ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಗ್ನೇಷಿಯಸ್, ಲಯೋಲದ

ವಿಕಿಸೋರ್ಸ್ದಿಂದ

ಇಗ್ನೇಷಿಯಸ್, ಲಯೋಲದ

1491-1556. ಕ್ರೈಸ್ತಧರ್ಮದ ಪ್ರಮುಖ ಕೆಥೊಲಿಕ್ ಸಂಸ್ಥೆಯಾದ ಸೊಸೈಟಿ ಆಫ್ ಜೀಸಸ್‍ನ ಸ್ಥಾಪಕ. 1491ರಲ್ಲಿ ಸ್ಪೇನಿನ ಲಯೋಲದಲ್ಲಿ ಸರದಾರ ಮನೆತನದಲ್ಲಿ ಹುಟ್ಟಿದ. ಮುಂದೆ ಸೈನ್ಯಕ್ಕೆ ಸೇರಿದ. 1521ರಲ್ಲಿ ಫ್ರೆಂಚರು ಪ್ಯಾಂಪ್‍ಲೋನ ಆಕ್ರಮಿಸಿದಾಗ ನಡೆದ ಯುದ್ಧದಲ್ಲಿ ಈತನ ಕಾಲಿಗೆ ಗುಂಡು ಬಡಿದು ದೊಡ್ಡ ಗಾಯವಾಯಿತು. ಅದರಿಂದಾಗಿ ಆಜನ್ಮ ಕುಂಟನಾಗಿ ಉಳಿದ. ಗಾಯಗೊಂಡು ಹಾಸಿಗೆ ಹಿಡಿದಾಗ ಅವನಿಗೆ ಯೇಸುವಿನ ತಾಯಿ ಮೇರಿಯ ಸಾಕ್ಷಾತ್ಕಾರವಾಯಿತೆಂದು ಹೇಳುತ್ತಾರೆ. ಈ ಘಟನೆಯಿಂದ ಅವನ ಜೀವನದ ಗತಿಯೇ ಬದಲಾಯಿಸಿತು. ವಿಷಯಾಸಕ್ತನಾಗಿದ್ದವ ವಿರಕ್ತನಾದ. ಸಾದಾ ಸೈನಿಕ ಮಹಾಸಾಧಕನಾಗಿ ಪರಿಣಮಿಸಿದ. ಹಾಸಿಗೆ ಬಿಟ್ಟೆದ್ದ ಮೇಲೆ ಜೆರುಸಲೆಂನ ಯಾತ್ರೆ ಕೈಗೊಂಡ. ಈ ಯಾತ್ರೆಯಲ್ಲಿ ಅವನಿಗೆ ಹೆಚ್ಚಿನ ವಿದ್ಯೆ ಮತ್ತು ಸಂಗಡಿಗರ ಅವಶ್ಯಕತೆಯ ಅರಿವಾಯಿತು. ಹಿಂತಿರುಗಿ ಬಂದ ಮೇಲೆ 11 ವರ್ಷಗಳಕಾಲ ಬಾರ್ಸಿಲೋನ, ಪ್ಯಾರಿಸ್ ನಗರಗಳಲ್ಲಿ ಆಳವಾದ ಅಧ್ಯಯನ ನಡೆಸಿದ.

