ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೊಲ್ಲ

ವಿಕಿಸೋರ್ಸ್ದಿಂದ

ಗೊಲ್ಲ- ಏಷ್ಯದ ಮಧ್ಯಭಾಗದಲ್ಲಿ ಸಾಮ್ಯಾಜ್ಯವನ್ನು ಕಟ್ಟಿ ಆಳಿದ ಬಿಳಿಯ ಹೂಣರ ವಂಶಕ್ಕೆ ಸಂಬಂದಿಸಿದ ಒಬ್ಬ ರಾಜ. ಈತನನ್ನು ಇತಿಹಾಸಜ್ಞರು ಇನ್ನೂ ಖಚಿತವಾಗಿ ಗುರುತಿಸಿಲ್ಲ. ಈತನ ಉಲ್ಲೇಖವನ್ನು ಮೊದಲು ಬಾರಿಗೆ ಮಾಡಿದವನೆಂದರೆ ಕಾಸ್‍ಮಾಸ್ ಇಂಡಿಕೊಪ್ಲ್ಯೂಸ್ಟಿಸ್ ಎಂಬ ಧಾರ್ಮಿಕ ಗುರು. ಹೂಣರ ದೇಶವನ್ನು ಫೀಸನ್ ನದಿ-ಎಂದರೆ ಸಿಂಧೂನದಿ-ಭಾರತ ದೇಶದಿಂದ ಬೇರ್ಪಡಿಸುತ್ತದೆ ಎಂದು ಹೇಳಿರುವ ಈತ, ಗೊಲ್ಲ ಭಾರತದ ಅರಸನಾಗಿ ಪ್ರಜೆಗಳನ್ನು ಹಿಂಸಿಸಿ ಅವರಿಂದ ಬಲವಂತವಾಗಿ ಕಪ್ಪಕಾಣಿಕೆಗಳನ್ನು ಪಡೆಯುತ್ತಾನೆಂದೂ ಯುದ್ಧಕ್ಕೆ ಹೊರಟಾಗ 2,000 ಆನೆಗಳನ್ನೂ ದೊಡ್ಡ ಅಶ್ವಪಡೆಯನ್ನೂ ಒಳಗೊಂಡ ಬೃಹತ್ಸೈನ್ಯವನ್ನು ಒಯ್ಯುತ್ತಾನೆಂದೂ ಹೇಳಿದ್ದಾನೆ. ಇಲ್ಲಿ ಉಕ್ತನಾದ ಗೊಲ್ಲನೇ (ಗೊಲ್ಲಸ್) 6ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದ ಮೇಲೆ ದಾಳಿ ಮಾಡಿದ ತೋರಮಾನನ ಪುತ್ರ ಮಿಹಿರಗುಲನೆಂದು ಕೆಲವರು ಭಾವಿಸಿದ್ದಾರೆ. ಮಿಹಿರಗುಲನ ಹೆಸರಿನಲ್ಲಿರುವ ಗುಲ ಎಂಬುದು ಗೊಲ್ಲ ಎಂಬ ಸ್ವರೂಪವನ್ನು ತಳೆಯಿತೆಂದು ಭಾವಿಸಲಾಗಿದೆ. ಮಿಹಿರಗುಲನ ಆಳ್ವಿಕೆಯ 15ನೆಯ ವರ್ಷದ ಶಾಸನವೊಂದು ಲಭ್ಯವಿದೆ. ಈ ವರ್ಷ ಕ್ರಿ. ಶ. ಸು. 530 ಎಂದು ಹೇಳಿದೆ. ಅನಂತರ ಮಾಲವದ ಯಶೋಧರ್ಮನ್ ಮತ್ತು ಇತರರು ಇವನನ್ನು ಯುದ್ಧದಲ್ಲಿ ಸೋಲಿಸಿ ಇವನ ಬಲವನ್ನು ಮುರಿದರು. (ಎಸ್.ಎಸ್.ಜಿ.ವಿ.)