ಕ್ರಿಯವೇ ಅಧಿಕವೆಂಬ ಗೊಡ್ಡು ಸಿದ್ಧಾಂತಿಗಳ ಮಾತು ಸೊಗಸದಯ್ಯಾ ಎನಗೆ. ಜ್ಞಾನವೇ ಅಧಿಕವೆಂಬ ದಡ್ಡ ವೇದಾಂತಿಗಳ ಮಾತು ಸೊಗಸದಯ್ಯ ಎನಗೆ. ಅದೇನು ಕಾರಣವೆಂದೊಡೆ : ಆವುದಾನೊಂದು ಪಕ್ಷಿಯು ಉಭಯ ರೆಕ್ಕೆಯಿಂದ ಗಗನಕ್ಕೆ ಹಾರುವಂತೆ ಅಂತರಂಗದಲ್ಲಿ ಸಮ್ಯಕ್‍ಜ್ಞಾನ ಬಹಿರಂಗದಲ್ಲಿ ಶಿವಸತ್‍ಕ್ರಿಯಾಸನ್ನಿಹಿತವಿಲ್ಲದೆ ಪರವಸ್ತುವ ಕೂಡಬಾರದಾಗಿ. ಇದು ಕಾರಣ
ಸತ್‍ಕ್ರಿಯಾ ಸಮ್ಯಕ್‍ಜ್ಞಾನಸಂಪನ್ನರಾದ ಮಹಾಶರಣರ ತೋರಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.