ಪುಟ:ಕರ್ನಾಟಕ ಗತವೈಭವ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೫೪

ಕರ್ನಾಟಕ-ಗತವೈಭವ.


ಸಾಮಾನುಗಳನ್ನೂ ಕಲ್ಲಿಗೆ ಒತ್ತಿ ತಿಕ್ಕಬಾರದು, ಅಕ್ಷರಗಳು ನೆಟ್ಟಗೆ ಕಾಣಿಸಬೇಕೆಂದು ಕಲ್ಲಿಗೆ ಮಸಿ ಹಚ್ಚಿ ಕಪ್ಪು ಮಾಡಬಾರದು. ಇದರಿಂದ ಅಕ್ಷರಗಳು ತಿಳಿಯುವುವೆಂದು ನಿಮಗೆ ಮೊದಲು ತೋರಿದರೂ ಅದು ಕಲ್ಲನ್ನು ಕೆಡಿಸಿ ಬಿಡುವುದಲ್ಲದೆ, ಮುಂದೆ, ನೋಡುವವರಿಗೂ ತೊಂದರೆಯುಂಟುಮಾಡಿದಂತಾಗುತ್ತದೆ.

(೨) ಪ್ರಥಮತಃ ವೃತ್ತ ಪತ್ರಿಕೆಗಳಿಗೆ ಬಳಸುವ ಉತ್ತಮತರದ ಕಾಗದವನ್ನು ತೆಗೆದುಕೊಂಡು ಅದನ್ನು ಕೆಲವು ನಿಮಿಷ ನೀರಿನಲ್ಲಿ ತೊಯಿಸಬೇಕು, ಹುರುಬರಕಾದ ಲಿಪಿಗಳಿಗೆ ದೇಶೀಯ ಕಾಗದಗಳನ್ನು ಬಳಸಬೇಕು. ಆ ಕಾಗದವನ್ನು ನೀರಿನಲ್ಲಿ ತೊಯಿಸಲೇ ಬೇಕು, ಫೂಲಸ್ಕೇಪ ಕಾಗದಗಳು ಸಾಮಾನ್ಯವಾಗಿ ಎಲ್ಲ ತರದ ಲಿಪಿಕಲ್ಲುಗಳಿಗೂ ಉಪಯೋಗಕ್ಕೆ ಬರುತ್ತವೆ.

(೩) ಆ ತೊಯಿಸಿದ ಕಾಗದವನ್ನು, ಅತ್ತಿತ್ತ ಸರಿದಾಡದಂತೆ ಒಂದೇ ಸಮನಾಗಿ ಆ ಲಿಪಿಗಲ್ಲಿನ ಮೇಲೆ ಇಡಬೇಕು. ನಡನಡುವೆ ಮಡಿಕೆ ಬೀಳಗೊಡ ಬಾರದು. ಆ ತೊಯಿಸಿದ ಪತ್ರವು ಆಗ ಕಲ್ಲಿಗೆ ಅಂಟಿಕೊಳ್ಳುವುದು.

(೪) ಕೂಡಲೇ, ಬಿರುಸಾದ ಕುಂಚನ್ನಾದರೂ ವಸ್ತ್ರವನ್ನಾದರೂ ತೆಗೆದುಕೂಂಡು ಗಾಳಿಯಿಂದ ಹಾರದೆ ಕಾಗದವು ಕಲ್ಲಿಗೆ ಅಚ್ಚುಕಟ್ಟಾಗಿ ಹತ್ತಿಕೊಳ್ಳುವಂತೆ ಮೆಲ್ಲಗೆ ಜಾಣತನದಿಂದ ಒತ್ತಬೇಕು. ಆ ಕಾಗದವೆಲ್ಲ ಸಂದಿಗೊಂದಿ ಸಹ ಬಿಡದಂತೆ ಕಲ್ಲಿಗೆ ಸರಿಯಾಗುವಂತೆ ಹಗುರಾಗಿ ಒತ್ತುತ್ತಿರಬೇಕು, ಅಕ್ಷರಗಳು ಆಳವಾಗಿ ಕೊರೆಯಲ್ಪಟ್ಟಿದ್ದರೆ ಅಥವಾ ಮೇಲ್ಬದಿಯು ಡೊಂಕಾಗಿದ್ದರೆ ಕಾಗದಕ್ಕೆ ಅನೇಕ ಕಡೆಗೆ ರಂಧ್ರಗಳು ಬೀಳುವುವು. ಹೀಗಾದ ಪಕ್ಷಕ್ಕೆ, ಆ ಕಾಗದದ ಮೇಲೆ ಮತ್ತೊಂದು, ಅದೂ ಹರಿಯ ಹತ್ತಿದರೆ ಮತ್ತೂ ಒಂದು ಕಾಗದವನ್ನು ಮೊದಲಿನಂತೆಯೇ ತೊಯಿಸಿ ಹಾಕಿ ಒತ್ತಬೇಕು.

(೫) ಒತ್ತುವ ಕ್ರಮವು ಮುಗಿದೊಡನೆಯೇ ಕಾಗದವನ್ನು ತೆಗೆಯಬಾರದು. ಒಣಗಿದ ಕೂಡಲೆ ಅದು ತನ್ನಷ್ಟಕ್ಕೆ ತಾನೇ ಕಳಚಿ ಬೀಳುವುದು, ಅದೆಲ್ಲ ಮುಗಿದ ನಂತರ ನಿಮ್ಮ ಕಾಗದವು ಮುದ್ರಿಸಿದಂತಾಗುವುದು. ಈ ಕಾಗದವು ಒಣಗಿರುವ ಕಾರಣ, ಅದು ಬಹು ಬಿರುಸಾಗಿದ್ದು ಎಷ್ಟು ಒತ್ತಿದರೂ ಹಾಗೇ ಇರುತ್ತದೆ. ಆ ಮೇಲೆ ಅದನ್ನು ಸುರುಳಿ ಸುತ್ತಿಟ್ಟು ಅದು ಒದ್ದೆಯಾಗದಂತೆ ಎಚ್ಚರವಿಡಬೇಕು.