ಎನ್ನ ಆಧಿವ್ಯಾಧಿಗಳೆಲ್ಲ ಪ್ರಸಾದವಯ್ಯಾ. ಎನ್ನ ಆಗುಹೋಗುಗಳೆಲ್ಲ ಪ್ರಸಾದವಯ್ಯಾ. ಎನ್ನ ತಾಗು ನಿರೋಧಗಳೆಲ್ಲ ಪ್ರಸಾದವಯ್ಯಾ. ಎನ್ನ ಅರಹುಮರಹುಗಳೆಲ್ಲ ಪ್ರಸಾದವಯ್ಯಾ. ಎನ್ನ ಸುಖದುಃಖಂಗಳೆಲ್ಲ ಪ್ರಸಾದವಯ್ಯಾ. ಎನ್ನ ಮಾನಾಪಮಾನಂಗಳೆಲ್ಲ ಪ್ರಸಾದವಯ್ಯಾ. ಎನ್ನ ಹಾನಿವೃದ್ಧಿಗಳೆಲ್ಲ ಪ್ರಸಾದವಯ್ಯಾ. ಎನ್ನ ಭಯಭೀತಿಗಳೆಲ್ಲ ಪ್ರಸಾದವಯ್ಯಾ. ಎನ್ನ ಲಜ್ಜೆಮೋಹಗಳೆಲ್ಲ ಪ್ರಸಾದವಯ್ಯಾ. ಎನ್ನ ಸಜ್ಜನಸಮತೆಗಳೆಲ್ಲ ಪ್ರಸಾದವಯ್ಯಾ. ಎನ್ನ ಸುಳುಹು ಸಂಚಾರಗಳೆಲ್ಲ ಪ್ರಸಾದವಯ್ಯಾ. ಎನ್ನ ಚಿತ್ತಸುಚಿತ್ತಗಳೆಲ್ಲ ಪ್ರಸಾದವಯ್ಯಾ. ಎನ್ನ ಬುದ್ಧಿಸುಬುದ್ಧಿಗಳೆಲ್ಲ ಪ್ರಸಾದವಯ್ಯಾ. ಎನ್ನ ಅಹಂಕಾರನಿರಹಂಕಾರಗಳೆಲ್ಲ ಪ್ರಸಾದವಯ್ಯಾ. ಎನ್ನ ಸುಮನ ವ್ಯಾಕುಲಗಳೆಲ್ಲ ಪ್ರಸಾದವಯ್ಯಾ. ಎನ್ನ ಜ್ಞಾನ ಸುಜ್ಞಾನಗಳೆಲ್ಲ ಪ್ರಸಾದವಯ್ಯಾ. ಎನ್ನ ಭಾವ ಸದ್ಭಾವಗಳೆಲ್ಲ ಪ್ರಸಾದವಯ್ಯಾ. ಎನ್ನ ತತ್ವ ತೋರಿಕೆಗಳೆಲ್ಲಾ ಪ್ರಸಾದವಯ್ಯಾ. ಎನ್ನ ಕರಣೇಂದ್ರಿಯಂಗಳೆಲ್ಲ ಪ್ರಸಾದವಯ್ಯಾ. ಎನ್ನ ಒಳಹೊರಗುಗಳೆಲ್ಲ ಪ್ರಸಾದವಯ್ಯಾ. ಎನ್ನ ಕೀಳುಮೇಲುಗಳೆಲ್ಲ ಪ್ರಸಾದವಯ್ಯಾ. ಎನ್ನ ಎಡಬಲಂಗಳೆಲ್ಲ ಪ್ರಸಾದವಯ್ಯಾ. ಇಂತಾಗಿ ಅಖಂಡೇಶ್ವರಾ
ನೀನೆಂಬ ಪ್ರಸಾದಶರಧಿಯೊಳಗೆ ನಾನೆಂಬುದು ಮುಳುಗಿ ನೆಲೆದಪ್ಪಿಹೋದೆನಯ್ಯಾ.