ಹರಹರಾ ಎನ್ನ ಬಡಮನದ ಅಳಿಯಾಸೆಯ ನೋಡಾ ! ಸುರಧೇನುವಿದ್ದು ಬರಡಾಕಳಿಗೆ ಆಸೆಮಾಡುವಂತೆ ಕಲ್ಪವೃಕ್ಷವಿದ್ದು ಕಾಡಮರಕ್ಕೆ ಕೈಯಾನುವಂತೆ ಚಿಂತಾಮಣಿಯಿದ್ದು ಗಾಜಿನಮಣಿಯ ಬಯಸುವಂತೆ ಎನ್ನ ಕರ ಮನ ಭಾವದಲ್ಲಿ ನೀವು ಭರಿತರಾಗಿರ್ದುದ ಮರೆತು ನರರಿಗಾಸೆಯ ಮಾಡಿ ಕೆಟ್ಟೆನಯ್ಯ ಅಖಂಡೇಶ್ವರಾ.