ಧಾರ್ಮಿಕ ಒಳಭೇದಗಳು ಹೆಚ್ಚಾಗಿದ್ದ ಆ ಕಾಲದ ಅಗತ್ಯ ಏನೆಂಬುದನ್ನು ಲಯೋಲ ಚೆನ್ನಾಗಿ ಅರಿತಿದ್ದ. ರಾಜಕಾರಣ, ಆಡಳಿತ ಇವುಗಳ ಗೊಡವೆಯಿಲ್ಲದ ಸೇವಾಪಂಥವೊಂದನ್ನು ನಿರ್ಮಿಸಬೇಕೆಂಬುದು ಅವನ ಮನೀಷೆಯಾಗಿತ್ತು. ಸ್ವತಃ ಅನೇಕ ಕಠಿಣ ಉಪವಾಸ, ವ್ರತಗಳನ್ನು ಕೈಗೊಂಡು, ಧಾರ್ಮಿಕಜೀವನ, ದೈವಭಕ್ತಿ, ಬಡತನ, ಶಿಸ್ತುಗಳ ಪ್ರಾಧಾನ್ಯವನ್ನು ಸಾರಿದ. ಈ ಸಮಯದಲ್ಲಿ ಅವನಿಗೆ ದೊರೆತ ಆರುಜನ ಶಿಷ್ಯರು ಜಗತ್ಪ್ರಸಿದ್ಧರಾಗಿದ್ದಾರೆ. ಜಗತ್ತಿನಲ್ಲಿ ಕ್ರೈಸ್ತಧರ್ಮ ಆಗತಾನೇ ಹಬ್ಬುತ್ತಿದ್ದ ದೇಶಗಳಿಗೆ ಇವರು ಪ್ರಚಾರಕರಾಗಿ ಹೋದರು. ಇವರಲ್ಲಿ ಫ್ರಾನ್ಸಿಸ್ ಜೆóೀವಿಯರ್ ಭಾರತ ಮತ್ತು ಪ್ರಾಚ್ಯದೇಶಗಳಿಗೆ ಬಂದದ್ದು ಇತಿಹಾಸ ಪ್ರಸಿದ್ಧವಿದೆ. 1540ರಲ್ಲಿ ಕ್ರಿಸ್ತ ಸಮಾಜದ ಸ್ಥಾಪನೆಯಾಗಿ ಅದರ ಮರುವರ್ಷ ಲಯೋಲನನ್ನು ಅದರ ಅಧಿಪತಿಯಾಗಿ (ಜನರಲ್) ನೇಮಿಸಲಾಯಿತು. ಲಯೋಲನ ಸೈನಿಕ ಬದುಕಿನ ಹಿನ್ನೆಲೆ ಅವನ ಸಂಸ್ಥೆಗೂ ತಳಹದಿಯಾಯಿತು. ಜೀವನ ಎಂದರೆ ಸೈತಾನನೊಂದಿಗೆ ನಡೆಸುವ ಧರ್ಮಯುದ್ಧ (ಕ್ರೂಸೇಡ್), ಕ್ರಿಸ್ತ ಮುಖ್ಯ ಸೇನಾಪತಿ. ಕ್ರಿಸ್ತನ ಅನುಯಾಯಿಗಳಾಗಬಯಸುವವರು ಸೈನಿಕರಂತೆ ಕಠಿಣ ಶಿಕ್ಷೆಗೆ ಒಳಪಡಬೇಕು ಎಂಬುದು ಅವನ ನಿಶ್ಚಿತ ಅಭಿಪ್ರಾಯವಾಗಿತ್ತು. ಆತ ಬರೆದ ಗ್ರಂಥಗಳಲ್ಲಿ ಸ್ಪಿರಿಚುಯಲ್ ಎಕ್ಸರ್ಸೈಸಸ್ ಮುಖ್ಯವಾದದ್ದು.

1540ರಲ್ಲಿ ಪೋಪರ ಅಧಿಕೃತ ಒಪ್ಪಿಗೆ ದೊರೆತ ಅನಂತರ ಕ್ರಿಸ್ತಸಮಾಜ ಭರದಿಂದ ಬೆಳೆಯಿತು. ಲಯೋಲ ಕೆಲಮಟ್ಟಿಗೆ ಸಂಪ್ರದಾಯಸ್ಥನಾಗಿದ್ದ. ಶಿಕ್ಷಣದ ಪುನರುಜ್ಜೀವನ ಅನೇಕರನ್ನು ಕ್ರಿಸ್ತನಿಂದ ದೂರ ಒಯ್ಯುತ್ತದೆಂದು ಹೇಳಿದ. ಹೀಗಾಗಿ ತನ್ನ ಘಟಕದಲ್ಲಿ ವಿಸ್ತರಣೆಗೆ ಆತ ಹೆಚ್ಚು ಅವಕಾಶ ಕಲ್ಪಿಸಿಲ್ಲ. ಧರ್ಮೋಪದೇಶ, ಕ್ರಿಸ್ತಸಂದೇಶ, ಪ್ರಚಾರ, ವಿದ್ಯಾದಾನ, ಸೇವೆ ಮುಂತಾದವುಗಳು ಜೆಸೂಟರ ಅಥವಾ ಕ್ರೈಸ್ತಸಮಾಜದವರ ಕೆಲಸವೆಂದು ಸಾರಿದ. ಲಯೋಲನ ಅಂತ್ಯದ ಹೊತ್ತಿಗೆ 1,000 ಸದಸ್ಯರಿದ್ದ ಅವನ ಸಂಸ್ಥೆ ಈಗ ಲಕ್ಷಗಟ್ಟಳೆ ಸದಸ್ಯರುಳ್ಳ ಸಹಸ್ರಾರು ಶಾಖೆಗಳಿಂದ ಜಗತ್ತಿನಲ್ಲೆಲ್ಲ ಹಬ್ಬಿದೆ.

(ಜಿ.ಎಸ್.ಡಿ.; ಎ.ಟಿ.ಆರ್.)