವಾಗಿರತಕ್ಕ ದುಷ್ಟಮೃಗಗಳನ್ನೂ, ಮಧ್ಯೆ ಇರತಕ್ಕ ಈ ಕಟ್ಟಡವನ್ನೂ ನೋಡಿದರೆ, ನಗರವಾಸಿಗಳಾದ ಜನರಿಗೆ ಬಹಳ ಭಯವುಂಟಾಗುವುದು. ಈ ಅರಮನೆಯ ವಿಷಯದಲ್ಲಿ ಕೆಲವು ಕಥೆಗಳನ್ನು ಹೇಳುತ್ತಾರೆ. ಈ ಕಟ್ಟಡದಲ್ಲಿ ಅನೇಕ ನೆಲಮಾಳಿಗೆಗಳು ಇರುತ್ತವೆ. ಅಲ್ಲಿಗೆ ಹೋಗಿಬಂದವರು, ಈ ಕಟ್ಟಡದಲ್ಲಿ ಅನೇಕ ಪಿಶಾಚಿಗಳಿರುತ್ತವೆಯೆಂದೂ, ಮಧ್ಯಾಹ್ನ ವೇಳೆಯಲ್ಲಿಯೂ ಕೂಡ ಅತ್ಯಂತ ಭಯಂಕರವಾದ ಪಿಶಾಚಧ್ವನಿಗಳು ಅಲ್ಲಿ ಕೇಳಿಸುತ್ತವೆಯೆಂದೂ, ಅಲ್ಲಿರತಕ್ಕ ಅದೃಶ್ಯವಾದ ಭೂತಾದಿಗಳು ಒಂದು ಕಡೆಯಲ್ಲಿರತಕ್ಕೆ ಮನುಷ್ಯರನ್ನು ದೂರವಾದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತವೆಯೆಂದೂ, ಈ ಭೂತಗಳು ಒಂದೊಂದು ವೇಳೆಯಲ್ಲಿ ಮನುಷ್ಯರ ದೃಷ್ಟಿಗೆ ಗೋಚರವಾಗುವುದುಂಟೆಂದೂ, ಇವುಗಳಲ್ಲಿ ಕೆಲವು ಮನು ಷ್ಯಮುಖವುಳ್ಳ ವ್ಯಾಘೃಗಳಾಗಿಯೂ ವ್ಯಾಘೃ ಮುಖವುಳ್ಳ ಮನುಷ್ಯರಾಗಿಯೂ ಹಾಗೆಯೆ ಕರಡಿ ಸಿಂಹ ಕೋತಿಗಳ ಮುಖವೂ ಶರೀರವೂ ಉಳ್ಳವಾಗಿಯೂ ಇರುವುವೆಂದೂ, ಇವುಗಳನ್ನು ನೋಡಿ ಅನೇಕರು ಭಯ ಪಟ್ಟು ಓಡಿ ಹೋಗಿ ಭೀತಿಯಿಂದ ಜ್ವರಾದಿಗಳು ಬಂದು ಸತ್ತಿರುವರೆಂದೂ ಹೇಳುವರು. ಇದು ವಾಸ್ತವವಾಗಿರಬಹುದು. ಪ್ರಥಮತಃ ಈ ಕಟ್ಟಡವನ್ನು ಕಟ್ಟಿಸಿದ ಚೋರನು ಬಹು ದುರಾತ್ಮನೆಂಬುದಾಗಿಯೂ, ಅನೇಕ ಲಕ್ಷ ಜನರನ್ನು ಹಿಡಿದು ಇಲ್ಲಿಗೆ ತಂದು ಅವರ ಸರ್ವಸ್ವವನ್ನೂ ಕಿತ್ತುಕೊಂಡು ಅವರಲ್ಲಿ ಅನೇಕರನ್ನು ಕೊಂದು ಸಮಿಾಪ ಭೂಮಿಗಳಲ್ಲಿಯೇ ಅವರನ್ನು ಹೂಳಿದನೆಂಬುದಾಗಿಯೂ, ಹೀಗೆ ಮೃತರಾದವರೆಲ್ಲರೂ ಪಿಶಾಚಗಳಾಗಿ ಆ ಕಟ್ಟಡದಲ್ಲಿ ವಾಸ ಮಾಡುತ್ತಾರೆಂಬುದಾಗಿಯೂ ಹೇಳುತ್ತಾರೆ. ಇದಲ್ಲದೆ, ಈ ಕಟ್ಟಡಕ್ಕೆ ರತ್ನಾಕರವೆಂಬ ಅಭಿಧಾನವೂ ಉಂಟಾಗಿದೆ. ಇದು ಅನ್ವರ್ಥ ನಾಮವೆಂದು ತೋರುತ್ತದೆ. ಈ ದುರ್ಗದ ಪ್ರಾಂತದಲ್ಲಿ ಚಿನ್ನದ ಗಣಿಗಳು ಅನೇಕವಾಗಿರುತ್ತವೆ; ಈ ಮನೆಯ ಕೆಳಗೆ ರತ್ನಗಳ ಗಣಿಗಳು ಇರುತ್ತವೆ. ಈ ಮನೆಯ ನೆಲಮಾಳಿಗೆಗಳಲ್ಲೊಂದರ ಕೆಳಗೆ, ವಿವಿಧ ರತ್ನ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರ, ಒಂದು ಸುರಂಗವನ್ನು ಹೊಡೆದು,
ವಜ್ರ ಮೊದಲಾದ ಅಮೂಲ್ಯವಾದ ರತ್ನದ ಹಲ್ಲೆಗಳನ್ನು ಇಲ್ಲಿಂದ ತೆಗೆಯುತ್ತಾರೆಂಬ ಕಿಂವದಂತಿಯೂ ಇದೆ. ಮಾಧವನು, ಆಗಾಗ್ಗೆ ಅಮೂಲ್ಯವಾದ ವಜ್ರಗಳನ್ನು ವಿಕ್ರಯಿಸುತ್ತಿದ್ದನು. ಇವುಗಳೆಲ್ಲ ಈ ಗಣಿಗಳಿಂದ ತೆಗೆಯಲ್ಪಟ್ಟುವೆಂದು ನಂಬ ಬಹುದಾಗಿದೆ. ಈ ಆಸ್ತಿಯು ನಿನಗೆ ಬಂದುದು, ಒಂದು ವಿಧದಲ್ಲಿ ಸಂತೋಷ ಜನಕವಾಗಿರುವುದು; ಇನ್ನೊಂದು ವಿಧದಲ್ಲಿ ನಮಗೆಲ್ಲ ಭಯಾವಹವಾಗಿದೆ.
ಪರಂತಪ- ಮನುಷ್ಯರ ಮುಖವುಳ್ಳ ಹುಲಿ ಕರಡಿಗಳನ್ನು ನೀನು ನೋಡಿದ್ದೀಯಾ ?
ಸತ್ಯಶರ್ಮ- ನಾನು ಒಂದಾವೃತ್ತಿ ಹೋಗಿದ್ದೆನು. ಇವುಗಳ ದರ್ಶನವಾದ ಕೂಡಲೇ ನನಗೆ ಪ್ರಜ್ಞೆ ತಪ್ಪಿತು. ದೈವಾಧೀನದಿಂದ, ನನಗೆ ಮಿತ್ರರಾದ ಕೆಲವರು ನನ್ನನ್ನು ಈ ದುರ್ಗದಿಂದ ಹೊರಗೆ ಕರೆತಂದು ಬಿಟ್ಟರು.
ಪರಂತಪ-ಈಚೆಗೆ ಯಾರಾದರೂ ಹೋಗಿ ಈ ಕಟ್ಟಡವನ್ನು ನೋಡಿ ಕೊಂಡು ಬಂದಿದ್ದಾರೆಯೋ ?
ಸತ್ಯಶರ್ಮ-ನನಗೆ ತಿಳಿಯದು.
ಪರಂತಪ-ಈ ಕಟ್ಟಡಕ್ಕೆ ಸುತ್ತಲೂ ಫಲವತ್ತಾದ ಭೂಮಿಯು ಬಹಳವಿದೆಯೆಂದು ಹೇಳಿದೆಯಲ್ಲ! ಇದು ಸಾಗುವಳಿಯಾಗಿದೆಯೊ ?
