ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕದ ಹಬ್ಬಗಳು
ಕರ್ನಾಟಕದ ಹಬ್ಬಗಳು : ಭಾರತದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿರುವ ಎಲ್ಲ ಹಬ್ಬಗಳೂ ಸಾಮಾನ್ಯವಾಗಿ ಆಚರಣೆಯಲ್ಲಿವೆ. ಅಲ್ಲದೆ ಹಲವು ಮತ ಪಂಥಗಳ ಜನರು ಶತಶತಮಾನಗಳಿಂದ ಇಲ್ಲಿ ನೆಲೆಸಿರುವ ಕಾರಣ ಅವರ ಹಬ್ಬಗಳೂ ಆಚರಣೆಯಲ್ಲಿವೆ. ಮುಸಲ್ಮಾನರ ಈದ್ಮಿಲಾದ್, ಮೊಹರಂ, ರಂಜಾನ್ ಮುಂತಾದವು; ಕ್ರಿಶ್ಚಿಯನ್ನರ ಈಸ್ಟರ್ ಹಾಗೂ ಕ್ರಿಸ್ಮಸ್ ; ಜೈನರ ಮಹಾವೀರ ಜಯಂತಿ ; ಬೌದ್ಧರ ಬುದ್ಧ ಜಯಂತಿ; ಶೈವರ ಬಸವಣ್ಣನವರ ಜಯಂತಿ ; ಮಾಧ್ವರ ಮಧ್ವನವಮೀ ; ರಾಮಾನುಜರ ತಿರುನಕ್ಷತ್ರಗಳು ಕನಕದಾಸ ಜಯಂತಿ- ಮುಂತಾದುವು ಮುಖ್ಯವಾದವು. ಆಯಾಯ ಸಂಪ್ರದಾಯಸ್ಥರಿಗೆ ಮೀಸಲಾದ ಹಬ್ಬಗಳನ್ನು ಮುಕ್ತವಾಗಿ ಆಚರಿಸಲಾಗುವುದು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಪ್ರತಿದಿನವೂ ಒಂದಲ್ಲ ಒಂದು ಹಬ್ಬ ಆಚರಿಸಲಾಗುವುದೆಂದು ಹೇಳಬಹುದು.
ಮನೆಮನೆಯಲ್ಲೂ ಉತ್ಸಾಹದಿಂದ ಆಚರಿಸಲಾಗುವ ವಿಶೇಷ ಉತ್ಸವಗಳನ್ನು ಹಬ್ಬವೆನ್ನಬಹುದು. ಮೂಲತಃ ಈ ಹಬ್ಬಗಳು ವಿಜಯೋತ್ಸವಗಳಾಗಿರಬೇಕು. ದುಷ್ಟಶಕ್ತಿಯನ್ನು ದಮನ ಮಾಡಿದುದರ ಜ್ಞಾಪಕಾರ್ಥವಾಗಿ ಇವು ಆಚರಣೆಯಲ್ಲಿ ಬಂದಿರಬೇಕು. ಕೆಲವೊಂದು ಹಬ್ಬಗಳು ಅಂಥ ವಿಜಯಕ್ಕೆ ಕಾರಣರಾದ ಮಹಾ ಪುರುಷರು ಹುಟ್ಟಿದ ದಿನಗಳಾಗಿವೆ. ಇವುಗಳಲ್ಲಿ ಕೆಲವು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುವುದು. ಕೆಲವು ಹಬ್ಬಗಳು ಆಯಾ ಸಂಪ್ರದಾಯದವರಿಗೆ ಮಾತ್ರ ಮೀಸಲು. ಇನ್ನು ಕೆಲವು ಅನುಕರಣೆಯಿಂದಲೂ ಬಂದಿರಬಹುದು. ಅಂಥವುಗಳ ಹಿಂದಿನ ಐತಿಹ್ಯವನ್ನು ಹೇಳುವುದು ಕಷ್ಟ. ಆದರೆ ಎಲ್ಲ ಹಬ್ಬಗಳಿಗೂ ಸಾಮಾನ್ಯವಾಗಿ ಒಂದಲ್ಲ ಒಂದು ಐತಿಹ್ಯವಿದ್ದೇ ಇರುತ್ತದೆ; ಇವುಗಳಿಗೆ ಪುರಾಣ, ಸ್ಮೃತಿ ಇಲ್ಲವೆ ಸಂಪ್ರದಾಯಗಳು ಹಿನ್ನೆಲೆಯಾಗಿರುತ್ತವೆ. ಕೆಲವಾರು ವ್ರತಗಳೂ ಹಬ್ಬಗಳ ಸಾಲಿನಲ್ಲಿ ಸೇರಿಹೋಗಿವೆ. ಕರಗ, ರಥೋತ್ಸವ ಮುಂತಾದುವು ಊರಿಗೆ ಊರೇ ಆಚರಿಸಲಾಗುವ ಹಬ್ಬಗಳು. ಇತ್ತೀಚೆಗೆ ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವ, ಗಾಂಧೀ ಜಯಂತಿಯಂಥ ರಾಷ್ಟ್ರೀಯ ಹಬ್ಬಗಳೂ ಆಚರಣೆಯಲ್ಲಿವೆ.
ತಳಿರು ತೋರಣಗಳಿಂದ ಮನೆಯನ್ನು ಅಲಂಕರಿಸುವುದು ಹಬ್ಬದ ಕುರುಹು. ಆಗ ಎಳೆಬಟ್ಟಿನ ರಂಗವಲ್ಲಿಯಿಂದ ಮನೆಯನ್ನಲಂಕರಿಸಲಾಗುವುದು. ಮಾವಿನ ಹಸಿರೆಲೆಯ ತೋರಣ ಹಬ್ಬದ ತೋರ್ ಬೆರಳಿದ್ದಂತೆ. ಅಂಥ ಸಂದರ್ಭಗಳಲ್ಲಿ ಜನ ಮನೆಯನ್ನು ಸಾರಿಸಿ ಗುಡಿಸಿ ರಂಗುರಂಗಿನ ರಂಗವಲ್ಲಿಯಿಂದ ವಿಶೇಷವಾಗಿ ಸಿಂಗರಿಸುತ್ತಾರೆ. ಸಿಹಿ ಅಡಿಗೆಯಂತೂ ಆಗಲೇಬೇಕು. ಒಂದೊಂದು ಹಬ್ಬದಲ್ಲೂ ವಿಶಿಷ್ಟವಾದ ಪೂಜೆ ಇತ್ಯಾದಿ ಇದ್ದೇ ಇರುತ್ತದೆ. ಪೂಜೆಗಾಗಿ ಆರತಿಯನ್ನು ಸಿದ್ಧಪಡಿಸುವುದೂ ವಾಡಿಕೆ. ಹೀಗೆ ಹಬ್ಬದ ಆಚರಣೆಯಲ್ಲಿ ಕಲೋಪಾಸನೆಗೂ ಸೌಂದರ್ಯಪ್ರಜ್ಞೆಗೂ ರಸಿಕತೆಗೂ ಸಾಮಾಜಿಕ ಚೈತನ್ಯದ ಜಾಗೃತಿಗೂ ಸಾಕಷ್ಟು ಎಡೆ ದೊರೆತಿದೆ.
ವಸಂತ ಋತುವಿನ ಹಬ್ಬಗಳು
[ಸಂಪಾದಿಸಿ]===ಯುಗಾದಿ === ಚೈತ್ರಮಾಸದ ಮೊದಲದಿನ. ಚತುರ್ಮುಖ ಬ್ರಹ್ಮದೇವ ಶ್ವೇತವರಾಹಕಲ್ಪದಲ್ಲಿ ಸೃಷ್ಟಿಯನ್ನು ಆರಂಭಿಸಿದನೆಂದೂ ಆದುದರಿಂದ ನವವರ್ಷಾರಂಭದ ಗಣನೆಯನ್ನು ಅಂದಿನಿಂದ ಮಾಡಬೇಕೆಂದೂ ಐತಿಹ್ಯವಿದೆ. ಇದನ್ನು ಚಾಂದ್ರಮಾನದ ರೀತ್ಯಾ ಆಚರಿಸಲಾಗುವುದು. ಶಾಲಿವಾಹನ ಶಕೆಯ ಆರಂಭವನ್ನು ಅಂದಿನಿಂದ ಲೆಕ್ಕಹಾಕುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಮುಖ್ಯವಾದುದು ಬೇವು-ಬೆಲ್ಲ. ಅದನ್ನು ತಿನ್ನಲೇ ಬೇಕೆಂದು ವಿಧಿ. ಪ್ರಾತಃ ಕಾಲವೇ ಎದ್ದು ಅಭ್ಯಂಜನ ಸ್ನಾನಮಾಡಿ, ದೇವರನ್ನು ಪ್ರಾರ್ಥಿಸಿಕೊಳ್ಳಬೇಕು. ಅನಂತರ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಮಧ್ಯಾಹ್ನ ಬೇವು-ಬೆಲ್ಲವನ್ನು ಊಟಕ್ಕೆ ಮುಂಚೆ ಸೇವಿಸಬೇಕು. ಸಾಯಂಕಾಲ ಪಂಚಾಂಗ ಶ್ರವಣ ಮಾಡಬೇಕು. ಯುಗಾದಿಯಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪುಜಿಸಿ, ಬಿತ್ತನೆಮಾಡುವ ಎಲ್ಲ ಧಾನ್ಯಗಳ ಮಾದರಿ ಬೆಳೆಯನ್ನು ಬಿತ್ತಿ ಪುಜಿಸುತ್ತಾರೆ. ಈ ಮಾದರಿಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಚೆನ್ನಾಗಿ ಆಗುತ್ತದೆ ಎಂಬುದು ರೈತರ ನಂಬಿಕೆ. ಈ ಹಬ್ಬದ ಮಾರನೆಯ ದಿನವನ್ನು ಹಬ್ಬದ ಕರಿ ಎಂದು ಆಚರಿಸುತ್ತಾರೆ.
===ಸೌರಮಾನ ಯುಗಾದಿ ===: ಸೌರಮಾನದ ರೀತ್ಯ ಆಚರಿಸುವರು, ಸೂರ್ಯ ಮೇಷ ಸಂಕ್ರಾಂತಿ ವೃತ್ತವನ್ನು ಪ್ರವೇಶಿಸಿದ ದಿನ ಯುಗಾದಿಯನ್ನು ಆಚರಿಸುತ್ತಾರೆ. ಇದರ ಆಚರಣೆ ಚಾಂದ್ರಮಾನ ಯುಗಾದಿಯಂತೆಯೇ. ಮುಸಲ್ಮಾನರು ಮೊಹರಂನ ಹತ್ತನೆಯ ದಿನದಂದು ಚಾಂದ್ರಮಾನ ರೀತ್ಯ ಹಿಜರಿಯನ್ನು ಯುಗಾದಿಯಾಗಿ ಆಚರಿಸಿದರೆ, ಕ್ರಿಶ್ಚಿಯನ್ನರು ಜನವರಿ ಮೊದಲನೆಯ ತಾರೀಖಿನಂದು ಯುಗಾದಿಯನ್ನು (ನ್ಯೂ ಇಯರ್ಸ್ ಡೇ) ಆಚರಿಸುತ್ತಾರೆ. ಕರ್ಣಾಟಕದಲ್ಲಿರುವ ಮಾರವಾಡಿಗಳು ದೀಪಾವಳಿಯ ದಿನ ಯುಗಾದಿಯನ್ನು ಆಚರಿಸುವರು.
