ಆದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ. ಅನಾದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ. ಈ ಎರಡು ನಾಮ ಹುಟ್ಟದ ಮುನ್ನ ನಿಮಗೆ ನಾನು ಶಿಷ್ಯನಯ್ಯಾ. ಎನ್ನ ಭಾವಕಾಯದೊಳಗಣ ಭ್ರಮೆಯ ಕಳೆದು
ಎನ್ನ ಜ್ಞಾನಕಾಯದೊಳಗಣ ಮರಹ ಕಳೆದು
ಎನ್ನೊಳಗೆ ತಿಳಿವಿನ ಬಗೆಯ ತೋರುತ್ತ
ಹೊರಗೆ ನುಡಿಯದಂತಿರ್ದಡೆ ಬಿಡೆನು ನೋಡಾ ನಿಮ್ಮ ಶ್ರೀಚರಣವನು. ಮಾಡಿದಡೆ ಅಂತು ಮಹಾಪ್ರಸಾದವೆಂದು ಕೈಕೊಂಬೆ. ಮಾಡದಿರ್ದಡೆ ನೀವೆ ನಾನಾಗಿ ಮಹಾಪ್ರಸಾದವೆಂದು ಕೈಕೊಂಬೆನು
ಇಂತು ಆವತೆರದಿಂದಲಾದಡೂ ಎನ್ನೊಡಲ ನಿಮ್ಮಲ್ಲಿ ಸವೆದು ಪಡೆವೆನು ನಿಮ್ಮ ಕರುಣವ ಗುಹೇಶ್ವರಾ ಎನ್ನ ಇರವಿನ ಪರಿ ಇಂತುಟು ನೋಡಾ