ಪುಟ:ಕರ್ನಾಟಕ ಗತವೈಭವ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨ನೆಯ ಪೂರಕ ಪ್ರಕರಣ-ಕರ್ನಾಟಕ-ಇತಿಹಾಸ-ಸಂಶೋಧನ.

೧೫೫


(೬) ಕಾಗದವು ಕಲ್ಲಿಗೆಲ್ಲ ಸಾಕಾಗುವಷ್ಟು ದೊಡ್ಡದಾಗಿರದಿದ್ದರೆ, ಮೇಲೆ ಹೇಳಿದ ರೀತಿಯಲ್ಲಿಯೇ ಕಲ್ಲುಗಳ ಒಂದೊಂದೇ ಭಾಗವನ್ನು ಅಳತೆಮಾಡಿ ತೆಗೆದುಕೊಳ್ಳಬೇಕು.ಆದರೆ ಈ ಮುದ್ರಣವಾದ ಕೂಡಲೆ ಆಯಾ ಕಾಗದಗಳಿಗೆ ನಂಬರುಗಳನ್ನು ಹಾಕಿ ಜೋಡಿಸಿ ಅದರಮೇಲೆ ಅದು ಇಂಥ ಗುಡಿಯಲ್ಲಿ ಇಂಥ ದಿಕ್ಕಿಗಿರುವ ಶಿಲಾಲೇಖವೆಂದು ಮುಂತಾಗಿ ಬರೆಯುವುದಕ್ಕೆ ಮರೆಯಬಾರದು.

(೭) ಮಿಕ್ಕ ಯಂತ್ರಗಳ ಕೆಲಸದಂತೆ ಈ ಕೆಲಸವನ್ನು ಮಾಡಲಿಕ್ಕೂ ರೂಢಿಯು ಬೇಕಾಗುತ್ತದೆ. ಪ್ರತಿಯೊಂದರ ಮೂರು ನಾಲ್ಕು ಮುದ್ರಣಗಳನ್ನು ತೆಗೆದುಕೊಂಡರೆ, ಅಕ್ಷರಗಳ ತಪ್ಪುಗಳನ್ನು ತಿಳಿಯಲಿಕ್ಕೂ, ಅವುಗಳನ್ನು ತಿದ್ದಲಿಕ್ಕೂ ಅನುಕೂಲವಾಗುವುದಾದುದರಿಂದ ಬೇರೆ ಬೇರೆ ಮೂರು ನಾಲ್ಕು ಪತ್ರಗಳನ್ನು ಮುದ್ರಿಸಿಕೊಳ್ಳುವುದು ಒಳ್ಳೆಯದು.

೨ನೆಯ ರೀತಿ:- ಈ ರೀತಿಯ ಮೇಲಿನಂತೆಯೇ ಇದ್ದರೂ ಯೋಗ್ಯವಾದ ಮತ್ತು ಹದನವಾದ ಉಪಕರಣಗಳೂ ಅನುಭವವೂ ಇದ್ದರೆ ಇದರಲ್ಲಿ ಮುದ್ರೆಗಳು ಹೆಚ್ಚು ಸ್ಫುಟವಾಗಿ ಮೂಡುವುವು, ಮೊದಲು ಮುದ್ರಕರ 'ರೋಲರ್' ಒಂದನ್ನು ತೆಗೆದುಕೊಂಡು ಅದಕ್ಕೆ ಮಸಿ ಹಚ್ಚಿ, ಕಲ್ಲು ಸ್ವಲ್ಪ ತಣ್ಣಗಿರುವಾಗಲೇ (ಆದರೆ ಒದ್ದೆಯಲ್ಲ) ಅದರಮೇಲೆ ಉರುಳಿಸಬೇಕು, ಚರ್ಮಸಹಿತವಾದ ಉಣ್ಣೆಯ ಕುಂಚಿನಿಂದ ಅದನ್ನು ಮೆಲ್ಲಗೆ ಒತ್ತಿದರೆ, ಮಸಿ ಹತ್ತದಿರುವಲ್ಲಿ ಮಸಿ ಹತ್ತುವುದು, ಮತ್ತು ಮಸಿ ಹೆಚ್ಚು ಹತ್ತಿದ ಸ್ಥಳವು ಬೆಳ್ಳಗಾಗುವುದು, ಇದರಿಂದ ಸೂಕ್ಷ್ಮ ಕೆಲಸವು ಬಹು ಸೊಗಸಾಗುವುದು. ಆಮೇಲೆ, ಪೂರ್ವದಂತೆ, ಕಾಗದವನ್ನು ಕಲ್ಲಿನಮೇಲೆ ಒಣಗಿಸಲಿಕ್ಕೆ ಬಿಡಬೇಕು, ಮತ್ತು ಏನಾದೀತೋ ಎಂದು ಸಂಶಯ ತೆಗೆದುಕೊಳ್ಳದೆ ಸುರುಳಿಯಾಗಿ ಸುತ್ತಬೇಕು. ಇದಕ್ಕಾಗಿ ಬೇಕಾಗುವ ಮಸಿಗಾಗಿ, ಪರ್ಸಿಯನ್ ಮಸಿಯನ್ನಾದರೂ, ಕಾಡಿಗೆ ಅಂಟು ಮತ್ತು ನೀರಿನಿಂದ ಕೂಡಿದ ಮಸಿಯನ್ನಾದರೂ ಬಳಸಬಹುದು. ಹೆಚ್ಚು ಮಸಿಯನ್ನು ಹಾಕಿದರೆ ಮುದ್ರೆಯು ಕೆಡುವುದು. ಆದುದರಿಂದ ಸರಿಯಾಗಿ ಬೇಕಾದಷ್ಟು ಮಸಿಯನ್ನೇ ಹಾಕಬೇಕು. ಅದರಂತೆ 'ರೂಲ'ವನ್ನು ಒತ್ತುವಾಗ ಅದನ್ನು ಒಂದೇಮಸಮನಾಗಿ ಉರುಳಿಸಬೇಕು. ಎಂದರೆ ಅಕ್ಷರಗಳ ಸಂದಿಯಲ್ಲಿ ಮಸಿಹೋಗದ ಅಕ್ಷರಗಳು ಬೆಳ್ಳಗೆ ಉಳಿಯುವುವು. ಮಿಕ್ಕಕಡೆಗೆ ಮಸಿ ಹತ್ತುವುದು.