ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರಕೃತಿಗೋಚರಾನುಭವವಾದ
ಪ್ರಕೃತಿಗೋಚರಾನುಭವವಾದ- ಬಾಹ್ಯ ವಿಶ್ವದ ಹಾಗೂ ಪದಾರ್ಥಗಳ ಪ್ರತ್ಯಕ್ಷಜ್ಞಾನವನ್ನು ಕುರಿತ ತತ್ವಶಾಸ್ತ್ರೀಯ ವಾದಗಳಲ್ಲಿ ಇದೂ ಒಂದು (ಫಿನಾಮೆನಾಲಿಸಂ). ಪದಾರ್ಥಗಳ ಪ್ರತ್ಯಕ್ಷಜ್ಞಾನವೆಂದರೆ ಸಾಮಾನ್ಯರು ಭಾವಿಸುವಂತೆ ಬಾಹ್ಯಜಗತ್ತಿನಲ್ಲಿ ಸ್ವತಂತ್ರ ಅಸ್ತಿತ್ವವನ್ನುಳ್ಳ ಪದಾರ್ಥಗಳ ಪರಿಜ್ಞಾನವೆಂದು ಈ ವಾದ ಒಪ್ಪುವುದಿಲ್ಲ. ಪ್ರಕೃತಿಯಲ್ಲಿರುವ ವಸ್ತುಗಳ ಅನುಭವವಷ್ಟೇ ನಮ್ಮ ಇಂದ್ರಿಯಗಳ ಮೂಲಕ ನಮಗೆ ಜ್ಞಾನವೆನಿಸುತ್ತದೆಂದು ಈ ವಾದ ಹೇಳುತ್ತದೆ. ಪ್ರಕೃತಿಯಲ್ಲಿಯ ಬೆಟ್ಟ, ಗುಡ್ಡ, ಮನೆ - ಮುಂತಾದವು ಒಂದೇ ಎನಿಸಿದರೂ ನೋಡುವವರು ಬೇರೆ ಬೇರೆಯಾದಂತೆಲ್ಲ ಅವರವರ ಪ್ರತ್ಯಕ್ಷ ಕಾಲದಲ್ಲಿ ಅವರವರು ಗ್ರಹಿಸುವ ಇವುಗಳ ಅನುಭವಾಂಶ ವೈಯಕ್ತಿಕವೂ ಆಗಿರುವುದೆಂದಾಯಿತು. ಹಾಗಾದರೆ ಬಾಹ್ಯ ವಸ್ತುಗಳ ಜ್ಞಾನವೆಂಬುದೊಂದು ಬೇರೆ ಇರುವುದೇ ಅಶಕ್ಯ : ಸಾಮಾನ್ಯಜನ ಜ್ಞಾನ ಕಾರಣವನ್ನೇ ಜ್ಞಾನವೆಂದು ಭ್ರಮಿಸುವರೆನ್ನಬೇಕು. ಇದೂ ಅಷ್ಟೊಂದು ಸಮಂಜಸವೆನಿಸದು. ಆದ್ದರಿಂದ ಬಾಹ್ಯ ವಸ್ತುಗಳ ಸ್ವರೂಪನಿರ್ಣಯಕ್ಕೆ ಬೇರೊಂದು ರೀತಿಯ ಉಪಪತ್ತಿಯನ್ನು ಕಲ್ಪಿಸಲು ಈ ವಾದ ಹೊರಟಿದೆ. (ನೋಡಿ : ಫಿನಾಮೆನಾಲಜಿ).