ರಾಮನವಮೀ
[ಸಂಪಾದಿಸಿ]ಚಾಂದ್ರಮಾನ ಸೌರಮಾನ ಭೇದದಿಂದ ಈ ಹಬ್ಬವನ್ನು ಬೇರೆ ಬೇರೆ ತಿಥಿಯಲ್ಲಿ ಆಚರಿಸುತ್ತಾರೆ. ಚೈತ್ರ ಶುಕ್ಲ ನವಮಿಯಂದು ರಾವಣನ ಸಂಹಾರಕ್ಕಾಗಿ ಪರಬ್ರಹ್ಮ ದಾಶರಥಿ ರಾಮನಾಗಿ ಅವತರಿಸಿದನೆಂದು ಈ ದಿನವನ್ನು ಇಂದಿಗೂ ವೈಭವದಿಂದ ಆಚರಿಸುತ್ತಾರೆ. ತಂಪಾದ ಪಾನಕ, ಕೋಸಂಬರಿ ಆ ದಿನದ ಪ್ರಾಶಸ್ತ್ಯ. ಹರಿಕಥೆ, ಸಂಗೀತ, ಕಲೆ ಮುಂತಾದವುಗಳಿಗೆ ಪೋಷಕವಾಗಿರುವ ಈ ನವಮಿಯನ್ನು ಪ್ರತಿ ಊರಿನಲ್ಲೂ ಅನೇಕ ದಿನಗಳವರೆಗೆ ಸಾಮೂಹಿಕವಾಗಿ ಆಚರಿಸುವುದನ್ನೂ ನೋಡಬಹುದು. ರಾಮ ಪಟ್ಟಾಭಿಷೇಕದೊಂದಿಗೆ ಈ ಹಬ್ಬ ಮುಕ್ತಾಯವಾಗುತ್ತದೆ.
ವಸಂತ ನವರಾತ್ರಿ
[ಸಂಪಾದಿಸಿ]ಚೈತ್ರ ಶುಕ್ಲ ಪಾಡ್ಯಮಿಯಿಂದ ನವಮಿಯವರೆಗೆ ಒಂಬತ್ತು ದಿನಗಳನ್ನು ವಸಂತ ನವರಾತ್ರಿಯಾಗಿ ಕೆಲವರು ಆಚರಿಸುತ್ತಾರೆ.
ಚಿತ್ರಾಪೂರ್ಣಿಮಾ
[ಸಂಪಾದಿಸಿ]ಇದನ್ನು ಕರಗದ ಹುಣ್ಣಿಮೆ, ದವನದ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅನೇಕ ಊರುಗಳಲ್ಲಿ ಈ ದಿನದಂದು ಕರಗ ನಡೆಯುತ್ತದೆ. ಬೆಂಗಳೂರಿನ ಧರ್ಮರಾಯಸ್ವಾಮಿ ಕರಗ ಪ್ರಸಿದ್ಧವಾಗಿದೆ. ಇದು ರಥೋತ್ಸವಕ್ಕೆ ಹೆಸರಾಂತ ದಿನ. ದೊಡ್ಡ ದಿನ ಎಂದು ಪ್ರಸಿದ್ಧಿ. ಮುತ್ತೈದೆಯರಿಗೆ ಅರಿಸಿನ ಕುಂಕುಮ ಹೂವು ದವನ ಮುಂತಾದ ಮಂಗಳ ಹಾಗೂ ಶೃಂಗಾರದ್ರವ್ಯಗಳನ್ನು ದಾನ ಮಾಡಬೇಕೆಂದು ವಿಧಿ. ಚಿತ್ರಾನ್ನವನ್ನು ಊಟಮಾಡುವುದು ವಾಡಿಕೆ. ಇಂದಿನಿಂದ ವೈಶಾಖ ಸ್ನಾನ ಆರಂಭ. ಚೈತ್ರ ಮಾಸದಲ್ಲಿ ಪಾನಕದಾನಕ್ಕೆ ವಿಶೇಷ ಮಹತ್ತ್ವವಿರುವುದರಿಂದ ಅನುಕೂಲವಿದ್ದವರು ವ್ಯಕ್ತಿಶಃ ಇಲ್ಲವೆ ಸಾಮೂಹಿಕವಾಗಿ ಅರವಟ್ಟಿಗೆಗಳನ್ನು ನಡೆಸುವುದು ಹಿಂದಿನಿಂದಲೂ ವಾಡಿಕೆಯಲ್ಲಿದೆ. (ನೋಡಿ- ಕರಗ)
ಅಕ್ಷತೃತೀಯಾ
[ಸಂಪಾದಿಸಿ]ತ್ರೇತಾಯುಗ ಪ್ರಾರಂಭವಾದ ದಿನ. ದೊಡ್ಡ ದಿನ ಎಂದೂ ಪ್ರಸಿದ್ಧಿ. ಸ್ನಾನ ದಾನಾದಿಗಳಿಗೆ ಪ್ರಶಸ್ತವಾದುದು. ಪರಶುರಾಮ ಜಯಂತಿ, ಅನಂತ ಕಲ್ಪಾದಿಗಳು ಆಚರಿಸಲ್ಪಡುತ್ತವೆ.
ವೈಶಾಖ ಶುಕ್ಲ ಪಂಚಮೀ
[ಸಂಪಾದಿಸಿ]ಷಣ್ಮತಸ್ಥಾಪನಾಚಾರ್ಯ ಶ್ರೀ ಶಂಕರಭಗವತ್ಪಾದರ ಜಯಂತಿಯ ದಿನವಿದು. ಇದೇ ತಿಂಗಳಿನಲ್ಲಿ ಭಾಷ್ಯಕಾರರ ತಿರುನಕ್ಷತ್ರವೂ ಬರುತ್ತದೆ.
ವೈಶಾಖಶುಕ್ಲ ದಶಮೀ
[ಸಂಪಾದಿಸಿ]ವೆಂಕಟೇಶ ಕಲ್ಯಾಣ ಮಹೋತ್ಸವ ನಡೆದ ದಿನವೆಂದು ಪ್ರಸಿದ್ಧಿ. ವೆಂಕಟೇಶ ಮಹಾತ್ಮೆ ಪುರಾಣವನ್ನು ಹೇಳಿಸಿ ಕಲ್ಯಾಣ ಮಹೋತ್ಸವವನ್ನಾಚರಿಸುತ್ತಾರೆ. ವರ್ಧಮಾನ ತೀರ್ಥಂಕರರ ಕೇವಲಜ್ಞಾನ ಕಲ್ಯಾಣದ ದಿನವಾದುದರಿಂದ ಜೈನರಿಗೂ ಇದು ಪುಣ್ಯದಿನ.
ನೃಸಿಂಹ ಜಯಂತಿ
[ಸಂಪಾದಿಸಿ]ವೈಶಾಖ ಶುಕ್ಲ ಚತುರ್ದಶೀ. ಮಹಾವಿಷ್ಣು ಪ್ರಹ್ಲಾದನ ತಂದೆಯಾದ ಹಿರಣ್ಯಕಶಿಪುವಿನ ಸಂಹಾರಕ್ಕಾಗಿ ಕಂಭದಿಂದ ನೃಸಿಂಹನಾಗಿ ಅವತರಿಸಿದ ದಿನ. ಈ ದಿವಸ ಸಾಧ್ಯವಿದ್ದವರು ಉಪವಾಸ ಮಾಡಿ ವ್ರತವನ್ನಾಚರಿಸುತ್ತಾರೆ. ಸಾಧ್ಯವಿಲ್ಲವಾದ ಪಕ್ಷಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡಬೇಕೆಂದು ವಿಧಿ. ಶೈವರು ಲಿಂಗವ್ರತವನ್ನೂ ಓಂಕಾರೇಶ್ವರನ ಪೂಜೆಯನ್ನೂ ಮಾಡುತ್ತಾರೆ.
ವೈಶಾಖೀ ಪೂರ್ಣಿಮಾ
[ಸಂಪಾದಿಸಿ]ಉದುಕುಂಭದಾನಕ್ಕೆ ಶ್ರೇಷ್ಠವಾದ ದಿನ. ಯಥಾಶಕ್ತಿ ತಂಪಾದ ಪಾನೀಯವನ್ನು ದಾನ ಮಾಡಬೇಕೆಂದು ವಿಧಿ. ವ್ಯಾಸಪೂರ್ಣಿಮಾ ಎಂದು ಪ್ರಸಿದ್ಧಿ. ಅನೇಕ ಕಡೆಗಳಲ್ಲಿ ಕರಗ ಹಾಗೂ ರಥೋತ್ಸವಗಳು ನಡೆಯುತ್ತವೆ. ವೈಶಾಖಮಾಸ ಸ್ನಾನಕ್ಕೆ ಪ್ರಶಸ್ತವಾದ ಮಾಸ. ಬಿಸಿಲಿನಿಂದ ಬಾಯಾರಿ ಬರುವ ಮಾನವರಿಗೂ ಪ್ರಾಣಿಗಳಿಗೂ ತಂಪಾದ ಪಾನೀಯವನ್ನು ದಾನ ಮಾಡಲು ಚೈತ್ರದಂತೆ ವೈಶಾಖವೂ ಉಚಿತಕಾಲವೆಂದು ನಂಬಿಕೆ. ಆದುದರಿಂದ ಅನುಕೂಲಸ್ಥರು ಅರವಟ್ಟಿಗೆಗಳನ್ನು ನಡೆಸುತ್ತಾರೆ. ==ಗ್ರೀಷ್ಮಋತುವಿನ ಹಬ್ಬಗಳು==:
ಕಾರುಹುಣ್ಣಿಮೆ
[ಸಂಪಾದಿಸಿ]ಜ್ಯೇಷ್ಠ ಮಾಸದ ಹುಣ್ಣಿಮೆ. ಅಚಲವಾದ ಮತರ್ಯ್‌ಪ್ರೇಮ ಕಾಲಮೃತ್ಯುವನ್ನು ಗೆದ್ದ ಮಹೋತ್ಸವದ ದಿನ. ಹೆಣ್ಣು ಮಕ್ಕಳಿಗೆ ಇದು ಮುಖ್ಯವಾದ ಹಬ್ಬ. ಸಾವಿತ್ರಿ ಸೌಭಾಗ್ಯವನ್ನು ಪಡೆದ ದಿನ. ಇಂದು ಆಲದ ಮರಕ್ಕೆ ಪೂಜೆ ಸಲ್ಲಿಸಬೇಕೆಂದು ವಿಧಿ. ಕೆಲವರು ಉಪವಾಸವನ್ನು ಮಾಡಿ ಮಾರನೆಯ ದಿನ ಪಾರಣೆ ಮಾಡುತ್ತಾರೆ.
ಅಮಾವಾಸ್ಯೆ
[ಸಂಪಾದಿಸಿ]ಇದನ್ನು ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇದು ರೈತರ ಹಬ್ಬ. ಶ್ರಮದಿಂದ ಉತ್ತು, ಬಿತ್ತಿ, ಲೋಕಕ್ಕೆ ಅನ್ನವನ್ನು ಕೊಡುವ ಬಸವನ ಬಗ್ಗೆ ಕೃಜ್ಞತೆಯನ್ನು ಸೂಚಿಸುವ ದಿನ. ಚಕ್ಕುಲಿಯನ್ನು ಮಾಡಿ ಬಸವನಿಗೆ ನೈವೇದ್ಯ ಮಾಡುತ್ತಾರೆ. ಮಣ್ಣಿನಲ್ಲಿ ಮಾಡಿದ ಬಸವನಿಗೆ ಇಂದು ಪೂಜೆ ಮಾಡಲೇಬೇಕೆಂದು ವಿಧಿ.
ದಕ್ಷಿಣಾಯನ ಪುಣ್ಯಕಾಲ
[ಸಂಪಾದಿಸಿ]ಆಷಾಢಮಾಸದಲ್ಲಿಯೇ ದಕ್ಷಿಣಾಯನ ಪುಣ್ಯಕಾಲ ಬರುತ್ತದೆ. ಸೂರ್ಯ ಮಿಥುನರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಯಲ್ಲಿ ಪ್ರವೇಶ ಮಾಡುವ ಕಾಲವನ್ನು ದಕ್ಷಿಣಾಯನ ಪುಣ್ಯಕಾಲವೆಂದು ಕರೆಯುತ್ತಾರೆ. ಪುಣ್ಯಕಾಲ ಇಪ್ಪತ್ತು ಘಳಿಗೆ ಪೂರ್ವದಲ್ಲೇ ಪ್ರಾರಂಭವಾಗಿರುತ್ತದೆಂದು ಸ್ಮೃತಿವಾಕ್ಯ. ಆ ದಿವಸ ಸಕಲ ಜಲಾಶಯಗಳಲ್ಲೂ ಗಂಗಾದೇವಿಯ ಸಾನಿಧ್ಯವಿರುವುದರಿಂದ ಸ್ನಾನಕ್ಕೆ ಮಹತ್ತ್ವ. ಗಂಗಾಪೂಜೆಮಾಡಿ ನೈವೇದ್ಯವನ್ನು ಕೊಡುವುದೂ ಪ್ರವಾಹದಲ್ಲಿ ದೀಪದಾನ ಮಾಡುವುದೂ ವಾಡಿಕೆ. ಪಿತೃ ತರ್ಪಣಕ್ಕೆ ಪ್ರಾಶಸ್ತ್ಯ.
