ವಿಷಯಕ್ಕೆ ಹೋಗು

ಹೊರಗಣ ಬಾಗಿಲ ಒಂಬತ್ತು

ವಿಕಿಸೋರ್ಸ್ದಿಂದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹೊರಗಣ ಒಂಬತ್ತು ಬಾಗಿಲವ ಮುಚ್ಚಿ ಒಳಗಣ ಅಂಬರದ ಬಾಗಿಲ ಬೀಗವ ತೆಗೆದು ಒಳಹೊಕ್ಕು ನೋಡಲು
ಗಂಗೆ ಸರಸ್ವತಿ ಯಮುನೆಯೆಂಬ ತ್ರಿನದಿಗಳು ಕೂಡಿದ ಠಾವಿನಲ್ಲಿ ಸಂಗಮಕ್ಷೇತ್ರವೆಂಬ ರಂಗಮಂಟಪವುಂಟು. ಆ ರಂಗಮಂಟಪದಲ್ಲಿ ರವಿಕೋಟಿಪ್ರಭೆಯಿಂದೆ ರಾಜಿಸುವ ಮಹಾಲಿಂಗವ ಕಂಡು
ಆ ಮಹಾಲಿಂಗಕ್ಕೆ ತನ್ನಾತ್ಮಸಂಬಂಧವಾದ ದ್ರವ್ಯಂಗಳಿಂದರ್ಚಿಸಿ
ಆ ಮಹಾಲಿಂಗದ ಬೆಳಗನು ಕಂಗಳು ತುಂಬಿ ನೋಡಿ ಮನ ಸಂತೋಷಗೊಂಡು
ಅಲ್ಲಿಂದತ್ತ ಪಶ್ಚಿಮದಿಕ್ಕಿನಲ್ಲಿ ಮಹಾಕೈಲಾಸವಿರ್ಪುದನು ತನ್ನ ಸ್ವಾತ್ಮಜ್ಞಾನದಿಂದ ತಿಳಿದು ನೋಡಿ
ಎಡಬಲದ ಬಟ್ಟೆಯ ಮೆಟ್ಟದೆ ನಟ್ಟನಡುಮಧ್ಯಮಾರ್ಗವಿಡಿದು ಹೋಗಿ
ಕೈಲಾಸದ ಪೂರ್ವದಿಕ್ಕಿನ ಹೆಬ್ಬಾಗಿಲ ಉಪ್ಪರ ಗೋಪುರವ ಕಂಡು ಒಳಹೊಕ್ಕು ಹೋಗಿ ಕಂಗಳಿಗೆ ಮಂಗಳವಾದ ಶಿವಮಹಾಸಭೆಯ ಕಂಡು
ಅಲ್ಲಿ ಹೊಡೆವ ಭೇರಿಯನಾದ
ತುಡುಮು ತಾಳ ಮದ್ದಳೆಯನಾದ
ಗಡಗಡ ಝಲ್ಲೆಂಬ ಸಮಾಳ ಕರಡಿ ಕೌಸಾಳನಾದ ನುಡಿಸುವ ವೀಣೆ ಕಿನ್ನರಿ ಸ್ವರಮಂಡಲ ತಂಬೂರಿ ಕಾಮಾಕ್ಷಿಯನಾದ
ಭೋರಿಡುವ ಶಂಖ ಘಂಟೆಯನಾದ
ಸ್ವರಗೈವ ನಾಗಸ್ವರ ಕೊಳಲು ಸನಾಯದ ನಾದ
ಕೂಗಿಡುವ ಕಹಳೆ ಹೆಗ್ಗಹಳೆ ಚಿನಿಕಹಳೆ ಕರಣೆಯನಾದ
ಇಂತಿವು ಮೊದಲಾದ ನಾನಾ ತೆರದ ನಾದಂಗಳನು ಕಿವಿದುಂಬಿ ಕೇಳಿ ಮನದುಂಬಿ ಸಂತೋಷಿಸಿ
ಅಲ್ಲಿಂದ ಮುಂದಕ್ಕೆ ಹೋಗಿ ಸೂರ್ಯವೀಥಿಯ ಕಂಡು ಪೊಕ್ಕು
ಅಲ್ಲಿ ನಿಂದು ಓಲಗಂಗೊಡುವ ಮೂವತ್ತೆರಡು ತೆರದ ತೂರ್ಯಗಣಂಗಳಂ ಕಂಡು
ಅಲ್ಲಿಂದ ಮುಂದಕ್ಕೆ ಹೋಗಿ ಸೋಮವೀಥಿಯ ಕಂಡು ಪೊಕ್ಕು
ಅಲ್ಲಿ ನಿಂದು ಓಲಗಂಗೊಡುವ ಹದಿನಾರು ತೆರದ ಪ್ರಮಥಗಣಂಗಳ ಕಂಡು ಅಲ್ಲಿಂದ ಮುಂದಕ್ಕೆ ಹೋಗಿ ಅನಲವೀಥಿಯ ಕಂಡು ಪೊಕ್ಕು
ಅಲ್ಲಿ ಅಷ್ಟದಿಕ್ಕುಗಳಲ್ಲಿ ನಿಂದು ಓಲಗಂಗೊಡುವ ಅಷ್ಟ ತೆರದ ಅಮರಗಣಂಗಳ ಕಂಡು
ಅಲ್ಲಿಂದ ಮುಂದೆ ಹೋಗಿ ಚತುರ್ದಿಕ್ಕಿನಲ್ಲಿ ನಿಂದು ಓಲಗಂಗೊಡುವ ಚತುಃಶಕ್ತಿಯರ ಸಮ್ಮೇಳವ ಕಂಡು
ಅಲ್ಲಿಂದ ಮುಂದಕ್ಕೆ ಹೋಗಿ ನಟ್ಟನಡುವಿರ್ದ ಶೃಂಗಾರಮಂಟಪದ ಮಹಾಸದರಿನಲ್ಲಿ ಮೂರ್ತಿಗೊಂಡಿರ್ದ ನಿಷ್ಕಲ ಪರಶಿವನ ಕಂಡು ತನು ಉಬ್ಬಿ ಮನ ಕರಗಿ
ಕಂಗಳಲ್ಲಿ ಪರಿಣಾಮಜಲ ಉಕ್ಕಿ ಕಡೆಗೋಡಿವರಿವುತ್ತ
ಉರಿಕರ್ಪುರ ಸಂಯೋಗದಂತೆ ಆ ನಿಷ್ಕಲಪರಶಿವನೊಡನೆ ಬೆರೆದು ಪರಿಪೂರ್ಣವಾದ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.