ಮಹಾಕ್ಷತ್ರಿಯ/ಪಾಪದ ಮೊದಲು

ವಿಕಿಸೋರ್ಸ್ದಿಂದ

==೮.ಪಾಪದ ಮೊದಲು==

ಇಂದ್ರನು ತನ್ನ ವಿಶ್ರಾಂತಿಮಂದಿರದಲ್ಲಿ ಶತಪಥ ತಿರುಗುತ್ತಿದ್ದಾನೆ. ಅಗ್ನಿವಾಯುಗಳಿಬ್ಬರೂ ಕಂಭವನ್ನೊರಗಿಕೊಂಡು ನಿಂತಿದ್ದಾರೆ. ಶಚಿ ಅತ್ತ ನಿಂತಿದ್ದಾಳೆ. ಇಂದ್ರನು ಹೇಳಿದನು : “ಕಾರಣಾಂತರಗಳಿಂದ ಅತೃಪ್ತರಾಗಿ ರುವವರನ್ನು ಹುಡುಕಬೇಕು. ಅವರಿಗೆ ಪರಿಗ್ರಹಾಧಿಕಾರವು ಇರಬೇಕು. ಅವರಿಗೆ ಮೊದಲು ಅವರು ಕೇಳಿದ ವರವನ್ನು ಕೊಟ್ಟು ಆ ನಂತರ ಬ್ರಹ್ಮ ಹತ್ಯದ ಪಾಲನ್ನು ಕೊಡಬೇಕು. ಇಲ್ಲವಾದರೆ ಕೆಲಸವು ಕೆಟ್ಟೀತು.”

ಅಗ್ನಿಯು ಹೇಳಿದನು : “ಈ ಕಾರ್ಯಕ್ಕೆ ಅವರಿವರನ್ನು ಕೇಳಿದರೆ ಆಗುವುದಿಲ್ಲ. ಲೋಕವನ್ನೆಲ್ಲಾ ಅನ್ನವನ್ನು ಕೊಟ್ಟು ಕಾಪಾಡುವ ಸೋಮನನ್ನು ಕರೆದು ಕೇಳಬೇಕು.”

ವಾಯುವು ಹೇಳಿದನು : “ಹೊರಗೆ ಅನ್ನವಾಗಿ ಒಳಗೆ ಅನ್ನಾದನಾಗಿ ಇರುವ ಪ್ರಾಣವನ್ನು ಕೇಳಿದರೆ, ಅತೃಪ್ತರು ಯಾರು ಎನ್ನುವುದು ತಿಳಿಯುವುದು. ಆತನು ಎಲ್ಲಕ್ಕೂ ಮೂಲನು.”

ಶಚಿಯು ಹೇಳಿದಳು : “ಸೋಮ, ಪ್ರಾಣ, ಇಬ್ಬರನ್ನೂ ಕೇಳಿದರಾಯ್ತು ಅದಕ್ಕೆ ಏನಂತೆ.”

