ವಿಷಯಕ್ಕೆ ಹೋಗು

ಹುಬ್ಬಳ್ಳಿಯಾಂವಾ

ವಿಕಿಸೋರ್ಸ್ದಿಂದ


ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ || ಪಲ್ಲವಿ ||

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
ಇನ್ನೂ ಯಾಕ ಬರಲಿಲ್ಲ ..................

ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ ಬರಲಿಲ್ಲ ...............

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಆ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
ಇನ್ನೂ ಯಾಕ ಬರಲಿಲ್ಲ ..............

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ ಬರಲಿಲ್ಲ ..............

ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ ಬರಲಿಲ್ಲ.............

ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
ಇನ್ನೂ ಯಾಕ ಬರಲಿಲ್ಲ ..............