ಆಷಾಢ ಬಹುಳ ಅಮಾವಾಸ್ಯೆ
[ಸಂಪಾದಿಸಿ]ಈ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಬ್ರಾಹ್ಮಣ ಕನ್ಯೆಯೋರ್ವಳನ್ನು ಹಣದಾಸೆಗೆ ಕಡುಬಡವರಾದ ತಂದೆತಾಯಿಗಳು ಮೃತರಾಜಕುಮಾರನಿಗೆ ಕೊಟ್ಟು ಧಾರೆಯೆರೆಯುತ್ತಾರೆ. ಆಗ ಆ ಕನ್ಯೆ ತನ್ನ ದೃಢವಾದ ನಿಲವಿನಿಂದಲೂ ಭಕ್ತಿಯಿಂದಲೂ ಉಮಾಮಹೇಶ್ವರರನ್ನು ಪುಜಿಸಿ ಅವರ ವರಪ್ರಸಾದದಿಂದ ಶಾಶ್ವತವಾದ ಸೌಮಾಂಗಲ್ಯ ಭಾಗ್ಯವನ್ನು ಪಡೆದಳೆಂಬ ಐತಿಹ್ಯ ಈ ವ್ರತಾಚರಣೆಯ ಹಿನ್ನೆಲೆಯಾಗಿದೆ. ದೀಪಸ್ತಂಭದಲ್ಲಿ ಉಮಾಮಹೇಶ್ವರರನ್ನು ಪುಜಿಸುವುದು ವಿಧಿ.
ಆಡಿಶುಕ್ರವಾರ
[ಸಂಪಾದಿಸಿ]ಕರ್ಕಾಟಕ ಮಾಸದಲ್ಲಿ ಬರುವ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡುವ ಪದ್ಧತಿ ದ್ರಾವಿಡ ಸಂಪ್ರದಾಯಸ್ಥರಲ್ಲಿದೆ. ಆಡಿ ಎಂಬುದು ಆಷಾಢದ ತಮಿಳು ರೂಪ. ಆಷಾಢ ಶುಕ್ಲ ಏಕಾದಶಿ : ಇದಕ್ಕೆ ಗಾಳೀಪಟದ ಹಬ್ಬವೆಂದೂ ಹೆಸರು. ಗಾಳಿ ಪಟವನ್ನು ಹಾರಿಸುವುದು ರೂಢಿ. ಪ್ರಥಮೈಕಾದಶೀ ಎಂದೂ ಪ್ರಸಿದ್ಧಿ. ಮಹಾ ವಿಷ್ಣು ಮಲಗುವ ದಿನ. ಇಂದಿನಿಂದ ಚಾತುರ್ಮಾಸ್ಯ ವ್ರತಾರಂಭ.
ವರ್ಷಋತುವಿನ ಹಬ್ಬಗಳು
[ಸಂಪಾದಿಸಿ]ಲಕ್ಷ್ಮೀಪೂಜೆ
[ಸಂಪಾದಿಸಿ]ಚೈತ್ರಶುಕ್ಲ ತದಿಗೆಯಿಂದ ಮೂರು ತದಿಗೆಗಳು ವಸಂತ ಗೌರೀಪೂಜೆಗೆ ಹೇಗೆ ಪ್ರಶಸ್ತವೋ ಹಾಗೆಯೇ ಶ್ರಾವಣ ಮಾಸದ ಶುಕ್ರವಾರಗಳೆಲ್ಲವೂ ಲಕ್ಷ್ಮೀಪೂಜೆಗೆ ಪ್ರಶಸ್ತ. ವಿಶೇಷವಾಗಿ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿಯ ಪೂಜೆಗೆ ಮೀಸಲು. ಗೋಧೂಳಿಯ ಲಗ್ನದಲ್ಲಿ ಲಕ್ಷ್ಮೀಪೂಜೆ ಮಾಡಬೇಕೆಂದು ವಿಧಿ. ತಳಿರುತೋರಣ ಬಾಳೆಕಂಬ ಮುಂತಾದುವುಗಳಿಂದ ಅಲಂಕೃತವಾದ ಮಂಟಪದ ಮಧ್ಯದಲ್ಲಿ ರತ್ನಾಭರಣಗಳಿಂದಲೂ ಮಾಂಗಲ್ಯದ್ರವ್ಯಗಳಿಂದಲೂ ಸಿಂಗರಿಸಿರುವ ಲಕ್ಷ್ಮಿಯ ಪ್ರತಿಕೃತಿಯನ್ನು ಇಟ್ಟು ಷೋಡಶೋಪಚಾರಗಳಿಂದ ಪುಜಿಸಿ ಮರದ ಬಾಗಿನ ಕೊಟ್ಟು ಮುತ್ತೈದೆಯರಿಗೆ (ದಂಪತಿಗಳಾದರೆ ಉತ್ತಮ) ಭೋಜನ ಮಾಡಿಸುತ್ತಾರೆ. ಕಲಶದಲ್ಲಿ ಲಕ್ಷ್ಮಿಯನ್ನು ಆವಾಹನ ಮಾಡಿ ಪುಜಿಸುವ ಪದ್ಧತಿಯೂ ಇದೆ. ಆ ದಿನ ಮಹಿಳೆಯರು ಸಂಪತ್ ಶುಕ್ರವಾರದ ಹಾಡು ಎಂಬ ವ್ರತಕಥೆಯನ್ನು ಹೇಳುವ ವಾಡಿಕೆಯೂ ಇದೆ.
ಶ್ರಾವಣ ಶನಿವಾರಗಳು
[ಸಂಪಾದಿಸಿ]ತಿರುಪತಿ ಶ್ರೀನಿವಾಸನಿಗೆ ಮೀಸಲು ವಾರಗಳಿವು. ಆ ದೇವರ ಒಕ್ಕಲು ಆ ದಿನಗಳಲ್ಲಿ ತ್ರಿಪುಂಡ್ರವನ್ನು ಧರಿಸಿ, ವೆಂಕಟೇಶಾಯ ಮಂಗಳಂ ಎಂದು ಹೇಳುತ್ತ ಐದು ಮನೆಗಳಿಗಾದರೂ ಹೋಗಿ ಭಿಕ್ಷೆ ತರಬೇಕೆಂದೂ ಶ್ರೀನಿವಾಸನ ಪ್ರೀತ್ಯರ್ಥ ಯಥಾಶಕ್ತಿ ದಾನ, ಸಂತರ್ಪಣೆಗಳನ್ನು ಮಾಡಬೇಕೆಂದೂ ನಿಯಮ. ಬಡವ ಬಲ್ಲಿದರೆಲ್ಲರಿಗೂ ಈ ವಿಧಿ ಇದೆ. ಇದನ್ನು ಸಿರಿಸಂಪತ್ಪ್ರದ ಶನಿವಾರವೆಂದು ತಿಳಿದು ತಂಬಿಟ್ಟಿನ ತುಪ್ಪದ ದೀಪವನ್ನು ಹಚ್ಚಿಡುತ್ತಾರೆ. ಅಂಬಲಿ ಊಟಕ್ಕೆ ಪ್ರಾಶಸ್ತ್ಯ. ಈ ದಿನಗಳಲ್ಲಿ ತಿರುಪತಿಗೆ ಶ್ರೀನಿವಾಸನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆ ಹೋಗುತ್ತಾರೆ.
ಮಂಗಳಗೌರೀ
[ಸಂಪಾದಿಸಿ]ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರವೂ ಕಲಶದಲ್ಲಿ ಮಂಗಳಗೌರಿಯನ್ನು ಆವಾಹನ ಮಾಡಿ ಸ್ತ್ರೀಯರು ಷೋಡಶೋಪಚಾರಗಳಿಂದ ಪೂಜೆ ಮಾಡುತ್ತಾರೆ.
ನಾಗರಚೌತಿ
[ಸಂಪಾದಿಸಿ]ಶ್ರಾವಣ ಶುಕ್ಲ ಜೌತಿಯ ದಿನ ಬೆಳಗ್ಗೆ ಸ್ತ್ರೀಯರು ತಣ್ಣೀರಿನಲ್ಲಿ ಸ್ನಾನ ಮಾಡಿ ಹುತ್ತಕ್ಕೂ ನಾಗರಕಲ್ಲಿಗೂ ಹಾಲು ನೀರಿನಿಂದ ಅಭಿಷೇಕ ಮಾಡಿ ಹಸಿ ತಂಬಿಟ್ಟು ಚಿಗಳಿಗಳಿಂದ ತನಿ ಎರೆಯುತ್ತಾರೆ. ಮನೆಯ ಒಳಗೂ ಅಂಗಳದಲ್ಲೂ ದೊಡ್ಡ ದೊಡ್ಡ ನಾಗರಹಾವಿನ ಕುಂಡಲಿಯನ್ನು ರಂಗವಲ್ಲಿಯಲ್ಲಿ ಬರೆಯುವುದೂ ಪುಜಿಸುವುದೂ ವಾಡಿಕೆ.
ಪಂಚಮೀ
[ಸಂಪಾದಿಸಿ]ನಾಗಪಂಚಮೀ ಅಥವಾ ಗರುಡಪಂಚಮೀ ಎಂದು ಈಗ ಪ್ರಸಿದ್ಧಿ. ಸಹೋದರರ ಬೆನ್ನುಹುರಿಗೆ ದೂರ್ವಿಯಿಂದ ಹಾಲು ನೀರು ಪ್ರೋಕ್ಷಿಸಿ, ಪುಜಿಸಿ ಅವರಿಗೆ ತಂಬಿಟ್ಟಿನ ಬಾಗಿಣವನ್ನು ಕೊಡುತ್ತಾರೆ. ಬಂಧುಬಾಂಧವರಿಗೂ ಇಷ್ಟಮಿತ್ರರಿಗೂ ತಂಬಿಟ್ಟು ಕೊಡುವುದು ರೂಢಿಯಲ್ಲಿದೆ. ಸಹೋದರನ ಸುಖಸಂತೋಷಕ್ಕೂ ದೀರ್ಘ ಜೀವನಕ್ಕೂ ಹೆಣ್ಣುಮಕ್ಕಳು ಪ್ರಾರ್ಥಿಸಿಕೊಳ್ಳುತ್ತಾರೆ. ಇದರಿಂದ ಅಪಮೃತ್ಯು ಪರಿಹಾರವಾಗುವುದೆಂದು ನಂಬಿಕೆ. ಬಾಗಿಲಿನಲ್ಲಿ ಅರಿಸಿನದಿಂದ ನಾಗರಹಾವಿನ ಚಿತ್ರವನ್ನು ಬರೆದು ಹಳದಿ ಗೆಜ್ಜೆವಸ್ತ್ರದಿಂದ ಪುಜಿಸುತ್ತಾರೆ.