ಇಂದ್ರನು ಸರಿಯೆಂದನು. ಸೋಮ ಪ್ರಾಣರು ಇಬ್ಬರೂ ಬಂದರು. ಯಥೋಚಿತವಾಗಿ ಆದರ ಪೂರ್ವಕವಾಗಿ ಅವರಿಗೆ ಸತ್ಕಾರವು ಆಯಿತು. ಅಗ್ನಿಯು ಇಂದ್ರನ ಅಪ್ಪಣೆಯಂತೆ ಅವರನ್ನು ಕೇಳಿದನು : “ಈಗೊಂದು ಬ್ರಹ್ಮಹತ್ಯೆಯು ಪ್ರಾಪ್ತವಾಗುವುದರಲ್ಲಿದೆ. ಅದನ್ನು ಹಂಚಿಹಾಕಬೇಕು. ಅದನ್ನು ಭಾಗವಾಗಿ ಸ್ವೀಕರಿಸಿದವರಿಗೆ ಅವರು ಅಪೇಕ್ಷಿಸಿದ ವರವನ್ನು ಕೊಡಲಾಗುವುದು. ಅತೃಪ್ತರಾಗಿ ಹತ್ಯಭಾಗವನ್ನು ಜೀರ್ಣಿಸಿಕೊಳ್ಳಬಲ್ಲವರಾರು ಎಂಬುದನ್ನು ತಿಳಿಯಲು ನಿಮ್ಮನ್ನು ಇಲ್ಲಿಗೆ ಬರಮಾಡಲಾಯಿತು” ಎಂದು ಅವರಿಗೆ ವಿಸ್ತಾರವಾಗಿ ತಿಳಿಯಹೇಳಿದನು. ಸೋಮನು “ವೃಕ್ಷಗಳನ್ನು ಸ್ತ್ರೀಯರನ್ನು” ಎಂದು ಹೇಳಿದನು. “ವೃಕ್ಷಗಳಿಗೂ ಸ್ತ್ರೀಯರಿಗೂ ಒಂದು ಅಂತ್ಯಶೋಕವಿದೆ. ವೃಕ್ಷಗಳನ್ನು ಯಜ್ಞಾರ್ಥವಾಗಿ ಕಡಿದರೆ ಅವುಗಳಿಗೆ ಸದ್ಗತಿಯಾಗುವುದು ಎಂಬ ತೃಪ್ತಿಯುಂಟು. ಆದರೆ ಲೌಕಿಕವಾಗಿ ಕಡಿಯುವಾಗ ಅವಕ್ಕೆ ತಮ್ಮ ಕುಲವೇ ನಾಶವಾಗುವುದಲ್ಲಾ ಎಂಬ ಶೋಕವಿದೆ.

ಸ್ತ್ರೀಯರಿಗೆ ಪುರುಷ ಸಂಯೋಗದಿಂದ ಲಭಿಸುವ ಸುಖವು ಸಕೃನ್ಮಾತ್ರವಾಗುವುದು ಎಂಬ ಶೋಕವಿದೆ. ದೇವರಾಜನು ಈ ಶೋಕಗಳು ನೀಗುವಂತೆ ವರವನ್ನು ಕೊಡುವುದಾದರೆ ಅವರು ಒಂದೊಂದು ಪಾಲು ಹತ್ಯೆಯನ್ನು ಸ್ವೀಕರಿಸುವರು” ಎಂದನು. ಇಂದ್ರನು ‘ತಥಾಸ್ತು’ ಎಂದು ಒಪ್ಪಿದನು. ಸೋಮನು ವೃಕ್ಷಾಧಿಪತಿಯಾದ ವನದೇವಿಯನ್ನೂ ಸ್ತ್ರೀಕುಲಾಭಿಮಾನಿ ದೇವತೆಯಾದ ಅದಿತಿಯನ್ನೂ ಕರೆದನು.

ಶಚಿಯೂ ಇಂದ್ರನೂ ಅವರಿಬ್ಬರನ್ನು ಗೌರವದಿಂದ ಸ್ವಾಗತಿಸಿ ಅವರನ್ನು ಕರೆಸಿದ ಉದ್ದೇಶವನ್ನು ಹೇಳಿದರು. ಅವರಿಬ್ಬರೂ ಆ ಶೋಕವನ್ನು ನೀಗುವುದಾದರೆ ತಾವು ತಮ್ಮವರ ಪರವಾಗಿ ಹತ್ಯೆಯನ್ನು ಸ್ವೀಕರಿಸುವುದಾಗಿ ಹೇಳಿದರು. ಇಂದ್ರನು ತ್ರಿಲೋಕಾಧಿಪತಿಯಾಗಿ ವನದೇವಿಗೆ ವರವನ್ನು ಕೊಟ್ಟನು. ಕಡಿದಂತೆಲ್ಲಾ ಮರಗಳು ಗಿಡಗಳು, ಔಷಧಿ, ಮೂಲಿಕೆಗಳು, ವನಸ್ಪತಿಗಳೂ, ಅಷ್ಟೇನು ಸಸ್ಯವರ್ಗವೆಲ್ಲಾ ಕಡಿದಂತೆಲ್ಲಾ ಚಿಗುರುತ್ತಿರಲಿ ಎಂದು ವರವನ್ನು ಕೊಟ್ಟು “ಆಯಿತು, ಈ ವರ್ಗವು ತಮ್ಮಲ್ಲಿರುವ ಬ್ರಹ್ಮಹತ್ಯೆಯನ್ನೆಂತು ತೋರಿಸುವುವು ?’ ಎಂದು ಕೇಳಿದನು. ವನದೇವಿಯು ಯೋಚಿಸಿ ಹೇಳಿದಳು : “ಕಡಿದಾಗ ಸಸ್ಯಗಳಿಂದ ಬರುವ ನಿರ್ಯಾಸವು ಆ ಪಾಪದ ಸಂಕೇತವಾಗಿರಲಿ” ಎಂದಳು. ಇಂದ್ರನು ಒಪ್ಪಿದನು.

