ನವನಾಳಂಗಳ ನವಲಿಂಗಗಳ ಬಲಿದು

ವಿಕಿಸೋರ್ಸ್ದಿಂದ



Pages   (key to Page Status)   


ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು ಭಾವದ ದೃಕ್ಕಿನಿಂದ ನವಲಿಂಗಗಳ ನೋಡಿ ಪೂಜಿಸಿ
ಕದಡುವ ಭೇದವೆಂತೆಂದೊಡೆ : ಆಧಾರಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಆಚಾರಲಿಂಗಕ್ಕೆ ಶಿವಾನಂದ ಜಲದಿಂ ಮಜ್ಜನಕ್ಕೆರೆದು ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ
ಚಿತ್ತ ಸುಚಿತ್ತವಾದ ಅಕ್ಷತೆಯನಿಟ್ಟು
ಅಲ್ಲಿಯ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ
ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ
ಅಲ್ಲಿಯ ಪೀತವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ
ಅಲ್ಲಿಯ ಜಾಗ್ರಾವಸ್ಥೆಯೆಂಬ ನವೀನ ವಸ್ತ್ರವ ಹೊದಿಸಿ
ನಿಷ್ಕಾಮವೆಂಬ ಆಭರಣವ ತೊಡಿಸಿ
ಸುಗಂಧವೆಂಬ ನೈವೇದ್ಯವನರ್ಪಿಸಿ
ಶ್ರದ್ಧೆಯೆಂಬ ತಾಂಬೂಲವನಿತ್ತು
ಇಂತು ಆಚಾರಲಿಂಗದ ಅಷ್ಟವಿಧಾರ್ಚನೆಯ ಮಾಡಿ
ಕೋಟಿಸೂರ್ಯಪ್ರಭೆಯಂತೆ ಬೆಳಗುವ ಆಚಾರಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಆಚಾರಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ನಂ ನಂ ನಂ ನಂ ನಂ ನಂ ಎಂಬ ನಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ
ಆ ಆಚಾರಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ
ಸ್ವಾಧಿಷಾ*ನಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಗುರುಲಿಂಗಕ್ಕೆ ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರೆದು
ಅಪ್ಪು ನಿವೃತ್ತಿಯಾದ ಗಂಧವ ಧರಿಸಿ ಬುದ್ಧಿ ಸುಬುದ್ಧಿಯಾದ ಅಕ್ಷತೆಯನಿಟ್ಟು ಅಲ್ಲಿಯ ಷಡುದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ
ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ
ಅಲ್ಲಿಯ ನೀಲವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸ್ವಪ್ನಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿಃಕ್ರೋಧವೆಂಬ ಆಭರಣವ ತೊಡಿಸಿ ಸುರುಚಿಯೆಂಬ ನೈವೇದ್ಯವನರ್ಪಿಸಿ
ನಿಷೆ*ಯೆಂಬ ತಾಂಬೂಲವನಿತ್ತು
ಇಂತು ಗುರುಲಿಂಗದ ಅಷ್ಟವಿಧಾರ್ಚನೆಯ ಮಾಡಿ
ಕೋಟಿಸೂರ್ಯಪ್ರಭೆಯಂತೆ ಬೆಳಗುವ ಗುರುಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ
ಆ ಗುರುಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಮಣಿಪೂರಕವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಶಿವಲಿಂಗಕ್ಕೆ ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರೆದು
ಅಗ್ನಿನಿವೃತ್ತಿಯಾದ ಗಂಧವ ಧರಿಸಿ ಅಹಂಕಾರ ನಿರಹಂಕಾರವಾದ ಅಕ್ಷತೆಯನಿಟ್ಟು ಅಲ್ಲಿಯ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ ಅಲ್ಲಿ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಕೆಂಪುವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸುಷುಪ್ತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಲೋಭವೆಂಬ ಆಭರಣವ ತೊಡಿಸಿ ಸುರೂಪವೆಂಬ ನೈವೇದ್ಯವನರ್ಪಿಸಿ ಸಾವಧಾನವೆಂಬ ತಾಂಬೂಲವನಿತ್ತು
ಇಂತು ಶಿವಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಶಿವಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತಸಂಗೊಂಡು ಆ ಶಿವಲಿಂಗದ ಪೂಜೆಯ ನಿರ್ಮಾಲ್ಯಮಂ ಮಾಡದೆ
ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ
ಆ ಶಿವಲಿಂಗವನು ಕೂಡಿ ಎಡರಳಿದು
ಅಲ್ಲಿಂದ ಮುಂದಕ್ಕೆ ಹೋಗಿ ಅನಾಹತಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಜಂಗಮಲಿಂಗಕ್ಕೆ ಶಾಂತಿಯೆಂಬ ಜಲದಿಂ ಮಜ್ಜನಕ್ಕೆರೆದು ವಾಯುನಿವೃತ್ತಿಯಾದ ಗಂಧವ ಧರಿಸಿ ಮನ ಸುಮನವಾದ ಅಕ್ಷತೆಯನಿಟ್ಟು ಅಲ್ಲಿಯ ದ್ವಾದಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ
ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಂಜಿಷ್ಟವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ
ಅಲ್ಲಿಯ ತೂರ್ಯಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮೋಹವೆಂಬ ಆಭರಣವ ತೊಡಿಸಿ ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ
ಕೋಟಿಸೂರ್ಯಪ್ರಭೆಯಂತೆ ಬೆಳಗುವ ಜಂಗಮಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಜಂಗಮಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ
ಆ ಜಂಗಮಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ ವಿಶುದ್ಧಿಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಪ್ರಸಾದಲಿಂಗಕ್ಕೆ ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು ಗಗನನಿವೃತ್ತಿಯಾದ ಗಂಧವ ಧರಿಸಿ
ಜ್ಞಾನ ಸುಜ್ಞಾನವಾದ ಅಕ್ಷತೆಯನಿಟ್ಟು
ಅಲ್ಲಿಯ ಷೋಡಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ
ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ
ಅಲ್ಲಿಯ ಕೃಷ್ಣವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ
ಅಲ್ಲಿಯ ತೂರ್ಯಾತೀತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮದವೆಂಬ ಆಭರಣವ ತೊಡಿಸಿ ಸುಶಬ್ದವೆಂಬ ನೈವೇದ್ಯವನರ್ಪಿಸಿ ಆನಂದವೆಂಬ ತಾಂಬೂಲವನಿತ್ತು
ಇಂತು ಪ್ರಸಾದಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿ ಸೂರ್ಯಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಪ್ರಸಾದಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ
ಆ ಪ್ರಸಾದಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ ಆಜ್ಞಾಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಮಹಾಲಿಂಗಕ್ಕೆ ಸಂತೋಷವೆಂಬ ಜಲದಿಂ ಮಜ್ಜನಕ್ಕೆರೆದು ಆತ್ಮನಿವೃತ್ತಿಯಾದ ಗಂಧವ ಧರಿಸಿ
ಭಾವ ಸದ್ಭಾವವಾದ ಅಕ್ಷತೆಯನಿಟ್ಟು
ಅಲ್ಲಿಯ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ
ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಣಿಕ್ಯವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ
ಅಲ್ಲಿಯ ನಿರಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮಲವೆಂಬ ಆಭರಣವ ತೊಡಿಸಿ ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ ಸಮರಸವೆಂಬ ತಾಂಬೂಲವನಿತ್ತು
ಇಂತು ಮಹಾಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಮಹಾಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಮಹಾಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ಓಂ ಒಂ ಒಂ ಒಂ ಒಂ ಒಂ ಒಂ ಎಂಬ ಓಂಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ
