ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/18ನೆಯ ಶತಮಾನ-ಪೋಪ್, ಜಾನ್ಸನ್

ವಿಕಿಸೋರ್ಸ್ದಿಂದ

17 ಹಾಗೂ 18ನೆಯ ಶತಮಾನದ ತಾತ್ತ್ವಿಕರು, ದಾರ್ಶನಿಕರು, ಪ್ರಕೃತಿಯನ್ನು ಕುರಿತ ಹಲವು ಸರಳ ವಿಶ್ಲೇಷಣೆಗಳನ್ನು ನೀಡಿದರು. ಪ್ರಕೃತಿಸೃಷ್ಟಿಗೊಂದು ನಿಶ್ಚಿತ ಸ್ವರೂಪವಿದೆಯೆಂದೂ ಅದನ್ನು ಅನುಲಕ್ಷಿಸುವ ಮಾನವವಿವೇಚನೆಗೆ ಸುಲಭಗ್ರಾಹ್ಯವೆಂದೂ ಅವರು ಸೂಚಿಸಿದರು. ಈ ವಿಚಾರ ಪರಂಪರೆ ಅಂದಿನ ವಿಮರ್ಶಾ ಸಾಹಿತ್ಯದ ಮೇಲೂ ಪ್ರಭಾವ ಬೀರಿತು. ಪ್ರಕೃತಿನಿಯಮವನ್ನು ಜೀವನಕ್ಕೆ ಯಥೋಚಿತವಾಗಿ ಅಳವಡಿಸಿಕೊಳ್ಳುವಂತೆ ಸಾಹಿತ್ಯದ ಮೂಲಸೂತ್ರಗಳನ್ನು ಬಳಸಿಕೊಳ್ಳಬೇಕೆಂದರು. ಈ ಪ್ರವೃತ್ತ್ತಿಯ ಮೂರು ಮುಖಗಳನ್ನು ಇಂಗ್ಲಿಷ್ ವಿಮರ್ಶೆಯಲ್ಲಿ ನಾವು ಡ್ರೈಡನ್, ಪೋಪ್ ಹಾಗೂ ಜಾನ್ಸನ್ರ ವಿಮರ್ಶಾಕೃತಿಗಳಲ್ಲಿ ಕಾಣುತ್ತೇವೆ. ನಿಯೋಕ್ಲಾಸಿಕಲ್ ತತ್ತ್ವವನ್ನು ಸ್ವಲ್ಪ ಕಠಿಣವಾಗಿ ವಿಧಿಸಿದವನೆಂದರೆ ಪೋಪ್. ಈ ಯುಗದ ಮೊದಲ ಭಾಗದಲ್ಲಿ ಬಂದ ಡ್ರೈಡನ್ನನಿಗೆ, ಕೊನೆಯಲ್ಲಿ ಬಂದ ಜಾನ್ಸನ್ನನಿಗೆ, ಪೋಪನ ಸೂತ್ರಾಂಧತೆ ಸುಲಭ ಸ್ವೀಕೃತವೆನಿಸಲಿಲ್ಲ. ಸಂಕುಚಿತವಾದ ಸೂತ್ರಗಳನ್ನೇ ಪಟ್ಟುಹಿಡಿದು ಸಾಧಿಸಿದ ಆ ಯುಗದಲ್ಲೂ ಷೇಕ್ಸ್ಪಿಯರ್ನ ಅಸಾಧಾರಣ ಪ್ರತಿಭೆಯನ್ನು ಚರ್ಚಿಸುವಾಗ ಜಾನ್ಸನ್ ತಾನು ನಂಬಿ ಕೈಹಿಡಿದ ಶುಷ್ಕ ಸೂತ್ರಗಳನ್ನು ಬಿಟ್ಟುಕೊಡಬೇಕಾಯಿತು. ಇದಕ್ಕೆ ಅವನ ಗಾಢ ಲೌಕಿಕಜ್ಞಾನ, ವಿಚಾರಶೀಲತೆಗಳೇ ನೆರವಾದವು. ಆದರೆ ಮೂಲತಃ ಅಭಿಜಾತ ಸೂತ್ರಗಳಿಗೆ ಕಟ್ಟುಬಿದ್ದ ಜಾನ್ಸನ್ನನ ಗುಣದೋಷಗಳೆರಡನ್ನೂ ಆತ ತನ್ನ ಗ್ರಂಥಗಳಲ್ಲಿ, ಮುಖ್ಯವಾಗಿ ಕವಿಗಳ ಜೀವನಚರಿತ್ರೆಗಳನ್ನೊಳಗೊಂಡ ಲೈಪ್ಸ್ ಆಫ್ ಪೊಯಟ್ಸ್ ಹಾಗೂ ಷೇಕ್ಸ್ಪಿಯರ್ನನ್ನು ಕುರಿತ ಪೀಠಿಕೆಗಳಾದ ಪ್ರಿಫೇಸಸ್ ಟು ಷೇಕ್ಸ್ಪಿಯರ್ ಎಂಬ ಗ್ರಂಥಗಳಲ್ಲೂ ಕಾಣಬಹುದು.

