ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೊಡ್ಡು ಈಚಲು

ವಿಕಿಸೋರ್ಸ್ದಿಂದ
ಗೊಡ್ಡು ಈಚಲು

ಜಿಮ್ನೋಸ್ಪರ್ಮೀ (ನಗ್ನಬೀಜೀ) ವರ್ಗ, ಸೈಕಡೇಲೀಸ್ ಗಣ, ಸೈಕಡೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಮಂಡೀಚಲು ಇದರ ಪರ್ಯಾಯ ನಾಮ. ಸೈಕ್ಯಾಸ್ ವೈಜ್ಞಾನಿಕ ಹೆಸರು. ಪ್ರಪಂಚದ ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಹಬ್ಬಿರುವ ಸುಮಾರು 20 ಪ್ರಭೇದಗಳನ್ನು ಇದು ಒಳಗೊಂಡಿದೆ. ಭಾರತದಲ್ಲಿ ಸರ್ಸಿನ್ಯಾಲಿಸ್, ರೆವಲ್ಯೂಟ, ರಂಫಿಯೈ, ಪೆಕ್ಟಿನೇಟ ಮತ್ತು ಬೆಡೋಮಿಯೈ ಎಂಬ 5 ಪ್ರಭೇದಗಳು ಕಾಣ ದೊರೆಯುತ್ತವೆ. ಇವುಗಳ ಪೈಕಿ ರೆವಲ್ಯೂಟ ಮತ್ತು ರಂಫಿಯೈಗಳನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಲಾಗಿದೆ. ಇವು ಕ್ರಮವಾಗಿ ಜಪಾನ್ ಮತ್ತು ಮಲಕ್ಕಗಳ ಮೂಲವಾಸಿಗಳು. ಉಳಿದ ಪ್ರಭೇದಗಳು ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ.


ಗೊಡ್ಡು ಈಚಲು ಹೊರನೋಟಕ್ಕೆ ಹೆಚ್ಚು ಕಡಿಮೆ ಈಚಲು ಮರದಂತೆಯೇ ಕಾಣುತ್ತದೆ. ಇದರ ಎತ್ತರ ಸಾಮಾನ್ಯವಾಗಿ 2ಮೀ ಗಳಿಗೆ ಮೀರದು. ಆದರೂ ಅಪರೂಪಕ್ಕೆ 6 ಮೀ ಎತ್ತರಕ್ಕೂ ಬೆಳೆಯುವುದುಂಟು. ಈಚಲು, ತೆಂಗು ಮುಂತಾದವುಗಳಂತೆ ಇದರಲ್ಲೂ ಕವಲೊಡೆಯದ ಮುಖ್ಯ ಕಾಂಡವೊಂದಿದ್ದು ಅದರ ತುದಿಯಲ್ಲಿ ಎಲೆಗಳ ಕಿರೀಟವೊಂದಿದೆ. ಕಾಂಡ ಅಪುರ್ವವಾಗಿ ಕವಲೊಡೆಯುವು ದುಂಟು. ಎಲೆಗಳು ಸಂಯುಕ್ತ ಮಾದರಿಯವು; ಹೆಚ್ಚುಕಡಿಮೆ ಈಚಲು ಗರಿಗಳಂತೆ ಕಾಣುತ್ತವೆ. ಅವುಗಳಂತೆಯೆ ಆಗಾಗ್ಗೆ ಬಿದ್ದುಹೋಗುವ ಇವುಗಳ ಬುಡಭಾಗ ಮಾತ್ರ ಕಾಂಡದ ಮೇಲೆ ಬಹಳ ಕಾಲ ಉಳಿದಿರುತ್ತದೆ. ಗೊಡ್ಡು ಈಚಲಿನ ಕೆಲವು ಬೇರುಗಳು ಭೂಮಿಯಿಂದ ಮೇಲಕ್ಕೆ ಕವಲೊಡೆದು ಬೆಳೆದು ಅಗಲಿಸಿದ ಕೈ ಬೆರಳುಗಳಂತೆ ಕಾಣುತ್ತವೆ. ಇವಕ್ಕೆ ಕಾರಲಾಯಿಡ್ ಬೇರುಗಳೆಂದು ಹೆಸರು.


