ಹರಿಕಥಾಮೃತಸಾರ/ಕ್ರೀಡಾ ವಿಲಾಸ ಸಂಧಿ (ಸರ್ವ ಸ್ವಾತಂತ್ರ್ಯ)

ವಿಕಿಸೋರ್ಸ್ದಿಂದ

ಶ್ರೀನಿವಾಸನ ಚರಿತೆಗಳ ಪರಮಾನುರಾಗದಿ ಬೆಸೆಗೊಳಲು

ಮುನಿ ಶೌನಕಾದ್ಯರಿಗೆ ಅರುಪಿದನು ಸೂತಾರ್ಯ ದಯದಿಂದ//


ಪಚನ ಭಕ್ಷಣ ಗಮನ ಭೋಜನ ವಚನ ಮೈಥುನ ಶಯನ ವೀಕ್ಷಣ

ಅಚಲನಾ ಚಲನ ಪ್ರಯತ್ನದಿ ಸಾಧ್ಯವೇ ಜನಕೆ

ಶುಚಿ ಸದನ ದಯದಿಂದ ಜೀವರ ನಿಚಯದೊಳು ತಾ ನಿಂತು ಮಾಡುವ

ಉಚಿತಾನುಚಿತ ಕರ್ಮಗಳನೆಂದರಿದು ಕೊಂಡಾಡು//1//


ವಿಷ್ಟರ ಶ್ರವ ದೇಹದೊಳಗೆ ಪ್ರವಿಷ್ಟನಾಗಿ ನಿರಂತರದಿ

ಬಹು ಚೇಷ್ಟೆಗಳ ಮಾಡುತಿರೆ ಕಂಡು ಸಜೀವಿಯೆನುತಿಹರು

ಹೃಷ್ಟರಾಗುವರು ನೋಡಿ ಕನಿಷ್ಟರು ಎಲ್ಲರು ಸೇವೆ ಮಾಳ್ಪರು

ಬಿಟ್ಟ ಕ್ಷಣದಲಿ ಕುಣಪ ಸಮವೆಂದರಿದು ಅನುಪೇಕ್ಷಿಪರು//2//


ಕ್ರೀಡೆಗೋಸುಗ ಅವರವರ ಗತಿ ನೀಡಲೋಸುಗ ದೇಹಗಳ ಕೊಟ್ಟು ಆಡುವನು ಸ್ವೇಚ್ಚೆಯಲಿ

ಬ್ರಹ್ಮ ಈಶಾದ್ಯರೊಳು ಪೊಕ್ಕು

ಮಾಡುವನು ವ್ಯಾಪಾರ ಬಹು ವಿಧ ಮೂಢ ದೈತ್ಯರೊಳಿದ್ದು ಪ್ರತಿದಿನ

ಕೇಡು ಲಾಭಗಳಿಲ್ಲವು ಇದರಿಂದ ಆವ ಕಾಲದಲಿ//3//


ಅಕ್ಷರ ಈಡ್ಯನು ಬ್ರಹ್ಮ ವಾಯು ತ್ರ್ಯಕ್ಷ ಸುರಪಾಸುರ ಅಸುರರೊಳು

ಅಧ್ಯಕ್ಷನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ

ಅಕ್ಷಯನು ಸತ್ಯಾತ್ಮಕ ಪರಾಪೇಕ್ಷೆಯಿಲ್ಲದೆ

ಸರ್ವರೊಳಗೆ ವಿಲಕ್ಷಣನು ತಾನಾಗಿ ಲೋಕವ ರಕ್ಷಿಸುತಲಿಪ್ಪ//4//


ಶ್ರೀ ಸರಸ್ವತಿ ಭಾರತೀ ಗಿರಿಜಾ ಶಚೀ ರತಿ ರೋಹಿಣೀ ಸಂಜ್ಞಾ ಶತ ಸುರೂಪಾದಿ

ಅಖಿಳ ಸ್ತ್ರೀಯರೊಳು ಸ್ತ್ರೀ ರೂಪ ವಾಸವಾಗಿದ್ದೆಲ್ಲರಿಗೆ

ವಿಶ್ವಾಸ ತನ್ನಲಿ ಕೊಡುವ

