ಕಾಯಜೀವದ ಭೇದವೆಂತೆಂದಡೆ ಕೀಲವನರಿದು

ವಿಕಿಸೋರ್ಸ್ದಿಂದ



Pages   (key to Page Status)   


ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ
ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ
ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ
ಬಹಿರಂಗದ ಅಷ್ಟಮಂದಗಳ ಬಾಯಟೊಣೆದು
ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ
ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ
ಆತ್ಮತ್ರಯಂಗಳ ಧಾತುಗೆಡಿಸಿ
ಅವಸ್ಥಾತ್ರಯಂಗಳ ಅವಗುಣವಳಿದು
ತ್ರಿದೋಷಂಗಳ ಪಲ್ಲಟಗೊಳಿಸಿ
ಭಾವತ್ರಯಂಗಳ ಬಣ್ಣಗೆಡಿಸಿ
ದುರ್ಭಾವತ್ರಯಂಗಳ ದೂರಮಾಡಿ
ಮನತ್ರಯಂಗಳ ಮರ್ದನಮಾಡಿ
ತ್ರಿಕರಣಂಗಳ ಛಿದ್ರಗೊಳಿಸಿ
ಪಂಚಾಗ್ನಿಗಳ ಸಂಚಲವನತಿಗಳೆದು
ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು
ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು
ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ
ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ
ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು
ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು
ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು
`ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು
ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ
ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ
ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ
ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ
ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ
ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ
ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ
ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.