ಸಿರಿಯಾಳ ಷಷ್ಠೀ
[ಸಂಪಾದಿಸಿ]ಮಣ್ಣಿನಲ್ಲಿ ಸಿರಿಯಾಳನನ್ನು (ವಿರುದ್ಧ ದಿಕ್ಕಿನಲ್ಲಿ ತಲೆಮಾಡಿ ಮಲಗಿರುವ ಎರಡು ಹಸುಳೆಗಳ ಪ್ರತಿಕೃತಿ) ಮಾಡಿ ಷೋಡಶೋಪಚಾರಗಳಿಂದ ಪುಜಿಸಿ ಮೊಸರನ್ನವನ್ನೂ ಕಡುಬನ್ನೂ ನೈವೇದ್ಯ ಮಾಡುತ್ತಾರೆ. ಅನಂತರ ಚಿಕ್ಕ ಮಕ್ಕಳಿರುವ ಮನೆಗೆ ಬುತ್ತಿ ಮತ್ತು ಕಡುಬು ಬೀರಿ ಬರುವುದು ವಾಡಿಕೆ.
ಶ್ರಾವಣೀ
[ಸಂಪಾದಿಸಿ]ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಉಪಾಕರ್ಮವನ್ನು (ನೋಡಿ- ಉಪಾಕರ್ಮ) ಆಚರಿಸಲಾಗುವುದು. ಯಜುರ್ವೇದಿಗಳಿಗೆ ಹುಣ್ಣಿಮೆ ತಿಥಿಯೂ ಋಗ್ವೇದಿಗಳಿಗೆ ಶ್ರವಣ ನಕ್ಷತ್ರವೂ ಮುಖ್ಯವಾಗಿರುವುದರಿಂದ ಒಮ್ಮೊಮ್ಮೆ ಈ ಉಪಾಕರ್ಮದ ಹಬ್ಬ ಹಿಂದೆ ಮುಂದೆ ಬರುತ್ತದೆ. ಸಾಮವೇದಿಗಳು ಇದನ್ನು ಭಾದ್ರಪದ ಮಾಸದಲ್ಲಿ ಹಸ್ತಾನಕ್ಷತ್ರವಿರುವ ದಿನ ಆಚರಿಸುತ್ತಾರೆ. ವೇದೋಕ್ತ ಕರ್ಮಗಳಲ್ಲಿ ವರ್ಷದಲ್ಲಾಗಿರುವ ಲೋಪದೋಷಗಳ ನಿವಾರಣಾರ್ಥವಾಗಿ ಮಾಡುವ ಪ್ರಾಯಶ್ಚಿತ್ತ ಕರ್ಮವೆಂತಲೂ ನಂಬಿಕೆ. ನೂತನ ಯಜ್ಞೋಪವೀತವನ್ನು ಧರಿಸಿ ದೇವಋಷಿಪಿತೃಗಳಿಗೆ ತರ್ಪಣ ಕೊಡುವುದು ಪದ್ಧತಿ. ಈ ಹಬ್ಬವನ್ನು ರಾಖೀ ಅಥವಾ ರಕ್ಷಾಬಂಧನದ ಹಬ್ಬವೆಂದೂ ಆಚರಿಸುತ್ತಾರೆ. ಇದು ಭಾತೃಭಾವ ವಿಕಾಸಕ್ಕೆ ಪೋಷಕವಾದ ಹಬ್ಬ.
ಗಾಯತ್ರೀಪ್ರತಿಪದಾ
[ಸಂಪಾದಿಸಿ]ಉಪಾಕರ್ಮದ ಮರುದಿವಸ ಸಹಸ್ರ ಗಾಯತ್ರಿಯನ್ನು ಮಾಡಬೇಕೆಂಬ ವಿಧಿ ಇದೆ.
ಕೃಷ್ಣ ಜನ್ಮಾಷ್ಟಮೀ
[ಸಂಪಾದಿಸಿ]ದುಷ್ಟಶಕ್ತಿಗಳ ದಮನ ಮತ್ತು ಶಿಷ್ಟರ ಪೋಷಣಾ ಕಾರ್ಯದಲ್ಲಿ ನಿರತನಾದ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದ ಮಹಾನುಭಾವ ಶ್ರೀಕೃಷ್ಣನ ಜನ್ಮದಿನ. ಚಾಂದ್ರ, ಸೌರಮಾನಗಳ ರೀತ್ಯಾ ಈ ಹಬ್ಬವನ್ನು ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಶ್ರಾವಣ ಬಹುಳ ಅಷ್ಟಮೀ ಮಧ್ಯರಾತ್ರಿ ಚಂದ್ರೋದಯ ಕಾಲದಲ್ಲಿ ಅಘರ್ಯ್‌ವನ್ನು ಕೊಡಬೇಕೆಂಬುದು ವಿಧಿ. ಅದಕ್ಕೆ ಮುಂಚೆ ಶ್ರೀಕೃಷ್ಣ ಮತ್ತು ಗೋಕುಲದ ಪ್ರತಿಮೆಗಳನ್ನು ಮಣ್ಣಿನಲ್ಲಿ ಮಾಡಿಟ್ಟು ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಆ ದಿನ ಬಗೆಬಗೆಯ ತಿಂಡಿ ತಿನುಸುಗಳನ್ನು ಮಾಡಿ ಕೃಷ್ಣನಿಗೆ ನಿವೇದಿಸುತ್ತಾರೆ.
ರೋಹಿಣಿ ನಕ್ಷತ್ರ ಇರುವ ದಿನ ಈ ಹಬ್ಬವನ್ನು ಆಚರಿಸಿದರೆ, ಅದಕ್ಕೆ ಕೃಷ್ಣ ಜಯಂತೀ ಎಂದು ಹೆಸರಾಗುತ್ತದೆ. ಪೂಜೆ ರಾತ್ರಿ ವೇಳೆ ನಡೆಯುವುದರಿಂದ ಆ ದಿನ ಉಪವಾಸವಿರುವುದು ಸೂಕ್ತ. ತಿಥಿಭಾಂತೇಚ ಪಾರಣಂ ಎಂಬ ವಿಧಿವಾಕ್ಯಕ್ಕೆ ಅರ್ಥ ಮಾಡುವಲ್ಲಿ ವ್ಯತ್ಯಾಸವಿರುವ ಕಾರಣ ಪಾರಣೆಯ ವಿಷಯದಲ್ಲೂ ಮತಭೇದ ಕಂಡುಬರುತ್ತದೆ.
ಸ್ವರ್ಣಗೌರೀ
[ಸಂಪಾದಿಸಿ]ಭಾದ್ರಪದ ಶುಕ್ಲತದಿಗೆ ಹೆಣ್ಣುಮಕ್ಕಳಿಗೆ ಸಂಭ್ರಮದ ಹಬ್ಬ. ಇದೇ ಗೌರೀ ತದಿಗೆ. ಇದು ಸೌಭಾಗ್ಯಪ್ರದವಾದ ವ್ರತ. ದೊಡ್ಡಗೌರೀ ಮುಂತಾದ ಹೆಸರಿನಿಂದ ಪ್ರಸಿದ್ಧವಿದೆ. ತಳಿರುತೋರಣಗಳಿಂದ ಅಲಂಕೃತವಾದ ಮಂಟಪದ ಮಧ್ಯದಲ್ಲಿ ಗೌರಿಯ ಪ್ರತಿಮೆಯನ್ನು ಅಥವಾ ಪ್ರತಿಕೃತಿಯನ್ನು ಇಟ್ಟು ಷೋಡಶೋಪಚಾರಗಳಿಂದ ಪುಜಿಸಿ ವ್ರತಕಥೆಯನ್ನು ಕೇಳುತ್ತಾರೆ. ಮತ್ತು ಮೊರದ ಬಾಗಿನವನ್ನು ಕೊಡುತ್ತಾರೆ. ಅಂಥ ಬಾಗಿನವನ್ನು ಹೊತ್ತು ಸಂಭ್ರಮದಿಂದ ಓಡಾಡುವ ಸುಮಂಗಲಿಯರನ್ನು ಅಂದಿನಿಂದ ಒಂದುವಾರ ಕಾಲ ನೋಡಬಹುದು.
ಗಣೇಶಚತುರ್ಥೀ
[ಸಂಪಾದಿಸಿ]ವಿಘ್ನನಿವಾರಕ ವಿನಾಯಕನ ಹಬ್ಬ. ಸಿದ್ಧಿವಿನಾಯಕ ವಿದ್ಯಾಗಣಪತಿ ಮುಂತಾದ ಹೆಸರಿನಿಂದ ಇವನನ್ನು ಪುಜಿಸುತ್ತಾರೆ. ಪ್ರತಿ ಮನೆಯಲ್ಲೂ, ಭಕ್ತಿಯ ಜೊತೆಗೆ ಕಲಾವಂತಿಕೆಯನ್ನು ಈ ಹಬ್ಬದಲ್ಲಿ ತೋರಿಸುತ್ತಾರೆ. ಮಣ್ಣಿನಲ್ಲಿ ರಂಗುರಂಗಿನ ಬಣ್ಣದಿಂದ ತಯಾರಾಗಿರುವ ಗಣಪತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಪುಜಿಸುತ್ತಾರೆ. ಸಾಮೂಹಿಕವಾಗಿಯೂ ಈ ಹಬ್ಬವನ್ನು ಆಚರಿಸುತ್ತಾರೆ. ಕಡಬು ಗಣಪತಿಗೆ ಪ್ರಿಯವಾದ ಭಕ್ಷ್ಯ.
ಭಾದ್ರಪದಶುಕ್ಲ ಚತುರ್ಥೀ ದಿನ ಈ ಹಬ್ಬ ಬರುತ್ತದೆ. ಆ ದಿನ ಚಂದ್ರನನ್ನು ನೋಡಬಾರದೆಂಬ ನಿಯಮ. ಅಕಸ್ಮಾತ್ ನೋಡಿದರೆ ದೋಷಪರಿಹಾರಕ್ಕಾಗಿ ಸ್ಯಮಂತಕೋಪಾಖ್ಯಾನವನ್ನು ಕೇಳಲೇಬೇಕೆಂದು ವಿಧಿ. ಅದೂ ಸಾಧ್ಯವಿಲ್ಲದಿದ್ದಾಗ
- ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ
- ಸುಕುಮಾರಕ ಮಾರೋದೀಃ ತವ ಹ್ಯೇಷ ಸ್ಯಮಂತಕಃ
ಎಂಬ ಶ್ಲೋಕವನ್ನಾದರೂ ಹೇಳಿಕೊಳ್ಳಬೇಕೆನ್ನುತ್ತಾರೆ. ಕನಿಷ್ಠ ಪಕ್ಷ ಇಪ್ಪತ್ತೊಂದು ಮನೆಗಳಿಗಾದರೂ ಹೋಗಿ ಗಣೇಶನನನ್ನು ನೋಡಿ ನಮಸ್ಕರಿಸಬೇಕೆಂದು ನಿಯಮವಿರುವ ಕಾರಣ ಬಾಲಕರು ತಂಡೋಪತಂಡವಾಗಿ ಮನೆಮನೆಗೂ ಹೋಗಿಬರುವ ದೃಶ್ಯ ಮನಮೋಹಕವಾಗಿರುತ್ತದೆ. ಶುಭಮುಹೂರ್ತದಲ್ಲಿ ಗಣೇಶನ ವಿಸರ್ಜನೆ ನಡೆಯುತ್ತದೆ. ಆಗ ನಡೆಯುವ ಗಣೇಶನ ಮೆರವಣಿಗೆ ವರ್ಣಮಯವಾಗಿರುತ್ತದೆ.
ಹಿಂದುಗಳಲ್ಲಿ ಪ್ರತಿಯೊಂದು ಶುಭಕಾರ್ಯವೂ ವಿಘ್ನೇಶ್ವರನ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ.