ಅವರಭಿಲಾಷೆಗಳ ಪೂರೈಸುತಿಪ್ಪನು ಯೋಗ್ಯತೆಗಳರಿತು//5//


ಕೋಲು ಕುದುರೆಯ ಮಾಡಿ ಆಡುವ ಬಾಲಕರ ತೆರದಂತೆ

ಲಕ್ಷ್ಮೀ ಲೋಲ ಸ್ವಾತಂತ್ರ್ಯ ಗುಣವ ಬ್ರಹ್ಮಾದ್ಯರೊಳಗಿಟ್ಟು

ಲೀಲೆಗೈವನು ತನ್ನವರಿಗೆ ಅನುಕೂಲನಾಗಿದ್ದು ಎಲ್ಲ ಕಾಲದಿ

ಖುಲ್ಲರಿಗೆ ಪ್ರತಿಕೂಲನಾಗಿಹ ಪ್ರಕಟನಾಗದಲೆ//6//


ಸೌಪರ್ಣಿ ವರವಹನ ನಾನಾ ರೂಪ ನಾಮದಿ ಕರೆಸುತ ಅವರ ಸಮೀಪದಲ್ಲಿದ್ದು

ಅಖಿಳ ವ್ಯಾಪಾರಗಳ ಮಾಡುವನು

ಪಾಪ ಪುಣ್ಯಗಳೆರೆಡು ಅವರ ಸ್ವರೂಪಗಳ ಅನುಸರಿಸಿ ಉಣಿಪ

ಪರೋಪಕಾರಿ ಪರೇಶ ಪೂರ್ಣಾನಂದ ಜ್ಞಾನ ಘನ//7//


ಆಹಾರ ನಿದ್ರಾ ಮೈಥುನಗಳ ಅಹರಾಹರ ಬಯಸಿ ಬಳಲುವ

ಲಕ್ಷ್ಮೀ ಮಹಿತನ ಮಹಾ ಮಹಿಮೆಗಳನು ಎಂತರಿವ ನಿತ್ಯದಲಿ

ಅಹಿಕ ಸೌಖ್ಯವ ಮರೆದು ಮನದಲಿ ಗ್ರಹಿಸಿ ಶಾಸ್ತ್ರಾರ್ಥಗಳ

ಪರಮೋತ್ಸಾಹದಿ ಕೊಂಡಾಡುತಲೆ ಮೈಮರೆದವರಿಗಲ್ಲದಲೆ//8//


ಬಂಧಮೋಕ್ಷ ಪ್ರದನ ಜ್ಞಾನವು ಮಂದಮತಿಗಳಿಗೆಂತು ದೊರೆವುದು

ಬಿಂದು ಮಾತ್ರ ಸುಖಾನುಭವ ಪರ್ವತಕೆ ಸಮ ದುಃಖವೆಂದು ತಿಳಿಯದೆ

ಅನ್ಯ ದೈವಗಳಿಂದ ಸುಖವ ಅಪೇಕ್ಷಿಸುವರು

ಮುಕುಂದನ ಆರಾಧನೆಯ ಬಿಟ್ಟವಗೆ ಉಂಟೆ ಮುಕ್ತಿ ಸುಖ//9//


ರಾಜ ತನ್ನ ಅಮಾತ್ಯ ಕರುಣದಿ ನೈಜ ಜನರಿಗೆ ಕೊಟ್ಟು ಕಾರ್ಯ ನಿಯೋಜಿಸುತ

ಮಾನಾಪಮಾನವ ಮಾಳ್ಪ ತೆರದಂತೆ

ಶ್ರೀ ಜನಾರ್ಧನ ಸರ್ವರೊಳಗೆ ಅಪರಾಜಿತನು ತಾನಾಗಿ

ಸರ್ವ ಪ್ರಯೋಜನವ ಮಾಡಿಸುತ ಮಾಡುವ ಫಲಕೆ ಗುರಿಮಾಡಿ//10//


ವಾಸುದೇವ ಸ್ವತಂತ್ರವ ಸರೊಜಾಸನಾದಿ ಅಮರಾಸುರರಿಗೆ ಈಯಲೋಸುಗ ಅರ್ಧವ ತೆಗೆದು

ಅದರೊಳರ್ಧವ ಚತುರ್ಭಾಗಗೈಸಿ

ವಂದನು ಶತವಿಧ ದ್ವಿ ಪಂಚಾಶತಾಬ್ಜಜಗೆ

ಅಷ್ಟ ಚತ್ವಾರಿಂಶದ್ ಅನಿಲಗಿತ್ತ ವಾಣೀ ಭಾರತೀಗರ್ಧ//11//


