ಹೆಣ್ಣ ಬಿಟ್ಟೆ
ಮಣ್ಣ ಬಿಟ್ಟೆ ಹೊನ್ನ ಬಿಟ್ಟೆನೆಂದು ಜಗದ ಕಣ್ಣ ಕಟ್ಟಿ ಮೆರೆವ ಕಣ್ಣ ಬೇನೆಯ ಬಣ್ಣದ ಅಣ್ಣಗಳು ನೀವು ಕೇಳಿಭೋ. ಮಾತಿನಲ್ಲಿ ಬಿಟ್ಟಿರೋ
ಮನದಲ್ಲಿ ಬಿಟ್ಟಿರೋ? ಈ ನೀತಿಯ ಹೇಳಿರಿ ಎನಗೊಮ್ಮೆ. ತನುಮನದ ಮಧ್ಯದಲ್ಲಿ ಇವರ ನೆನಹು ಕೆಟ್ಟು ಲಿಂಗದ ನೆನಹಿನ ಆಯತವೇ ಸ್ವಾಯತವಾಗಿರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ. ಮಾತಿನಲ್ಲಿ ಬಿಟ್ಟು
ಮನದಲ್ಲಿ ಉಳ್ಳರೆ ಭವಭವದಲ್ಲಿ ತಂದು ಕುನ್ನಿ ನಾಯ
ಕೆರವ ಕಚ್ಚಿಸುವ ಹಾಂಗೆ ಕಚ್ಚಿಸಿದಲ್ಲದೆ ಮಾಣದು ಕಾಣಿರಯ್ಯ. ಹಿಡಿದು ಸಂಸಾರಿಗಳಲ್ಲ. ಬಿಟ್ಟು ನಿಸ್ಸಂಸಾರಿಗಳಲ್ಲ. ಎರಡೂ ಅಲ್ಲದ ಎಟುವರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.