ಋಷಿಪಂಚಮೀ
[ಸಂಪಾದಿಸಿ]ಸ್ತ್ರೀಯರು ಋತುದೋಷ ಪರಿಹಾರಕ್ಕಾಗಿ ಸಪ್ತಋಷಿಗಳನ್ನು ಪುಜಿಸಬೇಕೆಂಬ ವಿಧಿಗನುಸಾರವಾಗಿ ಭಾದ್ರಪದ ಶುಕ್ಲಪಂಚಮಿಯಂದು ಈ ವ್ರತವನ್ನು ಆಚರಿಸುತ್ತಾರೆ. ಆ ದಿನ ಸಾಮಾನ್ಯವಾಗಿ ಅವರು ಊಟ ಮಾಡುವುದಿಲ್ಲ. ತಾಯಿಯ ಪರವಾಗಿ ಗಂಡು ಮಕ್ಕಳು ಈ ವ್ರತವನ್ನಾಚರಿಸುವುದುಂಟು. ಸಪ್ತಋಷಿಗಳನ್ನು ಏಳು ವರ್ಷಗಳ ಕಾಲ ಪುಜಿಸಿ, ಹವನ ಹೋಮಾದಿಗಳಿಂದ ಉದ್ಯಾಪನೆ ಮಾಡಿ ಯಥಾಶಕ್ತಿ ದಾನಾದಿಗಳನ್ನು ಕೊಡಬೇಕೆಂಬುದು ನಿಯಮ. ಅರುಂಧತೀ ಬಾಗಿನವನ್ನು ಕೊಡುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಒಂದು ವ್ರತಕಥೆಯೂ ಇದೆ.
ಅನಂತರಪದ್ಮನಾಭ ಪೂಜೆ
[ಸಂಪಾದಿಸಿ]ಭಾದ್ರಪದ ಶುಕ್ಲ ಚತುರ್ಥೀ ದಿವಸ ಅನಂತಪದ್ಮನಾಭಸ್ವಾಮಿಯನ್ನು ಪೂರ್ಣಕಲಶದಲ್ಲಿ ಆವಾಹನ ಮಾಡಿ ಷೋಡಶೋಪಚಾರಗಳಿಂದ ಪುಜಿಸಿ ಅನಂತನ ದಾರವನ್ನು ದಾನ ಮಾಡಿ ಧರಿಸಬೇಕೆಂದು ನಿಯಮ. ಇದಕ್ಕೂ ವ್ರತಕಥೆ ಇದೆ.
ಅನಂತನ ಹುಣ್ಣಿಮೆ
[ಸಂಪಾದಿಸಿ]ಭಾದ್ರಪದ ಶುಕ್ಲ ಪೂರ್ಣಿಮಾ ದಿನಕ್ಕೆ ಈ ಹೆಸರಿದೆ. ಉಮಾಮಹೇಶ್ವರ ವ್ರತವನ್ನು ಆಚರಿಸುವುದು ಇಂದೇ. ಅನೇಕ ಕಡೆಗಳಲ್ಲಿ ಈ ದಿನ ರಥೋತ್ಸವ ನಡೆಯುತ್ತದೆ.
ಭಾದ್ರಪದ ಬಹುಳ
[ಸಂಪಾದಿಸಿ]ಪಿತೃಪೂಜೆಗೆ ಮೀಸಲು. ಈ ಹದಿನೈದು ದಿನಗಳಲ್ಲಿ ಮಾಡುವ ಶ್ರಾದ್ಧಕರ್ಮಕ್ಕೆ ಪಕ್ಷ ಎಂದು ಹೆಸರು. ಮುಖ್ಯವಾಗಿ ಮಹಾಮಭರಣಿ, ಮಧ್ಯಾಷ್ಟಮೀ, ಅವಿಧವಾ ನವಮೀ, ಘಾತ ಚತುರ್ದಶೀ ಮತ್ತು ಮಹಾಲಯ ಅಮಾವಾಸ್ಯೆ-ಈ ದಿನಗಳು ಈ ಪಕ್ಷದಲ್ಲಿ ಮುಖ್ಯವಾದುವೆಂದು ಪ್ರಸಿದ್ಧಿ.
ಶರದೃತುವಿನ ಹಬ್ಬಗಳು
[ಸಂಪಾದಿಸಿ]ನವರಾತ್ರಿ
[ಸಂಪಾದಿಸಿ]ಆಶ್ವೀಜ ಶುಕ್ಲ ಪಾಡ್ಯಮೀ ದಿನದಿಂದ ದಶಮಿಯವರೆಗೆ ಬರುವ ದಿನಗಳನ್ನು ನವರಾತ್ರಿ ಅಥವಾ ದಶಹರಾ ಎಂದೂ ಶರನ್ನವರಾತ್ರಿ ಎಂದೂ ಕರೆಯುವರು. ನವರಾತ್ರಿ ಹಬ್ಬದ ಸಾಲು. ಈ ಹಬ್ಬವನ್ನು ಮೂಲಾನಕ್ಷತ್ರ ಇರುವ ದಿನದಿಂದ ಶ್ರವಣ ನಕ್ಷತ್ರ ಇರುವವರೆಗೂ ವಿಶೇಷವಾಗಿ ಆಚರಿಸಲಾಗುವುದು. ನವರಾತ್ರಿ ನಾಡಹಬ್ಬ. ಇದಕ್ಕೆ ವಿಜಯನಗರದ ವೈಭವದ ಹಿನ್ನೆಲೆಯೂ ಇದೆ. ಮನೆಮನೆಯಲ್ಲೂ ಗೊಂಬೆಗಳನ್ನು ಸಿಂಗರಿಸಿ ಒಪ್ಪವಾಗಿ ಕೂಡಿಸಿ ಪುಜಿಸುತ್ತಾರೆ. ಕಲಾವಂತಿಕೆ ಮತ್ತು ಸೌಂದರ್ಯ ಪ್ರಜ್ಞೆಯ ಪ್ರಕಾಶನಕ್ಕೆ ಇದೊಂದು ಸುಸಮಯ. ಸಂಜೆಯ ಸಮಯದಲ್ಲಿ ಹೆಣ್ಣು ಮಕ್ಕಳು ಶೃಂಗಾರಗೊಂಡು ಮನೆಯಿಂದ ಮನೆಗೆ ಹೋಗಿ ಹಾಡು ಹೇಳಿ ಕೋಲಾಟವಾಡುವ ದೃಶ್ಯ ಕಣ್ಮನಗಳನ್ನು ಸೆಳೆಯುವಂತಿರುತ್ತದೆ. ಶಕ್ತಿ ದೇವತಾ ಪೂಜೆಗೆ ಮೀಸಲಾದ ಈ ದಿನಗಳಲ್ಲಿ ಕಲಶವನ್ನಿಟ್ಟು ಪುಜಿಸುವುದೂ ವಾಡಿಕೆ. ಇಲ್ಲಿ ನಾಲ್ಕು ದಿನಗಳ ಹಬ್ಬಗಳು ಬಹು ಪ್ರಸಿದ್ಧವಿವೆ.
ಸರಸ್ವತೀಪೂಜೆ
[ಸಂಪಾದಿಸಿ]ಮೂಲೇನಾವಾಹಯೇತ್ ದೇವೀಂ ಶ್ರವಣೇನ ವಿಸರ್ಜಯೇತ್ ಎಂಬ ಆಧಾರೋಕ್ತಿಯಂತೆ ಮೂಲಾನಕ್ಷತ್ರದ ದಿನ ಗ್ರಂಥಗಳನ್ನೆಲ್ಲ ಇಟ್ಟು ಪೂಜೆ ಮಾಡುತ್ತಾರೆ. ಸರಸ್ವತೀ ಪೂಜೆ ಎಂದಿದು ಪ್ರಸಿದ್ಧಿ ಪಡೆದಿದೆ. ಪಾಡ್ಯಮಿಯಿಂದ ನಂದಾದೀಪವನ್ನಿಡಲು ಸಾಧ್ಯವಿಲ್ಲದವರು ಸರಸ್ವತೀಪೂಜೆಯ ದಿನದಿಂದಲಾದರೂ ನಂದಾದೀಪವನ್ನಿಟ್ಟು ಹಬ್ಬವನ್ನು ಆಚರಿಸುತ್ತಾರೆ. ಸಂಗೀತ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ಸಕಲ ಸಲಕರಣೆ ಮತ್ತು ಪುಸ್ತಕಗಳಿಗೆ ಅಂದು ಪೂಜೆ ಸಲ್ಲುತ್ತದೆ.
ದುರ್ಗಾಷ್ಟಮಿ
[ಸಂಪಾದಿಸಿ]ಮಹಿಷಾಸುರನನ್ನು ಸಂಹರಿಸಿದ ದುರ್ಗಾದೇವಿಯ ಪ್ರೀತ್ಯರ್ಥವಾಗಿ ವಿಶೇಷ ಪೂಜೆಯನ್ನು ಮಾಡುವ ದಿನ.
ಮಹಾನವಮೀ
[ಸಂಪಾದಿಸಿ]ವಾಹನಗಳಿಗೆಲ್ಲ ಪೂಜೆ ಸಲ್ಲಿಸುವ ದಿನ. ಶಸ್ತ್ರಾಸ್ತ್ರಗಳಿಗೂ ಜೀವನೋಪಾರ್ಜನೆಗೆ ಸಹಾಯಕವಾದ ಯಂತ್ರಾದಿಗಳಿಗೂ ಅಂದು ಪೂಜೆ ಸಲ್ಲುತ್ತದೆ. ಮಹಾನವಮಿಯ ದಿನ ಶಮೀಪತ್ರವನ್ನು ಪರಮಾತ್ಮನಿಗೆ ಸಮರ್ಪಿಸಲಾಗುವುದು. ಸರಸ್ವತಿಗೆ ವಿಶೇಷ ಪೂಜೆ ಮತ್ತು ನೈವೇದ್ಯವನ್ನೂ ಸಲ್ಲಿಸಲಾಗುವುದು. ಪರಬ್ರಹ್ಮನ ಸರ್ವವ್ಯಾಪಕತ್ವವನ್ನು ಮನದಟ್ಟು ಮಾಡಿಕೊಡಲೆಂದೇ ಮೀಸಲಾಗಿರುವ ಹಬ್ಬವಿದು.
ವಿಜಯದಶಮೀ
[ಸಂಪಾದಿಸಿ]ದೊಡ್ಡ ದಿನವೆಂದು ಪ್ರಸಿದ್ಧಿ. ಚಾತುರ್ಮಾಸ್ಯ ಸಂಕಲ್ಪ ಮಾಡಿ ಒಂದೇ ಕಡೆ ಕುಳಿತಿರುವ ಸಂನ್ಯಾಸಿಗಳೂ ಸಂಚಾರ ಹೊರಡುವ ದಿನ. ಸೀಮೋಲ್ಲಂಘನ ಮಾಡಬೇಕೆಂದು ವದಂತಿ. ಮೈಸೂರಿನಲ್ಲಿ ವಿಜಯನಗರದ ಪರಂಪರೆಗನುಸಾರವಾಗಿ ಜಂಬೂಸವಾರಿ ನಡೆಯುತ್ತಿತ್ತು. ಪ್ರತಿ ಊರಿನಲ್ಲೂ ದೇವರ ಉತ್ಸವ ನಡೆಯುತ್ತದೆ. ಶಮೀವೃಕ್ಷವನ್ನೂ ಪುಜಿಸುವುದು ಮುಖ್ಯ. ಪರಸ್ಪರ ಶಮೀ ಕೊಟ್ಟು ನಮಸ್ಕರಿಸುವುದೂ ಶುಭಾಶಯವನ್ನು ಹೇಳುವುದೂ ವಾಡಿಕೆ. ಆಗ,
- ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ
- ಧರಿತ್ರ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯವಾದಿನೀ
ಎಂಬ ಶ್ಲೋಕವನ್ನು ಹೇಳಬೇಕು. ಸರಸ್ವತಿಯನ್ನು ವಿಸರ್ಜಿಸಿ ಏನಾದರೂ ಓದಲೇಬೇಕೆಂದೂ ನಿಯಮವಿದೆ. ಆ ದಿನ ಆರಂಭಿಸಿದ ಕಾರ್ಯದಲ್ಲಿ ಜಯ ಸಿಗುವುದೆಂದೂ ನಂಬಿಕೆ. ಶ್ರೀರಾಮ ಲಂಕೆಗೆ ದಿಗ್ವಿಜಯಕ್ಕೆ ಹೊರಟ ದಿನವೆಂದೂ ದ್ವೈತವಾದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಮನ್ಮಧ್ವಾಚಾರ್ಯರು ಅವತರಿಸಿದ ದಿನವೆಂದೂ ಇದು ಪ್ರಸಿದ್ಧವಾಗಿದೆ. ಈ ದಿನದ ಹಿನ್ನೆಲೆಯಾಗಿ ಅನೇಕ ವೃತ್ತಾಂತಗಳು ಪುರಾಣಗಳಲ್ಲಿ ಬರುತ್ತವೆ. ನವರಾತ್ರಿ ಉತ್ಸವ ಕೊನೆಗೊಳ್ಳುವ ದಿನವಾದ ಇಂದು ಆವಾಹಿತ ಸಕಲ ದೇವದೇವತೆಗಳನ್ನೂ ವಿಸರ್ಜಿಸಲಾಗುವುದು. ವೆಂಕಟೇಶ ಮಹಾತ್ಮ್ಯೆಯ ಪುರಾಣ ಹೇಳಿ ಮಂಗಳವನ್ನಾಚರಿಸುತ್ತಾರೆ. ಸುಂದರಕಾಂಡ ರಾಮಾಯಣವನ್ನು ಪಾರಾಯಣ ಮಾಡಿ ಮುಗಿಸುವುದೂ ಉಂಟು.