ಸ್ತ್ರೀಕುಲಾಭಿಮಾನಿಯಾದ ಅದಿತಿಗೆ ನಮಸ್ಕಾರ ಮಡಿ, ಇಂದ್ರನು ತನ್ನ ತ್ರೈಲೋಕ್ಯಾಧಿಪತ್ಯದ ಬಲದಿಂದ ಆಕೆಗೆ ವರವನ್ನು ಕೊಟ್ಟನು. “ಇನ್ನು ಮುಂದೆ ಅತಿರ್ಯಗ್ಯೋನಿಗಳಾದ ಸ್ತ್ರೀವರ್ಗವೆಲ್ಲವೂ ಪ್ರಸವವಾಗುವವರೆಗೂ ಪುರುಷ ಸುಖವನ್ನು ಪಡೆಯಬಲ್ಲವರಾಗಲಿ” ಎಂದನು. ಅದಿತಿಯು ಅದನ್ನು ಸ್ವೀಕರಿಸಿ, “ಸ್ತ್ರೀಯರು ರಜಸ್ವಲೆಯರಾಗುವ ಮೂರು ದಿನ ಅವರಲ್ಲಿ ಕಾಣುವ ರಜಸ್ಸು ಅವರು ಸ್ವೀಕರಿಸಿದ ಹತ್ಯೆಯ ಫಲವಾಗಿರಲಿ” ಎಂದಳು. ಇಂದ್ರನು ಅಂಗೀಕರಿಸಿದನು.

ಪ್ರಾಣನು ಇಂದ್ರನ ಇಂಗಿತದಂತೆ ಆಪೆÇೕದೇವಿಯರನ್ನೂ ಭೂದೇವಿಯನ್ನೂ ಕರೆಸಿದನು. ಆಪೋದೇವಿಯರು “ನಮಗೆ ಬೇಕಾದ ವರವಿದು, ಚರಾಚರ ವಸ್ತುಗಳೆಲ್ಲವೂ ನಮ್ಮನ್ನು ಸೇವಿಸಿ ಬೆಳೆಯಬೇಕು. ನಾನಿಲ್ಲದಿದ್ದರೆ ಕ್ಷಯಿಸಬೇಕು. ಇದು ನಮ್ಮ ಕೋರಿಕೆ’ ಎಂದರು. “ನಮ್ಮಲ್ಲಿ ಮಹಾನದಿಗಳು ಅಲ್ಲದವು, ತಿಂಗಳಿಗೆ ಮೂರು ದಿನ ನೊರೆನೊರೆಯಾಗಿರುವವು. ಅದು ನಾವು ಅಂಗೀಕರಿಸುವ ಪಾಪದ ಗುರುತು” ಎಂದರು. ಇಂದ್ರನು ಒಪ್ಪಿ ಅವರಿಗೆ ವರವನ್ನೂ ಒಂದು ಪಾಲು ಬ್ರಹ್ಮಹತ್ಯೆಯನ್ನೂ ಕೊಟ್ಟನು.

ಭೂದೇವಿಯು, “ನನಗೊಂದು ಶೋಕವಿದೆ. ನನ್ನ ಜಡರೂಪದಲ್ಲಿ ಹಳ್ಳವನ್ನು ತೆಗೆದವರು ಮುಚ್ಚುವುದಿಲ್ಲ. ಅದು ತಾನಾಗಿಯೇ ಮುಚ್ಚಿಕೊಳ್ಳುವಂತೆ ವರವನ್ನು ಕೊಡುವುದಾದರೆ ನಾನು ಉಳಿದ ಪಾಪವನ್ನು ಅಂಗೀಕರಿಸುವೆನು. ಆ ಪಾಪವು ನನ್ನಲ್ಲಿ ಊಷರರೂಪವಾಗಿ ಕಾಣಿಸಿಕೊಳ್ಳುವುದು” ಎಂದಳು. ಇಂದ್ರನು ಸಂತೋಷದಿಂದ ಆಕೆಗೆ ವರವನ್ನು ಕೊಟ್ಟನು.

ಇಂದ್ರನಿಗೂ ಇಂದ್ರಾಣಿಗೂ ಪರಮ ಸಂತೋಷವಾಯಿತು. ಬರಲಿರುವ ಬ್ರಹ್ಮಹತ್ಯೆಯು ಇಷ್ಟು ಸುಲಭವಾಗಿ ನಿವಾರಣವಾಗುವುದೆಂದು ಅವರು ಯೋಚಿಸಿರಲಿಲ್ಲ. ಅಲ್ಲದೆ, ಇಂದ್ರನಿಗೆ ಇನ್ನೂ ಒಂದು ಅಧಿಕ ಸಂತೋಷ “ಈ ವರಗಳಿಂದ ಲೋಕವು ಅಭಿವೃದ್ಧಿಯಾಗುವುದು. ಭೂಮಿಯು ಸಂತೋಷಪಟ್ಟು ತನ್ನಲ್ಲಿರುವ ಬೀಜಗಳನ್ನೆಲ್ಲಾ ಬೆಳೆಸುವಳು. ಜಲಗಳು ಎಲ್ಲೆಲ್ಲೂ ತಾವೇ ತಾವಾಗಿ ಸಸ್ಯಗಳನ್ನೂ ಪ್ರಾಣಿಗಳನ್ನೂ ವರ್ಧಿಸುವುವು. ಎಲ್ಲೆಲ್ಲಿಯೂ ಅನ್ನವು ತಾನೇ ತಾನಾಗುವುದು. ಮನುಷ್ಯರು ಅನ್ನವನ್ನು ತಿಂದು ವರ್ಧಿಸುವರು. ಭೋಗಸಂಪನ್ನರಾಗುವರು. ಭೋಗಾಸಕ್ತಿಯು ಹೆಚ್ಚಿದಂತೆಲ್ಲ ಅದರ ಜೊತೆಯಲ್ಲಿಯೇ ಅತೃಪ್ತಿಯೂ ಬೆರೆಯುವುದು. ಅತೃಪ್ತಿಯ ಶಾಂತಿಗಾಗಿ ದೇವತೆಗಳನ್ನು ಪೂಜಿಸುವರು. ಹೀಗೆ ಈಗ ಮಾಡಿರುವ ಕಾರ್ಯದಿಂದ ದೇವತೆಗಳಿಗೇ ಸಂತೋಷವಾಗುವುದು” ಎಂದು ಇಂದ್ರನು ಅಧಿಕಾಧಿಕವಾಗಿ ಸಂತೋಷಪಡುತ್ತ ಮುಂದಿನ ಕಾರ್ಯವನ್ನು ಕುರಿತು ಯೋಚಿಸಿದನು.

ಇಂದ್ರನು ವಿಶ್ವರೂಪನ ದರ್ಶನಾರ್ಥವಾಗಿ ಹೋದನು. ಆಚಾರ್ಯನಿಗೆ ಇಂದ್ರನು ಬಂದಬಂದಾಗಲೆಲ್ಲ ಸುರಾಪಾನದ ವಿಚಾರ ಪ್ರಸ್ತಾಪಿಸುವುದು ಸಮ್ಮತವಿಲ್ಲ. ಅದರಿಂದ ಈ ದಿನ ಮಹೇಂದ್ರನು ಬಂದಿರುವನು ಎಂದು ಪ್ರಹರಿಯು ಹೇಳುತ್ತಿರುವಾಗಲೇ ಆತನಿಗೆ ಕೋಪ ಬಂತು. ಆ ಕೋಪದಲ್ಲಿ “ಇದು ದರ್ಶನ ಸಮಯವಲ್ಲ” ಎಂದು ಹೇಳಿಕಳುಹಿಸಬೇಕು. ಆದರೂ ದಾಕ್ಷಿಣ್ಯಬದ್ಧನಾಗಿ ಇಂದ್ರನನ್ನು ಒಳಕ್ಕೆ ಕರೆಯಿಸಿಕೊಂಡನು. ಇಂದ್ರನು ವಿನಯವಾಗಿ ಪ್ರವೇಶಿಸಿದರೂ, ಆ ವಿನಯದ ಹಿಂದೆ ಕಠೋರ ಮನಸ್ಕತೆಯು ಇತ್ತು ಎನ್ನುವುದನ್ನು ಆಳವಾಗಿ ಪರೀಕ್ಷಿಸುವವರು ಕಂಡುಹಿಡಿಯಬಹುದಾಗಿತ್ತು. ವಿಶ್ವರೂಪನು ಗಂಭೀರವಾಗಿದ್ದು ತನ್ನ ಅಸಮಾಧಾನವನ್ನು ತೋರಿಸಿಕೊಳ್ಳುತ್ತ ಎಂದಿನಂತೆ ‘ವಿಜಯೀಭವ’ ಎಂದು ಆಶೀರ್ವದಿಸಿದನು.