ಗೊಡ್ಡು ಈಚಲು ಭಿನ್ನಲಿಂಗಿ. ಗಂಡು ಮತ್ತು ಹೆಣ್ಣು ಲಿಂಗಾಂಗಗಳು ಶಂಕು (ಕೋನ್) ಇಲ್ಲವೆ ಸ್ಟ್ರೊಬೈಲಸ್ ಎಂದು ಕರೆಯಲಾಗುವ ರಚನೆಗಳಲ್ಲಿ ಸ್ಥಿತವಾಗಿವೆ. ಗಂಡು ಶಂಕು ಸುಮಾರು 1/3 ಮೀ ಉದ್ದವಿದ್ದು ಅನೇಕ ಸೂಕ್ಷ್ಮಬೀಜಾಣುಪತ್ರಗಳನ್ನು (ಮೈಕ್ರೋಸ್ಪೋರೋಫಿಲ್ಸ್‌) ಒಳಗೊಂಡಿದೆ. ಶಂಕುವಿನ ಕೇಂದ್ರ ಅಕ್ಷದ ಮೇಲೆ ಒತ್ತಾಗಿ ಜೋಡಣೆಗೊಂಡಿರುವ ಮತ್ತು ಕ್ಷೀಣಿಸಿದ ಪತ್ರಗಳಂತಿರುವ ಇವುಗಳಲ್ಲಿ ಒಂದೊಂದರಲ್ಲೂ ಕಿರಿದಾದ ಬುಡಭಾಗ ಮತ್ತು ಅಗಲವಾದ ಮುಂಭಾಗಗಳನ್ನು ಗುರುತಿಸಬಹುದು. ಅಲ್ಲದೆ ಇವುಗಳ ತುದಿ ಮುಳ್ಳಿನಂತಾಗಿ ಮೇಲ್ಮುಖವಾಗಿ ಬಾಗಿದೆ. ಪ್ರತಿ ಬೀಜಾಣುಪತ್ರದ ಕೆಳಮೈ ಮೇಲೆ ಅಸಂಖ್ಯಾತ ಪರಾಗ ಚೀಲಗಳಿವೆ. ಇವುಗಳಲ್ಲಿ ಪರಾಗ ಉತ್ಪತ್ತಿಯಾಗುತ್ತದೆ. ಹೆಣ್ಣು ಶಂಕುವಿನಲ್ಲಿಯೂ ಅನೇಕ ಬೀಜಾಣು ಪತ್ರಗಳಿವೆ. ಇವು ಗಾತ್ರದಲ್ಲಿ ಸೂಕ್ಷ್ಮಬೀಜಾಣು ಪತ್ರಗಳಿಗಿಂತ ದೊಡ್ಡವು. ಇವುಗಳ ಸಂಖ್ಯೆಯೂ ಕಡಿಮೆ. ಅಲ್ಲದೆ ಇವು ಅಳ್ಳಕವಾಗಿ ಜೋಡಣೆಗೊಂಡಿವೆ. ಇದಕ್ಕೆ ಸ್ಥೂಲಬೀಜಾಣು ಪತ್ರಗಳೆಂದು (ಮೆಗಸ್ಪೋರೋಫಿಲ್ಸ್‌) ಹೆಸರು. ಒಂದೊಂದು ಪತ್ರದ ಎರಡು ಅಂಚುಗಳಲ್ಲೂ 2-3 ಜೊತೆ ಅಂಡಕಗಳು (ಓವ್ಯೂಲ್ಸ್‌) ಇವೆ. ಮುಂದೆ ಪರಾಗಸ್ಪರ್ಶ ಕ್ರಿಯೆ ಮತ್ತು ನಿಷೇಚನಗಳು ಪುರ್ಣಗೊಂಡ ಮೇಲೆ ಅಂಡಕಗಳು ಬೀಜಗಳಾಗಿ ಬೆಳೆಯುತ್ತವೆ. ಗೊಡ್ಡು ಈಚಲಿನ ಬೀಜಗಳು ಯಾವ ಬಗೆಯ ಹೊದಿಕೆಯಿಂದಲೂ ಆವೃತವಾಗಿಲ್ಲ. ಇದರಿಂದಲೇ ಇದೊಂದು ನಗ್ನಬೀಜೀಸಸ್ಯ ಅನ್ನಿಸಿಕೊಂಡಿದೆ.