ದ್ವಿತೀಯ ಪಾದವ ತೆಗೆದುಕೊಂಡು ಅದ ಶತ ವಿಭಾಗವ ಮಾಡಿ

ತಾ ವಿಂಶತಿ ಉಮೇಶನೊಳಿಟ್ಟ ಇಂದ್ರನೊಳು ಐದಧಿಕ ಹತ್ತು

ರತಿಪನೊಳಗೆ ಇನಿತಿಟ್ಟ ಅಖಿಳ ದೇವತೆಗಳೊಳಗೆ ಈರೈದು

ಜೀವ ಪ್ರತತಿಯೊಳು ದಶ ಐದಧಿಕ ನಾಲ್ವತ್ತು ದೈತ್ಯರೊಳು//12//


ಕಾರುಣಿಕ ಸ್ವಾತಂತ್ರ್ಯತ್ವವ ಮೂರು ವಿಧಗೈಸಿ ಎರಡು ತನ್ನೊಳು

ನಾರಿಗೊಂದನು ಕೊಟ್ಟ ಸ್ವಾತಂತ್ರ್ಯವ ಸರ್ವರಿಗೆ ಧಾರುಣಿಪ ತನ್ನ ಅನುಗರಿಗೆ

ವ್ಯಾಪಾರ ಕೊಟ್ಟು ಗುಣಾಗುಣಗಳ ವಿಚಾರ ಮಾಡುವ ತೆರದಿ

ತ್ರಿಗುಣ ವ್ಯಕ್ತಿಯನೆ ಮಾಳ್ಪ//13//


ಪುಣ್ಯ ಕರ್ಮಕೆ ಸಹಾಯವಾಗುವ ಧನ್ಯರಿಗೆ ಕಲ್ಯಾದಿ ದೈತ್ಯರ

ಪುಣ್ಯ ಫಲಗಳನೀವ ದಿವಿಜರ ಪಾಪ ಕರ್ಮ ಫಲಾನ್ಯ ಕರ್ಮವ ಮಾಳ್ಪರಿಗೆ

ಅನುಗುಣ್ಯ ಜನರಿಗೆ ಕೊಡುವ

ಬಹು ಕಾರುಣ್ಯ ಸಾಗರನು ಈ ತೆರದಿ ಭಕ್ತರನು ಸಂತೈಪ//14//


ನಿರುಪಮಗೆ ಸರಿಯುಂಟೆಂದು ಉಚ್ಚರಿಸುವವ ತದ್ಭಕ್ತರೊಳು ಮತ್ಸರಿಸುವವ

ಗುಣಗುಣಿಗಳಿಗೆ ಭೇದಗಳ ಪೇಳುವವ

ದರ ಸುದರ್ಶನ ಊರ್ಧ್ವ ಪುಂಡ್ರವ ಧರಿಸುವರೊಳು ದ್ವೇಷಿಸುವ

ಹರಿ ಚರಿತೆಗಳ ಕೇಳದಲೆ ಲೋಗರ ವಾರ್ತೆ ಕೇಳುವವ//15//


ಏವಮಾದೀ ದ್ವೇಷವುಳ್ಳ ಕುಜೀವರೆಲ್ಲರು ದೈತ್ಯರೆಂಬರು

ಕೋವಿದರ ವಿಜ್ಞಾನ ಕರ್ಮವ ನೋಡಿ ನಿಂದಿಪರು

ದೇವ ದೇವನ ಬಿಟ್ಟು ಯಾವತ್ಜೀವ ಪರ್ಯಂತರದಿ ತುಚ್ಚರ ಸೇವೆಯಿಂದ

ಉಪಜೀವಿಸುವರು ಅಜ್ಞಾನಕೆ ಒಳಗಾಗಿ//16//


ಕಾಮ ಲೋಭ ಕ್ರೋಧ ಮದ ಹಿಂಸಾಮಯ ಅನೃತ ಕಪಟ

ತ್ರಿಧಾಮನ ಅವತಾರಗಳ ಭೇದಾಪೂರ್ಣ ಸುಖಬದ್ಧ

ಆಮಿಷ ಅನಿವೇದಿತ ಅಭೋಜ್ಯದಿ ತಾಮಸ ಅನ್ನವನು ಉಂಬ ತಾಮಸ