ಸತ್ಯಶರ್ಮ- ಈ ಕಟ್ಟಡಕ್ಕೆ ದೂರದಲ್ಲಿರುವ ಭೂಮಿಗಳನ್ನೆಲ್ಲ ಜನರು ಸಾಗುವಳಿ ಮಾಡುತ್ತಾರೆ. ಇದರ ಸಮೀಪದಲ್ಲಿ ಭೂಮಿಯು ಪಾಳುಬಿದ್ದಿದೆ.
ಹೀಗೆ ಮಾತನಾಡುತ್ತಿರುವದರೊಳಗಾಗಿ, ಸತ್ಯವತಿಯೂ ಆರ್ಯಕೀರ್ತಿಯೂ ಕಾಮಮೋಹಿನಿಯೂ ಬೇರೆ ಕೊಠಡಿಗೆ ಹೋಗಿ, ವಿವಾಹಕ್ಕನುರೂಪವಾದ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು, ಪುರೋಹಿತರನ್ನು ಕರೆಯಿಸಿ ಮುಹೂರ್ತವನ್ನು ನಿಶ್ಚಯಿಸಿಕೊಂಡು, ಮಂಗಳದ್ರವ್ಯವನ್ನು ಸಿದ್ಧಪಡಿಸಿಕೊಂಡು, ತಮ್ಮ ಕಾರ್ಯಗಳನ್ನು ಸತ್ಯಶರ್ಮನಿಗೆ ತಿಳಿಸಿದರು.
ಸತ್ಯಶರ್ಮ-ಅಯ್ಯಾ ! ಪರಂತಪ ! ಸತ್ಯವತಿ ಮೊದಲಾದವರು, ಈ ದಿನ ನಿನಗೆ ಕಾಮಮೋಹಿನಿಯನ್ನು ಕೊಟ್ಟು ವಿವಾಹ ಮಹೋತ್ಸವವನ್ನು ನೆರವೇರಿಸಬೇಕೆಂದು ಸಿದ್ಧರಾಗಿರುತ್ತಾರೆ. ಇದಕ್ಕೆ ಏನು ಹೇಳುತ್ತೀಯೆ ?
ಪರಂತಪ- ಇದು ಅಸಾಧ್ಯ. ಈ ಪಟ್ಟಣದಲ್ಲಿ ನಾನು ಬಂಧು ಮಿತ್ರರೊಬ್ಬರೂ ಇಲ್ಲದೆ ಒಬ್ಬನೇ ಬಂದಿರುತ್ತೇನೆ. ನಿಲ್ಲುವುದಕ್ಕೆ ಮನೆಯಿಲ್ಲ; ಬೇಕಾದ ಸಾಮಗ್ರಿಗಳಿಲ್ಲ. ಶತ್ರುಗಳ ಮಧ್ಯದಲ್ಲಿರುತ್ತೇನೆ. ಹೀಗೆ ದುಡುಕುವುದು ಸರಿಯಲ್ಲ.
ಸತ್ಯಶರ್ಮ- ವಿವಾಹಕ್ಕೆ ಇವುಗಳಾವುವೂ ಆವಶ್ಯಕವಿಲ್ಲ. ಸಂಕಲ್ಪವೇ ಮುಖ್ಯವಾದುದು, ಕಾಮಮೋಹಿನಿಯು, ದೈವಪ್ರೇರಣೆಯಿಂದ ನಿನ್ನನ್ನು ವರಿಸಿರುವಳು. ನೀನು ವಿವಾಹ ಮಾಡಿಕೊಳ್ಳದಿದ್ದರೆ, ಅವಿವಾಹಿತಳೆಂದು ಇತರರು ಇವಳನ್ನು ಪರಿಗ್ರಹಿಸುವುದಕ್ಕೆ ಅವಕಾಶವಾಗುವುದು ; ಒಂದು ವೇಳೆ ಸುಮಿತ್ರ ಶಂಬರರು ಈಕೆಯನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗಿ ಶಂಬರನಿಗೆ ವಿವಾಹಮಾಡಿಕೊಳ್ಳುವುದಕ್ಕೂ ಅವಕಾಶವಾಗುವುದು. ನಿನಗೆ ವಿವಾಹವಾಯಿತೆಂದು ತಿಳಿದರೆ, ಇವರು ಈ ರೀತಿಯಲ್ಲಿ ಮಾಡುವುದಕ್ಕೆ ಪ್ರತಿಬಂಧಕವಾಗುವುದು.
