ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ
ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು
ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.