ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃಷ್ಣರಾಜ ಒಡೆಯರು 1
ಕೃಷ್ಣರಾಜ ಒಡೆಯರು 1
ಮೈಸೂರು ಸಂಸ್ಥಾನವನ್ನಾಳಿದ ದೊರೆಗಳ ಪೈಕಿ ಒಬ್ಬರು. ಇವರ ಆಳ್ವಿಕೆಯ ಕಾಲ 1714-1731. ಒಡೆಯರ ಮನೆತನದಲ್ಲಿ ಹದಿನಾರನೆಯವರು. ಇಮ್ಮಡಿ ಕಂಠೀರವ ನರಸರಾಜ ಒಡೆಯರು (ಮೂಕರಸ) ಮತ್ತು ಅವರ ಪತ್ನಿ ಚೆಲುವರಾಜಮ್ಮಣ್ಣಿ-ಇವರ ಪುತ್ರ. ಕಳಲೆ ಚಿಕ್ಕ ಅರಸಿನವರ ಪುತ್ರಿ ದೇವಾಜಮ್ಮಣ್ಣಿಯನ್ನೂ ಅಷ್ಟಮಹಿಷಿಯರನ್ನೂ ವಿವಾಹವಾದರು. ದೇವಾಜಮ್ಮಣ್ಣಿಗೆ ಹುಟ್ಟಿದ ಗಂಡುಮಗು ಆರು ತಿಂಗಳಲ್ಲೇ ತೀರಿಕೊಂಡು ಮುಂದೆ ಸಂತಾನವಿಲ್ಲದ್ದರಿಂದ ಇವರು ಚಾಮರಾಜ ಮತ್ತು ಚಿಕ್ಕ ಕೃಷ್ಣರಾಜರನ್ನು ದತ್ತು ತೆಗೆದುಕೊಂಡರು.
1724ರಲ್ಲಿ ಹೈದರಾಬಾದಿನ ನಿಜಾಮ ಮತ್ತು ಅವನ ಗುಂಪಿನವರು ಮೈಸೂರು ರಾಜ್ಯದ ಮೇಲೆ ಆಕ್ರಮಣ ನಡೆಸಿದಾಗ ಇವರು ಹಣ ತೆತ್ತು ಪಾರಾದರು. 1725ರಲ್ಲಿ ಮರಾಠರ ಪೇಶ್ವೆ 1ನೆಯ ಬಾಜೀರಾಯ ದಂಡೆತ್ತಿ ಬಂದಾಗ ಸಮರ್ಥವಾಗಿ ಹೋರಾಡಿ ಮರಾಠರ ಸೈನ್ಯವನ್ನು ಹೊಡೆದೋಡಿಸಿದರು. ಆರ್ಕಾಟಿನ ನವಾಬ ನಿಜಾಮನೊಂದಿಗೆ ಸೇರಿ ಮೈಸೂರಿನ ಮೇಲೆ ಆಕ್ರಮಣ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅವನ ಪ್ರದೇಶಗಳನ್ನು ಆಕ್ರಮಿಸಿ ಅಪಾರ ಐಶ್ವರ್ಯವನ್ನು ಸೂರೆ ಮಾಡಿದರು. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಮೈಸೂರಿನ ಸೈನ್ಯ ಮಾಗಡಿ ಸಾವನದುರ್ಗಗಳನ್ನು ದೋಚಿ, ಅದರ ನಾಯಕ 3ನೆಯ ಕೆಂಪೆಗೌಡನನ್ನು ಸೆರೆ ಹಿಡಿಯಿತು.
ಕೃಷ್ಣರಾಜರು ದೈವಭಕ್ತರೂ ಉದಾರಿಗಳೂ ಆಗಿದ್ದರೂ ರಾಜ್ಯಭಾರದಲ್ಲಿ ನಿಪುಣರಾಗಿರಲಿಲ್ಲ. ದಳವಾಯಿ ನಂಜರಾಜಯ್ಯನೂ ಅವನ ಸೋದರ ದೇವರಾಜಯ್ಯನೂ ರಾಜ್ಯಸೂತ್ರವನ್ನು ಕೈವಶಮಾಡಿಕೊಂಡು ದುರಾಡಳಿತ ನಡೆಸಲಾರಂಭಿಸಿದರು.
ಕೃಷ್ಣರಾಜ ಒಡೆಯರು ತಿರುಪತಿಯ ದೇವಾಲಯ ಮತ್ತು ಕಂಚಿಯ ವರದರಾಜಸ್ವಾಮಿಯ ದೇವಾಲಯಗಳಿಗೂ ಇತರ ಸಣ್ಣಪುಟ್ಟ ದೇವಮಂದಿರಗಳಿಗೂ ಅನೇಕ ದತ್ತಿಗಳನ್ನು ಬಿಟ್ಟುದಲ್ಲದೆ, ಕಳಲೆಯ ಲಕ್ಷ್ಮೀಕಾಂತ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ, ಅಲ್ಲೊಂದು ಅಗ್ರಹಾರವನ್ನು ಸ್ಥಾಪಿಸಿದರು. ಸಂಗೀತ ಸಾಹಿತ್ಯ ಮತ್ತಿತರ ಕಲೆಗಳಿಗೆ ಆಶ್ರಯದಾತರಾಗಿದ್ದರು. 1731ರಲ್ಲಿ ಇವರು ಮೃತರಾದರು. (ಎಂ.ಎ.ಎಚ್.ಇ.)