ವಿಷಯಕ್ಕೆ ಹೋಗು

ಪರಂತಪ ವಿಜಯ ೨/ಅಧ್ಯಾಯ ೧೨

ವಿಕಿಸೋರ್ಸ್ದಿಂದ



೯೦
ಪರಂತಪ ವಿಜಯ

ಕಲಾವತಿ- ನನ್ನನ್ನು ನೀನು ಮದುವೆ ಮಾಡಿಕೊಂಡರೆ, ನನ್ನ ತಂದೆಯ ಆಸ್ತಿಯಲ್ಲಿ ಅರ್ಧ ಆಸ್ತಿಯು ನಿನಗೆ ಬರುವುದು. ತಿರಸ್ಕರಿಸಿದರೆ ನಿನಗೆ ಒಂದು ಕಾಸೂ ಬರುವುದಿಲ್ಲ.
ಶಂಬರ- ನಿನ್ನ ತಂದೆಯು ಈ ರೀತಿಯಲ್ಲಿ ಎಂದಿಗೂ ಏರ್ಪಾಡು ಮಾಡಿರಲಾರನು. ಅವನು ಬರೆದಿರತಕ್ಕ ಉಯಿಲನ್ನು ನಾನು ಪ್ರತ್ಯಕ್ಷ ವಾಗಿ ನೋಡಿದ ಹೊರತು, ನಿನ್ನ ಮಾತನ್ನು ನಾನು ನಂಬಲಾರೆನು. ಅದು ಹಾಗಿರಲಿ; ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವೆನೆಂಬ ಆಶೆಯನ್ನು ಬಿಡು. ಪ್ರಪಂಚದಲ್ಲಿ ನನಗೆ ಅನುರೂಪಳಾದ ಸ್ತ್ರೀರತ್ನವು ಒಬ್ಬಳೆ ಒಬ್ಬಳು. ಅವಳೇ ಕಾಮಮೋಹಿನಿಯು.
ಕಲಾವತಿ- ಕಾಮಮೋಹಿನಿಯನ್ನು ಮದುವೆ ಮಾಡಿಕೊಳ್ಳತಕ್ಕ ಆಶೆಯನ್ನು ನೀನು ಬಿಡು. ಅವಳು ತನಗೆ ಅನುರೂಪನಾದ ಸತಿಯನ್ನು ವರಿಸಿರುವಳು. ಅವರಿಗೆ ವಿವಾಹವು ಪೂರಯಿಸಿರುವುದು.
ಶಂಬರ- ವ್ಯರ್ಥವಾದ ಮಾತುಗಳನ್ನು ಏತಕ್ಕೆ ಅಡುವೆ ? ಕಾಮಮೋಹಿನಿಯು ನನ್ನ ಕರಗತಳಾಗಿರುತ್ತಾಳೆ. ಆ ಚಂಡಾಲನಾದ ಪರಂತಪನ ಅವತಾರವು ಒಂದು ನಿಮಿಷದಲ್ಲಿ ಪೂರಯಿಸುವುದು, ಕಾಮಮೋಹಿನಿಯು ನನ್ನ ದಾಸಿಯಾಗಿಯಯೂ ನಾಯಕಿಯಾಗಿಯೂ ಇರುವಳು.
ಕಲಾವತಿ- ಹಾಗೋ? ನಿನ್ನ ಬಡಾಯಿಯನ್ನು ನೋಡಿದರೆ, ನೀನು ಪರಂತಪನನ್ನು ಖೂನಿಮಾಡಿರಬಹುದೆಂದು ತೋರುತ್ತದೆ.
ಶಂಬರ- ಪರಂತಪನು ಶೀಘ್ರದಲ್ಲಿ ದೇಹತ್ಯಾಗವನ್ನೇ ಮಾಡಬಹುದು. ಅಥವಾ, ಜೀವಂತನಾಗಿದ್ದಾಗ್ಯೂ, ನನಗೂ ಕಾಮಮೋಹಿನಿಗೂ ಶೀಘ್ರದಲ್ಲಿ ಉಂಟಾಗತಕ್ಕ ಸಂಬಂಧವನ್ನು ತಪ್ಪಿಸುವುದಕ್ಕೆ ಅವನಿಗೆ ಸ್ವಲ್ಪವೂ ಶಕ್ತಿಯಿರುವುದಿಲ್ಲ.
   ಈ ಮಾತನ್ನು ಕೇಳಿದಕೂಡಲೆ, ಕಲಾವತಿಗೆ ಬಹಳ ಕೋಪವುಂಟಾಯಿತು. ಈ ದುರಾತ್ಮನನ್ನು ಕೊಲ್ಲೋಣವೇ ಬೇಡವೇ ಎಂದು ಯೋಚಿಸುತಿದ್ದಳು.