ಶ್ರೀ ಮದಾಂಧರ ಸಂಗದಿಂದಲಿ ತಮವೆ ವರ್ಧಿಪುದು//17//


ಜ್ಞಾನ ಭಕ್ತಿ ವಿರಕ್ತಿ ವಿನಯ ಪುರಾಣ ಶ್ರವಣ ಶಾಸ್ತ್ರ ಚಿಂತನ

ದಾನ ಶಮ ದಮ ಯಜ್ಞ ಸತ್ಯ ಅಹಿಂಸ ಭೂತದಯ

ಧ್ಯಾನ ಭಗವನ್ನಾಮ ಕೀರ್ತನ ಮೌನ ಜಪ ತಪ ವ್ರತ

ಸುತೀರ್ಥ ಸ್ನಾನ ಮಂತ್ರ ಸ್ತೋತ್ರ ವಂದನ ಸಜ್ಜನರ ಗುಣವು//18//


ಲೇಶ ಸ್ವಾತಂತ್ರ್ಯ ಗುಣವನು ಪ್ರವೇಶಗೈಸಿದ ಕಾರಣದಿ

ಗುಣ ದೋಷಗಳು ತೋರುವವು ಸತ್ಯಾಸತ್ಯ ಜೀವರೊಳು

ಶ್ವಾಸ ಭೋಜನ ಪಾನ ಶಯನ ವಿಲಾಸ ಮೈಥುನ ಗಮನ ಹರುಷ

ಕ್ಲೇಷ ಸ್ವಪ್ನ ಸುಷುಪ್ತಿ ಜಾಗ್ರತಿಯು ಅಹವು ಚೇತನಕೆ//19//


ಅರ್ಧ ತನ್ನೊಳಗಿರಿಸಿ ಉಳಿದೊಂದರ್ಧವ ವಿಭಾಗಗೈಸಿ

ವೃಜಿನ ಅರ್ದನನು ಪೂರ್ವದಲಿ ಸ್ವಾತಂತ್ರ್ಯವ ಕೊಟ್ಟಂತೆ

ಸ್ವರ್ಧುನೀಪಿತ ಕೊಡುವ ಅವರ ಸುಖ ವೃದ್ಧಿ ಗೋಸುಗ

ಬ್ರಹ್ಮ ವಾಯು ಕಪರ್ದಿ ಮೊದಲಾದ ಅವರೊಳಿದ್ದು ಅವರ ಯೋಗ್ಯತೆಯನರಿತು//20//


ಹಲಧರಾನುಜ ಮಾಳ್ಪ ಕೃತ್ಯವ ತಿಳಿಯದೆ ಅಹಂಕಾರದಿಂದ

ಎನ್ನುಳಿದು ವಿಧಿ ನಿಷೇಧ ಪಾತ್ರರಿಲ್ಲವೆಂಬುವಗೆ

ಫಲಗಳ ದ್ವಯಕೊಡುವ ದೈತ್ಯರ ಕಲುಷ ಕರ್ಮವ ಬಿಟ್ಟು ಪುಣ್ಯವ ಸೆಳೆದು

ತನೂಳಗಿಟ್ಟು ಕ್ರಮದಿಂ ಕೊಡುವ ಭಕ್ತರಿಗೆ//21//


ತೋಯಜಾಪ್ತನ ಕಿರಣ ವೃಕ್ಷ ಛಾಯ ವ್ಯಕ್ತಿಸುವಂತೆ

ಕಮಲದಳಾಯತಾಕ್ಷನು ಸರ್ವರೊಳು ವ್ಯಾಪಿಸಿದ ಕಾರಣದಿ

ಹೇಯ ಸದ್ಗುಣ ಕರ್ಮ ತೋರ್ಪವು ನ್ಯಾಯ ಕೋವಿದರಿಗೆ

ನಿರಂತರ ಶ್ರೀಯರಸ ಸರ್ವೋತ್ತಮೋತ್ತಮನು ಎಂದು ಪೇಳುವರು//22//


ಮೂಲ ಕಾರಣ ಪ್ರಕೃತಿಯೆನಿಪ ಮಹಾಲಕುಮಿ ಎಲ್ಲರೊಳಗಿದ್ದು ಸುಲೀಲೆಗೈವುತ

ಪುಣ್ಯ ಪಾಪಗಳರ್ಪಿಸಲು ಪತಿಗೆ

ಪಾಲಗಡಲೊಳು ಬಿದ್ದ ಜಲ ಕೀಲಾಲವು ಎನಿಪುದೆ

