ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಮಟ

ವಿಕಿಸೋರ್ಸ್ದಿಂದ

ಕುಮಟ  

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆ ತಾಲ್ಲೂಕಿನ ಮುಖ್ಯ ಪಟ್ಟಣ. ಕುಮಟ ತಾಲ್ಲೂಕು ಉ.ಅ. 14ಲಿ21' ನಿಂದ ಉ.ಅ. 14ಲಿ 37' ವರೆಗೂ ಪೂ.ರೇ. 74ಲಿ 20' ನಿಂದ 74ಲಿ 44' ವರೆಗೂ ಹಬ್ಬಿದೆ. ವಿಸ್ತೀರ್ಣ 235 ಚ.ಮೈ. ಜನಸಂಖ್ಯೆ 1,45,772 (2001) ತಾಲ್ಲೂಕಿನಲ್ಲಿ 112 ಹಳ್ಳಿಗಳಿವೆ. ಕುಮಟ, ಗೋಕರ್ಣ-ಇವು ಪಟ್ಟಣಗಳು. ಬಂಡೆಕಲ್ಲುಗಳಿಂದ ಕೂಡಿದ ಕೆಲವುಬೆಟ್ಟಗಳೂ ಕೆಲವು ಸಣ್ಣಪುಟ್ಟ ಅಳಿವೆ ಕೋಡಿಗಳೂ ಇರುವ ಈ ತಾಲ್ಲೂಕಿನ ಅಗಲ ಸು. 10-12 ಮೈ. ಗಂಗಾವಳಿ ನದಿಯ ದಕ್ಷಿಣಕ್ಕಿರುವ ಈ ತಾಲ್ಲೂಕಿನ ತೀರಭಾಗ ಮರಳಿನಿಂದ ಕೊಡಿದೆ. ಒಳಭಾಗದಲ್ಲಿ ಗೋಡು ಅಥವಾ ಮರಳು ಗೋಡುಮಣ್ಣು ಸಾಮಾನ್ಯ. ಈ ತಾಲ್ಲೂಕಿನ ವಾರ್ಷಿಕ ಮಳೆ ಸು. 150”. ತಾಲ್ಲೂಕಿಗೆ ಹಿನ್ನೆಲೆಯಂತಿರುವ ಪಶ್ಚಿಮ ಘಟ್ಟದ ಮೇಲೆ ದಟ್ಟವಾದ ಕಾಡುಗಳು ಬೆಳೆದಿವೆ. ಬತ್ತ, ತೆಂಗು, ಅಡಕೆ, ಮೆಣಸು, ಕಬ್ಬು-ಇವು ಈ ತಾಲ್ಲೂಕಿನ ಬೆಳೆಗಳು.

 ಕುಮಟ ಪಟ್ಟಣ ಕಾರವಾರದಿಂದ 40 ಮೈ. ದಕ್ಷಿಣಕ್ಕೆ, ಹೊನ್ನಾವರದಿಂದ 10 ಮೈ. ಉತ್ತರಕ್ಕೆ ಇದೆ. ಜನಸಂಖ್ಯೆ 34,498 (2001). ಇದೊಂದು ರೇವುಪಟ್ಟಣ. ಸಮುದ್ರಯಾನ ಮಾಡುವವರ ನೆರವಿಗಾಗಿ ಇಲ್ಲೊಂದು ದೀಪಸ್ತಂಭವಿದೆ. ಕುಂಭೇಶ್ವರ ದೇವಾಲಯದಿಂದಾಗಿ ಇದನ್ನು ಕುಂಬಟುಂ ಎಂದು ಕರೆಯುತ್ತಿದ್ದುದಾಗಿಯೂ ಅದರಿಂದ ಕುಮಟವೆಂಬ ಹೆಸರು ಬಂತೆಂದೂ ಹೇಳಲಾಗಿದೆ. 19ನೆಯ ಶತಮಾನದಲ್ಲಿ ದಕ್ಷಿಣ ಮಹಾರಾಷ್ಟ್ರ ಮತ್ತು ಬಳ್ಳಾರಿ ಪ್ರದೇಶಗಳಿಂದ ಹತ್ತಿಯನ್ನು ಇಲ್ಲಿಗೆ ತಂದು ಇಲ್ಲಿಂದ ಮುಂಬಯಿಗೆ ಕಳುಹಿಸಲಾಗುತ್ತಿತ್ತು. ಇದು ಹಿಂದೆ ಜೈನ ಕೇಂದ್ರವಾಗಿತ್ತು. ಈಗಲೂ ಇಲ್ಲಿ ಅನೇಕ ಜೈನ ಬಸದಿಗಳಿವೆ. ಪೋರ್ಚುಗೀಸರು ಇಲ್ಲಿಯ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ. ಟಿಪ್ಪು ಈ ಪಟ್ಟಣದ ಮೇಲೆ ಎರಡು ಸಾರಿ ಆಕ್ರಮಣ ನಡೆಸಿದ್ದ. ಕುಮಟ ಒಂದು ವ್ಯಾಪಾರ ಕೇಂದ್ರ. ಅನೇಕ ರಸ್ತೆಗಳ ಸಂಧಿಸ್ಧಳ. ಇಲ್ಲಿಂದ ಕಾರವಾರ, ಭಟ್ಕಳ, ಯಲ್ಲಾಪುರ, ಶಿರಸಿ, ಶಿವಮೊಗ್ಗಗಳಿಗೆ ರಸ್ತೆಗಳಿವೆ. ಗಂಧದ ಕುಸುರಿ ಕೆಲಸಕ್ಕೆ ಈ ಪಟ್ಟಣ ಪ್ರಸಿದ್ಧವಾಗಿದೆ. ಮೀನುಗಾರಿಕೆ ಒಂದು ಕಸಬು. ಇಲ್ಲಿ ತಾಲ್ಲೂಕು ಕಚೇರಿ, ಅಸ್ಪತ್ರೆ ಮತ್ತು ಶಾಲಾಕಾಲೇಜುಗಳಿವೆ. 

      

(ಎ.ಕೆ.)