ಕಲಾವತಿ- ಎಲಾ ದುರಾತ್ಮನಾದ ಶಂಬರನೇ! ನನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ ವಂಚಿಸಿದ್ದೀಯೆ. ನೀನು ಮಹಾ
ಅಧ್ಯಾಯ ೧೨
೯೧



ಪಾಪಿ ನಿನ್ನಲ್ಲಿ ಸ್ವಲ್ಪವೂ ಅನುರಾಗವಿಲ್ಲದಿರತಕ್ಕ ಪರಸ್ತ್ರೀಯಾದ ಕಾಮಮೋಹಿನಿಯ ಗಂಡನನ್ನು ಸಂಹರಿಸಿ ಅವಳನ್ನು ಕೆಡಿಸಬೇಕೆಂಬ ಉದ್ಯೋಗದಲ್ಲಿ ಇರುತ್ತಿಯೆ. ಇದು ಘೋರವಾದ ಪಾಪಕೃತ್ಯವು, ಕಾಮಮೋಹಿನಿಯು ಪ್ರಾಣವನ್ನಾದರೂ ಬಿಡುವಳೆ ಹೊರತು, ನಿನ್ನಂಥ ದುರಾತ್ಮನನ್ನು ದೃಷ್ಟಿಸಿ ಕೂಡ ನೋಡಳು. ನಿನ್ನಂಥ ಚಂಡಾಲನಿಗೆ, ಪರಿಶುದ್ಧಳಾಗಿಯೂ ಪತಿವ್ರತಾ ಶಿರೋಮಣಿಯಾಗಿಯೂ ಇರುವ ಕಾಮಮೋಹಿನಿಯು ಹೆಂಡತಿಯಾಗುವಳೆ ? ಅತ್ಯುತ್ಕಟವಾದ ಪಾಪಗಳಿಗೆ ಪ್ರತೀಕಾರವು ಈ ಜನ್ಮದಲ್ಲಿ ಬಹಳ ಶೀಘ್ರದಲ್ಲಿಯೇ ಸಂಭವಿಸಬಹುದೆಂದು ಮಹಾಪುರುಷರು ಹೇಳುತ್ತಾರೆ. ನಿನ್ನ ಪಾಪಕರ್ಮಗಳ ಫಲವನ್ನು ನೀನು ಅನುಭವಿಸದಿರು ವುದಕ್ಕಾಗುವುದಿಲ್ಲ. ನಿನ್ನಂಥ ದುರಾತ್ಮನನ್ನು ಕೊಲ್ಲುವುದು ಪುಣ್ಯಕರವಾದುದು. ಕಾಮಮೋಹಿನಿಯನ್ನು ಕೆಡಿಸುವುದಕ್ಕೆ ನಿನಗೆ ಅವಕಾಶವಿಲ್ಲದಂತೆ, ಇಲ್ಲಿಯೆ ನಿನ್ನನ್ನು ಯಮಪುರಿಗೆ ಕಳುಹಿಸುವೆನು.
ಅವಳು ಪಿಸ್ತೂಲಿನಿಂದ ಅವನನ್ನು ಹೊಡೆಯಬೇಕೆಂದು ಪ್ರಯತ್ನ ಮಾಡುವುದರೊಳಗಾಗಿಯೇ, ಶಂಬರನು ಏಟು ತಿಂದ ಹುಲಿಯಂತೆ ನುಗ್ಗಿ, ಅವಳನ್ನು ಕೆಡವಿ, ಪಿಸ್ತೂಲನ್ನು ಅವಳ ಕೈಯಿಂದ ಕಿತ್ತುಕೊಂಡು, ಅವಳ ಕತ್ತನ್ನು ಕಿವಿಚಿದನು. ಅವಳು ಉಸಿರು ಸಿಕ್ಕಿಕೊಂಡು ಸತ್ತಂತೆ ಬಿದ್ದಳು. ಅಲ್ಲಿಂದ ಕಾಗದ ಪತ್ರಗಳನ್ನು ತೆಗೆದುಕೊಂಡು ಶಂಬರನು ಹೊರಟು ಹೋದನು.