ಆ ಮಹಾಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಬ್ರಹ್ಮರಂಧ್ರವೆಂಬ ಸಹಸ್ರದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿಷ್ಕಳಲಿಂಗಕ್ಕೆ ಅನುಪಮವೆಂಬ ಜಲದಿಂ ಮಜ್ಜನಕ್ಕೆರೆದು ಅನಾದಿಯೆಂಬ ಗಂಧವ ಧರಿಸಿ
ಅಗಮ್ಯವೆಂಬ ಅಕ್ಷತೆಯನಿಟ್ಟು ಅವಿರಳವೆಂಬ ಪುಷ್ಪದ ಮಾಲೆಯ ಧರಿಸಿ
ಅಪ್ರಮಾಣವೆಂಬ ಧೂಪವ ಬೀಸಿ ಅಖಂಡವೆಂಬ ಜ್ಯೋತಿಯ ಬೆಳಗಿ ಸತ್ಯವೆಂಬ ವಸ್ತ್ರವ ಹೊದಿಸಿ ಸದಾನಂದವೆಂಬ ಆಭರಣವ ತೊಡಿಸಿ ನಿತ್ಯವೆಂಬ ನೈವೇದ್ಯವನರ್ಪಿಸಿ ನಿರುಪಮವೆಂಬ ತಾಂಬೂಲವನಿತ್ತು
ಇಂತು ನಿಷ್ಕಲಲಿಂಗದ ಅಷ್ಟವಿಧಾರ್ಚನೆಯ ಮಾಡಿ ಅನಂತಕೋಟಿಸೂರ್ಯಪ್ರಭೆಯಂತೆ ಬೆಳಗುವ ನಿಷ್ಕಲಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ನಿಷ್ಕಲಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಅಗಣಿತವೆಂಬ ನಮಸ್ಕಾರಮಂ ಮಾಡಿ
ಆ ನಿಷ್ಕಲಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ ಶಿಖಾಚಕ್ರವೆಂಬ ತ್ರಿದಳಮಂಟಪದಲ್ಲಿ ಮೂರ್ತಿಗೊಂಡಿರ್ದ ಶೂನ್ಯಲಿಂಗಕ್ಕೆ ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರೆದು
ನಿರ್ಜಾತವೆಂಬ ಗಂಧವ ಧರಿಸಿ ನಿರ್ಜಡವೆಂಬ ಅಕ್ಷತೆಯನಿಟ್ಟು ನಿಧ್ರ್ವಂದ್ವವೆಂಬ ಪುಷ್ಪದಮಾಲೆಯ ಧರಿಸಿ ನಿರ್ಲಜ್ಜೆಯೆಂಬ ಧೂಪವ ಬೀಸಿ ನಿರಾಭಾರವೆಂಬ ಜ್ಯೋತಿಯ ಬೆಳಗಿ ನಿರಾಮಯವೆಂಬ ವಸ್ತ್ರವ ಹೊದಿಸಿ ನಿಸ್ಪೃಹವೆಂಬ ಆಭರಣವ ತೊಡಸಿ ನಿರಾಳವೆಂಬ ನೈವೇದ್ಯವನರ್ಪಿಸಿ ನಿರಾಲಂಬವೆಂಬ ತಾಂಬೂಲವನಿತ್ತು
ಇಂತು ಶೂನ್ಯಲಿಂಗದ ಅಷ್ಟವಿಧಾರ್ಚನೆಯಂ ಮಾಡಿ
ಅಗಣಿತ ಕೋಟಿಸೂರ್ಯ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಶೂನ್ಯಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ನಿರ್ಭೇದ್ಯವೆಂಬ ನಮಸ್ಕಾರಮಂ ಮಾಡಿ ಆ ಶೂನ್ಯಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ
ಪಶ್ಚಿಮಚಕ್ರವೆಂಬ ಏಕದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿರಂಜನಲಿಂಗಕ್ಕೆ ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರೆದು ನಿಷ್ಕಾರಣವೆಂಬ ಗಂಧವ ಧರಿಸಿ ನಿಃಸಂಗವೆಂಬ ಅಕ್ಷತೆಯನಿಟ್ಟು ನಿಸ್ಸಾರವೆಂಬ ಪುಷ್ಪವ ಧರಿಸಿ ನಿರುಪಾಧಿಕವೆಂಬ ಧೂಪವ ಬೀಸಿ ನಿಷ್ಕಳೆಯೆಂಬ ಜ್ಯೋತಿಯ ಬೆಳಗಿ ನಿಶ್ಚಲವೆಂಬ ವಸ್ತ್ರವ ಹೊದಿಸಿ ನಿರ್ವಾಸನೆಯೆಂಬ ಆಭರಣವ ತೊಡಿಸಿ ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ ನಿರವಯವೆಂಬ ತಾಂಬೂಲವನಿತ್ತು
ಇಂತು ನಿರಂಜನಲಿಂಗದ ಅಷ್ಟವಿಧಾರ್ಚನೆಯ ಮಾಡಿ ತೆರಹಿಲ್ಲದೆ ಬೆಳಗಿನ ಮಹಾಬೆಳಗನೊಳಕೊಂಡು ಬೆಳಗುವ ನಿರಂಜನಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು ಆ ನಿರಂಜನಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ನಿಃಶಬ್ದವೆಂಬ ನಮಸ್ಕಾರಮಂ ಮಾಡಿ ಆ ನಿರಂಜನಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದೆ ನೋಡಲು ಬಚ್ಚಬರಿಯ ಬಯಲಿರ್ಪುದ ಕಂಡು ಆ ಬಯಲೆ ತನ್ನ ನಿಜನಿವಾಸವೆಂದು ತಿಳಿದು ಆ ನಿಜವಾಸದಲ್ಲಿ ತಾ ನಿಂದು ತನ್ನಿಂದ ಕೆಳಗಣ ನವಚಕ್ರಂಗಳಲ್ಲಿರ್ದ ನವಲಿಂಗಗಳ ಪೂಜೆಯ ನಿರಂತರದಲ್ಲಿ ಮಾಡುವ ಶಿವಯೋಗಿಗೆ ಭವಬಂಧನವಿಲ್ಲ. ಆ ಭವಬಂಧನವಿಲ್ಲವಾಗಿ ಜೀವಕಲ್ಪಿತವು ಮುನ್ನವೇ ಇಲ್ಲ. ಆ ಜೀವಕಲ್ಪಿತವಿಲ್ಲವಾಗಿ ಆತನು ಪರಿಪೂರ್ಣನಾಗಿ ಪರಾತ್ಪರನಾಗಿ ಪರಶಿವಬ್ರಹ್ಮವೇ ಆಗಿ ಇರ್ಪನಯ್ಯಾ ಅಖಂಡೇಶ್ವರಾ.