ತಾನು ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ
ಭವಿಯಾಗಿದ್ದ ತಾಯಿ ತಂದೆ ಒಡಹುಟ್ಟಿದವರ ಬಂಧುಬಳಗವೆಂದು ಬೆರಸಿದರೆ ಕೊಂಡ ಮಾರಿಂಗೆ ಹೋಹುದು ತಪ್ಪದು. ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ
ಅಗ್ನಿಯ ಮುಖದಲ್ಲಿ ಶುದ್ಧವಾದ ಬಳಿಕ ಅದು ತನ್ನ ಪೂರ್ವಕುಲವ ಕೂಡದು ನೋಡಾ
ಅದೆಂತೆಂದಡೆ: ಅಗ್ನಿದಗ್ಧಘಟಃ ಪ್ರಾಹುರ್ನ ಭೂಯೋ ಮೃತ್ತಿಕಾಯತೇ ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್ ಎಂದುದಾಗಿ
ಭಕ್ತನಾಗಿ
ಭವಿಯ ನಂಟನೆಂದು ಪಂತಿಯಲ್ಲಿ ಕುಳ್ಳಿರಿಸಿಕೊಂಡು ಉಂಡನಾದರೆ; ಪಂಚಮಹಾಪಾತಕ
ಅವಂಗೆ ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯಾ.