ಪುಟ:ಕರ್ನಾಟಕ ಗತವೈಭವ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ಕರ್ನಾಟಕ ಗತವೈಭವ


ಯಲ್ಲಿಯೇ ಹೆಸರಿಗೆ ಬಂದರು. ರಾಷ್ಟ್ರಕೂಟರ ಅಂತ್ಯಕಾಲಕ್ಕೆ ಎಂದರೆ ಚಾಲುಕ್ಯರ ಆಳಿಕೆಯ ಆರಂಭಕ್ಕೆ ಉತ್ತರ ಹಿಂದುಸ್ಥಾನದಲ್ಲಿ ಬಲಾಡ್ಯರಾದ ಅರಸರಿರಲಿಲ್ಲ. ಹೀಗಿರುವುದರಿಂದ ಪ್ರಖ್ಯಾತ ಕವಿಯಾದ ಬಿಲ್ಹಣನು ಆಶ್ರಯಕ್ಕಾಗಿ, ಅಲೆಯುತ್ತ ಅಲೆಯುತ್ತ, ಹಿಂದುಸ್ಥಾನವನ್ನೆಲ್ಲ ಸುತ್ತಿ ಕೊನೆಗೆ ದಕ್ಷಿಣದಲ್ಲಿ ಆಳುತ್ತಿರುವ ಚಾಲುಕ್ಯ ವಿಕ್ರಮನ ಆಸ್ಥಾನಕ್ಕೆ ಬಂದು ಅಲ್ಲಿ ನಿಂತನು. ಅವನಿಗೆ 'ವಿದ್ಯಾಪತಿ' ಎಂದು ಬಿರುದುಂಟು. ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ ಈತನ ಹತ್ತರವೇ ಇದ್ದನು. ಅವನು 'ಮಿತಾಕ್ಷರಾ' ಎಂಬ ಪ್ರಸಿದ್ಧ ಧರ್ಮಶಾಸ್ತ್ರ ಗ್ರಂಥವನ್ನು ಬರೆದಿರುವನು. ಅದು ಮುಂಬಯಿ ಇಲಾಖೆಯ ಕೋರ್ಟುಗಳಲ್ಲಿಯ ಹಿಂದುಸ್ಥಾನದ ಮಿಕ್ಕ ಅನೇಕ ಭಾಗಗಳಲ್ಲಿಯೂ, ಹಿಂದು ಧರ್ಮಕ್ಕೆ ಪ್ರಮಾಣ ಗ್ರಂಥವಾಗಿದೆ. ಕನ್ನಡ ಭಾಷೆಯ ಕವಿಗಳಲ್ಲಿ, ಆದಿಪಂಪ, ರನ್ನ, ಚಂದ್ರರಾಜ, ದುರ್ಗಸಿಂಹ, ಕೀರ್ತಿವರ್ಮ, ನಾಗವರ್ಮ, ಇವರೇ ಪ್ರಮುಖರು. ಆಗಿನ ಕಾಲಕ್ಕೆ ಅರಸರು ಕನ್ನಡ ಕವಿಗಳನ್ನು ನಾನಾ ಬಗೆಯಿಂದ ಬಹುಮಾನಿಸುತಿದ್ದರು. ಕನ್ನಡ ಕವಿರತ್ನತ್ರಯದಲ್ಲಿ (ಪೊನ್ನ, ರನ್ನ, ಆದಿಪಂಪ) ಒಬ್ಬನಾದ ರನ್ನನಿಗೆ ತೈಲಪನು ಛತ್ರ ಚಾಮರಾದಿ ರಾಜಚಿಹ್ನಗಳನ್ನು ಸಲ್ಲಿಸಿ ಮನ್ನಣೆಮಾಡಿದನು. ಚಾಲುಕ್ಯ ವಿಕ್ರಮನ ಮಗನಾದ ೩ನೆಯ ಸೋಮೇಶ್ವರನು 'ಮಾನಸೋಲ್ಲಾಸ' ವೆಂಬ ಸಂಸ್ಕೃತ ಗ್ರಂಥವನ್ನು ರಚಿಸಿದನು. ಇದರಿಂದ ಅನೇಕ ರಾಜಕೀಯ ಸಂಗತಿಗಳು ತಿಳಿಯುವಂತಿವೆ. ಇದರಲ್ಲಿ, ರಾಜ್ಯ ಸಂಪಾದಿಸುವ ಬಗೆ, ರಾಜ್ಯ ಕಾಯ್ದುಕೊಳ್ಳುವ ಬಗೆ, ರಾಜ ವಿಲಾಸ ವರ್ಣನೆ ಮುಂತಾದ ವಿಷಯಗಳಿವೆ. ಅರಸರು, ರಾಜನೀತಿ, ಜ್ಯೋತಿಷ, ಫಲಜ್ಯೋತಿಷ, ಭಾಷಾಶಾಸ್ತ್ರ, ಅಲಂಕಾರ ಶಾಸ್ತ್ರ, ಕಾವ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಆಶ್ವವಿದ್ಯೆ ಮುಂತಾದುವುಗಳಲ್ಲಿ ನಿಷ್ಣಾತರಾಗಿರಬೇಕೆಂದು ಇದರಲ್ಲಿ ಹೇಳಿದೆ. ಈ ಅರಸನು ವಿದ್ಯಾವಂತನಾದುದರಿಂದ ಅವನಿಗೆ 'ಸರ್ವಜ್ಞ ಭೂಪ' ಎಂಬ ಹೆಸರಿತ್ತು.

ಹೊಯ್ಸಳ ಅರಸರ ರಾಜ್ಯಕಾರಭಾರದಲ್ಲಿಯೂ ಅಭಿನವಪಂಪ, ಕಂತಿ, ರಾಜಾದಿತ್ಯ ಸುಮನೋಬಾಣ, ಮಲ್ಲಿಕಾರ್ಜುನ, ರುದ್ರಭಟ್ಟ, ಜನ್ನ, ಕೇಶಿರಾಜ ಇತ್ಯಾದಿ ರತ್ನಗಳು ಕರ್ನಾಟಕಕ್ಕೆ ಲಭಿಸಿದುವು. ವಿಜಯನಗರದ ಕಾಲಕ್ಕೆ, ವೇದಾಂತ, ನ್ಯಾಯ, ಮಿಮಾಂಸಾ, ಆಯುರ್ವೇದ, ನೀತಿ, ಯುದ್ಧಕಲೆ, ರಸಾ