ಜೀವಕೃತ ಕರ್ಮಾಳಿ ತದ್ವತು ಶುಭವೆನಿಪವು ಎಲ್ಲ ಕಾಲದಲಿ//23//


ಜ್ಞಾನ ಸುಖ ಬಲ ಪೂರ್ಣ ವಿಷ್ಣುವಿಗೆ ಏನು ಮಾಳ್ಪವು ತ್ರಿಗುಣ ಕಾರ್ಯ

ಕೃಶಾನುವಿನ ಕೃಮಿಕವಿದು ಭಕ್ಷಿಪದುಂಟೆ ಲೋಕದೊಳು

ಈ ನಳಿನಜಾಂಡವನು ಬ್ರಹ್ಮ ಈಶಾನ ಮುಖ್ಯ ಸುರಾಸುರರ

ಕಾಲಾನಳನವೊಳ್ ನುಂಗುವಗೆ ಈ ಪಾಪಗಳ ಭಯವೆ//24//


ಮೋದ ಶಿರ ದಕ್ಷಿಣ ಸುಪಕ್ಷ ಪ್ರಮೋದ ಉತ್ತರ ಪಕ್ಷವೆಂದು

ಋಗಾದಿ ಶ್ರುತಿಗಳು ಪೇಳುವವು ಆನಂದಮಯ ಹರಿಗೆ

ಮೋದ ವೈಷಿಕ ಸುಖ ವಿಶಿಷ್ಟ ಪ್ರಮೋದ ಪಾರತ್ರಿಕ ಸುಖಪ್ರದನು

ಆದ ಕಾರಣದಿಂದ ಮೋದ ಪ್ರಮೋದನು ಎನಿಸಿದನು//25//


ಎಂದಿಗಾದರು ವೃಷ್ಟಿಯಿಂದ ವಸುಂಧರೆಯೊಳಗಿಪ್ಪ

ಅಖಿಳ ಜಲದಿಂ ಸಿಂಧು ವೃದ್ಧಿಯನು ಐದುವದೆ ಬಾರದಿರೆ ಬರಿದಹುದೆ

ಕುಂದು ಕೊರತೆಗಳಿಲ್ಲದಿಹ ಸ್ವಾನಂದ ಸಂಪೂರ್ಣ ಸ್ವಭಾವಗೆ

ಬಂದು ಮಾಡುವದೇನು ಕರ್ಮಾಕರ್ಮ ಜನ್ಯ ಫಲ//26//


ದೇಹ ವೃಕ್ಷದೊಳು ಎರಡು ಪಕ್ಷಿಗಳಿಹವು ಎಂದಿಗು ಬಿಡದೆ ಪರಮ ಸ್ನೇಹದಿಂದಲಿ

ಕರ್ಮಜ ಫಲಗಳುಂಬ ಜೀವ ಖಗ

ಶ್ರೀ ಹರಿಯು ತಾ ಸಾರಭೋಕ್ತನು ದ್ರೋಹಿಸುವ ಕಲ್ಯಾದಿ ದೈತ್ಯ ಸಮೂಹಕೆ

ಈವ ವಿಶಿಷ್ಟ ಪಾಪವ ಲೇಶವೆಲ್ಲರಿಗೆ//27//


ದ್ಯುಮಣಿ ಕಿರಣವ ಕಂಡ ಮಾತ್ರದಿ ತಿಮಿರವು ಓಡುವ ತೆರದಿ

ಲಕ್ಷ್ಮೀ ರಮಣ ನೋಡಿದ ಮಾತ್ರದಿಂದ ಅಘ ನಾಶವು ಐದುವದು

ಕಮಲ ಸಂಭವ ಮುಖ್ಯ ಎಲ್ಲಾ ಸುಮನಸರೊಳು ಇಹ ಪಾಪ ರಾಶಿಯ

ಅಮರಮುಖನಂದದಲಿ ಭಸ್ಮವ ಮಾಳ್ಪ ಹರಿ ತಾನು//28//


ಚತುರ ಶತ ಭಾಗದಿ ದಶಾಂಶದೊಳು ಇತರ ಜೀವರಿಗೀವ

ಲೇಶವ ದಿತಿಜ ದೇವಕ್ಕಳಿಗೆ ಕೊಡುವ ವಿಶಿಷ್ಟ ದುಃಖ ಸುಖ