ಕ್ರಮೇಣ 18ನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳೆದ, ಇತಿಹಾಸವಾದವೆಂದು (ಹಿಸ್ಟೋರಿಸಿಸಂ) ಪ್ರಸಿದ್ಧವಾದ ಹೊಸ ತತ್ತ್ವಗಳು ಆ ಕಾಲದಲ್ಲಿ ರೂಢಮೂಲವಾಗಿದ್ದ ಅಭಿಪ್ರಾಯಗಳನ್ನು ವಿರೋಧಿಸುವುದರಲ್ಲಿ ಯಶಸ್ವಿಯಾದುವು. ಯಾವ ಸೂತ್ರವೂ ಎಲ್ಲ ಕಾಲಕ್ಕೂ ಅನ್ವಯಿಸುವಂಥದಲ್ಲ. ಪ್ರತಿ ಯುಗದಲ್ಲೂ ಕಾಣುವ ಬದಲಾವಣೆಗಳು ಹೊಸ ಹೊಸ ಮೌಲ್ಯಗಳಿಗೆ ಎಡೆ ಮಾಡಿಕೊಡುತ್ತವೆ. ಹಾಗೆಯೇ ಸಾಹಿತ್ಯಸೂತ್ರಗಳೂ ಕಾಲಕಾಲಕ್ಕೆ ಬದಲಾಯಿಸುತ್ತವೆ. ಅರಿಸ್ಟಾಟಲ್, ಹೊರೇಸರ ಸೂತ್ರಗಳು ಗ್ರೀಕ್, ಲ್ಯಾಟಿನ್ ಸಾಹಿತ್ಯದ ವಾಖ್ಯಾನಕ್ಕೆ ಮಾತ್ರ ಪ್ರಸ್ತುತವಾದವು-ಎಂದು ಮುಂತಾಗಿ ಬೆಳೆದ ಇತಿಹಾಸವಾದದ ವಿಚಾರಗಳು 18ನೆಯ ಶತಮಾನದ ಅಭಿಜಾತ ಸಾಹಿತ್ಯ ಸೂತ್ರಗಳ ಕಟ್ಟನ್ನು ಸಡಿಲಿಸಿದುವು. ಕ್ರಮೇಣ ಗ್ರೀಕ್, ರೋಮನ್ ಸಾಹಿತ್ಯಗಳಲ್ಲಿ ಆಸಕ್ತಿ ಕ್ಷೀಣವಾಗದಿದ್ದರೂ ಜಾಗತಿಕ ಸಾಹಿತ್ಯದ ಹಲವು ಹೊಸ ಕ್ಷಿತಿಜಗಳತ್ತ ಗಮನ ಹೊರಳಿತು. ಐಸ್ಲೆಂಡ್ ಹಾಗೂ ವೆಲ್್ಷ ಸಾಹಿತ್ಯದಿಂದ ಉದ್ಧಾಮ ಪಂಡಿತ ಥಾಮಸ್ ಗ್ರೇ ಭಾಷಾಂತರಗಳನ್ನು ಮಾಡಿದ. ಗ್ರೀನ್ಲೆಂಡ್, ಲ್ಯಾಪ್ಲೆಂಡ್ ಹಾಗೂ ದಕ್ಷಿಣ ಅಮೆರಿಕಗಳ ಕಾವ್ಯಗಳನ್ನು ಬಿಷಪ್ ಪರ್ಸಿ ತರ್ಜುಮೆ ಮಾಡಿದ. ವಿಲಿಯಂ ಜೋನ್ಸ್ ಭಾರತೀಯ ಕಾವ್ಯಗಳನ್ನು ಇಂಗ್ಲಿಷ್ ಜನಕ್ಕೆ ಪರಿಚಯ ಮಾಡಿಸಿದ. ಆದ್ದರಿಂದಲೇ 1757ರಲ್ಲಿ ಗ್ರೇ ತನ್ನ ಪ್ರೋಗ್ರೆಸ್ ಆಫ್ ಪೊಯಸಿಯಲ್ಲಿ ಕಾವ್ಯದೇವತೆ ಇಂದು ಎರಡು ಧ್ರುವಗಳ ನಡುವೆ ತನ್ನ ಅಧಿಕಾರ ನಡೆಸುತ್ತಿದ್ದಾಳೆಂದು ಘೋಷಿಸಿದ.