ಪರಂತಪ- ನೀನು ಹೇಳುವುದೆಲ್ಲ ಸತ್ಯವಾದಾಗ್ಗೂ, ಈಗ ವಿವಾಹಕ್ಕೆ ಸಮಯವಲ್ಲ. ಈ ಪ್ರಯತ್ನವನ್ನು ಮಾನಸಿಕ ಮಾಡಬೇಕು.
ಹೀಗೆ ಹೇಳುತ್ತಿರುವಾಗ, ಸತ್ಯವತಿಯು ಅಲ್ಲಿಗೆ ಬಂದು “ಎಲೈ ಪರಂತಪನೆ! ನೀನು ವಿದ್ವಾಂಸನು ; ಪೂರ್ವಾಪರಜ್ಞನು ; ಊಹಾಪೋಹಗಳನ್ನು
ತಿಳಿಯದವನಲ್ಲ. ನಮ್ಮ ಮಾತುಗಳನ್ನು ನೀನು ಈಗ ಉಲ್ಲಂಘಿಸಿದರೆ, ಕಾಮನೋಹಿನಿಯು ಶಂಬರನ ಪಾಲಾಗುವಳು; ಕೂಡಲೆ ಯಮನ ಪಾಲಾಗುವುದಕ್ಕೆ ಸಂದೇಹವಿಲ್ಲ. ಇದರಿಂದ ಉಂಟಾಗುವ ಅನರ್ಥಗಳಿಗೆ ನೀನೇ ಕಾರಣನಾಗುವೆ. ಸುಮಿತ್ರ ಶಂಬರರು, ಈಕೆಯನ್ನು ಪತ್ತೆಮಾಡುವುದಕ್ಕೆ ಜನರನ್ನು ಬಿಟ್ಟಿದ್ದಾರೆ. ನಾಳೆಯೋ-ನಾಡಿದ್ದೋ ಈಕೆಯನ್ನು ಪತ್ತೆಮಾಡುವರು. ವಿವಾಹವಾಗಿದ್ದ ಪಕ್ಷದಲ್ಲಿ ಭಯವೇನೂ ಇರುವುದಿಲ್ಲ ನಮ್ಮ ಮಾತುಗಳನ್ನು ಉಲ್ಲಂಘಿಸಬೇಡ. ಮಂಗಳ ಸ್ನಾನಕ್ಕೆ ಏಳು ” ಎಂದಳು.
ಅರ್ಯಕೀರ್ತಿ- ಎಲೈ ಪರಂತಪನೆ! ನನ್ನ ತಾಯಿ ಹೇಳತಕ್ಕುದನ್ನು ಕೇಳು. ಈ ಅನಾಥಳಾದ ನನ್ನ ಸಖಿಗೆ ನಾಥನಾಗು. ಈಗ ನೀನು ಉದಾಸೀನ ಮಾಡಿದರೆ, ನನ್ನ ಸಖಿಯು ಶಂಬರನ ಕೈವಶವಾಗುವುದನ್ನು
ಬಿಟ್ಟು ಯಮನ ಅತಿಥಿಯಾಗುವುದಕ್ಕೆ ಸಿದ್ಧಳಾಗುವಳು; ನನ್ನ ಪ್ರಿಯ ಸಖಿಯನ್ನು ನಾನು ಅನುಸರಿಸದೆ ಇರಲಾರೆನು; ನನ್ನ ಮಾತಾಪಿತೃಗಳು ನನ್ನನ್ನೇ ಅನುಸರಿಸುವುದಕ್ಕೆ ಸಂಶಯವಿಲ್ಲ. ಈ ಪಾತಕಗಳಿಗೆಲ್ಲ ನೀನೇ ಕಾರಣ ಭೂತನಾಗುವೆ. ಆದುದರಿಂದ ಸಾವಕಾಶಮಾಡಬೇಡ, ಮಂಗಳ ಸ್ನಾನಕ್ಕೆ ಏಳು ; ಹೋಗೋಣ-ಏಳು.