ಅಧ್ಯಾಯ ೧೨
ರಂತಪನು ರತ್ನಾಕರಕ್ಕೆ ಹೊರಟುಹೋದ ರಾತ್ರಿ ಕಾಮಮೋಹಿನಿಯು, ತನ್ನ ಗಂಡನಿಗೆ ಏನು ಅನರ್ಥಗಳುಂಟಾಗುವುವೋ ಎಂದು, ಅಸಾಧಾರಣವಾದ ಭಯದಿಂದ ಪೀಡಿತಳಾಗಿದ್ದಳು. ಬೆಳಗಾಗುತ್ತಲೂ ನನ್ನ ಗಂಡನು ಬರುವನೆಂದು, ಅವನ ಆಗಮನವನ್ನು ನಿರೀಕ್ಷಿಸುತ್ತ ಇದ್ದಳು. ಸೂರ್ಯೋದಯವಾಯಿತು. ಸೂರ್ಯನು ನೆತ್ತಿಯ ಮೇಲಕ್ಕೆ ಬಂದನು. ಪರಂತಪನು ಮಾತ್ರ 
೯೨
ಪರಂತಪವಿಜಯ



ಹಿಂದಕ್ಕೆ ಬರಲಿಲ್ಲ. ಆತನು ಬರಲಿಲ್ಲವೆಂದು ನಿಟ್ಟುಸಿರು ಬಿಡುತ ಶೋಕಪರವಶಳಾಗಿರುವ ಕಾಮಮೋಹಿನಿಯನ್ನು, ಸತ್ಯಶರ್ಮನನ್ನು ನೋಡಿ “ಇಲ್ಲಿಗೂ ರತ್ನಾಕರಕ್ಕೂ ಬಹಳ ದೂರವಿರುವುದು. ನಿನ್ನ ಗಂಡನು ಇದನ್ನು ತಿಳಿದುಕೊಳ್ಳದೆ, ಜಾಗ್ರತೆಯಾಗಿ ಬರುವುದಾಗಿ ಹೇಳಿಹೋದನು. ಜಾಗ್ರತೆಯಾಗಿ ಬರುವನು. ದುಃಖವನ್ನು ಸಮಾಧಾನವಾಡಿಕೊ” ಎಂದು ಹೇಳಿ, ಸಮಾಧಾನಪಡಿಸುವುದಕ್ಕೆ ಪ್ರಯತ್ನ ಮಾಡಿದನು.
ಕಾಮಮೋಹಿನಿ -ವಿಚಾರ ಪಡದೆ ಇರುವುದು ಅಸಾಧ್ಯ. ನನ್ನ ಗಂಡನಿಗೆ ಏನೋ ಒಂದು ವಿಪತ್ತು ಸಂಭವಿಸಿರಬಹುದು. ಹಾಗಿಲ್ಲದ ಪಕ್ಷದಲ್ಲಿ ಇಷ್ಟು ಸಾವಕಾಶವಾಗುತ್ತಿರಲಿಲ್ಲ. ನಾನು ಬಹಳ ನಿರ್ಭಾಗ್ಯಳು. ಏನೋ ಪಾಪಶೇಷದ ಫಲವನ್ನು ಅನುಭವಿಸತಕ್ಕ ಕಾಲವು ನನಗೆ ಬಂದಿರುವಂತೆ ಕಾಣುತ್ತದೆ.
