ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಪಣೆ
ಮಾನವ ತನ್ನ ಪೂಜ್ಯ ಭಾವವನ್ನು ಅಭಿವ್ಯಕ್ತಿಸಲು ತಾನು ಗೌರವಿಸುವ ಪೂಜ್ಯ ವ್ಯಕ್ತಿಗೆ ಮಾಡುವ ಸೇವೆ. ಇದು ನಾಗರಿಕವಾಗಿರಬಹುದು, ಅನಾಗರಿಕವಾಗಿರಬಹುದು. ಪ್ರಾಕೃತಜನ ತಾವು ಒಲಿದ ದೇವತೆಗೆ ಅಥವಾ ಶಕ್ತಿಗೆ ಕುರಿ, ಕೋಣ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಪ್ರಾಣಿವಧೆಯನ್ನು ನಿಷೇಧಿಸುವ ಜೈನರು ಮತ್ತು ಇತರರು ಹಿಟ್ಟಿನ ಕೋಳಿಯನ್ನು ಅರ್ಪಿಸುತ್ತಾರೆ. ನಯವಾಗಿ ತಮ್ಮ ಪೂಜ್ಯ ಭಾವನೆಯನ್ನು ಅಭಿವ್ಯಕ್ತಿಗೊಳಿಸಲು ಭಕ್ಷ್ಯಭೋಜ್ಯಗಳನ್ನೂ ಫಲಗಳನ್ನೂ ಅರ್ಪಿಸುತ್ತಾರೆ. ಇನ್ನೂ ನಯವಾಗಿ ತಮ್ಮ ಭಾವವನ್ನು ವಿಷಯೀಕರಿಸಲು ಒಂದು ಉದ್ಧರಣೆ ನೀರನ್ನೋ, ಒಂದು ಪತ್ರವನ್ನೋ, ಪುಷ್ಪವನ್ನೋ ಅರ್ಪಿಸುತ್ತಾರೆ. ಭಕ್ತಿಯಿಂದ ಅರ್ಪಿಸಿದ ಒಂದು ಎಲೆಯಿಂದ ಅಥವಾ ಒಂದು ತೊಟ್ಟು ನೀರಿನಿಂದಲೇ ಭಗವದ್ಗೀತೆಯಲ್ಲಿ ಹೇಳಿರುವಂತೆ ದೇವರು ತೃಪ್ತನಾಗುತ್ತಾನೆ. ಇದಕ್ಕಿಂತ ಮೇಲ್ಮಟ್ಟದ್ದು ಹೃದಯಪೂರ್ವಕವಾದ ಪ್ರೀತಿಯ ಅರ್ಪಣೆ. ಮೇಲೆ ಹೇಳಿದ ಎಲ್ಲ ಅರ್ಪಣೆಗಳೂ ಭಕ್ತಿಯ ಕುರುಹುಗಳು. ಆದರೆ ಮೊದಲನೆಯವು ತಾಮಸಭಕ್ತಿಯವು. ಎರಡನೆಯವು ರಾಜಸಭಕ್ತಿಯವು. ನನಗೆ ಬೇರೆ ದಿಕ್ಕಿಲ್ಲ, ಎಲ್ಲವೂ ನೀನೆ, ಶರಣಾಗತಿಯೇ ನನ್ನ ಜೀವನದ ಗತಿ ಎಂಬ ಭಾವ ಸಾತ್ವಿಕಭಕ್ತಿ. ಭಕ್ತ ತನ್ನೆಲ್ಲವನ್ನೂ ಪರಮಾತ್ಮನಿಗೆ ಅರ್ಪಣೆ ಮಾಡುವುದನ್ನು ಪ್ರಪತ್ತಿ ಎನ್ನುತ್ತಾರೆ. ಆಯಾ ಭಕ್ತನ ಸಂಸ್ಕೃತಿಗೆ ಅನುಗುಣವಾಗಿ ಅವನು ತನ್ನ ಭಕ್ತಿಯನ್ನು ಪ್ರಕಟಿಸುತ್ತಾನೆ. ತಾಮಸಿಕ, ರಾಜಸಿಕ, ಸಾತ್ತ್ವಿಕ ಅರ್ಪಣೆಗಳು ಅವನವನ ಸಂಸ್ಕೃತಿಗೆ ಅನುಗುಣವಾದುವು. ಇವೆಲ್ಲವೂ ಭಕ್ತಿಯ ಕುರುಹುಗಳಾದ್ದರಿಂದ ತಾಮಸ ಅರ್ಪಣೆ ಒಂದು ಮಟ್ಟದ ಜನಕ್ಕೆ ಅನಿವಾರ್ಯವಾದ್ದರಿಂದ ಸಾತ್ತ್ವಿಕ ಮಟ್ಟ ಮುಟ್ಟಿದವನು ಆ ಅರ್ಪಣೆಯನ್ನು ಹೀನಾಯವಾಗಿ ಕಾಣಬಾರದು. ತನ್ನ ಅರ್ಪಣೆ ಹೆಚ್ಚೆಂದು ಹೆಮ್ಮೆಪಡಬಾರದು. ಹಾಗೆ ಮಾಡಿದ್ದರಿಂದ ಸಾತ್ತ್ವಿಕ ತಾಮಸಿಕನಾಗುತ್ತಾನೆ. ಕಾಲಾನುಕ್ರಮದಲ್ಲಿ ಪ್ರಾಕ್ತನಮಾನವನೂ ತಾಮಸಿಕ ಅರ್ಪಣೆಯನ್ನು ಬಿಟ್ಟು ಸಾತ್ತ್ವಿಕ ಅರ್ಚನೆಯನ್ನು ಅವಲಂಬಿಸಬಹುದು ಎಂಬ ಆಶಾಭಾವನೆಯನ್ನು, ಸಹನೆಯನ್ನು ತಳೆಯುವುದು ಸಾತ್ತ್ವಿಕ ಭಕ್ತನ ಲಕ್ಷಣ.