ರಸವಂತಿ ಏನನ್ನೂ ಹೇಳಲಾರದೆ ನಮಸ್ಕರಿಸಿದಳು. ಅವಳನ್ನು ಮಹಾದೇವಿ ಮೇಲೆತ್ತುತ್ತಿರುವಷ್ಟರಲ್ಲಿ ಕೌಶಿಕನೂ ನಮಸ್ಕರಿಸಿದ. ಮಹಾದೇವಿ ಹೇಳಿದಳು :
“ಮೇಲೇಳು ಅಣ್ಣಾ ; ನೀನು ನಮಸ್ಕರಿಸಬಾರದು. ನೀನು ನನ್ನ ತಂದೆ; ನನ್ನ ಜೀವನವನ್ನು ರೂಪುಗೊಳಿಸಲು ಸಹಾಯಕವಾದ ಶಕ್ತಿ.”
“ಇಲ್ಲ ತಾಯಿ, ನಾನು ನಿನ್ನ ಮಗ. ನನಗೆ ನೀನು ಪುನರ್ಜನ್ಮ ಕೊಟ್ಟಿದ್ದೀಯ. ನಿನಗೆ ತಕ್ಕ ಮಗನಾಗುವಂತೆ ಹರಸು ತಾಯಿ.”
“ಆಗಲಿ, ನಮ್ಮಿಬ್ಬರ ಸಂಬಂಧ ಪರಸ್ಪರ ತಾಯಿ-ಮಕ್ಕಳ ಸಂಬಂಧ. ಹೆಣ್ಣು-ಗಂಡಿನ ಸಂಬಂಧ ಕೊನೆಯಲ್ಲಿ ಶಾಶ್ವತವಾಗಿ ನಿಲ್ಲಬೇಕಾದ ಮಟ್ಟವಾವುದೆಂಬುದನ್ನು ಜಗತ್ತು ಕಂಡುಕೊಳ್ಳಲಿ. ಗಂಡಸಿಗೆ ಹೆಣ್ಣು, ತಾಯಿ. ಹೆಣ್ಣಿಗೆ ಗಂಡು, ತಂದೆಯಾಗಿ ಉಳಿಯುತ್ತಾನೆ.”
``ಸ್ತ್ರೀ ಪುರುಷರ ಸಂಬಂಧಕ್ಕೆ ನಿಮ್ಮಿಬ್ಬರ ಜೀವನ ಉಜ್ವಲವಾದ ಉದಾಹರಣೆಯಾಗಿ ಉಳಿಯುವಂತಾಯಿತು, ತಾಯಿ. ಈ ಪುಣ್ಯ ಸಂಗಮದಲ್ಲಿ ಮಿಂದು ನಾನು ಧನ್ಯಳಾಗಿದ್ದೇನೆ.”
``ಇದನ್ನು ಇಡೀ ಜಗತ್ತಿಗೇ ನೀವು ಬೀರಬೇಕು. ಜಗತ್ತಿನ ಮಂಗಳಕ್ಕೆ ಕಾರಣರಾಗಬೇಕು. ಇದೇ ನಾನು ನಿಮಗೆ ಕೊಡುವ ಕೊನೆಯ ಆದೇಶ.”
``ಆಗಲಿ ತಾಯಿ, ಇನ್ನು ಶ್ರೀಶೈಲವೇ ನನ್ನ ಸಾಧನೆಯ ತಪೋರಂಗವಾಗುತ್ತದೆ. ದಿಗಂಬರದ ದಿವ್ಯಾಂಬರೆಯಾದ ನಿನ್ನ ವೀರ ವೈರಾಗ್ಯ ಜೀವನದ ಉಜ್ವಲ ಚಿತ್ರವನ್ನೂ, ಅದರಿಂದ ಲಭಿಸಿದ ನಿನ್ನ ಸಾಧನೆಯ ಮಹತ್ತರವಾದ ನಿಲವನ್ನೂ ಉದ್ಘೋಷಿಸುತ್ತಾ ಅದನ್ನು ಶ್ರೀಶೈಲದ ಯಾತ್ರಿಕರಿಗೆ ಸಾರುವುದೇ ನನ್ನ ಪವಿತ್ರಕಾರ್ಯವಾಗುತ್ತದೆ, ಅದರಲ್ಲಿಯೇ ನನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತೇನೆ.” ಕೌಶಿಕ ಆವೇಶದಿಂದ ಹೇಳಿದ.
``ಇನ್ನೊಂದು ಮಾತು, ಅಣ್ಣ. ಮುಂದೊಂದು ದಿನ ಇಲ್ಲಿಗೆ ಪ್ರಭುದೇವರೆಂಬ ಮಹಾತ್ಮರು ಬರುತ್ತಾರೆ, ಕಲ್ಯಾಣದಿಂದ. ಅಲ್ಲಮಪ್ರಭು ಎಂದು ಪ್ರಸಿದ್ಧವಾದ ಅವರ ಹೆಸರನ್ನು ನೀವು ಕೇಳರಬಹುದು. ಅವರೇ ನನ್ನನ್ನು ಇತ್ತ ನಿರ್ದೇಶಿಸಿ ಕಳುಹಿಸಿದವರು. ಅವರು ಒಮ್ಮೆ ಇಲ್ಲಿಗೆ ಬಂದು ಹೋಗಿದ್ದಾರೆ. ಕೊನೆಯಲ್ಲಿ ಇಲ್ಲಿಗೆ ಬಂದು ಐಕ್ಯವಾಗುವುದಾಗಿ ಹೇಳಿದ್ದಾರೆ, ಅವರು ಇಲ್ಲಿಗೆ ಬಂದಾಗ ಅವರನ್ನು ನೀವಿಬ್ಬರೂ ಒಡಗೊಂಡು - ಅವರ ಸೇವೆಯನ್ನು ಮಾಡಿರಿ. ಪರಿಪೂರ್ಣತೆಗೆ ಏರಿನಿಂತ ಮಹಾಂತ ಜಂಗಮಜ್ಯೋತಿಯದು. ಅವರಿಗೆ ತಿಳಿಯದುದು ಯಾವುದೂ ಇಲ್ಲವಾದರೂ ಅವರಿಲ್ಲಿಗೆ ಬಂದಾಗ ನಿಮ್ಮ ಮೂಲಕ