ಪರಂತಪ-(ಸ್ವಗತ) ಈ ಆರ್ಯಕೀರ್ತಿಯೂ ಇವಳ ತಂದೆ ತಾಯಿಗಳೂ ಹೇಳುವ ಮಾತುಗಳೆಲ್ಲ ಸತ್ಯವಾಗಿ ಕಾಣುತ್ತವೆ. ಸುಮಿತ್ರ ಶಂಬರರು, ಪ್ರಬಲರಾಗಿಯೂ ಧನಿಕರಾಗಿಯೂ ಇದ್ದಾರೆ. ಶಂಬರನು, ಸರ್ವತ್ರ ಯತ್ನದಿಂದಲೂ ಈಕೆಯನ್ನು ಮದುವೆ ಮಾಡಿಕೊಳ್ಳಬೇಕೆಂದು ಇದ್ದಾನೆ. ಈಕೆಯಾದರೋ, ಶಂಬರನಲ್ಲಿ ಸ್ವಲ್ಪವೂ ಅನುರಕ್ತಳಾಗಿಲ್ಲ. ಬಲಾತ್ಕಾರ ದಿಂದ ಆತನಿಗೆ ವಿವಾಹಮಾಡಲ್ಪಟ್ಟರೆ, ಇವಳು ದೇಹವನ್ನು ಬಿಡುವುದರಲ್ಲಿ ಸಂದೇಹ ತೋರುವುದಿಲ್ಲ. ಇಷ್ಟು ಅನರ್ಥಗಳಿಗೂ ನಾನೇ ಕಾರಣ ಭೂತನಾದೇನು. ನಾನು ಈ ಸುಮಿತ್ರನ ಮನೆಗೆ ಬಾರದೇ ಇದ್ದಿದ್ದರೆ, ಬಹುಶಃ ಇವಳು ಶಂಬರನಿಗೆ ಘಟನೆಯಾಗುತ್ತಿದ್ದಳೋ ಏನೋ ತಿಳಿಯದು. ಈಗ ಕೆಲಸ ಮೀರಿತು. ಈಕೆಯನ್ನು ಈಗ ವಿವಾಹ ಮಾಡಿಕೊಂಡರೆ, ನಾನು ಸುಮಿತ್ರ ಶಂಬರರಿಗೆ ವಿರೋಧಿಯಾಗುವುದಲ್ಲದೆ, ಜನರ ಅಪವಾದಕ್ಕೂ ಗುರಿಯಾಗುತ್ತೇನೆ. ವಿವಾಹಮಾಡಿಕೊಳ್ಳದಿದ್ದರೆ, ನನ್ನಲ್ಲಿ ಅನುರಕ್ತಳಾದ ಇವಳನ್ನು ಶಂಬರನು ಆಸುರವಿವಾಹದಿಂದ ಪರಿಗ್ರಹಿಸುವನು. ಕೂಡಲೆ ಇವಳು ದೇಹತ್ಯಾಗವನ್ನು ಮಾಡುವಳು. ಮಾಧವನು ಉತ್ಕ್ರಮಣ ಕಾಲದಲ್ಲಿ ಹೇಳಿದ ಮಾತು ನಿಜವಾಯಿತು. ಅಪ್ರಾರ್ಥಿತವಾಗಿ ತನ್ನನ್ನು ಧರ್ಮಪತ್ನಿಯಾಗಿ ಪರಿಗ್ರಹಿಸೆಂದು ಪ್ರಾರ್ಥಿಸತಕ್ಕ ಬಾಲೆಯನ್ನು ನಿರಾಕರಿಸುವುದು ಧರ್ಮವಾಗಿಲ್ಲ. ಇದಲ್ಲದೆ, ಈಕೆಯು ಅನಾಥಳು ; ನನ್ನನ್ನು ನಾಥನನ್ನಾಗಿಯೂ ಪತಿಯನ್ನಾಗಿಯೂ ವರಿಸಿ ಇದ್ದಾಳೆ. ಈ ಆರ್ಯಕೀರ್ತಿ ಮೊದಲಾದವರು, ಈ ಪ್ರಾರ್ಥನೆಯನ್ನು ವಿಶೇಷವಾಗಿ ಅನುಮೋದಿಸುತಲಿದ್ದಾರೆ. ಇವಳನ್ನು ವಿವಾಹಮಾಡಿಕೊಳ್ಳುವುದು, ಅನೇಕ ಅಪಾಯಗಳಿಗೆ ಆಸ್ಪದವಾಗುತ್ತದೆ. ಆದರೂ ಚಿಂತೆಯಿಲ್ಲ. ಹಿರಿಯರಾದ ಸತ್ಯವತೀ ಸತ್ಯಶರ್ಮರ ಪ್ರಾರ್ಥನೆಯನ್ನು ಉಲ್ಲಂಘಿಸುವದು ಧರ್ಮವಲ್ಲ. ಬಂದ ಕಷ್ಟ