ಸತ್ಯಶರ್ಮ - ಎಲಾ ಪ್ರಿಯಳಾದ ಮಗುವೆ! ಈ ಶೋಕಾತಿಶಯದಿಂದ ಪರಿತಪಿಸಬೇಡ ಸ್ವಲ್ಪ ನಿಧಾನಿಸಿಕೋ, ಆತನು ಬಾರದೆ ಹೋದ ಪಕ್ಷದಲ್ಲಿ, ನಾನೇ ಹೋಗಿ ಅವನನ್ನು ಕರೆದುಕೊಂಡು ಬರುತ್ತೇನೆ.
ಕಾಮಮೋಹಿನಿ- ಎಲೈ ತಂದೆಯೇ! ನನ್ನ ಗಂಡನು ಒಂದು ವೇಳೆ ಹಿಂದಿರುಗಿ ಬಾರದೆ ಇದ್ದರೆ, ನನ್ನನ್ನು ನಿನ್ನ ಮಗಳೆಂದು ತಿಳಿದುಕೊಂಡು ನೀನೇ ಕಾಪಾಡಬೇಕು. ನೀನೇ ನನ್ನ ತಂದೆ, ಈಕೆಯೇ ನನ್ನ ತಾಯಿ. ನನ್ನ ಗಂಡನು ಕೊಟ್ಟಿರತಕ್ಕ ಈ ದ್ರವ್ಯವನ್ನು ಇಟ್ಟುಕೊಂಡು, ನನ್ನನ್ನು ಮಾನದಿಂದ ಕಾಪಾಡಬೇಕು.
ಸತ್ಯಶರ್ಮ-ಎಲೌ ಪತಿವ್ರತಾ ಶಿರೋಮಣಿಯೇ! ಇಂಥ ಕೆಟ್ಟ ಯೋಚನೆಗಳನ್ನು ಏತಕ್ಕೆ ಮಾಡುತ್ತೀಯೆ ? ನಿನ್ನ ಗಂಡನು ಶೀಘ್ರದಲ್ಲಿಯೇ ಬರುವನು. ಆತನು ಹಾಗೆ ಬಾರದಿದ್ದರೆ, ನಾನೆ ಹೋಗಿ ಅವನನ್ನು ಕರೆದು ಕೊಂಡು ಬರುವ ಪ್ರಯತ್ನವನ್ನು ಮಾಡುವೆನು. ಕ್ಲೇಶಪಡಬೇಡ.


  ಈ ವುಪದೇಶದಿಂದ, ಕಾಮಮೋಹಿನಿಯು ನಾಲ್ಕು ಘಂಟೆಯ ವರೆಗೂ ಸಮಾಧಾನವನ್ನು ವಹಿಸಿದಳು. ಪರಂತಪನು ಬರಲಿಲ್ಲ. ಅವಳ ಶೋಕವು ಇಮ್ಮಡಿಯಾಯಿತು. ಉಪಶಮನದ ಮಾತುಗಳು ಪ್ರಯೋಜನಕರವಾಗಲಿಲ್ಲ. ಹೊಸದಾಗಿ ಪಂಜರದಲ್ಲಿ ಕೂಡಲ್ಪಟ್ಟ ಪಕ್ಷಿಯಂತಿದ್ದಳು.
ಅಧ್ಯಾಯ ೧೨
೯೩



