ಗಂಡನುಳ್ಳ ಗರತಿಯರೆಲ್ಲರು ನಿಮ್ಮ ಗಂಡನ ಕುರುಹ ನೀವು ಹೇಳಿರೆ ; ನೀವರಿಯದಿರ್ದಡೆ ನಾವು ನಮ್ಮ ಗಂಡರ ಕುರುಹ ಹೇಳಿಹೆವು ಕೇಳಿರೆ. ಹೊಳೆವ ಕೆಂಜೆಡೆಗಳ
ಬೆಳಗುವ ಭಾಳಲೋಚನದ
ಥಳಥಳಿಪ ಸುಲಿಪಲ್ಲಿನ
ಕಳೆದುಂಬಿ ನೋಡುವ ಕಂಗಳ ನೋಟದ
ಸೊಗಸಿಂದೆ ನಗುವ ಮುಗುಳುನಗೆಯ
ರತ್ನದಂತೆ ಬೆಳಗುವ ರಂಗುದುಟಿಯ
ಚಂಪಕದ ನಗೆಯಂತೆ ಸೊಂಪಾದ ನಾಸಿಕದ
ಶಶಿಯಂತೆ ಬೆಳಗುವ ಎಸೆವ ಕದಪಿನ
ಮಿಸುಪ ಎದೆ ಭುಜ ಕಂಠದ
ಶೃಂಗಾರದ ಕುಕ್ಷಿಯ
ಸುಳಿದೆಗೆದ ನಾಭಿಯ
ತೊಳಪ ತೊಡೆಮಣಿಪಾದಹರಡಿನ
ನಕ್ಷತ್ರದಂತೆ ಹೊಳೆವ ನಖದ ಪಂಕ್ತಿಯ ಚರಣಕಮಲದಲ್ಲಿ ಹರಿಯ ನಯನದ ಕುರುಹಿನ. ಸಕಲಸೌಂದರ್ಯವನೊಳಕೊಂಡು ರವಿಕೋಟಿಪ್ರಭೆಯಂತೆ ರಾಜಿಸುವ ರಾಜಾಧಿರಾಜ ನಮ್ಮ ಅಖಂಡೇಶ್ವರನೆಂಬ ನಲ್ಲನ ಕುರುಹು ಇಂತುಟು ಕೇಳಿರವ್ವಾ.