ನಮ್ಮ ಜ್ಞಾನ ಅಥವಾ ಅನುಭವಕ್ಕೆ ವಸ್ತುಗಳ ತತ್ಕಾಲೀನ ಅಥವಾ ಇಂದ್ರಿಯ ಗೋಚರ ಅಂಶಗಳಷ್ಟೇ ವಿಷಯವೆನ್ನಲಾಗದು : ಅವುಗಳಲ್ಲದೆ ಆ ವಸ್ತುಗಳಲ್ಲಿ ನಮ್ಮ ಇಂದ್ರಿಯ ಗೋಚರವಾಗಬಹುದಾದ ಎಷ್ಟೊಂದು ಅಂಶಗಳಿರುವುವೊ ಅವೆಲ್ಲವುಗಳ ಸಮಷ್ಟಿಯನ್ನು ಮಾತ್ರ ವಿಷಯವೆಂದು ಭಾವಿಸಬೇಕು. ಹೀಗೆ ಒಪ್ಪಿದರೆ ಚಾಕ್ಷುಷ ಪ್ರತ್ಯಕ್ಷದಲ್ಲಿ ಜನ ಕೇವಲ ತಮ್ಮ ವೈಯಕ್ತಿಕ ಅಥವಾ ಕಲ್ಪಿತ ಇಂದ್ರಿಯಗೋಚರ ಅನುಭವವಷ್ಟನ್ನೆ ಗ್ರಹಿಸುವುರೆಂದಾಗಲಿ, ಅದಕ್ಕೂ ಆಚೆ ಬಾಹ್ಯವಿಶ್ವದಲ್ಲಿ ವಾಸ್ತವಿಕ ಸತ್ತೆಯಿರುವ ಬೇರೆ ಪದಾರ್ಥಗಳಿರುವವೆಂದಾಗಲಿ ಹೇಳುವ ತೊಂದರೆ ಏಳುವುದಿಲ್ಲ. ಅದು ನಿಜವೇ ಎನ್ನುವ ಪಕ್ಷವನ್ನೊಪ್ಪಿದರೆ ಎಂದೂ ಬಾಹ್ಯಪದಾರ್ಥಗಳ ಸ್ವಸ್ವರೂಪ ಜ್ಞಾನವಿಷಯವೇ ಆಗುವ ಶಕ್ಯತೆಯಿಲ್ಲ. ಆದ್ದರಿಂದ ಭೌತಿಕ ಪದಾರ್ಥಗಳ ಬಗೆಗೆ ತತ್ವಶಾಸ್ತ್ರದಲ್ಲಿ ವ್ಯವಹರಿಸುವಾಗ ಅವು ನಮ್ಮಲ್ಲಿ ಉಂಟುಮಾಡಬಹುದಾದ ಸಕಲ ಇಂದ್ರಿಯಗೋಚರಾಂಶಗಳ ಸಮಷ್ಟಿಯನ್ನೂ ಪರಿಗಣಿಸಬೇಕೆಂಬುದೇ ಈ ಪ್ರಕೃತಿ ಗೋಚರಾನುಭವವಾದದ ತಿರುಳು. ಒಮ್ಮೊಮ್ಮೆ ಕೆಲವಂಶಗಳಷ್ಟೆ ಅನುಭವ ವಿಷಯವಾಗುತ್ತಿದ್ದರೂ ಮಿಕ್ಕ ಅಂಶಗಳೂ ಮತ್ತೊಮ್ಮೆ ಅನುಭವವಿಷಯವಾಗುವ ಸಾಧ್ಯತೆಯಿದ್ದೇ ಇರುತ್ತದೆ. ಇದು ನಮ್ಮ ವ್ಯಾವಹಾರಿಕ ಭಾಷೆಯನ್ನು ತಾರ್ಕಿಕವಾಗಿ ವಿಭಜಿಸಿದಾಗ ಒಡೆದು ಕಾಣುತ್ತದೆ. ಮೇಜಿನ ಮೇಲೆ ಪುಸ್ತಕವಿದೆ ಎಂಬ ವಾಕ್ಯವನ್ನು ಹೀಗೆ ವಿವರಿಸಿದರೆ - ನನಗೆ 'ಅಬಕ ಇಂದ್ರಿಯಾನುಭವವಾಗುತ್ತಿದೆ - ಎಂದು ಆಗುತ್ತದೆ. 'ಅಬಕ ಎಂಬುದನ್ನು ಮತ್ತೂ ವಿವರಿಸುವುದಾದರೆ - ಒಂದು ಸಮತಲ ಕಂದು ಬಣ್ಣದ ಪ್ರದೇಶದ ಮೇಲೆ ಘನಾಕೃತಿಯ ಕೆಂಬಣ್ಣದ ಚೌಕಾನೋನಾಕೃತಿ ಎನ್ನಬಹುದು. ಹ್ಯೂಮ್, ಮಿಲ್ ಮತ್ತು ಬರ್ಟ್‍ರಂಡ್ (ರಸ್ಸಲ್) ಈ ವಾದದ ಪುರಸ್ಕರ್ತರು. (ಕೆ.ಕೆ.)