ತಾನಿನ್ನು ಕೃತ್ಯಕಾರ್ಯನಾದೆನೆಂದು ಇಂದ್ರನು ಹರ್ಷಿಸುತ್ತ ತಾನು ಬಂದ ಕಾರ್ಯವನ್ನು ಪ್ರಸ್ತಾಪಿಸಿದನು : “ಆಚಾರ್ಯ, ನಾನಿಂದು ಮತ್ತೆ ದೇವಗಣದ ಪರವಾಗಿ ಬಂದಿರುವೆನು.....”

ಆಚಾರ್ಯನು ನಡುವೆ ಬಾಯಿಹಾಕಿದನು. ಇಂದ್ರನು ಕೈಮುಗಿದುಕೊಂಡು ವಿನಯದಿಂದ ಹೇಳುತ್ತಿರುವುದು ಆತನಿಗೆ ಆಟವೆನ್ನಿಸಿತು. ತನಗೆ ಮೊದಲೇ ಬಂದಿದ್ದ ಕೋಪವನ್ನು ಪ್ರಕಟವಾಗಿ ಹೊರಚೆಲ್ಲುತ್ತ “ಅದೇ ಪ್ರಾರ್ಥನೆ ತಾನೇ ? ಸಾಧ್ಯವಿಲ್ಲ- ನೀವು ಬೇಕಾದುದು ಮಾಡಬಹುದು” ಎಂದು ಸೆಟೆದು ನುಡಿದನು.

ದೇವೇಂದ್ರನಿಗೂ ಆ ಕಾವು ಹತ್ತಿ ಕೋಪ ಬಂತು. ಆದರೂ ವಿನಯವನ್ನು ಬಿಡದೆ, “ಆಚಾರ್ಯ, ದೇವತೆಗಳು ತ್ರಿಲೋಕದ ರಕ್ಷಾಭಾರವನ್ನು ಹೊತ್ತಿರುವರು. ಅವರು ಆಚಾರ್ಯನೆಂದು ವರಿಸಿರುವವನು ಅಕಾರ್ಯವನ್ನು ಮಾಡಬಾರದು ಎಂದು ಕೋರುವರು. ಆ ಪ್ರಾರ್ಥನೆಯನ್ನು ಇನ್ನು ಯಾವ ರೀತಿಯಲ್ಲೂ ಸಲ್ಲಿಸಲು ಸಾಧ್ಯವಿಲ್ಲದಿದ್ದರೆ, ವರವೆಂದಾದರೂ ಅನುಗ್ರಹಿಸಬೇಕು ಎಂದು ಬಲವಂತ ಮಾಡಬೇಕು ಎಂದು ನನ್ನನ್ನು ನಿಯೋಜಿಸಿರುವರು” ಎಂದನು.

ಆಚಾರ್ಯನು ಇನ್ನೂ ಸೆಟೆದುಕೊಂಡು ಎದ್ದು ನಿಂತು, “ಇಂದ್ರನ ಈ ಭದ್ರಮುಷ್ಠಿ ಪ್ರದರ್ಶನವು ಯಾರ ಬಳಿ ? ನಾನಿತ್ತ ಭಿಕ್ಷೆಯಿಂದ ದೊಡ್ಡವರಾದ ದೇವತೆಗಳು ನನ್ನ ಮೇಲೆ ಅಧಿಕಾರ ಮಾಡುವುದನ್ನು ನಾನು ಸಹಿಸುವುದಿಲ್ಲ” ಎಂದು ಕಠೋರವಾಗಿ ನುಡಿದನು.