ಶಿಗಿ ಹುಣ್ಣಿಮೆ
[ಸಂಪಾದಿಸಿ]ಆಶ್ವೀಜ ಶುಕ್ಲ ಪೂರ್ಣಿಮಾಕ್ಕೆ ಶಿಗಿ ಹುಣ್ಣಿಮೆ ಅನ್ನುತ್ತಾರೆ. ಇದು ರೈತರ ಹಬ್ಬ. ಮುತ್ತೈದೆಯರು ಹಸುರು ಪಯಿರನ್ನು (ಸಾಮಾನ್ಯವಾಗಿ ರಾಗಿ) ಬೆಳೆಸಿರುವ ಗೆರಸಿಯನ್ನು ತಲೆಯ ಮೇಲೆ ಹೊತ್ತು ಹಾಡುಗಳನ್ನು ಹೇಳುತ್ತ ಜಲಾಶಯಕ್ಕೆ ಹೋಗಿ ಶಿಗಿ ಗೌರಿಯನ್ನು ಪೂಜೆ ಮಾಡಿ ಬರುತ್ತಾರೆ. ಭೂಮಿ ತಾಯಿಗೆ ಬಯಕೆ ಊಟ ಮಾಡಿಸಲು ಬಗೆಬಗೆಯ ತಿಂಡಿತಿನಿಸುಗಳನ್ನು ತೆಗೆದುಕೊಂಡು ಹೋಗಿ ಹೊಲಗದ್ದೆಗಳಲ್ಲಿ ಎಡೆಯಿಟ್ಟು ಊಟ ಮಾಡಿ ಬರುತ್ತಾರೆ. ಕೆಲವರು ಬೆಳದಿಂಗಳಲ್ಲಿ ಪಾಯಸದ ಊಟ ಮಾಡುತ್ತಾರೆ. ಇದು ಮಳೆ ಬೆಳೆಯನ್ನು ಕೊಡುವ ದೇವೇಂದ್ರನನ್ನು ತೃಪ್ತಿಪಡಿಸಲು ಮಾಡುವ ಹಬ್ಬವೆಂದು ನಂಬಿಕೆ.
ನೀರು ತುಂಬುವ ಹಬ್ಬ
[ಸಂಪಾದಿಸಿ]ನರಕಚತುರ್ದಶಿಯ ಹಿಂದಿನ ರಾತ್ರಿ. ಚತುರ್ದಶಿಯ ದಿನ ಚಂದ್ರೋದಯದ ಸಮಯದಲ್ಲಿ ಅಭ್ಯಂಜನ ಮಾಡಲು ಅನುಕೂಲವಾಗುವಂತೆ ಬಚ್ಚಲ ಮನೆಯಲ್ಲಿ ಎಲ್ಲವನ್ನೂ ತೊಳೆದು, ಅಲಂಕರಿಸಿ ನೀರು ತುಂಬುತ್ತಾರೆ. ಜಲಂಧರನ ಭಯದಿಂದ ಪರಶಿವ ಮಾಲಿಂಗನ ಬಳ್ಳಿಯಲ್ಲಿ ಅವಿತುಕೊಂಡನೆಂದೂ ಅದನ್ನು ಪಾರ್ವತಿ ನೀರಿನ ಹಂಡೆಯ ಸುತ್ತಲೂ ಸುತ್ತಿಟ್ಟು ಆ ದುಷ್ಟನ ಕೈಗೆ ಪರಶಿವ ಸಿಗದಂತೆ ಮಾಡಿದಳೆಂದೂ ಒಂದು ಐತಿಹ್ಯ. ಅಳಿಯಂದಿರು ಮನೆಗೆ ಬಂದಾಗ ಈ ಹಬ್ಬದ ಸಂಭ್ರಮವೇ ಸಂಭ್ರಮ. ಇಂದಿನಿಂದ ದೀಪಾವಳೀ ಹಬ್ಬ ಪ್ರಾರಂಭವಾಗುತ್ತದೆ.
ನರಕ ಚತುರ್ದಶೀ
[ಸಂಪಾದಿಸಿ]ಭೂಮಿಯ ಪುತ್ರನಾದ ನರಕಾಸುರ ಲೋಕಕಂಟಕ ನಾದಾಗ ಭೂಮಾತೆಯೇ ಶ್ರೀಕೃಷ್ಣನನ್ನು ಪ್ರಾರ್ಥಿಸಿಕೊಂಡು ನರಕಾಸುರನನ್ನು ಸಂಹಾರ ಮಾಡಿಸಿದಳೆಂದು ಪುರಾಣಪ್ರಸಿದ್ಧ ಕಥೆಯಿದೆ. ಆದುದರಿಂದಲೇ ಆ ಭೂಮಾತೆಯ ಆದೇಶದಂತೆ ಸೂರ್ಯೋದಯಕ್ಕೆ ಮುನ್ನ ಚಂದ್ರೋದಯ ಕಾಲದಲ್ಲಿ ಅಭ್ಯಂಜನ ಮಾಡಲೇಬೇಕೆಂದು ವಿಧಿ ಇದೆ. ಅಳಿಯನಿಗೆ ಈ ಹಬ್ಬದಲ್ಲಿ ಪ್ರಾಶಸ್ತ್ಯ. ರಾತ್ರಿ ಹಬ್ಬದೂಟವಾದ ಮೇಲೆ ಬಾಣಬಿರುಸುಗಳನ್ನು ಹಚ್ಚಿ ನಲಿಯುತ್ತಾರೆ.
ಅಮಾವಾಸ್ಯೆ
[ಸಂಪಾದಿಸಿ]ಆಶ್ವೀಜ ಬಹುಳ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ನಡೆಯುತ್ತದೆ. ವ್ಯಾಪಾರಿಗಳು ಈ ಹಬ್ಬವನ್ನು ವಿಜೃಂಭಣೆಯಿಂದ ಮಾಡುತ್ತಾರೆ.
ಬಲಿಪಾಡ್ಯಮಿ
[ಸಂಪಾದಿಸಿ]ವಾಮನಾವತಾರದ ಕಥೆಯ ಹಿನ್ನಲೆಯಲ್ಲಿ ಲೋಕ ಪ್ರಸಿದ್ಧವಾದ ಬಲಿಪಾಡ್ಯಮಿಯ ಹಬ್ಬ ನಡೆಯುತ್ತದೆ. ಇದು ಗೋಕ್ರೀಡನಕ್ಕೆ ಹೆಸರಾದ್ದು. ಬೆಳಗ್ಗೆ ಗೋಪೂಜೆಯನ್ನು ಮಾಡಬೇಕು. ಸಂಜೆಯ ಹೊತ್ತಿಗೆ ಮನೆಯ ಹೊಸಲಿನಲ್ಲೆಲ್ಲ ಬಲೀಂದ್ರನನ್ನು ಮಾಡಿಟ್ಟು ಷೋಡಶೋಪಚಾರಗಳಿಂದ ಪುಜಿಸಬೇಕು. ಬಾಣಬಿರುಸುಗಳನ್ನು ಹಾರಿಸುವುದುಂಟು. ಬಲೀಂದ್ರ ಭೂಲೋಕಕ್ಕೆ ಬಂದು ಮೂರೂಮೂಕ್ಕಾಲು ಘಳಿಗೆ ಇರುವನೆಂದು ಜನರ ನಂಬಿಕೆ.
ಅಳಿಯನನ್ನು ಕರೆಸಿಕೊಂಡಿರುವವರು ಭಾವನ ಬಿದಿಗೆ ಅಕ್ಕನ ತದಿಗೆ ಮುಂತಾಗಿ ಕಾರ್ತೀಕ ಶುಕ್ಲ ಬಿದಿಗೆ ತದಿಗೆ ಮತ್ತು ಕಡೆ ಪಂಚಮಿ ಎಂದು ಪಂಚಮಿಯವರೆಗೂ ಹಬ್ಬವನ್ನು ಆಚರಿಸುತ್ತಾರೆ. ಕಡೆ ಪಂಚಮಿಗೆ ದೀಪಾವಳೀ ಹಬ್ಬ ಮುಗಿಯುತ್ತದೆ. ಭಾವನಬಿದಿಗೆ ದಿವಸ ಸಹೋದರಿಯ ಮನೆಯಲ್ಲಿ ಅವಳ ಕೈಯಿಂದ ಊಟ ಮಾಡಬೇಕೆಂದೂ ಯಮಧರ್ಮರಾಯ ಹಾಗೆ ಮಾಡಿದ್ದನೆಂದೂ ಅಕ್ಕನ ತದಿಗೆ ದಿವಸ ಸಹೋದರಿಯರಿಗೆ ಔತಣವನ್ನು ಮಾಡಸಬೇಕೆಂದೂ ಪ್ರರಾಣಪ್ರಸಿದ್ಧಿ ಇದೆ.
ತುಳಸೀ ಹಬ್ಬ
[ಸಂಪಾದಿಸಿ]ಕಾರ್ತೀಕ ಶುದ್ಧ ಏಕಾದಶೀ ದಿವಸ ಅಂಗಳದಲ್ಲಿನ ತುಳಸೀ ವೃಂದಾವನವನ್ನು ತಳಿರು ತೋರಣಗಳಿಂದ ಅಲಂಕರಿಸಿ ಅದರಲ್ಲಿ ನೆಲ್ಲಿಯ ಟೊಂಗೆಯನ್ನು ನೆಟ್ಟು, ದ್ವಾದಶೀ ಬೆಳಗ್ಗೆ ಪೂಜೆ ಮಾಡುತ್ತಾರೆ. ತುಳಸಿಯೇ ವೃಂದಾ ಎಂದು ನಂಬಿಕೆ. ಈ ಹಬ್ಬ ತುಳಸಿಯ ವಿವಾಹ ಮಹೋತ್ಸವವೆಂದು ಪ್ರಸಿದ್ಧಿ. ಚಾತುರ್ಮಾಸದಲ್ಲಿ ಮಲಗಿದ್ದ ಮಹಾವಿಷ್ಣು ಏಳುವ ದಿನವಾದ್ದರಿಂದ ಇದನ್ನು ಉತ್ಥಾನದ್ವಾದಶೀ (ನೋಡಿ- ಉತ್ಥಾನ ದ್ವಾದಶೀ) ಎಂತಲೂ ಕರೆಯುತ್ತಾರೆ. ಕ್ಷೀರಾಬ್ಧಿ ಪೂಜೆಯನ್ನು ಮಾಡಬೇಕೆಂಬ ವಿಧಿ ಇದೆ. ರಾತ್ರಿಯೂ ಪೂಜೆ ನಡೆಯುತ್ತದೆ.