ಇವಳ ತಾಪವನ್ನು ನೋಡಿ, ಸತ್ಯಶರ್ಮನು ರತ್ನಾಕರಕ್ಕೆ ಪ್ರಯಾಣಮಾಡಿದನು. ಸತ್ಯಶರ್ಮನು ಹೊರಟುಹೋದ ಸ್ವಲ್ಪ ಹೊತ್ತಿನಲ್ಲಿ, ಕಾಮಮೋಹಿನಿಗೆ ಬರೆಯಲ್ಪಟ್ಟ ಮೇಲು ವಿಳಾಸವುಳ್ಳ ಒಂದು ಲಕೋಟು ಕಿಟಕಿಯಿಂದ ಮನೆಯೊಳಕ್ಕೆ ಬಿದ್ದಿತು. ಸತ್ಯಶರ್ಮನ ಹೆಂಡತಿಯು, ಅದನ್ನು ತೆಗೆದುಕೊಂಡು ಮೇಲುವಿಳಾಸವನ್ನು ನೋಡಿ, ಕಾಮಮೋಹಿನಿಗೆ ಕೊಟ್ಟಳು. ಅವಳು ಬಹಳ ಆತುರದಿಂದ ಲಕ್ಕೋಟನ್ನು ಒಡೆದು ಓದಿ, ಸಿಡಿಲಿನಿಂದ ಹೊಡೆಯಲ್ಪಟ್ಟಂತೆ ಮೂರ್ಛಿತಳಾದಳು. ಅದರಲ್ಲಿ ಬರೆದಿದ್ದುದೇನೆಂದರೆ:-
    ಕಾಮಮೋಹಿನಿ!
   ನಿನ್ನ ಗಂಡನು ರತ್ನಾಕರಕ್ಕೆ ಹೋಗಬೇಕೆಂದು ನನ್ನನ್ನು ಕರೆದನು. ಈ ಸ್ಥಳವು ಭೂತ ಪ್ರೇತ ಪಿಶಾಚಗಳಿಂದ ತುಂಬಲ್ಪಟ್ಟಿದೆಯೆಂಬುದಾಗಿಯೂ ಅಲ್ಲಿಗೆ ಹೋದರೆ ಪ್ರಾಣವೇ ಉಳಿಯಲಾರದೆಂಬುದಾಗಿಯೂ ನಾನು ಹೇಳಿದೆನು. ನನ್ನ ಮಾತುಗಳನ್ನು ಅವನು ನಿರಾಕರಿಸಿದನು. ರತ್ನಾಕರದ ಬಂಗಲೆಗೆ ಇವನು ಪ್ರಥಮತಃ ಪ್ರವೇಶಿಸಿದನು. ಕೂಡಲೆ ಒಂದು ಭಯಂಕರವಾದ ಭೂತವು ಬಂದಿತು. ಅದನ್ನು ನೋಡಿದ ಕೂಡಲೆ, ನಾನು ಭಯಪಟ್ಟು ಓಡಿಹೋದೆನು. ಪರಂತಪನು ಅದರೊಡನೆ ಕಾದುವುದಕ್ಕೆ ಉದ್ಯೋಗಮಾಡಿದನು. ಅದು ಅವನನ್ನು ಅಂತರಿಕ ಕೈ ಎತ್ತಿಕೊಂಡು ಹೋಗಿ ಅವನನ್ನು ಕೊಂದು ಬಿಸುಟಿತು. ಅವನ ಶವವು ರತ್ನಾಕರದ ಪಶ್ಚಿಮದಲ್ಲಿರುವ ಸಮುದ್ರಕ್ಕೆ ಬಿದ್ದು ಜಲಚರಗಳಿಗೆ ಆಹಾರ ವಾಯಿತು. ಮಿತ್ರನನ್ನು ಕಳೆದುಕೊಂಡ ನನಗೆ ಎಷ್ಟೋ ಸಂಕಟವಾಗುತ್ತದೆ. ಇಂಥ ಪತಿಯನ್ನು ಕಳೆದುಕೊಂಡ ನಿನ್ನ ದುಃಖಕ್ಕೆ ಪಾರವೇ ಇಲ್ಲ. ದೇವರು ನಿನ್ನನ್ನು ಕಾಪಾಡಬೇಕು. ಅವನಿಗೆ ಕ್ರಿಯಾದಿಗಳನ್ನು ಮಾಡಿ ಸದ್ಗತಿಯನ್ನು ಕಾಣಿಸು. ನಾನು ನನ್ನ ದೇಶಕ್ಕೆ ಹೋಗುವೆನು.