ಇಂದ್ರನು ಎದ್ದು ನಿಂತು, ಕೈಮುಗಿದುಕೊಂಡು, “ದೇವ, ದೇವತೆಗಳ ಪ್ರಾರ್ಥನೆಯನ್ನು ಸಲ್ಲಿಸದಿದ್ದರೆ ಅಪರಾಧವಾಗುವುದು....”

ವಿಶ್ವರೂಪನು ಮತ್ತೆ ಅರ್ಧದಲ್ಲಿ ನುಗ್ಗಿ ಮಾತಾಡುತ್ತ ವಿಕಟವಾಗಿ ನಗುತ್ತ “ಅಪರಾಧ ! ಅಪರಾಧ ! ಎಲ್ಲಿ ನಿನಗೆ ಶಕ್ತಿಯಿದ್ದರೆ ಅಪರಾಧಿ ಶಿಕ್ಷೆಯನ್ನು ವಿಧಿಸು, ನೋಡೋಣ” ಎಂದು ಎದೆಯನ್ನು ಬಾಚಿ ನಿಂತನು.

ಇಂದ್ರನು ಮತ್ತೆಯೂ ಹೇಳಿಕೊಂಡನು : “ಶಿಕ್ಷೆ ವಿಧಿಸಲು ಹಿಂತೆಗೆಯುವುದಾಗಿದ್ದರೆ, ಈ ಭುಜವು ತ್ರೈಲೋಕ್ಯಾಧಿಪತ್ಯದ ಭಾರವನ್ನು ವಹಿಸುತ್ತಿರಲಿಲ್ಲ. ಇದು ಶಿಕ್ಷೆಗೆ ಸ್ಥಾನವಾಗಬಾರದೆಂದು ಮತ್ತೆ ಬಿನ್ನವಿಸಿಕೊಳ್ಳುವೆನು.”

ವಿಶ್ವರೂಪನು ಮತ್ತೆ ಗಹಗಹಿಸಿ ನಗುತ್ತ ಹೇಳಿದನು. ಆ ವಿಕಟಾಟ್ಟಹಾಸದಲ್ಲಿ ತಿರಸ್ಕಾರವು ತಾನೇ ತಾನಾಗಿತ್ತು. “ಹೌದು, ಹೌದು, ನಿನಗೆ ನನ್ನನ್ನು ಶಿಕ್ಷಿಸುವ ಧೈರ್ಯವಿಲ್ಲ. ನನ್ನ ತೇಜಸ್ಸನ್ನು ಸಹಿಸಲಾರದೆ, ಆ ಪರಿಭವವನ್ನು ಪ್ರಕಾರಾಂತವಾಗಿ, ನಿನಗೆ ಗೌರವ ಬರುವಂತೆ ನುಡಿದ ಮಾತ್ರಕ್ಕೆ ಪರಾಭವವು ಪರಾಭವವೇ ಅಲ್ಲವೇನು? ಎಲ್ಲಿ ಇಂದ್ರ, ಶಪಥ ಮಾಡು ನಿನ್ನ ಕೈಲಾದರೆ ನನಗೆ ಶಿಕ್ಷೆಯನ್ನು ವಿಧಿಸು.”