ಗೊಡ್ಡು ಈಚಲು ಹಲವಾರು ಬಗೆಗಳಲ್ಲಿ ಉಪಯುಕ್ತವೆನಿಸಿದೆ. ಇದರ ಎಲೆಗಳು ಬಹುಕಾಲ ಹಸಿರಾಗಿ ಉಳಿಯುವುದರಿಂದ ಅಲಂಕಾರಕ್ಕಾಗಿ ಬಳಸುವುದುಂಟು. ಸರ್ಸಿನ್ಯಾಲಿಸ್ ಮತ್ತು ರೆವಲ್ಯೂಟ ಪ್ರಭೇದಗಳ ಕಾಂಡದ ತಿರುಳಿನಿಂದ ಪಿಷ್ಟವನ್ನು ತೆಗೆದು ಸಬ್ಬಕ್ಕಿಯನ್ನು (ಸೇಗೊ) ತಯಾರುಮಾಡುತ್ತಾರೆ. ಗೊಡ್ಡು ಈಚಲಿನ ಎಳೆಯ ಚಿಗುರೆಲೆ ಮತ್ತು ಮೊಗ್ಗುಗಳನ್ನು ಕೆಲವು ಕಡೆ ತರಕಾರಿಯಂತೆ ಬಳಸುವುದೂ ಉಂಟು. ಜಪಾನಿನಲ್ಲಿ ಇದರ ಕಾಂಡ ಮತ್ತು ಬೀಜಗಳ ಸಾರದಿಂದ ವಿಶಿಷ್ಟ ಬಗೆಯ ಮದ್ಯವೊಂದನ್ನು ತಯಾರಿಸುವುದುಂಟು. ಭಾರತದಲ್ಲಿ ಕೆಲವು ತಳಿಗಳ ಗಂಡು ಶಂಕುವಿನ ಹುರುಪೆಗಳನ್ನು ಉತ್ತೇಜಕ ಮತ್ತು ಕಾಮೋತ್ತೇಜಕವಾಗಿಯೂ ಮೂತ್ರಪಿಂಡ ಸಂಬಂಧಿ ನೋವುಗಳ ನಿವಾರಕವಾಗಿಯೂ ಉಪಯೋಗಿಸುತ್ತಾರೆ. ಇಂಡೊನೇಷ್ಯದಲ್ಲಿ ಕಾಂಡ ಮತ್ತು ಎಲೆಗಳಿಂದ ಪೊರಕೆ, ಬುಟ್ಟಿ ಮುಂತಾದವನ್ನು ತಯಾರಿಸುತ್ತಾರೆ. ಗುಡಿಸಲುಗಳಿಗೆ ಹೊದಿಸುವ ಗರಿಗಳನ್ನು ಮಾಡಲು ಬಳಸುವುದಲ್ಲದೆ ಎಲೆಗಳಿಂದ ನಾರನ್ನು ತೆಗೆದು ಬಟ್ಟೆ, ಹಗ್ಗ, ಹುರಿ ಇತ್ಯಾದಿಗಳ ತಯಾರಿಕೆಗೆ ಉಪಯೋಗಿಸುತ್ತಾರೆ.