               ಅರ್ಥಪರ
  ಮೂರ್ಛೆ ಹೋಗಿದ್ದ ಕಾಮಮೋಹಿನಿಗೆ, ಸತ್ಯಶರ್ಮನ ಹೆಂಡತಿಯು ಅನೇಕ ಶೈತ್ಯೋಪಚಾರಗಳನ್ನು ಮಾಡಿದಳು. ಅವಳು ಸ್ವಲ್ಪ ಚೇತರಿಸಿ ಕೊಳ್ಳುತಲೂ, ಪುನಃ ಮೂರ್ಛೆ ಹೊಂದುತಲೂ, ರಾತ್ರಿ ಹನ್ನೆರಡು ಘಂಟೆಯ ವರೆಗೂ ಬಹಳ ವ್ಯಾಕುಲಪಡುತ, ಗಳಿಗೆಗೊಂದು ಸಲ ಮೂರ್ಛೆಯನ್ನೂ ಪ್ರಜ್ಞೆಯನ್ನೂ ಅನುಭವಿಸುತಿದ್ದಳು. ಕೊನೆಗೆ ಸತ್ಯಶರ್ಮನು ಪರಂತಪನ
೯೪
ಪರಂತಪ ವಿಜಯ

ಪೂರ್ವಾಪರಗಳನ್ನು ಭೇದಿಸಲಸಾಧ್ಯವಾದುದರಿಂದ, ರತ್ನಾಕರದಿಂದ ಹಿಂದಕ್ಕೆ ಬಂದನು. ಆಗ ಅವನ ಹೆಂಡತಿಯು, ಆ ಕಾಗದದ ವೃತ್ತಾಂತವನ್ನು ತಿಳಿಯಿಸಿದಳು. ಆಗ ಸತ್ಯಶರ್ಮನು ಆ ಕಾಗದವನ್ನು ತೆಗೆದು ನೋಡಿ “ ಇದು ಅರ್ಥಪರನ ಅಕ್ಷರವೂ ಅಲ್ಲ; ಅವನ ರುಜುವೂ ಅಲ್ಲ. ಯಾರೋ ದುರಾತ್ಮರು ಇವಳನ್ನು ಕ್ಲೇಶಪಡಿಸುವುದಕ್ಕೆ ಹೀಗೆ ಬರೆದಿರಬಹುದು. ” ಎಂದು ಗೊತ್ತುಮಾಡಿ, ಈ ಅಂಶವನ್ನು, ಪ್ರಜ್ಞೆ ಬಂದಾಗ ಕಾಮಮೋಹಿನಿಗೆ ತಿಳಿಸಿದನು. ಅದರಿಂದ ಪ್ರಯೋಜನವಾಗಲಿಲ್ಲ. ಆಗ ಸತ್ಯಶರ್ಮನು ಒಬ್ಬ ವೈದ್ಯನನ್ನು ಕರೆತಂದು ತೋರಿಸಿದನು. ಅವನು ಇವಳ ದೇಹಸ್ಥಿತಿಯನ್ನು ಪರೀಕ್ಷಿಸಿ, ಸದ್ಯಕ್ಕೆ ನಿದ್ದೆ ಬರುವ ಔಷಧಿಯನ್ನು ಕೊಟ್ಟು, ಬೆಳಗ್ಗೆ ನೋಡಿ ಚಿಕಿತ್ಸೆ ಮಾಡುವಂತೆ ಹೇಳಿ, ಹೊರಟುಹೋದನು.
ಅಷ್ಟರಲ್ಲೇ ಬಾಗಿಲು ಬಲವಾಗಿ ತಟ್ಟಲ್ಪಟ್ಟಿತು. ಸರಂತಸನು ಬಂದನೆಂದು, ಸತ್ಯಶರ್ಮನು ಜಾಗ್ರತೆಯಾಗಿ ಹೋಗಿ ಬಾಗಿಲು ತೆಗೆದನು. ವೇಷ ಧಾರಿಗಳಾದ ಹನ್ನೆರಡು ಜನಗಳೊಡನೆ ಶಂಬರನು ಒಳಕ್ಕೆ ಪ್ರವೇಶಿಸಿದನು.
ಸತ್ಯಶರ್ಮ-ಅಯ್ಯಾ! ನೀನಾರು ? ಇಲ್ಲಿಗೆ ಇಷ್ಟು ಅವೇಳೆಯಲ್ಲಿ ಏಕೆ ಬಂದೆ ? ನಿನಗೇನು ಬೇಕು?
ಶಂಬರ-ಕಳ್ಳ! ನನ್ನನ್ನು ನೀನು ಕಾಣೆಯೋ? ನಾನು ಶಂಬರ; ಕಾಮಮೋಹಿನಿಯ ಪೋಷಕ, ನೀನು ಅವಳನ್ನು ಕಳ್ಳತನದಿಂದ ತಂದು ಇಲ್ಲಿಟ್ಟು ಕೊಂಡಿರುವುದು ನನಗೆ ಗೊತ್ತಾಯಿತು. ನಿನ್ನ ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಶೀಘ್ರದಲ್ಲೇ ಹೊಂದುವೆ.