ಕಾರ್ತೀಕ ಪೂರ್ಣಿಮಾ
[ಸಂಪಾದಿಸಿ]ವ್ಯಾಸಪೂಜೆ ಮಾಡಿ ಕಾರ್ತೀಕ ಮಾಸ ಮಹಾತ್ಮ್ಯೆಯ ಮಂಗಳವನ್ನಾಚರಿಸುತ್ತಾರೆ. ರಾತ್ರಿ ಮನೆಯಲ್ಲೂ ಮಂದಿರಗಳಲ್ಲೂ ದೀಪಗಳನ್ನು ಬೆಳಗಿಸುತ್ತಾರೆ. ದೀಪೋತ್ಸವ ನಡೆಯುವುದು ಇಂದಿನಿಂದಲೇ. ಈ ದಿನ ದೀಪ ದಾನಕ್ಕೆ ಮಹತ್ತ್ವ. ಇದನ್ನು ದೊಡ್ಡ ಗೌರೀ ಹುಣ್ಣಮೆ ಎಂದು ಕರೆಯುತ್ತಾರೆ. ಸ್ತ್ರೀಯರು ಗೌರೀಪೂಜೆಯನ್ನು ಮಾಡುತ್ತಾರೆ. ಕಾರ್ತೀಕ ಮಾಸದಲ್ಲಿ ಸ್ನಾನ ಮಾಡಬೇಕೆಂದು ವಿಧಿ ಇದೆ. ಸ್ನಾನ ಸೂರ್ಯೋದಯಕ್ಕೆ ಮುಂಚಿತವಾಗಿ ಮುಗಿದಿರಬೇಕು. ಕಾವೇರಿ ನದಿಯ ಸ್ನಾನಕ್ಕೆ ವಿಶೇಷ ಮಹತ್ತ್ವ. ತುಲಾಮಾಸವೂ ಬಂದಿರುವುದರಿಂದ ತುಲಾಕಾವೇರಿಯ ಸ್ನಾನ ಅನಂತಪುಣ್ಯಪ್ರದವೆಂದು ನಂಬಿಕೆ. ಕಾರ್ತೀಕ ಮಾಸದಲ್ಲಿ ಒಮ್ಮೆಯಾದರೂ ಸಾಮೂಹಿಕವಾಗಿ ವನಭೋಜನ ಮಾಡುವುದೂ ಆ ದಿನ ಧಾತ್ರೀಹವನ ನಡೆಸುವುದೂ ಒಂದು ವಿಶೇಷ.
ಕಾರ್ತೀಕ ಬಹುಳ ಅಮಾವಾಸ್ಯಾ
[ಸಂಪಾದಿಸಿ]ಕಡೆಯ ಕಾರ್ತೀಕ ಎಂದು ಪ್ರಸಿದ್ಧಿ. ದೀಪೋತ್ಸವಕ್ಕೆ ಹೆಸರಾದ ದಿನ. ಪಂಜನ್ನು ಹಿಡಿದು ತಿರುಗಿಸುತ್ತ ಉರಿನಲ್ಲೆಲ್ಲ ಸುತ್ತು ಹಾಕುವ ಪದ್ಧತಿ ಹಿಂದೆ ಇತ್ತು. ಉತ್ತರ ಗೋಗ್ರಹಣದ ಜ್ಞಾಪಕಾರ್ಥವಾಗಿ ಹಾಗೆಮಾಡಬೇಕೆಂದು ನಂಬಿಕೆ. ಪಿತೃದೇವತೆಗಳಿಗೆ ಮರಳಿ ಹೋಗಲು ದಾರಿತೋರುವ ವಿಧಾನವಿದೆಂದು ಪುರಾಣ ವಾಕ್ಯ. ಎಲ್ಲೆಡೆಯಲ್ಲೂ ದೀಪೋತ್ಸವ, ತೆಪ್ಪೋತ್ಸವ ಮುಂತಾದುವು ವಿಜೃಂಭಣೆಯಿಂದ ನಡೆಯುತ್ತವೆ.
ಹೇಮಂತ ಋತುವಿನ ಹಬ್ಬಗಳು
[ಸಂಪಾದಿಸಿ]ಸ್ಕಂದಷಷ್ಟೀ
[ಸಂಪಾದಿಸಿ]ಮಾರ್ಗಶೀರ್ಷಮಾಸದ ಶುಕ್ಲ ಷಷ್ಟಿಗೆ ಸ್ಕಂದ ಷಷ್ಟೀ ಅಥವಾ ಸುಬ್ರಾಯ ಷಷ್ಟೀ ಎಂದು ಕರೆಯುತ್ತಾರೆ. ಸ್ಕಂದನ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಬೇಕು ಮತ್ತು ಬ್ರಹ್ಮಚಾರಿಗಳಿಗೆ ಭೋಜನ ಮಾಡಿಸಬೇಕೆಂಬ ವಿಧಿ ಇದೆ. ಅನೇಕ ಸ್ಕಂದಕ್ಷೇತ್ರಗಳಲ್ಲಿ ರಥೋತ್ಸವವೂ ನಡೆಯುತ್ತದೆ.
ಹನುಮಜ್ಜಯಂತಿ
[ಸಂಪಾದಿಸಿ]ಮಾರ್ಗಶೀರ್ಷಮಾಸದ ದ್ವಾದಶಿ ಶ್ರೀರಾಮಭಕ್ತ ಹನುಮಂತ ಜನಿಸಿದ ದಿನ. ಅವನ ಹೆಸರಿನಿಂದ ಈ ಜಯಂತಿ ಆಚರಿಸಲಾಗುತ್ತದೆ. ಹನುಮದ್ವಿಲಾಸ ಹರಿಕಥೆ ನಡೆಸುವುದು ವಿಶೇಷ. ಕೆಲವು ಕಡೆ ರಾಮದೇವರ ಸಂಗಡ ಹನುಮಂತನ ಪಲ್ಲಕ್ಕಿ ಉತ್ಸವವನ್ನೂ ಮಾಡುತ್ತಾರೆ.
ಮಾರ್ಗಶಿರ ಪೂರ್ಣಿಮಾ
[ಸಂಪಾದಿಸಿ]ತ್ರಿಮೂರ್ತಿಗಳು ಅನಸೂಯಾದೇವಿಯ ಪಾತಿವ್ರತ್ಯವನ್ನು ಪರೀಕ್ಷಿಸಿದ ದಿನ. ದೀಪೋತ್ಸವವನ್ನು ಆಚರಿಸುತ್ತಾರೆ. ಹೊತ್ಸಲ ಹುಣ್ಣಿಮೆ ಎಂದು ಪ್ರಸಿದ್ಧಿ.
ಎಳ್ಳಮಾವಾಸ್ಯೆ
[ಸಂಪಾದಿಸಿ]ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇದನ ಮಾಡಿದ ಪರಶುರಾಮ ಮಾತೃಹತ್ಯೆಯ ದೋಷದಿಂದ ಮುಕ್ತನಾದ ದಿನ. ಎಳ್ಳಿನಷ್ಟೂ ಪಾಪವಿಲ್ಲದಂತೆ ತೊಳೆದುಹಾಕುವ ಈ ದಿನ ಸ್ನಾನಕ್ಕೆ ಪ್ರಾಶಸ್ತ್ಯ. ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನ ಮಾಡಬೇಕು. ಅನೇಕ ಕಡೆಗಳಲ್ಲಿ ಜಾತ್ರೆ ನಡೆಯುತ್ತದೆ.
ಧನುರ್ಮಾಸ
[ಸಂಪಾದಿಸಿ]ಸೂರ್ಯದೇವ ವೃಶ್ಚಿಕ ಮಾಸದಂದು ಸಂಕ್ರಮಿಸಿ ಧನುರ್ ರಾಶಿಗೆ ಪ್ರವೇಶ ಮಾಡುವ ದಿನ ಮೊದಲ್ಗೊಂಡು ಆತ ಮಕರಸಂಕ್ರಾಂತಿ ಪ್ರವೇಶಿಸುವವರೆಗೂ ಧನುರ್ಮಾಸವೆನ್ನುತ್ತಾರೆ. ಮಹಾವಿಷ್ಣುವನ್ನು ಸೂರ್ಯೋದಯಕ್ಕೆ ಮುಂಚಿತವಾಗಿಯೇ ಷೋಡಶೋಪಚಾರಗಳಿಂದ ಪುಜಿಸಿ ಹುಗ್ಗಿಯನ್ನು (ಪೊಂಗಲ್)ನೈವೇದ್ಯ ಮಾಡಬೇಕೆಂದು ವಿಧಿ. ತಿಂಗಳಲ್ಲಿ ಪ್ರತಿ ದಿನ ಮಾಡಲು ಅಸಮರ್ಥರಾದವರು ಒಂದು ದಿನವಾದರೂ ಹುಗ್ಗಿ ಮಾಡಿ ದಾನ ಮಾಡಬಹುದು.
ಬನದ ಹುಣ್ಣಿಮೆ
[ಸಂಪಾದಿಸಿ]ಪುಷ್ಯಶುಕ್ಲ ಹುಣ್ಣಿಮೆಗೆ ಬನದ ಹುಣ್ಣಿಮೆ ಎಂದು ಹೆಸರು.
ಮಕರ ಸಂಕ್ರಾಂತಿ
[ಸಂಪಾದಿಸಿ]ಪೊಂಗಲ್ ಎಂದು ಪ್ರಸಿದ್ಧಿ. ಸೂರ್ಯ ಮಕರರಾಶಿಗೆ ಪ್ರವೇಶಿಸುವ ದಿನ. ಉತ್ತರಾಯಣ ಪುಣ್ಯಕಾಲವೆಂದು ಆಚರಣೆಯಲ್ಲಿದೆ. ಎಳ್ಳು ಬೀರುವುದು ವೈಶಿಷ್ಟ್ಯ. ದ್ರಾವಿಡ ಸಂಪ್ರದಾಯಸ್ಥರಿಗೆ ಇದೊಂದು ಸಂಭ್ರಮದ ದಿನ. ಇಂದು ಸ್ವರ್ಗದ ಬಾಗಿಲು ತೆರೆಯುತ್ತದೆಂದು ನಂಬಿಕೆ. ರೈತರಿಗೆ ಇಂದು ಬಿಡುವು. ಜಾನುವಾರುಗಳಿಗೆ ಮೈತೊಳೆದು ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ. ಸಂಜೆ ಉರಿಯುವ ಬೆಂಕಿ ಹಾಯಿಸುತ್ತಾರೆ.
ಪುಷ್ಯ ಬಹುಳ ಅಮಾವಾಸ್ಯೆ
[ಸಂಪಾದಿಸಿ]ದಾಸಶ್ರೇಷ್ಠರಾದ ಪುರಂದರದಾಸರ ಪುಣ್ಯತಿಥಿ. ಪ್ರಸಿದ್ಧ ವಾಗ್ಗೇಯಕಾರರೂ ಭಕ್ತ ಶ್ರೇಷ್ಠರೂ ಆದ ತ್ಯಾಗರಾಜ ಭಾಗವತರ ಆರಾಧನೆಯನ್ನೂ ಈ ದಿನದಲ್ಲಿ ಆಚರಿಸುತ್ತಾರೆ. ಸಂಗೀತ, ಹರಿಕಥೆ ಮುಂತಾದ ಸಾಮೂಹಿಕ ಕಾರ್ಯಕ್ರಮಗಳು ಜರುಗುತ್ತವೆ.
ಶಿಶಿರ ಋತುಮಿನ ಹಬ್ಬಗಳು
[ಸಂಪಾದಿಸಿ]ರಥಸಪ್ತಮೀ
[ಸಂಪಾದಿಸಿ]ಮಾಘಶುಕ್ಲ ಸಪ್ತಮೀ ದಿನದಂದು ಸೂರ್ಯನ ರಥಕ್ಕೆ ಪೂಜೆ. ಅಂಗಳದಲ್ಲಿ ರಂಗವಲ್ಲಿಯಿಂದ ರಥವನ್ನು ಬರೆದು ಪುಜಿಸುತ್ತಾರೆ. ಹಾಲನ್ನು ಉಕ್ಕು ಬರುವಂತೆ ಕಾಯಿಸಿ ಪಾಯಸ ಮಾಡಿ ಸೂರ್ಯನಾರಾಯಣನಿಗೆ ನೈವೇದ್ಯ ಮಾಡುತ್ತಾರೆ. ಎಕ್ಕದ ಎಲೆಯನ್ನು ಧರಿಸಿ ಸ್ನಾನ ಮಾಡುವ ವಿಧಿ ಇದೆ. ವೈವಸ್ವತಮನ್ವಂತರದ ಮೊದಲ ದಿನವಿದು ; ಮನ್ವಾದಿ.