ಮತಿವಿಹೀನ ಪ್ರಾಣಿಗಳಿಗೆ ಆಹುತಿಯ ಸುಖ ಮೃತಿ ದುಃಖ

ಅವರ ಯೋಗ್ಯತೆಯನರಿತು ಪಿಪೀಲಮಶಕಾದಿಗಳಿಗೀವ ಹರಿ//29//


ನಿತ್ಯ ನನಿರಯಾಂಧಾಖ್ಯ ಕೂಪದಿ ಭೃತ್ಯರಿಂದೊಡಗೂಡಿ

ಪುನರಾವೃತ್ತಿ ವರ್ಜಿತ ಲೋಕವೈದುವ ಕಲಿಯು ದ್ವೇಷದಲಿ

ಸತ್ಯ ಲೋಕಾಧಿಪ ಚತುರ್ಮುಖ ತತ್ವ ದೇವಕ್ಕಳ ಸಹಿತ

ನಿಜಮುಕ್ತಿಯ ಐದುವ ಹರಿ ಪದಾಬ್ಜವ ಭಜಿಸಿ ಭಕುತಿಯಲಿ//30//


ವಿಧಿ ನಿಷೇಧಗಳು ಎರಡು ಮರೆಯದೆ ಮಧು ವಿರೋಧಿಯ ಪಾದಕರ್ಪಿಸು

ಅದಿತಿ ಮಕ್ಕಳಿಗೀವ ಪುಣ್ಯವ ಪಾಪ ದೈತ್ಯರಿಗೆ

ಸುದರ್ಶನ ಧರೆಗೆ ಈಯದಿರೆ ಬಂದೊದಗಿ ಒಯ್ವರು ಪುಣ್ಯ ದೈತ್ಯರು

ಅಧಿಪರಿಲ್ಲದ ವೃಕ್ಷಗಳ ಫಲದಂತೆ ನಿತ್ಯದಲಿ//31//


ತಿಲಜ ಕಲ್ಮಶ ತ್ಯಜಿಸಿ ದೀಪವು ತಿಳಿಯ ತೈಲವ ಗ್ರಹಿಸಿ

ಮಂದಿರದೊಳಗೆ ವ್ಯಾಪಿಸಿಪ್ಪ ಕತ್ತಲೆ ಭಂಗಿಸುವ ತೆರದಿ

ಕಲಿ ಮೊದಲುಗೊಂಡ ಅಖಿಳ ದಾನವ ಕುಲಜರು ಅನುದಿನ ಮಾಳ್ಪ ಪುಣ್ಯಜ ಫಲವ

ಬ್ರಹ್ಮಾದ್ಯರಿಗೆ ಕೊಟ್ಟು ಅಲ್ಲಲ್ಲೇ ರಮಿಸುವನು//32//


ಇದ್ದಲೆಯು ನಿತ್ಯದಲಿ ಮೇಧ್ಯಾಮೇಧ್ಯ ವಸ್ತುಗಳುಂಡು

ಲೋಕದಿ ಶುದ್ಧ ಶುಚಿಯೆಂದೆನಿಸಿ ಕೊಂಬನು ವೇದ ಸ್ಮೃತಿಗಳೊಳು

ಬುದ್ಧಿಪೂರ್ವಕವಾಗಿ ವಿಬುಧರು ಶ್ರದ್ಧೆಯಿಂದ ಅರ್ಪಿಸಿದ ಕರ್ಮ

ನಿಷಿದ್ಧವಾದರು ಸರಿಯೇ ಕೈಕೊಂಡು ಉದ್ಧರಿಸುತಿಪ್ಪ//33//


ಒಡೆಯರಿದ್ದ ವನಸ್ಥ ಫಲಗಳ ಬಡಿದು ತಿಂಬುವರುಂಟೆ

ಕಂಡರೆ ಹೊಡೆದು ಬಿಸುಟುವರೆಂಬ ಭಯದಿಂ ನೋಡಲಂಜುವರು

ಬಿಡದೆ ಮಾಡುವ ಕರ್ಮಗಳ ಮನೆ ಮಡದಿ ಮಕ್ಕಳು ಬಂಧುಗಳು

ಕಾರೊಡಲನ ಆಳ್ಗಳೆಂದ ಮಾತ್ರದಲಿ ಓಡುವವು ದುರಿತ//34//


ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳ

ಲಕ್ಷ್ಮೀ ನಿವಾಸನಿಗೆ ಅರ್ಪಿಸುತಲಿರು ಕಾಲಕಾಲದಲಿ

ಪ್ರಾಣ ಪತಿ ಕೈಕೊಂಡು ನಾನಾ ಯೋನಿಯೈದಿಸನು

ಒಮ್ಮೆ ಕೊಡದಿರೆ ದಾನವರು ಸೆಳೆದೊಯ್ವರು ಎಲ್ಲಾ ಪುಣ್ಯ ರಾಶಿಗಳ//35//


ಶ್ರುತಿ ಸ್ಮೃತಿ ಅರ್ಥವ ತಿಳಿದು ಅಹಂಮತಿ ವಿಶಿಷ್ಟನು ಕರ್ಮ ಮಾಡಲು

ಪ್ರತಿಗ್ರಹಿಸನು ಪಾಪಗಳನು ಕೊಡುತಿಪ್ಪ ನಿತ್ಯ ಹರಿ

ಚತುರ ದಶ ಭುವನ ಅಧಿಪತಿ ಕೃತ ಕೃತ ಕೃತಜ್ಞ ನಿಯಾಮಕನುಯೆನೆ

ಮತಿಭ್ರಂಶ ಪ್ರಮಾದ ಸಂಕಟ ದೋಷವಾಗಿಲ್ಲ//36//


ವಾರಿಜಾಸನ ಮುಖ್ಯರು ಆಜ್ಞಾಧಾರಕರು ಸರ್ವ ಸ್ವತಂತ್ರ ರಮಾರಮಣನು

ಎಂದರಿದು ಇಷ್ಟಾನಿಷ್ಟ ಕರ್ಮಫಲ

ಸಾರಭೋಕ್ತನಿಗೆ ಅರ್ಪಿಸಲು ಸ್ವೀಕಾರ ಮಾಡುವ

ಪಾಪಫಲವ ಕುಬೇರ ನಾಮಕ ದೈತ್ಯರಿಗೆ ಕೊಟ್ಟು ಅವರ ನೋಯಿಸುವ//37//


ಕ್ರೂರ ದೈತ್ಯರೊಳಿದ್ದು ತಾನೇ ಪ್ರೇರಿಸುವ ಕಾರಣದಿ ಹರಿಗೆ ಕುಬೇರನೆಂಬರು

ಎಲ್ಲರೊಳು ನಿರ್ಗತ ರತಿಗೆ ನಿರತಿ

ಸೂರಿ ಗಮ್ಯಗೆ ಸೂರ್ಯನೆಂಬರು ದೂರ ಶೋಕಗೆ ಶುಕ್ಲ ಲಿಂಗ ಶರೀರ

ಇಲ್ಲದ ಕಾರಣದಿ ಅಕಾಯನೆನಿಸುವನು//38//


ಪೇಳಲು ವಶವಲ್ಲದ ಮಹಾ ಪಾಪಾಳಿಗಳನು ಒಂದೇ ಕ್ಷಣದಿ ನಿರ್ಮೂಲಗೈಸಲು ಬೇಕು

ಎಂಬುವಗೆ ಒಂದೇ ಹರಿನಾಮ

ನಾಲಿಗೆಯೊಳುಳ್ಳವಗೆ ಪರಮ ಕೃಪಾಳು ಕೃಷ್ಣನು ಕೈವಿಡಿದು

ತನ್ನ ಆಲಯದೊಳಿಟ್ಟು ಅನುದಿನದಿ ಆನಂದ ಪಡಿಸುವನು//39//


ರೋಗಿ ಔಷಧ ಪಥ್ಯದಿಂದ ನಿರೋಗಿಯೆನಿಸುವ ತೆರದಿ

ಶ್ರೀಮದ್ಭಾಗವತ ಸುಶ್ರವಣಗೈದು ಭವಾಖ್ಯ ರೋಗವನು ನೀಗಿ

ಶಬ್ಧಾದಿ ಅಖಿಳ ವಿಷಯ ನಿಯೋಗಿಸು ದಶ ಇಂದ್ರಿಯ ಅನಿಲನೊಳು

ಶ್ರೀ ಗುರು ಜಗನ್ನಾಥ ವಿಠಲ ಪ್ರೀತನಾಗುವನು//40//