ದುರ್ಗುಣಿ ದುರಾಚಾರಿಯಯ್ಯ ನಾನು. ದುರ್ಬುದ್ಧಿ ದುರ್ನೀತಿಯುಳ್ಳವನಯ್ಯ ನಾನು. ದುಷ್ಟಾತ್ಮ ದುಷ್ಕರ್ಮಿಯಯ್ಯ ನಾನು. ತಿಪ್ಪೆಯ ಕೆದರಿದಂತೆ ಶತಕೋಟಿ ಕೆಟ್ಟ ಗುಣದವನಯ್ಯ ನಾನು. ಎನ್ನಲ್ಲಿ ಸದ್ಗುಣವನರಸಿದಡೇನು ಹುರುಳಿಲ್ಲವಯ್ಯ. ಮನದಲ್ಲಿ ವಿಕಾರ ಹುಟ್ಟಿ ತನುವನಂಡಲೆದು ವಿಷಯಾತುರನಾಗಿ ತಲೆಹುಳಿತ ಶ್ವಾನನಂತೆ ದೆಸೆದೆಸೆಗೆ ಹರಿದಾಡಿದೆನಲ್ಲದೆ
ನಿಮ್ಮನರಿವುತ್ತ ಬೆರೆವುತ್ತ ಭಕ್ತಿಜ್ಞಾನವೈರಾಗ್ಯದಲ್ಲಿ ಸುಳಿಯಲಿಲ್ಲವಯ್ಯ ನಾನು ಅಖಂಡೇಶ್ವರಾ.