ಗಳನ್ನೆಲ್ಲ ಅನುಭವಿಸಲೇಬೇಕು. ನಾನು ಸತ್ಯವಂತನಾಗಿದ್ದರೆ, ಈಶ್ವರನೇ ನನ್ನನ್ನು ರಕ್ಷಿಸಲಿ. ಆತನ ಮೇಲೆ ಭಾರವನ್ನು ಹಾಕಿ, ಇವರ ಇಷ್ಟಕ್ಕನುಸಾರವಾಗಿ ನಡೆದುಕೊಳ್ಳುತ್ತೇನೆ. ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಸತ್ಯಶರ್ಮಾದಿಗಳನ್ನು ಕುರಿತು “ಎಲೈ ಸತ್ಯವತೀ ಸತ್ಯಶರ್ಮರೆ ! ಎಲೈ ಆರ್ಯಕೀರ್ತಿಯೇ ! ನಿಮ್ಮ ಪ್ರಾರ್ಥನೆಗೆ ಪ್ರತಿ ಹೇಳುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ. ಈ ವಿವಾಹದಿಂದ ಉಂಟಾಗುವ ಅನರ್ಥಗಳನ್ನು ಈಶ್ವರನು ತಪ್ಪಿಸಬೇಕು. ನಿಮ್ಮ ಇಷ್ಟ ಪ್ರಕಾರ ನಡೆಯುವುದಕ್ಕೆ ಸಿದ್ಧನಾಗಿದ್ದೇನೆ' ಎಂದು ಹೇಳಿದನು.
ಸತ್ಯವತೀ, ಸತ್ಯಶರ್ಮ, ಅರ್ಯಕೀರ್ತಿಗಳು – ಧರ್ಮಪ್ರವರ್ತಕರಾದವರಿಗೆ ಬರತಕ್ಕ ಅನರ್ಥಗಳನ್ನು ತಪ್ಪಿಸುವುದಕ್ಕೆ ಈಶ್ವರನು ಬದ್ಧ ಸಂಕಲ್ಪನಾಗಿರುವನು. ಈ ವಿಷಯದಲ್ಲಿ ವಿಚಾರಪಡಬೇಡ, ” ಎಂದು ಹೇಳಿ, ಕಾಮಮೋಹಿನೀ ಪರಂತಪರಿಗೆ ಮಂಗಳ ಸ್ನಾನವನ್ನು ಮಾಡಿಸಿ, ಅನೇಕ ಬ್ರಾಹ್ಮಣ ಸುಮಂಗಲಿಯರನ್ನು ಕರೆದುಕೊಂಡು, ಮಂಗಳ ವಾದ್ಯ ಪುರಸ್ಸರವಾಗಿ ಸಮೀಪದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಹೋಗಿ, ವಿವಾಹ ಮಹೋತ್ಸವವನ್ನು ನೆರವೇರಿಸಿದರು. ವಧೂವರರಿಬ್ಬರೂ, ಬ್ರಾಹ್ಮಣ ಸುಮಂಗಲಿಯರ ಇದುರಿಗೆ, ಅಗ್ನಿಸಾಕ್ಷಿಯಾಗಿ, ದೇವರ ಸಾನ್ನಿಧ್ಯದಲ್ಲಿ, ಧರ್ಮಾರ್ಥಕಾಮ ವಿಚಾರಗಳಲ್ಲಿ ವ್ಯಭಿಚರಿಸಿ ನಡೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಕಾಮಮೋಹಿನಿಗೂ ಪರಂತಪನಿಗೂ ವಿವಾಹ ಮಹೋತ್ಸವವು ಈ ರೀತಿಯಲ್ಲಿ ಪೂರಯಿಸಿತು.