ಮಾಘ ಪೂರ್ಣಿಮೆ
[ಸಂಪಾದಿಸಿ]ಈ ದಿನ ಕೆಲವರು ಕುಲಧರ್ಮವನ್ನು ಆಚರಿಸುತ್ತಾರೆ. ವ್ಯಾಸಪೂಜೆ ನಡೆಯುತ್ತದೆ. ಮಾಘಸ್ನಾನದ ಕೊನೆಯ ದಿನವಿದು. ಅನೇಕ ಕಡೆಗಳಲ್ಲಿ ರಥೋತ್ಸವಗಳು ಜಾತ್ರೆಗಳು ನಡೆಯುತ್ತವೆ.
ಮಹಾಶಿವರಾತ್ರಿ
[ಸಂಪಾದಿಸಿ]ಮಾಘ ಬಹುಳದಲ್ಲಿ ಪ್ರದೋಷ ವ್ಯಾಪಿನಿಯಾದ ಚತುರ್ದಶೀ ದಿವಸ ಶಿವರಾತ್ರಿಯನ್ನು ಆಚರಿಸಬೇಕೆಂದು ಸ್ಮೃತಿಯಲ್ಲಿ ಹೇಳಿದೆ. ಇಂದು ಶೈವರು ಉಪವಾಸವನ್ನಾಚರಿಸಿ ವಿಶೇಷ ಪೂಜಾದಿಗಳನ್ನು ಮಾಡುತ್ತಾರೆ.
- ನ ಸ್ನಾನೇನ ನ ವಸ್ತ್ರೇಣ ನ ಧೂಪೇನ ನ ಚಾರ್ಚಯಾ
- ತುಷ್ಯಾಮಿ ನ ತಥಾ ಪುಷ್ಪೈಃ ಯಥಾ ತತ್ರೋಪವಾಸತಃ
ಎಂಬ ಆರ್ಷ ವಾಕ್ಯಾನುಸಾರ ಈ ದಿನ ಉಪವಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ. ರಾತ್ರಿಯಲ್ಲಿ ಪ್ರತಿ ಯಾಮದಲ್ಲೂ ಬಿಲ್ವಾದಿಗಳಿಂದ ಶಿವನನ್ನು ಪುಜಿಸಬೇಕು. ವೈಷ್ಣವರು ಈ ದಿನ ಹಬ್ಬವನ್ನು ಆಚರಿಸುತ್ತಾರೆ. ಶಿವಮಂದಿರಕ್ಕೆ ಹೋಗಿ ದರ್ಶನ ಮಡಲೇಬೇಕೆಂಬ ವಿಧಿ ಇದೆ. ಜಾಗರಣೆಯನ್ನು ವಿಧಿಸಲಾಗಿದೆ. ಶಿವರಾತ್ರಿಯ ವ್ರತಕಥೆ ಮತ್ತು ಮಹಾತ್ಮ್ಯೆ ಸಾಮಾನ್ಯವಾಗಿ ಎಲ್ಲ ಪುರಾಣಗಳಲ್ಲೂ ಬಂದಿದೆ. ಅನೇಕ ಪುಣ್ಯಸ್ಥಳಗಳಲ್ಲಿ ರಥೋತ್ಸವಗಳೂ ಜಾತ್ರೆಗಳೂ ಜರುಗುತ್ತವೆ.
ಅಮಾವಾಸ್ಯೆ
[ಸಂಪಾದಿಸಿ]ಇಂದು ಶಿವರಾತ್ರಿಯ ಪಾರಣೆ, ರಥೋತ್ಸವ, ದೀಪೋತ್ಸವಾದಿಗಳು ಹಲವು ಶೈವಕ್ಷೇತ್ರಗಳಲ್ಲಿ ನಡೆಯುತ್ತವೆ.
ಕಾಮನ ಪಾಡ್ಯ
[ಸಂಪಾದಿಸಿ]ಫಾಲ್ಗುಣ ಶುಕ್ಲ ಪಾಡ್ಯಮಿ ದಿನವನ್ನು ಕಾಮನ ಪಾಡ್ಯ ಎಂದು ಆಚರಿಸುತ್ತಾರೆ. ಕಾಮನ ಪ್ರತಿಕೃತಿಯನ್ನು ಬರೆದು ಪುಜಿಸಿ ಹಬ್ಬವನ್ನಾಚರಿಸುವ ಸಂಪ್ರದಾಯ ಕೆಲವರಲ್ಲಿದೆ.
ಹೋಳೀಹಬ್ಬ
[ಸಂಪಾದಿಸಿ]ಫಾಲ್ಗುಣ ಶುಕ್ಲಪಕ್ಷದಲ್ಲಿ ಹೋಳೀಹಬ್ಬವನ್ನಾಚರಿಸುತ್ತಾರೆ. ಕಾಮನ ಹಬ್ಬವೆಂದೂ ಇದು ಪ್ರಸಿದ್ಧಿ. ಈ ಎರಡು ಹೆಸರುಗಳಿಗೆ ಎರಡು ಬಗೆಯ ಐತಿಹ್ಯಗಳಿವೆ. ಭಕ್ತಾಗ್ರಣಿಯಾದ ಪ್ರಹ್ಲಾದನಿಗೆ ಹೋಲಿಕಾ ಎಂಬ ರಾಕ್ಷಸಿಯಿಂದ ಹಿಂಸೆಯಾಗುತ್ತಿತ್ತು. ಆಗ ದೈತ್ಯಬಾಲಕರೇ ಅವಳನ್ನು ಅಟ್ಟಿಸಿಕೊಂಡು ಹೋಗಿ ಕೋಲು ಕಟ್ಟಿಗೆಗಳಿಂದ ಬಡಿದು ಸಾಯಿಸಿ, ಮನೆಮನೆಯಿಂದಲೂ ಕಟ್ಟಿಗೆ, ಬೆರಣಿ ಹರಕು ಮುರುಕು ಉರವಲುಗಳನ್ನು ತಂದು ಊರ ಮಧ್ಯದಲ್ಲೇ ಅವಳನ್ನು ಸುಟ್ಟು ಭಸ್ಮ ಮಾಡಿದರೆಂದು ಒಂದು ಸಂಪ್ರದಾಯ ಕಥೆ. ಅದರ ಅನುಕರಣೆಯೇ ಹೋಳೀಹಬ್ಬ.
ತಾರಕಾಸುರನಿಂದ ಪೀಡಿತರಾದ ದೇವತೆಗಳು ಮದನನ್ನು ಪ್ರಾರ್ಥಿಸಿಕೊಂಡು ಸಮಾಧಿಸ್ಥನಾದ ಶಿವನನ್ನು ಎಬ್ಬಿಸಿ ಘೋರತಪಸ್ಸಾಧನೆಯಲ್ಲಿ ತೊಡಗಿದ್ದ ಪಾರ್ವತಿಯ ಕಲ್ಯಾಣ ಮಹೋತ್ಸವಕ್ಕೆ ಸಹಾಯಕನಾಗಲು ಕಳುಹಿಸಿಕೊಟ್ಟರೆಂದೂ ಆಗ ಕಾಮದೇವ ವಸಂತನನ್ನು ಮುಂದಿಟ್ಟುಕೊಂಡು ಕೋಗಿಲೆಯ ಕಲಕಂಠದಿಂದ ಕೇಕೆ ಹಾಕುತ್ತ ಪುಷ್ಟಬಾಣನಾಗಿ ಮೂರುವರೆ ಘಳಿಗೆಯಲ್ಲಿ ಮೂರು ಲೋಕವನ್ನೂ ಗೆದ್ದು ಸಕಲರ ಮನಸ್ಸಿನಲ್ಲೂ ಕಾಮ ಪ್ರಚೋದನೆಯನ್ನು ಉಂಟು ಮಾಡಿ ಮನ್ಮಥನಾದನೆಂದೂ ಹೇಳಲಾಗಿದೆ. ದೇವತೆಗಳ ಒಂದು ಘಟಿ, ಮಾನವ ಮಾನದಂತೆ ಒಂದು ದಿನವಾಗುವುದರಿಂದ ದ್ವಾದಶಿಯಿಂದ ಮೊದಲ್ಗೊಂಡು ಹುಣ್ಣಿಮೆವರೆಗೆ ಈ ಹಬ್ಬವನ್ನು ಆಚರಿಸಲಾಗುವುದು. ಕಾಮನನ್ನು ಸುಂದರವಾದ ರತ್ನಾಭರಣಗಳಿಂದ ಅಲಂಕೃತವಾದ ಪ್ರತಿಮೆಯಲ್ಲಿ ಆವಾಹನ ಮಾಡುತ್ತಾರೆ. ಕಾಮನ ಚಪ್ಪರದಲ್ಲಿ ನೃತ್ಯಗೀತಾದಿಗಳೂ ನಡೆಯುತ್ತವೆ. ಅಂದಿನ ನಡೆವಳಿಕೆಯಲ್ಲಿ ಸ್ವಲ್ಪ ಉಚ್ಛೃಂಖಲ ಪ್ರವೃತ್ತಿ ತೋರಿಬರುವುದೂ ಉಂಟು. ಹುಣ್ಣಿಮೆಯ ದಿನ ದಿಗ್ವಿಜಯೋತ್ಸವ ಸಂಕೇತವಾಗಿ ರಂಗಿನ ಓಕಳಿಯನ್ನಾಡುತ್ತಾರೆ. ಬಡವಬಲ್ಲಿದನೆಂಬ ಭೇದ ಭಾವವನ್ನು ತೊರೆದು ಹಬ್ಬವನ್ನಾಚರಿಸುವುದೂ ಉಂಟು. ಕಾಮದೇವನ ಈ ಎಲ್ಲ ಉಪಟಳದಿಂದಲೂ ಪುಷ್ಪ ಬಾಣ ಪ್ರಯೋಗದಿಂದಲೂ ವಿಚಲಿತನಾಗಿ ಮಹಾದೇವ ಮೂರನೆಯ ಕಣ್ತೆರೆದು ನೋಡಿದಾಗ ಕಾಮದೇವ ಸುಟ್ಟು ಬೂದಿಯಾದನಾದ್ದರಿಂದ ಮೆರವಣಿಗೆಯ ಅನಂತರ ಕಾಮನನ್ನು ದಹಿಸುವುದು ರೂಢಿಗೆ ಬಂದಿದೆ. ಆಗ ರತಿ ಬಂದು ಶೋಕಾರ್ತಳಾಗಿ ಶಿವನನ್ನು ಪ್ರಾರ್ಥಿಸಿದ್ದರಿಂದಲೂ ದೇವತೆಗಳು ಬಂದು ಕ್ಷಮಾಯಾಚನೆ ಮಾಡಿ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದರಿಂದಲೂ ಆಶುತೋಷನಾದ ಶಿವ ಸಂತೃಪ್ತಿಯಿಂದ ಕಾಮನನ್ನು ಬದುಕಿಸಿದನಲ್ಲದೆ ರತಿಗೆ ಶಾಶ್ವತ ಸೌಭಾಗ್ಯವನ್ನು ಕರುಣಿಸಿದ. ಅಂದಿನಿಂದ ಕಾಮ ಅನಂಗನಾದ. ಆ ನೆನಪಿಗಾಗಿ ಜನ ಆನಂದದಿಂದ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ನಕ್ಕುನಲಿಯುತ್ತಾರೆ. ಈ ಹಬ್ಬಕ್ಕೆ ಮದನೋತ್ಸವವೆಂದೂ ಹೆಸರು. ಸಾಮಾಜಿಕ ಹಬ್ಬಗಳಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದೆ. ಸಕಲ ಕಲೆಗಳಿಗೂ ಇದರಲ್ಲಿ ಅವಕಾಶವಿದೆ. (ಎಂ.ಕೆ.ಬಿ.ಆರ್.)