ಸತ್ಯಶರ್ಮ-ಓಹೋ! ಶಂಬರನೆ ? ಈಗ ಗೊತ್ತಾಯಿತು. ದ್ರವ್ಯಾರ್ಥವಾಗಿ ದೊಡ್ಡಪ್ಪನನ್ನು ಕೊಂದ ಪುತ್ರಾಧಮನು ನೀನಲ್ಲವೆ! ಕಲಾವತಿಯ ಕತ್ತು ಮಿಸುಕಿ ಸುಮಿತ್ರನ ಉಯಿಲನ್ನು ಅಪಹರಿಸಿದ ಚಂಡಾಲನು ನೀನಲ್ಲವೆ! ಕಲಾವತಿಯನ್ನು ವಿವಾಹಮಾಡಿಕೊಳ್ಳುವುದಾಗಿ ಮಾತು ಕೊಟ್ಟು ಅದಕ್ಕೆ ತಪ್ಪಿ ಪರಸ್ತ್ರೀಯಾದ ಕಾಮಮೋಹಿನಿಯನ್ನು ಅಪಹರಿಸ ಬೇಕೆಂದು ಈ ಕಾಗದವನ್ನು ಬರೆದು ಕಿಟಕಿಯಿಂದ ಹಾಕಿ ಅವಳು ವ್ಯಾಕುಲಳಾಗಿ ಮೂರ್ಛಿತಳಾಗುವಂತೆ ಮಾಡಿರುವ ದುರಾತ್ಮನು ನೀನಲ್ಲವೆ! ನೀನೇ ಪರಂತಪನನ್ನು ಕೊಂದು, ಅರ್ಥಪರ ಬರೆದಂತೆ ಈ ಕಾಗದವನ್ನು ಬರೆದಿರ 
ಅಧ್ಯಾಯ ೧೨
೯೫

