ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೌಜಲು ಮರ

ವಿಕಿಸೋರ್ಸ್ದಿಂದ

ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕವುಲುಮರ, ದದ್ದಾಲ, ಹೆಣ್ಣುಮತ್ತಿ ಪರ್ಯಾಯನಾಮಗಳು. ಕ್ಯಾರಿಯ ಆರ್ಬೋರಿಯ ಇದರ ಶಾಸ್ತ್ರೀಯ ಹೆಸರು. ಇದು ಭಾರತದ ಮೂಲನಿವಾಸಿ. ಭಾರತಾದ್ಯಂತ ಮತ್ತು ಮಲಯ, ಇಂಡೋಚೀನ ಮುಂತಾದೆಡೆಗಳಲ್ಲೆಲ್ಲ ಇದು ಹರಡಿದೆ. ಸಮುದ್ರಮಟ್ಟದಿಂದ ಹಿಡಿದು 1500 ಮೀ ಎತ್ತರದ ಬೆಟ್ಟ ಪ್ರದೇಶಗಳವರೆಗೂ ಇದರ ವ್ಯಾಪ್ತಿ ಉಂಟು. 10-20 ಮೀ ಎತ್ತರಕ್ಕೆ ಬೆಳೆಯುವ ಮರವಿದು. ಇದರ ಚೌಬೀನೆ ಗಡುಸಾಗಿಯೂ ಭಾರವಾಗಿಯೂ ಬಲವಾಗಿಯೂ ಉಂಟು. ಬಹುಕಾಲ ನೀರಿನ ಸಂಪರ್ಕವಿದ್ದರೂ ಕೆಡದು. ಆದರೆ ಬೇಗ ಸೀಳುವುದರಿಂದ ಮತ್ತು ಬಾಗುವುದರಿಂದ ಅಷ್ಟಾಗಿ ಉಪಯೋಗದಲ್ಲಿಲ್ಲ. ಇದನ್ನು ಗರಗಸದಿಂದ ಕೊಯ್ಯುವುದೂ ಕಷ್ಟ. ಆದರೂ ಸೂಕ್ತರೀತಿಯಲ್ಲಿ ಸಂಸ್ಕರಿಸುವುದರಿಂದ ಇದನ್ನು ಕೃಷಿ ಉಪಕರಣಗಳು, ಹಲಗೆಗಳು, ರೈಲ್ವೆ ಸ್ಲೀಪರುಗಳು, ಬಂದೂಕದ ಹಿಡಿಗಳು, ತೊಲೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸಬಹುದು. ತೊಗಟೆಯಿಂದ ಒರಟಾದ ಹಗ್ಗ ಮತ್ತು ಕಂದುಬಣ್ಣದ ಕಾಗದ ಮುಂತಾದವನ್ನು ತಯಾರಿಸುವುದಿದೆ. ತೊಗಟೆಗೆ ಔಷಧೀಯ ಗುಣಗಳೂ ಉಂಟು. ಇದನ್ನು ಕೆಮ್ಮು, ಶೀತ, ಜ್ವರ, ಸಿಡುಬು ಮುಂತಾದ ಬೇನೆಗಳಲ್ಲಿ ಶಾಮಕ ಔಷಧಿಯಾಗಿ ಬಳಸುತ್ತಾರೆ. ಹಣ್ಣಿನ ಕಷಾಯವನ್ನು ಪಚನಕ್ರಿಯೆಯನ್ನು ಹೆಚ್ಚಿಸುವುದಕ್ಕೂ ಎಲೆಗಳನ್ನು ವ್ರಣಗಳ ನಿವಾರಣೆಗೂ ಬಳಸುವುದಿದೆ.