ಪೃಥ್ವಿ ಅಪ್ಪು ತೇಜ ವಾಯು ಆಕಾಶದ ಕೊನೆಯ ಮೊನೆಯ ಮೇಲೆ
ಇಪ್ಪತ್ತೈದು ಗ್ರಾಮಂಗಳು
ಚೌಷಷ್ಟಿ ಪಟ್ಟಣ. ಛಪ್ಪನ್ನ ವೀಥಿಗಳ ದಾಂಟಿ
ಛತ್ತೀಸ ಪುರದ ರಚನೆಯ ನೋಡಬಲ್ಲೆವೆಂಬರು
ತ್ರಿಕೋಣದ್ವಾರಮಂಟಪದ ಅಯ್ವೆತ್ತೆರಡಕ್ಷರದ
ಶಾಸನದ ಲಿಪಿಯಂ ತಿಳಿಯಲೋದಿ
ಎಂಬತ್ತುನಾಲ್ಕುಲಕ್ಷ ದ್ವಾರದೊಳಗೆ ಹೊಕ್ಕು ಹೊರವಡುವ ಜೀವನ ತಿಳಿಯಲರಿಯದೆ ದಕ್ಷಿಣದ್ವಾರದಿಂದ ಉತ್ತರದ್ವಾರಕ್ಕೆ ಬಂದು
ಪಶ್ಚಿಮವಾಯುವ ಕೊನೆಯ ಮೊನೆಯ ಮೇಲೆ ಬೆಳಗುವ ಜ್ಯೋತಿಯ ನಿಮ್ಮ ಶರಣರಲ್ಲದೆ
ಲೋಕದ ಅಜ್ಞಾನಿಗಳೆತ್ತ ಬಲ್ಲರು ಗುಹೇಶ್ವರಾ ?