ಬಹುದು. ಶೀಘ್ರದಲ್ಲಿ ದೇವರು ನಿನ್ನ ಪಾಪಕೃತ್ಯಗಳಿಗೆ ತಕ್ಕ ಪ್ರತೀಕಾರವನ್ನು ಮಾಡುವನು. ನಾನು ಕಳ್ಳನೆ? ದುರಾತ್ಮನೆ! ಇಲ್ಲಿಂದ ಆಚೆಗೆ ತೆರಳು. ಇಲ್ಲದಿದ್ದರೆ ಪೋಲೀಸಿನವರಿಗೆ ನಿನ್ನನ್ನು ಕೊಡುವೆನು. ನೀನು ಕಾಮಮೋಹಿನಿಯ ಪೋಷಕನಲ್ಲ, ಅವಳ ಭಾಗದ ಮೃತ್ಯುವೇ ನೀನು.
ಶಂಬರ-ಅವಳಲ್ಲಿದ್ದಾಳೆ? - ತಿಳಿಸು. ಹಾಗಿಲ್ಲದಿದ್ದರೆ, ನಿನ್ನ ಭಾಗಕ್ಕೂ ನಾನು ಮೃತ್ಯುವಾಗುವೆನು.
ಸತ್ಯಶರ್ಮ- ನನ್ನ ಪ್ರಾಣವಿರುವವರೆಗೂ ಅವಳು ನಿನಗೆ ಸಿಕ್ಕಳು.
ಶಂಬರ-ಹಾಗಾದರೆ, ನಿನ್ನ ಪ್ರಾಣವು ಈಗಲೇ ಹೋಗುವುದು. ಅದು ಹಾಗಿರಲಿ; ನಿನಗೆ ಪ್ರಾಣದಾನವನ್ನು ಮಾಡುವುದಲ್ಲದೆ, ತುಂಬ ಉಪಕಾರವನ್ನೂ ಮಾಡುವೆನು. ಕಾಮಮೋಹಿನಿಯು ಪರಸ್ತ್ರೀಯೆಂದೆಯಲ್ಲಾ! ಅದು ಹೇಗೆ?
ಸತ್ಯಶರ್ಮ-ಅವಳನ್ನು ಪರಂತಪನು ವಿವಾಹವಾಡಿಕೊಂಡಿರುವನು.
ಶಂಬರ- ಈ ವಿವಾಹವು ಎಲ್ಲಾಯಿತು? ಯಾರು ಮಾಡಿಸಿದವರು? ಯಾವಾಗ?
ಸತ್ಯಶರ್ಮ-ಕಳೆದ ತಿಂಗಳು, ನಾನೇ ಈ ಮನೆಯಲ್ಲೇ ಮಾಡಿಸಿದೆನು.
ಶಂಬರ- ಎಲಾ ದುಷ್ಟನೆ! ಈ ದುಷ್ಕೃತ್ಯಕ್ಕೆ ತಕ್ಕ ಫಲವನ್ನು ಹೊಂದುವೆ.
ಸತ್ಯಶರ್ಮನನ್ನೂ ಅವನ ಹೆಂಡತಿಯನ್ನೂ ಹಿಡಿಸಿ, ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಕಟ್ಟಿ ಕೆಡವಿ, ಕಾಮಮೋಹಿನಿಯನ್ನು ಹುಡುಕಿ ಎತ್ತಿಕೊಂಡು ಗಾಡಿಯಲ್ಲಿ ಹಾಕಿಸಿ, ಸತ್ಯಶರ್ಮನ ಮನೆಗೆ ಅನೇಕ ಭಾಗಗಳಲ್ಲಿ ಬೆಂಕಿಯನ್ನು ಹಾಕಿಸಿ, ಅದು ಹೊತ್ತಿಕೊಂಡು ಉರಿಯುವುದಕ್ಕೆ ಉಪಕ್ರಮವಾದ ಮೇಲೆ, ಶಂಬರನು ರತ್ನಾಕರದ ಕಡೆಗೆ ಹೊರಟುಹೋದನು. ಮಾರನೆಯ ದಿನ ಬೆಳಗಾಗುವುದರೊಳಗಾಗಿ, ಮನೆಯು ಬೆಂದು ನೆಲ ಸಮವಾಗಿತ್ತು. ಸರಕಾರದವರೂ ಪಂಚಾಯಿತರೂ ಸೇರಿ ಪರೀಕ್ಷಿಸಿ, ಮನೆಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ಸತ್ಯ ಶರ್ಮಾದಿಗಳು ಸತ್ತು ಹೋದರೆಂದು ಮಹಜರ್‌ ಮಾಡಿದರು!

♠♠ ♠♠