ಇಂದ್ರನ ಕ್ಷಾತ್ರಭಾವವು ಆ ಆಹ್ವಾನವನ್ನು ಮನ್ನಿಸದಿರಲಾಗಲಿಲ್ಲ. ಅಧೀರನೆಂದು ತನ್ನನ್ನು ತಿರಸ್ಕರಿಸುವವನನ್ನು ತಿರಸ್ಕರಿಸದೆ ಇರಲು ಅಸಾಧ್ಯವಾಯಿತು. ಆತನು ತಾನು ಕಟ್ಟಿದ್ದ ಮರ್ಯಾದೆಯ ಸಂಕಲೆಗಳನ್ನೆಲ್ಲಾ ಕಿತ್ತೆಸೆದನು. ಅಲ್ಲದೆ, ಈ ಕಾರ್ಯ ಮಾಡಿದರೆ ಇದರಿಂದ ಆಗುವ ಹಾನಿಯಿಷ್ಟೇ ಎಂದು ಗೊತ್ತು ಮಾಡಿಕೊಂಡಿದ್ದನಾಗಿ ಆತನಿಗೆ ಧೈರ್ಯವೂ ತಾನೇತಾನಾಯಿತು. ಜೊತೆಯಲ್ಲಿ ಕೋಪವೂ ಬೆಳೆಯಿತು. ಇದಿಷ್ಟೂ ಒಂದೇ ಕ್ಷಣದಲ್ಲಿ ನಡೆದು ಹೋಗಿ ಆ ಕೋಪ, ಅಸಹನೆಗಳಲ್ಲಿ ತಾನು ಏನು ಮಾಡುತ್ತಿರುವೆನೆಂಬುದನ್ನು ವಿಚಾರಿಸುವುದರೊಳಗಾಗಿ ಕೈಯು ಖಡ್ಗವನ್ನೆಳೆಯಿತು. ಏಕೆ ಎನ್ನುವುದರೊಳಗೆ ಖಡ್ಗಪ್ರಯೋಗವಾಗಿ, ವಿಶ್ವರೂಪನ ರುಂಡ ಮುಂಡಗಳು ಬೇರಾದವು. ರುಂಡವು ಕೆಳಗೆ ಬಿದ್ದಿದ್ದರೂ ಆ ಅಟ್ಟಹಾಸವು, ಆ ತಿರಸ್ಕಾರದಿಂದ ಹೊರಟ ಅಪಹಾಸ್ಯದ ಒರಟು ನಗುವು ಇನ್ನೂ ಒಂದು ಸಲ ಆ ಮುಖಗಳಿಂದ ಹೊರಟಿತು. ದಾನವೇಂದ್ರರೆಷ್ಟೋ ಜನರನ್ನು ತುಂಡರಿಸಿದ್ದ ಶತ್ರುಂಜಯನು ಅ ಮುಖಗಳಿಂದ ಹೊರಹೊರಟ ಅಟ್ಟವಿಕಟಾಟ್ಟಹಾಸವನ್ನು ಕೇಳಿದನು. ಆ ಕಣ್ಣುಗಳಲ್ಲಿ ತಾನೇ ತಾನಾಗಿದ್ದ ಆ ಕ್ರೂರ ತೇಜಸ್ಸನ್ನು ಕಂಡನು. ಆತನಿಗೆ ಭ್ರಾಂತಿಯಾಯಿತು. ಕಡಿದುರುಳಿಸಿರುವ ಆ ರುಂಡಗಳು ಮತ್ತೆ ಹಾರಿ ಬಂದು ಕಂಠಸ್ಥಳದಲ್ಲಿ ಕುಳಿತುಕೊಂಡಂತಾಯಿತು. ಅವು ಮತ್ತೆ ತನ್ನನ್ನು ತಿರಸ್ಕರಿಸಿದಂತೆ ಆಯಿತು. ಏನೋ ಗಾಬರಿಯಾಯಿತು. ಅಲ್ಲಿಂದ ಓಡಿ ಹೋಗಬೇಕು ಎನ್ನಿಸಿತು. ಕಾಲು ಕಿತ್ತರೂ ಕೀಳಲಾರದಂತೆ ಕೀಲಿಸಿರುವಂತಾಗಿ, ವಿಕಾರವಾಗಿ, ಚೀರುತ್ತ ದೇವರಾಜನು ಬಿದ್ದುಹೋದನು. ಆ ಮುಖಗಳಿಂದಲೂ ಆ ದೇಹದಿಂದಲೂ ಏನೋ ಒಂದು ವಿಚಿತ್ರವಾದ ತೇಜೋಧೂಮವು ಹರಡಿದಂತೆಯೂ, ಅದು ತನ್ನನ್ನು ಸುಡುತ್ತಿರುವಂತೆಯೂ ಭಾಸವಾಗಿ, ಅದನ್ನು ಸಹಿಸಲಾರದೆ, ಮತ್ತೂ ಒಮ್ಮೆ ಕಿರುಚಿಕೊಂಡು ಮೂರ್ಛಿತನಾದನು.

* * * *